• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರೆಡ್ಡಿ ಹಗರಣದ ಬಗ್ಗೆ ರವಿ ಬೆಳಗೆರೆ ಏನು ಹೇಳ್ತಾರೆ?

By * ರವಿ ಬೆಳಗೆರೆ
|
Google Oneindia Kannada News
'ಭೀಮಾ ತೀರದಲ್ಲಿ' ಚಿತ್ರದ ವಿವಾದಕ್ಕೆ ಸಂಬಂಧಿಸಿದಂತೆ ನಿರ್ಮಾಪಕರು ಮತ್ತು 'ಭೀಮಾತೀರದ ಹಂತಕರು' ಪುಸ್ತಕದ ಕರ್ತೃ ರವಿ ಬೆಳಗೆರೆ ನಡುವೆ ಹುಟ್ಟಿಕೊಂಡಿರುವ ವಿವಾದಕ್ಕೆ ಸಂಬಂಧಿಸಿದಂತೆ ಟಿವಿ9 ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ರವಿ ಬೆಳಗೆರೆಯವರು, ತಮ್ಮ ಮತ್ತು ಜೈಲು ಪಾಲಾಗಿರುವ ಜನಾರ್ದನ ರೆಡ್ಡಿ ನಡುವಿನ ಸಂಬಂಧದ ಬಗ್ಗೆ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ 2011ರ ಸೆಪ್ಟೆಂಬರ್‌ನಲ್ಲಿ ಹಾಯ್ ಬೆಂಗಳೂರು ಪತ್ರಿಕೆಯಲ್ಲಿ ರೆಡ್ಡಿ ಕುರಿತಂತೆ ರವಿ ಬರೆದಿರುವ ಲೇಖನ ನಿಮ್ಮ ಮಡಿಲಿಗೆ ಮತ್ತೆ ಹಾಕುತ್ತಿದ್ದೇವೆ, ಓದಿಕೊಳ್ಳಿ.

ಸುದ್ದಿಗೆ ಪ್ರವಾಹ. ಕರ್ನಾಟಕ ಮತ್ತು ಇಡೀ ದೇಶ ಒಟ್ಟೊಟ್ಟಿಗೆ ಸುದ್ದಿಯ ಪ್ರವಾಹ ಎದುರಿಸುತ್ತಿವೆ. ಸ್ಪೆಕ್ಟ್ರಂ ಹಗರಣದಲ್ಲಿ ರಾಜಾ ಹಾಗೂ ಕನ್ನಿಮೋಳಿ ಆಟ ಕೆಡಿಸಿದ ಆಪಾದನೆಯ ಮೇಲೆ ಕಲ್ಮಾಡಿ , ಗಪ್ಪನೆ ಕೋರ್ಟಿನ ಕೈಗೆ ಸಿಕ್ಕು ಜೈಲು ಪಾಲಾದ ಕಟ್ಟಾ ಸುಬ್ರಮಣ್ಯ ನಾಯ್ಡು, ಮತ್ತು ಆತನ ಮಗ, ಜೈಲಿನೆಡೆ ಮುಖ ಮಾಡಿಕೊಂಡೇ ನಿಂತಿರುವ ಯಡಿಯೂರಪ್ಪ, ಆತನ ಮಕ್ಕಳು, ಎಚ್. ಡಿ. ಕುಮಾರಸ್ವಾಮಿ ದಂಪತಿಗಳು, ಓಟಿಗಾಗಿ ನೋಟು ಪ್ರಕರಣದಲ್ಲಿ ಸಿಕ್ಕಿಬಿದ್ದ ಅಮರ್ ಸಿಂಗ್, ಶ್ರೀರಾಮುಲು ರಾಜಿನಾಮೆ ಪ್ರಹಸನ, ದಿಲ್ಲಿ ಹೈಕೋರ್ಟಿನ ಹತ್ಯಾಕಾಂಡ ಮತ್ತು ಜನಾರ್ದನ ರೆಡ್ಡಿಯ ಬಂಧನ...

