ಬೇರೆಯಾದವರು ಆಲವಾಗಿ ಬೆಳೆಯುವುದೇ ಹಾಗೆ!

Posted By:
Subscribe to Oneindia Kannada

Branch out and create your own world"ಇನ್ನು ಬೇರೆಯಾಗಬೇಕು" ಅಂತ ಅನ್ನಿಸಿದ ಮೇಲೆ ಅವರೊಂದಿಗೆ ಇರುವುದಾಗುವುದಿಲ್ಲ. ಈ ಮಾತು ನಾನು ದಾಂಪತ್ಯಕ್ಕೆ ಸಂಬಂಧಿಸಿದಂತೆ, ಗೆಳೆತನಕ್ಕೆ ಸಂಬಂಧಿಸಿದಂತೆ ಹೇಳುತ್ತಿಲ್ಲ. ದಾಂಪತ್ಯದಲ್ಲೂ ಹೀಗೆ ಅನ್ನಿಸುವುದುಂಟು, ಪೀಡೆಯಂಥ ಗಂಡ, ಪರಮ ಯಡವಟ್ಟು ಹೆಂಡತಿ, ದಿನನಿತ್ಯದ ಜಗಳಗಳು, ಆಗದ ಹೊಂದಾಣಿಕೆ, ಅನುಮಾನಗಳು-ಇಂಥವು ಅತಿರೇಕಕ್ಕೆ ಹೋದಾಗ ಇನ್ನು ಬೇರೆಯಾಗಿಬಿಡಬೇಕು ಅನ್ನಿಸುವುದು ಸಹಜ. ಆದರೆ ಅಲ್ಲಿ ಮಕ್ಕಳು, ಬಿಟ್ಟರೂ ಬಿಡಲಾಗದ ನಾರಿನಂತೆ ಇಬ್ಬರ ಮಧ್ಯೆ ಅಂಟಿಕೊಂಡಿರುತ್ತಾರೆ. ಸಮಾಜ ಏನೆಂದುಕೊಳ್ಳುತ್ತದೋ ಎಂಬ ಅಳುಕು ತಡೆಯುತ್ತಿರುತ್ತದೆ. ಒಬ್ಬರೇ ಬದುಕಬಲ್ಲೆವಾ ಎಂಬ ಆಯಕಟ್ಟಿನ ಪ್ರಶ್ನೆ ಕೈ ಜಗ್ಗುತ್ತಿರುತ್ತದೆ. ಗೆಳೆತನದಲ್ಲೂ ಇಂಥವೇ ಪ್ರಶ್ನೆಗಳು ಇದಿರಾಗುತ್ತವೆ.

ಅಂಕಣಕಾರ: ರವಿ ಬೆಳೆಗೆರೆ

ಆದರೆ ನಾನು 'ಬೇರೆಯಾಗಬೇಕು' ಎಂಬುದನ್ನು branch out ಆಗಬೇಕು ಎಂಬರ್ಥದಲ್ಲಿ ಬಳಸುತ್ತಿದ್ದೇನೆ. ಒಬ್ಬ ಅಕ್ಕಸಾಲಿಗ ಅಥವಾ ಬಡಗಿ ಅಥವಾ ಒಬ್ಬ ಕಮ್ಮಾರ ಒಬ್ಬ ಹುಡುಗನನ್ನು ತನ್ನ ಅಸಿಸ್ಟೆಂಟ್ ಆಗಿ ಆಯ್ಕೆ ಮಾಡಿಕೊಳ್ಳುತ್ತಾನೆ. ಒಂದರ್ಥದಲ್ಲಿ ಅದು ಶಿಷ್ಯ ಸ್ವೀಕಾರ. 'ನಿನಗೆ ಕೆಲಸ ಕಲಿಯಬೇಕಿದೆ: ನನಗೊಬ್ಬ ಸಹಾಯ ಬೇಕಿದೆ' ಎನ್ನುವಂಥ ಒಪ್ಪಂದ. ಹಾಗೆ ತೆಗೆದುಕೊಂಡ ಹುಡುಗನನ್ನು ಗುರುವು train up ಮಾಡುತ್ತ ಹೋಗುತ್ತಾನೆ. ತಿದ್ದುವಿಕೆ, ಸಿಡಿಮಿಡಿ, ಬೈಗುಳ, ಒದೆ ಇವೆಲ್ಲ ಇದ್ದಿದ್ದೇ. ಹಾಗೆ ಒಟ್ಟಿಗೇ ಒಂದಷ್ಟು ವರ್ಷ ಜೊತೆಗಿದ್ದು ಕೆಲಸ ಮಾಡಿದ ಮೇಲೆ ಇನ್ನು ಇವನಿಗೆ ಕಲಿಸುವಂಥ್ದ್ದು ಏನೂ ಇಲ್ಲ ಅಂತ ಗುರುವಿಗೆ, ಈ ಗುರುವಿನಿಂದ ಇನ್ನು ಕಲಿಯುವಂಥದ್ದು ಏನೂ ಉಳಿದಿಲ್ಲ ಅಂತ ಶಿಷ್ಯನಿಗೆ Ofcourse, ಗೌರವಪೂರ್ವಕವಾಗಿಯೇ ಅನ್ನಿಸುತ್ತದೆ. ಹಾಗೆ ಅನ್ನಿಸುತ್ತಿದ್ದಂತೆ ಶಿಷ್ಯ ತನ್ನ ಗುರುವಿನಿಂದ ಹೊರನಡೆದುಬಿಡಬೇಕು. ನಡೆಯದೆ ಹೋದರೆ ಗುರುವಿನೊಂದಿಗೆ ಶಿಷ್ಯನೂ ನಿಂತ ನೀರಾಗಿ ಬಿಡುತ್ತಾನೆ.

