Namo Bharat: ತುಮಕೂರಿಗೆ ಮೆಟ್ರೋ ಬದಲು ನಮೋ ಭಾರತ್ ಕಾರಿಡಾರ್ ನಿರ್ಮಾಣ ಸೂಕ್ತ: ಪಿಸಿ ಮೋಹನ್
ಬೆಂಗಳೂರು: ಬೆಂಗಳೂರಿನಿಂದ ತುಮಕೂರುವರೆಗೆ ಸುಮಾರು 59ಕಿಲೋ ಮೀಟರ್ ಉದ್ದದ ಮಾರ್ಗದಲ್ಲಿ ಮೆಟ್ರೋ ವಿಸ್ತರಣೆಯ ಡಿಪಿಆರ್ ಅನ್ನು 'ಆರ್ವೀ ಕನ್‌ಸ್ಟ್ರಕ್ಷನ್' ಕಂಪನಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಹಿಂದಿನಿಂದಲೂ ಮೆಟ್ರೋ ರೈಲು ವಿಸ್ತರಣೆ ಯೋಜನೆ ಆಕ್ಷೇಪಿಸುತ್ತಿರುವ ಸಂಸದ ಪಿಸಿ ಮೋಹನ್ ಅವರು ನಿಧಾನಗತಿಯ ಮೆಟ್ರೋಗಿಂತ ನಮೋ ಭಾರತ್ ರೈಲು ಸಂಚಾರ ಮಾರ್ಗ ನಿರ್ಮಿಸುವುದು ಉತ್ತಮ ಎಂದು ಅವರು ತಿಳಿಸಿದ್ದಾರೆ.
ಇಂದು ಶನಿವಾರ ಗೃಹ ಸಚಿವ ಜಿ.ಪರಮೇಶ್ವರ ಅವರು ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ತಯಾರಿಸಲಾದ ಮಾದಾವರ-ತುಮಕೂರು ಮೆಟ್ರೋ ವಿಸ್ತರಣಾ ರೈಲು ಯೋಜನೆಯ ವಿಸ್ತೃತ ಯೋಜನಾ ವರದಿ (ಡಿಪಿಆರ್)ಯನ್ನು ಸ್ವೀಕರಿಸಿದರು. ಇದನ್ನು ಶೀಘ್ರವೇ ಸಚಿವ ಸಂಪುಟ ಸಭೆಯಲ್ಲಿಟ್ಟು ತೀರ್ಮಾನಿಸುವುದಾಗಿ ಅವರು ಹೇಳಿದ್ದಾರೆ. ಈ ಬೆಳವಣಿಗೆ ಬೆನ್ನಲ್ಲೆ ತುಮಕೂರಿಗೆ ಮೆಟ್ರೋ ಬದಲು ವೇಗದ 'ಭಾರತದ ಪ್ರಾದೇಶಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆ' (RRTS) ನಮೋ ಭಾರತ್ ರೈಲು ಯೋಜನೆ ಉತ್ತಮ ಆಯ್ಕೆ ಎಂದಿದ್ದಾರೆ.

ಪಿಸಿ ಮೋಹನ್ ಹೀಗೆ ಹೇಳಲು ಕಾರಣವೇನು?
