• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಿನ್ನೆದೆ ತಾವರೆ ಮೊಗ್ಗುಗಳು ನಾವೂ ಅರಳಿದೆವೆಂದು ನನ್ನ ಕಣ್ಣುಗಳಿಗೆ ಹೇಳಿದವು

By ಸ ರಘುನಾಥ, ಕೋಲಾರ
|

ಸುಮ ಸೌರಭದ ಮನದ ಶಕುಂತಲೇ,

ಶಕು ಅನ್ನೋ ಅಡ್ಡ ಹೆಸರು ನಿನಗೆ ಹೊಂದುವುದಿಲ್ಲ ಎಂದು ನನಗೂ ಅನಿಸಿದೆ. ಇದು ಚೆಲವರಾಯಡುವಿಗೂ ಗೊತ್ತು. ಆದರೂ ಅವನ ಕೋಲಾರು ಕೊಂಟೆ (ತುಂಟ)ಬುದ್ಧಿ ಎಲ್ಲಿ ಹೋದೀತು? ಕೀಟಲೆ ಅವನ ಗುಣಗಳಲ್ಲಿ ಒಂದು. ಅದನ್ನು ಅವನು ಕಣ್ಣು ಮಿಟುಕಿಸಿದ್ದೇ ಹೇಳುತ್ತದೆ.

ಅವನು ಯಾರಿಗೂ ಖುಷಿ ಕೊಡಬಲ್ಲ. ಈ ಗುಣವನ್ನು ಮೆಚ್ಚಿಯೇ ಜಾನಕಿ ಲೈನು ಹೊಡೆದು, ಬುಟ್ಟಿಗೆ ಹಾಕಿಕೊಂಡಿದ್ದು ಎಂದು ಹೇಳಿದ್ದ. ಅವಳ ಪ್ರೀತಿಯಲ್ಲೂ ತುಂಟತನ ತುಳುಕುತ್ತದಂತೆ. ನೀನು ಅವಳೊಂದಿಗೆರಡು ದಿನವಿದ್ದು, ಕಲಿತುಕೊಳ್ಳಬಹುದು. ಮುನಿಯ ಬೇಡ ಮಾರಾಯ್ತಿ, ನಿನ್ನನ್ನು ರೇಗಿಸಲು ಹೇಳಿದೆ.

ಆಕಾಶದ ನಕ್ಷತ್ರಗಳನ್ನೆಲ್ಲಾ ಬಾಚಿ ಸೆರಗಿನಲ್ಲಿ ಕಟ್ಟಿಕೊಂಡಂತೆ!

ನಿನ್ನಲ್ಲಿ ತುಂಟತನಕ್ಕೇನೂ ಬರವಿಲ್ಲ. ಅವಳ ಮಾತಿನಲ್ಲಿ ತುಂಟತನವಿದ್ದರೆ, ನಿನ್ನ ಕಣ್ಣು, ತುಟಿ, ಮೂಗು, ಕೆನ್ನೆ, ಕೈಗಳಲ್ಲೆಲ್ಲ ಅದೇ ಲಾಸ್ಯವಿದೆ. ನಿನ್ನ ಈ ರೀತಿಯ ತುಂಟತನ ನನಗೆ ಬಹಳ ಇಷ್ಟ.

ಚೆಲುವರಾಯುಡು ಅತ್ತ ಹೋದ ಮೇಲೆ ಕನಕಾಂಬರ ಗಿಡಕ್ಕೆ ಗಾಯದ ನೀರು ಹಾಕಿ, ತೋಟವನ್ನು ಒಂದು ಸುತ್ತು ಹಾಕಿದೆ. ಗಿಳಿಗಳು ಅಂದು ದಾರಿ ಬದಲಿಸಿದಂತಿತ್ತು. ಒಂದರ ಸುಳಿವೂ ಇರಲಿಲ್ಲ. ಕನಕಾಂಬರ ಗಿಡ ವರ್ಷಗಟ್ಟಲೆ ಬದುಕಿರುವುದಿಲ್ಲ. ನಮ್ಮ ತೋಟದಲ್ಲಿ ನನ್ನ ಶಕುಂತಲೆಯ ನೆನಪಿನದು ಅನೇಕ ವರುಷಗಳ ಕಾಲ ಉಳಿದಿರಬೇಕು. ಅದು ಮೃದು ಕೋಮಲದ್ದಾಗಿರಬೇಕು. ಎಂಬ ಆಲೋಚನೆ ಬಂದಿತು.

