ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಕಾಶದಾಗೆ ಯಾರೋ ಮಾಯಗಾರನೆ

|
Google Oneindia Kannada News

SK Shama Sundara
ನೀವೀಗ ಓದಲು ಅಣಿಯಾಗುತ್ತಿರುವುದು ನಮ್ಮ ವೆಬ್‌ಸೈಟ್‌ ಬಗೆಗಿನ About Us. ಅರ್ಥಾತ್‌ ನಮ್ಮ ಬಗ್ಗೆ ಎರಡು ಮಾತು, ನಿಮ್ಮಲ್ಲೊಂದು ನಿವೇದನೆ, ಚಾರಣಿಗರಲ್ಲಿ ವಿನಮ್ರ ಅರಿಕೆ. ಇವೆಲ್ಲವು ನಾವು-ನೀವು ಜತೆಯಾಗಿ ನಡೆಯಲು ನೆರವಾಗುವ ಮಾಹಿತಿ ಸಲಕರಣೆಗಳು!

ಪ್ರಿಯ ಬಂಧು,

ಸಸ್ನೇಹ ನಮಸ್ಕಾರ.

ಕಳೆದ ಹತ್ತು ವರ್ಷಗಳಿಂದ ಅಂತರ್‌ಜಾಲ ತಾಣದಲ್ಲಿ ಅನವರತ ಕಾರ್ಯಮಗ್ನವಾಗಿರುವ ನಮ್ಮ ಆನ್‌ಲೈನ್‌ ಪತ್ರಿಕಾ ಬಳಗದ (www.oneindia.com) ವತಿಯಿಂದ ನಿಮಗೆಲ್ಲ ಮತ್ತೊಮ್ಮೆ ಹಾರ್ದಿಕ ಶುಭಕಾಮನೆಗಳು.

ಕರ್ನಾಟಕದ ಬಗ್ಗೆ ಅದಮ್ಯ ಅಭಿಮಾನ, ಸಮಸ್ತ ಕನ್ನಡಿಗರಲ್ಲಿ ನಿಷ್ಕಳಂಕ ಪ್ರೀತಿ, ಕನ್ನಡ ಭಾಷೆ ಪರಂಪರೆ ಸಂಸ್ಕೃತಿಯ ಬಗ್ಗೆ ಸಕಾರಣ ಹೆಮ್ಮೆ, ನಾಡು ಮತ್ತು ನುಡಿಯ ಸರ್ವತೋಮುಖ ಏಳಿಗೆಗೆ ದುಡಿಯುವುದು ನಮ್ಮ ಪತ್ರಿಕೆಯ ಒಲವು ಹಾಗೂ ನಿಲುವು. ನಮ್ಮ ಬಗ್ಗೆ ನಾವು ಬರೆದುಕೊಂಡ ಕೆಲವು ನಿವೇದನೆಗಳು ಇಲ್ಲಿವೆ, ಇವೆಲ್ಲ ನಮ್ಮ-ನಿಮ್ಮ ಪ್ರಯೋಜನಕ್ಕಾಗಿ :

ನಮ್ಮ ವಿಳಾಸ :

ThatsKannada
17/1, Shantishree Industrial Complex, 5th floor
Rupena Agrahara, Hosur Road,
Bangalore, 560068, India.
Telephone : 918040580800
Fax : +91-80-40580801

ಕನ್ನಡ ಕುಲಬಾಂಧವರೆಲ್ಲರೂ ನಮ್ಮವರೇ ತಾನೆ ಎಂದುಕೊಂಡಿರುವ ಇನ್ನೊಬ್ಬ ಕನ್ನಡ ಸೇವಕನ ಮನೆಗೆ ನಿಮಗೆ ಆತ್ಮೀಯ ಸ್ವಾಗತ. ನಮ್ಮ ಪತ್ರಿಕೆಯನ್ನು ಓದುವುದರಷ್ಟರಲ್ಲೇ ತೃಪ್ತಿ ಕಾಣದೆ ನೀವು ನಮ್ಮೊಂದಿಗೆ ಸಹವರ್ತಿಗಳಾಗಿ, ಸಹಭಾಗಿಗಳಾಗಿ ಜತೆಗೆ ಹೆಜ್ಜೆ ಹಾಕಬೇಕೆನ್ನುವುದು ನಿಮ್ಮಲ್ಲಿ ನಾವು ಮಾಡಿಕೊಳ್ಳುತ್ತಿರುವ ಮೊದಲ ಕೋರಿಕೆ. ಪ್ರೀತಿಪೂರ್ವಕ ಆಗ್ರಹ ಎಂದು ಭಾವಿಸಿದರೂ ಆದೀತು. ನೀವು ನಮಗೆ ಬರೆಯಬಹುದು, ಸಲಹೆ ಸೂಚನೆ ಕೊಡಬಹುದು. ಅಂತರ್‌ಜಾಲದಲ್ಲಿ ಕನ್ನಡ ಹೊಳೆ ಹರಿಯುವುದರಿಂದ ಏನು ಪ್ರಯೋಜನ ? ಕಣ್ಣು ಮುಚ್ಚಿ ಒಂದು ಕ್ಷಣ ಆಲೋಚಿಸಬಹುದು.

