ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ. ರಘುನಾಥ ಅಂಕಣ: ಮೆಲುಕಿಗೆ ಬಂದ ‘ಮಹಾನಟಿ’ ಸಾವಿತ್ರಿಯವರ ವಿಷಾದಗಾಥೆ

By ಸ. ರಘುನಾಥ
|
Google Oneindia Kannada News

ರೂಪಲಾವಣ್ಯ, ಪ್ರತಿಭೆ, ಪರಿಶ್ರಮ, ಅದೃಷ್ಟ ಮೇಳವಿಸಿ ಬಂದು, ತೆಲುಗು ಚಿತ್ರರಂಗದಲ್ಲಿ ಅಚ್ಚಳಿಯದ ಛಾಪು ಮೂಡಿಸಿದವರು 'ಮಹಾನಟಿ' ಸಾವಿತ್ರಿ. ಭಾರತೀಯ ಚಲನಚಿತ್ರರಂಗವನ್ನು ಪ್ರಭಾವಿತಗೊಳಿಸಿದ ಪ್ರಮುಖ ನಟಿಯರಲ್ಲಿ ಒಬ್ಬರು. ಅಂತೆಯೇ ವಿಷಾದದ ಭಾವಗೀತೆಯಾಗಿ ಉಳಿದವರಲ್ಲಿ ಮರೆಯಲಾಗದವರಲ್ಲಿ ಒಬ್ಬರಾಗಿ ಉಳಿದುಬಿಟ್ಟವರು. ಅದು ಮೆಲುಕಾಗಿ ಬಂದ ವಿಷಾದಗಾಥೆಯ ನೋಟ ಈ ಲೇಖನ.

ಬದುಕು ಜಟಕಾಬಂಡಿ ವಿಧಿಯದರ ಸಾಹೇಬ |
ಕುದುರೆ ನೀನ್ ಅವನು ಪೇಳ್ದಂತೆ ಪಯಣಿಗನು |
ಮದುವೆಗೋ ಮಸಣಕೋ ಅವನು ಹೋಗೆಂದ ಕಡೆಗೋಡು |
ಪದಕುಸಿಯೆ ನೆಲವಿಹುದು ಮಂಕುತಿಮ್ಮ ||

 ಸ. ರಘುನಾಥ ಅಂಕಣ: ಉರಿಯ ಆರಿಸುವ ತಣ್ಣೀರೆ ಕಣ್ಣೀರು ಸ. ರಘುನಾಥ ಅಂಕಣ: ಉರಿಯ ಆರಿಸುವ ತಣ್ಣೀರೆ ಕಣ್ಣೀರು

ಡಿ.ವಿ. ಗುಂಡಪ್ಪನವರ ಮಂಕುತಿಮ್ಮನ ಕಗ್ಗದ ಜನಜನಿತ ಪದ್ಯಗಳಲ್ಲಿ ಇದಕ್ಕೂ ಚಿರಸ್ಥಾನವಿದೆ. ಮಾನವ ಎಂತಹ ಸಾಧನೆ ಮಾಡಿದವನಾದರೂ ಎಂತಹ ಅತ್ಯುನ್ನತ ಪ್ರತಿಭೆಯುಳ್ಳವನಾದರೂ ಕೇವಲ ವಿಧಿಯ ಕೈಗೊಂಬೆ ಮಾತ್ರ ಎಂದು ಸಾರುವ ಮೇಲಿನ ಪದ್ಯ, ಆದಿಮ ಮಾನವರಿಂದ ಹಿಡಿದು ಮುಂಬರಲಿರುವ ಎಲ್ಲಾ ತಲೆಮಾರುಗಳ ಮಾನವರಿಗೂ ಅನ್ವಯವಾಗುಂತಹ ಸಾಲುಗಳು. ಈ ಮಾತನ್ನು ಏಕೆ ಹೇಳಿದ್ದೆದಂದರೆ, ಕೆಲವರು ಜೀವನದಲ್ಲಿ ದೊಡ್ಡ-ದೊಡ್ಡ ಸಾಧನೆಗಳನ್ನು ಮಾಡಲು ಹುಟ್ಟಿರುತ್ತಾರೆ. ಬದುಕು ಕಳೆಯುತ್ತ, ಕಳೆಯುತ್ತಾ ಸಾಧಿಸಬೇಕಾದದ್ದನ್ನು ಸಾಧಿಸುತ್ತಲೇ ಒಳಗೆ ಟೊಳ್ಳಾಗುತ್ತಾರೆ. ಆದರೆ ಹೋರಾಡುತ್ತ ಬದುಕನ್ನು ಕಟ್ಟಿಕೊಳ್ಳಲಾಗದೆ ಸೋಲುತ್ತ ಹೋಗುವಂತಹ ಕೆಲವು ನಿರ್ಣಯಗಳನ್ನು ತೆಗೆದುಕೊಳ್ಳುತ್ತಾರೆ. ಇಂತಹವರ ಜೀವನದ ಕಡೆಯ ದೃಶ್ಯ ವಿಷಾದ, ತಂದುಕೊಂಡ ಮರಣ.

