ಭಾರತದ ಅತೀದೊಡ್ಡ ರಾಜಕೀಯ ಸಮೀಕ್ಷೆ. ನೀವು ಭಾಗವಹಿಸಿದ್ದೀರಾ?
 • search

ಊರಿನ ರಹಸ್ಯವನ್ನೆಲ್ಲ ಬೀದಿಗೆಳೆಯುತ್ತಿದ್ದ ‘ಡೋಂಟ್ ಕೇರ್’ ಮುನೆಪ್ಪ

By ಸ ರಘುನಾಥ, ಕೋಲಾರ
Subscribe to Oneindia Kannada
For Quick Alerts
ALLOW NOTIFICATIONS
For Daily Alerts
    ಊರಿನ ರಹಸ್ಯವನ್ನೆಲ್ಲ ಬೀದಿಗೆಳೆಯುತ್ತಿದ್ದ ‘ಡೋಂಟ್ ಕೇರ್’ ಮುನೆಪ್ಪ | Oneindia Kannada

    ಮುನೆಪ್ಪ ಆರಡಿಗೆ ಹತ್ತಿರದ ಎತ್ತರದ ಆಳು. ಸಣಕಲ ದೇಹಿ. ಆದರೆ ನೂರು ಮನೆಗಳ ಊರಿಗೆ ಕೇಳಿಸುವಷ್ಟು ದೊಡ್ಡ ಗಂಟಲಿನ ಆಸಾಮಿ. ಊರಿನಲ್ಲಿ ಮುನೆಪ್ಪ ಅನ್ನುವುದಕ್ಕಿಂತ 'ಕಳ್ಳುಮುನೆಯಪ್ಪ'ನೆಂದೇ ಪರಿಚಿತ. ನಿತ್ಯವೂ ಕಳ್ಳು ಕುಡಿಯುತ್ತಿದ್ದುದರಿಂದ ಈ ಹೆಸರು ಬಂದಿತ್ತು. ನಿತ್ಯವೂ ಕುಡಿಯುತ್ತಿದ್ದ. ಅಲಾರಂ ಇಟ್ಟುಕೊಂಡವನಂತೆ ಸಂಜೆ ಏಳಾಗುತ್ತದ್ದಂತೆ ಬೀದಿಗಿಳಿಯುತ್ತಿದ್ದ.

    ರಾಮಪ್ಪನೆಂಬ ಹಳ್ಳಿ ಮನುಷ್ಯನ ಇರುಳ ಕೊಳಲ ನಾದ, ಹಗಲಿನ ಗೇಯ್ಮೆ

    ರಾತ್ರಿ ಇಡೀ ಊರಿನ ಬೀದಿ ಬೀದಿ ತಿರುಗುತ್ತಿದ್ದ. ಸುಮ್ಮನೆ ಅಲ್ಲ, ನಿದ್ದೆಯಲ್ಲಿದ್ದವರೂ ಎದ್ದು ಮುನೆಪ್ಪ ಸ್ಫೋಟಿಸುವ ಗುಟ್ಟು ನಿಜಗಳನ್ನು ಕೇಳಿಸಿಕೊಳ್ಳಬೇಕು. ಅಷ್ಟು ಎತ್ತರದ ಧ್ವನಿಯಲ್ಲಿ ಮಾತಾಡುತ್ತ ಓಡಾಡುತ್ತಿದ್ದ. ಇವನೆಂದರೆ ಊರಿನ ಜನರಲ್ಲಿ ಕುತೂಹಲದೊಂದಿಗೆ ಹೆದರಿಕೆಯೂ ಗೂಡು ಕಟ್ಟಿರುತ್ತಿತ್ತು. ಬೇರೆಯವರ ವಿಷಯಕ್ಕೆ ಕುತೂಹಲವಾದರೆ, ತಮ್ಮ ವಿಷಯವೇನಾದರೂ ಆಗಿ ಬಿಟ್ಟರೆ ಎಂಬ ಅಂಜಿಕೆ.

    ಅತ್ಯಂತ ರಹಸ್ಯವಾಗಿ ನಡೆದುದೂ ಮುನೆಪ್ಪನಿಗೆ ತಿಳಿದುಬಿಟ್ಟರುತ್ತಿತ್ತು. ಅದು ಹೇಗೆ ತಿಳೀತಿತ್ತೆಂದು ತಲಾಷು ಮಾಡುತ್ತಿದ್ದವರಲ್ಲಿ ಯಾರೊಬ್ಬರೂ ಸಫಲರಾದುದಿಲ್ಲ. ಅವನ ಸುದ್ದಿ ಮೂಲ ಯಾವುದಾಗಿತ್ತೆಂಬುದು ಅವನ ಸಾವಿನ ನಂತರವೂ ನಿಗೂಢವಾಗಿಯೇ ಉಳಿದಿತ್ತು.