ನಮ್ಮ ಪತ್ರಿಕೆಯನ್ನು ಮುಖ್ಯವಾಗಿ ನೀವು ರಚನಾತ್ಮಕವಾಗಿ ಟೀಕಿಸಬದುದು. ಅಳೆದು ತೂಗಿ ನೋಡಬಹುದು. ಸುದ್ದಿ, ಲೇಖನ, ಕವನ, ಹರಟೆ, ಪ್ರವಾಸ ಕಥನ, ಸುಖ, ದುಃಖ... ಏನೆಲ್ಲ ಬರೆದುಕೊಳ್ಳಬಹುದು. ನೀವು ಮತ್ತು ನಿಮ್ಮ ಬಳಗದವರು ನಿತ್ಯ ಒಂದಿಷ್ಟಾದರೂ ಕನ್ನಡದಲ್ಲಿ ಓದಬೇಕು. ಮಕ್ಕಳಿಗೆ ಮಾತೃ ಭಾಷೆಯನ್ನು ಆನಂತರ ಕಲಿಸುವಿರಂತೆ, ನೀವು ಕಲಿತ ಕನ್ನಡವನ್ನು ಮರೆಯದಿದ್ದರೆ ತಾಯಿ ಭುವನೇಶ್ವರಿ ಧನ್ಯಳು.

ಕನ್ನಡದಲ್ಲಿ ಓದಲು ಬರೆಯಲು ಮರೆತವರು ಮತ್ತೆ ಕಲಿಯಬೇಕು. ಕೆಲವರಿಗೆ 'ಬರೆಯಲು ಆಸೆ. ಆದರೆ, ತಪ್ಪಾಗಿ ಬರೆದುಬಿಟ್ಟರೆ" ಎಂಬ ಅಂಜಿಕೆ ಇರುತ್ತದೆ. ಅಂಥ ಅಂಜಿಕೆ ಅಥವಾ ಮುಜುಗರದಿಂದ ಈಚೆ ಬರಬೇಕು. ಬರಹಗಳು ನಿಮ್ಮ ಸ್ವಂತ ಅನುಭವಗಳ ಬೆಳಕಲ್ಲಿ ಸಮಾಜದ ಒಂದು ಮುಖದ ದರ್ಶನ ಮಾಡಿಸುವಂತಾಗಬೇಕು. ನಿಮ್ಮ ಅನಿಸಿಕೆಗಳನ್ನು ಓದಿದ ಯಾವೊಬ್ಬ ಕನ್ನಡಿಗನ ಕಣ್ಣಲ್ಲಿ ಒಂದು ಹನಿ ನೀರು ಒಸರಿದರೆ ಅಥವಾ ತುಟಿಯಂಚಿನಲ್ಲಿ ಮುಗುಳುನಗೆ ಮಿಂಚಿದರೆ ನಿಮ್ಮ ಸಮಯ ಮತ್ತು ಶ್ರಮ ಸಾರ್ಥಕ ಎಂದು ಭಾವಿಸಬೇಕು. ಬರಹಗಾರರ ಒಳನೋಟಗಳ ಸಾಲು ದೀಪ, ಆಕಾಶ ಮಾರ್ಗದಲ್ಲಿ ಸಂಚರಿಸುತ್ತಿರಬೇಕು!

