'ಸೋಭ್ರೆ ಮೇಸ ' - ಊಟದ ಮಧ್ಯದ ಮಾತುಕತೆ! ಮಾತು ಸ್ಪ್ಯಾನಿಶರ ಬಹು ಪ್ರಮುಖ ಗುಣ !!
ನೀವು ಹತ್ತಾರು ಊರು ಸುತ್ತುವ ಅಭ್ಯಾಸ ಇದ್ದವರಾದರೆ ಈಗ ನಾನು ಹೇಳುವ ವಿಷಯವನ್ನ ಖಂಡಿತ ಒಪ್ಪಿಕೊಳ್ಳುತ್ತೀರಿ. ಅದೇನೆಂದರೆ ಪ್ರತಿಯೊಂದು ಊರಿಗೂ ತನ್ನದೇ ಆದ ವಿಶೇಷತೆ , ಗುಣಗಳು ಇರುತ್ತವೆ. ಮನುಷ್ಯರ ಗುಣ , ಸ್ವಭಾವವನ್ನ ನಾವು ಹೇಗೆ ಗುರುತಿಸುತ್ತೇವೆ , ಅದರ ಬಗ್ಗೆ ಮಾತನಾಡುತ್ತೇವೆ , ಥೇಟ್ ಹಾಗೆಯೇ ಪ್ರತಿ ಊರಿಗೂ ಅದರದೇ ಆದ ವಿಶೇಷ ಗುಣಲಕ್ಷಣಗಳು ಇರುತ್ತವೆ. ಒಂದು ದೇಶದ ಜನರ ಒಟ್ಟು ನಡವಳಿಕೆ ದೇಶದ ನಡವಳಿಕೆ ಎನ್ನುವ ರೀತಿಯಲ್ಲಿ ಬಿಂಬಿತವಾಗುತ್ತದೆ.
ರಾಜ್ಯ , ಜಿಲ್ಲೆ , ಊರು , ಹಳ್ಳಿಯಿಂದ ಸಣ್ಣ ಗಲ್ಲಿಯವರೆಗೆ ಅಲ್ಲಿ ಜೀವಿಸುವ ಜನರ ಒಟ್ಟು ಭಾವನೆ ಗಲ್ಲಿಗೂ , ಹಳ್ಳಿಗೂ ಅಂಟಿಕೊಂಡು ಬಿಡುತ್ತದೆ. ಆ ಲೆಕ್ಕಾಚಾರದಲ್ಲಿ ಸ್ಪ್ಯಾನಿಶರು ಇತರೆ ಯೂರೋಪಿಯನ್ನರಿಗಿಂತ ಹೆಚ್ಚು ಹೊರ ಹೋಗಲು , ತಿನ್ನಲು , ಕುಡಿಯಲು , ಕುಣಿಯಲು ಬಯಸುತ್ತಾರೆ ಎಂದು ಧಾರಾಳವಾಗಿ ಹೇಳಬಹುದು. ಅಂದಮಾತ್ರಕ್ಕೆ ಸ್ಪೇನ್ ದೇಶದ ಪ್ರತಿಯೊಬ್ಬ ಪ್ರಜೆಯೂ ಹೀಗೆ ಎಂದು ಷರಾ ಬರೆಯುವಂತಿಲ್ಲ, ಮೊದಲೇ ಹೇಳಿದಂತೆ ಇದು ಮೆಜಾರಿಟಿ ಕರಾಮತ್ತು. ಇವತ್ತು ಸ್ಪ್ಯಾನಿಶರು ಇತರೆ ಯೂರೋಪಿಯನ್ನರಿಗಿಂತ ಹೇಗೆ ಭಿನ್ನ ಎನ್ನುವುದರ ಬಗ್ಗೆ ಒಂದಷ್ಟು ನೋಡೋಣ .
