ಶಾಸಕರೊಬ್ಬರ ತಾಯಿ ಹೀಗೂ ಇದ್ದಾರೆ!
ಹಣ, ಪ್ರತಿಷ್ಠೆಯ ಮದವೇರಿದರೆ ತಾವು ತುಳಿದುಬಂದ ಕಷ್ಟದ ಹಾದಿಯನ್ನು ಮರೆಯುವವರೇ ಸಮಾಜದ ಎಲ್ಲ ಸ್ತರಗಳಲ್ಲಿ ಲಭಿಸುತ್ತಾರೆ. ಇಂಥ ವರ್ಗಕ್ಕೆ ಅಪವಾದವಾಗಿದ್ದಾರೆ ಹೊಸಪೇಟೆ ಶಾಸಕ ಆನಂದ್ ಸಿಂಗ್ ಮತ್ತು ಅವರ ತಾಯಿಯವರು. ಬಳ್ಳಾರಿಯ ರಣರಣ ಬಿಸಿಲು, ಗಣಿಹಣದ ಧೂಳು ಅವರ ವ್ಯಕ್ತಿತ್ವವನ್ನು ಇನ್ನೂ ಮಸುಕು ಮಾಡಿಲ್ಲ.
ಅಂಕಣಕಾರ : ರವಿ ಬೆಳಗೆರೆ
ಇವರನ್ನೆಲ್ಲ ನಾನು ಬಳ್ಳಾರಿ ಜಿಲ್ಲೆಯ ಮಧ್ಯರಾತ್ರಿಯ ಕುಬೇರರು ಅಂತಲೇ ಕರೆಯೋದು, ಜನಾರ್ದನರೆಡ್ಡಿ, ಕರುಣಾಕರರೆಡ್ಡಿ, ಸೋಮಶೇಖರರೆಡ್ಡಿ, ಶ್ರೀರಾಮುಲು, ಸುರೇಶಬಾಬು, ಹೊಸಪೇಟೆಯ ಆನಂದ್ ಸಿಂಗ್, ಸಂಡೂರಿನ ಸಂತೋಷ್ ಲಾಡ್ ಅನಿಲ್ ಲಾಡ್ ! ಎಲ್ಲರೂ ವಯಸ್ಸಿನಲ್ಲಿ ಚಿಕ್ಕವರೇ, ಅತ್ಯುತ್ಸಾಹಿಗಳೇ. ಜನಾರ್ದನರೆಡ್ಡಿಯಂತೂ ಕದನಕ್ಕೆ ನಿಂತು ಬಿಟ್ಟರೆ ಸಮರಸಿಂಹರೆಡ್ಡಿಯೇ !
ಉಳಿದೆಲ್ಲರಂತೆಯೇ ಮೈನ್ಸ್ ಹಣದಿಂದ ರಾಜಕೀಯವಾಗಿ ಪ್ರಾಬಲ್ಯಕ್ಕೆ ಬಂದವರು ಹೊಸಪೇಟೆಯ ಶಾಸಕ ಆನಂದ್ ಸಿಂಗ್. ಅದಕ್ಕೆ ಮುಂಚೆ ಆನಂದ್ ಸಿಂಗ್ ಖಾಸಗಿಯಾಗಿ ಬಸ್ಸುಗಳನ್ನು ನಡೆಸುತ್ತಿದ್ದರು. ಅವರವು ಸುಮಾರು ನೂರು ಬಸ್ಸುಗಳಿದ್ದವು. ಅವರ ತಂದೆಗೆ ಆನಂದ್ ಸಿಂಗ್ ಎರಡನೇ ಪತ್ನಿ ಮಗ. ಹೀಗಾಗಿ ತಂದೆಯ ಆಸ್ತಿ ಪಾಲಾಗಬೇಕು ಎಂಬ ಮಾತು ಬಂದಾಗ, ಆಗಿನ ಕಾಲಕ್ಕೆ ಯಾತಕ್ಕೂ ಕೆಲಸಕ್ಕೆ ಬಾರದಂತಿದ್ದ ವ್ಯಾಸನಕೆರೆ ಮೈನ್ಸನ್ನು ಆನಂದ್ ಸಿಂಗ್ ಪಾಲಿಗೆ ಬಿಟ್ಟುಕೊಡಲಾಯಿತು. ಇವತ್ತು ಆ ವ್ಯಾಸನಕೆರೆ ಮೈನ್ಸಿನಿಂದಲೇ ಕನಕವೃಷ್ಟಿ.