    ಭೈರಪ್ಪಜ್ಜನ ಆ 'ಒಂದು ರುಪಾಯಿ'ಯ ಮೌಲ್ಯ ಗೂಗಲ್ ಗೂ ಸಿಗಲ್ ವೇನೋ?

    ಅವನು ಜಾಹೀರು ಮಾಡುತ್ತಿದ್ದ ವಿಷಯಗಳು ಅನೇಕ. ಊರಿನಲ್ಲಿ ಯಾರು ಯಾರಿಗೆ ಮೋಸ ಮಾಡಿದರು, ಅನ್ಯಾಯ ಮಾಡಿದರು? ಅನುಕೂಲವತಿ ಮಡದಿ ಮನೆಯಲ್ಲಿದ್ದರು ಅವಳನ್ನು ವಂಚಿಸಿ ಹಾದರ ಮಾಡುತ್ತಿದ್ದವರು ಯಾರು, ಯಾರು ಅಸಹಾಯಕರ ಜಮೀನನ್ನು ಲಪಟಾಯಿಸಿದರು, ಅವರು ಮಾಡಿದ ಸಂಚೇನು ಎಲ್ಲವನ್ನೂ ಮುನೆಪ್ಪ ಸವಿವರವಾಗಿ ಬೆಳಗಾಗುದರೊಳಗೆ ಊರಿಗೇ ಸಾರಿಬಿಡುತ್ತಿದ್ದ.

    ಅಂಥವರು ತನ್ನವರಿರಬಹುದು, ಅನ್ಯರಿರಬಹುದು. ಯಾರಿಗೂ ಮುಲಾಜಿಲ್ಲ. ಎಲ್ಲದಕ್ಕೂ 'ಡೋಂಟ್ ಕೇರ್ ಮಾಸ್ಟರ್.'

    ಜಗಳ-ಕಾದಾಟ ನಡೆಯುತ್ತಿದ್ದವು

    ಜಗಳ-ಕಾದಾಟ ನಡೆಯುತ್ತಿದ್ದವು

    ಮುನೆಪ್ಪನ ಈ ವರ್ತನೆಯಿಂದ ಅನೇಕರು ಇಕ್ಕಟ್ಟಿಗೆ ಸಿಕ್ಕಿಕೊಳ್ಳುತ್ತಿದ್ದರು. ಗಂಡನಿಗೆ ತಿಳಿಯದಂತೆ ಹೆಂಡತಿ, ಹೆಂಡತಿಗೆ ತಿಳಿಯದಂತೆ ಗಂಡ ಮಾಡಿದ ವ್ಯವಹಾರಗಳೂ ಇವನ ಮಾತಿನಿಂದ ಬಯಲಾಗಿ ಜಗಳ ಕಾದಾಟಗಳೂ ನಡೆಯುತ್ತಿದ್ದವು. ಹಾಗೆ ತಪ್ಪುಗಳೂ ಹೊರಬಿದ್ದು ತಿದ್ದಿಕೊಳ್ಳುವುದೂ ನಡೆಯುತ್ತಿತ್ತು.

    ಬಲಾಢ್ಯರು ಬಡಿಯುತ್ತಿದ್ದರು

    ಬಲಾಢ್ಯರು ಬಡಿಯುತ್ತಿದ್ದರು

    ಇವನಿಂದ ಇಕ್ಕಟ್ಟಿಗೆ ಸಿಕ್ಕಿಕೊಂಡವರಲ್ಲಿ ಗುಂಪು ಇದ್ದವರು, ಬಲಾಢ್ಯರು ಆ ರಾತ್ತಿಯಲ್ಲೇ ಅವನನ್ನು ಹಿಡಿದು ಚೆಚ್ಚಿದ್ದೂ ಉಂಟು. ಹೀಗಾದಾಗ ಮುನೆಪ್ಪ ಬೆಳಗಿನ ಹೊತ್ತಿನಲ್ಲೇ ಕುಡಿದು ಅಂಥವರ ಜನ್ಮ ಜಾಲಾಟಕ್ಕೆ ಇಳಿದು ಬಿಡುತ್ತಿದ್ದ. ಇದು ಮತ್ತೂ ಕಷ್ಟಕ್ಕಿಟ್ಟುಕೊಳ್ಳುತ್ತಿತ್ತು. ಆದರೂ ಈ ಎರಡೂ ನಿಂತಿದ್ದಲ್ಲ.