Sa Raghunatha Column: Mahanati Savitris Regrettable Story; Part-1

1935ರ ಡಿಸೆಂಬರ್ 6ರಂದು ಜನಿಸಿದ ಸಾವಿತ್ರಿ
'ಜವರಾಯ ಬರುವಾಗ ಬರಿಕೈಲಿ ಬರಲಿಲ್ಲ' ಎನ್ನುವ ಕನ್ನಡ ಸಿನಿಮಾದ ಹಾಡೊಂದಿದೆ. ಆದರೆ, ಕೆಲವರ ಬದುಕಿಗೆ ಜವರಾಯ ಬರುವುದಿಲ್ಲ, ಆದರೆ ಅವನನ್ನು ಬಲವಂತವಾಗಿ ಎಳೆದು ತಂದುಕೊಳ್ಳುತ್ತಾರೆ. ಅಂತಹವರಲ್ಲಿ ಅಭಿನೇತ್ರಿ ಸಾವಿತ್ರಿಯವರೂ ಒಬ್ಬರು. ಸಾವಿತ್ರಿ ಅಚ್ಚ 'ತೆಲುಗಮ್ಮಾಯಿ' (ಅಚ್ಚ ತೆಲುಗುಬಾಲೆ). ಹುಟ್ಟಿದ್ದು ಗುಂಟೂರು ಜಿಲ್ಲೆಯ ಚಿರವೂರು ಎನ್ನುವ ಹಳ್ಳಿಯಲ್ಲಿ, 1935ರ ಡಿಸೆಂಬರ್ 6ರಂದು. ಮರಣ ಹೊಂದಿದ್ದು 1981ರ ಡಿಸೆಂಬರ್ 26ರಂದು.

ಸ. ರಘುನಾಥ ಅಂಕಣ: ಸಾಂತ್ವನದ ಹಾಡುಗಳು ಶತಮಾನಗಳಿಗೂ ಹಾಡೇ ಸ. ರಘುನಾಥ ಅಂಕಣ: ಸಾಂತ್ವನದ ಹಾಡುಗಳು ಶತಮಾನಗಳಿಗೂ ಹಾಡೇ

ಹುಟ್ಟಿದ ತಿಂಗಳು ಹಾಗೂ ಮರಣಿಸಿದ ತಿಂಗಳು ಎರಡೂ ಒಂದೇ ಆಗಿರುವುದೊಂದು ವಿಶೇಷ. ಮೃತರಾದಾಗ ಅವರ ವಯಸ್ಸು ಕೇವಲ 46 ವರ್ಷಗಳು. ಈ 46 ವರ್ಷಗಳ ಬದುಕಿನಲ್ಲಿ ಸಾವಿತ್ರಿಯವರ ಸಾಧನೆಯನ್ನು ಕಂಡಾಗ, "ಆಹಾ, ಈ ವಯಸ್ಸಿಗೆ ಇಷ್ಟೊಂದು ಸಾಧನೆಯಾ?" ಎನಿಸುವುದು. ಆದರೆ ಅವರ ಸಾವನ್ನು ನೆನೆಸಿಕೊಂಡಾಗ, "ಅಯ್ಯೋ, ಈ ವಯಸ್ಸಿಗೇ ಈ ಸಾವೇ?" ಎಂದೂ (ಕನ್ನಡ ರಂಗಭೂಮಿ-ಸಿನೆಮಾ ಕ್ಷೇತ್ರಗಳ ದೊಡ್ಡ ಪ್ರತಿಭೆಯ ನಟಿ ಕಲ್ಪನಾರ ಮರಣದ ನೆನಪಿನೊಂದಿಗೆ)ಅನಿಸುವುದು. ಈ ಎರಡನ್ನೂ ಹುಟ್ಟುಹಾಕಿದ ಅಭಿನೇತ್ರಿ ಸಾವಿತ್ರಿ.

