ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರವಿ ಬೆಳಗೆರೆ, ಸಂಗೀತಾ ಕಟ್ಟಿ ಇಂಗ್ಲೆಂಡಿಗೆ

By ಬರಹ : ಕಲ್ಪನ
|
Google Oneindia Kannada News

Ravi Belagere to visit UKಹೇಮಂತ ಋತುವಿನ ಶೀತಲ ಗಾಳಿ ಸುಯ್ಯೆಂದು ಬೀಸುವಾಗ ನಸು ಬಿಸಿಲಲ್ಲೂ ಮೈ ನಡುಗುವಷ್ಟು ಚಳಿ. ಬೆಚ್ಚಗೆ ಮನೆಯಲ್ಲಿ ಕುಳಿತು ಬಿಸಿ ಬಿಸಿ ಕಾಫಿ ಹೀರುವಾಸೆ (ಬಿಸಿ ಬಿಸಿ ಮಸಾಲೆ ವಡೆ ಜೊತೆಗೆ). ಈ ಆಂಗ್ಲನಾಡಿನಲ್ಲೋ ಹೊರಗೆ ಓಡಾಡದಷ್ಟು ಕೊರೆಯುವ ಚಳಿ. ಆದ್ರೆ ಈ ಚಳಿಗಾಲ ಬಂತಂದ್ರೆ ಅದೇನೋ ಪುಳಕ, ಅದೇನೋ ತವಕ. ಆಂಗ್ಲನಾಡಿನಲ್ಲಿ ಚಳಿಗಾಲ ಶುರುವಾಯ್ತೆಂದರೆ ನನಗೆ ನೆನಪಾಗೋದು ಕನ್ನಡಿಗರು ಯುಕೆಯ ಕನ್ನಡ ರಾಜ್ಯೋತ್ಸವ. ಬಹಳ ಕಾತರದಿಂದ ಎದುರು ನೋಡುತ್ತಿರುತ್ತೇನೆ ಈ ಸಂದರ್ಭಕ್ಕೆ.

ಕುತೂಹಲ ತಡೆಯಾಲಾಗದೆ ಸಿಕ್ಕಿದವರೆನ್ನೆಲ್ಲ ವಿಚಾರಿಸುತ್ತಿರುತ್ತೇನೆ. ಈ ಸರ್ತಿ ಏನೇನು ಕಾರ್ಯಕ್ರಮಗಳಂತೆ, ಯಾರನ್ನು ಕನ್ನಡ ನಾಡಿನಿಂದ ಕರೆಸುತ್ತಾರಂತೆ, ಹೊಸ ಕಲಾವಿದರು ಯಾರಾದ್ರು ಇದ್ದಾರ? ಎಲ್ಲಿಂದ ಊಟ ಬರತ್ತೆ. ಈ ತರಹ ನೂರೆಂಟು ಪ್ರಶ್ನೆಗಳು. ನನ್ನದೃಷ್ಟಕ್ಕೆ ಕನ್ನಡಿಗರು ಯುಕೆಯ ಕಾರ್ಯಕಾರಿ ಸಮಿತಿಯವರೆ ಸಿಕ್ಕಿಬಿಡೋದೆ. ನಾನು ಬಿಡಲಿಲ್ಲ, ಎಲ್ಲ ಕಕ್ಕಿಸಿಬಿಟ್ಟೆ ನೋಡಿ. ಎಲ್ಲ ಕಾರ್ಯಕ್ರಮದ ವಿವರ ಕೇಳಿದ ಮೇಲೆ ನಾನು ಇನ್ನೊಂದಷ್ಟು ನಡುಗಿಬಿಟ್ಟೆ, ಚಳಿಯಿಂದಲ್ಲ, ಭಯದಿಂದಲೂ ಅಲ್ಲ, ಕಲಾವಿದರ ಪಟ್ಟಿ ನೋಡಿ ಮೈ ರೋಮಾಂಚನವಾಯಿತಷ್ಟೆ. ಯಾಕಂತೀರಾ? ನೀವೆ ನೋಡಿ ಆ ಕಾರ್ಯಕ್ರಮದ ವಿವರವನ್ನ.