ಊಟದಲ್ಲಿ ಬ್ರೆಡ್ ನೀಡುವುದು ಇಲ್ಲಿ ಸಾಮಾನ್ಯ - ಅಂದರೆ ಗಮನಿಸಿ ಬೇರೆ ಎಲ್ಲೆಡೆ ಬ್ರೆಡ್ ಅಥವಾ ಪಾನ್ ಎಂದು ಕರೆಯಲ್ಪಡುವ ಗಟ್ಟಿ ಬ್ರೆಡ್ಡನ್ನ ಇಲ್ಲಿ ನೀವು ಆಹಾರ ಆರ್ಡರ್ ಮಾಡಿದ ಮರುಕ್ಷಣ ತಂದಿಡುತ್ತಾರೆ. ಇದು ನೀವು ಕೇಳಲಿ ಅಥವಾ ಬಿಡಲಿ , ಬ್ರೆಡ್ಡು ಎನ್ನುವುದು ಡಿಫಾಲ್ಟ್ ನೀಡುತ್ತಾರೆ. ಯೂರೋಪಿನಲ್ಲೂ ಅತ್ಯಂತ ಮುಂದುವರೆದ ಯೂರೋಪಿಯನ್ ದೇಶಗಳಲ್ಲಿ ಬ್ರೆಡ್ಡನ್ನ ಕಾರ್ಬೋ ಎಂದು ಪರಿಗಣಿಸುತ್ತಾರೆ, ಹೆಚ್ಚು ಬ್ರೆಡ್ಡು ತಿನ್ನುವುದನ್ನ ಬಡತನ ಎನ್ನುವಂತೆ ನೋಡಲಾಗುತ್ತದೆ.

ಆದರೆ ಸ್ಪೇನ್ ಇದರಿಂದ ಗಾವುದ ದೂರ , ನೀವು ಎಷ್ಟೇ ಸಿರಿವಂತರಾಗಿರಿ , ಯಾವುದೇ ಆಹಾರವನ್ನ ನೀಡು ಹೇಳಿರಿ , ಬ್ರೆಡ್ ನೀವು ಕೇಳದೆ ತಂದಿಡುತ್ತಾರೆ. ಅದನ್ನ ತಿನ್ನುವುದು ಅಥವಾ ಬಿಡುವುದು ನಿಮಗೆ ಬಿಟ್ಟದ್ದು. ಇದಕ್ಕೆ ಒಂದು ಸಣ್ಣ ಉದಾಹರೆಣೆ ಹೇಳಬೇಕೆಂದರೆ , ಭಾರತದಲ್ಲಿ ಇಂದಿಗೂ ಬಹುತೇಕ ದರ್ಶಿನಿ ದರ್ಜೆಯ ಮತ್ತು ಅದಕ್ಕಿಂತ ಒಂದು ಮಟ್ಟ ಮೇಲಿರುವ ಹೋಟೆಲ್ ಗಳಲ್ಲಿ ನೀರು ನೀಡುವುದು ಸಾಮಾನ್ಯ ಅಲ್ಲವೇ ?
ನೀವು ನೀರನ್ನ ಕೊಳ್ಳಬೇಕು ಎಂದೇನಿಲ್ಲ , ಹಾಗೆಯೇ ಸ್ಪೇನ್ ನಲ್ಲಿ ನೀವು ಪಾಸ್ತಾ , ಪಿಜ್ಜಾ ಅಥವಾ ಇನ್ನ್ಯಾವುದೇ ತಿಂಡಿಯನ್ನ ಕೇಳಿ ಅವರು ಅದರ ಜೊತೆಗೆ ಒಂದು ತುಂಡು ಬ್ರೆಡ್ ನೀಡುವುದು ಸಂಪ್ರದಾಯ. ಬ್ರೆಡ್ಡಿನ ಮೇಲೆ ಆಲಿವ್ ಆಯಿಲ್ ಹಾಕಿ ನಂತರ ಅದರ ಮೇಲೆ ಟೊಮೊಟೊ ಪ್ಯೂರಿ ಯನ್ನ ಬಳಿದು ತಿನ್ನುವುದು ಇಲ್ಲಿ ಅತಿ ಸಾಮಾನ್ಯ. ಹೀಗಾಗಿ ಜಗತ್ತಿನ ಇತರ ದೇಶಗಳಲ್ಲಿ ಇರುವ ಬ್ರೆಡ್ಡಿನ ಬಗ್ಗೆಯ ಕೀಳಿರಿಮೆ ಸ್ಪೇನ್ ನಲ್ಲಿಲ್ಲ.
