ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ. ರಘುನಾಥ ಅಂಕಣ: ಕವಿ ರಾಮಚಂದ್ರ ಶರ್ಮರಿಂದ ನನಗಾದ ಕಲಿಕೆಯ ಪಾಠ

|
Google Oneindia Kannada News

ನವ್ಯಕಾವ್ಯ ನಿಷ್ಠ ಕನ್ನಡ ಕವಿ ಯಾರು ಯಾರೆಂದು ಪಟ್ಟಿ ಹಿಡಿದರೆ ಬಿ.ಸಿ. ರಾಮಚಂದ್ರ ಶರ್ಮರ ಹೆಸರು ಇದ್ದೇ ಇರುತ್ತದೆ. ಕನ್ನಡ ಕಾವ್ಯದಲ್ಲಿ ನವ್ಯದ ಛಾಪು ಮೂಡಿಸಿದವರಲ್ಲಿ ಶರ್ಮರೂ ಪ್ರಮುಖರು. ಗೋಪಾಲಕೃಷ್ಣ ಅಡಿಗರ ಕವಿತಗಳನ್ನು ಓದಲು ಪ್ರಾರಂಭಿಸಿದ ಕಾಲಕ್ಕೆ ಮುಂಚೆ ಅರ್ಥವಾದ ಮಟ್ಟಿಗೆ ಓದಿಕೊಳ್ಳುತ್ತಿದ್ದುದು ಡಿವಿಜಿ, ನರಸಿಂಹಸ್ವಾಮಿ, ಕುವೆಂಪು, ಬೇಂದ್ರೆ ಮುಂತಾದವರ ಕವಿತೆಗಳನ್ನು.

ಶರ್ಮರು ನನಗೆ ಪರಿಚವಾದುದು ಕವಿ, ಗೆಳೆಯ ಬಿ.ಆರ್. ಲಕ್ಷ್ಮಣರಾವ್‌ರ ಮನೆಯಲ್ಲಿ. ಈ ಗೆಳೆಯನ ಆಸಕ್ತಿಯಿಂದ ಚಿಂತಾಮಣಿಯಲ್ಲಿ 'ಗೆಳೆಯರ ಬಳಗ' ನಾಡಿನ ಅನೇಕ ಕವಿ- ಲೇಖಕರನ್ನು ನೆರೆಸಿ ಗೋಷ್ಠಿಗಳನ್ನು ನಡೆಸುತ್ತಿತ್ತು. ನಾನು ಗೌನಿಪಲ್ಲಿಯಿಂದ ಹೋಗುತ್ತಿದ್ದೆ. ಜರಗನಹಳ್ಳಿ ಶಿವಶಂಕರ್, ಕೆ.ವೈ. ನಾರಾಯಣಸ್ವಾಮಿ, ಎಚ್.ದಂಡಪ್ಪ ಗೆಳೆಯರಾದುದು ಇಲ್ಲಿಯೇ.

ಸ. ರಘುನಾಥ ಅಂಕಣ: ಶಿವ ಸಂಗಮಕ್ಕೆ ನಿಃಕಳಂಕ ಅನುವರ್ತಿ ಮಾರ್ಗ ಸ. ರಘುನಾಥ ಅಂಕಣ: ಶಿವ ಸಂಗಮಕ್ಕೆ ನಿಃಕಳಂಕ ಅನುವರ್ತಿ ಮಾರ್ಗ