* ಕ್ರೈಂ ಡೈರಿ ಖ್ಯಾತಿಯ ರವಿ ಬೆಳಗೆರೆ ಬರ್ತಾರಂತೆ. ಇದೊಂದೆ ಸಾಕಾಗಿತ್ತು ನಾನು ಬೇಸ್ತು ಬೀಳೊದಿಕ್ಕೆ.
* ಸಂಗೀತ ಕಟ್ಟಿಯವರ ಸಂಗೀತಸುಧೆ ಇನ್ನೊಂದು ಆಕರ್ಷಣೆ. ನಾನು ಅರ್ಧ ಉಡುಗಿಹೋದೆ ಸಂತೋಷ ತಡೆಯಲಾಗದೆ.
* 'ಸಿಲ್ಲಿ ಲಲ್ಲಿ' ಧಾರವಾಹಿ ಕೇಳಿದಿರಲ್ವ ನೀವು? ಅದರ ಕಲಾವಿದರಾದ ರೂಪ ಮತ್ತು ಪ್ರಶಾಂತ್ ಕಾರ್ಯಕ್ರಮ ನಿರೂಪಿಸುತ್ತಾರಂತೆ.

ಅವರು 'ಮಿಂಚು', 'ಮುಕ್ತ' ಧಾರಾವಾಹಿಯ ಪಾತ್ರವರ್ಗದಲ್ಲೂ ಇದ್ರಂತೆ. ನಂಗಂತೂ ನಂಬಕ್ಕೇ ಆಗ್ಲಿಲ್ಲ. ಕನ್ನಡ ನಾಡೇ ಆಂಗ್ಲನಾಡಿಗೆ ಇಳಿದುಬಂದ ಹಾಗಾಯ್ತು ಅಥವ ನಾನೇ ಕರ್ನಾಟಕದಲ್ಲಿದಿನೋ ಅನ್ನುಸ್ತು. ಇದೂ ಸಾಲದು ಅನ್ನುವಂತೆ ಪಟ್ಟಾಭಿರಾಮನ್ ಅವರಿಂದ 'Science of Blissful Life' ಎಂಬ ವಿಷಯದ ಮೇಲೆ ಉಪನ್ಯಾಸ ಕೇಳೊ ಭಾಗ್ಯ, ಅದೂ ಕನ್ನಡದಲ್ಲೆ.

ಇಲ್ಲಿಗೆ ಮುಗಿಯಿತು ಅಂತ ತಿಳ್ಕೊಂಡಿದ್ದೆ. ಆದರೆ ಸ್ಥಳೀಯ ಪ್ರತಿಭೆಗಳು ತಾವೇನೂ ಕಡಿಮೆ ಇಲ್ಲದಂತೆ ಭರತನಾಟ್ಯ (ರಶ್ಮಿಯವರಿಂದ), ಕಿರುನಾಟಕ (ರಂಜಿನಿ ತಂಡದವರಿಂದ), ಅರುಣ್ ಕುಕ್ಕೆ ತಂಡದವರಿಂದ ಸಮೂಹಗಾನ, ಚಿಗುರು ಪ್ರತಿಭೆ ಕು.ಅರ್ಪಿತ ಮತ್ತು ಕು.ಜ್ಯೋತಿಯವರಿಂದ ನೃತ್ಯ, ಪ್ರತಿಬಾರಿಯಂತೆ ಎಲ್ಲರ ಮನಗೆಲ್ಲುವ ನೃತ್ಯಬಾಲಿಕೆಯರಾದ ಕು.ಅನು ಹಾಗೂ ಕು.ಸೋನು ಅವರಿಂದ ನೃತ್ಯ ಪ್ರದರ್ಶನವಿದೆಯಂತೆ. ನಂಗೆ ಲೆಕ್ಕನೇ ತಪ್ಪೋಯ್ತು.