ಶಾಪಿಂಗ್ , ರಾತ್ರಿಯೂಟ ಶುರುವಾಗುವುದೇ ರಾತ್ರಿ - ನಿಮಗೆಲ್ಲಾ ಆಶ್ಚರ್ಯ ಎನ್ನಿಸಬಹುದು , ಸ್ಪೇನ್ ದೇಶದಿಂದ ಕೇವಲ ಒಂದೂವರೆ ಗಂಟೆ ವಿಮಾನ ಪ್ರಯಾಣದ ದೂರದಲ್ಲಿರುವ ಇಂಗ್ಲೆಂಡ್ ನಲ್ಲಿ ರಾತ್ರಿ ಎಂಟು ಅಥವಾ ಒಂಬತ್ತಕ್ಕೆ ಎಲ್ಲವೂ ಬಾಗಿಲು ಹಾಕಿ ಬಿಡುತ್ತಾರೆ. ಕೆಲವೊಂದು ಪಬ್ ಗಳು ಮತ್ತು ಬಾರ್ಗಳ ಕಥೆ ಬೇರೆ , ನಿಮಗೆ ಬೇಕಾಗುವ ಊಟ ಮಾಡುವ ಸಣ್ಣ ಪುಟ್ಟ ರೆಸ್ಟೋರೆಂಟುಗಳು ದಿನದ ಕೆಲಸ ಮುಗಿಯಿತು ಎಂದು ಎಂಟಕ್ಕೆ ಬಾಗಿಲು ಹಾಕಿ ಬಿಡುತ್ತಾರೆ.
ಇತರ ಯೂರೋಪಿಯನ್ ದೇಶಗಳು ಈ ಮಟ್ಟಕ್ಕೆ ಅಲ್ಲದಿದ್ದರೂ ಹತ್ತು ಅಥವಾ ಹನ್ನೊಂದಕ್ಕೆ ಮುಚ್ಚುತ್ತಾರೆ. ಮಜಾ ಎಂದರೆ ಸ್ಪೇನ್ ತೆರೆದುಕೊಳ್ಳುವುದೇ ರಾತ್ರಿ ಹತ್ತರ ನಂತರ !! ಹೌದು ಯಾರಾದರೂ ರಾತ್ರಿಯೂಟಕ್ಕೆ ಕರೆದರೆ ಅದು ಹತ್ತು ಅಥವಾ ಹನ್ನೊಂದು ಗಂಟೆಗೆ ಆಗಿರುತ್ತದೆ. ಮತ್ತು ರಾತ್ರಿಯೂಟ ಎಂದರೆ ಅದು ಕನಿಷ್ಠ ಎರಡರಿಂದ ಮೂರು ತಾಸಿನ ಕೆಲಸ. ಇದರರ್ಥ ಅಷ್ಟೊಂದು ತಿನ್ನುತ್ತಾರೆ ಎಂದಲ್ಲ .
ಊಟಕ್ಕೆ ಮುಂಚೆ ಮಾತು , ಊಟದ ಮಧ್ಯೆ ಮಾತು , ಊಟದ ನಂತರ ಮಾತು , ಒಟ್ಟಿನಲ್ಲಿ ಮಾತು , ಮಾತು ಮತ್ತು ಮಾತು ಸ್ಪ್ಯಾನಿಶರ ಬಹು ಪ್ರಮುಖ ಗುಣ. ಈ ರೀತಿಯ ಊಟದ ಮಧ್ಯದ ಮಾತುಕತೆಗೆ 'ಸೋಭ್ರೆ ಮೇಸ ' ಎಂದು ಕರೆಯುತ್ತಾರೆ. ಊಟಕ್ಕೆ ಕರೆದರು ಎಂದು ಹೋಗಿ ಬೇಗ ಊಟ ಮಾಡಿ ಹೊರಡುವುದು ನಾಗರಿಕತೆಯ ಲಕ್ಷಣವಲ್ಲ . ಊಟದ ನಂತರ ಕೊನೆಪಕ್ಷ ಒಂದು ತಾಸು ಹರಟೆ ಹೊಡೆಯುವುದು ಇಲ್ಲಿ ಅತಿ ಸಾಮಾನ್ಯ. ಇದರ ಜೊತೆಗೆ ಮನೆಗೆ ಬೇಕಾದ ಸಾಮಾನು ಸರಂಜಾಮುಗಳನ್ನ ಕೊಳ್ಳುವುದು ಕೂಡ ಸಾಯಂಕಾಲ ಅಥವಾ ರಾತ್ರಿ ಇಲ್ಲಿನ ಜನ ಮಾಡುತ್ತಾರೆ. ಇದು ಇಲ್ಲಿ ಸಾಮಾನ್ಯ.
