• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಉಪಾಸನ : ಪಶ್ಚಿಮ ಘಟ್ಟದಲ್ಲೊಂದು ಮೌಂಟನ್‌ ಹೌಸ್‌!

By Staff
|
ಸಂಸೆ ಅಥವಾ ಉಪಾಸನ ಬಗ್ಗೆ ನಿಮಗೇನು ಗೊತ್ತು? ಪ್ರವಾಸ-ಹಿತಕರ ವಾತಾವರಣ-ಯೋಗ-ಸಂಯಮ-ಒಳ್ಳೆಯ ಸಹವಾಸ ಮತ್ತು ಸಮಾಧಾನಕ್ಕೆ 'ಉಪಾಸನ " ಅನ್ನುವುದೊಂದು ಏಕಗವಾಕ್ಷಿ ! ನಗರ ಜೀವನದ ಜಂಜಡದಿಂದ ಬೇಸತ್ತ ಮನಸಿಗೆ ಮತ್ತು ದೇಹಕ್ಕೆ ವಿಶ್ರಾಂತಿ ದೊರಕಿಸಿಕೊಡುವ ಅದ್ಭುತ ತಾಣ ನಮ್ಮ ಮಲೆನಾಡ ಮಡಿಲಲ್ಲೇ ಇದೆ. ಒಮ್ಮೆ ಹೋಗಿಬನ್ನಿ.

ಕಾಡಿನ ಯಾವುದೋ ಒಂದು ಮರದ ಅಗಲವಾದ ಎಲೆಯ ಮೇಲೆ ಹರಡಿದ ಕುಸಿಲ ಅಕ್ಕಿಯ ತಣ್ಣನೆ ಗಂಜಿ. ಅದರ ಜೊತೆಗೊಂದೆರಡು ಹೋಳು ಉದುರಿದ ಮಾವಿನಕಾಯಿ ಉಪ್ಪಿನಕಾಯಿ ; ದಿನಕ್ಕೆ ಎರಡೇ ಎರಡು ಬಾರಿ ನೀಡಿದರೆ ಸಾಕು, ನಾನು ತೃಪ್ತ.

ಉದುರಿದ ಚೆದುರಿದ ಎಲೆ ಕಸ ಕಡ್ಡಿಗಳನ್ನು ದುಂಡು ಮಾಡಲೊಂದು ಕಸಬರಿಕೆ ಬೇಕು. ಅದನ್ನು ನಾನೇ ಕಟ್ಟಿಕೊಳ್ಳುವೆನು. ಅಲ್ಲಿನ ಅಂಗಳವನ್ನು ನಿತ್ಯ ಗುಡಿಸಿ ಸಚ್ಛವಾಗಿಡುತ್ತಿದ್ದಂತೆಯೇ ನನ್ನ ಸ್ಮೃತಿಪಟಲವೂ ಸ್ವಚ್ಛವಾಯಿತೆಂದು ಭಾವಿಸುತ್ತಾ ಬಾಳುವೆ ಮಾಡುವೆನು.

ಈ ಮಧ್ಯೆ ನಿಧನಿಧಾನವಾಗಿ ಪುರಾಣ, ಇತಿಹಾಸಗಳನ್ನು ಶ್ರದ್ಧೆಯಿಂದ ಮರೆಯುವೆನು. ವರ್ತಮಾನದ ಆಗುಹೋಗುಗಳನ್ನು ನನ್ನ ಕಿವಿಗೆ ಯಾರೂ ಮುಟ್ಟಿಸದಿದ್ದರೆ ನಾ ಪುಣ್ಯವಂತನು, ದಿನವಿಡೀ ಶ್ರಮಜೀವಿಯಾಗಿ, ಇಳಿಹೊತ್ತು ಇಡೀ ಭೂಮಂಡಲಕ್ಕೇ ಧನ್ಯವಾದ ಅರ್ಪಿಸಿ ನಂತರ ಗೋಣಿಯ ಮೇಲೆ ಮೈ ಚೆಲ್ಲುವೆನು.