Sa Raghunatha Column: Mahanati Savitris Regrettable Story; Part-1

6 ತಿಂಗಳ ವಯಸ್ಸಾಗಿದ್ದಾಗಲೇ ತಂದೆ ತೀರಿಕೊಂಡರು
ಈಕೆಯ ತಂದೆಯ ಹೆಸರು ನಿಸ್ಸಂಕರ ಗುರುವಯ್ಯ, ತಾಯಿ ನಿಸ್ಸಂಕರ ಸುಭದ್ರಮ್ಮ. ಇವರ ಈ ಮಗಳ ಪೂರ್ಣ ಹೆಸರು ನಿಸ್ಸಂಕರ ಸಾವಿತ್ರಿ. ನಿಸ್ಸಂಕರ ಎನ್ನುವುದು ಅವರ ಮನೆತನದ ಹೆಸರು. ಸಾವಿತ್ರಿ ಅವರಿಗೆ 6 ತಿಂಗಳ ವಯಸ್ಸಾಗಿದ್ದಾಗಲೇ ತಂದೆ ತೀರಿಕೊಂಡರು. ಹಾಗಾಗಿ ತಾಯಿ ಈ ಎಳೆಗೂನ್ನು ಎದೆಗಪ್ಪಿಕೊಂಡು ತಮ್ಮ ಹತ್ತಿರದ ಸಂಬಂಧಿ ಕೊಮ್ಮರೆಡ್ಡಿ ವೆಂಕಟರಾಮಯ್ಯ ಚೌಧುರಿಯವರ ಆಶ್ರಯಕ್ಕೆ ಹೋದರು. ಅಲ್ಲಿ ಸಾವಿತ್ರಿ ಬೆಳೆಯುತ್ತ, ಬಾಲ್ಯದಲ್ಲೇ ನೃತ್ಯಾಭ್ಯಾಸದಲ್ಲಿ ತೊಡಗಿದರು. ಶಾಲಾ ಕಾರ್ಯಕ್ರಮಗಳಲ್ಲಿ ಹೆಣ್ಣುಮಕ್ಕಳೊಂದಿಗೆ ಮಾತ್ರ ನೃತ್ಯ ಮಾಡಲು ಮನೆಯಲ್ಲಿ ಅನುಮತಿ ಸಿಕ್ಕಿತ್ತು.

ಚಿತ್ರರಂಗ ಪ್ರವೇಶಿಸಿದ ಮೊದಲ ದಿನಗಳಲ್ಲಿ ಈ ರೀತಿಯ ನೃತ್ಯಗಳನ್ನು ಮಾಡಬೇಕಾಗುತ್ತದೆಂದು ತಿಳಿದಾಗ ಸಂಕೋಚ ಮಾಡಿಕೊಳ್ಳುತ್ತಿದ್ದರು. ಗಂಡಸರ ಜೊತೆಯಲ್ಲಿ ನಾಟ್ಯ ಮಾಡುವುದು ಹೇಗೆಂಬುದು ಈ ಸಂಕೋಚಕ್ಕೆ ಕಾರಣ. ಅಷ್ಟು ಸಂಕೋಚ ಹಾಗೂ ಮುಜುಗರ ಸ್ವಭಾವದ ಮುಗ್ಧೆ, ಚಿತ್ರರಂಗಕ್ಕೆ ಬರಬೇಕೆನ್ನುವ ಆಲೋಚನೆಯನ್ನು ಇವರ ಮನಸ್ಸಿನಲ್ಲಿ ಹುಟ್ಟು ಹಾಕಿದವರು ಅನೇಕ ಜನ. 'ನೀನು ಇಷ್ಟು ಸುಂದರವಿದ್ದಿ, ಇಷ್ಟೊಂದು ಚೆನ್ನಾಗಿ ನೃತ್ಯ ಮಾಡುತ್ತಿಯಾ. ನೀನೇಕೆ ಸಿನೆಮಾಗಳಲ್ಲಿ ನಟಿಸಬಾರದು?' ಆದರೆ ಈ ವಿಚಾರದಲ್ಲಿ ಮನೆಯಲ್ಲಿ ಎರಡು ಭಿನ್ನ ಅಭಿಪ್ರಾಯಗಳು ಇದ್ದವು.

