Ebola: ಎಬೋಲಾ ವೈರಸ್‌ಗೆ ಆಕ್ಸ್‌ಫರ್ಡ್ ವಿಜ್ಞಾನಿಗಳಿಂದ ಹೊಸ ಲಸಿಕೆ ಸಿದ್ಧ: ಕೆಲವೇ ತಿಂಗಳಲ್ಲಿ ಕ್ಲಿನಿಕಲ್ ಟ್ರಯಲ್ ಆರಂಭ
ಜಗತ್ತನ್ನೇ ಬೆಚ್ಚಿಬೀಳಿಸುತ್ತಿರುವ ಎಬೋಲಾ (Ebola) ವೈರಸ್‌ನ ಹೊಸ ತುರ್ತು ಪರಿಸ್ಥಿತಿಯನ್ನು ಎದುರಿಸಲು ಬ್ರಿಟನ್ ವಿಜ್ಞಾನಿಗಳು ಮಹತ್ವದ ಹೆಜ್ಜೆಯಿಟ್ಟಿದ್ದಾರೆ. ಕೋವಿಡ್ ಸಾಂಕ್ರಾಮಿಕದ ಸಮಯದಲ್ಲಿ ಯಶಸ್ವಿ ಲಸಿಕೆ ತಯಾರಿಸಿದ್ದ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ವಿಜ್ಞಾನಿಗಳ ತಂಡವು ಇದೀಗ ಕೇವಲ 3 ತಿಂಗಳುಗಳಲ್ಲಿ ಮಾನವ ಪ್ರಯೋಗಕ್ಕೆ (Clinical Trials) ಸಿದ್ಧವಾಗಬಲ್ಲ ಹೊಸ ಎಬೋಲಾ ಲಸಿಕೆಯನ್ನು ಅಭಿವೃದ್ಧಿಪಡಿಸುತ್ತಿದೆ.
ಸದ್ಯ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿ ಎಬೋಲಾ ತೀವ್ರವಾಗಿ ಹರಡುತ್ತಿದ್ದು, ಈಗಾಗಲೇ 750ಕ್ಕೂ ಹೆಚ್ಚು ಶಂಕಿತ ಪ್ರಕರಣಗಳು ವರದಿಯಾಗಿವೆ. 177ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ವಿಜ್ಞಾನಿಗಳು ಯುದ್ಧೋಪಾದಿಯಲ್ಲಿ ಲಸಿಕೆ ಸಂಶೋಧನೆಯಲ್ಲಿ ತೊಡಗಿದ್ದಾರೆ. ಪ್ರಸ್ತುತ ಕಾಂಗೋದಲ್ಲಿ ಹರಡುತ್ತಿರುವುದು ಎಬೋಲಾ ವೈರಸ್‌ನ ಅತ್ಯಂತ ಅಪರೂಪದ ತಳಿಯಾದ 'ಬುಂಡಿಬುಗ್ಯೋ' (Bundibugyo). ದುರಂತವೆಂದರೆ ಈ ತಳಿಗೆ ಈವರೆಗೆ ಯಾವುದೇ ಪ್ರಮಾಣೀಕೃತ ಲಸಿಕೆ ಲಭ್ಯವಿಲ್ಲ. ಈ ವೈರಸ್ ಎಷ್ಟು ಭೀಕರವಾಗಿದೆಯೆಂದರೆ ಸೋಂಕಿಗೆ ಒಳಗಾದವರಲ್ಲಿ ಮೂರನೇ ಒಂದು ಭಾಗದಷ್ಟು ಜನರನ್ನು ಇದು ಬಲಿ ತೆಗೆದುಕೊಳ್ಳುತ್ತದೆ.

ವಿಶ್ವ ಆರೋಗ್ಯ ಸಂಸ್ಥೆಯು (WHO) ಕಾಂಗೋದಲ್ಲಿ ಎಬೋಲಾ ಮುನ್ನೆಚ್ಚರಿಕೆ ಮಟ್ಟವನ್ನು 'ಹೆಚ್ಚು' ಇರಬಾರದು ಎಂದು 'ಅತ್ಯಂತ ಹೆಚ್ಚು' (Very High) ಮಟ್ಟಕ್ಕೆ ಏರಿಸಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಇದರ ಅಪಾಯ ಸದ್ಯಕ್ಕೆ ಕಡಿಮೆ ಇದ್ದರೂ, ನೆರೆಹೊರೆಯ ರಾಷ್ಟ್ರಗಳಲ್ಲಿ ಹರಡುವ ಭೀತಿ ಹೆಚ್ಚಾಗಿದೆ. ಬ್ರಿಟನ್ ವಿಜ್ಞಾನಿಗಳು ಈ ಹೊಸ ಲಸಿಕೆಯನ್ನು ತಯಾರಿಸಲು ಕೋವಿಡ್ ಸಮಯದಲ್ಲಿ ಅಳವಡಿಸಿಕೊಂಡಿದ್ದ 'ChAdOx1' ತಂತ್ರಜ್ಞಾನವನ್ನೇ ಬಳಸುತ್ತಿದ್ದಾರೆ. ಇದು ಅತ್ಯಂತ ಸುಲಭವಾಗಿ ಮತ್ತು ವೇಗವಾಗಿ ಮಾರ್ಪಾಡು ಮಾಡಬಹುದಾದ ತಂತ್ರಜ್ಞಾನವಾಗಿದೆ.
