ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

50 ಆಹ್ವಾನಿತರಿಗೆ ಅಮೆರಿಕಾ ವೀಸಾ ಪಾಸ್

By * ಶಾಮ್
|
Google Oneindia Kannada News

Prasanna Kumar
ಬೆಂಗಳೂರು, ಆ. 23: ನ್ಯೂಜೆರ್ಸಿಯ ಬೃಂದಾವನದ ಆಶ್ರಯದಲ್ಲಿ ಏರ್ಪಡಿಸಲಾಗಿರುವ 6ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನದಲ್ಲಿ 'ಭಾಗವಹಿಸಲಿದ್ದಾರೆ' ಎಂದು ಮುನ್ನ ಪ್ರಕಟಿಸಲಾಗಿದ್ದ ಎಲ್ಲ 50 ಮಂದಿ ಕವಿ ಕಲಾವಿದರಿಗೆ ಅಮೇರಿಕ ವೀಸಾ ಸಿಕ್ಕಿದೆ. ಅಕ್ಕ ವತಿಯಿಂದ ಆಹ್ವಾನಿತರಾಗಿರುವ ರಾಜ್ಯದ ಕವಿ, ಕಲಾವಿದರು ಸೆಪ್ಟೆಂಬರ್ 3 ರಿಂದ ನಡೆಯುವ 3 ದಿನಗಳ ಸಮ್ಮೇಳನಕ್ಕೆ ಭಾರತದಿಂದ ತಂಡೋಪತಂಡವಾಗಿ ಪ್ರಯಾಣ ಬೆಳೆಸಲು ಇದೀಗ ಅಣಿಯಾಗುತ್ತಿದ್ದಾರೆ.

ಸಮ್ಮೇಳನದಲ್ಲಿ ಪ್ರತಿನಿಧಿಯಾಗಿ ಭಾಗವಹಿಸಲು 'ಆಮೇಲೆ ನೊಂದಾವಣೆ ಮಾಡಿದರಾಯಿತು' ಎಂದಂದುಕೊಂಡಿದ್ದ ಅಮೆರಿಕನ್ನಡಿಗರು ಕೊನೆಯ ದಿನ ಸಮೀಪಿಸುತ್ತಿರುವಂತೆಯೇ ನೊಂದಾವಣೆ ಮಾಡಲು ಒಬ್ಬೊಬ್ಬರಾಗಿ ಶುರುಮಾಡುತ್ತಿದ್ದು ಕಳೆದ ಒಂದು ವಾರದಿಂದ ನೋಂದಾಯಿಸುತ್ತಿರುವವರ ಸಂಖ್ಯೆ ಗಮನಿಸಿದರೆ ನ್ಯೂಜೆರ್ಸಿ ಅಕ್ಕ ಸಮ್ಮೇಳನ ಹೌಸ್ ಫುಲ್ ಆಗುವ ಎಲ್ಲ ಸಾಧ್ಯತೆಗಳು ಕಂಡುಬರುತ್ತಿವೆ ಎಂದು ಸಮ್ಮೇಳನದ ಸಂಚಾಲಕರನ್ನೊಬ್ಬರಾಗಿರುವ ಪ್ರಸನ್ನ ಕುಮಾರ್ ಭಾನುವಾರ ದಟ್ಸ್ ಕನ್ನಡಕ್ಕೆ ದೂರವಾಣಿ ಮೂಲಕ ತಿಳಿಸಿದರು.

