Property: ಬೆಂಗಳೂರಿನಲ್ಲಿ ದೇಶದ 2ನೇ ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಂಗೆ ಶಂಕುಸ್ಥಾಪನೆ: ಈ ಭಾಗದ ಭೂಮಿಗೆ ಬಂಗಾರದ ಬೆಲೆ
Bengaluru Property: ಕರ್ನಾಟಕದ ರಾಜಧಾನಿ ಬೆಂಗಳೂರು ಬೆಳೆದಂತೆಲ್ಲಾ ಬೇಡಿಕೆಯ ಆಧಾರದ ಮೇಲೆ ಇಲ್ಲಿನ ಕೆಲವು ಪ್ರದೇಶಗಳಲ್ಲಿ ನಿವೇಶನಗಳು ಕೊಂಡುಕೊಳ್ಳಲಾರದಷ್ಟು ದುಬಾರಿಯಾಗುತ್ತಿವೆ. ಇದೀಗ ಸೂರ್ಯನಗರ ಭಾಗದ ಭೂಮಿಗೂ ಬಂಗಾರದ ಬೆಲೆ ಬರಲಿದ್ದು, ಮಾಲೀಕರು ಕೋಟ್ಯಾಧಿಪತಿಗಳಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
ಸಿಲಿಕಾನ್ ಸಿಟಿ ಬೆಂಗಳೂರು ಮತ್ತೊಂದು ಐತಿಹಾಸಿಕ ಮೈಲಿಗಲ್ಲಿಗೆ ಸಾಕ್ಷಿಯಾಗಿದೆ. ದೇಶದ ಎರಡನೇ ಅತಿದೊಡ್ಡ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕೆ ಭಾನುವಾರ (ಮೇ 23) ಅಧಿಕೃತವಾಗಿ ಚಾಲನೆ ಸಿಕ್ಕಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಮಹತ್ವಾಕಾಂಕ್ಷೆಯ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸುವ ಮೂಲಕ ಈ ಭಾಗದ ಸಮಗ್ರ ಆರ್ಥಿಕ ಕ್ರಾಂತಿಗೆ ಮುನ್ನುಡಿ ಬರೆದಿದ್ದಾರೆ.

ದೇಶದ ಎರಡನೇ ದೊಡ್ಡ ಕ್ರೀಡಾಂಗಣ
ಸೂರ್ಯಗ್ರಾಮದಲ್ಲಿ ಕರ್ನಾಟಕ ಗೃಹ ಮಂಡಳಿ ನಿರ್ಮಿಸಲಿರುವ ಈ ಕ್ರೀಡಾಂಗಣವು ಬರೋಬ್ಬರಿ 80 ಸಾವಿರ ಆಸನಗಳ ಸಾಮರ್ಥ್ಯವನ್ನು ಹೊಂದಿರಲಿದೆ. ಗುಜರಾತ್‌ನ ನರೇಂದ್ರ ಮೋದಿ ಸ್ಟೇಡಿಯಂ ನಂತರ ಇದು ದೇಶದ ಎರಡನೇ ಅತಿದೊಡ್ಡ ಕ್ರೀಡಾಂಗಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ವಿಶೇಷ ಅಂದ್ರೆ ಸರ್ಕಾರದ ಹಣಕಾಸಿನ ನೆರವಿಲ್ಲದೆ ಕೆಎಚ್‌ಬಿ ಸ್ವಂತ ಹಣದಿಂದಲೇ ಈ ಬೃಹತ್ ಯೋಜನೆಯನ್ನು ಕೈಗೆತ್ತಿಕೊಂಡಿದೆ.
ಆರ್ಥಿಕ ಬೆಳವಣಿಗೆ ಮತ್ತು ಭೂಮಿ ಬೆಲೆ ಏರಿಕೆ
ಸ್ಟೇಡಿಯಂ ನಿರ್ಮಾಣ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ ಬೆನ್ನಲ್ಲೇ ಸೂರ್ಯನಗರ ಮತ್ತು ಸುತ್ತಮುತ್ತಲ ಜಿಗಣಿ ಭಾಗದಲ್ಲಿ ಭೂಮಿಗೆ ಬಂಗಾರದ ಬೆಲೆ ಬರಲಿದ ಎನ್ನುವ ಮಾತುಗಳು ಕೇಳಿಬರುತ್ತಿವೆ. ಸ್ಟೇಡಿಯಂ ಬರುವುದರಿಂದ ಪ್ರವಾಸೋದ್ಯಮ ಮತ್ತು ಉದ್ಯೋಗಾವಕಾಶಗಳು ಹೆಚ್ಚಲಿದ್ದು, ಈ ಭಾಗದ ಆಸ್ತಿಗಳ ಬೆಲೆ ಮುಂದಿನ ದಿನಗಳಲ್ಲಿ ಗಗನಕ್ಕೇರುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ ಎನ್ನಲಾಗುತ್ತಿದೆ.
ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?
'ಸೂರ್ಯನಗರದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಕ್ರೀಡಾಂಗಣ ನಿರ್ಮಾಣ ಮಾಡಲಾಗುತ್ತಿದೆ. ಈ ಮೂಲಕ ಕ್ರೀಡೆ, ಪ್ರವಾಸೋದ್ಯಮ, ಉದ್ಯೋಗ ಸೃಷ್ಟಿ, ಆರ್ಥಿಕ ಬೆಳವಣಿಗೆ ಸೇರಿ ಎಲ್ಲಾ ದೃಷ್ಟಿಯಿಂದ ಈ ಭಾಗದ ಸಮಗ್ರ ಅಭಿವೃದ್ಧಿಗೆ ನಾವು ಮುಂದಡಿ ಇಟ್ಟಿದ್ದೇವೆ,' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ವಸತಿ ಇಲಾಖೆ, ಕರ್ನಾಟಕ ಗೃಹ ಮಂಡಳಿ ಜಂಟಿಯಾಗಿ ಸೂರ್ಯಗ್ರಾಮದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಶಂಕುಸ್ಥಾಪನೆ, ಮುಖ್ಯಮಂತ್ರಿಗಳ 'ನಮ್ಮ ಮನೆ' ಯೋಜನೆಗೆ ಚಾಲನೆ, ಸೂರ್ಯಶೈನ್, ಸೂರ್ಯ ಡಿವೈನ್ ವಸತಿ ಸಮುಚ್ಚಯ ಕಾಮಗಾರಿಗಳ ಶಂಕುಸ್ಥಾಪನೆ, ವಸತಿ ಯೋಜನೆಗೆ ಭೂಮಿ ನೀಡಿದ ಭೂ ಮಾಲೀಕರಿಗೆ ಸಾಂಕೇತಿಕ ನಿವೇಶನ ಹಂಚಿಕೆ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
'ಇಲ್ಲಿಯವರೆಗೂ ಕೇವಲ ವಸತಿ ನಿರ್ಮಾಣ ಮಾಡುತ್ತಿದ್ದ ವಸತಿ ಇಲಾಖೆ ಮತ್ತು ಕರ್ನಾಟಕ ಗೃಹ ಮಂಡಳಿ ಈಗ 80 ಸಾವಿರ ಆಸನ ವ್ಯವಸ್ಥೆಯ ಕ್ರೀಡಾಂಗಣ ನಿರ್ಮಾಣಕ್ಕೆ ಮುಂದಾಗಿರುವುದು ಅಭಿವೃದ್ಧಿಯ ದೂರದೃಷ್ಟಿಯಾಗಿದೆ. ಗುಜರಾತ್‌ನಲ್ಲಿರುವ ಕ್ರೀಡಾಂಗಣ 90 ಸಾವಿರ ಆಸನಗಳ ವ್ಯವಸ್ಥೆಯನ್ನು ಹೊಂದಿದೆ. ನಮ್ಮ ರಾಜ್ಯದ್ದು ಎರಡನೇ ದೊಡ್ಡ ಕ್ರೀಡಾಂಗಣವಾಗಲಿದೆ. ಇದರಿಂದ ಪ್ರವಾಸೋದ್ಯಮದ ಪ್ರಗತಿಯ ಜೊತೆಗೆ ಸುತ್ತ ಮುತ್ತಲ ಊರುಗಳ ಆರ್ಥಿಕತೆಯೂ ಹೆಚ್ಚುತ್ತದೆ. ಉದ್ಯೋಗಾವಕಾಶಗಳು ಸೃಷ್ಟಿಯಾಗಲಿದೆ. ಸರ್ಕಾರದ ಆರ್ಥಿಕ ನೆರವಿಲ್ಲದೆ ಕರ್ನಾಟಕ ಗೃಹ ಮಂಡಳಿ ಹಣದಿಂದಲೇ ಕ್ರೀಡಾಂಗಣ ನಿರ್ಮಾಣ ಆಗಲಿದೆ ಎಂದು ಶಿವಲಿಂಗೇಗೌಡರು ಹೇಳಿದ್ದಾರೆ,' ಎಂದು ಸಿಎಂ ಉಲ್ಲೇಖಿಸಿದರು.
