ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ. ರಘುನಾಥ ಅಂಕಣ: ತೃಣ (ಸಿರಿ) ಧಾನ್ಯಗಳ ಅಡುಗೆ ಮತ್ತು ಉಣ್ಣುವುದು

By ಸ. ರಘುನಾಥ
|
Google Oneindia Kannada News

ಹಿಂದೆ ಹಳ್ಳಿಗರ, ವಿಶೇಷವಾಗಿ ಬಡವರ ನಿತ್ಯ ಆಹಾರವಾಗಿದ್ದ ತೃಣಧಾನ್ಯಗಳಾದ ಹರಿಸಾಮೆ, ಕರಿಸಾಮೆ, ನವಣೆಗಳನ್ನು ಇಂದು ಸಿರಿಧಾನ್ಯಗಳೆಂಬ ಹೆಸರಿನಲ್ಲಿ ನಗರ, ಪಟ್ಟಣಗಳಲ್ಲಿ ಮೆರೆಸಲಾಗುತ್ತಿದೆ. ಇದಕ್ಕೆ ತಜ್ಞರ ಚರ್ಚೆಗಳನ್ನು ಸೇರಿಸಿ ಅವುಗಳ ಗುಣಗಳನ್ನು ಇದೀಗ ಕಂಡುಕೊಂಡುಂತೆ ಪ್ರಚಾರದಲ್ಲಿಡಲಾಗುತ್ತಿದೆ.

ಇದರ ಪರಿಣಾಮ ಬಡವರ ಈ ಧಾನ್ಯಗಳನ್ನು ಅವರ ಕೈ ಎತ್ತರಕ್ಕೂ ಮೀರಿ ಎಟುಕದಷ್ಟು ಹೆಚ್ಚಿನ ಬೆಲೆಗೇರಿಸಿ ಲೇಬಲ್ಲುಗಳನ್ನು ಮೆತ್ತಲಾಗುತ್ತಿದೆ. ತೋಚಿದಂತೆ ಅವುಗಳ ಬಳಕೆ(ಅಡುಗೆ) ಮಾಡುವುದನ್ನು ವಿವರಿಸಲಾಗುತ್ತಿದೆ.

ತೃಣಧಾನ್ಯಗಳಲ್ಲಿ ಕನಿಷ್ಟದ್ದೆಂದರೆ ಹಾರಕ. ಮಳೆ- ಬೆಳೆಗಳು ಚೆನ್ನಾಗಿದ್ದ ಕಾಲದಲ್ಲಿ ನೆಲ್ಲಿನ ಪೈರುಗಳ ನಡುವೆ ಬರುಗು ತಲೆಯೆತ್ತುತ್ತಿತ್ತು. ಅದನ್ನು ಕಳೆಯೆಂದೇ ಪರಿಗಣಿಸಿ ತೆಗೆದು ದನಗಳಿಗೆ ಹಾಕುತ್ತಿದ್ದುದುಂಟು. ಇಂದು ಅದಕ್ಕೆ ಮಾರುಕಟ್ಟೆಯಲ್ಲಿ ಬೆಲೆಯಿದೆ. ಹಾರಕವಂತೂ ಬರಗಾಲದ ಅನ್ನವಾಗಿತ್ತು.

Sa Raghunatha Column: Cooking and eating of Siri Grains

ಮೊಸರು ಮಜ್ಜಿಗೆಗಳನ್ನು ಬಳಸಿದರೆ ತೊಂದರೆಯಿಲ್ಲ
ಈ ಧಾನ್ಯಗಳಲ್ಲಿ ನಾರಿನಾಂಶ ಇರುವುದು ನಿಜವೇ. ಆದರೆ ಇವೂ ಪಿಷ್ಟಗಳೇ. ರಾಗಿಯಂತೆ ಸಕ್ಕರೆಯಾಗಿ ಪರಿವರ್ತನೆಗೊಳುವಲ್ಲಿ ವಿಳಂಬ ಮಾಡುತ್ತವೆಯಷ್ಟೇ. ಅವು ಮಂದ(ಮಲಬದ್ಧತೆ) ಉಂಟು ಮಾಡುವ ಗುಣದವು. ಇದನ್ನು ಹಳ್ಳಿಯ ಜನ ಬಲ್ಲವರಾಗಿದ್ದರು. ಅದನ್ನು ನಿವಾರಿಸಲು ಈ ಧಾನ್ಯಗಳಿಂದ ಅನ್ನ, ಮುದ್ದೆ ಮಾಡಿದಾಗ ಮೊಸರು, ಮಜ್ಜಿಗೆಗಳನ್ನು ಹೆಚ್ಚಿಗೆ ಉಪಯೋಗಿಸುತ್ತಿದ್ದರು. ಹಾಗೆಯೇ ನೀರನ್ನೂ ಸಹ.