ಇದೇ ವೇಳೆ, ಆಹ್ವಾನಿತ ಅತಿಥಿಗಳು ಮತ್ತು ನೊಂದಾಯಿಸಿಕೊಂಡ ಪ್ರತಿನಿಧಿಗಳಿಗೆ ಅಚ್ಚುಕಟ್ಟಾಗಿ ಊಟ ಹಾಗು ವಸತಿ ವ್ಯವಸ್ಥೆ ಗಮನದಲ್ಲಿ ಇಟ್ಟುಕೊಂಡು, ಆಗಸ್ಟ್ 30 ರ ನಂತರ ನೋಂದಾಯಿಸುವವರಿಗೆ ಕಾರ್ಯಕ್ರಮಗಳಲ್ಲಿ ಕೂರಲು ಸ್ಥಳ ಹಾಗು ಊಟ ತಿಂಡಿಗಳು ಸಿಗುವ ಯಾವುದೇ ಗ್ಯಾರಂಟಿ ಇಲ್ಲ ಎಂದು ಸಮ್ಮೇಳನದ ಹೊಣೆಹೊತ್ತ ನಾನಾ ಕಾರ್ಯಕಾರಿ ಸಮಿತಿಯ ವಕ್ತಾರರು ದಟ್ಸ್ ಕನ್ನಡಕ್ಕೆ ತಿಳಿಸಿದರು.

ಪ್ರಮುಖ ಕಲಾವಿದರಾದ ಪುನೀತ್ ರಾಜ್ ಕುಮಾರ್, ವಿಜಯ್ ರಾಘವೇಂದ್ರ, ಡಾ. ಎಂ. ಬಾಲಮುರಳಿಕೃಷ್ಣ, ಡಾ. ಎಚ್. ಎಸ್. ವೆಂಕಟೇಶಮೂರ್ತಿ, ರಾಯಚೂರ್ ಶೇಷಗಿರಿದಾಸ್ "ಪ್ರಭಾತ್ ಕಲಾವಿದರು" ತಂಡದ 12 ಕಲಾವಿದರು, ಜಾನಪದ ನೃತ್ಯ ಹಾಗು ಜಾನಪದ ಸಂಗೀತ ತಂಡದ 14 ಕಲಾವಿದರು, ಕರ್ನಾಟಕ ಕಲಾ ದರ್ಶಿನಿ ಯಕ್ಷಗಾನ ತಂಡದ 6 ಕಲಾವಿದರು, "ಎಲ್ಲ ಮಹಿಳೆಯರ" ಶ್ರೀಮಾತ ಸಾಂಸ್ಕೃತಿಕ ಸಂಘದ 13 ಕಲಾವಿದರೆಲ್ಲರಿಗೂ ಅಮೇರಿಕದ P3 ವಿಸಾ ದೊರಕಿದ್ದು ಆಗಸ್ಟ್ ತಿಂಗಳಾಂತ್ಯಕ್ಕೆ ನ್ಯೂಜೆರ್ಸಿಗೆ ಬಂದಿಳಿಯಲಿದ್ದಾರೆ.

ಇದಲ್ಲದೆ ಕರ್ನಾಟಕ ಸರ್ಕಾರದ ವತಿಯಿಂದ ಸುಮಾರು 67 ಕಲಾವಿದರು ಸಮ್ಮೇಳದಲ್ಲಿ ಭಾಗವಿಸುತ್ತಿದ್ದಾರೆ. 48 ಮಂದಿಯ ಒಂದು ತಂಡ ಇಂದು ( 23 ಆಗಸ್ಟ್) ಚೆನ್ನೈಗೆ ಪ್ರಯಾಣ ಬೆಳಸಲಿದ್ದು ವಿಸಾ ಪಾಸ್ ಆರ್ ಫೇಲ್ ಫಲಿತಾಂಶ ನಾಳೆ ಮಂಗಳವಾರ ಸಂಜೆ ವೇಳೆಗೆ ಗೊತ್ತಾಗಲಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿ ಬಾವಿಕಟ್ಟಿ ಬೆಂಗಳೂರಿನಲ್ಲಿ ತಿಳಿಸಿದರು.