1951ರಲ್ಲಿ 'ಪಾತಾಳ ಭೈರವಿ' ಎಂಬ ಚಿತ್ರದಲ್ಲಿ ನಟನೆ
ಒಂದು ಚಿತ್ರರಂಗ ಪ್ರವೇಶಕ್ಕೆ ಪರವಾದ ಅಭಿಪ್ರಾಯ, ಇನ್ನೊಂದು ವಿರುದ್ಧವಾದದ್ದು. ಕಡೆಗೆ ಸಾವಿತ್ರಿಯವರು ನಿರ್ಣಯಿಸಿ 1950ರಲ್ಲಿ ಹೊರಟಿದ್ದು ಅಂದು ದಕ್ಷಿಣ ಭಾರತದ ಸಿನೆಮಾ ಮಹಾನಗರಿ ಎನಿಸಿದ್ದ ಮದ್ರಾಸಿಗೆ. ಜೊತೆಯಾಗಿ ಬಂದಿದ್ದ ತಮ್ಮ ಪೋಷಕ ಚೌಧುರಿಯವರೊಂದಿಗೆ ಸ್ಟುಡಿಯೋಗಳಿಗೆ ಅಲೆದಾಡಿದರು. ಫಲವಾಗಿ ಸಿಕ್ಕಿದ್ದು 1951ರಲ್ಲಿ 'ಪಾತಾಳ ಭೈರವಿ' ಎಂಬ ಚಿತ್ರದಲ್ಲಿ ನರ್ತಕಿಯ ಸಣ್ಣಪಾತ್ರ. ಅದೇ ವರ್ಷ ತೆಲುಗಿನಲ್ಲಿ 'ರೂಪವತಿ' ಎನ್ನುವ ಚಿತ್ರದಲ್ಲಿ ಮುಖ್ಯ ಪಾತ್ರಕ್ಕೆ ಆಯ್ಕೆಗೊಂಡರು.

1952ರಲ್ಲಿ 'ಕಲ್ಯಾಣಮ್ ಪಣ್ಣಿ ಪಾರ್' (ಮದುವೆ ಮಾಡಿ ನೋಡು) ತಮಿಳು ಚಿತ್ರದಲ್ಲಿ ಪ್ರಧಾನ ಪಾತ್ರಧಾರಿಯಾಗಿ ಅಭಿನಯಕ್ಕೆ ಅವಕಾಶ. 1952ರಲ್ಲೇ 'ಪಲ್ಲೆಟೂರು' (ಹಳ್ಳಿ) ಎನ್ನುವ ತೆಲುಗು ಚಿತ್ರದಲ್ಲಿ ನಾಯಕಿಯ ಪಾತ್ರ. ಅಲ್ಲಿಂದ ಮುಂದಕ್ಕೆ 'ಮಹಾನಟಿ'ಯಾಗಿ ಬೆಳೆಯುವವರೆಗೂ ಸಕಲ ಗೌರವ-ಮರ್ಯಾದಗಳು ಬಂದು ಸೆರಗಿಗೆ ಬಿದ್ದವು.

ದೇವದಾಸು ಸಿನಿಮಾ ಮೂಲಕ ಪ್ರಸಿದ್ಧಿ
ಪಲ್ಲಟೂರು ಚಿತ್ರದ ನಂತರದ ಒಂದು ವರ್ಷಕ್ಕೆ (1953) ದಕ್ಕಿದ್ದು 'ಮನಮ್ ಪೋಲ ಮಾಂಗಲ್ಯಮ್' ಎನ್ನುವ ತಮಿಳು ಸಿನಿಮಾದಲ್ಲಿ ನಾಯಕಿಯ ಪಾತ್ರ. 1953ನೇ ಇಸವಿ ಸಾವಿತ್ರಿಯವರ ಬದುಕಿನಲ್ಲಿ ಬಂಗಾರದ ವರ್ಷ. ಏಕೆಂದರೆ, ಈ ವರ್ಷದಲ್ಲಿಯೇ 'ದೇವದಾಸು' ಸಿನಿಮಾ ತೆಲುಗಿನಲ್ಲಿ ಬಂದದ್ದು. ಬಂಗಾಳದ ಶರತ್‍ಚಂದ್ರ ಚಟರ್ಜಿಯವರ ಕಾದಂಬರಿಯನ್ನು ಆಧರಿಸಿದ ಚಿತ್ರ ಇದು. ಈ ದೇವದಾಸು ಸಿನಿಮಾದಲ್ಲಿ ಸಾವಿತ್ರಿಯವರ ಅಭಿನಯ ಸಾಮರ್ಥ್ಯ ಲೋಕಕ್ಕೆ ಕಾಣಿಸಿತು. ಒಂದು ದೊಡ್ಡ ಪ್ರತಿಭೆ ಹೊರಬರಲು ದೇವದಾಸು ಸಿನಿಮಾ ಅವಕಾಶವನ್ನು ಕಲ್ಪಿಸಿಕೊಟ್ಟಿತು.