ಎಚ್.ಎಸ್. ವೆಂಕಟೇಶಮೂರ್ತಿ, ಸುಮತೀದ್ರ ನಾಡಿಗ, ನರಹಳ್ಳಿ ಬಾಲಸುಬ್ರಹ್ಮಣ್ಯ, ಎಂ.ಎನ್. ವ್ಯಾಸರಾವ್, ಎಚ್.ದುಂಡಿರಾಜ್ ಪರಿಚಯವಾಗಿ, ಗೆಳೆತನ ಬೆಳೆದುದು ಗೆಳೆಯರ ಬಳಗದಿಂದಾಗಿ. ಹಿರಿಯ ಕವಿಗಳಾದ ಪುತಿನ, ಗೋಪಾಲಕೃಷ್ಣ ಅಡಿಗ, ಚೆನ್ನವೀರಕಣವಿ, ಸಂಗೀತಗಾರರಾದ ಸಿ.ಅಶ್ವತ್ಥ್, ರತ್ನಮಾಲ ಪ್ರಕಾಶ್, ಮಾಲತಿ ಶರ್ಮ, ರಾಜು ಅನಂತಸ್ವಾಮಿ ಇವರಂತಹ ಹಲವರ ಪರಿಚಯವೂ ಅಲ್ಲಿಯೇ ಆಗಿದ್ದು.

Sa. Raghunatha Column: Life Lesson Learned by the Poet Ramachandra Sharma

ರಾಮಚಂದ್ರ ಶರ್ಮರ ಪರಿಚಯ ಅಷ್ಟಕ್ಕೇ ನಿಲ್ಲಲಿಲ್ಲ. ಆತ್ಮೀಯತೆ ಬೆಳೆಯಿತು. ಈ ಆತ್ಮೀಯತೆಯ ಮೂಲವಾಗಿಯೇ ಅವರ ಕವಿತೆಗಳಿಂದ ಆಕರ್ಷಿತನಾದುದು. ಅವರ ಹಲವು ಕವಿತೆಗಳು ಇನ್ನೊಮ್ಮೆ ಓದದೆ ಮನಸ್ಸಿಗೆ ಇಳಿಯದೆನ್ನಿಸಿ, ಕೆಲವು ಕಾಲ ಅವರ ಕವಿತೆಗಳನ್ನು ಓದುವುದರಲ್ಲಿ ನಿರತನಾದೆ. ತಮ್ಮ ಕವನ ಸಂಕಲನಗಳನ್ನು ಅವರ ಮನೆಗೆ ಹೋದಾಗ ಕೊಡುತ್ತಿದ್ದರು. ಬೆಂಗಳೂರಿಗೆ ಹೋದೆನೆಂದರೆ ಅವರ ಮನೆಗೆ ಹೋಗದೆ ಹಿಂದಿರುಗಲು ಮನಸ್ಸಾಗುತ್ತಿರಲಿಲ್ಲ. ಅವರೇ ಮಾಡಿಕೊಡುತ್ತಿದ್ದ ಕಾಫಿ ಕುಡಿಯುತ್ತ ಚರ್ಚಿಸುತ್ತಿದ್ದೆವು. ಪದ್ಮಾ ಅವರ ಕೈ ಅಡುಗೆಯನ್ನು ಉಣ್ಣುತ್ತಿದ್ದುದೂ ಉಂಟು.