ಇದು ಆ ದೋಷಕ್ಕೆ ಪರಿಹಾರ. ಈ ಧಾನ್ಯಗಳನ್ನು ಬಳಸುವವರಿಂದ ಈ ದೂರು ವೈದ್ಯರ ಬಳಿಗೆ ಬರುತ್ತಿರುತ್ತದೆ. ಗುಟ್ಟರಿಯದ ಅವರು ಅವುಗಳ ಬಳಕೆಯನ್ನು ಬಿಡಲು ಸೂಚಿಸುವುದೂ ಉಂಟು. ಬಳಕೆಯನ್ನು ಬಿಡುವುದರ ಅಗತ್ಯವಿಲ್ಲ. ಮೊಸರು ಮಜ್ಜಿಗೆಗಳನ್ನು ಬಳಸಿದರೆ ತೊಂದರೆಯಿಲ್ಲ. ಹಾಲನ್ನು ಬಳಸಬಹುದು. ರೊಟ್ಟಿ ಮಾಡಿದಾಗ ಹಸಿ ಈರುಳ್ಳಿಯನ್ನು ನಂಚಿಕೊಳ್ಳುವುದರಿಂದ ಉಷ್ಣಾಂಶ ಶಮನಗೊಳ್ಳುತ್ತದೆ.

Sa Raghunatha Column: Cooking and eating of Siri Grains

ಮುದ್ದೆ, ಉಪ್ಪಿಟ್ಟು, ಅನ್ನ ಮಾಡಿದಾಗ ದ್ರವ ಪದಾರ್ಥಗಳ ಬಳಕೆ
ಮುದ್ದೆ, ಉಪ್ಪಿಟ್ಟು, ಅನ್ನ ಮಾಡಿದಾಗ ದ್ರವ ಪದಾರ್ಥಗಳ ಬಳಕೆ ಒಂದುಪಟ್ಟು ಹೆಚ್ಚಾಗಲಿ. ಗಿಣ್ಣು ಮಾಡಿದರೆ ಪಾಯಸದಂತಿರಲಿ. ಅನ್ನವಂತೂ ಹಳಸದೆ ತಂಗಳಾದರೆ ದೇಹಕ್ಕೆ ತಂಪು ಮತ್ತು ಹಿತ. ಹಾಗಾಗಲು ಮೊಸರು, ಮಜ್ಜಿಗೆ ಇರಲೇಬೇಕು. ಹುಗ್ಗಿ(ಪೊಂಗಲ್)ಯೂ ಮಂದವಾಗಿರುವುದು ಬೇಡ. ಜೀರಿಜೆಯನ್ನು ಬಳಸಿದರೆ ಅಜೀರ್ಣದ ಸಮಸ್ಯೆಯಿರದು.

ದೋಸೆ, ರೊಟ್ಟಿ, ಉಪ್ಪಿಟ್ಟು ಮಾಡಿ ತಿನ್ನುವಾಗ ನಡುವೆ ನೀರು ಕುಡಿಯುವುದು ಒಳ್ಳೆಯದು. ಗಿಣ್ಣು, ಪಾಯಸಕ್ಕೆ ಬೆಲ್ಲ, ಅದರಲ್ಲಿಯೂ ಹಳೆಯ ಬೆಲ್ಲ ಸರ್ವೋತ್ತಮ. ಬೂರಾಸಕ್ಕರೆ, ತಾಟಿ ಬೆಲ್ಲವಂತೂ ಶ್ರೇಷ್ಠ. ರೊಟ್ಟಿ, ದೋಸೆಗೆ ಬೆಲ್ಲ, ಹಸಿ ಈರುಳ್ಳಿ, ಜೇನುತುಪ್ಪ ಇದ್ದರೆ ಅಮೃತವೇ ಅದು.

ಇವುಗಳನ್ನು ನೆನೆಹಾಕಿದರೆ ಅದೇ ನೀರಿನಲ್ಲಿ ಬೇಯಿಸಿದರೆ ಹೆಚ್ಚು ಪ್ರಯೋಜನಕಾರಿ. ನೆನೆಸಲೇಬೇಕೆಂಬುದು ಕಡ್ಡಾಯವೇನಲ್ಲ. ಹೂವು ಅರಳಿದಂತೆ ಅವು ಅರಳಿಕೊಳ್ಳುವ ಹಾಗೆ ಬೇಯಿಸಬೇಕು. ಈ ಅನ್ನ ಅಥವಾ ತಿನಿಸು ನೆನೆಸಿ ಮಾಡಿದ್ದಕ್ಕಿಂತಲೂ ರುಚಿ.