ದೇವದಾಸು ಹಾಗೂ ಅದರ ನಂತರ ಬಂದ ತೆಲುಗು ಮತ್ತು ತಮಿಳು ಚಿತ್ರಗಳು ಎಷ್ಟರ ಮಟ್ಟಿಗೆ ಈಕೆಯನ್ನು ಮೇಲಕ್ಕೆ ತೆಗೆದುಕೊಂಡು ಹೋದವೆಂದರೆ, 1950ರಿಂದ 1960ರ ಮಧ್ಯಕಾಲದ ಭಾರತೀಯ ಚಲನಚಿತ್ರರಂಗದ ಪ್ರಮುಖ ಅಭಿನೇತ್ರಿಯರಲ್ಲಿ ಒಬ್ಬರು ಎಂದು ಗುರುತಿಸಲ್ಪಟ್ಟರು. ಹೀಗೆ ತಮ್ಮನ್ನು ತಮ್ಮ ವ್ಯಕ್ತಿತ್ವದಿಂದಲೇ 'ಮಹಾನಟಿ' ಎಂದು ಕರೆಸಿಕೊಳ್ಳುವವರೆಗೆ ಇಲ್ಲಿ ದಾರಿ ಸಂಪೂರ್ಣವಾಗಿ ತೆರೆದುಕೊಂಡಿತು ಹಾಗೂ ಸಾವಿತ್ರಿಯವರು ಆ ದಾರಿಯಲ್ಲಿ ತನ್ನ ಹೆಜ್ಜೆಗಳನ್ನು ಹೇಗೆ ಇಡಬೇಕೆನ್ನುವುದನ್ನು ಅರ್ಥ ಮಾಡಿಕೊಂಡು ತಮ್ಮ ಪಯಣವನ್ನು ಮುಂದುವರೆಸಿದರು.

ಸಾವಿತ್ರಿ ಅಭಿನಯಿಸಿದ ಒಟ್ಟು ಚಿತ್ರಗಳ ಸಂಖ್ಯೆ 252
1981ರವರೆಗೆ, ಅಂದರೆ ತಮ್ಮ 16ನೇ ವಯಸ್ಸಿನಿಂದ 46ನೇ ವಯಸ್ಸಿನಲ್ಲಿ ಮೃತರಾಗುವವರೆಗೆ ಅವರು ಸಿನಿಮಾರಂಗದಲ್ಲಿ ಇದ್ದದ್ದು 30 ವರ್ಷಗಳು. ಈ ಸುದೀರ್ಘ ಅವಧಿಯಲ್ಲಿ ಚಿತ್ರರಂಗದಲ್ಲಿ ಮೆರೆದ ಈಕೆ ಅಭಿನಯಿಸಿದ ಒಟ್ಟು ಚಿತ್ರಗಳ ಸಂಖ್ಯೆ 252. ವಾರ್ಷಿಕವಾಗಿ ಲೆಕ್ಕ ಹಾಕಿದರೆ ಆ ಕಾಲದಲ್ಲಿ ವರ್ಷವೊಂದಕ್ಕೆ ಸರಾಸರಿ 8 ಚಿತ್ರಗಳು ಬಂದಿವೆ. ಅವುಗಳಲ್ಲಿ ತೆಲುಗಿನಲ್ಲಿ 138 ಚಿತ್ರಗಳು, 100 ತಮಿಳು ಚಿತ್ರಗಳು, 6 ಕನ್ನಡ ಸಿನಿಮಾಗಳು, 5 ಹಿಂದಿ ಚಿತ್ರಗಳು, 3 ಮಲಯಾಳಂ ಸಿನಿಮಾಗಳು ಸೇರಿವೆ.

1952-1953 ಸಾವಿತ್ರಿಯವರ ಚಿತ್ರರಂಗದ ಪ್ರವೇಶ ಹಾಗೂ ಬೆಳವಣಿಗೆಗೆ ಹೇಗೆ ಪ್ರಾಮುಖ್ಯತೆ ಪಡೆದಿದೆಯೋ ಹಾಗೆಯೇ ಇನ್ನೊಂದು ವಿಷಯಕ್ಕೂ ಪ್ರಾಮುಖ್ಯತೆ ಪಡೆದಿದೆ. ಅದು ಅವರ ಸುಖದ ದಾರಿ, ಕಷ್ಟದ ದಾರಿ ಹಾಗೂ ಅಂತ್ಯದ ದಾರಿಯೂ ಆಗಿಬಿಟ್ಟಿದ್ದು ಮಾತ್ರ ವಿಪರ್ಯಾಸ.

