ಎಂಡ್ರಕಾಯಿಸಾರು ಮುದ್ದೆಯೊಂದಿಗೆ ಉಣ್ಣಲು ಪಸಂದು

By: ಸ. ರಘುನಾಥ
Subscribe to Oneindia Kannada

ಇದು ಎಂಡ್ರಕಾಯ (ಏಡಿ) ಆಣೆಗೂ ಹದಿನಾರಾಣೆ ಆರೋಗ್ಯಕಾರಿ ಜಾನಪದ ವಂಟಕ (ಅಡುಗೆ). ಮೀನಿಗೆ ಒಂದು ಗ್ಲಾಮರ್ ಇದೆ, ಆದರೆ, ಎಂಡ್ರಕಾಯಕ್ಕೆ ಅದಾವುದೂ ಇಲ್ಲ. ತೀವ್ರ ನಿರ್ಲಕ್ಷ್ಯಕ್ಕೊಳಗಾಗಿರುವ ಸಿರಿವಂತಿಕೆಯಿಲ್ಲದ ಆರೋಗ್ಯಕಾರಿ ಜೀವಿಯ ಬಗ್ಗೆ ಲೇಖಕರಾದ ಕೋಲಾರದ ಮೇಷ್ಟ್ರು ಸ. ರಘುನಾಥ್ ಅವರು ರಸವತ್ತಾಗಿ ಬರೆದಿದ್ದಾರೆ.

***
ಆಹಾರದ ದೃಷ್ಟಿಯಿಂದ ಜಲಜೀವಿಗಳಲ್ಲಿ ಮಿನು, ಸೀಗಡಿಗಳಷ್ಟು ಪ್ರಾಮುಖ್ಯತೆ ಇಲ್ಲದ್ದು ಎಂಡ್ರಕಾಯಿ (ಏಡಿ). ಇದು ತಿನ್ನುವವರನ್ನು ಬಿಟ್ಟರೆ ಉಳಿದವರಿಗೆ ಅಸಡ್ಡೆ, ಕೆಲವರಿಗೆ ಅಸಹ್ಯದ ಜೀವಿ.

Mouth watering recipe on Crab

ಇದರಿಂದ ಆಕರ್ಷಿತರಾಗಿ, ಬಣಿಸಿದ ಕವಿ ಸಾಹಿತಿಗಳು ವಿರಳವೇನೊ? ಮೀನಲೋಚನೆ, ಮೀನಾಕ್ಷಿ, ಮತ್ಸ್ಯಸುಂದರಿ..... ಎಂದು ಹೆಣ್ಣಿನ ಬಣ್ಣನೆಗಳಿಗೆ ಮೀನು ಪಾತ್ರವಾದಂತೆ ಏಡಿಗೆ ಆ ಭಾಗ್ಯವಿಲ್ಲ. ಮೀನು ಹಿಡಿಯುವವರಿಗೆ ಬೆಸ್ತರು, ಗಂಗಮತಸ್ತರು ಎಂಬ ಗೌರವಾನ್ವಿತ ವೃತ್ತಿ ವಾಚಕವುಂಟು. ಏಡಿಯನ್ನು ಬಯಸಿ ಹಿಡಿಯುವವನನ್ನು ಅವನಾ ಎಂಡ್ರಕಾಯಿಗುಳೀಡಿಯೋನು ಎಂದು ಹಾಸ್ಯಮಾಡಿ ಹೇಳುತ್ತಾರೆ.

ಕನ್ನಡ ನಾಡಿನಲ್ಲಿ ಬದಲಾಗುತ್ತಿರುವ ಟೇಸ್ಟ್ ಬಡ್ಸ್!

ಮೀನಿನಂತೆ ಏಡಿ ಅನ್ನ, ಸಿರಿವಂತಿಕೆಯನ್ನು ತರುವ ಜೀವಿಯಲ್ಲ. ನೋಡುವ ಮನಸ್ಸಿದ್ದರೆ ಎಂಡ್ರಕಾಯೂ ಸುಂದರ ಜೀವಿಯೇ. ಅದರ ಹೊರಚಿಪ್ಪು, ಜೋಡಿಕೊಂಡಿಗಳು, ಮಾಸಲಾಸರೂ ಅಂದವೆನ್ನಿಸುವ ಪುಟ್ಟ ಕಣ್ಣುಗಳು, ಅದರದೇ ಆದ ಒಯ್ಯಾರದ ತೆವಳು ನಡಿಗೆ ನಿಜಕ್ಕೂ ಆಕರ್ಷಕ. ಅದು ನೀರುಹಳ್ಳಿಯ ನಿರ್ಲಕ್ಷಿತ ಸುಂದರಿ. ಆದರೂ ಹಾಗೆ ಗುರುತಿಸುವವರಿಲ್ಲ, ಬಣ್ಣಿಸುವವರಿಲ್ಲ.

