ಅಮೆರಿಕಾದಲ್ಲಿ ಕಣ್ಣು ತೆರೆದ ಕನ್ನಡ ಟಿವಿ
ಅಮೆರಿಕನ್ನಡಿಗರ ಆಶೋತ್ತರಗಳನ್ನು ದೃಶ್ಯ ಮಾಧ್ಯಮದ ಮೂಲಕ ಬಿಂಬಿಸುವ ಕನ್ನಡ ಟಿವಿ ವಾಹಿನಿ ಆರಂಭವಾಗಿದೆ. ಉತ್ತರ ಅಮೆರಿಕಾದ 33 ಸಂಸ್ಥಾನಗಳಲ್ಲಿ ಹರಡಿಕೊಂಡಿರುವ ಕನ್ನಡ ಕಿವಿಗಳಿಗೆ ಕರ್ಣಾನಂದಕರ ಕನ್ನಡವನ್ನು ಉಣಬಡಿಸುವುದು ಈ ಚಾನಲ್ಲಿನ ಮೊದಲ ಉದ್ದೇಶ. ವಾಹಿನಿಯ ಹೆಸರು "ಅಮೆರಿಕನ್ನಡ".
ಕನ್ನಡ ಮನಸ್ಸುಗಳೊಂದಿಗೆ ಮಾತು-ಕತೆ, ಸಮಕಾಲೀನ ಆಗುಹೋಗುಗಳ ಚರ್ಚೆ-ಮಂಥನ, ಆಲಾಪನೆ-ಗೀತಸಂಗೀತಗಳಲ್ಲದೆ ವಲಸೆ ಬಂದಿರುವ ಕರ್ನಾಟಕ ಕುಟುಂಬಗಳ ಕ್ಷೇಮ ಸಮಾಚಾರ ವಿಚಾರಿಸುತ್ತ ಕನ್ನಡ ಬಾಂಧವರೊಂದಿಗೆ ಮುಖಾಮುಖಿಯಾಗುವ ಕನ್ನಡ ವಾಹಿನಿ ಇದಾಗಿದೆ. ಸಾಂಸ್ಕೃತಿಕವಾಗಿ ಸಮೃದ್ಧವಾದ, ಕನ್ನಡಪರ ಕಾರ್ಯಕ್ರಮಗಳನ್ನು ರೂಪಿಸುತ್ತಾ ಕನ್ನಡಿಗರ ಅಮೆರಿಕಾ ಧ್ವನಿಯಾಗುವ ಧ್ಯೇಯೋದ್ದೇಶಗಳನ್ನು "ಅಮೆರಿಕನ್ನಡ" ಇಟ್ಟುಕೊಂಡಿದೆ.
ಅಮೆರಿಕಾದಲ್ಲಿ ಸಾವಿರಾರು ಟಿವಿ ಚಾನಲ್ಲುಗಳಿವೆ. ಇಂಗ್ಲಿಷ್ ಅಲ್ಲದೆ ವಲಸೆಬಂದು ದೇಶದಲ್ಲಿ ಠಿಕಾಣಿ ಹೂಡಿರುವ ಜಗತ್ತಿನ ನಾನಾ ಜನಾಂಗಗಳು ಮತ್ತು ಭಾಷಿಕರಿಗೆ ತಮ್ಮದೇ ಆದ ಸಮುದಾಯ ಭಾಷಾ ಚಾನಲ್ಲುಗಳ ಮತ್ತು ಅವರ ಮೂಲ ದೇಶಗಳಿಂದ ಆಮದಾಗಿ ಬಿತ್ತರವಾಗುವ ವಾಹಿನಿಗಳು ಸಿಗುತ್ತವೆ. ಕನ್ನಡನಾಡಿನಿಂದ ಉತ್ಪನ್ನವಾಗುವ ಉದಯ ಟಿವಿ ಕಳೆದ ಮೂರ್ನಾಲ್ಕು ವರ್ಷಗಳಿಂದ ಅಮೆರಿಕನ್ನಡಿಗರಿಗೆ ಲಭ್ಯವಾಗುತ್ತಿದೆ. ಆದರೆ, "ಅಮೆರಿಕನ್ನಡ" ಆರಂಭದಿಂದಾಗಿ ಅಮೆರಿಕನ್ನಡಿಗರಿಗೇ ಮೀಸಲಾದ ಕನ್ನಡ ಚಾನಲಿನ ಕೊರತೆ ಈ ಮೂಲಕ ನಿವಾರಣೆಯಾಗಿದೆ.
ಅಮೆರಿಕನ್ನಡಿಗರೆಲ್ಲರೂ ಒಕ್ಕೊರಲಿನಿಂದ ಭಾಗವಹಿಸಬದುದಾದ ಈ ಚಾನಲ್ಲಿನ ಇತರ ಅನೇಕ ವಿವರಗಳನ್ನು ಸದ್ಯದಲ್ಲೇ ನಿಮ್ಮ ದಟ್ಸ್‌ಕನ್ನಡದಲ್ಲಿ ಪ್ರಕಟಿಸಲಾಗುತ್ತದೆ. ಅಮೆರಿಕನ್ನಡ ಟಿವಿ ಮತ್ತು ದಟ್ಸ್‌ಕನ್ನಡ ಡಾಟ್ ಕಾಮ್ ಮಾಧ್ಯಮ ಸಹಯೋಗದಲ್ಲಿ ಮೂಡಿಬರುವ ಕಾರ್ಯಕ್ರಮಗಳಲ್ಲಿ "ಹರಟೆಕಟ್ಟೆ" ಪ್ರೈಮ್ ಟೈಮ್ ಆಕರ್ಷಣೆ. ವಾಹಿನಿಯ ನಿರ್ಮಾಪಕಿ ಮತ್ತು ನಿರ್ದೇಶಕಿ ಶಿಲ್ಪ ಜಗದೀಶ್ (ಪ್ರಿಯಭಾರತಿ) ಮತ್ತು ಸಹಾಯಕ ನಿದೇಶಕ ರವಿ ಹರಪನಹಳ್ಳಿ. ನೆನಪಿಡಿ : ಕನ್ನಡಿಗರಿಗೆ ಮಾತ್ರ ಮೀಸಲಾದ ಈ ವಾಹಿನಿ ಒಂದು ಲಾಭ ರಹಿತ ಉದ್ದೇಶದ ಸಂಸ್ಥೆ.
ನಮ್ಮ ಇ-ವಿಳಾಸಗಳು ಹೀಗಿವೆ : [email protected] ಮತ್ತು [email protected]
ಪೂರಕ ಓದಿಗೆ


Click it and Unblock the Notifications
