• search

ಅರಿಶಿಣದ ಮೈಯ ನನ್ನ ಶಕುಂತಲೆ ಬರುವಳು ನಾಚುತ್ತ ಹಸೆಗೆ

By ಸ.ರಘುನಾಥ, ಕೋಲಾರ
Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ಸುಳಿಬಾಳೆ ಎಲೆ ಬಾಲೆ

  ಸರಸಿ ಸುಂದರಿ ಶಕುಂತಲೇ

  ಕುಶಲವೆ?

  ಕಾಗದದ ತುಂಬ ನಿನ್ನ ರೂಪ ಕಾಂತಿಯೇ ತುಂಬಿ ಅಕ್ಷರ ಮಸುಕಾಗಿ, ಓದಲಾಗದೆ ಹೋದೆ ಕೈ ಸೇರಿದೊಡನೆ. ಹಾಗಾಗಿ ಓಲೆ ಬರೆಯದಾದೆ ಒಡನೆ. ದೀನನಾಗಿ ಕ್ಷಮೆ ಬೇಡುವೆ. ಇರಲಿ ಈ ಬಡಪಾಯಿಯ ಮೇಲೆ ಕರುಣೆ.

  ಓ ಮಂಚವೇ ಮೊದಲ ರಾತ್ರಿ ಕಳೆದವರ ಅದೆಷ್ಟು ಮಂದಿಯ ಕಂಡಿರುವೆ, ಹೇಳು

  ನಿನ್ನ ಕನಸು ಹತ್ತಿರದ ದಿನಗಳಲ್ಲಿ ನಿಜವಾಗಲಿದೆ. ನಿಮ್ಮವರ ಒಪ್ಪಿಗೆಯಲ್ಲಿ ಅಪ್ಪ ಮುಹೂರ್ತ ನಿಶ್ಚಯಿಸಿ ಬಂದಿರುವ. ಸಿದ್ಧತೆಯಲ್ಲಿ ತೊಡಗಿರುವಳು ಅಮ್ಮ. ಮುಂದಿನ ವಾರವೇ ನಮ್ಮಿಬ್ಬರ ಮನೆಗಳಲ್ಲಿ ಮೊಳಗಲಿದೆ ಓಲಗ. ನಂತರ ಏನೇನೆಂದು ಹೇಳಲೇನಿದೆ? ಹಾಲು ಸಕ್ಕರೆ ಬೆರೆಯಲಿದೆ. ನೀನು ಹಾಲು, ನಾನು ಸಕ್ಕರೆ. ರುಚಿ ನಮ್ಮ ಒಲವಿಗೆ.

  Love letter: How preparation done for Vasantha- Shankuthala marriage

  ನಮ್ಮ ತೋಟದ ತೆಂಗಿನ ಗರಿಯ ಚಪ್ಪರ. ನಮ್ಮ ಮನೆಯಂಗಳದ ಮಾಮರದ ಚಿಗುರೆಲೆಯ ತೋರಣ. ಗೊನೆ ಜೋತ ಬಾಳೆ ಸ್ವಾಗತದ ಕಮಾನು. ತಣ್ಣನೆಯ ಸಿಹಿ ಎಳನೀರು ದಾಹಕ್ಕೆ. ನಮ್ಮ ಗದ್ದೆಯ ಕಬ್ಬು ಆಲೆಯಾಡಿದ ಬೆಲ್ಲ ದಿಬ್ಬಣದಿ ಪಾನಕಕೆ. ದವನ ಮರುಗದ ಜೊತೆಗೆ ಮಲ್ಲಿಗೆಯ ಸಿಂಗಾರ ಮದುವೆ ಮಂಟಪಕೆ.

  ಬಿಳಿಯ ರೇಷಿಮೆ ಸೀರೆ ರವಿಕೆಯಲಿ ಅರಿಶಿಣದ ಮೈಯ ನನ್ನ ಶಕುಂತಲೆ ಬರುವಳು ನಾಚುತ್ತ ಹಸೆಗೆ. ಪಕ್ಕ ನಿಲ್ಲುವಳು ನನಗೆ ಒರಗಿಯೂ ಒರಗದಂತೆ. ನನ್ನ ಓರೆ ನೋಟಕ್ಕೆ ಕಾಣುವಳು ವೇಂಕಟೇಶನ ಬದಿ ನಿಂತ ಅಲಮೇಲುಮಂಗಳಂತೆ.