ಒಂದೆರಡೇ? ಜನಾರ್ದನ ರೆಡ್ಡಿಯನ್ನು ಸಿಬಿಐ ಪೊಲೀಸರು ಹೆಚ್ಚಿನ fuss ಮಾಡದೇ ಬಳ್ಳಾರಿಯ ಕುಟೀರದಿಂದ ಎತ್ತಿಕೊಂಡು ಹೋಗುವುದರೊಂದಿಗೆ ಒಂದು ಆಟ ಮುಗಿದಿದೆ. ಖೇಲ್ ಖತಂ! ಆದರೆ ಇನ್ನೊಂದು ಆಟ ಆರಂಭವಾಗಿದೆ. ಬಳ್ಳಾರಿಯನ್ನು ಅಕ್ಷರಶಃ ಚಕ್ರಬಿಂಬ ಕೋಟೆಯಂತಾಗಿಸಿಕೊಂಡು ಆಳಿದವನು ಜನಾರ್ದನ ರೆಡ್ಡಿ. ಈ ಹಿಂದಾದರೂ ಅದು ಒಬ್ಬರಲ್ಲ ಒಬ್ಬರ ಕಪಿಮುಷ್ಟಿಯಲ್ಲಿದ್ದ ಕೋಟೆಯೇ. ಅಲ್ಲಿ ಪ್ರಜಾಪ್ರಭುತ್ವವೆಂಬುದು ಇವತ್ತಿಗೂ ಅಪರಿಚಿತ. ಹಿಂದಿದ್ದ ಪಾಳೇಗಾರರು ಮನುಷ್ಯನ ರುಂಡ ಕಡಿಯುತ್ತಿದ್ದರು. ಈಗಿನವರು ಬೆಟ್ಟ ಗುಡ್ಡಗಳ ರುಂಡ ಕಡಿದು, ಒಡಲು ಬಗೆದು, ಧೂಳು ಚಿಮ್ಮಿ, ದುಡ್ಡು ಚೆಲ್ಲಿ ಚಕ್ರಬಿಂಬನ ಕೋಟೆ ಆಳುತ್ತಾರೆ. ಇಷ್ಟೇ ವ್ಯತ್ಯಾಸ.

"ನೀವು ಮುಂಡ್ಳೂರು ಧಣಿಗಳನ್ನು ರಾಜಕೀಯವಾಗಿ ಹಣಿಯುವುದಕ್ಕಾಗಿ ರೆಡ್ಡಿಗಳಿಗೆ ಒಂದು ಸೋಷಿಯಲ್ acceptance ಕೊಡಿಸಿದಿರಿ. ಅದು ನೀವು ಮಾಡಿದ ತಪ್ಪು" ಎಂಬುದಾಗಿ ನನ್ನ ಓದುಗ ಮಿತ್ರ ಆದಿತ್ಯ ಭಾರದ್ವಾಜ್ ಆರೋಪಿಸುತ್ತಾರೆ. ಇದು ನನ್ನ ಮೇಲಿರುವ ಆಪಾದನೆ. ಮತ್ತು ಇದು ನಿಜವೂ ಹೌದು. ಮುಂಡ್ಳೂರು ಮನೆತನದವರ ಆಳ್ವಿಕೆಯ ವಿರುದ್ಧ ನಾನು 1983ರಿಂದಲೇ ದನಿಯೆತ್ತಿದವನು. ಅಲ್ಲಿ ಬೀದಿಗಳಲ್ಲಿ ನಿಂತು ಹೋರಾಡಿದ್ದೇನೆ. ಪೊಲೀಸರು, ಲಾಕಪ್ಪು, ನ್ಯಾಯಾಲಯ ಎಲ್ಲದರಿಂದ ಶಿಕ್ಷೆಯೂ ಆಗಿದೆ. ನೋಡನೋಡುತ್ತ ನನ್ನ ಕಣ್ಣೆದುರಿನಲ್ಲೇ ಅನೇಕ ಮಿತ್ರರು, ಪರಿಚಿತರು, ಕಡೆಗೆ ನನ್ನ ವಿದ್ಯಾರ್ಥಿಯೂ ಕೊಲೆಯಾಗಿ ಹೋದ. ನನ್ನೊಂದಿಗೆ ಈ ಹತ್ಯೆ ರಾಜಕೀಯದ ವಿರುದ್ಧ ಹೋರಾಡುತ್ತಿದ್ಧ ಕೆಲವರ ಕ್ರಮೇಣ ಮುಂಡ್ಳೂರು ಪಾಲಿಟಿಕ್ಸೊಳಕ್ಕೇ ಲೀನವಾಗಿ ಬಿಟ್ಟರು. ಅವರ ಪೈಕಿ ಪ್ರಮುಖನಾದ ಯರ್ರಿಸ್ವಾಮಿ ತೀರಿಕೊಂಡೂ ಬಿಟ್ಟ. ತೋಳ್ಬಲದಲ್ಲಿ ನಮಗೆ ಸಮರಿಲ್ಲ ಎಂದು ಬೀಗುತ್ತಿದ್ದ ಧಣಿಗಳ ಜೊತೆಗೆ ಸಂಡೂರಿನ ಮಹಾ ಕುಬೇರ ಅನಿಲ್ ಲಾಡ್ ಸೇರಿಕೊಂಡು ಬಿಟ್ಟ.