    ಹಳ್ಳಿಗಾಡಿನ ಮನುಷ್ಯ ಇಂಗ್ಲಿಷಿನಲ್ಲಿ ಬಯ್ಯುತ್ತಿದ್ದ

    ಹಳ್ಳಿಗಾಡಿನ ಮನುಷ್ಯ ಇಂಗ್ಲಿಷಿನಲ್ಲಿ ಬಯ್ಯುತ್ತಿದ್ದ

    ಹೀಗೆ ಏಟು ತಿಂದ ಮಾರನೇ ದಿನ ಮುನೆಪ್ಪ ‘ಐ ಆಮ್ ಎ ಸಬ್ಜೆಕ್ಟ್ ಆಫ್ ಇಂಡಿಯಾ' ಎಂಬ ಘೋಷಣೆಯೊಂದಿಗೆ ಬೀದಿಗಿಳಿಯುತ್ತಿದ್ದ. ಊರಿನಲ್ಲಿ ಶೇ 95ಕ್ಕೂ ಮಿಕ್ಕು ಮಂದಿಗೆ ಅರ್ಥವಾಗದ ‘ಬಾಸ್ಟರ್ಡ್, ಯೂಸ್ ಲೆಸ್ ಫೆಲೋಸ್, ಈಡಿಯೆಟ್ಸ್' ಮುಂತಾದ ಇಂಗ್ಲಿಷು ಬೈಗುಳಗಳನ್ನು ಹರಿಸುತ್ತಿದ್ದ. ಇವುಗಳ ನಡುವೆ ಅಚ್ಚ ಹಳ್ಳಿಗನ್ನಡದ ಬೈಗುಳಗಳು ಇರದಿರುತ್ತಿರಲಿಲ್ಲ. ಈ ಇಂಗ್ಲಿಷನ್ನು ಎಲ್ಲಿಂದ ಕಲಿತ ಎಂಬುದು ಯಾರಿಗೂ ತಿಳಿಯದು. ಅವನೂ ಹೇಳಿದ್ದಿಲ್ಲ. ಇದೂ ಒಂದು ರಹಸ್ಯವೆ.

    ಹಲ್ಲೆ ನಡೆದಷ್ಟು ಹೆಚ್ಚುತ್ತಿದ್ದ ವಿಜೃಂಭಣೆ

    ಹಲ್ಲೆ ನಡೆದಷ್ಟು ಹೆಚ್ಚುತ್ತಿದ್ದ ವಿಜೃಂಭಣೆ

    ರಾತ್ರಿ ವೇಳೆ ಮುನೆಪ್ಪ ನ್ಯಾಯಾನ್ಯಾಯಗಳನ್ನು ತುಲನೆ ಮಾಡುತ್ತ ಓಡಾಡುವಾಗ ನಾಯಿಗಳಿಂದ ಕಡಿಸಿಕೊಳ್ಳುತ್ತಿದ್ದುದೂ ಉಂಟು. ಹೀಗೆ ಕಚ್ಚಿದ ನಾಯಿಗೆ ತನ್ನನ್ನು ಹೊಡೆದವರನ್ನು, ಬೈದವರನ್ನು, ಮತ್ತಾರ ಮೇಲೋ ದುಮ್ಮಕ್ಕಿ ನಡೆಸಿದವರನ್ನು ಹೋಲಿಸಿ ಅವರ ಜನ್ಮ ಜಾಲಾಡಿಬಿಡುತ್ತಿದ್ದ. ತನ್ನ ಮೇಲೆ ಹಲ್ಲೆ ನಡೆದಷ್ಟೂ ಇವನ ವಿಜೃಂಭಣೆ ಹೆಚ್ಚುತ್ತಿತ್ತು. ಯಾವುದಕ್ಕೂ ಜಗ್ಗದ, ಅಂಜದ ಮುನೆಪ್ಪನೆಂದರೆ ದುಮ್ಮಕ್ಕಿದಾರರಿಗೆ, ಹಾದರಿಗರಿಗೆ, ಅನ್ಯಾಯಕಾರರಿಗೆ ಒಂದು ರೀತಿಯ ಹಿಂಜರಿಕೆ ಉಂಟಾಗುತ್ತಿತ್ತು. ಅಂಥವರು ಮೈಯೆಲ್ಲ ಕಣ್ಣಾಗಿ ತಮ್ಮ ಚಾಳಿಯನ್ನು ಮುಂದುವರಿಸುತ್ತಿದ್ದರು.