ಶರ್ಮರು ತಮ್ಮ ಕಾವ್ಯದಲ್ಲಿ ತರುತ್ತಿದ್ದ ಗ್ರೀಕ್, ಕ್ರೈಸ್ತ ಪುರಾಣಗಳ ಪ್ರತಿಮೆಗಳು ನನಗೆ ಅರ್ಥವಾಗುತ್ತಿರಲಿಲ್ಲ. ಏಕೆಂದರೆ ಅವುಗಳ ಹಿನ್ನೆಲೆ ನನಗೆ ತಿಳಿದಿರಲಿಲ್ಲ. ಶರ್ಮ ವಿವರಿಸುತ್ತಿದ್ದರು. ಮಾತಿನ ಮಧ್ಯೆ ನನ್ನಂತಹವನಿಗೆ ಕಷ್ಟ ಕೊಡುತ್ತೀರಿ ಅನ್ನುತ್ತಿದ್ದೆ. ಆಗ ನಗುತ್ತ, ಗೊತ್ತಾಗದಿದ್ದರೆ ಕೇಳಪ್ಪ ಅನ್ನುತ್ತ, ತಿಳಿಸುತ್ತಿದ್ದರು. ಹೀಗೆ ಅವರಿಂದಲೇ ಅವರ ಕವಿತೆಗಳನ್ನು ಪ್ರವೇಶಿಸುವ ಬಗೆಯನ್ನರಿತುಕೊಳ್ಳುತ್ತಿದ್ದೆ. ಅವರು ಪ್ರಕಟವಾದ ತಮ್ಮ ಸಂಕಲನಗಳನ್ನು ಅಂಚೆ ಮೂಲಕವೂ ಕಳುಹಿಸುತ್ತಿದ್ದರು. ಇಲ್ಲವೆ ನಾನು ಹೋದಾಗ ಕೊಡುತ್ತಿದ್ದರು. ನನ್ನ ಓದಿನ ಕ್ರಮದಲ್ಲಿಯೇ ಚರ್ಚಿಸುತ್ತಿದ್ದುದು ಅವರಿಗೆ ಹಿಡಿಸಿತ್ತು. ನಿನ್ನ ಓದಿನ ಆಸಕ್ತಿಗೆ ಕಾವ್ಯ ತೆರದುಕೊಳ್ಳದಿರದು ಎಂದೊಮ್ಮೆ ಹೇಳಿದರು. ಈ ಮಾತನ್ನು ಹಿನ್ನೆಲೆಯಲ್ಲಿಟ್ಟುಕೊಂಡು ಓದನ್ನು ಅಧ್ಯಯನಕ್ಕೆ ತಿರುಗಿಸಿದೆ. ಇದೂ ಕಾರಣವಾಗಿ ಬೈಬಲ್ಲಿನ ಹಳೇ ಒಡಂಬಡಿಕೆ ಮತ್ತು ಹೊಸ ಒಡಂಬಡಿಕೆಗಳನ್ನು ಓದಿದೆ.

'ಕದ ತೆಗೆದು ಕೂಗಿ
ನಾಳೆಗೆ ಕೊಡದೆ
ಆಮಂತ್ರಣ?'

ಶರ್ಮರ ಕಾವ್ಯ ಅವರ ರಚನಾ ಮಾರ್ಗದಲ್ಲಿಯೇ ಅರ್ಥವಾಗುವಂತಹುದೆಂದು ನಾನು ತಿಳಿದಿರುವೆ. ಹಾಗೆಯೇ ಅವರ ಸಮಗ್ರವನ್ನು ಓದಿರುವೆ. ಅದಕ್ಕೆ ರಾಜೇಂದ್ರ ಚೆನ್ನಿ ಅವರು ಬರೆದಿರುವ ಮುನ್ನುಡಿಯು ಪ್ರವೇಶ ಮಾರ್ಗಗಳಲ್ಲೊಂದು. ಯಾವುದೇ ಕವಿತೆ ಕವಿಯ ಮೂಲಕವಲ್ಲ, ತನ್ನ ಮೂಲಕವೇ ಪ್ರವೇಶಿಸಬೇಕೆಂದು ಬಯಸುತ್ತದೆ. ಇದನ್ನೇ ಶರ್ಮರ ಕವಿತೆಗಳೂ ಬಯಸುತ್ತವೆ. ಕಾವ್ಯದ ಬಗೆಗೆ ಓದುಗನ ಒಲುಮೆಯೇ ಪ್ರವೇಶಕ್ಕೆ ಅವನನ್ನು ಅಣಿಗೊಳಿಸುತ್ತದೆ. ಕೃತಿಪರವಾದ ವಿಮರ್ಶೆ ಕಾವ್ಯದ ಹಲವು ಪ್ರವೇಶದ್ವಾರಗಳಲ್ಲಿ ಒಂದು. ಈ ಮೂಲಕವೂ ಶರ್ಮರಂಥ ಕವಿಗಳ ಕಾವ್ಯದ ಒಳಹೊಕ್ಕಿವಿಕೆ ಸಾಧ್ಯ.