Sa Raghunatha Column: Cooking and eating of Siri Grains

ಸಿರಿ ಧಾನ್ಯಗಳಿಗೆ ಅನುಪಾನಗಳು ಇದ್ದಂತೆ ರುಚಿ ಬರುತ್ತದೆ
ತೃಣ(ಸಿರಿ)ಧಾನ್ಯಗಳಿಗೆ ಅನುಪಾನಗಳು ಇದ್ದಂತೆ ರುಚಿ ಬರುತ್ತದೆ. ಹಸಿಗೊಜ್ಜು, ಗೊಡ್ಡು(ಹುಣಿಸೆ) ಸಾರು, ಹುಚ್ಚೆಳ್ಳು ಚೆಟ್ನಿ ಸೊಗಸಾದವು. ತಯಾರಿಕೆಯೂ ಸರಳ, ಸುಲಭ. ಹುಣಿಸೆಹಣ್ಣು ಕಿವುಚಿ, ಈರುಳ್ಳಿ, ಹಸಿಮೆಣಸಿನಕಾಯಿ ಅಥವಾ ಒಣಮೆಣಸಿನಕಾಯಿ, ಕೊತ್ತಂಬರಿಸೊಪ್ಪು, ಉಪ್ಪು ಹಾಕಿದರೆ 3-4 ನಿಮಿಷಗಳಲ್ಲಿ ಹಸಿಗೊಜ್ಜು ಸಿದ್ಧ. ಹುಣಿಸೆಹಣ್ಣಿನ ನೀರಿಗೆ ಒಣಮೆಣಸಿನಕಾಯನ್ನು ಮುರಿದು ಹಾಕಿ, ಉಪ್ಪು ಜೀರಿಗೆ ಹಾಕಿ ಚೆನ್ನಾಗಿ ಕುದಿಸಿದರೆ ಗೊಡ್ಡುಸಾರು ಆಯಿತು. ಇವುಗಳಲ್ಲಿ ನೀರಿನಂಶ ಇದ್ದೇ ಇರುತ್ತದೆ. ಹಸಿಗೊಜ್ಜಿಗೆ ಹುಣಿಸೆಹಣ್ಣಿಗೆ ಬದಲು ಟೊಮೆಟೊವನ್ನು ಬಳಸಬಹುದು. ಗೊಡ್ಡುಸಾರಿಗೆ ಟೊಮೆಟೊ ಅಷ್ಟಾಗಿ ಹೊಂದದು.

ತೃಣಧಾನ್ಯಗಳ ಅಕ್ಕಿ ಇಲ್ಲವೆ ರವೆಯನ್ನು ರಾತ್ರಿ ಗಂಜಿಯ ಹದದಲ್ಲಿ ಮಾಡಿಟ್ಟು ಬೆಳಗ್ಗೆ ಮಜ್ಜಿಗೆ, ಹೆಚ್ಚಿದ ಹಸಿ ಈರುಳ್ಳಿ ಹಾಕಿ ಕುಡಿದರೆ ಅದರಷ್ಟು ರುಚಿ, ಆರೋಗ್ಯಕ್ಕೆ ಹಿತ ಬೇರೊಂದರಿಂದ ಸಿಗದು.

Recommended Video

ಸೂರ್ಯಕುಮಾರ್ ಯಾದವ್ ಪಂದ್ಯ ಮುಗಿದಾದ ನಂತರ ಹೇಳಿದ್ದೇನು ? | Oneindia Kannada

ಹರಿಸಾಮೆ, ಕರಿಸಾಮೆಯಗಳನ್ನು ಹಸಿಯಾಗಿ(ಒಣಗದ್ದು) ಮಿಲ್ಲಿಗೆ ಹಾಕಿ ಅಕ್ಕಿ ಮಾಡುವುದಕ್ಕಿಂತ ಚೆನ್ನಾಗಿ ಬೇಯಿಸಿ, ಒಣಗಿಸಿ ಅಕ್ಕಿ ಮಾಡುವುದು ಆರೋಗ್ಯಕ್ಕೆ ಒಳ್ಳೆಯದು. ಹಿಂದೆ ಹೀಗೆಯೇ ಮಾಡುತ್ತಿದ್ದುದು. ಬಳಸುವುದರಿಂದಲೇ ಅದರ ಅನುಕೂಲಗಳು ಉಂಟಾಗುವುದಿಲ್ಲ. ಹದ, ಹಿತವರಿತು ಅಡುಗೆ ಮಾಡಿ ಉಂಡರೆ ಮಾತ್ರ ನಮಗೆ ಅನುಕೂಲವೆಂಬುದು ಮನವರಿಕೆಯಾಗಬೇಕು.

English summary
Sa Raghunatha Column: The Siri Grains of today are formerly the food of the villagers, especially the poor.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X