ಮೊಟ್ಟ ಮೊದಲ ಬಾರಿಗೆ ಅಕ್ಕ ಸಮ್ಮೇಳನದಲ್ಲಿ ಎರಡು ಮುಖ್ಯ ರಂಗಮಂಚ (ಮೇನ್ ಸ್ಟೇಜ್) ಸಿದ್ಧಪಡಿಸಲಾಗಿದೆ. ಇದಲ್ಲದೆ ಇತರ ನಾಲಕ್ಕು ವೇದಿಕೆಗಳನ್ನು ಅಣಿಗೊಳಿಸಲಾಗಿದೆ. ಕರ್ನಾಟಕದ 100 ಕ್ಕೂ ಹೆಚ್ಚು ಕಲಾವಿದರು ಹಾಗು 500 ಕ್ಕೂ ಹೆಚ್ಚು ಸ್ಥಳೀಯ ಕಲಾವಿದರಿಂದ ಸುಮಾರು 125 ಗಂಟೆಗಳಿಗೂ ಹೆಚ್ಚು ವಿಧ ವಿಧವಾದ ಮನರಂಜನೆಯ ಮಹಾಪೂರ ಹರಿಯಲಿದೆ ಎಂದು ಪ್ರಸನ್ನ ಕುಮಾರ್ ಹೇಳಿದರು.

ಅಮೆರಿಕಾ ವಿಸಾ ಸಂರದ್ಶನಕ್ಕೆ ಮುಂದಿನ ವಾರ ಚೆನ್ನೈಗೆ ತೆರಳಲಿರುವವ ಪಟ್ಟಿಯಲ್ಲಿ ಶ್ರೀ ವಿದ್ಯಾಭೂಷಣ, ರಘು ದೀಕ್ಷಿತ್ ತಂಡದವರು, ಮಂಗಳ ರವಿ, ಜಾದೂಗಾರ ಎಂ ಡಿ. ಕೌಶಿಕ್ ಹಾಗು ಹಲವಾರು ಸಿನಿಮ ನಟ ನಟಿಯರ ಹೆಸರುಗಳಿವೆ. ಈ ಮುಂಚೆ ಪ್ರಕಟಿಸಿದಂತೆ ಕಾರಾಣಾಂತರಗಳಿಂದ ಸಮ್ಮೇಳನಕ್ಕೆ ಬರಲು ಸಾಧ್ಯವಾಗದೆ ಇರುವವರ ಪಟ್ಟಿಯಲ್ಲಿ ಆರು ಮಂದಿಯಿದ್ದಾರೆ. ಅವರುಗಳೆಂದರೆ : ಬನ್ನಂಜೆ ಗೋವಿಂದಾಚಾರ್ಯ, ಬಿ. ಜಯಶ್ರೀ, ಅರುಂಧತಿ ನಾಗ್, ಮಾನಸಿ ಪ್ರಸಾದ್, ಪಂಡಿತ್ ವೆಂಕಟೇಶ್ ಕುಮಾರ್ ಹಾಗು ಅನಂತ್ ಕುಲಕರ್ಣಿ. ಈ ಆರು ಮಂದಿಯ ಗೈರುಹಾಜರಿಯಿಂದ ಅವರ ಅಭಿಮಾನಿ ವೃಂದದಷ್ಟೆ ಸಮ್ಮೇಳನ ಆಯೋಜಕರಿಗೂ ನಿರಾಶೆ ಉಂಟಾಗಿದೆ ಎಂದು ಪ್ರಸನ್ನ ಹೇಳಿದರು.

ಸಮ್ಮೇಳನದ ಪ್ರಮುಖ ಆಕರ್ಷಣೆಗಳಲ್ಲಿ ಕೆಲವು ಇಂತಿವೆ :

