• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪುಟ್ಟಣ್ಣ ಕಣಗಾಲ್, ರಾಜ್ ಕುಮಾರ್ ಮತ್ತು ರಜನಿಕಾಂತ್

By Staff
|

ಥಳಕು ಬಳುಕಿನ ಬಣ್ಣದ ಲೋಕದಲ್ಲಿ ಎಷ್ಟೋ ಮಂದಿ ಕರಗಿ ಹೋಗಿದ್ದಾರೆ.. ಎಷ್ಟೋ ಮಿಂಚಿ ಗಮನ ಸೆಳೆದಿದ್ದಾರೆ. ಚಿತ್ರರಂಗದ ಮೂವರು ಪ್ರಮುಖರ ಬದುಕಿನ ತಲಾ ಒಂದೊಂದು ಪುಟಗಳು ನಿಮ್ಮ ಮುಂದಿವೆ.. ಒಪ್ಪಿಸಿಕೊಳ್ಳಿ..

  • ರವಿ ಬೆಳಗೆರೆ

ಪುಟ್ಟಣ್ಣ ಕಣಗಾಲ್ ತಮ್ಮ ಪತ್ನಿ ನಾಗಲಕ್ಷ್ಮಿ ಅವರನ್ನು ಪ್ರೀತಿಯಿಂದ 'ಅಮ್ಮೂ'ಎಂದು ಕರೆಯುತ್ತಿದ್ದ ಪುಟ್ಟಣ್ಣ ಕಣಗಾಲ್ ರ ಬದುಕಿಗೆ ಮುಂದೆ ಆರತಿ ನಡೆದುಬಂದರಲ್ಲ? ಆಗ 'ಅಮ್ಮೂ'ಎಂಬ ಪ್ರೀತಿಯ ಹೆಸರು ಆರತಿಯ ಪಾಲಾಯಿತು. ಆರತಿ ಪ್ರೀತಿಸುತ್ತಿದ್ದರಲ್ಲ ಅದರ ಎರಡು ಪಟ್ಟು ಹೆಚ್ಚಾಗಿ ಆಕೆಯನ್ನು ಆರಾಧಿಸುತ್ತಿದ್ದರು ಪುಟ್ಟಣ್ಣ.

ಆದರೆ ದಶಕದೊಳಗೆ ಆ ಪ್ರೀತಿಯೂ ಹಳಸಿಕೊಂಡಿತು. ಪುಟ್ಟಣ್ಣನವರ ಬದುಕಿಂದ ಎದ್ದು ಹೋಗಿಯೇ ಬಿಟ್ಟರು ಆರತಿ. ಆ ನಂತರ ಆಕೆ 'ಬೆಳ್ಳಿತೆರೆ'ಎಂಬ ಹೆಸರಿನ ಮನೆಯೊಂದನ್ನು ಕಟ್ಟಿಸಿದರು. ಬಾಂಧವ್ಯ ಚೆನ್ನಾಗಿದ್ದ ದಿನಗಳಲ್ಲಿ ಹೊಸಮನೆಯ ಪ್ಲಾನ್ ಹೇಳಿದ್ದವರೇ ಪುಟ್ಟಣ್ಣ. ಅಷ್ಟೇ ಅಲ್ಲ, ಆ ಮನೆಯಲ್ಲಿ ಗೋಡೆಯ ಅಂದಚೆಂದ ಹೇಗಿರಬೇಕು, ವರಾಂಟಕ್ಕೆ ಎಂಥ ಕಾರ್ಪೆಟ್ ಹಾಕಬೇಕು, ಬೆಡ್ ರೂಮಿನಲ್ಲಿ ಯಾವ ಕಲಾಕೃತಿ ಇಡಬೇಕು, ಡೈನಿಂಗ್ ಟೇಬಲ್ ಎಲ್ಲಿಡಬೇಕು, ಇಂಥವೇ ಸಂಗತಿಗಳ ಬಗ್ಗೆ ಒಂದು ಪ್ಲಾನ್ ಹಾಕಿದ್ದರು ಪುಟ್ಟಣ್ಣ.

