• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಈ ಪ್ರಶ್ನೆ ಕೇಳಿಯೇ ಖುಷಿಯಾಯಿತು - ಟಿಜಿ ಶ್ರೀನಿಧಿ

By ಟಿ.ಜಿ. ಶ್ರೀನಿಧಿ, ಬೆಂಗಳೂರು
|

[59ನೇ ಕನ್ನಡ ರಾಜ್ಯೋತ್ಸವ ನಿಮಿತ್ತ 'ಒನ್ಇಂಡಿಯಾ ಡಾಟ್ ಕಾಂ' ನಡೆಸಿದ ಈಮೇಲ್ ಸಮೀಕ್ಷೆಯಲ್ಲಿ ತಮ್ಮ ಅಭಿಪ್ರಾಯ ಮಂಡಿಸುತ್ತಿರುವವರು ಟಿ.ಜಿ. ಶ್ರೀನಿಧಿ, ಬೆಂಗಳೂರು. ಸಮೀಕ್ಷೆಯ ವಿಷಯ : ಕನ್ನಡ ಅಂತರ್ ಜಾಲ ತಾಣಗಳಿಂದ ನಾನೇನು ಬಯಸುತ್ತೇನೆ.]

ಕನ್ನಡ ಅಂತರಜಾಲದಿಂದ ನಾನು ಬಯಸುವುದು ಏನು? ಈ ಪ್ರಶ್ನೆ ಕೇಳಿಯೇ ಖುಷಿಯಾಯಿತು. ಕನ್ನಡದ ಅಂತರಜಾಲ ಇರುವ ಸದ್ಯದ ಪರಿಸ್ಥಿತಿಯಲ್ಲಿ ಓದುಗರಿಗೆ ಏನು ಬೇಕು ಎನ್ನುವ ಪ್ರಶ್ನೆ ಕೇಳುವವರೇ ಅಪರೂಪವಾಗಿಬಿಟ್ಟಿದ್ದಾರಲ್ಲ!

ಒಂದು ದಶಕದ ಹಿಂದೆ ಇದ್ದ ಪರಿಸ್ಥಿತಿಗೆ ಹೋಲಿಸಿದರೆ ಅಂತರಜಾಲ ಲೋಕದಲ್ಲಿ ಕನ್ನಡದ ಸ್ಥಾನ ಇಂದು ಬಹಳ ಉತ್ತಮ ಸ್ಥಿತಿಯಲ್ಲಿದೆ ಎಂದೇ ಹೇಳಬೇಕು. ಆದರೆ ಇಂಗ್ಲಿಷ್ ಮತ್ತಿತರ ಭಾಷೆಗಳ ಹೋಲಿಕೆಯಲ್ಲಿ ನಾವು ಇನ್ನೂ ಬಹುದೂರ ಸಾಗಬೇಕಿದೆ.

ಕನ್ನಡದ ವೆಬ್‌ಸೈಟ್ ಮತ್ತು ಬ್ಲಾಗುಗಳನ್ನು ಗಮನಿಸುವಾಗ ನಮಗೆ ಪ್ರಮುಖವಾಗಿ ಕಾಣಿಸುವುದು ವಿಷಯವೈವಿಧ್ಯ ಹಾಗೂ ನಿರಂತರತೆಯ ಅಭಾವ. ಸುಮಾರು ಐದು ವರ್ಷಗಳಷ್ಟು ಕಾಲ ನಿಯಮಿತವಾಗಿ ಉತ್ತಮ ಕನ್ನಡ ಬರಹಗಳನ್ನು ಪ್ರಕಟಿಸಿರುವ ತಾಣಗಳನ್ನು ಹುಡುಕಿದರೆ ಸಿಗುವುದು ತೀರಾ ಬೆರಳೆಣಿಕೆಯಷ್ಟು ಮಾತ್ರವೇ ಏನೋ.

