ಬೇಗ ಅಗೋ, ಕೃಷ್ಣನ ಪ್ರೀತಿಯ ಅವಲಕ್ಕಿಗೆ ಇಂಗ್ಲೀಷ್ ಅಲ್ಲಿ ಏನಂತಾರೆ?
ಬೆಳಗಿನ ಉಪಹಾರ ಎಂದ ತಕ್ಷಣ ಅನೇಕರ ನೆನಪಿಗೆ ಬರುವುದು ಬಿಸಿ ಬಿಸಿ ಅವಲಕ್ಕಿ (Poha). ಕೆಲವರಿಗೆ ಇದು ಪಂಚಪ್ರಾಣವಾದರೆ, ಇನ್ನು ಕೆಲವರು ಅವಲಕ್ಕಿ ಎಂದರೆ ಮೂಗು ಮುರಿಯುವುದೂ ಉಂಟು. ಆದರೆ, ನೀವು ಒಪ್ಪಲೇಬೇಕಾದ ಒಂದು ಸತ್ಯವೇನೆಂದರೆ, ಇದು ಸಾಕ್ಷಾತ್ ಶ್ರೀಕೃಷ್ಣನಿಗೆ ಅತ್ಯಂತ ಅಚ್ಚುಮೆಚ್ಚಿನ ತಿನಿಸು. ತನ್ನ ಬಾಲ್ಯದ ಬಡ ಸ್ನೇಹಿತ ಕುಚೇಲ (ಸುಧಾಮ) ಮನೆಗೆ ಬಂದಾಗ, ಆತ ಪ್ರೀತಿಯಿಂದ ತಂದಿದ್ದ ಒಂದು ಹಿಡಿ ಅವಲಕ್ಕಿಯನ್ನು ಕೃಷ್ಣ ಅತ್ಯಂತ ಭಕ್ತಿಯಿಂದ ಸವಿದಿದ್ದ ಕಥೆ ಪುರಾಣದಲ್ಲಿ ಉಲ್ಲೇಖವಾಗಿದೆ. ಇದು ಅನ್ನದ ಮತ್ತೊಂದು ರೂಪವಾದರೂ, ಉಪವಾಸದ ದಿನಗಳಲ್ಲೂ ಇದನ್ನು ಸೇವಿಸಬಹುದು ಎಂಬುದು ಇದರ ಮತ್ತೊಂದು ವಿಶೇಷ.
ಹೌದು, ಬಹುತೇಕ ಹಬ್ಬ-ಹರಿದಿನಗಳಲ್ಲಿ, ಉಪವಾಸದ ಸಂದರ್ಭದಲ್ಲಿ ಅನ್ನವನ್ನು ತ್ಯಜಿಸುವವರು ಅವಲಕ್ಕಿಗೆ ಮೊರೆ ಹೋಗುತ್ತಾರೆ. ಇದು ಹೊಟ್ಟೆ ತುಂಬಿಸುವುದರ ಜೊತೆಗೆ, ಸುಲಭವಾಗಿ ಜೀರ್ಣವಾಗುವ ಶಕ್ತಿಯನ್ನು ಹೊಂದಿದೆ. ಬಡವರಿಂದ ಹಿಡಿದು ಶ್ರೀಮಂತರವರೆಗೆ ಎಲ್ಲರ ಅಡುಗೆಮನೆಯಲ್ಲೂ ಸ್ಥಾನ ಪಡೆದಿರುವ ಅವಲಕ್ಕಿ, ಕೇವಲ 10ರಿಂದ 15ನಿಮಿಷಗಳಲ್ಲಿ ತಯಾರಾಗುವ ಸುಲಭವಾದ ಉಪಹಾರ. ಆದರೆ, ದಿನನಿತ್ಯ ನಾವು ಬಳಸುವ ಈ ಪ್ರೀತಿಯ ತಿನಿಸಿಗೆ ಇಂಗ್ಲೀಷ್‌ನಲ್ಲಿ ಏನಂತಾರೆ? ಇದು ಹೇಗೆ ತಯಾರಾಗುತ್ತದೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ?

ಅವಲಕ್ಕಿಯನ್ನು ಹೇಗೆ ತಯಾರಿಸುತ್ತಾರೆ?