ವಿಪರ್ಯಾಸವೆಂದರೆ, ಹೊಸಮನೆಯ ಭೂಮಿ ಪೂಜೆ ಸಂದರ್ಭದಲ್ಲಿ ಗಟ್ಟಿಯಾಗಿದ್ದ ಸಂಬಂಧ, ಗೃಹಪ್ರವೇಶದ ವೇಳೆಗೆ ಕಿತ್ತುಹೋಗಿತ್ತು. ಕ್ರೂರ ವ್ಯಂಗ್ಯವೆಂದರೆ ಗೃಹಪ್ರವೇಶಕ್ಕೆ ಸಮಸ್ತ ಚಿತ್ರರಂಗದವರನ್ನು ಕರೆದಿದ್ದ ಆರತಿ, ಪುಟ್ಟಣ್ಣನಿಗೆ ಮಾತ್ರ ಆಹ್ವಾನ ಪತ್ರಿಕೆಯೇ ಸಿಗದಂತೆ ನೋಡಿಕೊಂಡಿದ್ದರು! ಆ ಕಡೆಯಲ್ಲಿ ಗೃಹಪ್ರವೇಶದ ಗದ್ದಲ ಜೋರಾಗಿರುವಾಗಲೇ ಗೆಳೆಯ ಪುಟ್ಟಣ್ಣನನ್ನು ನೋಡಲು ಬಂದರು ಚಿತ್ರ ಸಾಹಿತಿ ವಿಜಯನಾರಸಿಂಹ.

ಆಗ ಒಂದು ಇಟ್ಟಿಗೆಯನ್ನೇ ತಲೆದಿಂಬಾಗಿಸಿಕೊಂಡು ನೆಲದ ಮೇಲೆ ಮಲಗಿದ್ದರಂತೆ ಪುಟ್ಟಣ್ಣ. ಗೆಳೆಯನನ್ನು ಕಂಡಾಕ್ಷಣ 'ನೋಡೋ ವಿಜಯಾ, ಇವತ್ತು ಆರತಿಯ ಮನೆ ಗೃಹಪ್ರವೇಶ. ಆ ಮನೆಯ ಇಂಚಿಂಚು ಐಡಿಯಾ ಕೂಡಾ ನನ್ನದು. ಅಂಥ ನನಗೇ ಆಹ್ವಾನವಿಲ್ಲ. ಈ ಇಟ್ಟಿಗೆ ಕೂಡ ಅಲ್ಲಿಂದಲೇ ತಂದದ್ದು ಕಣೋ'ಎನ್ನುತ್ತಾ ಗೊಳೋ ಎಂದು ಅತ್ತುಬಿಟ್ಟರಂತೆ.

***

ಇಲ್ಲಿದ್ದೂ ನೀನು ಸಾಧಿಸುವುದೇನು?

ರಜನಿಕಾಂತ್ ಖ್ಯಾತಿಯ ಉತ್ತುಂಗದಲ್ಲಿದ್ದ ಸಂದರ್ಭದಲ್ಲಿ ಬಹಳಷ್ಟು ಮಂದಿಗೆ ವೈರಾಗ್ಯದತ್ತ ಆಸಕ್ತಿ ಬಂದುಬಿಡುವುದುಂಟು. ಐದು ವರ್ಷಗಳ ಹಿಂದೆ ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೂ ಹಾಗೇ ಅನ್ನಿಸಿತ್ತಂತೆ. ಹಾಗೆ ಮನಸ್ಸಿಗೆ ಶಾಂತಿ ಬೇಕು ಅನಿಸಿದಾಗಲೆಲ್ಲ ಅವರು ಹಿಮಾಲಯಕ್ಕೆ, ಅಲ್ಲಿನ ಸಾಧುಗಳ ಸನ್ನಿಧಿಗೆ ಹೋಗಿ ಬಿಡುತ್ತಿದ್ದರು. ಐದು ವರ್ಷದ ಹಿಂದೆ ಕೂಡಾ ಹಾಗೇ ಮಾಡಿದರು. ಅಲ್ಲಿ ಎದುರಾದ ಸಾಧುವೊಬ್ಬರು ಕೇಳಿದರು : 'ಯಾಕೆ ಇಲ್ಲಿಗೆ ಬಂದೆ? ನಿನ್ನ ಉದ್ದೇಶವಾದರೂ ಏನು?'

