ನಿರುದ್ಯೋಗಿಗಳಿಗೆ ಅಮೆರಿಕನ್ ಇಂಗ್ಲಿಷ್ ಟ್ರೈನಿಂಗ್ ನೀಡಿ ಕೋಟಿಗಟ್ಟಲೆ ಲೂಟಿ, ಬೆಂಗಳೂರಿನಲ್ಲಿ ನಕಲಿ ಕಾಲ್ ಸೆಂಟರ್‌ಗಳ ಜಾಲ ಪತ್ತೆ
ಬೆಂಗಳೂರು: ಪ್ರತಿಷ್ಠಿತ ಅಮೆರಿಕನ್ ಅಕೌಂಟಿಂಗ್ ಸಂಸ್ಥೆಯ ಸಿಬ್ಬಂದಿಯಂತೆ ನಟಿಸಿ, ಯುಎಸ್ ಪ್ರಜೆಗಳಿಗೆ ಕೋಟ್ಯಂತರ ರೂಪಾಯಿ ವಂಚಿಸುತ್ತಿದ್ದ ಬೃಹತ್ ಸೈಬರ್ ಜಾಲವನ್ನು ಕರ್ನಾಟಕ ರಾಜ್ಯ ಸೈಬರ್ ಕಮಾಂಡ್ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ಸಿಲಿಕಾನ್ ಸಿಟಿಯ ನಾಲ್ಕು ಪ್ರಮುಖ ಕಡೆಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿರುವ ಪೊಲೀಸರು, ಈ ಅಕ್ರಮ ಕಾಲ್ ಸೆಂಟರ್‌ಗಳನ್ನು ಬಯಲಿಗೆಳೆದಿದ್ದಾರೆ. ಅಮೆರಿಕನ್ನರನ್ನೇ ಟಾರ್ಗೆಟ್ ಮಾಡಿ ನಡೆಸುತ್ತಿದ್ದ ಈ ಹೈಟೆಕ್ ಸೈಬರ್ ವಂಚನೆಯ ಜಾಲದ ವಿವರ ಇಲ್ಲಿದೆ.
ದಾಳಿ ನಡೆದಿದ್ದು ಎಲ್ಲೆಲ್ಲಿ?
ಖಚಿತ ಮಾಹಿತಿ ಆಧರಿಸಿ ಆಗ್ನೇಯ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆ ಹಾಗೂ ವಿಶೇಷ ಸೈಬರ್ ಸೆಲ್ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿದ್ದರು. ಬೆಂಗಳೂರಿನ ಐಟಿ ಹಬ್‌ಗಳಾದ ಕೋರಮಂಗಲದ ಎರಡು ಕಡೆ, ಎಚ್‌ಎಸ್‌ಆರ್ ಲೇಔಟ್ ಮತ್ತು ಚೂಡಸಂದ್ರದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ನಾಲ್ಕು ಕಚೇರಿಗಳ ಮೇಲೆ ದಾಳಿ ಮಾಡಿ, ಸೀಜ್ ಮಾಡಿದ್ದಾರೆ.

ಅಮೆರಿಕದ ಪ್ರಸಿದ್ಧ ಅಕೌಂಟಿಂಗ್ ಸಾಫ್ಟ್‌ವೇರ್ ಸಂಸ್ಥೆಯಾದ "ಕ್ವಿಕ್ ಬುಕ್ಸ್" (QuickBooks) ಪ್ರತಿನಿಧಿಗಳಂತೆ ಆರೋಪಿಗಳು ಪೋಸ್ ನೀಡುತ್ತಿದ್ದರು. ಯುಎಸ್ ಪ್ರಜೆಗಳಿಗೆ ನಕಲಿ ತೆರಿಗೆ ಸಲಹೆ, ಸಾಫ್ಟ್‌ವೇರ್ ಲೈಸೆನ್ಸ್ ನವೀಕರಣ ಮತ್ತು ಕೌಂಟರ್‌ಫೀಟ್ ಲೈಸೆನ್ಸ್ ಕೀಗಳನ್ನು ನೀಡುವುದಾಗಿ ನಂಬಿಸುತ್ತಿದ್ದರು. ನಂಬಿಕೆ ಗಳಿಸಲು ಅಮೆರಿಕನ್ ಅಧಿಕಾರಿಗಳ ಹೆಸರನ್ನೇ ಹೋಲುವ ನಕಲಿ ಐಡಿಗಳನ್ನು ಬಳಸುತ್ತಿದ್ದರು. ಸರ್ವಿಸ್ ಚಾರ್ಜ್ ಹೆಸರಿನಲ್ಲಿ ಸಂತ್ರಸ್ತರಿಂದ ಭಾರಿ ಮೊತ್ತದ ಹಣವನ್ನು ಲೂಟಿ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಬೆಂಗಳೂರಿನ ಯುವಕರಿಗೆ ಟ್ರೈನಿಂಗ್
ಈ ವಂಚನೆ ಜಾಲವನ್ನು ನಡೆಸಲು ಆರೋಪಿಗಳು ಬೆಂಗಳೂರು ಸೇರಿದಂತೆ ವಿವಿಧ ರಾಜ್ಯಗಳ ನಿರುದ್ಯೋಗಿ ಯುವಕ-ಯುವತಿಯರನ್ನು ಕೆಲಸಕ್ಕೆ ಸೇರಿಸಿಕೊಂಡಿದ್ದರು. ಒಟ್ಟು 120ಕ್ಕೂ ಹೆಚ್ಚು ನೌಕರರು ಇಲ್ಲಿ ಕೆಲಸ ಮಾಡುತ್ತಿದ್ದು. ಅವರಿಗೆ ಉಚಿತ ವಸತಿ ಹಾಗೂ ಆಕರ್ಷಕ ಸಂಬಳ ನೀಡಲಾಗುತ್ತಿತ್ತು. ಅಮೆರಿಕದ ಗ್ರಾಹಕರಿಗೆ ಅನುಮಾನ ಬಾರದಂತೆ ಮಾತನಾಡಲು ಈ ನೌಕರರಿಗೆ ವಿಶೇಷವಾದ 'ಯುಎಸ್ ಆಕ್ಸೆಂಟ್' ತರಬೇತಿಯೂ ನೀಡಲಾಗಿತ್ತು. ಗ್ರಾಹಕರನ್ನು ಬುಟ್ಟಿಗೆ ಹಾಕಿಕೊಳ್ಳಲು ಮೊದಲೇ ಸಿದ್ಧಪಡಿಸಿದ ಸ್ಕ್ರಿಪ್ಟ್‌ಗಳನ್ನು ನೀಡಲಾಗುತ್ತಿತ್ತು ಎನ್ನಲಾಗಿದೆ.