ಪದಗಳನ್ನು ದುಂದು ಮಾಡುವುದರಲ್ಲಿ ನಮಗೆ ವಿಶ್ವಾಸವಿಲ್ಲ. ನಿಮ್ಮ ಭಾಷೆ ಸರಳವೂ ವಿಚಾರಗಳು ಗಹನವೂ ಆಗಿರಲಿ. ಬರಹಗಳ ಗಾತ್ರ ಚಿಕ್ಕದಾಗಿ, ಪಾತ್ರ ದೊಡ್ಡದಾಗಿರಲಿ. ನಿಮ್ಮ ಕನ್ನಡ ಬರಹ ಮತ್ತಿತರ ಪ್ರಕಟಣೆಯ ಸಾಮಗ್ರಿಯನ್ನು ಇ-ಮೇಲ್‌ ಮೂಲಕ ಕಳುಹಿಸಬಯಸುವವರು ಈ ಕೆಳಕಂಡ ವಿಳಾಸವನ್ನು ಬಳಸಿರಿ.

- S.K. Shama Sundara, Editor
[email protected]

ಲೇಖಕರು ಯುನಿಕೋಡ್, ನುಡಿ ಅಥವಾ ಉಚಿತ ಕನ್ನಡ ತತ್ರಾಂಶ ಬರಹದಲ್ಲಿ ಬರೆದು e-mail attachment ಮೂಲಕ ರವಾನಿಸಬೇಕು. ನಿಮ್ಮ ಬರಹ ಕನ್ನಡದಲ್ಲಿದ್ದರೆ ವಿಷಯಕ್ಕನುಗುಣವಾಗಿ ವಿಂಗಡಿಸಲಾಗುವುದು. ನಿಮ್ಮ ಬರಹಗಳ ಜತೆ ಬರವಣಿಗೆಗೆ ಒಪ್ಪುವ ಚಿತ್ರಗಳಲ್ಲದೆ, ನಿಮ್ಮ (ಲೇಖಕ ಅಥವಾ ಲೇಖಕಿ) ಭಾವಚಿತ್ರ ಲಗತ್ತಿಸಲು ಮರೆಯಬಾರದು. 'ನನಗೆ ಪ್ರಚಾರ ಬೇಡ" ಎನ್ನುವ ಭಾವಚಿತ್ರ ಸಂಕೋಚಿಗಳು ತಮಗೆ ತೋಚಿದ ಹಾಗೆ ಮಾಡಬಹುದು!

ಕನ್ನಡ ದಿನಪತ್ರಿಕೆ 'ವಿಜಯ ಕರ್ನಾಟಕ" ಮತ್ತು 'ಹಾಯ್‌! ಬೆಂಗಳೂರು" ವಾರಪತ್ರಿಕೆಯ ಜತೆ ದಟ್ಸ್‌ಕನ್ನಡ.ಕಾಂ ವಿಷಯ ವಿನಿಮಯ ಮೈತ್ರಿಯನ್ನು ಹೊಂದಿರುತ್ತದೆ. ಇದು ಸ್ನೇಹಸೇತು. ಈ ಒಡಂಬಡಿಕೆಯ ಅನ್ವಯ ನಮ್ಮಲ್ಲಿ ಪ್ರಕಟವಾದ ಆಯ್ದ ಲೇಖನಗಳು ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಬೆಳಕು ಕಾಣುತ್ತದೆ. ಆಯ್ಕೆಯ ಸ್ವಾತಂತ್ರ್ಯ ಆಯಾ ಪತ್ರಿಕೆಯ ಸಂಪಾದಕರಿಗೆ ಬಿಟ್ಟದ್ದು.

ವಿಶೇಷ ಸೂಚನೆ : ನಮ್ಮ ಪತ್ರಿಕೆಗೆ ಬರೆಯ ಬಯಸುವವರು ತಮ್ಮ ಬರಹ ಕಾಣಿಕೆಗಳನ್ನು ದಟ್ಸ್‌ಕನ್ನಡ.ಕಾಂಗೆ ಮಾತ್ರ ಎಂದು ಪರಿಭಾವಿಸಿಕೊಂಡು ಅಂತೆಯೇ ವರ್ತಿಸುವುದು ಲೇಸು. ಹೀಗೆ ಯೋಚಿಸಿ, ಯೋಚಿಸಿದಂತೆ ಕಾರ್ಯೋನ್ಮುಖವಾಗುವ ಬರಹಗಾರರ ಸುದ್ದಿ-ಸಮಾಚಾರಗಳನ್ನು ಆದ್ಯತೆಯ ಮೇರೆಗೆ ನಮ್ಮಲ್ಲಿ ಪ್ರಕಟಿಸಲಾಗುವುದು. ದೂರದೃಷ್ಟಿಯ Informed Readers ಅನ್ನು ತಲುಪುವ ಉದ್ದೇಶದಿಂದ ನಿಮ್ಮ ಬರಹಗಳು ನಮ್ಮ ಪತ್ರಿಕೆಯಲ್ಲಿ ಬೆಳಗಲಿ ಎನ್ನುವುದು ನಮ್ಮ ಅಭಿಲಾಷೆ..