ಅಂತೂ ಭರ್ಜರಿ ಕಾರ್ಯಕ್ರಮ, ಪ್ರತಿ ಬಾರಿಯಂತೆ ಭರ್ಜರಿ ಮೃಷ್ಟಾನ್ನ ಭೋಜನ (ಮರ್ತೆ ಬಿಟ್ಟಿದ್ದೆ ಹೇಳಕ್ಕೆ). ಆ ಸಂಭ್ರಮ, ಆ ಸಡಗರ ವರ್ಣಿಸಲಸಾದ್ಯ. ನಾನಂತೂ ಆಕಾಶದಲ್ಲಿ ತೇಲಿ ಹಾರೋದೊಂದು ಬಾಕಿ. ಎಷ್ಟೊಂದು ಕಾರ್ಯಕ್ರಮಗಳು, ಮೈ ನವಿರೇಳಿಸುವ ತಾರಾಗಣ. ನೀವೆಲ್ಲ ತಪ್ಪದೆ ಬರ್ತೀರ ತಾನೆ? ನಂಗಂತೂ ತಡೆಯೋಕೆ ಆಗ್ತಿಲ್ಲ. ಆ ದಿನ ಯಾವಾಗ ಬರುತ್ತೋ ಅಂತ ಚಾತಕ ಪಕ್ಷಿ ತರ ಕಾಯ್ತಾಯಿರ್ತೀನಿ. ಹಾಂ, ಎಲ್ಲಿಗೆ, ಯಾವತ್ತು, ಎಷ್ಟೊತ್ತಿಗೆ ಬರ್ಬೇಕು ಅಂತ ಗೊತ್ತು ತಾನೆ. ಆದರೂ ನಿಮ್ಮ ನೆನಪಿಗೋಸ್ಕರ ಇಲ್ಲಿ ಬರೆದಿರುತ್ತೇನೆ.

ದಿನಾಂಕ : 8 ನವೆಂಬರ್ 2008
ಸಮಯ : ಮಧ್ಯಾಹ್ನ 2.00ರಿಂದ ಸಂಜೆ 6.30
ಭೋಜನ : ಸಂಜೆ 6.30 ರಿಂದ 8.30
ಸ್ಥಳ : ಲೈಟನ್ ಪಾರ್ಕ್ ಸ್ಕೂಲ್, ಶಿನ್ ಫೀಲ್ಡ್ ರಸ್ತೆ, ರೆಡ್ಡಿಂಗ್, RG2 7DE

ಅಂದ ಹಾಗೆ ಕನ್ನಡಿಗರು ಯುಕೆಯವರು ನಮಗೆಲ್ಲ ರೆಡ್ಡಿಂಗ್ ರೈಲು ನಿಲ್ದಾಣದಿಂದ ಕಾರ್ಯಕ್ರಮದ ಸ್ಥಳಕ್ಕೆ ಉಚಿತ ವಾಹನ ವ್ಯವಸ್ಥೆ ಮಾಡಿದ್ದಾರೆ. ಈ ಸೌಲಭ್ಯವನ್ನು ಉಪಯೋಗಿಸಲಿಚ್ಛಿಸುವವರು ಅಪರಾಹ್ನ 1.30ರ ಒಳಗಾಗಿ ರೆಡ್ಡಿಂಗ್ ರೈಲು ನಿಲ್ದಾಣದಲ್ಲಿದ್ದರೆ ಒಳ್ಳೆಯದು. ಆಂಗ್ಲನಾಡಿನ ಕನ್ನಡಿಗರೆಲ್ಲರನ್ನು ನವೆಂಬರ್ 8ರಂದು ರೆಡ್ಡಿಂಗ್ ನಲ್ಲಿ ನೋಡೋಣವೆ?

(ಕನ್ನಡಿಗರು ಯುಕೆ ಪ್ರಕಟಣೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X