ವಿಷಯ ಯಾವುದೇ ಇರಲಿ, ಶೈಲಿ ಹೇಗೇ ಇರಲಿ - ಗುಣಮಟ್ಟದ ಮಾಹಿತಿಯನ್ನು ನೀಡುವ ತಾಣಗಳು ಇಂದಿನ ಅಗತ್ಯ ಎಂದು ನಾನು ಭಾವಿಸುತ್ತೇನೆ. ಶಾಲೆಯ ಹೋಮ್‌ವರ್ಕ್‌ಗೆ ನೆರವಾಗುವ ವಿಶ್ವಕೋಶ ಮಾದರಿಯ ಲೇಖನಗಳಿಂದ ಪ್ರಾರಂಭಿಸಿ ಮನರಂಜನಾತ್ಮಕ ಬರಹಗಳವರೆಗೆ, ಕತೆ-ಕವನಗಳಿಂದ ವಿಜ್ಞಾನ-ತಂತ್ರಜ್ಞಾನದವರೆಗೆ, ಶೇರು ಮಾರುಕಟ್ಟೆಯಿಂದ ಕ್ರೀಡಾಕ್ಷೇತ್ರದವರೆಗೆ ಎಲ್ಲ ಕ್ಷೇತ್ರಗಳಲ್ಲೂ ಉತ್ತಮ ತಾಣಗಳ ಅಗತ್ಯ ಇದೆ. ಇತರ ಭಾಷೆಗಳಲ್ಲಿ ಈಗಾಗಲೇ ವ್ಯವಹರಿಸುತ್ತಿರುವ ತಾಣಗಳ ಕನ್ನಡ ಆವೃತ್ತಿಗಳೂ ಖಂಡಿತಾ ಬರಬೇಕು. ಇಂತಹ ಎಲ್ಲ ತಾಣಗಳಲ್ಲಿ ಕಾಣಸಿಗುವ ಮಾಹಿತಿಯಲ್ಲಿ - ಬಳಕೆಯಾಗುವ ಕನ್ನಡದಲ್ಲಿ ತಪ್ಪುಗಳಿಲ್ಲದಂತೆ ನೋಡಿಕೊಳ್ಳುವ ಜವಾಬ್ದಾರಿಯೂ ಇರಬೇಕು.

"ಗುಣಮಟ್ಟದ ಮಾಹಿತಿ" ಎನ್ನುವಾಗ ಅದರ ಗುಣಮಟ್ಟವನ್ನು ನಿರ್ಧರಿಸುವವರು ಯಾರು ಎನ್ನುವ ಪ್ರಶ್ನೆ ಬರುತ್ತದೆ. ಇಂದಿನ ತಾಣಗಳು ತಮಗಿಷ್ಟಬಂದ ಸರಕುಗಳನ್ನು ಪ್ರಕಟಿಸುತ್ತಿರುವುದಕ್ಕೆ ಈ ಕುರಿತ ಗೊಂದಲವೂ ಒಂದು ಕಾರಣ ಇರಬಹುದೇನೋ. ಓದುಗರ ಅಗತ್ಯಗಳನ್ನು ಅರಿತುಕೊಳ್ಳದೆ ತಮ್ಮ ಮೂಗಿನ ನೇರದ ಮಾಹಿತಿಯನ್ನೇ ಪ್ರಕಟಿಸುವ ತಾಣಗಳು ಆರಂಭದ ಉತ್ಸಾಹವೆಲ್ಲ ಇಳಿದ ನಂತರ ಬಾಗಿಲು ಮುಚ್ಚುವ ಪರಿಸ್ಥಿತಿ ತಲುಪುವುದರ ಹಿನ್ನೆಲೆಯಲ್ಲಿ ಈ ಗೊಂದಲವನ್ನೂ ನಾವು ಕಾಣಬಹುದು.

