• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಯಾರು ಹಿತವರು? ಅಕ್ಕ' ಹೇಳಕ್ಕಾ?

By Staff
|

ಸಮ್ಮೇಳನ ನಡೆಸಲು ವಾಷಿಂಗ್ಟನ್‌ ಡಿ.ಸಿ.ಯ ಕಾವೇರಿ ಕನ್ನಡ ಸಂಘ ಆಸಕ್ತಿ ವ್ಯಕ್ತಪಡಿಸುವುದರೊಂದಿಗೆ 2006ರ ವಿಶ್ವ ಕನ್ನಡ ಸಮ್ಮೇಳನದ ಕನಸುಗಳಿಗೆ ಬೀಜಾಂಕುರವಾಗಿದೆ. ಗುದ್ದಲಿಪೂಜೆಗಾಗಿ ನೆಲೆನೆಲ ಗುರ್ತಿಸುವುದು 'ಅಕ್ಕ"ನ ಕೆಲಸ!

ಪ್ರಿಯ ಕನ್ನಡಿಗ/ ಕನ್ನಡತಿ,

2006ರ ಅಕ್ಕ-ವಿಶ್ವ ಕನ್ನಡ ಸಮ್ಮೇಳನವನ್ನು ತಾನು ಮಾಡುವುದಾಗಿ ಮುಂದೆ ಬಂದಿರುವ ಕಾವೇರಿ ಕನ್ನಡ ಸಂಘದ ಚಟುವಟಿಕೆಗಳನ್ನು ಈ ಅಂಕಣದಲ್ಲಿ ನೀವು ಓದಿದ್ದೀರಿ. ಅಮೆರಿಕಾ ಮತ್ತು ಇತರ ದೇಶಗಳ ಕನ್ನಡ -ಕನ್ನಡಿಗರಿಗೆ ಸಂಭ್ರಮಮದ ಕ್ಷಣಗಳನ್ನು ಕಟ್ಟಿಕೊಡುವ ಉತ್ಸಾಹ, ಉಮೇದು ಮಾತ್ರವಲ್ಲದೆ ಅದಕ್ಕೆ ಪೂರಕವಾಗುವ ಜನತಾಂತ್ರಿಕ ವ್ಯವಸ್ಥೆಯಲ್ಲಿ ತಾನಿಟ್ಟಿರುವ ಶ್ರದ್ಧೆ ಮತ್ತು ಗೌರವಗಳನ್ನು ಅಷ್ಟರಮಟ್ಟಿಗೆ ಕಾವೇರಿಗರು ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ. ಜತೆಗೆ, ವಿಶ್ವ ಕನ್ನಡ ಸಮ್ಮೇಳನವನ್ನು ಆಯೋಜಿಸುವ ತನ್ನ ಸಾಮರ್ಥ್ಯವನ್ನು ಅಂಕಿ ಅಂಶಗಳ ಸಮೇತ ರುಜುವಾತುಪಡಿಸಲು ಅವರು ಸನ್ನದ್ಧರಾಗಿದ್ದಾರೆ.

ಅಕ್ಕನ ಕಕ್ಷೆಯಲ್ಲಿ ಬರುವ ಉತ್ತರ ಅಮೆರಿಕಾದಲ್ಲಿ ನೆಲೆಗೊಂಡಿರುವ ಸಮ್ಮೇಳನೋತ್ಸಾಹಿ ಕನ್ನಡ ಕೂಟವೊಂದು ಪ್ರಾಥಮಿಕವಾಗಿ ನಡೆದುಕೊಳ್ಳಬೇಕಾದ ಪರಿ ಇದು. ಅಮೆರಿಕಾ ಮಾತ್ರವಲ್ಲ. ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಳ್ಳುವ ಕನ್ನಡ ಸಾಹಿತ್ಯ ಸಮ್ಮೇಳನ ವ್ಯವಸ್ಥೆ ಮಾಡುವುದಾಗಿ ಇಂಡಿ, ಭರಮಸಾಗರ, ಮುಳಬಾಗಿಲು, ಪಾವಗಡ ಮುಂತಾದ ಕರ್ನಾಟಕದ 175 ತಾಲೂಕು ಕೇಂದ್ರಗಳ ಸಾಹಿತ್ಯ ಘಟಕಗಳು ಅಧ್ಯಕ್ಷರಿಗೆ ಮನವಿ ಕಳಿಸುತ್ತಾರೆ. ಕನಿಷ್ಠ ಅಗತ್ಯವಾದಷ್ಟು ಪ್ರಮಾಣದಲ್ಲಿ ಯೋಗ್ಯ ಕುಡಿಯುವ ನೀರು ಸರಬರಾಜು ಮಾಡುವ ಹೊಣೆ ಮತ್ತು ಅರ್ಹತೆಯನ್ನು ಅಂತಹ ಕೇಂದ್ರಗಳು ರುಜುವಾತುಪಡಿಸಿ ತೋರಿಸಬೇಕಾಗುತ್ತದೆ.