* ಬಾಲಮುರಳಿಕೃಷ್ಣ ಹಾಗು ತಂಡದವರಿಂದ ಶಾಸ್ತ್ರೀಯ ಸಂಗೀತ
* ಪ್ರಭಾತ್ ಕಲಾವಿದರ "ಕೃಷ್ಣ ವೈಜಯಂತಿ" ಹಾಗು "ಕಿಂದರ ಜೋಗಿ" ನೃತ್ಯ ನಾಟಕ,
* ಜಾನಪದ ಕಲಾವಿದರ ಕಂಸಾಳೆ ವೀರಗಾಸೆ ನೃತ್ಯ "ಶರಣು ಜಾನಪದಕೆ",
* ಜಾನಪದ ಸಂಗೀತ, ಕೃಷ್ಣೇ ಗೌಡರ ನಗೆಹಬ್ಬ, ಲಕ್ಷ್ಮಣ ದಾಸರ ಹರಿಕತೆ,
* ಮಾಲತಿ ಹಾಗು ಯಶವಂತ್ ಸರದೇಶ್ ಪಾಂಡೆ ತಂಡದವರಿಂದ "ಆಲ್ ದಿ ಬೆಸ್ಟ್" ನಾಟಕ
* ಕರ್ನಾಟಕ ಕಲಾ ದರ್ಶಿನಿ ಹಾಗು ಚಿತ್ತಾಣಿ ತಂಡದವರಿಂದ ಯಕ್ಷಗಾನ,
* "ಚಿತ್ರ-ಸುಗಮ-ಜನಪದ"- ಕರ್ನಾಟಕದ ಪ್ರಖ್ಯಾತ ಗಾಯಕ ಗಾಯಕಿಯರಿಂದ ವಿಶೇಷ ಸಂಗೀತ ಸಂಜೆ
* "ಯಾವ ಮೋಹನ ಮುರಳಿ ಕರೆಯಿತೊ", ವಿಶಿಷ್ಟವಾದ "ಅಮೇರಿಕ ಹಾಗೂ ಕರ್ನಾಟಕ" ನಡುವೆ ಸಾಹಿತ್ಯ ಗೋಷ್ಟಿ
* "ಕರ್ನಾಟಕದ ಹಬ್ಬಗಳ" ವರ್ಣರಂಜಿತ ಮೆರವಣಿಗೆ,
* ಭಕ್ತಿ ರಸ ಹೊಮ್ಮಿಸುವ ದಸರಾ ಬೊಂಬೆ ಪ್ರದರ್ಶನ,
* ಪ್ರಪ್ರಥಮ ಬಾರಿಗೆ ಜೀ ಕನ್ನಡ ಫಿಲ್ಮ್ ಅವಾರ್ಡ್ಸ್,
* ಆನೆ ಅಂಬಾರಿ, ಲೇಸರ್ ಶೋ,125 ಗಾಯಕ ಗಾಯಕಿಯರಿಂದ "ಸಂಕೇತ" ಗೀತೆಯ ಸಮೂಹ ಗಾಯನ.
* 300 ಕ್ಕೂ ಹೆಚ್ಚು ಅಮೇರಿಕನ್ನಡಿಗರ "ಕರುನಾಡ ಕೊಡುಗೆ" ನೃತ್ಯ ರೂಪಕ,
* "ಬೃಂದಾವನ" ಸದಸ್ಯರುಗಳಿಂದ ಕೂಡಿದ ಅದ್ಧೂರಿ ವರ್ಣರಂಜಿತ ಮುಕ್ತಾಯ ಸಮಾರಂಭ

ಸಮ್ಮೇಳನಕ್ಕೆ ತಮ್ಮ ಹೆಸರುಗಳನ್ನು ನೊಂದಾಯಿಸಿಕೊಳ್ಳುವುದಕ್ಕೆ ಇನ್ನೂ 7 ದಿವಸಗಳ ಕಾಲಾವಕಾಶವಿದ್ದು, ಈ ಅಪೂರ್ವ ಅವಕಾಶವನ್ನು ಅಮೆರಿಕನ್ನಡಿಗರು ಬಳಸಿಕೊಂಡು ಅಕ್ಕ ಕನ್ನಡ ಸಮ್ಮೇಳನದ ಯಶಸ್ಸಿಗೆ ಹೆಗಲಾಗಬೇಕೆಂದು ಪ್ರಸನ್ನಕುಮಾರ್ ವಿನಂತಿಸಿಕೊಂಡರು.

English summary
All the artists and dignataries invited for the 6th AKKA world Kannada Convention get US Visa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X