ಹಾಗಾಗಿ ಕನ್ನಡ ತಾಣಗಳು ಓದುಗರಿಂದ ಪ್ರತಿಕ್ರಿಯೆಯನ್ನು ಆಹ್ವಾನಿಸುವ, ಹಾಗೂ ಅವರ ಪ್ರತಿಕ್ರಿಯೆಗೆ ಸ್ಪಂದಿಸುವ ಮನೋಭಾವವನ್ನೂ ಬೆಳೆಸಿಕೊಳ್ಳಬೇಕೆಂದು ನಾನು ನಿರೀಕ್ಷಿಸುತ್ತೇನೆ (ದುರುದ್ದೇಶದ, ನಿಂದನಾತ್ಮಕ ಕಮೆಂಟುಗಳನ್ನು ಪೋಸ್ಟಿಸುವುದನ್ನೇ ಚಟವಾಗಿಸಿಕೊಂಡಿರುವ "ಕಮೆಂಟ್ ಭಯೋತ್ಪಾದಕ"ರಿಂದ ಅವರಿಗೆ ಸುಲಭವಾಗಿ ಮುಕ್ತಿಸಿಗುವಂತೆಯೂ ಆಗಲಿ, ಪಾಪ!). ತಪ್ಪುಗಳನ್ನು ತೋರಿಸಿದರೆ, ಸಲಹೆ-ಸೂಚನೆಗಳನ್ನು ನೀಡಿದರೆ ಧನಾತ್ಮಕವಾಗಿ ಸ್ವೀಕರಿಸುವ ದೊಡ್ಡ ಮನಸ್ಸೂ ಅವರಿಗೆ ಇರಬೇಕು!

ಅಂತರಜಾಲದಲ್ಲಿ ಕನ್ನಡದ ಸ್ಥಾನವನ್ನು ಉತ್ತಮಪಡಿಸುವ ನಿಟ್ಟಿನಲ್ಲಿ ತಮ್ಮ ಕೈಲಾದ ಪ್ರಯತ್ನ ಮಾಡುವವರ ಮೇಲೆ "ಹಿಂದೆ ಮುಂದೆ ಯೋಚಿಸದೆ ಕೆಲಸಮಾಡುತ್ತಾರೆ" ಎಂಬ ಆರೋಪದ ಮೂಲಕ ಗೂಬೆಕೂರಿಸುವುದು ಸುಲಭ, ನಿಜ. ಆದರೆ ತಮ್ಮ ಪ್ರತಿಕ್ರಿಯೆಗಳ ಮೂಲಕ ಅವರಿಗೆ ಮಾರ್ಗದರ್ಶನ ನೀಡಬಹುದಾದ ಓದುಗರ ನಿರಾಸಕ್ತಿಯ ತಪ್ಪನ್ನೂ ಮುಚ್ಚಿಡುವಂತಿಲ್ಲ.

ಸ್ವತಃ ಒಂದು ಜಾಲತಾಣವನ್ನು ನಡೆಸುತ್ತಿರುವ ಅನುಭವದ ಹಿನ್ನೆಲೆಯಲ್ಲಿ ಹೇಳುವುದಾದರೆ ಅಂತರಜಾಲ ತಾಣಗಳಿಗೆ ಭೇಟಿಕೊಡುವ ಓದುಗರ ಸಂಖ್ಯೆಗೂ ತಮ್ಮ ಪ್ರತಿಕ್ರಿಯೆಗಳ ಮೂಲಕ ಆ ತಾಣದ ಬೆಳವಣಿಗೆಯಲ್ಲಿ ಸಕ್ರಿಯರಾಗಿ ಭಾಗವಹಿಸುವವರ ಸಂಖ್ಯೆಗೂ ನಡುವೆ ಬಲುದೊಡ್ಡ ವ್ಯತ್ಯಾಸವಿದೆ. ಈ ಮನೋಭಾವವನ್ನು ಬದಲಿಸಿಕೊಳ್ಳುವ ಜವಾಬ್ದಾರಿ ಓದುಗರಾಗಿ ನಮ್ಮ ಮೇಲೂ ಇದೆ ಎನ್ನುವುದನ್ನು ನಾವು ಮರೆಯುವಂತಿಲ್ಲ. ಕನ್ನಡ ತಾಣಗಳಲ್ಲಿ ನಮಗಿಷ್ಟವಾದ-ಆಗದ ಸಂಗತಿಗಳನ್ನು ಸಂಬಂಧಪಟ್ಟವರ ಗಮನಕ್ಕೆ ತರುವುದರಿಂದ ಪ್ರಾರಂಭಿಸಿ ತಾಣಗಳ ಬೆಳವಣಿಗೆಗೆ ನಮ್ಮಿಂದಾದ ಸಹಾಯ ಮಾಡುವವರೆಗೆ ನಮ್ಮ ಜವಾಬ್ದಾರಿಯೂ ಮಹತ್ವದ್ದೇ.