ದೆಹಲಿ, ಯುಪಿ ಮೂಲದ ಕಿಂಗ್‌ಪಿನ್‌ಗಳ ಬಂಧನ
ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮೂಲದ ಪ್ರಶಾಂತ್ ಮತ್ತು ಉತ್ತರ ಪ್ರದೇಶದ ಆಕಾಶ್ ಎಂಬ ಇಬ್ಬರು ಮುಖ್ಯ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿ ಪ್ರಣಬ್ ಮೊಹಂತಿ ಅವರ ಪ್ರಕಾರ, ಆರೋಪಿಗಳು 'ರೆಕನಿಂಗ್ ಸರ್ವೀಸ್ ಪ್ರೈವೇಟ್ ಲಿಮಿಟೆಡ್' ಹಾಗೂ 'ಸರ್ಕಲ್ ಸ್ಕ್ವೇರ್ ಎಲ್‌ಎಲ್‌ಸಿ' ಹೆಸರಿನಲ್ಲಿ ಅಧಿಕೃತ ಕಂಪನಿಗಳನ್ನು ನೋಂದಾಯಿಸಿಕೊಂಡು, ಅದರ ಹೆಸರಿನಲ್ಲಿ ಈ ಕರಾಳ ದಂಧೆ ನಡೆಸುತ್ತಿದ್ದರು. ಹಣವನ್ನು ವರ್ಗಾಯಿಸಲು ಹತ್ತಾರು ಶೆಲ್ ಕಂಪನಿಗಳನ್ನು ಸೃಷ್ಟಿಸಿದ್ದರು ಎಂದು ಪತ್ತೆ ಹಚ್ಚಿದ್ದಾರೆ.
ಕೆಲವು ತಿಂಗಳಲ್ಲೇ 40 ಕೋಟಿ ವಹಿವಾಟು
ಪ್ರಾಥಮಿಕ ತನಿಖೆಯ ಪ್ರಕಾರ, ಈ ವಂಚನೆ ಜಾಲವು ಕಳೆದ ನಾಲ್ಕು ವರ್ಷಗಳಿಂದ ಸದ್ದಿಲ್ಲದೆ ಸಕ್ರಿಯವಾಗಿತ್ತು. ಕೇವಲ ಕಳೆದ ಕೆಲವು ತಿಂಗಳಲ್ಲೇ ಬರೋಬ್ಬರಿ 40 ಕೋಟಿ ರೂಪಾಯಿಗೂ ಅಧಿಕ ಹಣದ ಅಕ್ರಮ ವಹಿವಾಟು ನಡೆದಿರುವುದು ಬೆಳಕಿಗೆ ಬಂದಿದೆ. ದಾಳಿಯ ವೇಳೆ ವಂಚನೆಗೆ ಬಳಸುತ್ತಿದ್ದ 44 ಎಸ್‌ಎಸ್‌ಡಿ (SSDs), 9 ಸಿಪಿಯು (CPUs), 2 ಲ್ಯಾಪ್‌ಟಾಪ್, 2 ಮೊಬೈಲ್ ಫೋನ್‌ಗಳು ಹಾಗೂ ಗ್ರಾಹಕರೊಂದಿಗೆ ಮಾತನಾಡಲು ಬಳಸುತ್ತಿದ್ದ ರೆಡಿಮೇಡ್ ಸ್ಕ್ರಿಪ್ಟ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದು ಅಂತರರಾಷ್ಟ್ರೀಯ ಮಟ್ಟದ ವಂಚನೆ ಆಗಿರುವುದರಿಂದ, ಮುಂದಿನ ತನಿಖೆಗಾಗಿ ಕರ್ನಾಟಕ ಸೈಬರ್ ಕಮಾಂಡ್ ಅಧಿಕಾರಿಗಳು ಇಂಟರ್‌ಪೋಲ್ ಮೂಲಕ ಅಮೆರಿಕದ ತನಿಖಾ ಸಂಸ್ಥೆಗಳನ್ನು ಸಂಪರ್ಕಿಸಲು ಸಿದ್ಧತೆ ನಡೆಸಿದ್ದಾರೆ.












Click it and Unblock the Notifications