ಮೊದಲು ಭಾವಗೀತೆಯಾಗಿ ಪ್ರಸಿದ್ಧಿಗೆ ಬಂದ ಕುವೆಂಪು ಅವರ ಒಂದು ಭಾವಗೀತೆಯು ನಂತರ ಚಿತ್ರಗೀತೆಯಾಗಿ ಜನಪ್ರಿಯಗೊಂಡ 'ಯಾವ ಜನ್ಮದ ಮೈತ್ರಿ ಈ ಜನ್ಮದಲಿ ಬಂದು ನಮ್ಮಿಬ್ಬರನು ಮತ್ತೆ ಬಂಧಿಸಿಹುದೋ ಕಾಣೆ' ಗೀತೆ ಸಾವಿತ್ರಿ-ಜೆಮಿನಿ ಗಣೇಶನ್ ಅವರ ಸಂಬಂಧಕ್ಕೂ ಅನ್ವಯಿಸುತ್ತದೆ. ಇಬ್ಬರದೂ ಯಾವ ಜನ್ಮದ ಮೈತ್ರಿಯೋ?

ಮೋಹಪಾಶದಲ್ಲಿ ಬಂಧಿಸಿದ್ದ ಜೆಮಿನಿ ಗಣೇಶನ್
ಪ್ರೀತಿ ಯಾರಲ್ಲಿ, ಯಾವಾಗ ಹುಟ್ಟುತ್ತದೋ ಯಾರೂ ಹೇಳಲಾರರು. 1952ರಲ್ಲಿ ಸಾವಿತ್ರಿಯವರು ಒಟ್ಟು ಆರು ತೆಲುಗು ಸಿನಿಮಾಗಳಲ್ಲಿ ಹಾಗು ಒಂದು ತಮಿಳು ಸಿನಿಮಾದಲ್ಲಿ ಅಭಿನಯಿಸಿದರು. ಅವರು ಜೆಮಿನಿ ಸ್ಟುಡಿಯೋಗೆ ಪಾತ್ರಗಳಿಗಾಗಿ ಹೋಗುತ್ತಿದ್ದ ಕಾಲದಲ್ಲಿ ಆಗ ತಾನೇ ಮೊಳಕೆಯೊಡೆಯುತ್ತಿದ್ದ ಸುಂದರಾಂಗ ನಟ ಜೆಮಿನಿ ಗಣೇಶನ್‍ರ ಪರಿಚಯಾದುದು ಎಲ್ಲಿಯವರೆಗೆ ಬೆಳೆಯುತ್ತ ಹೋಯಿತೆಂದರೆ, ಸಾವಿತ್ರಿಯವರು ತಮ್ಮ ಮನೆಯನ್ನು ಬಿಟ್ಟು ಆತನ ಮನೆಬಾಗಿಲಿಗೆ ಹೋಗುವವರೆಗೆ. ಜೆಮಿನಿ ಗಣೇಶನ್ ಅಷ್ಟು ಗಟ್ಟಿಯಾಗಿ ಸಾವಿತ್ರಿಯವರನ್ನು ತನ್ನ ಮೋಹಪಾಶದಲ್ಲಿ ಬಂಧಿಸಿ ಸೆಳೆದಿದ್ದರು.

ರಾತ್ರೋರಾತ್ರಿ ಮನೆಬಿಟ್ಟ ಸಾವಿತ್ರಿಯವರು ಜೆಮಿನಿ ಗಣೇಶನ್‍ರ ಮನೆ ಬಾಗಿಲಿನಲ್ಲಿ ನಿಂತಾಗ, ಬಾಗಿಲು ತೆರೆದವರು ಜೆಮಿನಿ ಗಣೇಶನ್‍ರ ಮೊದಲ ಹೆಂಡತಿ ಅಲಮೇಲು. ಜೆಮಿನಿ ಗಣೇಶನ್‍ರವರಿಗೆ ಅದಾಗಲೇ ಮದುವೆಯಾಗಿ 12 ವರ್ಷಗಳಾಗಿದ್ದವು. 1920ರಲ್ಲಿ ಹುಟ್ಟಿದ ಜೆಮಿನಿ ಗಣೇಶನ್, ಸಾವಿತ್ರಿ ಅವರಿಗಿತ 15 ವರ್ಷ ದೊಡ್ಡವರಾಗಿದ್ದರು. ಸಾವಿತ್ರಿ ಒಲಿದಿದ್ದು ಈ ವಿವಾಹಿತನಿಗೆ. ಇಂತಹ ಒಲವುಗಳ ದುರಂತವನ್ನು ಆಕೆ ತಿಳಿದಿದ್ದರೊ ಇಲ್ಲವೋ? ಆದರೆ ಜೆಮಿನಿ ಗಣೇಶನ್‍ರ ತೆಕ್ಕೆಗೆ ಬಿದ್ದಿದ್ದರು.