ನಮ್ಮ ಕನ್ನಡ ವರ್ಟಿಕಲ್‌ ಪೋರ್ಟ್‌ಲ್‌ನಲ್ಲಿ ಪ್ರಕಟವಾದ ಸುದ್ದಿ ಮಾಹಿತಿಗಳಿಗೆ 'ಓದುಗರ ಪತ್ರ/ಪ್ರತಿಕ್ರಿಯೆ" ಬರೆಯುವವರು [email protected] ವಿಳಾಸಕ್ಕೆ ಕಳಿಸಬೇಕು. ಮಾನ್ಯ ಓದುಗರು ತಮ್ಮ ಪ್ರತಿಕ್ರಿಯೆಗಳ ಜತೆಗೆ ಹೆಸರು, ಊರು ಬರೆಯಲು ಮರೆಯಬಾರದು. ಓದುಗರ ಪತ್ರಗಳು ಸಿಹಿ ಆಗಿರಲೀ, ಕಹಿ ಆಗಿರಲೀ ಅವುಗಳನ್ನು ಯಥಾವಕಾಶ ಪ್ರಕಟಿಸುವ ನಿಷ್ಠುರ ಧೈರ್ಯ ನಮ್ಮ ಪತ್ರಿಕೆಯ ಅನೇಕ ಹೆಮ್ಮೆಗಳಲ್ಲಿ ಒಂದಾಗಿರುತ್ತದೆ. ಆದರೆ, ಕುಹಕ-ಕಿಡಿಗೇಡಿತನದ , ವೈಯಕ್ತಿಕ ದ್ವೇಷ ಕಾರುವ ಅನಾಮಿಕ ಇ-ಮೇಲ್‌ಗಳನ್ನು ಕಸದಬುಟ್ಟಿಗೆ ಹಾಕಲಾಗುವುದು.

ಪತ್ರಗಳನ್ನು ಓದುಗರ ಓಲೆ ಅಂಕಣದಲ್ಲಿ ಪ್ರಕಟಿಸಲಾಗುವುದು. ನಮ್ಮಲ್ಲಿ ಅನೇಕ ಅಂಕಣಗಳು ಪ್ರಕಟವಾಗುತ್ತವೆ. ಕತೆ, ಕವನ, ಸಿನಿಮಾ, ರಾಜಕೀಯ, ಸಾಹಿತ್ಯ, ಸುದ್ಧಿ, ಸ್ವಾರಸ್ಯ, ತಮಾಷೆ, ಬದುಕು, ಅಡುಗೆ, ಪ್ರವಾಸ, ವಿಹಾರ, ಆರೋಗ್ಯ -ಹೀಗೆ ನಿಮಗೆ ಏನೇನು ಬೇಕೋ ಅವೆಲ್ಲವನ್ನೂ ನೀಡುತ್ತಿರುವ ಖುಷಿ, ಮುಂದೆ ಇನ್ನಷ್ಟು ನೀಡುವ ಹಂಬಲ ನಮ್ಮದು.

ಓದುಗರ ಪ್ರತಿಕ್ರಿಯೆ ಅಥವಾ ಅನಿಸಿಕೆಗಳು ಕೆಲವೊಮ್ಮೆ Independent Article ಮಾದರಿಯಲ್ಲಿ 'ಲೆಟರ್‌ ಆಫ್‌ ದಿ ಡೇ" ವಿಭಾಗದಲ್ಲಿ ಕಾಣಿಸಿಕೊಳ್ಳುತ್ತವೆ. ಇಂಥ ಅನಿಸಿಕೆಗಳು ಇಂಗ್ಲಿಷ್‌ನಲ್ಲಿದ್ದರೆ ಇಂಗ್ಲಿಷ್‌ನಲ್ಲಿ , ಕನ್ನಡದಲ್ಲಿದ್ದರೆ ಕನ್ನಡದಲ್ಲಿ ಪ್ರಕಟಿಸಲಾಗುವುದು. ಈ ಬಗೆಯ ಪತ್ರಗಳು ಈ ಹಿಂದಿನ ಅನೇಕ ಸಂದರ್ಭಗಳಲ್ಲಿ ಚರ್ಚೆ, ಚಕ್ರಗೋಷ್ಠಿ, ವಾಗ್ವಾದ, ಮಾತಿನ ಮಂಟಪವಾಗಿ ಪರಿವರ್ತನೆಗೊಂಡು ವಿಷಯ ಗ್ರಹಣದ ವ್ಯಾಪ್ತಿ ಮತ್ತು ಉಪಯೋಗಗಳ ಗಡಿಯನ್ನು ವಿಸ್ತರಿಸಿದೆ. ವಿಶ್ವದಾದ್ಯಂತ ಹಂಚಿಹೋಗಿರುವ ಕನ್ನಡಿಗರಲ್ಲಿ 'ನಾವು-ನಮ್ಮದು" ಎಂಬ ಆರೋಗ್ಯಕರ ಭಾವನೆಗಳನ್ನು ಎಡಬಿಡದೆ ಮೀಟುತ್ತಿದೆ. ಅವಿಭಕ್ತ ಕುಟುಂಬ ಕೊಡುವ ಸಂತೋಷವೇ ಇದು.