ಲಸಿಕೆ ಕೆಲಸ ಮಾಡುವುದು ಹೇಗೆ?
ಕೋವಿಡ್ ಸಮಯದಲ್ಲಿ ಈ ತಂತ್ರಜ್ಞಾನಕ್ಕೆ ಕರೋನಾ ವೈರಸ್‌ನ ಜೆನೆಟಿಕ್ ಕೋಡ್ ನೀಡಲಾಗಿತ್ತು. ಆದರೆ ಈ ಬಾರಿ ಅದಕ್ಕೆ 'ಬುಂಡಿಬುಗ್ಯೋ' ಎಬೋಲಾ ತಳಿಯ ಜೆನೆಟಿಕ್ ಕೋಡ್ ಅನ್ನು ಅಳವಡಿಸಲಾಗಿದೆ. ಚಿಂಪಾಂಜಿಗಳಿಗೆ ಬರುವ ಸಾಮಾನ್ಯ ಶೀತದ ವೈರಸ್ ಅನ್ನು ತಳಿಯಾಗಿ ಮಾರ್ಪಡಿಸಿ, ಅದನ್ನು ಮನುಷ್ಯರಿಗೆ ಸುರಕ್ಷಿತವಾಗುವಂತೆ ಮಾಡಲಾಗುತ್ತದೆ. ಈ ಮಾರ್ಪಡಿಸಿದ ವೈರಸ್ ದೇಹದ ಜೀವಕೋಶಗಳಿಗೆ ಎಬೋಲಾ ವೈರಸ್ ಅನ್ನು ಗುರುತಿಸಿ, ಅದರ ವಿರುದ್ಧ ಹೋರಾಡುವಂತೆ ಸೂಚನೆ ನೀಡುತ್ತದೆ.
ಸದ್ಯ ಅಭಿವೃದ್ಧಿಪಡಿಸುತ್ತಿರುವ ಈ ಲಸಿಕೆ ಎಷ್ಟು ಪರಿಣಾಮಕಾರಿ ಎಂಬುದನ್ನು ಸಾಬೀತುಪಡಿಸಲು ಇನ್ನೂ ಪ್ರಾಣಿಗಳ ಮೇಲಿನ ಸಂಶೋಧನೆ ಹಾಗೂ ಮನುಷ್ಯರ ಮೇಲಿನ ಕ್ಲಿನಿಕಲ್ ಟ್ರಯಲ್ಸ್ ಬಾಕಿ ಇವೆ. ಪರಿಸ್ಥಿತಿ ಕೈಮೀರಿ ಹೋಗುವ ಮುನ್ನವೇ ಪ್ರಾಯೋಗಿಕ ಲಸಿಕೆಯನ್ನು ಸಿದ್ಧವಾಗಿಟ್ಟುಕೊಳ್ಳುವುದು ವಿಜ್ಞಾನಿಗಳ ಗುರಿಯಾಗಿದೆ. ಇದೇ ತಳಿಗೆ ಸಂಬಂಧಿಸಿದಂತೆ ಮತ್ತೊಂದು ಪ್ರಾಯೋಗಿಕ ಲಸಿಕೆಯೂ ಅಭಿವೃದ್ಧಿಯ ಹಂತದಲ್ಲಿದೆ. ಆದರೆ ಅದರ ಪರೀಕ್ಷಾರ್ಥ ಡೋಸ್‌ಗಳು ಸಿದ್ಧವಾಗಲು ಕನಿಷ್ಠ 9 ತಿಂಗಳು ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಹಾಗಾಗಿ ಬ್ರಿಟನ್ ವಿಜ್ಞಾನಿಗಳ ಈ ವೇಗದ ಸಂಶೋಧನೆ ಜಾಗತಿಕ ಆರೋಗ್ಯ ಕ್ಷೇತ್ರದಲ್ಲಿ ಹೊಸ ಭರವಸೆ ಮೂಡಿಸಿದೆ.
ಆತಂಕ ಬೇಡ ಎಂದ ಸರ್ಕಾರ
ಇನ್ನು ಕರ್ನಾಟಕದಲ್ಲಿ ಎಬೋಲಾ ಕುರಿತು ಸಾರ್ವಜನಿಕರು ಆತಂಕಕ್ಕೆ ಒಳಗಾಗಬೇಡಿ, ಜಾಗೃತಿ ಇರಲಿ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಆರೋಗ್ಯ ಇಲಾಖೆ ಅಧಿಕಾರಿಗಳು ಕೇಂದ್ರದ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ. ದೇಶದಲ್ಲಿ ಇನ್ನೂ ಪ್ರಕರಣ ಪತ್ತೆಯಾಗಿಲ್ಲ, ಅಕ್ಕ ಪಕ್ಕದ ದೇಶಗಳಲ್ಲಿಯೂ ಎಬೋಲಾ ಪ್ರಕರಣ ದಾಖಲಾಗಿಲ್ಲ. ಆದರೂ ನಾವು ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಂಡಿದ್ದೇವೆ ಎಂದಿದ್ದಾರೆ.













Click it and Unblock the Notifications