'ನನಗೆ ಈ ಐಶಾರಾಮಿ ಬದುಕು, ಅಲ್ಲಿನ ಗಜಿಬಿಜಿ ಕಂಡು ಬೇಜಾರಾಗಿ ಹೋಗಿದೆ. ಇಂದಿನಿಂದ ನಾನೂ ಸಾಧುಗಳಂತೆ ಬದಲಾಗಲೆಂದೇ ಬಂದಿದ್ದೇನೆ'ಎಂದರು ರಜನಿಕಾಂತ್.

ತಕ್ಷಣ ಇವರ ಬದುಕಿನ ಕತೆಯನ್ನೆಲ್ಲಾ ಕೇಳಿಸಿಕೊಂಡ ಆ ಸಾಧು ಹೇಳಿದರಂತೆ : 'ಅಪ್ಪಾ, ನೀನು ಸನ್ಯಾಸಿಯಾಗಿ ಸಾಧಿಸುವುದೇನಿದೆ? ನಿನ್ನ ಊರಲ್ಲಿ ನಿನ್ನನ್ನೇ ನಂಬಿದ ಕುಟುಂಬವಿದೆ. ಬಂಧು ಬಳಗವಿದೆ, ಅಭಿಮಾನಿಗಳಿದ್ದಾರೆ. ನೀನು ಇಲ್ಲಿಯೇ ಉಳಿದರೆ ಅವರಿಗೆಲ್ಲ ಖಂಡಿತ ಬೇಸರವಾಗುತ್ತದೆ. ನೋಡೂ, ಜನರಿಗೆ ಮನರಂಜನೆ ನೀಡುವುದು, ಅವರನ್ನು ನಗಿಸುವುದು ಬಹಳ ಕಷ್ಟ. ಆದರೆ, ಆ ಕೆಲಸ ನಿನಗೆ ಒಲಿದಿದೆ. ಇಲ್ಲಿದ್ದು ನೀನು ಸಾಧಿಸುವುದೇನು? ವಾಪಸ್ ನಿನ್ನ ಊರಿಗೆ ಹೋಗು. ಒಂದು ಚಿತ್ರದಲ್ಲಿ ಯಾವುದಾದರೂ ಒಂದು ಒಳ್ಳೆಯ ಸಂದೇಶ ಇಡು. ಸನ್ಮಾರ್ಗದಲ್ಲಿ ನಡೆವುದೇ ಜೀವನ ಎಂದು ವಿವರಿಸಿ ಹೇಳು. ಕಷ್ಟದಲ್ಲಿದ್ದವರಿಗೆ ಕೈಬಿಚ್ಚಿ ಸಹಾಯ ಮಾಡು'.

ಆ ಸಾಧುವಿನ ಮಾತಲ್ಲಿ ಸತ್ಯವಿದೆ ಎಂದು ರಜನಿಗೆ ತಕ್ಷಣ ಅರ್ಥವಾಯಿತು. ಅವರಿಗೆ ಸಾಷ್ಟಾಂಗ ನಮಸ್ಕರಿಸಿ ಸೀದಾ ಚೆನ್ನೈಗೆ ಬಂದರು. ಶಿವಾಜಿ ಚಿತ್ರದ ಶೂಟಿಂಗ್ ಶುರು ಮಾಡಿಯೇ ಬಿಟ್ಟರು.