ಶಕುಂತಲೇ, ನಿನ್ನ ಕಾಗದದ ಪದಪದ ವಿರಹ ತಾಪವನ್ನು ಹೆಚ್ಚಿಸುತ್ತಿದೆ

ಏನೆಂದು ತೋಚಲಿಲ್ಲ. ಪಕ್ಕದ ತೋಟದ ಲಕ್ಕೀಮರದಲ್ಲಿ ಕೋಗಿಲೆ ಕೂಗಿತು. ನಾವು ದಾರಿ ಬದಲಿಸಿಲ್ಲವೆಂದು ಸಾರುತ್ತ ಗಿಳಿವಿಂಡು ಬಂದಿತು. ಅವುಗಳನ್ನು ಅಟ್ಟುತ್ತ ಪೂರ್ವ ದಿಕ್ಕಿನ ಬದುವಿಗೆ ಹೋದೆ. ಅದರ ಕೆಳ ಬಾಗದಲ್ಲಿ ನಮ್ಮದೇ ಗದ್ದೆಗಳು. ತೋಟದ ಅಂಚಿನ ಗದ್ದೆಯ ಕೆಸರಿನಲ್ಲಿ ಎಮ್ಮೆ ಮಲಗಿ ಹೊರಳಾಡಿ, ತನ್ನ ಹೊಟ್ಟೆಯಾಕಾರದ ಗುಳಿಯನ್ನು ನಿರ್ಮಿಸಿತ್ತು. ಅದರಲ್ಲಿ ಜಿನುಗು ನೀರು ತುಂಬಿತ್ತು.

ಅದನ್ನು ನೋಡಿದಾಗ, ಗದ್ದೆಯ ಕಾಲು ಭಾಗದಲ್ಲಿ ಹಳ್ಳ ತೋಡಿ, ತಾವರೆಯನ್ನೇಕೆ ನೆಡಬಾರದು ಎಂಬ ಆಲೋಚನೆ ಬಂದಿತು. ಇದು ಪ್ರಿಯ ಶಕುಂತಲೆಗೆ ಉತ್ತಮ ಕೊಡುಗೆ ಅನ್ನಿಸಿತು. ಕಲ್ಪನೆಯ ನವಿಲು ಮನದಲ್ಲಿ ರೆಕ್ಕೆ ಬಿಚ್ಚಿ ಕುಣಿತು. ಸೂರ್ಯ ರಶ್ಮಿ ನೆಲವ ಚುಂಬಿಸುತ್ತಲೆ ಕೊಳದ ತಾವರೆಗೆ ಮುತ್ತು ಕೊಟ್ಟಿತು. ಅದು ಒಂದೊಂದು ಮೊಗ್ಗು ದಳ ಬಿಚ್ಚತ್ತ ಅರಳುತ್ತಿದ್ದವು.

ನಿನ್ನ ಕೆಂದುಟಿಯ ನೆನಪು ತಂದ ಗಿಳಿ ಕೊಕ್ಕಿಗೆ ಮೆತ್ತಿದ ಬೆಳ್ಳನೆ ಹಾಲು

ನೀನು ಮೀನು ಖಂಡಗಳ ಮೇಲಕ್ಕೆ ಸೀರೆಯೆತ್ತಿ, ಬಾಗಿ ಅರಳು ತಾವರೆಯ ಕೀಳುತ್ತಿರುವಾಗ ನಿನ್ನೆದೆ ತಾವರೆ ಮೊಗ್ಗುಗಳು ನಾವೂ ಅರಳದೆವೆಂದು ನನ್ನ ಕಣ್ಣುಗಳಿಗೆ ಹೇಳಿದವು. ತಲೆಯೆತ್ತಿ ನನ್ನ ಮುಖ ನೋಡಿದ ನೀನು, ನನ್ನ ನೋಟದ ಗತಿಯನ್ನು ಗುರುತಿಸಿದೆ. ಥಟ್ಟನೆ ಜಾರು ಸೆರಗನ್ನು ಹೊದೆದು, ಥೂ ಪೋಲಿ ಎಂದಾಗ ನಾಚಿದ ನಿನ್ನ ಮುಖ ಕೆಂದಾವರೆಯಂತಾಗಿತ್ತು.

ಕೊಳದಲ್ಲಿ ಕಮಲ, ಅವುಗಳ ನಡುವೆ ನಾಚಿ ನಿಂತ ಜಲಜಮುಖಿ ನನ್ನ ಶಕುಂತಲೆ! ಯಾವ ಜನುಮದ ಸೌಂದರ್ಯ ಭಾಗ್ಯದ ಪುಣ್ಯಫಲವೋ ಈ ಜನ್ಮದಲಿ ಹೀಗೆ ಫಲಿಸಿತ್ತು.