ಇದು ಒಂದು ಅಂಶ ಮತ್ತು ಹಂತ. ಕಾವೇರಿ ಕನ್ನಡ ಸಂಘದಷ್ಟೇ ಉತ್ಸಾಹವನ್ನು ಮೈದುಂಬಿಕೊಂಡಿರುವ ಇನ್ನೊಂದು , ಮತ್ತೊಂದು ಕನ್ನಡ ಕೂಟ ಉತ್ತರ ಅಮೆರಿಕಾದ ಪೂರ್ವ ಅಥವಾ, ಪಶ್ಚಿಮ ಅಥವಾ ಮಧ್ಯವಲಯ ಅಥವಾ ದಕ್ಷಿಣ ಭಾಗದಲ್ಲಿ ಇರಬಹುದು.'ನಾನೂ ಸಮ್ಮೇಳನ ನಡೆಸಬಲ್ಲೆ" ಎಂಬ ಉತ್ಸಾಹ ಅಂತಹದೊಂದು ಕನ್ನಡ ಕೂಟಕ್ಕೆ ಯಾಕಿರಬಾರದು?

ನನಗೆ ತಿಳಿದಂತೆ ಬೇರಾವ ಕನ್ನಡ ಕೂಟವೂ ಈ ಬಗೆಯ ಉತ್ಸಾಹವನ್ನು ಜಗಜ್ಜಾಹೀರು ಮಾಡಿಲ್ಲ. ಆದರೆ, ಸಮ್ಮೇಳನವನ್ನು ಸಮರ್ಥವಾಗಿ ಏರ್ಪಡಿಸಬಲ್ಲ ಶಕ್ತಿ ಮತ್ತು ಯುಕ್ತಿ ಇರುವ ಬೇಕಾದಷ್ಟು ಕನ್ನಡ ಸಂಘಗಳಿವೆ. ಒಂದೊಂದೂ ಕನ್ನಡ ಕೂಟಗಳು ತನ್ನಷ್ಟಿಗೆ ತಾನೆ ಒಂದು ಮರ. ಕಾವೇರಿ ಬೋಧಿವೃಕ್ಷವಾದರೆ, ವಿದ್ಯಾರಣ್ಯ ಔದುಂಬರ ವೃಕ್ಷ. ನ್ಯೂಯಾರ್ಕ್‌ ಕನ್ನಡ ಸಂಘ ಆಲದ ಮರವಾದರೆ, ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟ ಅರಳಿ ಮರ. ಫ್ಲಾರಿಡಾ ಶ್ರೀಗಂಧ , ಹ್ಯೂಸ್ಟನ್‌ ಹೊನ್ನೆ, ಪಂಪ ಮತ್ತಿ, ಲಾಸ್‌ಏಂಜಲಿಸ್‌ನ ಕಸಾಸಂ ಬೆಟ್ಟದ ನೆಲ್ಲಿಕಾಯಿ ಮರ.