ಯಾವುದಾದರೂ ಒಂದು ಒಳ್ಳೆಯ ಸಂದೇಶ ಚಿತ್ರದಲ್ಲಿರಲಿ ಎಂದು ಸಾಧು ಹೇಳಿದ್ದರಲ್ಲ. ಆ ಮಾತು ನೆನಪಲ್ಲಿತ್ತು. ನಿರ್ದೇಶಕ ಶಂಕರ್ ರನ್ನು ಕರೆದು, 'ಶಂಕರ್, ಈ ಶಿವಾಜಿ ಚಿತ್ರದಲ್ಲಿ ನಾನು ಸಿಗರೇಟು ಸೇದಲ್ಲ. ಸಿಗರೇಟಿಲ್ಲದ ಶಿವಾಜಿಯನ್ನು ನಮ್ಮ ನ ನೋಡುವಂತಾಗಲಿ' ಎಂದರಂತೆ ರಜನಿ. ಆನಂತರ ನಡೆದದ್ದು ಈಗ ಇತಿಹಾಸ

***

ಗೊಮ್ಮಟೇಶ್ವರನ ಪಾತ್ರ ಕೊಟ್ರೂ..

ರಾಜ್ ಕುಮಾರ್ ಅದು ಸರ್ವಜ್ಞ ಮೂರ್ತಿ ಚಿತ್ರದ ಚಿತ್ರೀಕರಣ ಸಂದರ್ಭ. ಡಾ.ರಾಜ್ ಕುಮಾರ್ ಸರ್ವಜ್ಞನಾಗಿ ಅಭಿನಯಿಸುತ್ತಿದ್ದರು. ಧಾರವಾಡ ಜಿಲ್ಲೆ, ಹಿರೇಕೆರೂರು ತಾಲೂಕಿನ ಅಬಲೂರು ಮತ್ತು ಸುತ್ತಲ ಪ್ರದೇಶಗಳಲ್ಲಿ ಚಿತ್ರೀಕರಣ ನಡೆಯುತ್ತಿತ್ತು.

ಅದೊಂದು ದಿನ ಒಂದು ದನದ ಕೊಟ್ಟಿಗೆಯಲ್ಲಿ ಲಂಗೋಟಿ ಮತ್ತು ಮೇಲೊಂದು ಕಂಬಳಿ ಧರಿಸಿ, ಒಂದು ಕೈಯಲ್ಲಿ ಕೋಲು, ಇನ್ನೊಂದು ಕೈಯಲ್ಲಿ ಕಪ್ಪರ ಹಿಡಿದು ರಾಜ್ ಅಭಿನಯಿಸುತ್ತಿದ್ದರು. ಚಿತ್ರೀಕರಣ ನೋಡಲು ಬಂದವರಿಗೆ ಆಶ್ಚರ್ಯ. ಒಂಥರಾ ಸಂಕೋಚ ಕೂಡ. ಅವರಲ್ಲಿ ಒಬ್ಬರು ಧೈರ್ಯ ಮಾಡಿ ಕೇಳಿಯೇ ಬಿಟ್ಟರು :'ಈ ರೀತಿ ಕಡಿಮೆ ಉಡುಪಿನಲ್ಲಿ ಜನರ ಮುಂದೆ ಅಭಿನಯಿಸಲು ಸಂಕೋಚವಾಗುವುದಿಲ್ಲವೇ?'

ಆಗ ರಾಜ್ ಹೇಳಿದ್ದಿಷ್ಟು :'ನಾನು ಕಲಾವಿದ. ನಟಿಸಲು ಬಂದವನು ಸಂಕೋಚ, ನಾಚಿಕೆ, ಭಯ ಮೂರನ್ನೂ ತೊರೆಯಲೇ ಬೇಕು. ಮುಂದೆ ಯಾರಾದರೂ ನಿರ್ಮಾಪಕರು ನನಗೆ ಗೊಮ್ಮಟೇಶ್ವರನ ಪಾತ್ರ ನೀಡಿದರೆ, ಆಗಲೂ ಇಷ್ಟೇ ನಿಸ್ಸಂಕೋಚವಾಗಿ ತಮ್ಮಂಥವರ ಮುಂದೆ ಅಭಿನಯಿಸುತ್ತೇನೆ. '

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more