    ಪ್ರಾಮಾಣಿಕತೆಯೆಂಬ ದೊಡ್ಡ ಗುಣ

    ಪ್ರಾಮಾಣಿಕತೆಯೆಂಬ ದೊಡ್ಡ ಗುಣ

    ಮನೆಪ್ಪನ ದೊಡ್ಡ ಗುಣವೆಂದರೆ ಪ್ರಾಮಾಣಿಕತೆ. ಪರರ ಸ್ವತ್ತಿಗೆ ಎಂದೂ ಕೈ ಹಾಕಿದವನಲ್ಲ. ಕುಡಿತಕ್ಕೆ ಕುಟುಂಬದವರನ್ನು ಕಾಡಿದವನಲ್ಲ. ತನ್ನ ಸಂಪಾದನೆಯಲ್ಲಿ ಕುಡಿಯುತ್ತಿದ್ದ. ಇದ್ದ ತೋಟ ಹೊಲ- ಗದ್ದೆಗಳನ್ನು ಹೆಂಡಿರು, ಮಕ್ಕಳು ನೋಡಿಕೊಳ್ಳುತ್ತಿದ್ದರು. ತನಗೆ ಸರಿ ಕಾಣದಿದ್ದರೆ ಇರುಳಿನ ತನ್ನ ಸಂಚಾರದಲ್ಲಿ ಅವರನ್ನೂ ಬೈಯ್ಯುತ್ತಿದ್ದ. ಪಕ್ಷಪಾತ ರಹಿತತೆ ಅವನ ರಕ್ತದಲ್ಲೇ ಇತ್ತು.

    ಬಂಡಾಯದಿಂದ ಬದಲಾವಣೆ ಆಗಿರಲಿಲ್ಲ

    ಬಂಡಾಯದಿಂದ ಬದಲಾವಣೆ ಆಗಿರಲಿಲ್ಲ

    ಮುನೆಪ್ಪ ಈ ದೇಶದ ಚರಿತ್ರೆ, ಗಾಂಧೀಜಿ ಬಗ್ಗೆ ಮಾತನಾಡುತ್ತಿದ್ದ. ಊರಿನ ಉತ್ತಮರ ಬಗ್ಗೆ ವಿನಯ- ಗೌರವಗಳನ್ನು ಹೊಂದಿದ್ದ. ಕುಡಿದಾಗ ಅನ್ಯಾಯ ಮಾಡುವವರ ವಿರುದ್ಧ ಯಾವ ಅಂಜಿಕೆಯೂ ಇಲ್ಲದೆ ಬೀದಿಗಿಳಿದು ವಾಗ್ದಾಳಿ ನಡೆಸುತ್ತಿದ್ದ. ಮುನೆಪ್ಪನ ಈ ಬಂಡಾಯದಿಂದ ಯಾವ ಬದಲಾವಣೆಯೂ ಆದುದಿಲ್ಲ. ಆದರೆ ಕೆಲವರು ಗೃಹಿಣಿಯರಿಗೆ ತಮ್ಮ ಗಂಡಂದಿರನ್ನು ಹದ್ದು ಬಸ್ತಿನಲ್ಲಿ ಇಟ್ಟುಕೊಳ್ಳಲು ಸಾಧ್ಯವಾವಾಗಿತ್ತು. ಕುಡಿತದ ಆಚೆ ಮುನೆಪ್ಪ ಸಭ್ಯ, ಸಾಚಾ ಮನುಷ್ಯನಾಗಿದ್ದ.

    ಸಾರ್ವಜನಿಕ ಸತ್ಯದ ಪ್ರಚಾರಕನಾಗಿದ್ದ. ಅಂತರಂಗವಿದ್ದವರು ಪ್ರೀತಿಸಲೇಬೇಕಾದ ವ್ಯಕ್ತಿಯಂತೂ ಆಗಿಯೇ ಇದ್ದ.

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    English summary
    It is interesting story about rural whistle blower Muneppa. He called as Don't care master Muneyappa. After he drunk roaming around village roads and tell the truth about secret business of people loudly. He was interesting character, introducing by One India columnist Sa Raghunatha.

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more