ಪ್ರೇಮ ಪತ್ರ: ಪಕ್ಕದ ತೋಟದ ಈರುಳ್ಳಿ ಬಾನಿನೆಲ್ಲ ಚುಕ್ಕಿಗಳ ತಂದು ಮುಡಿದಂತೆ ಕಂಡಿತು!

ಇದೇ ಗುಂಗಿನಲ್ಲಿ ಮನೆಗೆ ಹೋದೆ. ಊಟ ಮಾಡುವಾಗ ತಾವರೆ ಕೊಳ ಕಟ್ಟುವ ಮನದ ಇಂಗಿತವನ್ನು ಹೇಳಿದೆ. ಅದಕ್ಕೆ 'ನಿನಗೇನು ಅಡ್ಡಿ, ಅಷ್ಟು ಜಾಗದಲ್ಲಿ ಬೆಳೆದು ದೊಡ್ಡ ರಾಳಿ ಹಾಕುವುದೇನಿದೆ?' ಎಂದು ನಿಸರ್ಗಪ್ರಿಯ ರೈತ ಅಪ್ಪ ಒಪ್ಪಿಗೆ ಕೊಟ್ಟ. 'ಇದು ಶಕುಂತಲೆಯ ಮಾತೋ?' ಎಂದು ಅಮ್ಮ ನವಿರಾಗಿ ಚುಚ್ಚಿ ನಕ್ಕಳು.

ಮಾರನೇ ದಿನವೇ ಗದ್ದೆಗಿಳಿಗಿದೆ. ಸಹಾಯಕ್ಕೆ ಕೆಂಚಪ್ಪ ಬಂದ. ಇಬ್ಬರೂ ಮುಸ್ಸಂಜೆ ಹೊತ್ತಿಗೆ ಕೊಳ ನಿರ್ಮಾಣ ಮಾಡಿದೆವು. ಕೆಂಪುದೋ, ಬಿಳೀದೋ? ಎಂದು ತಲೆಗೆ ಚಿಂತೆ ತಂದ. 'ಕೆಂಪುದು ಹಾಕಿ. ನಾಳೆ ಬೆಳಿಗ್ಗೆಯೇ ಕಡತೂರು ಕೆರೆಗೆ ಹೋಗಿ ಗೆಡ್ಡೆಗಳನ್ನ ತರುತ್ತೇನೆ. ಕೆಂಚನ ತಾವರೆಕೊಳ ಅಂತ ಹೆಸರಿಡಿ. ನನ್ನ ನೆನಪಿರುತ್ತೆ' ಅಂದ ಕಿಲಾಡಿ.

ನಿನಗಾಗಿ ನಾನೇ ಕಟ್ಟಿದ ಮಲ್ಲಿಗೆ ಹೂ ದಂಡೆ ಹೇಗಿದೆ ಹೇಳು ಚೆಲುವೆ

ಕೊಳದಲ್ಲಿ ಕೆಂದಾವರೆಯ ಬಿತ್ತನೆಯಾಗಿದೆ ಶಕುಂತಲೆ. ಅದರ ದಂಟಿಟ್ಟು ನೀರ ಮೇಲೆ ಎಲೆ ಹರಡಿ, ಮೊಗ್ಗಿಟ್ಟು ಹೂ ಅರಳುವ ದಿನಕೆ ಕಾಯುತಿದೆ ಮನಸು. ಕೊಳಕ್ಕೆ ಅಮ್ಮನೇ 'ಶಕುಂತಲೆಯ ಕೆಂದಾವರೆ ಕೊಳ' ಎಂದು ನಾಮಕರಣ ಮಾಡಿದ್ದಾಳೆ. ಈಗಲೇ ನಿಮ್ಮಿಬ್ಬರ ನಡುವೆ ಇಷ್ಟೊಂದು ಹೊಂದಾಣಿಕೆ. ನಿನ್ನನ್ನು ಮನೆ ತುಂಬಿಸಿಕೊಂಡ ಮೇಲೆ 'ಅಮ್ಮ ನಿಮ್ಮ ಮಗ ಕರೀತಿದ್ದಾರೆ. ರೂಮಿಗೆ ಹೋಗಲೇ' ಎಂದು ಕೇಳುವಿಯೇನೊ!? ಹಾಗೇನಾದರೂ ಮಾಡೀಯ ಮಾರಾಯ್ತಿ. ಬೇಡ ಇಲ್ಲಿಯೇ ಮಲಗು ಅಂದುಬಿಡುತ್ತಾಳೆ. ಅವಳು ಬಲು ತುಂಟಿ.'

English summary
Here is the love letter series by Oneindia columnist Sa Raghunatha. Romantic love letter written by him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X