ಅವಲಕ್ಕಿಯನ್ನು ಭತ್ತದಿಂದ ತಯಾರಿಸಲಾಗುತ್ತದೆ. ಇದು ಭೂಮಿಯಿಂದ ನೇರವಾಗಿ ಬೆಳೆಯುವ ಬೆಳೆಯಲ್ಲ. ಮೊದಲು ಭತ್ತವನ್ನು ನೀರಿನಲ್ಲಿ ನೆನೆಸಿ, ನಂತರ ಅದನ್ನು ಸ್ವಲ್ಪ ಹುರಿಯಲಾಗುತ್ತದೆ. ಹೀಗೆ ಹುರಿದ ಭತ್ತವನ್ನು ಹಿಂದಿನ ಕಾಲದವರು ಒರಳಿನಲ್ಲಿ ಕುಟ್ಟುತ್ತಿದ್ದರು. ಆದರೆ ಈಗ ಯಂತ್ರಗಳ ಮೂಲಕ ಚಪ್ಪಟೆಯಾಗಿ ಒತ್ತಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಭತ್ತದ ಮೇಲಿನ ಸಿಪ್ಪೆ ಅಥವಾ ಹೊಟ್ಟು ಬೇರೆಯಾಗಿ, ಒಳಗಿನ ಅಕ್ಕಿ ತೆಳುವಾದ ಪದರದಂತೆ ರೂಪುಗೊಳ್ಳುತ್ತದೆ. ಕಬ್ಬಿಣದ ರೋಲರ್‌ಗಳನ್ನು ಬಳಸಿ ಇದನ್ನು ಒತ್ತುವುದರಿಂದ, ಅವಲಕ್ಕಿಗೆ ಸ್ವಲ್ಪ ಮಟ್ಟಿನ ಕಬ್ಬಿಣಾಂಶವೂ ಸೇರಿಕೊಳ್ಳುತ್ತದೆ.
ಅವಲಕ್ಕಿಗೆ ಇಂಗ್ಲೀಷ್‌ನಲ್ಲಿ ಏನಂತಾರೆ?
ಅವಲಕ್ಕಿಗೆ ಇಂಗ್ಲೀಷ್‌ನಲ್ಲಿ ಮುಖ್ಯವಾಗಿ "ಫ್ಲಾಟನ್ಡ್ ರೈಸ್" (Flattened Rice) ಎಂದು ಕರೆಯುತ್ತಾರೆ. ಭತ್ತವನ್ನು ಚಪ್ಪಟೆಯಾಗಿ ಒತ್ತುವುದರಿಂದ ಈ ಹೆಸರು ಬಂದಿದೆ. ಇದರ ಜೊತೆಗೆ, ಭತ್ತವನ್ನು ಕುಟ್ಟಿ ಮಾಡುವುದರಿಂದ "ಬೀಟನ್ ರೈಸ್" (Beaten Rice) ಮತ್ತು ನೋಡಲು ಸಣ್ಣ ಪದರಗಳಂತೆ ಇರುವುದರಿಂದ "ರೈಸ್ ಫ್ಲೇಕ್ಸ್" ( Rice Flakes) ಎಂಬ ಹೆಸರುಗಳೂ ಇವೆ. ಈ ಮೂರೂ ಹೆಸರುಗಳು ಎಲ್ಲೆಡೆ ಬಳಸಲ್ಪಡುತ್ತವೆ.
ಅವಲಕ್ಕಿಯನ್ನು ಅಕ್ಕಿಯಿಂದಲೇ ತಯಾರಿಸುವುದರಿಂದ, ಇದರ ಮೂಲ ಪದಾರ್ಥವಾದ ಅಕ್ಕಿಯ ವೈಜ್ಞಾನಿಕ ಹೆಸರಾದ "ಒರೈಜಾ ಸಟಿವಾ" (Oryza sativa) ಎಂಬುದನ್ನೇ ಇದಕ್ಕೂ ಅನ್ವಯಿಸಲಾಗುತ್ತದೆ.
ಭಾರತದ ವಿವಿಧ ರಾಜ್ಯಗಳಲ್ಲಿ ಅವಲಕ್ಕಿಯ ಹೆಸರುಗಳು
ಭಾರತ ವೈವಿಧ್ಯಮಯ ಸಂಸ್ಕೃತಿಗಳ ನಾಡು. ಹಾಗಾಗಿ ಭಾಷೆಗನುಗುಣವಾಗಿ ಅವಲಕ್ಕಿಯ ಹೆಸರುಗಳೂ ಬದಲಾಗುತ್ತವೆ:
ಕನ್ನಡ - ಅವಲಕ್ಕಿ (Avalakki)
ಹಿಂದಿ - ಪೋಹಾ, ಪೌವಾ (Poha, Pauwa)
ಮರಾಠಿ - ಪೋಹೆ (Pohe)
ತಮಿಳು - ಅವಲ್ (Aval)
ಮಲಯಾಳಂ - ಅವಲ್ (Aval)
ತೆಲುಗು - ಅಟುಕುಲು (Atukulu)
ಬೆಂಗಾಲಿ - ಚಿರಾ (Chira)
ಗುಜರಾತಿ - ಪೌವಾ (Pauaa)
ಒಡಿಯಾ - ಚೂಡಾ (Chuda)
ನೇಪಾಳಿ - ಚಿಯುರಾ (Chiura)
ಅವಲಕ್ಕಿಯ ಬಗ್ಗೆ ಕೆಲವು ಕುತೂಹಲಕಾರಿ ಸಂಗತಿಗಳು
1. ಅಂತಾರಾಷ್ಟ್ರೀಯ ಪೋಹಾ ದಿನ: ಪ್ರತಿ ವರ್ಷ ಜೂನ್ 7 ರಂದು ವಿಶ್ವದಾದ್ಯಂತ 'ಅಂತಾರಾಷ್ಟ್ರೀಯ ಪೋಹಾ ದಿನ'ವನ್ನು ಆಚರಿಸಲಾಗುತ್ತದೆ.