ನನಗಿನ್ನೇನೂ ಬೇಡ ಪ್ರಭು. ಕೊನೆಯುಸಿರುವವರೆಗೆ ಇಲ್ಲೇ ಇರಲಿಕ್ಕೆ ಬಿಡು... ಬಂದುಹೋಗುವವರ ಸೇವೆಗೆ ಮಾಡುವ ಚಾಕರಿಯನ್ನೇ ದುಡಿಮೆಯ ಮಾರ್ಗ ಎಂದು ಭಾವಿಸಿ ಕೃತಾರ್ಥನಾಗುವೆನು.

*

Upasana : A Mountain House In Karnatakaರಮ್ಯ ಮತ್ತು ಶಾಂತವಾದ ಆದರೆ ಜನಸಂದಣಿಯಿಲ್ಲದ ಸ್ಥಳಕ್ಕೆ ಮನಶ್ಯಾಂತಿಯನ್ನರಸಿ ಹೋದಾಗ ಇಂಥ ಭಾವತರಂಗಗಳು ಪುಟಿದೇಳುವುದು ಸಹಜ. ಆ ಬಗೆಯ ಕನಸುಗಳು ಮಿಂಚಿ ಕ್ಷಣಾರ್ಧದಲ್ಲಿ ಮಾಯವಾಗುವುದು ಅಷ್ಟೇ ಸಹಜ. ಆಧುನಿಕ ಜಗತ್ತಿನ ಜಂಜಡಗಳಿಂದ ಬೆಂದವರಿಗಂತೂ ಈ ಜಾಗ ದೇವಸ್ಥಾನದಂತೆ ಗೋಚರಿಸುವುದು ನಿಜ.

ಅಂಥದೊಂದು ದೇವಸ್ಥಾನಕ್ಕೆ ಅವತ್ತು ನಾನು ಹೋಗಿದ್ದೆ. ಅಲ್ಲಿ ನನ್ನಲ್ಲಿ ನಾನಾದಾಗ 'ಯೋಗವನೊಲ್ಲೆ ಭೋಗವನೊಲ್ಲೆ" ಎನಿಸಿತು. ಆ ಗಳಿಗೆ ಅಲ್ಲೇ ಸುಳಿದಾಡುತ್ತಿದ್ದ ನಿಶ್ಯಬ್ದ ಸಂಗೀತ ಆಲಿಸುವಾಗ ನಿಮ್ಮ ನೆನಪಾಯಿತು.

*

ಚಿಕ್ಕಮಗಳೂರು ಜಿಲ್ಲೆಯ ಕಳಸ ನಿಮಗೆ ಗೊತ್ತು. ಅನತಿ ದೂರದಲ್ಲಿರುವ ಹೊರನಾಡಿನಲ್ಲಿ ನೆಲೆಸಿರುವ ಅನ್ನಪೂರ್ಣೆ ಸದಾಪೂರ್ಣೆಯಾಗಿರುವ ಸ್ಥಳವೇ 'ಉಪಾಸನ" ಎನ್ನುವುದು ನನ್ನ ವೈಯಕ್ತಿಕ ತೀರ್ಮಾನ. ಏಳು ಗುಡ್ಡಗಳ ಕೆಳಗೆ ಮಲಗಿರುವ ' ಸಂಸೆ " ಎಂಬ ಹಳ್ಳಿಯ ತಲೆಮೇಲಿರುವ ಅಪೂರ್ವ ಪ್ರದೇಶ ಉಪಾಸನ. ಅಲ್ಲಿ ಒಂದು ಮನೆ. ಮನೆಗೆ ಹೊಂದಿಕೊಂಡಂತೆ ಅತಿಥಿ ಗೃಹಗಳು. ಯಾರೂ ಹೋಗದಿದ್ದಾಗ ಅಲ್ಲಿ ವಾಸಿಸುವವರು ಮೂರು ಜನ. ಕಲಾವಿದ ಅಬು , ಆತನ ಮಡದಿ ಲೀನಾ, ಅವರಿಬ್ಬರ ಸಂಗಾತಿ, ಯೋಗಗುರು ಮತ್ತು ಮನಃಶಾಸ್ತ್ರಜ್ಞ ಸುಕುಮಾರ್‌.