ನಮ್ಮ ಮೆಟ್ರೋ ರೈಲು ತುಮಕೂರುವರೆಗೆ ವಿಸ್ತರಣೆ ಆದರೆ ಈ ಮಾರ್ಗದಲ್ಲಿ ಅನೇಕ ನಿಲ್ದಾಣಗಳು ಬರುತ್ತವೆ. ಪ್ರತಿ ನಿಲ್ದಾಣಕ್ಕೂ ಮೆಟ್ರೋ ನಿಲುಗಡೆ ನೀಡುತ್ತಾ ಸಾಗಿದರೆ ಪ್ರತಿ ಗಂಟೆಗೆ ಸುಮಾರು 60 ಕಿಲೋ ಮೀಟರ್ ಗಿಂತಲೂ ಕಡಿಮೆ ವೇಗದಲ್ಲಿ ಚಲಿಸಬೇಕಾಗುತ್ತದೆ. ಇಷ್ಟು ನಿಧಾನಗತಿಯ ಮೆಟ್ರೋ ಸಂಚಾರದಿಂದ ಬೆಂಗಳೂರು-ತುಮಕೂರು ತ್ವರಿತ ಸಂಪರ್ಕದ ಮೂಲ ಗುರಿ-ಉದ್ದೇಶ ಈಡೇರಿದಂತಾಗುವುದಿಲ್ಲ. ಹೀಗಾಗಿ ಎರಡು ನಗರಗಳಿಗೆ ಕ್ಷಿಪ್ರ ಸೇವೆ ನೀಡಲು ಮೆಟ್ರೋಗಿಂತ ಆರ್ ಆರ್ ಟಿಎಸ್ ರೈಲು ಸಾರಿಗೆ ಉತ್ತಮ ಎಂದು ಸಂಸದ ಪಿಸಿ ಮೋಹನ್ ಅವರು ಪ್ರತಿಪಾದಿಸಿ ಎಕ್ಸ್ ಪೋಸ್ಟ ಮಾಡಿದ್ದಾರೆ.
2025-26 ರ ಆರ್ಥಿಕ ಸಮೀಕ್ಷೆಯ ಪ್ರಕಾರ ನಮೋ ಭಾರತ್ ರೈಲು ಬೆಂಗಳೂರು-ತುಮಕೂರು RRTS ಕಾರಿಡಾರ್ ಈಗಾಗಲೇ ಪ್ರಸ್ತಾಪಿಸಲಾಗಿದೆ. ಬೆಂಗಳೂರು ಮೆಟ್ರೋವನ್ನು ತುಮಕೂರಿಗೆ ವಿಸ್ತರಿಸುವುದು ನಗರ ಸಾರಿಗೆಯ ಮುಖ್ಯ ಉದ್ದೇಶ ಈಡೇರಿಸುವುದಿಲ್ಲ. 60-ಕಿಮೀ ಮೆಟ್ರೋ ಪ್ರಯಾಣ ದುಬಾರಿ ಆಗುತ್ತದೆ. ಅಲ್ಲದೇ ಮಾರ್ಗ ನಿರ್ಮಾಣವು ನಿಧಾನಗತಿಯಲ್ಲಿ ಸಾಗುತ್ತದೆ. ಏಕೆಂದರೆ ಸುಮಾರು ಒಂದೂವರೆ ಎರಡು ಕಿಮೀಗೆ ಒಂದರಂತೆ ಮೆಟ್ರೋ ನಿಲ್ದಾಣ ಸ್ಥಾಪಿಸಬೇಕಾಗುತ್ತದೆ. ಇದಕ್ಕೆ ಹೋಲಿಕೆ ಮಾಡಿದರೆ ನಮೋ ಭಾರತ್ ರಾಪಿಡ್ ರೈಲು ವೇಗವಾಗಿದೆ. ಜೊತೆಗೆ ಪ್ರಯಾಣ ಮೆಟ್ರೋದಷ್ಟು ದುಬಾರಿ ಆಗಿರುವುದಿಲ್ಲ ಎಂದು ಅವರು ವಿವರಿಸಿದ್ದಾರೆ.