ನಮ್ಮ ಪತ್ರಿಕೆ ಯಾವುದೇ ಜಾತಿ, ಧರ್ಮ, ರಾಜಕೀಯ ಪಕ್ಷ, ಗುಂಪಿನ ಜತೆ ಗುರುತಿಸಿಕೊಂಡಿಲ್ಲ ಎನ್ನುವುದನ್ನು ಸ್ಪಷ್ಟಪಡಿಸುತ್ತೇವೆ. ಸಾಮಾನ್ಯವಾಗಿ ಎಲ್ಲ ಪತ್ರಿಕೆಗಳು ಹೀಗೇ ಹೇಳುತ್ತವೆ. ಆದರೆ, ನುಡಿದಂತೆ ನಡೆಯುವ ವಿರಳರ ಸಾಲಿನಲ್ಲಿ ಇರಲು ನಾವು ವಿನಮ್ರತೆಯಿಂದ ಶ್ರಮಿಸುತ್ತೇವೆ. ಅಂತರ್ಜಾಲದಲ್ಲಿ ಕನ್ನಡದ ತರಂಗಗಳು ಇನ್ನೂ ಹೆಚ್ಚುಹೆಚ್ಚು ಮೂಡಬೇಕಿವೆ. ಅದಕ್ಕೆ ನಿಮ್ಮಗಳ ಸಹಕಾರ ಅತ್ಯಗತ್ಯ.

ಕನ್ನಡ ಅಕ್ಷರಗಳ ಒಡನಾಟದಲ್ಲಿ ದೈನಂದಿನ ಬದುಕನ್ನು ಕಿರಿಕಿರಿ ಮುಕ್ತಗೊಳಿಸಲು ಸದಾ ಶ್ರಮಿಸುವುದೇ ನಮ್ಮ ಧ್ಯೇಯವಾಕ್ಯ. ಕನ್ನಡ ನಾಡಿನ ಭವ್ಯ ಇತಿಹಾಸ-ಪರಂಪರೆಯನ್ನು ಬೆನ್ನಿಗೆ ಕಟ್ಟಿಕೊಂಡು ಹೊಸ ಆಲೋಚನೆ, ಹೊಸ ವಿಚಾರಗಳತ್ತ ಹೊರಳುವುದು ನಮ್ಮ ಆಸೆ. ದಿನದಿನದ ಅಗತ್ಯ ಸುದ್ದಿ, ಅನಿವಾರ್ಯ ಮನರಂಜನೆಯ ಹೂರಣಗಳ ಜತೆಗೆ ಕರ್ನಾಟಕ ಮಣ್ಣಿನ ಮಕ್ಕಳ ಮನಸ್ಸಿನೊಂದಿಗೆ ಮಾತನಾಡುತ್ತಾ, ಅವರ ಏನೊಂದು ಸಂತಸ-ಸಂಕಟಗಳಲ್ಲಿ ಭಾಗಿಯಾಗುತ್ತಾ, ಅವರ ಆಶೋತ್ತರಗಳಿಗೆ ನಿತ್ಯ ಸ್ಪಂದಿಸುವುದು ನಮ್ಮ ಪತ್ರಿಕೆಯ ಸಂಕಲ್ಪ.

ನೀವೆಲ್ಲ ಸುಸಂಸ್ಕೃತರು, ಕಲಿತವರು, ತಿಳಿದವರು. ಹಂಸಕ್ಷೀರನ್ಯಾಯವನ್ನು ಬಲ್ಲವರು -ನಮಸ್ಕಾರ.

-ಸಂಪಾದಕ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X