ಸ. ರಘುನಾಥ ಅಂಕಣ: ಬರವಣಿಗೆ ಕ್ಷೇತ್ರದಲ್ಲಿ ಅಂಬೆಗಾಲಿಟ್ಟ ಕಾಲಸ. ರಘುನಾಥ ಅಂಕಣ: ಬರವಣಿಗೆ ಕ್ಷೇತ್ರದಲ್ಲಿ ಅಂಬೆಗಾಲಿಟ್ಟ ಕಾಲ

ನನ್ನ ಓದಿನಂತೆ ಹೇಳುವುದಾದರೆ, ಅಡಿಗ, ಶರ್ಮ, ಎ.ಕೆ. ರಾಮಾನುಜನ್, ಗಂಗಾಧರ ಚಿತ್ತಾಲರ ಕಾವ್ಯವನ್ನು ಅಧ್ಯಯನ ಮಾಡಿದರೆ ಕಾಣ್ಕೆ, ಕಾಣಿಕೆ ಏನು, ಹೇಗೆ ಎಂಬುದು ಹಾಗು ನವ್ಯಕಾವ್ಯದ ಒಳ-ಹೊರ ರಚನೆಯ ವಿನ್ಯಾಸಗಳು ಕಾಣುತ್ತವೆ. ಶರ್ಮರ ಸಾನೆಟ್ಟುಗಳು ಮುಖ್ಯ ಹೇಗೆಂದು ತಿಳಿಯುವುದು ಹೀಗೆಯೇ. ಅಂತರಂಗ ಹೇಗೆ ತೆರೆದರೆ ಹಾಗೆ ಅವು ಒಳಗೆ ಹರಡಿಕೊಳ್ಳುತ್ತವೆ. ಇದು ಶರ್ಮರೊಬ್ಬರ ಕವಿತೆಗಳಿಗೆ ಒಪ್ಪಿಸಿಕೊಳ್ಳುವ ಮಾತಲ್ಲ.

'ಒಂದೊಂದು ಕವನವೂ ಭರವಸೆಯ ವ್ಯವಸಾಯ
ಅಜ್ಞಾತದ ತಳಕ್ಕಿಳಿದು ಬಂದವನ ಭಾಗ್ಯ'

ಶರ್ಮರಿಗೆ 'ಅನ್ಯರೊರೆದುನೆ ಒರೆದು...' ಎಂದಾಗಿ ಅಡಿಗರಲ್ಲಿ ಕಾಣಿಸಿಕೊಂಡ ವಿಷಾದದ ಎಳೆಯೊಂದೂ ಇರಲಿಲ್ಲ. ಹಾಗೆಯೆ ಗಂಗಾದರ ಚಿತ್ತಾಲರ 'ಹೇಗೆ ಬಂತೊ...' ಎಂಬಂಥ ಬೆರಗೂ ಕಾಣಿಸಿದಂತಿಲ್ಲ. ಬದಲಿಗೆ ಈ ಎಡೆಗಳಲ್ಲಿ 'ಕಟ್ಟುವ' ಕಾವ್ಯಶ್ರದ್ಧೆಯ ಮನಸ್ಸಿನ ಕ್ರಿಯಾಶೀಲತೆ ಎದ್ದು ಕಾಣುತ್ತದೆ. ಕವಿತೆ ಎಂದರೆ 'ಹಾಡು' ಅಲ್ಲವೆಂಬುದು ಅವರ ಸ್ಪಷ್ಟ ನಿಲುವು. 'ಹಾದಿ ತಪ್ಪಿದ ಕವಿತೆ ಹಾಡಾಗುವಂತೆ' ಎಂದು ನಿರಾಕರಣೆಯ ಧ್ವನಿಯಲ್ಲಿ ಹೇಳಿದ್ದಾರೆ.