ಎಲ್ಲಕ್ಕೂ ಜೊತೆ ಬಯಸುವ ಸ್ಪ್ಯಾನಿಷ್ ಜನತೆ - ನೀವು ಜಗತ್ತಿನ ಯಾವುದೇ ಭಾಗದಲ್ಲಿ ಒಂಟಿ ವ್ಯಕ್ತಿ ಕುಳಿತು ತಿನ್ನುವುದು , ಅಥವಾ ಸಿನಿಮಾ ವೀಕ್ಷಣೆ ಮಾಡುವುದು ಕಾಣಬಹುದು ಆದರೆ ಇಂತಹ ದ್ರಶ್ಯ ಸ್ಪೇನ್ ನಲ್ಲಿ ಸಿಗುವುದು ವಿರಳ ಎಂದು ಹೇಳಬಹುದು. ಏಕೆಂದರೆ ಇಲ್ಲಿನ ಜನ ಇತರೆ ಯೂರೋಪಿಯನ್ನರಿಗಿಂತ ಬಹಳವೇ ಸಂಘ ಜೀವಿಗಳು. ವಾಕ್ ಹೊರಟೆ ಬರುತ್ತೀಯ ? ಊಟಕ್ಕೆ ಹೋಗೋಣ ಎನನ್ನುತ್ತೀಯಾ? ಸಿನಿಮಾಗೆ ಹೋಗೋಣವೆ ?
ಹೀಗೆ ಎಲ್ಲಿಗೆ ಹೋಗುವುದಿರಲಿ ಅಥವಾ ಏನೇ ಮಾಡುವುದಿರಲಿ ಮೊದಲು ಸ್ನೇಹಿತರನ್ನ , ಬಂಧುವನ್ನ ಅದಕ್ಕೆ ಸಮಯ ಹೊಂದಿಸಿಕೊಳ್ಳುವಂತೆ ಕೇಳುವುದು ಕೂಡ ಇಲ್ಲಿ ಸಾಮಾನ್ಯ. ಕರೆದರು , ಜೊತೆಗೆ ಹೋದರು ಎಂದ ತಕ್ಷಣ ಕರೆದವನು ಬಿಲ್ ಕೊಡಬೇಕು ಎನ್ನುವಂತಿಲ್ಲ, ತಿಂದದ್ದು , ಕುಡಿದದ್ದು , ಸಿನಿಮಾ ಟಿಕೆಟ್ ಹೀಗೆ ಖರ್ಚು ಏನೇ ಇರಲಿ ಅದನ್ನ ಸಮವಾಗಿ ಭಾಗ ಮಾಡಿಕೊಳ್ಳುವುದು ಕೂಡ ಇಲ್ಲಿನ ಜನರ ಅಭ್ಯಾಸ.