1952ರಲ್ಲಿ ಜೆಮಿನಿ ಗಣೇಶನ್‍ರನ್ನು ಮದುವೆಯಾದ ಸಾವಿತ್ರಿ
ಹೀಗೆ ಸಾವಿತ್ರಿಯವರು 1952ರಲ್ಲಿ ಜೆಮಿನಿ ಗಣೇಶನ್‍ರನ್ನು ಮದುವೆಯಾಗಿ 1981ರವರೆಗೆ ಅಂದರೆ 29 ವರ್ಷಗಳ ಕಾಲ ದಾಂಪತ್ಯ ಜೀವನವನ್ನು ನಡೆಸಿದರು. ಈ ಬದುಕಿನಲ್ಲಿ ಸಾವಿತ್ರಿಯವರು ಕಂಡು ಉಂಡದ್ದೇನು, ಎಷ್ಟು, ಎಂದಳಿಂದು ಹೇಳುವವರಾರು? ನಟನೆಯ ಬದುಕು ಸಾರ್ವಜನಿಕ, ವೈವಾಹಿಕ ಬದುಕು ವೈಯಕ್ತಿಕ. ಈ ಎರಡನ್ನೂ ಕಟ್ಟಿಕೊಂಡ ಜೀವನದಲ್ಲಿ ಸಾವಿತ್ರಿಯವರ ಜೀವನ ಯಾನ ಸಾಗಿತ್ತು. ಚಿತ್ರರಂಗದಲ್ಲಿ ಸಾವಿತ್ರಿಯವರಿಗೆ ಬೇಡಿಕೆ ಮುಂದುವರೆದಿತ್ತು, ಜೆಮಿನಿ ಗಣೇಶನ್‍ರಿಗೆ ಬೇಡಿಕೆ ಕಡಿಮೆಯಾಗುತ್ತಿತ್ತು.

ಸಾವಿತ್ರಿ ಕಷ್ಟದ ಬಾಲ್ಯದಿಂದ ಬಣ್ಣದ ಲೋಕದಲ್ಲಿ ಯಶಕಾಣುತ್ತ ಸಿರಿತನವನ್ನು ಕಂಡರು. ಆದರೆ, ಮುಂದೆ ಈ ಬದುಕು ವಿಷಾದದಿಂದ ಕೊನೆಗೊಂಡಿತು. ಅದಕ್ಕೆ ಕಾರಣ ಜೆಮಿನಿ ಗಣೇಶನ್‍ರವರೂ ಇರಬಹುದು. ಅದನ್ನು ಹುಡುಕಲು ಹೊರಟರೆ ನಮಗೂ ಉಳಿಯುವುದು ವಿಷಾದವೇ ಆದ್ದರಿಂದ ಅವರ ಸಾವಿನ ಹಿಂದಿನ ಕಾರಣಗಳನ್ನು ಈಗ ಕೆದಕಲು ಹೋಗುವುದರಲ್ಲಿ ಯಾವ ಪುರುಷಾರ್ಥವೂ ಕಾಣಸಿಗದು.

ಹತ್ತೊಂಬತ್ತು ತಿಂಗಳುಗಳ ಕೋಮಾದಲ್ಲಿದ್ದ ಸಾವಿತ್ರಿ
ಸಾವಿತ್ರಿಯವರ ವೈಯಕ್ತಿಕ ಬದುಕಿಗೂ ಅವರು ನಟಿಸಿದ ಚಿತ್ರಗಳಿಗೂ ಅದೆಷ್ಟೂ ಸಂಬಂಧ ಏರ್ಪಡುವುದು ಅನ್ನುವುದೊಂದು ಕುತೂಹಲದ ಸಂಗತಿ. ತೆಲುಗಿನಲ್ಲಿ ಅವರು ನಟಿಸಿದ ಎರಡು ಸಿನಿಮಾಗಳನ್ನು ಉದಾಹರಣೆಯಾಗಿ ತೆಗೆದುಕೊಳ್ಳಬಹುದು. ಒಂದು 'ದೇವದಾಸು', ಎರಡನೆಯದು 'ಚಿವರಿಕಿ ಮಿಗಿಲೇದಿ' (ಕಡೆಗುಳಯುವುದು).