Sa. Raghunatha Column: Life Lesson Learned by the Poet Ramachandra Sharma

ಹನಿಗವಿತೆಗಳ ಕುರಿತೂ ಇಂಥದೇ ಧ್ವನಿಯನ್ನು ಅವರ 'ಹನಿಗವಿತೆ ಕೇಳಿದ ಸಂಪಾದಕರಿಗೆ' ಎಂಬ ಕವಿತೆಯಲ್ಲಿ ಕೇಳಿಸಿಕೊಳ್ಳಬಹುದು. ಈ ಉದಾಹರಣೆಗಳು ಅವರ ಕಾವ್ಯ ಧೋರಣೆಗೆ ಸಾಕ್ಷಿ. ಅವರಲ್ಲಿ ಕವಿ, ಕಾವ್ಯ ಗೌರವಕ್ಕೆ ಕೊರತೆ ಕಾಣಿಸಿಕೊಂಡುದಿಲ್ಲ. ನನ್ನ 'ಅಭಿಮುಖ' ಕವನ ಸಂಕಲವನ್ನು ಓದಿ, ಕಷ್ಟಕೊಡದೆ ಅರ್ಥವಾಯಿತು ಎಂದು ಹೇಳಿ, ಕಂಡುಕೊಳ್ಳಬೇಕಿದ್ದುದನ್ನು ಮಾತುಕತೆಯ ನಡುವೆ ತಿಳಿಸುತ್ತಿದ್ದರು.

ಶರ್ಮರು ಕವಿತೆಯ ಮಾತಿನಿಂದ ಆಚೆಗೆ ಆಪ್ತವಾಗುವ ಸ್ನೇಹಜೀವಿ. ಜೀವನದಲ್ಲಿ ತುಂಬು ಪ್ರೀತಿ ಅವರಿಗೆ. ಸತ್ಯವನ್ನು ಹೃದಯಾಂತರಾಳದಿಂದ ಸ್ವೀಕರಿಸಿದ್ದರು. 'ಅಡ್ಜೆಸ್ಟ್‍ಮೆಂಟ್' ಎಂಬುದು ಅವರಿಗೆ ಸಹ್ಯವಾಗುತ್ತಿರಲಿಲ್ಲ. ಅವರ ಜೀವನ ಶೈಲಿ ಹಾಗಿತ್ತು. ಕಾವ್ಯಶೈಲಿಯೂ ಅದೇ ಆಗಿತ್ತು. ಅವರ 'ಹೇಸರಗತ್ತೆ, ಏಳುಸುತ್ತಿನಕೋಟೆ, ಬ್ರಾಹ್ಮಣರ ಹುಡುಗ, ಬುವಿ ನೀಡಿದ ಸ್ಫೂರ್ತಿ, ದೆಹಲಿಗೆ ಬಂದ ಹೊಸವರ್ಷ, ಸಪ್ತಪದಿ, ಮಾತು-ಮಾಟ ...' ಕವಿತೆಗಳನ್ನು ಕುರಿತು ಚರ್ಚಿಸುವಾಗ 'ಕವಿತೆ ಅಂಗವಿಕಲವಾಗಬಾರದು. ಹಾಗೆಯೇ ಅದನ್ನು ಹಿಡಿಯಲಾಗದಿದ್ದರೆ ವಿಕಲಗೊಳಿಸಬಾರದು' ಎಂದು ಹೇಳಿದ್ದು ನನಗಾಗಿ ಎಂದುಕೊಂಡರೂ ಅದರ ಚಾಚು ಅಲ್ಲಿಂದಾಚೆಗೂ ಇತ್ತು.