ಮರಗಳ ಜತೆಗೆ ಗಿಡ ಗಂಟಿಗಳೂ ಉಂಟು. ತುಳಸಿ, ಮೊಲ್ಲೆ, ಜಾಕಾಯಿ ಜಾಪತ್ರೆ, ಪನ್ನೇರಲೆ ಪಾರಿಜಾತಗಳಂಥ ಕನ್ನಡ ಶಕ್ತಿಕೇಂದ್ರಗಳು ಬೇಕಾದಷ್ಟಿವೆ. ಇಂತಹ ಯಾವೊಂದು ಕೇಂದ್ರವೂ ಸಮ್ಮೇಳನ ನಡೆಸುವ ಉಮೇದು ಪ್ರಕಟಿಸಬಹುದು. ವಿಶ್ವ ಕನ್ನಡ ಸಮ್ಮೇಳನದ ಜವಾಬ್ದಾರಿಯನ್ನು ಯಾವ ಕೇಂದ್ರವೇ ಕೈಗೆತ್ತಿಕೊಂಡರೂ ಅಕ್ಕನ ವ್ಯಾಪ್ತಿಗೆ ಬರುವುದರಿಂದ ಸಮ್ಮೇಳನ ಎಲ್ಲಿ ನಡೆದರೆ ಸೂಕ್ತ ಎನ್ನುವುದನ್ನು ಅಕ್ಕ ನಿರ್ದೇಶಕ ಮಂಡಳಿ ಅಂತಿಮವಾಗಿ ನಿರ್ಧರಿಸುತ್ತದೆ. ಈ ನಿಯಮ ಕೇವಲ ಪ್ರೋಟೋಕಾಲ್‌ಗೆ ಪ್ರತೀಕವಾಗಿರದೆ ಉನ್ನತ ಜವಾಬ್ದಾರಿಯ ಲಕ್ಷಣವಾಗಿಯೂ ಆಗಿ ನಿಲ್ಲುತ್ತದೆ.

ಪಂಪ ಕನ್ನಡ ಕೂಟದ ಸದಸ್ಯ , ಮಿಷಿಗನ್‌ ಪ್ರಜೆ ಡಾ. ಕುದುರು ಮುರಳಿ ಅಕ್ಕದ ಹಾಲಿ ಅಧ್ಯಕ್ಷರು. 2006 ರ ಸಮ್ಮೇಳನ ತಾಣದ ಬಗ್ಗೆ ಅವರು ಮತ್ತು ಅವರ ತಂಡದ ಒಲವು ನಿಲವುಗಳೇನು ಎನ್ನುವುದು ಇನ್ನೂ ತಿಳಿದು ಬಂದಿಲ್ಲ. ಅಧ್ಯಕ್ಷರ ಮೇಜಿನ ಮೇಲೆ ಎಷ್ಟು ಪ್ರೊಪೋಸಲ್‌ಗಳು ಇವೆ?, ಗೊತ್ತಿಲ್ಲ.

ಆರ್‌ಲ್ಯಾಂಡೋದ ಗೇಲಾರ್ಡ್‌ ಪಾಮ್‌ ಹೋಟಲಿನ ಒಂದು ಕಾಫಿ ಶಾಪ್‌ನಲ್ಲಿ ಹರಟೆ ಹೊಡೆಯುತ್ತಿದ್ದಾಗ 'ಮುಂದಿನ ಸಮ್ಮೇಳನ ಲಾಸ್‌ವೆಗಾಸ್‌ನಲ್ಲಿ ನಡೆಸಬಹುದು" ಎಂದು ಯಾರೋ ಪುಕ್ಕಟೆ ಸಲಹೆ ಕೊಟ್ಟಿದ್ದು ನನ್ನ ಕಿವಿಗೆ ಬಿದ್ದಿತ್ತು.