ಯಾರಾದರೊಬ್ಬರು ಮುಂದಾಳತ್ವ ವಹಿಸಿ ಖರ್ಚು ಮಾಡಿರುತ್ತಾರೆ , ಭೇಟಿ ಮುಗಿದು ಹೊರಡುವ ಮುನ್ನ ಲೆಕ್ಕಾಚಾರ ಮಾಡಿ ತಮ್ಮ ಪಾಲಿನ ಹಣವನ್ನ ಖರ್ಚು ಮಾಡಿದವರಿಗೆ ನೀಡಿ , ಪ್ರೀತಿಯ ಅಪ್ಪುಗೆ ನೀಡಿ ಆದಿಯೋಸ್ ಹೇಳಿ ಹೊರಡುತ್ತಾರೆ. ಹಣವನ್ನ ಮಾತ್ರ ಇಲ್ಲಿ ಬಾಕಿ ಉಳಿಸಕೊಳ್ಳುವುದಿಲ್ಲ. ಆದರೆ ಕೆಲವೊಮ್ಮೆ ಸ್ನೇಹಿತರ ಗುಂಪಿನಲ್ಲಿ ಒಬ್ಬ ಇದ್ದೆ ಇರುತ್ತಾನೆ , ಆತ ಬಿಲ್ ಕೊಡದೆ ತಪ್ಪಿಸ್ಕೊಳ್ಳುವುದು , ಮುಂದಿನವಾರ ಕೊಡುತ್ತೇನೆ ಎನ್ನುವುದು ಇದ್ದೆ ಇರುತ್ತದೆ.
ಅಂತಹವನ್ನ 'ತಕಾನ್ಯೋ ' ಅಂದರೆ ಜಿಪುಣ ಎಂದು ಕರೆಯಲಾಗುತ್ತದೆ, ಮತ್ತು ಮುಲಾಜಿಲ್ಲದೆ ಅಂತಹವನ್ನ ಆಹ್ವಾನಿಸುವುದು ಕೂಡ ನಿಲ್ಲಿಸಿ ಬಿಡುತ್ತಾರೆ. ಒಟ್ಟಿನಲ್ಲಿ ಲೆಕ್ಕಾಚಾರದಲ್ಲಿ ಪಕ್ಕ ಮತ್ತು ಅತಿ ಹೆಚ್ಚು ಹೊರ ಹೋಗುವ ಅಭ್ಯಾಸ ಇರುವ ಜನರಿವರು. ರಸ್ತೆಯುಲ್ಲಿ ಉಗುಳುವುದು ಇಲ್ಲ , ಆದರೆ ಬಾರ್ ಗಳಲ್ಲಿ ಕಸ ಹಾಕುವುದು ಸಾಮಾನ್ಯ - ನಿಮಗೆ ಆಶ್ಚರ್ಯ ಎನ್ನಿಸಬಹದು , ಇಲ್ಲಿನ ಬಾರ್ ಗಳಲ್ಲಿ ಟಿಶ್ಯೂ ಪೇಪರ್ , ಹಲ್ಲು ತಿಕ್ಕುವ ಸಣ್ಣ ಕಡ್ಡಿ , ಇಂತಹವುಗಳನ್ನ ರಾಜಾರೋಷವಾಗಿ ನೆಲಕ್ಕೆ ಬಿಸಾಕುತ್ತಾರೆ.
ಇದು ಇಲ್ಲಿನ ಬಾರ್ ಗಳಲ್ಲಿ ಸಾಮಾನ್ಯ. ಮುಂದಿನ ಗ್ರಾಹಕ ಬರುವ ಮುನ್ನ ಬಾರ್ ಗಳನ್ನು ಸ್ವಚ್ಛ ಮಾಡುತ್ತಾರೆ ಅದು ಬೇರೆ ಮಾತು. ಆದರೆ ಗ್ರಾಹಕ ಬಾರ್ ನಲ್ಲಿ ಕಸ ಮಾಡುವುದು ಹಕ್ಕು ಎನ್ನುವಂತೆ ಇಲ್ಲಿನ ವ್ಯವಸ್ಥೆ ಏರ್ಪಟ್ಟಿದೆ. ಆದರೆ ಇದೆ ಮಾತನ್ನ ರಸ್ತೆಯಲ್ಲಿ ಹೇಳಲು ಬಾರದು. ರಸ್ತೆಯಲ್ಲಿ ಜನ ಸಣ್ಣ ಕಡ್ಡಿ ತುಂಡನ್ನ ಕೂಡ ಬಿಸಾಡುವುದಿಲ್ಲ. ಉಗಳುವುದು ಕೂಡ ಯಾರೂ ಮಾಡುವುದಿಲ್ಲ.