'ತೇವು ನೆಲದ ನೆವಕ್ಕಷ್ಟೆ ಹುಟ್ಟಿ ಕುಪ್ಪಳಿಸಿ
ಹುಟ್ಟಿದ್ದಕ್ಕೆ ಹುಟ್ಟಿಸುವ ಮಾತಿಗಿಂತಲೂ
ಒಣ ನೆಲದ ಶಬರಿಶ್ರದ್ಧೆಯ ನಿಶ್ಶಬ್ದ ಮೇಲು'

ನಾನು ಅವರ ಕುರಿತು ಎರಡು, ಬೇಂದ್ರೆ ಅವರನ್ನು ಕುರಿತು ಎರಡೆರಡು ಕವಿತೆಗಳನ್ನು, ಸು.ರಂ. ಎಕ್ಕುಂಡಿಯವರ ಬಗ್ಗೆ ಒಂದು ಕವಿತೆ ಬರೆದಿರುವೆ. ಒಂದು ದಿನ ರಾತ್ರಿ ಹನ್ನೆರಡು ಗಂಟೆಯಲ್ಲಿ ಸುಮತೀಂದ್ರ ನಾಡಿಗರು ಫೋನ್ ಮಾಡಿ, 'ರಘುನಾಥ, ಶರ್ಮನ ಮನೆಗೆ ಹೋಗಿದ್ದೆ. ಅಲ್ಲಿ ನೀನು ಅವನ ಬಗ್ಗೆ ಬರೆದ ಕವಿತೆಯನ್ನು ಓದಿದೆ, ಚೆನ್ನಾಗಿತ್ತು. ಹಾಗೆ ಕವಿತೆ ಬರೆಯದಿರಲು ನಿನಗೇನು ರೋಗ? ಏನು ಮಾಡ್ತಿದ್ದಿ' ಅಂದರು. ನಿಮ್ಮ ಕವಿತೆಗಳನ್ನು ಓದುತ್ತಿದ್ದೆ. ನಿಮ್ಮ ಫೋನು ಬಂತು ಅಂದೆ. ಅನ್ನಿಸಿದ್ದನ್ನು ತಿಳಿಸು ಅಂದರು. ಆಯಿತು ಗುರುವೆ ಅಂದೆ. ಓದಿದ ಮೇಲೆ ಫೋನಿನಲ್ಲಿ ತಿಳಿಸಿದೆ. ಅರ್ಧಗಂಟೆ ಕಾಲ ಚರ್ಚಿಸಿದೆವು. ಫೋನಿಡುತ್ತ, 'ಕಾವ್ಯಲೋಕದಲ್ಲಿ ಅಂಬೆಗಾಲಿಡುವುದನ್ನು ಕಲಿತೆ ಮೇಲ್ಲವೆ ನಡಿಗೆ ಗುರುವೆ' ಎಂದಿದ್ದಕ್ಕೆ 'ನೀನು ಹಗಲುಗಳ್ಳ' ಎಂದು ನಕ್ಕರು.

ಶರ್ಮರು ತಮ್ಮನ್ನು ತಾವು ವಿಡಂಬಿಸಿಕೊಳ್ಳುತ್ತಿದ್ದುದುಂಟು. ಒಮ್ಮೆ ನಾನು, ಲಕ್ಷ್ಮಣರಾವ್ ಕೂಡಿ ಅವರ ಮನೆಗೆ ಹೋಗಿದ್ದೆವು. ಮಾತಿನ ನಡುವೆ, 'ಪದ್ಮ (ಶರ್ಮರ ಮಡಿ) ಲಕ್ಷ್ಮಣನ ಕಥೆ, ಕವಿತೆಗಳನ್ನು ಓದುತ್ತಾಳೆ. ನನ್ನವನ್ನು ಓದುವುದಿಲ್ಲ' ಅಂದು ನಕ್ಕರು. ಇದನ್ನು ಕೇಳಿಸಿಕೊಂಡ ಪದ್ಮ ಅವರು, 'ನಿಮ್ಮವನ್ನು ಓದಿ ಯಾರು ತಲೆಕೆಡಿಸಿಕೊಳ್ಳಬೇಕು' ಎಂದು ನಕ್ಕರು. ಇನ್ನೊಮ್ಮೆ, 'ಪದ್ಮ ಕವಿತೆಯೊಂದರ ಸಾಲುಗಳನ್ನು ಓದಿ, ಹೇಗಿದೆ ಅಂದಳಪ್ಪ. ಕೆಟ್ಟದಾಗಿದೆ, ಯಾರು ಬರೆದಿದ್ದು' ಅಂದೆ. 'ನೀವೇ' ಅಂದುಬಿಡೋದೆ.