ಒಮ್ಮೆ separate ಆದ ಮೇಲೆಯೇ ನಿಜವಾದ ಪರೀಕ್ಷೆ ಆರಂಭವಾಗೋದು. ಆಗುವ ತನಕ ಬೆನ್ನ ಹಿಂದೆ ಗುರುವಿದ್ದೇ ಇರುತ್ತಾನೆ. ತಾನು ಹೇಳಿಕೊಟ್ಟಂತೆಯೇ ಮಾಡಬೇಕು ಎಂಬ ನಿಯಮ. 'ಏಯ್, ಅಲ್ಲಿ ತಪ್ಪಾಯಿತು ನೋಡು' ಎಂಬ ಗದರಿಕೆ. ಎಷ್ಟೋ ಸಲ ತಪ್ಪು ಮಾಡುವುದಕ್ಕೆ ಅವಕಾಶವೇ ಕೊಡದಂತಹ ಕಣ್ಗಾವಲು. ಈ ಕಣ್ಗಾವಲು ಎಂಥ ವಿಪರೀತಕ್ಕೆ ಹೋಗುತ್ತದೆಂದರೆ, ತಪ್ಪು ಮಾಡುವ ಮಾತು ಹಾಗಿರಲಿ: ಮಾಡುವ ಕೆಲಸವನ್ನು ಕ್ರಿಯೇಟಿವ್ ಆಗಿಯೂ ಮಾಡಲಿಕ್ಕೆ ಗುರುವು ಬಿಡುವುದಿಲ್ಲ.