ಊರು ಬಿಟ್ಟು ಯಾವುದಾದರೂ ಕಾಡಿಗೆ ಹೋಗಿಬಿಡಬೇಕು ಎಂದು ಹೇಳುವವರ ಸಂಖ್ಯೆ ಕರ್ನಾಟಕ ಸಾಫ್ಟ್‌ವೇರ್‌ ಯುಗದಲ್ಲಿ ಹೆಚ್ಚಾಗುತ್ತಿರುವಾಗ ತಾವೇ ಅಂದುಕೊಂಡುದುದನ್ನು ತಮ್ಮ ಜೀವನದಲ್ಲಿ ಕಾರ್ಯರೂಪಕ್ಕೆ ತಂದವರು ಈ ಮೂವರು.

*

ಕರ್ನಾಟಕದ ಎಷ್ಟೋ ಮಂದಿ ಉಪಾಸನ ಹೆಸರೇ ಕೇಳಿಲ್ಲ. ಆದರೆ, ಯೂರೋಪ್‌, ಬ್ರಿಟನ್‌ ಮತ್ತು ಅಮೆರಿಕಾ ದೇಶಗಳಿಂದ ಶಾಂತಿ ಸಮಾಧಾನ ಮತ್ತು ಯೋಗ ಅರಸಿ ಇಲ್ಲಿಗೆ ಬಂದವರು ಬಹಳ. ಮುಂಚಿತವಾಗಿ ತಿಳಿಸಿ, ದಿನಾಂಕ ಗೊತ್ತುಮಾಡಿಕೊಂಡು ತಂಡಗಳಲ್ಲಿ ಆಗಮಿಸುವುದುಂಟು. ನಾಲಕ್ಕು, ಎಂಟು ಹತ್ತು ದಿವಸ ಇರುತ್ತಾರೆ. ಪ್ರತಿದಿನ ಶಿಬಿರಾರ್ಥಿಗಳಿಗೆ ಯೋಗ ಹಾಗೂ ಆರಾಮ ಚಿಕಿತ್ಸೆ ಸಿಗುತ್ತದೆ. ಪರಿಚಿತ ಕಾಡುಮೇಡುಗಳಲ್ಲಿ ನಿತ್ಯ ನಡೆದಾಡುವುದಕ್ಕೆ ಲೋಕಲ್‌ ಕಂಪನಿ ಸಿಗುತ್ತದೆ. ಸಮೀಪದ ನಿಸರ್ಗದತ್ತ ಈಜುಕೊಳಗಳು , ಮಾನವ ಸಪ್ಪಳವೇ ಕೇಳಿಬರದ ರಮಣೀಯ ತಾಣಗಳು ಹೇರಳವಾಗಿವೆ.

*

ಉಪಾಸನ ಒಂದು ಲಾಭರಹಿತ ಉದ್ದೇಶದ ಸಂಸ್ಥೆ. ಸರಕಾರ, ಅನುದಾನ, ಕಾನೂನು, ಕಟ್ಟಳೆಯಂತಹ ಹಂಗಿನಿಂದ ದೂರನಿಂತು ತನ್ನ ಸಂತೋಷಕ್ಕಾಗಿ ತಾನೇ ಕಂಕಣಕಟ್ಟಿಕೊಂಡ ಸಂಸ್ಥೆ. ಮುಖ್ಯವಾಗಿ ಬಡ ಮತ್ತು ನಿರ್ಭಾಗ್ಯ ಮಕ್ಕಳಿಗೆ ಜತೆಯಾಗಿ ನಿಂತು ಅವರ ಶಿಕ್ಷಣಕ್ಕೆ ಆಸರೆಯಾಗುವ ಸಂಸ್ಥೆ. ನೀವು ಉಪಾಸನಕ್ಕೆ ಹೋಗುವುದಾದರೆ ಎರಡು ಕೆಲಸಗಳು ಒಟ್ಟಿಗೆ ನೆರವೇರುತ್ತವೆ. ಬೆಟ್ಟದ ಮನೆಯಲ್ಲಿ , ಬೆಚ್ಚಗಿನ ಉಪಚಾರ ಸ್ವೀಕರಿಸಿ ನಾಕು ದಿವಸ ಹಾಯಾಗಿರುವ ಅವಕಾಶ ಒಂದು ; ಪ್ರಚಾರ ಬೇಡದೆ ಆತ್ಮಸಂತೋಷಕ್ಕಾಗಿ ಸಮಾಜ ಸೇವೆ ಮಾಡುವ ಕೈಗಳನ್ನು ಬಲಪಡಿಸಿದ ಸಂತೋಷ ಇನ್ನೊಂದು.