Mouth watering recipe on Crab

ಅದಕ್ಕೇನಾದರು ಕಾವ್ಯ ಸಾಹಿತ್ಯದ ತಿಳಿವಳಿಕೆ ಇದ್ದಿದ್ದರೆ ಈ ಕವಿ ಲೇಖಕರನ್ನು ಅರಸಿಕರೆಂದು ಭಾವಿಸುತ್ತಿದ್ದುದು ಗ್ಯಾರಂಟಿ. ಇಂಥ ಎಂಡ್ರಕಾಯನ್ನು ಜೀವಭಯ ಹುಟ್ಟಿಸುವ ಕ್ಯಾನ್ಸರ್ ರೋಗದ ಚಿಹ್ನೆಯಾಗಿ ಬಳಸುತ್ತಿರುವುದು ಅದರ ದುರಾದೃಷ್ಟ. ಇದು ಯಾಕೋ ಗೊತ್ತಿಲ್ಲ. ಗೊತ್ತಾಗುವಂತಿದ್ದಿದ್ದರೆ ಹಾಗೆ ಹೆಸರಿದವರ ಮೇಲೆ, ಅದನ್ನು ಬಳಸುವವರ ಮೇಲೆ ತನ್ನದೇ ವಕಾಲತ್ತಿನಲ್ಲಿ (ಅದರ ಪರ ವಾದಿಸುವವರು ಸಿಗುವುದಿಲ್ಲವೆಂದು) ಮಾನನಷ್ಟ ಮೊಕ್ಕದ್ದಮೆ ಹೂಡುತ್ತಿದ್ದುದಂತೂ ನಿಜ. ಪಾಪಜೀವಿ ಎಂಡ್ರಕಾಯಿ.

ಶಾಜಿಯಾ ಮಾಡಿದ್ರು ಬಾಯಲ್ಲಿ ನೀರೂರಿಸುವ ಚಿಕನ್ ಸ್ಕೀವರ್ಸ್!

ಎಂಡ್ರಕಾಯ ಆಧುನಿಕ ಕವಿಗಳ ಮೇಲೆ ಕೋಪಗೊಂಡರೂ ಯಾವುದೋ ಒಂದು ರೀತಿಯಲ್ಲಾದರೂ ತನ್ನನ್ನು ಬಳಸಿಕೊಂಡು ಪದ ಕಟ್ಟಿದ ಜಾನಪದ ಕವಿ/ಕವಿಯತ್ರಿಯರ ಬಗ್ಗೆ, ಮನಸ್ಸಿಗೆ ಕೊಂಚ ನೋವಾದರೂ ಸಹಿಸಿ ಅಭಿಮಾನ ತಳೆದೀತೇನೋ. ಜಾನಪದ ಹೆಣ್ಣೊಬ್ಬಳು ಗಂಡನನ್ನು ಮೂದಲಿಸುವ ಪದವಿದು, ಅಂದರಿ ಮೊಗುಳ್ಲು ಸೆರುವುಕು ಪೋಯಿ/ಸ್ಯಾಪಲು ತೆಸ್ತುಂಟೇ/ ನಾ ಲಡೀಪಿ ಮೊಗುಡು/ಸೆರುವುಕು ಬೋಯಿ/ ಎಂಡ್ರಕಾಯಲು ತೆಸ್ತಾಡೇ (ಎಲ್ಲರ ಗಣಕರು ಕೆರೀಕ ಓಗಿ/ ಮೀನುಗುಳು ತತ್ತಿದ್ರೆ/ ನನ್ನ ಕಿಸೀದ ಗಣ್ಣು/ ಕೆರೀಕ ಓಗಿ ಎಂಡ್ರಕಾಯಿಗುಳು ತತ್ತಾನೆ).