ಹಾಗಂತ ಆನಂದ್ ಸಿಂಗ್ ದುಡ್ಡು ಬಂದ ಮೇಲೆ ಆಹಂಕಾರಿಯಾಗಿಲ್ಲ. ಪಾಸಿಟಿವ್ ಆಗಿ ಬದಲಾಗಿದ್ದಾರೆ. ರಾಜಕಾರಣಕ್ಕೆ ಇಳಿದ ಮೇಲೆ ಲೈಫ್ ಸ್ಟೈಲ್ ಬದಲಾಯಿಸಿಕೊಂಡಿದ್ದಾರೆ. ಬೆಳಗ್ಗೆ ಬೇಗ ಹೋದರೆ ಮನೆಯಲ್ಲೇ ಸಿಗುತ್ತಾರೆ. ಜನರ ಕಷ್ಟಕ್ಕೆ ಸುಖಕ್ಕೆ ಸ್ಪಂದಿಸುತ್ತಾರೆ. ತಮ್ಮ ಕ್ಷೇತ್ರದ ಜನರ ಆರೋಗ್ಯ ಮತ್ತು ವಿದ್ಯಾಭ್ಯಾಸಗಳಿಗಾಗಿ ಹೇರಳವಾಗಿ ಖರ್ಚು ಮಾಡುತ್ತಾರೆ. ತೆರೆದ ಹೃದಯ ಶಸ್ತ್ರಚಿಕಿತ್ಸೆ ಮಾಡಿಸುತ್ತಾರೆ. ಹಬ್ಬಗಳು ಹಿಂದೂಗಳವಿರಲಿ, ಮುಸ್ಲಿಮರವಿರಲಿ ಮನೆಮನೆಗೂ ಅಕ್ಕಿ, ಅನ್ನ, ಬಿರಿಯಾನಿ, ಖರ್ಜೂರ, ಲಕ್ಷಗಟ್ಟಲೆ ಸಂಖ್ಯೆಯಲ್ಲಿ ಸೀರೆಗಳು ಹೀಗೆ ಸಮಸ್ತವನ್ನೂ ತಲುಪಿಸುತ್ತಾರೆ.
ವಿಶೇಷವೆಂದರೆ, ಆನಂದ್ ಸಿಂಗ್ ಅವರ ತಾಯಿ ಖುದ್ದಾಗಿ ಬಡವರ ಮನೆಮನೆಗೂ ಹೋಗಿ ಕಷ್ಟ ಸುಖ ವಿಚಾರಿಸಿ ಬರುತ್ತಾರೆ. ಈ ಇಳಿ ವಯಸ್ಸಿನಲ್ಲಿ ಆ ಹೆಣ್ಣು ಮಗಳು ಹಾಗೆ ಮನೆ ಮನೆ ತಿರುಗುವುದನ್ನು ನೋಡಿದರೆ ಸಂತೋಷವಾಗುತ್ತದೆ. ಬಡತನ ಅನುಭವಿಸಿ ಗೊತ್ತಿರುವ ಹೆಣ್ಣುಮಗಳು ಆಕೆ. ಬಡವರ ಕಷ್ಟ ಅರ್ಥವಾಗುತ್ತದೆ. ಅದನ್ನೇ ಒಯ್ದು ಮಗನಿಗೆ ಮುಟ್ಟಿಸಿದರೂ ಸಾಕು.
"ಒಂದು ಸಣ್ಣ ಕೆಲಸ ಮಾಡಿಸಿಕೋಬೇಕು ಅಂತ ಇದೇ ವಿಧಾನಸೌಧದ ಕಂಬ ತಿರುಗಿಬಿಟ್ಟೆ ಸರ್. ಆವಾಗ ನಮ್ಮನ್ನ ಯಾರೋ ಕೇಳೋರೇ ಇರಲಿಲ್ಲ. ಒಳಗಡೆಗೆ ಹೋಗಬೇಕಂದ್ರೆ ಯಾರದಾದರೂ ಸಹಾಯ ಬೇಕಾಗ್ತಿತ್ತು. ಪರ್ಸನಲ್ ಆಗಿ ಕುಮಾರಸ್ವಾಮಿ ಪರಿಚಯ ಇದ್ರೂ ಆವತ್ತಿನ ಕಾಲಕ್ಕೆ ನೇರವಾಗಿ ಹೋಗಿ ಮುಖ್ಯಮಂತ್ರಿಯ ಛೇಂಬರಿನಲ್ಲಿ ಕಾಣೋಕೆ ಆಗ್ತಿರಲಿಲ್ಲ. ಈಗೇನು ಬಿಡಿ, ಯಾರನ್ನ ಬೇಕಾದರೂ ಕಾಣಬಹುದು. ಜನಕ್ಕೆ ಒಳ್ಳೇದಾಗೋ ಕೆಲಸ ಯಾವುದಿದ್ರೂ ನಿಂತು ಮಾತಾಡಿಸಬಹುದು. ಕಾಲ ಹೆಂಗೆ ಬದಲಾಯ್ತು ನೋಡಿ ಸರ್" ಅಂತ ಗರ್ವವಿಲ್ಲದ ದನಿಯಲ್ಲಿ ಮಾತನಾಡಿದರು ಆನಂದ್ ಸಿಂಗ್. ಇಷ್ಟರ ಮಟ್ಟಿಗಿನ ಸೌಜನ್ಯ ಹಾಗೂ ಕಾಳಜಿಗಳ ಜೊತೆಯಲ್ಲಿ ತಮ್ಮ ಕ್ಷೇತ್ರಕ್ಕೆ ಅಪರೂಪದ್ದೇನನ್ನಾದರೂ ಮಾಡುವ ಇರಾದೆಯೊಂದು ಹುಟ್ಟಿಬಿಟ್ಟರೆ, ಆನಂದ್ ಸಿಂಗ್ ಒಬ್ಬ ರಾಜಕಾರಣಿಯಾಗಿ ದೊಡ್ಡ ಸಾಧನೆ ಮಾಡಿದಂತಾಗುತ್ತದೆ.
(ಸ್ನೇಹಸೇತು : ಹಾಯ್ ಬೆಂಗಳೂರು)












Click it and Unblock the Notifications