ಮೆಟ್ರೋ ದೂರದ ಸಂಪರ್ಕಕ್ಕಾಗಿ ಅಲ್ಲ
ಗಮನಿಸಬೇಕಾದ ಅಂಶವೆಂದರೆ ನಮ್ಮ ಮೆಟ್ರೋ ವ್ಯವಸ್ಥೆಗಳನ್ನು ದೂರದ ಪ್ರಾದೇಶಿಕ ಸಂಪರ್ಕಕ್ಕಾಗಿ ಅಲ್ಲ ಎಂದಿರು ಅವರು, ಮೆಟ್ರೋ ನಗರ ಚಲನಶೀಲತೆಗಾಗಿ ವಿನ್ಯಾಸಗೊಳಿಸಲಾಗಿದೆ. ಬೆಂಗಳೂರಿಗೆ ತುಮಕೂರಿನೊಂದಿಗೆ ವೇಗವಾದ ಉಪನಗರ ಮತ್ತು ಪ್ರಾದೇಶಿಕ ಸಾರಿಗೆ ಏಕೀಕರಣದ ಅಗತ್ಯ ಇದೆ. ನಿಧಾನವಾದ ಅಂತರನಗರ ಪ್ರಯಾಣವನ್ನು ತಲುಪಿಸುವಾಗ ವೆಚ್ಚವನ್ನು ಹೆಚ್ಚಿಸುವ ದುಬಾರಿ 60-ಕಿಮೀ ಮೆಟ್ರೋ ವಿಸ್ತರಣೆ ಸೂಕ್ತ ಅಲ್ಲ ಎಂದು ಅವರು ತಿಳಿಸಿದ್ದಾರೆ.
ಮೆಟ್ರೋ ಗಿಂತ ಆರ್‌ಆರ್‌ಟಿಎಸ್ ಕಾಮಗಾರಿ ಅಗ್ಗ
ಇನ್ನೂ ಅನುಮೋದನೆ ಹಂತದಲ್ಲಿರುವ ತುಮಕೂರು ತನಕ ವಿಸ್ತರಣೆ ನಮ್ಮ ಮೆಟ್ರೋ ಯೋಜನೆಗೆ ಕೆಲವು ನಾಯಕರಿಂದ ಆಕ್ಷೇಪ ವ್ಯಕ್ತವಾಗಿದೆ. ಇನ್ನೂ ಈ ಆರ್‌ಆರ್‌ಟಿಎಸ್ ನಮೋ ಭಾರತ್ ರೈಲು ದೆಹಲಿ-ಗಾಜಿಯಾಬಾದ್ ವರೆಗೆ ಸಂಚಾರ ಮಾಡುತ್ತಿದೆ. ಇದರ ನಿರ್ಮಾಣ ಇತರ ಯೋಜನೆಗಿಂತ ಶೇ. 30 ರಷ್ಟು ಕಡಿಮೆ ಖರ್ಚು ಬರುತ್ತದೆ. ಅಂತರ ಜಿಲ್ಲೆ, ನಗರಗಳಿಗೆ ಸಾರಿಗೆ ಸಂಪರ್ಕಕ್ಕೆ ಈ ಆರ್‌ಆರ್‌ಟಿಎಸ್ ಹೇಳಿ ಮಾಡಿಸಿದ ಸಾರಿಗೆ ಆಗಿದೆ ಎನ್ನಲಾಗುತ್ತಿದೆ.
ಸದ್ಯ ತುಮಕೂರುವರೆಗಿನ ನಮ್ಮ ಮೆಟ್ರೋ ಡಿಪಿಆರ್ ಸ್ವೀಕರಿಸಿರುವ ಸರ್ಕಾರ ಅದರ ಬಗ್ಗೆ ಚರ್ಚಿಸಿ ಒಪ್ಪಿಗೆ ನೀಡುತ್ತಿದ್ದಂತೆ ಕೇಂದ್ರ ಸರ್ಕಾರಕ್ಕೆ ಅನುಮೋದನೆಗಾಗಿ ಕಳುಹಿಸಲಿದೆ. ಎಲ್ಲವು ಅಂದುಕೊಂಡಂತೆ ಆದರೆ ಈ ವರ್ಷವೇ ಕಾಮಗಾರಿ ಆರಂಭವಾದರೂ ಅಚ್ಚರಿ ಇಲ್ಲ.













Click it and Unblock the Notifications