Mouth watering recipe on Crab

ಕೆರೆ ಮೀನುಗಳಲ್ಲಿ ಉಣಿಸೆ, ಗಿರ್‍ಲು, ಪಕ್ಕೆ, ಕೊರದನ, ತೇಲ್ಲು, ಪಾಮುಚಾಪ್ಲು(ಹಾವುಮೀನು) ಕುಚ್ಚುಮೀನು, .....ಗಳು ಇರುವಂತೆ, ಎಂಡ್ರಕಾಯಿಗಳಲ್ಲಿ ಗಂಡು ಹೆಣ್ಣು, ಹಾಲೆಂಡ್ರಕಾಯಿ, ಕಲ್ಲೆಂಡ್ರಕಾಯಿ(ಕಾಲೆಂಡ್ರಕಾಯಿ) ಎಂಬ ಬಗೆಗಳಿರುತ್ತವೆ. ಹಿಡಿಯುವಾಗ ಹಾಲೆಂಡ್ರಕಾಯಿ ಸಿಕ್ಕಿದರೆ ಬಿಟ್ಟುಬಿಡುತ್ತಾರೆ. ಕಲ್ಲೆಂಡ್ರಕಾಯನ್ನು ಹಿಡಿಯುವುದಿಲ್ಲ. ಅದು ಗಟ್ಟಿರುತ್ತದೆ.

Mouth watering recipe on Crab

ಹಾಲೆಂಡ್ರಕಾಯಿ ಮೆತ್ತಮೆತ್ತಗಿರುತ್ತದೆ. ಈ ಎರಡೂ ಸಾರಿಗೆ ಉಪಯುಕ್ತವಲ್ಲ. ತಿನ್ನಲು ಯೋಗ್ಯವಾದುದು ಗಂಡು ಹೆಣ್ಣು ಮಾತ್ರ. ಹೆಣ್ಣೆಂಡ್ರಕಾಯಿ ಹೊಟ್ಟೆ ಅಡಿ ಚಿಪ್ಪಿರುತ್ತದೆ. ಅದರ ಒಳಗೆ ಮೊಟ್ಟೆಗಳಿರುತ್ತವೆ, ಮರಿಗಳಿರುತ್ತವೆ. ಹಿಡಿಯುವಾಗಲೆ ಚಿಪ್ಪನ್ನು ಬಿಚ್ಚಿ ಮೊಟ್ಟೆ ಮರಿಗಳನ್ನು ನೀರಿಗೆ ಬಿಡುವುದುಂಟು. ಕೆಲವರು ಹಾಗೆಯೇ ಮನೆಗೆ ತುರುತ್ತಾರೆ. ಅದನ್ನು ತೊಳೆಯುವಾಗ ಹೆಂಗಸರು, ಸೋಮಾರೋನು ಅಂಗೇ ತಂದವಿನೆ ಎಂದು ಗೊಣಗುವುದುಂಟು.

Mouth watering recipe on Crab

ಬಲೆಯನ್ನೋ ಕೊಡಿಮೆಯನ್ನೋ ಹಾಕಿ ಮೀನು ಹಿಡಿಯುವಷ್ಟು ಸುಲಭದ ಕೆಲಸವಲ್ಲ ಎಂಡ್ರಕಾಯಿಗಳನ್ನು ಹಿಡಿಯುವುದು. ಹುಡುಕಿ ಹುಡುಕಿ ಒಂದೊಂದಾಗಿ ಹಿಡಿಯಬೇಕು. ಅದನ್ನು ತೊಳೆದು ಬಿಚ್ಚಿಬಿಡಿಸಿ ಸಾರಿಗೆ ಅಣಿಮಾಡುವುದು ತಾಳ್ಮೆಯ ಕೆಲಸ. ಕಾಲುಗಳನ್ನು ಕಿತ್ತುಹಾಕಿ, ಕೊಂಡಿಗಳನ್ನು ಬೇರ್ಪಡಿಸಿಕೊಂಡು, ಬೊಪ್ಪೆ (ಚಿಪ್ಪು, ಕವಚ)ಗಳನ್ನು ತರೆದು ಹಾಕುವರು. ಇದರಲ್ಲಿ ಕೊಬ್ಬಿನೊಂದಿಗೆ ಮೆದುಭಾಗವೂ ಇರುತ್ತದೆ. ಕೆಲವರು ಮೈಗೆ ಒಳ್ಳೆಯದೆಂಬ ಕಾರಣದಿಂದ ಹಸಿಯಾಗಿಯೆ ತಿನ್ನುವರು.