ಕ್ಯಾಸಿನೋಗಳ ಸ್ವರ್ಗದಲ್ಲಿ ಕನ್ನಡಿಗರೂ ಇದ್ದಾರಾ? ನಾನು ಆಶ್ಟರ್ಯ ಚಕಿತನಾಗಿದ್ದೆ. ಈ ಮಧ್ಯೆ ಸಮ್ಮೇಳನದ ಮೊಗಸಾಲೆಯಲ್ಲಿ ಕೆಕೆಎನ್‌ಸಿ ಅಧ್ಯಕ್ಷ ಯೋಗೇಶ್‌ ದೇವರಾಜ್‌ ಭೇಟಿಯಾಗಿ ಮುಂದಿನ ಸಮ್ಮೇಳನದ ಬಗ್ಗೆ ಕ್ಯಾಜುಯಲ್‌ ಆಗಿ ನನ್ನೊಂದಿಗೆ ಮಾತಾಡಿದ್ದರು. 'ನೀವು ಮಾಡುತ್ತೀರಾ" ಎಂಬ ನನ್ನ ಪ್ರಶ್ನೆಗೆ ದೇವರಾಜ್‌ ಕೊಟ್ಟ ಉತ್ತರ ತಮಾಷೆಯಾಗಿತ್ತು. 'ಬೇ ಏರಿಯಾದಲ್ಲಿ ಪ್ರತಿ ವಾರವೂ ಒಂದು ಸಮ್ಮೇಳನ ನಡೆಯತ್ತೆ. ನಾನಾ ಬಗೆಯ ಕಾರ್ಯಕ್ರಮಗಳಲ್ಲಿ ಬೇಜಾನ್‌ ಜನ ಭಾಗವಹಿಸುತ್ತಾರೆ. ಒಂದು ಸಣ್ಣ ಹಬ್ಬವಾದರೆ 800-1000 ಜನ ಸೇರ್ತಾರೆ"

ಎಂದು ಹೇಳಿದ ಅವರು ಬಿಟ್ಟ ಕಣ್ಣು ತೆರೆದ ಬಾಯಿ ಆಗಿದ್ದರು. ಅವರ ಮಾತಿನ ಇಂಗಿತಾರ್ಥ ನನಗೆ ಇವತ್ತಿನವರೆವಿಗೂ ಹೊಳೆದಿಲ್ಲ.

ಅಂತೆಯೇ, ನ್ಯೂಯಾರ್ಕಿನ ಕೆಲವು ಕನ್ನಡಿಗರೂ ತಮ್ಮ ಅಭಿಪ್ರಾಯಗಳನ್ನು ಸಮ್ಮೇಳನದ ಕೊನೆಯ ದಿನ ನನ್ನೊಂದಿಗೆ ಹಂಚಿಕೊಂಡಿದ್ದರು.'2000 ಇಸವಿಯ ಸಮ್ಮೇಳನವನ್ನು ನಾವು ಮಾಡಬೇಕಾಗಿತ್ತು . ಆದರೆ , 9/11ರ ಕಾರಣಗಳಿಂದಾಗಿ ಸಮ್ಮೇಳನ ಡೆಟ್ರಾಯಿಟ್‌ಗೆ ವರ್ಗವಾಯಿತು. ಈ ಬಾರಿ ನಾವು ಮಾಡಬಹುದು, Security is not that big an issue, we guess ಎಂದು ತೀರ್ಮಾನಕೊಟ್ಟು ನ್ಯೂಯಾರ್ಕ್‌ ವಿಮಾನ ಹತ್ತಿದರು. ಆವತ್ತೇ ಮೊದಲು, ಆವತ್ತೇ ಕೊನೆ. ಅವರಿಂದ ಏನೂ ಸಮಾಚಾರ ಬಂದಿರುವುದಿಲ್ಲ.

ಕೊನೆಗೂ ಮುಖ್ಯವಾಗುವುದು ಸಮ್ಮೇಳನಗಳಲ್ಲ. ನಾವು ನಾವೇ ನಿರ್ಮಿಸಿಕೊಳ್ಳುವ ನಿಯಮಗಳನ್ನು ನಾವೇ ಮುರಿಯಬಾರದು. ಮುರಿದರೆ, ಕನ್ನಡದ ಇ-ಮೇಲ್‌ ಕಾಕಿಬೋಕಿಗಳಿಗೆ ವೃಥಾ ಆಹಾರ ಸಿಕ್ಕಂತಾಗತ್ತೆ.

ನಮಸ್ಕಾರ!

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more