ದೇವದಾಸುವನ್ನು ಯಾಕೆ ತೆಗೆದುಕೊಂಡೆ ಎಂದರೆ, ದೇವದಾಸು, ಪಾರ್ವತಿಯನ್ನು (ಪಾರ್ವತಿ ಪಾತ್ರವನ್ನು ಸಾವಿತ್ರಿಯವರು ನಿರ್ವಹಿಸಿದ್ದರಿಂದ) ಪ್ರೀತಿಸಿ, ಆಕೆ ಸಿಕ್ಕದೆ ಹೋದದ್ದರಿಂದ ಮದ್ಯವ್ಯಸನಿಯಾಗಿ ಸಾಯುತ್ತಾನೆ. ಈ ಪಾರ್ವತಿ ಪಾತ್ರವನ್ನು ನಿರ್ವಹಿಸಿದ್ದ ಸಾವಿತ್ರಿ ನಿಜ ಜೀವನದಲ್ಲಿ ಮದ್ಯವ್ಯಸನಿಯಾಗುತ್ತಾರೆ. ಇದರ ಪರಿಣಾಮ ಏನೆಂದರೆ ನಿಯಂತ್ರಣಕ್ಕೆ ಬಾರದ ಮಧುಮೇಹ, ಅಧಿಕ ರಕ್ತದೊತ್ತಡ ಹತ್ತೊಂಬತ್ತು ತಿಂಗಳುಗಳ ಕೋಮಾದಲ್ಲಿ ನರಳಿಕೆಯೇ 1981ರಲ್ಲಿ ಮರಣ.

ಕುಟುಂಬ, ಹಣ ಎಲ್ಲ ಕಳೆದುಕೊಂಡ ನಟಿಯ ವಿಷಾದದ ಕಥೆ
ಸಾವಿತ್ರಿಯವರನ್ನು ಕುರಿತು ಆಲೋಚಿಸುವಾಗ ನನಗೆ ಅನ್ನಿಸುವುದೇನೆಂದರೆ, ಅವರು ಕೋಮಾಕ್ಕೆ ಹೋಗುವುದಕ್ಕೆ ಮೊದಲು ತಾನೇ ನಟಿಸಿದ 'ಚಿವರಿಕಿ ಮಿಗಿಲೇದಿ' ಎಂಬ ಸಿನಿಮಾದ ಹೆಸರು ಮತ್ತು ಕಥೆ ನೆನಪಾಗಿದ್ದೀತೆ? ಯಾಕೆಂದರೆ ಅವರಿಗೆ ಉಳಿಸಿಕೊಂಡಿದ್ದು ಏನೂ ಇರಲಿಲ್ಲ. ಕುಟುಂಬದಲ್ಲಿ, ಹಣಕಾಸಿನ ವಿಚಾರದಲ್ಲಿ ಕೂಡ. ಆಕೆಯ ನಟನಾ ವೈಭವವನ್ನು ಕಂಡ ಅಭಿಮಾನಿಗಳಿಗೂ ಈ ಪ್ರಶ್ನೆ ಬಂದಿರಲಿಕ್ಕೂ ಸಾಧ್ಯವಿದೆ.

ದೇವದಾಸುವನ್ನು ಇಲ್ಲಿ ಇನ್ನೊಮ್ಮೆ ನಾನು ಏಕೆ ಹೆಸರಿಸಿದೆ ಎಂದರೆ, ಆಕೆಯ ಮೇಲೆ ಚಿತ್ರೀಕರಿಸಿದ ಒಂದು ಹಾಡು ಇದೆ. ಅದು 'ಅಂತಾ ಭ್ರಾಂತಿಯೇನ, ಜೀವಿತಾನ ವೆಲುಗಿಂತೇನ, ಆಶಾ ನಿರಾಶೇನ, ಮಿಗಿಲೇದಿ ಚಿಂತೇನಾ' (ಎಲ್ಲಾ ಭ್ರಾಂತಿಯೇನ, ಜೀವನದೀ ಬೆಳಕಿನಾಟನ, ಆಸೆ ನಿರಾಸೆಯೇನ, ಉಳಿಯುವುದು ಚಿಂತೆಯೇನ?) ಈ ಗೀತೆ ಬಹಳಷ್ಟು ಸಲ ಸಾವಿತ್ರಿಯವರಿಗೆ ನೆನಪಾಗಿದ್ದಿರಬಹುದು. ಹಾಗೆ ಅವರ ಬದುಕನ್ನು ತಿಳಿದುಕೊಂಡಾಗ ನಮಗೂ ಇದು ನೆನಪಾಗುತ್ತದೆ.

ಮುಂದುವರೆಯುವುದು...

English summary
Sa Raghunatha Column: Mahanati Savitri is one of the leading actress who has influenced Indian cinema.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X