ಆದರೆ ಗುರುವಿನಿಂದ ಬಿಡುಗಡೆ ಪಡೆದು ಒಂದು ಸಲ ಹೊರಬಂದು ಬಿಡಿ? ನಿಮಗೆ ಇದ್ದಕ್ಕಿದ್ದಂತೆ ಸ್ವಾತಂತ್ರ್ಯ ಮತ್ತು ಸಮಸ್ಯೆ ಕೈ ತುಂಬ ಲಭಿಸಿದಂತಾಗಿಬಿಡುತ್ತದೆ. ತೀರಾ ವಯಸ್ಸಾದ ತಂದೆ ಸತ್ತ ಮೇಲೆ ಮಗನಿಗೊಂದು ನಿರಾಳಭಾವ ಕವಿಯುತ್ತದಲ್ಲ? ಅಂಥ ಸ್ಥಿತಿ. ಸದ್ಯ , ಅಪ್ಪ ಸತ್ತ-ಎಂಬಂಥ ಭಾವವಲ್ಲ ಅದು. ಇನ್ನು ಮೇಲಾದರೂ ನಾನು ಸ್ವತಂತ್ರವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಬಹುದಲ್ಲ ಎಂಬ ನಿರಾಳ. ಆದರೆ ಅಂಥ ಸ್ವಾತಂತ್ರ್ಯ ಮತ್ತು ನಿರಾಳದ ಬೆನ್ನ ಹಿಂದೆಯೇ ಚಿಕ್ಕದೊಂದು ಸಮಸ್ಯೆ ಇದಿರಾದಾಗ 'ಅಪ್ಪ ಇದ್ದಿದ್ದರೆ ಇದನ್ನು ಹ್ಯಾಗೆ ಸಂಭಾಳಿಸುತ್ತಿದ್ದನೋ' ಎಂಬ ಭಾವವೂ ಮೂಡಿ ನಿಲ್ಲುತ್ತದೆ. ಅಷ್ಟರಮಟ್ಟಿಗೆ ಆ tag ಹೋಗುವುದಿಲ್ಲ. ಆದರೆ ಸಮಸ್ಯೆಗಳು ಎದುರಿಸುತ್ತಾ, ಎದುರಿಸುತ್ತ್ತಾ, ಪರಿಹಾರಗಳನ್ನು ಕಂಡುಕೊಳುತ್ತಾ ನಿಧಾನವಾಗಿ ನಮಗೇ ಗೊತ್ತಿಲ್ಲದೆ ನಾವೊಂದು ಬೇರೆಯದೇ ಹಂತ ತಲುಪಿಬಿಡುತ್ತೇವೆ. ಅಲ್ಲಿಂದ ಆರಂಭವಾಗುವುದೇ ಕ್ರಿಯಾಶೀಲತೆ! ಚಿಕ್ಕದೊಂದು ಒರಳು ಕಲ್ಲು ಮಾರುವ ಅಂಗಡಿಯಿಟ್ಟುಕೊಂಡಿದ್ದ ಮುದುಕ ಸತ್ತ ಮೇಲೆ ಅವನ ಮಗ ಅದೇ ಅಂಗಡಿಗೆ ಬಂದು ಕೂಡುತ್ತಾನೆ. ಎರಡು ವರ್ಷದ ಹೊತ್ತಿಗೆ ಅವನು ಸೈಜುಗಲ್ಲು ಮಾರಿ ಮುಗಿಸಿ, 'ಇಲ್ಲಿ ಗ್ರಾನೈಟು ಸ್ಲ್ಯಾಬುಗಳು ಸಿಗುತ್ತದೆ' ಅಂತ ಬೋರ್ಡ್ ಹಾಕುತ್ತಾನೆ. ಡಿಕ್ಷನರಿ ಮಾಡಿಸಿ ಮಾರುತ್ತಿದ್ದ ಗದಗಿನ ಸಂಕೇಶ್ವರ ಕುಟುಂಬದ ವಿಜಯ ಸಂಕೇಶ್ವರ್ ಅವರೇ 'ವಿಜಯ ಕರ್ನಾಟಕ'ದಂತಹ ದೈತ್ಯನನ್ನು ಸೃಷ್ಟಿಸಿದರು. ಅವರು ಮನೆತನದ ವ್ಯಾಪಾರದಿಂದ branch out ಆಗದೆ ಹೋಗಿದ್ದಿದ್ದರೆ ಖಂಡಿತ ದೈತ್ಯ ಸೃಷ್ಟಿ ಸಾಧ್ಯವಾಗುತ್ತಿರಲಿಲ್ಲ.

ಪುಟ್ಟಣ್ಣ ಕಣಗಾಲ್ ರಿಂದ ಬೇರೆಯಾಗದೆ ಹೋಗಿದ್ದರೆ ನಮಗೆ ಟಿ.ಎನ್ .ಸೀತಾರಾಂ ಸಿಗುತ್ತಿರಲಿಲ್ಲ. ಇವತ್ತು 'ಈಟೀವಿ' ವಾಹಿನಿಗೆ ಮುಖ್ಯಸ್ಥರಲ್ಲೊಬ್ಬರಾಗಿರುವ ಸೂರಿ, ಶಂಕರ್ ನಾಗ್ ಗೆ ಅತ್ಯಾಪ್ತರು. ಆದರೆ ಶಂಕರನಾಗ್ ರ ಹುಚ್ಚು ಹೊಳೆಯಂಥ ವ್ಯಕ್ತಿತ್ವದೊಂದಿಗೆ ಅವರು ಕೊಚ್ಚಿ ಹೋಗಲಿಲ್ಲ. ಅವರು ಬೇರೆಯಾದರು ಎಂಬ ಕಾರಣಕ್ಕಾಗಿಯೇ ಇವತ್ತು ಈ ಮಟ್ಟಕ್ಕೆ ಬೆಳೆದಿದ್ದಾರೆ. ವಿಶ್ವೇಶ್ವರ ಭಟ್ಟರಾಗಲೀ, ನಾನಾಗಲೀ 'ಸಂಯುಕ್ತ ಕರ್ನಾಟಕ' ಬಿಟ್ಟು ಶಾಮರಾಯರಿಂದ ಬೇರೆಯಾಗದೆ ಹೋಗಿದ್ದಿದ್ದರೆ, ಇವತ್ತು ನಾವಿರುವ ಸ್ಥಿತಿ ತಲುಪಿಕೊಳ್ಳಲಾಗುತ್ತಿರಲಿಲ್ಲ. ಇದ್ದ ಸಂಬಂಧವೊಂದನ್ನೇ ಅಲ್ಲ. ಇದ್ದ ನೆರಳು-ಹೆಸರು-ಟ್ಯಾಗು ಎಲ್ಲವನ್ನೂ ಕಡಿದುಕೊಂಡು ಹೋದ ಅತಿದೊಡ್ಡ ವ್ಯಕ್ತಿತ್ವವೆಂದರೆ ಪೂರ್ಣಚಂದ್ರ ತೇಜಸ್ವಿ ಅವರದು.