'ಖಾಲಿ ಇರುವ ಕರ್ನಾಟಕ ಗೃಹ ಮಂಡಳಿ ನಿವೇಶನಗಳ ಮಾರಾಟದಿಂದ 20ಸಾವಿರ ಕೋಟಿ ಆದಾಯ ಬರುವ ಅಂದಾಜಿದೆ. ನೆತ್ತಿ ಮೇಲೆ ಸೂರು ಇರಬೇಕು ಎನ್ನುವುದು ಪ್ರತಿಯೊಬ್ಬರ ಆಸೆ. ಈಗ ಭೂಮಿ ಬೆಲೆ ಹೆಚ್ಚುತ್ತಿರುವುದರಿಂದ ಬಡ, ಮಧ್ಯಮ ವರ್ಗದವರಿಗೆ ಕೈಗೆಟುಕುವ ದರದಲ್ಲಿ ಕರ್ನಾಟಕ ಗೃಹ ಮಂಡಳಿ ನಿವೇಶನಗಳನ್ನು ನಿರ್ಮಿಸಿ ಒದಗಿಸುತ್ತಿದೆ,' ಎಂದು ಹೇಳಿದರು.
'ಕ್ರೀಡಾಂಗಣಕ್ಕೆ ಬರುವ ಜನರಿಗೆ ಅನುಕೂಲವಾಗುವಂತೆ ಜಿಗಣಿ ಹೋಬಳಿಯ ಪ್ರಮುಖ ಸಂಪರ್ಕ ರಸ್ತೆಗಳ ಅಭಿವೃದ್ಧಿಗೆ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಅಧಿಕಾರಿಗಳು ಈ ಕೆಲಸವನ್ನೂ ಆರಂಭಿಸುತ್ತಾರೆ. ಕ್ರೀಡಾಂಗಣ, ರಸ್ತೆ ಮಾತ್ರವಲ್ಲದೆ ವಸತಿ ಇಲಾಖೆ ಈ ಬಾರಿ ಇಲ್ಲಿಯವರೆಗೂ 3 ಲಕ್ಷಕ್ಕೂ ಹೆಚ್ಚು ಮನೆ ಮತ್ತು ನಿವೇಶನಗಳನ್ನೂ ರಾಜ್ಯದಲ್ಲಿ ನೀಡಲಾಗಿದೆ,' ಎಂದರು. ಈ ಬೃಹತ್ ಕ್ರಿಕೆಟ್ ಸ್ಟೇಡಿಯಂ ಯೋಜನೆಯಿಂದ ಈ ಭಾಗದ ಭೂ ಮಾಲೀಕರಿಗೆ ಬಂಪರ್ ಗಿಫ್ಟ್ ಸಿಕ್ಕಂತಾಗಿದ್ದು, ಮುಂದಿನ ದಿನಗಳಲ್ಲಿ ಇಲ್ಲಿನ ಭೂಮಿಗೆ ಬಂಗಾರ ಬೆಲೆ ಬರುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಹೇಳಬಹುದು.












Click it and Unblock the Notifications