ಮನೆಯ ಕಸವನ್ನ ಅದಕ್ಕೆಂದು ಇಟ್ಟಿರುವ ಡಬ್ಬದಲ್ಲಿ ಹಾಕುತ್ತಾರೆ. ವಾರದಲ್ಲಿ ನಿಗದಿಯಾಗಿರುವ ದಿನದಂದು ಬೇಡವಾದ ವಸ್ತುಗಳನ್ನ ಮನೆಯ ಮುಂದೆ ಇಡಬಹದು , ಉದಾಹರಣೆಗೆ ಹಳೆಯ ಸೋಫಾ , ಚೇರ್ ಇತ್ಯಾದಿ. ಅದನ್ನ ಕಾರ್ಪೋರೇಶನ್ ವ್ಯಾನ್ ನಿಗದಿತ ದಿನ , ವೇಳೆಯಲ್ಲಿ ತೆಗೆದುಕೊಂಡು ಹೋಗುತ್ತದೆ. ಬಾರ್ ಗಳನ್ನ ನೀವು ಹೊಕ್ಕು ನೋಡಿದರೆ , ಸ್ಪ್ಯಾನಿಶರು ಕೊಳಕು ಎನ್ನುವ ನಿರ್ಧಾರಕ್ಕೆ ಬರುತ್ತಿರಿ , ಅದೇ ಮಾತನ್ನ ನೀವು ಸಮಾಜ ನೋಡಿ ಹೇಳಲಾಗದು.
ಸಣ್ಣ ಪುಟ್ಟದಕ್ಕೂ ನರ್ವುಸ್ ಎನ್ನುವುದು ಇಲ್ಲಿ ಸಹಜ - ಇಲ್ಲಿನ ಜನ ತುಂಬಾ ಮೆಥಡಿಕಲ್ . ಎಳೆದ ಗೆರೆಯಿಂದ ಸ್ವಲ್ಪ ಆಚೀಚೆ ಆದರೆ ಸಾಕು 'ಎಸ್ತೋಯ್ ನರ್ವುಸೊ' ಅಂದರೆ ನಾನು ಮಾನಸಿಕ ಒತ್ತದಲ್ಲಿದ್ದೇನೆ ಎನ್ನುವ ಮಾತನ್ನ ಆಡುವುದು ತುಂಬಾ ನಾರ್ಮಲ್. ಇಲ್ಲಿನ ಜನ ತಮ್ಮ ಆಯ್ಕೆಗಳ ಬಗ್ಗೆ ಬಹಳ ನಿಖರತೆ ಹೊಂದಿರುತ್ತಾರೆ. ತಣ್ಣೀರು ಬೇಕು ಅಥವಾ ವಾತಾವರಣದ ಮಟ್ಟಿನ ನೀರಿನ ಬೇಕು ಎನ್ನುವುದರಿಂದ ಹಿಡಿದು ನ್ಯಾಚುರಲ್ ಅಥವಾ ಗ್ಯಾಸ್ ಇರುವ ನೀರು ಹೀಗೆ ಸಣ್ಣ ಪುಟ್ಟ ವಿಷಯಗಳಲ್ಲೂ ಹೀಗೆ ಇರಬೇಕು ಎನ್ನುವ ಪರಿಪಾಠ ಬೆಳಸಿಕೊಂಡಿದ್ದಾರೆ.
ಇವುಗಳಲ್ಲಿ ಅಲ್ಪಸ್ವಲ್ಪ ವ್ಯತ್ಯಾಸವಾದರೂ ಅದು ಅವರಿಗೆ ಒತ್ತಡವನ್ನ ಉಂಟುಮಾಡುತ್ತದೆ. ಅಸ್ಥಿರತೆಗಳ ನಡುವೆ ಬೆಳೆದೆ ನನಗೆ ಇವೆಲ್ಲವೂ ಒತ್ತಡ ತರಬಲ್ಲ ವಿಷಯಗಳು ಹೇಗಾದವು ? ಎನ್ನುವ ಚಿಂತೆ ಕಾಡುತ್ತಿತ್ತು . ಹೇಳಿದ ