• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಮ್ಮ ನಂತರವೂ ನಮ್ಮ ಬಗ್ಗೆ ಬದುಕು ಮಾತನಾಡುತ್ತದೆ

By * ರವಿ ಬೆಳಗೆರೆ
|
Google Oneindia Kannada News
ಅದೊಂದು ಚಿಕ್ಕ ಸಮಸ್ಯೆ. ನಮ್ಮ ಆಫೀಸಿನೆದುರು ನಾನೊಂದು ಸೈಟು ಖರೀದಿಸಿದೆ. ವಿಶಾಲವಾಗಿತ್ತು. ಆದರೆ ಅಲ್ಲಿ ಮನೆ ಕಟ್ಟುವಂತಿರಲಿಲ್ಲ. ಏಕೆಂದರೆ ಸೈಟು ತೀರಾ ರಸ್ತೆಗೇ ಇತ್ತು. ಅಲ್ಲದೆ ಅಷ್ಟು ದೊಡ್ಡ ಸೈಟಿನಲ್ಲಿ ಮನೆ ಕಟ್ಟುವ ಇರಾದೆ ನನಗಿರಲಿಲ್ಲ. ಹಾಗಾದರೆ ಪ್ರಿಂಟಿಂಗ್ ಪ್ರೆಸ್ ಹಾಕಿ ಅಂತ ಕೆಲವರು ಸಲಹೆ ನೀಡಿದರು. ನಾನು ಈ ಹಿಂದೆಯೇ ಪ್ರಿಂಟಿಂಗ್ ಪ್ರೆಸ್ ಹಾಕಿ ಕೈಸುಟ್ಟುಕೊಂಡವನು. ಅಲ್ಲದೆ ನನ್ನದು ವಾರಪತ್ರಿಕೆ. ತಿಂಗಳಿಗೊಂದು ಸಲ ಚೌರ ಮಾಡಿಸಿಕೊಳ್ಳುವವರ್ಯಾರಾದರೂ ಷೇವಿಂಗ್ ಸಲೂನ್ ಇಡುತ್ತಾರಾ? ಮಷೀನುಗಳ ಸಹವಾಸವೇ ಬೇಡ ಅಂತ ತೀರ್ಮಾನಿಸಿದೆ.

ಒಳ್ಳೆಯದೊಂದು ಗಾರ್ಡನ್ ರೆಸ್ಟುರಾಂಟ್ ಮಾಡು. ಪದ್ಮನಾಭನಗರದಲ್ಲಿ ಒಳ್ಳೆಯ ಹೊಟೇಲ್ ಇಲ್ಲ ಅಂತ ಕೆಲವರೆಂದರು. ಇವತ್ತಿಗೂ ನಾನು ಹೆಚ್ಚಾಗಿ ಹೊಟೇಲುಗಳಿಗೆ ಹೋಗುವವನಲ್ಲ. ಅಂಥದರಲ್ಲಿ ಹೊಟೇಲು ನಡೆಸುವುದು ನನ್ನಿಂದ ಆದೀತೆ? ಹಿಟ್ಟು ರುಬ್ಬುವವನು ರಜೆ ಹಾಕಿದರೆ ನಾನೇ ಕುಳಿತು ಹಿಟ್ಟು ರುಬ್ಬಬೇಕಾಗುತ್ತದೆ. ಅದರ ಸಹವಾಸವೇ ಬೇಡ ಅಂದುಕೊಂಡೆ. ಕಡೆಗೆ ಒಳ್ಳೆಯದೊಂದು ಛತ್ರ ಕಟ್ಟಿಸು. ಬೆಂಗಳೂರಿನಲ್ಲಿ ಛತ್ರಗಳಿಗೆ ಡಿಮ್ಯಾಂಡ್ ಇದೆ. ಪದೇ ಪದೆ ಇನ್ವೆಸ್ಟ್ ಮಾಡಬೇಕಿಲ್ಲ. ತಂತಾನೇ ಹಣ ಬರುತ್ತಿರುತ್ತದೆ ಅಂದರು. ಒಳ್ಳೆಯ ಐಡಿಯಾ ಅನ್ನಿಸಿತು. ಒಂದಷ್ಟು ಪಾತ್ರೆ, ಪಡಗ, ಕೊಳದಪ್ಪಲೆ, ಹಂಡೆ ಇಟ್ಟರೆ ಅದನ್ನೂ ಬಾಡಿಗೆಗೆ ಕೊಡಬಹುದು ಅಂದರು. ಸುತ್ತಮುತ್ತಲಿನ ಛತ್ರಗಳ ವ್ಯಾಪಾರ ವ್ಯವಹಾರಗಳ ಬಗ್ಗೆ ಮಾಹಿತಿ ತಂದರು. ಇನ್ನೇನು ಆರ್ಕಿಟೆಕ್ಟ್ ಗೆ ಹೇಳಿ ಒಂದು ಪ್ಲಾನ್ ಮಾಡಿಸಬೇಕು ಅಂದುಕೊಳ್ಳುವಷ್ಟರಲ್ಲೇ ಒಂದು ಪ್ರಶ್ನೆ ಇದಿರಾಯಿತು.

ಯಾವತ್ತೋ ಒಂದು ದಿನ, ನಾನು ಸತ್ತ ಎಷ್ಟೋ ವರ್ಷಕ್ಕೆ ರವಿ ಬೆಳಗೆರೆ ಏನು ಮಾಡುತ್ತಿದ್ದ? ಅಂತ ಯಾರಾದರೂ ಕೇಳಿದರೆ, ಛತ್ರ ಕಟ್ಟಿಸಿ ಹಂಡೆ-ಕೊಳದಪ್ಪಲೆ ಬಾಡಿಗೆಗೆ ಕೊಡುತ್ತಿದ್ದ ಅಂತ ಉತ್ತರ ಬರುತ್ತದೆ. ಅದು ಸರಿಯಾ? ಕೇಳಿಕೊಂಡೆ. ಛತ್ರದ ಐಡಿಯಾ ಬೆಳಗ್ಗೆ ಹೊತ್ತಿಗೆ ಕಸದ ಬುಟ್ಟಿ ಸೇರಿತ್ತು. ಆಮೇಲೆ ಅದೇ ಸೈಟಿನಲ್ಲಿ ಎದ್ದು ನಿಂತಿದ್ದು ಪ್ರಾರ್ಥನಾ ಸ್ಕೂಲ್. ಇವತ್ತು ಅಂಥ ಆರು ಕಟ್ಟಡಗಳಲ್ಲಿ, ಆರು ಸಾವಿರ ಮಕ್ಕಳೊಂದಿಗೆ ಶಾಲೆ ಕಳೆ ಕಳೆಯಾಗಿ ನಡೆಯುತ್ತಿದೆ. ಅದು, ನಾನು ಸತ್ತ ಮೇಲೂ ನಡೆಯುತ್ತದೆ. ಅಂದರೇನರ್ಥ? ನೀನು ಸತ್ತ ಮೇಲೂ ಈ ಸಮಾಜ ನಿನ್ನನ್ನು ಒಬ್ಬ ಮಹಾತ್ಮನನ್ನು ನೆನಪಿಟ್ಟುಕೊಳ್ಳುವಂತೆ ನೆನಪಿಟ್ಟುಕೊಂಡಿರಬೇಕಾ? ಅಂತ ಗೆಳೆಯನೊಬ್ಬ ಕೇಳಿದ.

ಈ ಸಮಾಜ ಕೇವಲ ಮಹಾತ್ಮರನ್ನು ನೆನಪಿಟ್ಟುಕೊಳ್ಳುವುದಿಲ್ಲ. ಆದರೆ ಮನುಷ್ಯನ ರೆಪ್ಯುಟೇಷನ್ ಎಂಬುದಿದೆಯಲ್ಲ? ಅದು ಅವನ ಸಾವಿನ ನಂತರವೂ ಜೀವಂತವಾಗಿರುತ್ತದೆ ಅಂದೆ. ಅದು ನನ್ನ ದೃಢವಾದ ನಂಬಿಕೆಯೂ ಹೌದು. ಒಳ್ಳೆಯದಷ್ಟೇ ಅಲ್ಲ; ಒಳ್ಳೆಯದಲ್ಲದ್ದೂ ಜೀವಂತವಿರುತ್ತದೆ. ಆಫ್ ಕೋರ್ಸ್, ನಮ್ಮದು ಒಂಥರಾ ಕೃತಘ್ನ ದೇಶ, ಕೃತಘ್ನ ಸಮಾಜ. ಯಾರಿಗೆ, ಯಾವುದಕ್ಕೆ, ಎಷ್ಟು ಋಣ-ಸ್ಮರಣೆ ಸಂದಾಯ ಮಾಡಬೇಕೋ ಅಷ್ಟನ್ನು ನಾವು ಮಾಡುವುದಿಲ್ಲ. ಒಬ್ಬ ಸಿನೆಮಾ ನಟ ಸತ್ತು ಹೋದರೆ ನಮ್ಮಲ್ಲಿ ಊರಿಗೆ ಊರು ಹೊತ್ತಿ ಉರಿಯುತ್ತದೆ. ಪುಡಿ ರಾಜಕಾರಣಿಗಳ ಜನ್ಮದಿನಗಳಂದು ಜಾಹಿರಾತುಗಳೊಂದಿಗೆ ಪತ್ರಿಕೆಗಳು ತುಂಬಿ ತುಳುಕುತ್ತವೆ. ಕೆಲಸಕ್ಕೆ ಬಾರದ ಸಂಗತಿಗಳ ಬಗ್ಗೆ ಹಾಗೂ ಉಂಟೆ? ಹೀಗೂ ಉಂಟೆ? ಅಂತ ಟೀವಿ ಕಾರ್ಯಕ್ರಮಗಳು ನಡೆಯುತ್ತವೆ.

ಆದರೆ, ಭಾರತೀಯ ಇಂಗ್ಲಿಷ್ ಲೇಖಕರಲ್ಲಿ ಅಗ್ರಗಣ್ಯರಾದ ಆರ್.ಕೆ. ನಾರಾಯಣ್ ಯಾವತ್ತು ತೀರಿಕೊಂಡರು? ಯಾರಿಗೂ ನೆನಪಿಲ್ಲ. ಅಷ್ಟೇ ಖ್ಯಾತನಾಮರಾದ ಮುಲ್ಕ್ ರಾಜ್ ಆನಂದ್ ಕಡೇ ಪಕ್ಷ ಮುಂಬಯಿಯಲ್ಲಿ ತೀರಿಕೊಂಡಿದ್ದರಿಂದ ಕೊಂಚಮಟ್ಟಿಗೆ ಅದು ಸುದ್ದಿಯಾಯಿತು. ಈಗ ಖ್ಯಾತ ವ್ಯಂಗ್ಯಚಿತ್ರಕಾರರಾದ ಆರ್.ಕೆ.ಲಕ್ಷ್ಮಣ್ ಅವರ ದೇಹ ಸ್ಥಿತಿ ಗಂಭೀರವಾಗಿದೆ. ಪತ್ರಿಕೆಗಳಲ್ಲಿ ಪುಟಗಟ್ಟಲೆ ಬರೆಯುತ್ತಿರುವುದು ಫುಟ್ಬಾಲ್ ಬಗ್ಗೆ.

ಮೊನ್ನೆ ತೀರಿಕೊಂಡ ಲೇಖಕ ಮನೋಹರ ಮಳಗಾಂವಕರ್ ರ ಬಗ್ಗೆಯೇ ಯೋಚಿಸಿ. ಅವರು ಇಂಗ್ಲಿಷಿನಲ್ಲಿ ಬರೆಯತೊಡಗಿದ ಮೊದಲ ಭಾರತೀಯ ತಲೆಮಾರಿನ ಲೇಖರರು. ಕೇವಲ ಕಾಲ್ಪನಿಕ ಸಾಹಿತ್ಯವನ್ನು ಅವರು ಬರೆಯಲಿಲ್ಲ. ಇತಿಹಾಸದಂತಹ ಡ್ರೈ ಸಬ್ಜೆಕ್ಟ್ ಇಟ್ಟುಕೊಂಡು ಅತ್ಯಂತ ರಸವತ್ತಾಗಿ ಬರೆದರು. ಅವರು ಬೆಳೆದದ್ದು ಇಂಗ್ಲಿಷರ ಮಧ್ಯೆ. ಇಂಗ್ಲಿಷರ ಸೈನ್ಯದಲ್ಲಿ ಅಧಿಕಾರಿಯೂ ಆಗಿದ್ದರು. ಇಂಗ್ಲಿಷರಿಂದ ಪ್ರಭಾವಿತರೂ ಆಗಿದ್ದರು. ಹೀಗಾಗಿ ಅವರು ಬರೆದದ್ದು ಭಾರತಕ್ಕಿಂತ ಹೆಚ್ಚಾಗಿ ಇಂಗ್ಲೆಂಡಿನಲ್ಲಿ ಖ್ಯಾತಿ ಪಡೆಯಿತು. ಅಲ್ಲಿಂದ ಅದು ಫ್ರಾನ್ಸ್ ಗೆ, ರೋಮ್ ಗೆ, ಇಟಲಿಗೆ, ಅಮೆರಿಕಕ್ಕೆ ಹರಡಿತು. ನಾವು ಭಾರತೀಯರು ಅವರನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಓದಲೂ ಇಲ್ಲ. ತಮ್ಮ ಸಾಹಿತ್ಯ ದೇಶಾನುದೇಶಗಳಲ್ಲಿ ಖ್ಯಾತಿ ಪಡೆಯುತ್ತಿದ್ದರೆ, ಮನೋಹರ ಮಳಗಾಂವಕರ್ ಅವರು ತಮ್ಮ ಪಾಡಿಗೆ ದಟ್ಟ ಕಾಡಿನ ಮಧ್ಯೆ ಬಂಗಲೆ ಕಟ್ಟಿಕೊಂಡು ಐವತ್ತು ಸುದೀರ್ಘ ವರ್ಷಗಳ ತನಕ ಋಷಿಯಂತೆ ಬದುಕಿದರು. ಬರೆದಂತೆ ಬದುಕಿದರು. ಬಹಳ ಕಾಲದ ತನಕ ಅವರು ಡೆಕ್ಕನ್ ಹೆರಾಲ್ಡ್ ಪತ್ರಿಕೆಗೆ ಅಂಕಣ ಬರೆಯುತ್ತಿದ್ದರಿಂದ, ಅವರು ತೀರಿಕೊಂಡಾಗ ಆ ಪತ್ರಿಕೆ ಒಂದು ಸಂಪಾದಕೀಯ ಪ್ರಕಟಿಸಿತು. ಅಷ್ಟು ಬಿಟ್ಟರೆ, ಒಂದೇ ಒಂದು ಚಾನಲ್ ಇಂಗ್ಲಿಷಿನಲ್ಲಿ, ಹಿಂದಿಯಲ್ಲಿ ಮಳಗಾಂವಕರ್ ರ ಸಾವಿನ ಸುದ್ದಿ ಬಿತ್ತರಿಸಲಿಲ್ಲ. ಅಂಥ ಹಿರಿಯ ಚೇತನಕ್ಕೆ ಸರಿಯಾದ ರೀತಿಯಲ್ಲಿ ನುಡಿ ನಮನ ಸಲ್ಲಿಸಿದ್ದು ಒಂದು ವಿಜಯ ಕರ್ನಾಟಕ ಮಾತ್ರ.

ಬಿಡಿ, ಹೋದವರು ಹೋದರು. ಆದರೆ ಅವರ ಹೆಸರು, ಅವರ ಕೀರ್ತಿ, ಅಗ್ಗಳಿಕೆ, ಹೆಗ್ಗಳಿಕೆ ಅವು ಹೋಗುತ್ತವೆಯಾ? ನಾನು ಕೇವಲ ಲೇಖಕರು, ಖ್ಯಾತನಾಮರು, ರಾಜಕೀರಣಿಗಳು, ನಟರು ಮುಂತಾದವರ ಬಗ್ಗೆಯಷ್ಟೇ ಮಾತನಾಡುತ್ತಿಲ್ಲ. ರೆಪ್ಯುಟೇಷನ್ ಎಂಬುದು ಪ್ರತಿ ಮನುಷ್ಯನೂ ತನ್ನ ವರ್ಷಾಂತರಗಳ ಬದುಕಿನಲ್ಲಿ ಪ್ರಯತ್ನಪೂರ್ವಕವಾಗಿಯೋ, ಸಂಟೈಮ್ಸ್ ಅಪ್ರಯತ್ನಪೂರ್ವಕವಾಗಿಯೋ ಗಳಿಸಿಕೊಳ್ಳುತ್ತ ಹೋಗುತ್ತಾನೆ. ಅದು ಆತನೊಂದಿಗೆ ಬೆಳೆಯುತ್ತದೆ, ಇಳಿಯುತ್ತದೆ, ಕುಸಿಯುತ್ತದೆ. ಇದ್ದಕ್ಕಿದ್ದಂತೆ ಶಿಖರದ ತುದಿ ತಲುಪುತ್ತದೆ. ಒಬ್ಬ ಎಲಿಮೆಂಟರಿ ಶಾಲಾ ಶಿಕ್ಷಕ ಜೀವನ ಪರ್ಯಂತ ಮಕ್ಕಳಿಗೆ ಅದೇ ಪಾಠ ಹೇಳುಕೊಡುತ್ತಿರುತ್ತಾನೆ. ನಾಕೊಂದ್ಲ ನಾಕು ಎಂಬುದು ಬದಲಾಗುವುದೇ ಇಲ್ಲ. ಆದರೆ ಮಕ್ಕಳು ಬದಲಾಗುತ್ತಿರುತ್ತಾರೆ. ಪ್ರತಿ ವರ್ಷ, ಪ್ರತಿ ನಿತ್ಯ, ಪ್ರತಿ ಕ್ಷಣ. ಅವರೊಂದಿಗೆ ಆ ಮೇಷ್ಟು ರಿಪ್ಯುಟೇಷನ್ ಕೂಡ ಬೆಳೆಯುತ್ತ ಹೋಗುತ್ತದೆ. ಅದು ಮೇಷ್ಟ್ರು ಕಲಿಸಿದ ಪಾಠವೆಲ್ಲ ಬಳಕೆಯಾದ ನಂತರವೂ, ಮರೆತು ಹೋದ ನಂತರವೂ, ಕೆಲಸಕ್ಕೆ ಬಾರದಾದ ನಂತರವೂ ಬದುಕಿರುತ್ತದೆ. ಮೇಷ್ಟ್ರು ಎಂಬುದು ನಾನು ಕೊಟ್ಟ ಉದಾಹರಣೆಯಷ್ಟೇ. ಈ ಮಾತು ನಮಗೆಲ್ಲ ಅನ್ವಯಿಸುತ್ತದೆ.

ನಮ್ಮ ನಂತರವೂ ನಮ್ಮ ರೆಪ್ಯುಟೇಷನ್ ಜೀವಂತವಾಗಿರುತ್ತದೆ ಎಂಬ ವಿಷಯ ನಮಗೆ ಮನವರಿಕೆಯಾದರೆ ಸಾಕು. ನಾವು ಇನ್ನಷ್ಟು ಎಚ್ಚರಿಕೆಯಿಂದ ಬದುಕುತ್ತೇವೆ. ಮಾಡುವ ದಿನನಿತ್ಯದ ಕೆಲಸವನ್ನೇ ಹೆಚ್ಚಿನ ಶ್ರದ್ಧೆಯಿಂದ ಮಾಡುತ್ತೇವೆ. ಇವತ್ತಿನದಕ್ಕಿಂತ ಹೆಚ್ಚಿನದೇನನ್ನೋ ಸಾಧಿಸಲು ತೀರ್ಮಾನಿಸುತ್ತೇವೆ. ಪಡುವ ಸುಖಕ್ಕಿಂತ, ಮಾಡುವ ಸಾಧನೆಯ ಕಡೆಗೆ ಹೆಚ್ಚು ಗಮನ ವಹಿಸುತ್ತೇವೆ. ಅಯ್ಯೋ ಬಿಡು, ನಾವು ಸತ್ತ ಮೇಲೆ ಯಾರು ಏನಂದುಕೊಂಡರೇನಂತೆ? ನಮಗೇನು ಗೊತ್ತಾಗುತ್ತದಾ? ಎಂಬ ನಿಲುವು ತಳೆಯಬೇಡಿ. ನಮ್ಮ ನಂತರವೂ ನಮ್ಮ ಬದುಕು ಮಾತನಾಡುತ್ತದೆ. ಅದಕ್ಕೆ ಸುಳ್ಳು ಹೇಳಲು ಬರುವುದಿಲ್ಲ. (ಸ್ನೇಹಸೇತು : ಹಾಯ್ ಬೆಂಗಳೂರು)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
Desktop Bottom Promotion