ಬೊಪ್ಪಿಗಳನ್ನು ಒರಳಿನಲ್ಲಿ ಕುಟ್ಟಿಕೊಳ್ಳುವರು. ಕೊಂಡಿಗಳನ್ನು ಹಾಗೆಯೇ ತಿನ್ನಬಹುದಾದರಿಂದ ಸಾಮಾನ್ಯವಾಗಿ ಕುಟ್ಟುವುದಿಲ್ಲ. ಈರುಳ್ಳಿ, ಬೆಳ್ಳುಳ್ಳಿ, ಮೆಣಸಿನಪುಡಿ, ಧನಿಯಾಪುಡಿ, ಚಕ್ಕೆ, ಲವಂಗ, ಕೊಬರಿ, ಇದಕ್ಕೆ ಸಾಂಬಾರು ಜಿನಸಿಗಳು. ಬೇಕಿದ್ದರೆ ಅವುಗಳೊಂದಿಗೆ ಕೊತ್ತಂಬರಿಸೊಪ್ಪು, ಪುದೀನವನ್ನೂ ಹಾಕಿ ರುಬ್ಬಬಹುದು. ನಂತರ ಕೊಬ್ಬನ್ನೂ ಸೇರಿಸಿ ರುಬ್ಬಿದ ಮಸಾಲೆಯೊಂದಿಗೆ ಹಾಕಿ ಕಾಸಿಕುದಿಸಿದರೆ ಎಂಡ್ರಕಾಯಿಸಾರು. ಮುದ್ದೆಯೊಂದಿಗೆ ಉಣ್ಣಲು ಪಸಂದು.

Mouth watering recipe on Crab

ಎಂಡ್ರಕಾಯಿಸಾರು ಬರೀ ರುಚಿಗಲ್ಲ. ಅದರಲ್ಲಿ ಪೌಷ್ಟಿಕತೆಯೂ ಇದೆ. ಮಕ್ಕಳ ಶರೀರ ಬೆಳವಣಿಗೆಗೆ ಸಹಕಾರಿ. ಬೂಷ್ಟು, ಕಾಂಪ್ಲಾನ್, ಹಾರ್ಲಿಕ್ಸ್‌ಗಳಿಗಿಂತ ಶ್ರೇಷ್ಠ. ಇದಕ್ಕೆ ಕಾಳುಮೆಣಸಿನ ಪುಡಿ ಹಾಕಿ ನೀರುಸಾರು ಮಾಡಿ ಬಾಣಂತಿಯರಿಗೆ ಹಾಕುತ್ತಾರೆ. ಇದರಿಂದ ಎದೆಹಾಲು ಹೆಚ್ಚುತ್ತದೆ. ಆದರೆ ಬಾಣಂತಿಗೆ ಮಾಡುವ ಸಾರಿಗೆ ಈರುಳ್ಳಿಯನ್ನು ಶೀತವೆಂಬ ಕಾರಣದಿಂದ ಹಾಕುವುದಿಲ್ಲ. ಆದರೆ ಕೆವರು ಹಾಕುತ್ತಾರೆ. ತಿನ್ನುವ ಬಾಣತಿಯರಾದರೆ ಮೆಣಸಿನಸಾರು ಎಷ್ಟು ಒಳ್ಳೆಯದೋ ಎಂಡ್ರಕಾಯಿಸಾರೂ ಅಷ್ಟೇ ಒಳ್ಳೆಯದು. ಇದು ಎಂಡ್ರಕಾಯ ಆಣೆಗೂ ಹದಿನಾರಾಣೆ ಆರೋಗ್ಯಕಾರಿ ಜಾನಪದ ವಂಟಕ (ಅಡುಗೆ). ಈ ರುಚಿಕಟ್ಟು ಸಾರನ್ನು ಸೂಪಿನಂತೆಯೂ ಕುಡಿಯಬಹುದು.