ಯಾರೋ ದೇಣಿಗೆ ಕೊಟ್ಟಿ ಫಲವಾಗಿ ನನಗೆ ಆ ಜಾಗ ಸವಿಯಾಯಿತು. ನಾನು ಕೊಟ್ಟ ದೇಣಿಗೆ ಫಲ ನಿಮಗೆ ಸಿಗುತ್ತದೆ. ಹೋಗಿ ಬನ್ನಿ.

*

ದಾರಿ :

ಸ್ವಂತ ವಾಹನದಲ್ಲಿ ಹಾಸನ ಮೂಲಕ ಕಳಸ ತಲುಪಿದರೆ ಅಲ್ಲಿಂದ ಸ್ವಲ್ಪ ದೂರ ಸಂಸೆ. ಸಂಸೆ ತಲುಪಿದರೆ ಅಲ್ಲಿಗೇ ಉಪಾಸನ ಬಂದು ನಿಮ್ಮನ್ನು ಬೆಟ್ಟಕ್ಕೆ ಕರೆದೊಯ್ಯುತ್ತದೆ. ಬೆಂಗಳೂರಿನಿಂದ ಕಳಸಕ್ಕೆ ರಸ್ತೆ ಸಾರಿಗೆ ಸಂಸ್ಥೆಯ ಐರಾವತ ಬಸ್ಸಿದೆ. ಸುಗಮ ಟ್ರಾವೆಲ್ಸ್‌ ಬಸ್ಸುಗಳು ಸೀದಾ ಸಂಸೆಯಲ್ಲಿ ನಿಮ್ಮನ್ನು ಇಳಿಸುತ್ತವೆ.

ಉಪಾಸನ ಬೇಸಿಗೆಗೆೆ ಚೆನ್ನ, ಮಳೆಗಾಲಕ್ಕೆ ಇನ್ನೂ ಚೆನ್ನ.

ನೆನಪಿಡಿ :

ಇದು ಪಿಕ್‌ನಿಕ್‌ ಸ್ಪಾಟ್‌ ಅಲ್ಲ, ಹನಿಮೂನ್‌ ತಾಣವಂತೂ ಅಲ್ಲವೇ ಅಲ್ಲ. ಮದ್ಯ ಮಾಂಸಾಹಾರ ಉಪಯೋಗಿಸುವ ಹಾಗಿಲ್ಲ, ಪಶ್ಚಿಮ ಘಟ್ಟ ಸಂಸ್ಕೃತಿಯ ಸಸ್ಯಾಹಾರಿ ಊಟ ಮತ್ತು ಒಳ್ಳೆಯ ಕಾಫಿ ಇಲ್ಲಿ ಲಭ್ಯ.

ಸಂಪರ್ಕ :

ದೂರವಾಣಿ : 08263249288

ಅಂಚೆ ವಿಳಾಸ :

ಉಪಾಸನ ಫೌಂಡೇಶನ್‌ ಆರ್‌.

ಮಾವಿನಕೊಂಬೆ

ಸಂಸೆ : 577124

ಕರ್ನಾಟಕ, ಇಂಡಿಯ

ಉಪಾಸನ ಸಂಸ್ಥೆಯ ಸಾಮಾಜಿಕ ಮುಖ

ಉಪಾಸನ : ಒಂದು ಪಕ್ಷಿನೋಟ

www.upasana.de

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more