ಆಗಲೇ ನಾನು ದಿಗಿಲಿಗೆ ಬಿದ್ದು ಬಳ್ಳಾರಿಗೆ ಹೋದದ್ದು. ಎಂದೂ ಒಬ್ಬರ ಪರವಾಗಿ, ಒಂದು ಪಕ್ಷದ ಪರವಾಗಿ ಓಟು ಕೇಳದಿದ್ದವನು 'ಬಳ್ಳಾರಿಯಲ್ಲಿ ಅನಿಲ್ ಲಾಡ್ ನನ್ನು ಸೋಲಿಸಿ' ಅಂತ ಪ್ರಚಾರ ಮಾಡಿದೆ. ಆಗ ಸೋಮಶೇಖರ ರೆಡ್ಡಿ ಗೆದ್ದು ಬಂದ. ನಾನೊಬ್ಬನೇ ಅಲ್ಲ; ಹತ್ಯಾ ರಾಜಕೀಯದ ವಿರುದ್ಧ ಬೇಸತ್ತ ಬಳ್ಳಾರಿಯ ಸಮಸ್ತರೂ ರೆಡ್ಡಿಗಳು ಗೆಲ್ಲಲಿ ಎಂದು ಬಯಸಿದ್ದರು. ನಿಮಗೆ ಗೊತ್ತಿರಲಿ, ಇದೇ ಶ್ರೀರಾಮುಲು ಮತ್ತು ರೆಡ್ಡಿ ಸಹೋದರರು ಬೈಕುಗಳಲ್ಲಿ ಹೋಗಿ ಆವತ್ತಿನದವತ್ತಿನ ಖರ್ಚಿಗಾಗಿ ಬಳ್ಳಾರಿಯಲ್ಲಿ ಕೆಲವು ಮಿತ್ರರಿಂದ ಸಾವಿರ-ಎರಡು ಸಾವಿರ ರೂಪಾಯಿಗಳ ಕೈಗಡ ತಂದುಕೊಳ್ಳುತ್ತಿದ್ದರು. ಅದು ನಿಜಕ್ಕೂ ಬದಲಾಗಿ ಒಂದೇ ಸಲಕ್ಕೆ ಮೈನಿಂಗ್ ಮತ್ತು ಅಧಿಕಾರ ರೆಡ್ಡಿಗಳ ಕೈಸೇರಿದ್ದು ಇಡೀ ನಕಾಶೇಯನ್ನೇ ಬದಲಿಸಿಬಿಟ್ಟಿತು. ಅನಿಲ್ ಲಾಡ್ ನಂಥ ಕೆಲವೇ ಕುಬೇರರ ಕೈಲಿದ್ದ ತಿಜೋರಿಯ ಬೀಗದ ಕೈ ರೆಡ್ಡಿಯ ಕೈಗೆ ಸಿಕ್ಕು ಬಿಟ್ಟಿತು. 1999ರ ಸುಮಾರಿನಲ್ಲಿ ಸಿಕ್ಕ ತಿಜೋರಿಯ ಬೀಗ ಜನಾರ್ದನ ರೆಡ್ಡಿಯನ್ನು 2011ರ ಒಂಬತ್ತನೇ ತಿಂಗಳ ಹೊತ್ತಿಗೆ ಹೈದಾರಾಬಾದಿನ ಚಂಚಲಗೂಡು ಬಂಧೀಖಾನೆಯಲ್ಲಿ ಕೂಡಿಸಿ, ಹೊರಗಿನಿಂದ ಕೀಲಿ ಹಾಕಿಕೊಂಡಿದೆ. ಇನ್ನು ಹೊರಬರುವುದು ಯಾವಾಗಲೋ?

English summary
Janardhana Reddy's arrest by CBI under Prevention of Corruption Act has opened pandora's box. All the people who benefited from Jana Reddy are exposing him before CBI. Is it the end of Reddy's era in Karnataka? Or is it the beginning of new political game?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
Desktop Bottom Promotion