ಇನ್ನೊಮ್ಮೆ ಕವಿತೆಯನ್ನು ಅರ್ಥಮಾಡಿಕೊಳ್ಳುವ ಕುರಿತು ಮಾತಾಡುತಿದ್ದಾಗ, ಕವಿತೆ ಬರೆದಾಗ ಇಬ್ಬರಿಗೆ ಅರ್ಥವಾಗಿತ್ತು. ಒಂದು ನನಗೆ, ಇನ್ನೊಂದು ದೇವರಿಗೆ. ಈಗ ಓಬ್ಬನಿಗೇ ಅರ್ಥವಾಗೋದು. ಅದು ದೇವರಿಗೆ ಅಂದಿದ್ದರು. ಅದು ಅವರನ್ನು ಅವರೇ ವಿಡಂಬಿಸಿಕೊಂಡ ಮಾತಷ್ಟೆ. ಶರ್ಮರು ಗಂಭೀರದೋದಿಗೆ ಸಿಗುವ ಕವಿಯೆಂಬುದು ದಿಟ. ಅವರ ಕಾವ್ಯ ವಾಚನ ಶೈಲಿ ಧ್ವನ್ಯಾಭಿನಯದ್ದು. ಮಾತಿಗೊ, ಕಾವ್ಯವಾಚನಕ್ಕೆ ನಿಂತಾಗಲೋ 'ಸಭೆಗೆ ನಮಸ್ಕಾರ' ಎಂದು ಪ್ರಾರಂಭಿಸುತ್ತಿದನ್ನು ನಾನು ಕಲಿತಿದ್ದು ಅವರಿಂದಲೇ.

ಶರ್ಮರು ತಮ್ಮ ಕಾವ್ಯ ಕುರಿತಾದ ರೂಬುರೂಬು ಟೀಕೆಗಳನ್ನು ಸಹಿಸುತ್ತಲೇ ಆಲಿಸುತ್ತಿದ್ದರು. ಅದು ಒಂದು ಸಣ್ಣ ಎಳೆಯಷ್ಟು 'ಕಾವ್ಯಸಭ್ಯತೆ'ಯನ್ನು ಮೀರಿದಾಗ ಸಿಟ್ಟಾಗುತ್ತಿದ್ದರು. ಆಗ ವಾದಕ್ಕೆ ಇಳಿಯದೆ, ಹೊರಹೋಗಿ, ಕಾರಿನಲ್ಲಿ ಕುಳಿತು ಒಂದು ಸುತ್ತು ಹಾಕಿಬಂದು ಆಡುವ ಮಾತುಗಳನ್ನು ಕೇಳಿಸಿಕೊಳ್ಳುತ್ತ ಮೌನವಾಗಿರುತ್ತಿದ್ದರು. ಇಂತಹ ಎರಡು ಮೂರು ಸಂದರ್ಭಗಳನ್ನು ಕಂಡಿರುವೆ.

ಅವರು ತೆರೆದ ಬದುಕಿನಂತೆ ಅವರ ಮಾತು ಮತ್ತು ಕಾವ್ಯ. ಅವೆರಡನ್ನು ಬೇರೆ ಬೇರೆಯಾಗಿಸಿ ನೋಡುವುದು ನನ್ನಿಂದಾಗಿಲ್ಲ. ಇದವರ ಜೀವನ-ಕಾವ್ಯ- ತತ್ವ ಅನ್ನಿಸಿದೆ.

English summary
Sa. Raghunatha Column: Literature and life Lesson Learned by the Poet Ramachandra Sharma.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X