2. ಜಿಐ ಟ್ಯಾಗ್: ಮಧ್ಯಪ್ರದೇಶದ ಇಂದೋರ್‌ನ 'ಪೋಹಾ ಚೂಡಾ', ಹಾಗೂ ಪಶ್ಚಿಮ ಬಂಗಾಳದ 'ಚಿರಾ' ಭೌಗೋಳಿಕ ಮಾನ್ಯತೆಯನ್ನು (GI tag) ಪಡೆದುಕೊಂಡಿವೆ.
3. ಗ್ಲುಟನ್-ಮುಕ್ತ: ಭತ್ತದ ಮೇಲಿನ ಪದರವನ್ನು ತೆಗೆದು ಮಾಡುವುದರಿಂದ ಇದು ಸಂಪೂರ್ಣವಾಗಿ ಗ್ಲುಟನ್-ಮುಕ್ತವಾಗಿದೆ (Gluten-free).
ಪೌಷ್ಟಿಕಾಂಶದ ವಿವರ (100 ಗ್ರಾಂ ಅವಲಕ್ಕಿಯಲ್ಲಿ)
ಅವಲಕ್ಕಿ ಕೇವಲ ರುಚಿಕರ ಮಾತ್ರವಲ್ಲ, ಆರೋಗ್ಯಕ್ಕೂ ಉತ್ತಮ.
ಕ್ಯಾಲರಿಗಳು - ಸುಮಾರು 360 kcal
ಕಾರ್ಬೋಹೈಡ್ರೇಟ್ಸ್- ಸುಮಾರು 75%
ಪ್ರೋಟೀನ್ - 7 ರಿಂದ 8 ಗ್ರಾಂ
ಕೊಬ್ಬು - ಸುಮಾರು 1 ಗ್ರಾಂ
ಕಬ್ಬಿಣಾಂಶ (Iron) - ಉತ್ತಮ ಪ್ರಮಾಣದಲ್ಲಿದೆ
ವಿಟಮಿನ್ ಬಿ - ಉತ್ತಮ ಪ್ರಮಾಣದಲ್ಲಿದೆ
ಭಾರತದಲ್ಲಿ ಅವಲಕ್ಕಿ ಇಷ್ಟೊಂದು ಜನಪ್ರಿಯ ಏಕೆ?
ಇದು ಬೇಗನೆ ಬೇಯುತ್ತದೆ ಮತ್ತು ಹೊಟ್ಟೆಗೆ ಹಗುರವಾಗಿದ್ದು ಅರಗಿಸಿಕೊಳ್ಳಲು ಸುಲಭ. ಕ್ಯಾಲರಿ ಕಡಿಮೆ ಇರುವುದರಿಂದ ತೂಕ ನಿರ್ವಹಣೆಗೆ ಇದು ಅತ್ಯುತ್ತಮ ಆಯ್ಕೆಯಾಗಿದೆ. ಜೊತೆಗೆ, ಇದು ಕೈಗೆಟುಕುವ ಬೆಲೆಯಲ್ಲಿ ಲಭ್ಯವಿದ್ದು, ಕಂದಾ ಪೋಹಾ, ಬಟಾಟಾ ಪೋಹಾ, ಪುಳಿಯೋಗರೆ ಅವಲಕ್ಕಿ, ಸಿಹಿ ಅವಲಕ್ಕಿ ಹೀಗೆ ಹತ್ತು ಹಲವು ಬಗೆಯಲ್ಲಿ ಇದನ್ನು ಸವಿಯಬಹುದು.
ಆದ್ದರಿಂದ, ಮುಂದಿನ ಬಾರಿ ಮಾರುಕಟ್ಟೆಯಲ್ಲಿ ಫ್ಲಾಟನ್ಡ್ ರೈಸ್, ಬೀಟನ್ ರೈಸ್, ಅಥವಾರೈಸ್ ಫ್ಲೇಕ್ಸ್ ಎಂಬ ಪದ ನೋಡಿದಾಗ ಗೊಂದಲ ಬೇಡ, ಅದು ನಮ್ಮದೇ ನೆಚ್ಚಿನ, ಪ್ರತಿದಿನ ಲಕ್ಷಾಂತರ ಭಾರತೀಯರು ಸವಿಯುವ ಅವಲಕ್ಕಿ.












Click it and Unblock the Notifications