ಕನ್ನಡ ಸಾರಸ್ವತ ಲೋಕದ ಕೀರಿಟ ಧರಿಸಿ ಕುಳಿತಿದ್ದ ಕೆ.ವಿ.ಪುಟ್ಟಪ್ಪನವರ ನೆರಳಿನಿಂದ ಹೊರಬರುವುದು ಅವರ ಮಗನಿಗೆ ಅಷ್ಟು ಸುಲಭವಿರಲಿಲ್ಲ. ಅದಕ್ಕಾಗಿ ಅವರು ಮೈಸೂರನ್ನೇ ಬಿಡಬೇಕಾಯಿತು. ನಗರದ ಜೀವನವನ್ನೇ ಧಿಕ್ಕರಿಸಬೇಕಾಯಿತು. ವರ್ಷವಿಡೀ ಮಳೆ ಹುಯ್ಯುವ, ಕತ್ತಲಾದರೆ ದಿಕ್ಕು ತೋಚದಂತಾಗುವ, ಮಾತಾಡೋಣವೆಂದರೆ ಸರೀಕರು-ಸಮಾನ ಮನಸ್ಕರೇ ಸಿಕ್ಕದಂತಹ ಕಗ್ಗಾಡಿಗೆ ಹೋಗಿ ಪದ್ಮಾಸನ ಹಾಕಿಕೊಂಡು ಕುಳಿತುಬಿಟ್ಟರು ತೇಜಸ್ವಿ. ಆಮೇಲೆ ತಾವೇ ತಾವಾಗಿ ಆಲದ ಮರದಂತೆ ಬೆಳೆದರು. ಹಾಗೆ ಅವರು ಮೈಸೂರಿನ ಋಣ ಹರಿದುಕೊಂಡು ಹೊರಬೀಳದೆ ಹೋಗಿದ್ದಿದ್ದರೆ ತೇಜಸ್ವಿಯಾಗಲು ಸಾಧ್ಯವಾಗುತ್ತಿರಲಿಲ್ಲ. ಈ ವಿಷಯದಲ್ಲಿ ತೇಜಸ್ವಿ ಎಷ್ಟು ಸ್ವತಂತ್ರರು ಅಂದರೆ, ಅವರು ಒಬ್ಬೇ ಒಬ್ಬ ಶಿಷ್ಯನನ್ನೂ ಗಂಟು ಹಾಕಿಕೊಳ್ಳಲಿಲ್ಲ.

ಬ್ಯೂಟಿಪಾರ್ಲರಿನಲ್ಲಿ ಕೆಲಸ ಮಾಡುವ ಹುಡುಗಿಯ ಉದಾಹರಣೆಯನ್ನೇ ತೆಗೆದುಕೊಳ್ಳಿ. ಒಡತಿಯ ನಯ, ನಾಜೂಕು ವರ್ತನೆ, ಬಂದ ಗಿರಾಕಿಗಳನ್ನು ಮಾತನಾಡಿಸುವ ರೀತಿ, ಆಕೆಯ ಕೈಕೆಲಸ -ಎಲ್ಲವನ್ನೂ ಸದ್ದಿಲ್ಲದೇ ಗಮನಿಸುತ್ತಿರುತ್ತಾಳೆ. ಜೊತೆಗಿದ್ದಷ್ಟೂ ಹೊತ್ತು ಕೆಲಸ ಕಲಿಯುತ್ತಲೇ ಇರುತ್ತಾಳೆ. Onefineday, 'ಬರ್ತೀನಿ ಮೇಡಂ' ಅಂತ ನಯವಾಗಿಯೇ ಹೇಳಿ ಹೊರಟುಬಿಡುತ್ತಾಳೆ. ಮರುದಿನ ಮತ್ಯಾವುದೋ ಏರಿಯಾದಲ್ಲಿ, ಇನ್ಯಾವುದೋ ಊರಿನಲ್ಲಿ ಅವಳದೇ ಸ್ವತಂತ್ರವಾದ್ದೊಂದು ಬ್ಯೂಟಿ ಪಾರ್ಲರ್ ಕಣ್ತೆರೆದಿರುತ್ತದೆ.

ಇದು ಆಗಬೇಕಾದದ್ದೇ ಹೀಗೆ. ಬೇರೆಯಾದವರು ಆಲವಾಗಿ ಬೆಳೆಯುವುದೇ ಹಾಗೆ!

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