ತೋಟೋಳ್ಲ ಸೌಡಮ್ಮನು ಎಂಡ್ರಕಾಯಿಗಳ ತಂದು ಸಾರು ಮಾಡಾಕ ಬಿಡುಸ್ತಾ ಅವಿಳೆ ಎಂಬ ಸುದ್ದಿ ತಿಳಿಯಿತು. ಆಕೆಯ ಗುಡಿಸಲಿಗೆ ಹೋದೆ. ಆಕೆಯೊಂದಿಗೆ ನನಗೆ ಸಲಿಗೆಯೂ ಇತ್ತು. ಹಾಗಿದ್ದರೂ ಮೊದಲಿಗೆ ಅದನ್ನು ನನಗೆ ತೋರಿಸಲು ಒಪ್ಪಲಿಲ್ಲ. ನಾನು ಬಿಡಬೇಕಲ್ಲ! ತೋರಿಸಿ ವಿವರಿಸಿದಳು. ಅದರ ಔಷಧೀಯ ಗುಣಗಳನ್ನು ವಿವರಿಸಿದಳು. ಆರಿಸಿಟ್ಟಿದ್ದ ಕಲ್ಲೆಂಡ್ರಕಾಯನ್ನು ತೋರಿಸಿ, ಇದರನಿಂಕ ಪಯೋಜ್ನ ಏನಿಲ್ಲ. ತಿನ್ನೋದುಕ ರುಸೀನೂ ಇರಾಕಿಲ್ಲ. ಅದರಕೇ ತನೀಗ(ಬೇರೆಯಾಗಿ) ಮಡಿಗಿವಿನಿ. ಆಲೆಂಡ್ರಕಾಯಿಗಳನ್ನ ಅರಿಸಿನ (ಕಾಮಾಲೆ) ರ್‍ವಾಗೋದೋರು ತಿನ್ತಾರ ಅಂದಳು. ಮಾತನಾಡುತ್ತಲೇ ಎಂಡ್ರಕಾಯಿ ಸಾರು ಮಾಡಿ ಮುಗಿಸಿದಳು. ನೀನು ಎಂಗೂ ತಿನ್ನೋನಲ್ಲ. ವಸಿ ವಾಸನಾರ ನೋಡ್ತಿಯೇನು? ಎಂದು ಕೌಸು ಮಡಿಕೆಯನ್ನು ಮೂಗಿಗೆ ಹಿಡಿದಳು. ಸಾರಿನ ಗಮಲು ಗಮ್ಮತ್ತಾಗಿತ್ತು. ಹಾಗೆಂದು ಹೇಳಿದೆ. ಆಗ ನೆಪವೊಂದು ಸಿಕ್ಕಂತಾಗಿ, ಎಂಡ್ರಕಾಯಿ ಚಾರು ತಿಂಬೋಳು ಎದೆ ಮಗೀಕ ಹೊಟ್ಡೆ ತುಂಬುಸ್ತಾಳ ಎಂದು ಹೇಳಿದಳು. ಅದು ನನಗೆ ಹೇಳಿದಂತಿದ್ದರೂ ಹಸುಗೂಸನ್ನು ಮಡಿಲಲ್ಲಿ ತುಂಬಿಕೊಂಡು ಕುಳಿತಿದ್ದ ಸೊಸೆಯತ್ತ ಬಿಟ್ಟ ಮಾತಿನ ಬಾಣವಾಗಿತ್ತು.

Mouth watering recipe on Crab

ಕೋಲಾರ ತೆಲುಗಿನ ಜಾನಪದಗೀತೆಯಿದೆ. ಇದನ್ನು ಜಾನಪದಹುಂಜ ಎಂದು ಕರೆಸಿಕೊಂಡಿರುವ ಮುನಿರೆಡ್ಡಿ ತಮ್ಮದೇ ಶೈಲಿ, ವೈಯ್ಯಾರದಲ್ಲಿ ಹಾಡುತ್ತಾರೆ. ಹೆಂಡತಿ ಕೆರೆಕರೆ ತಿರುಗಿ ಏಡಿಗಳನ್ನು ಹಿಡಿದು ತಂದು ಸಾರು ಮಾಡುತ್ತಾಳೆ. ಮನೆಯಲ್ಲಿ ಕೂತು ತಿನ್ನುವ ಗಂಡ, ಅದರಲ್ಲಿ ಲೋಪಗಳನ್ನು ಕಂಡುಹಿಡಿಯುತ್ತ ಕಾಡುವ ಚಿತ್ರಣವಿದೆ. ಅದರಿಲ್ಲಿಗೆ ದಿರ್ಘವಾಗಿರುವುದರಿಂದ ಪಲ್ಲವಿಯನ್ನು ಅನುವಾದಿಸಿಕೊಂಡಿರುವೆ.

ಸೆರುವು ಸೆರುವು ನೇ ದಿರುಗಿ/ ಸೇರೆಂಡ್ರಿಕಾಯ್ಲು ನೇ ದೆಸ್ತೇ/ ಕುರುಂಕುರುಂನ ತಿಂಟಾಡು ವಾನಿ ಕಂಡ್ಲಿಮರನಾನಿ (ಕರೆಕರೆ ನಾನ್ ತಿರುಗಿ/ ಸೇರೆಂಡ್ರುಕಾಯಿಗುಳ ನಾನ್ ತಂದ್ರೆ/ ಕುರುಂಕುರುಂ ತಿಂತಾನ ಅವುನ ಕಣುಗುಳಿಮಿರಿ ಓಗಾ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Crab is not attractive as fish in terms of looks, but nonetheless it is more healthier than fish. Sa Raghunatha, retired school teacher from Kolar writes about this wonderful creature. Excellent non-vegetarian recipe for the weekend.
Please Wait while comments are loading...