ನಮ್ಮಿಂದಾದ ಸಹಾಯ ಎಂದತಕ್ಷಣ ನಾವೇನು ವೆಬ್‌ಸೈಟ್ ನಡೆಸುವವರಿಗೆ ನೇರವಾಗಿ ಧನಸಹಾಯ ಮಾಡಬೇಕಿಲ್ಲ. ನಮ್ಮ ಆಪ್ತವಲಯದಲ್ಲಿ - ಸಮಾಜ ಜಾಲಗಳಲ್ಲಿ ಆ ತಾಣಕ್ಕೆ ಪ್ರಚಾರ ಕೊಡುವುದರಿಂದ ಪ್ರಾರಂಭಿಸಿ ತಾಣದ ಉತ್ಪನ್ನಗಳನ್ನು ಕೊಳ್ಳುವವರೆಗೆ ಈ ಸಹಾಯ ಯಾವ ಬಗೆಯದ್ದಾದರೂ ಇರಬಹುದು. ಅಷ್ಟೇ ಏಕೆ, ಕೆಲವು ತಾಣಗಳು ಆನ್‌ಲೈನ್ ಶಾಪಿಂಗ್ ಜಾಹೀರಾತುಗಳನ್ನು ಪ್ರದರ್ಶಿಸುತ್ತವಲ್ಲ, ನಮ್ಮ ಆಯ್ಕೆಯ ವಸ್ತುಗಳನ್ನು ಕೊಳ್ಳಲು ಆ ಜಾಹೀರಾತುಗಳ ಮೂಲಕ ಹೋದರೂ ಸಾಕು, ಜಾಹೀರಾತು ಪ್ರದರ್ಶಿಸಿದ ತಾಣಕ್ಕೆ ಒಂದಷ್ಟು ಕಮೀಶನ್ ಸಿಗುತ್ತದೆ - ಕನ್ನಡದ ಇನ್ನಷ್ಟು ಮಾಹಿತಿ ಪ್ರಕಟಿಸಲು ಶಕ್ತಿಬರುತ್ತದೆ. ಅಂದಹಾಗೆ ಈ ಕುರಿತು ತಮ್ಮ ಓದುಗರಲ್ಲಿ ಜಾಗೃತಿಮೂಡಿಸಲು ಕೊಂಚ ಸಮಯದ ಮಟ್ಟಿಗಾದರೂ ತಮ್ಮ ಸಂಕೋಚವನ್ನು ದೂರವಿಡಬೇಕಾದ್ದು ತಾಣಗಳ ಕೆಲಸವೂ ಹೌದು! [ಫೇಸ್ ಬುಕ್ ಪುಟ]

English summary
Kannada Online - Oneindia survey 2014 : Many Kannada website are alive on the net, but there is dearth of variety and quality content, feels T.G. Srinidhi, young Science writer and software engineer from Bengaluru. He says, the readers should help websites grow financially too.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more