  ನಿನ್ನ ಸೆರಗು ಹಾರಾಡುವ ಲಯವನ್ನು ಮನಸಿಗೆ ಕೇಳಿಸಿದ ಗಾಳಿ

  'ಹಸಿರು ತೋರಣ

  ನಿತ್ಯ ಕಲ್ಯಾಣ

  ಆಗಲಿ ನಮ್ಮ ಸೀತಾ ಶ್ರೀರಾಮರಿಗೆ' ಎಂದು ಹಿರಿ ಮತ್ತೈದೆಯರು ಹರಸಿ ಆರತಿ ಬೆಳಗಿದಾಗ, ನೀ ಪಿಸುಗುಡುವೆ ಕಿವಿಯಲ್ಲಿ, ಸೀತೆಗೆ ವನವಾಸವಾಯ್ತು. ಸರಿಯಲ್ಲ ಈ ಹಾಡು. ರುಕ್ಮಣಿ ಕೃಷ್ಣರಿಗೆ ಎಂದಿದ್ದರೆ ಚೆನ್ನ ಎಂದು.

  ನಾನಾಗ, ರುಕ್ಮಿಣಿಗೆ ಸವತಿಯರು. ನೀನು ಸಿದ್ಧವೇ ಅನ್ನುವೆ. ನಿನ್ನಲ್ಲಿ ಸಿಟ್ಟು ನನಗಷ್ಟೇ ಕಾಣುವಂತೆ. ಆಗೆಷ್ಟು ಅಂದವೋ ನಿನ್ನ ಮುಖ, ಮತ್ತೆ ಮತ್ತೆ ನೋಡುತಿರಬೇಕು ಅನ್ನಿಸುವಂತೆ. ನಿನ್ನ ಕಿವಿಯಲ್ಲಿ ಹೇಳುವೆನು, ಕಾಂತೆ ನಿನಗೆ ವನವಾಸವೂ ಇರದು, ಸವತಿಯಂತೂ ಬರಳು. ಹೀಗೆ ಹಾಡುವುದು ಸಂಪ್ರದಾಯಕ್ಕೆ. ಹರಕೆಯಾಚೆಗೆ ಅರ್ಥ ಹಚ್ಚದಿರು. ನಕ್ಕುಬಿಡು ಒಮ್ಮೆ ಈ ಹಗಲಿನಲಿ ಬೆಳದಿಂಗಳಿಳಿದಂತೆ. ಅಂತೆ ನೀನಗುವೆ.

  ಇದು ನನ್ನ ಕನಸೂ ಹೌದು, ಕಲ್ಪನೆಯೂ ಹೌದು ಶಕುಂತಲೆ. ಇಂಥ ಭಾವನೆಗಳಿಂದಲೇ ನಾವು ಕಟ್ಟುವುದು ಮುಂದಿನ ಬಾಳಿನ ಅಂದದ ಮನೆ. ಇಂದು ನಾವು ಕಟ್ಟಿದ ಈ ಕನಸುಗಳ ಜೊತೆಗೆ ನಾಳೆ ಇಬ್ಬರೂ ಕಾಣುವ ಕನಸುಗಳು ಕೂಡಿ ಬದುಕಿನಲಿ ಬೀಸುವುದು ಸುಖದ ತಂಗಾಳಿ. ಎದೆಯ ಹಾಡುತಿದೆ ನಲ್ಲೆ ಶಕುಂತಲೆ, 'ನಮ್ಮ ಪುಣ್ಯವೇ ಪ್ರೇಮದಲಿ ಪಲ್ಲವಿಸಿ, ನಮ್ಮಿಬ್ಬರನು ಹೀಗೆ ಒಂದುಗೂಡಿಸಿತೋ ಸಮರಸದ ಸಮ ಜೀವನಕೆ.'

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Love letter series by Oneindia Kannada columnist Sa Raghunatha continues, now Vasantha and Shankuthala marriage preparation dream.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more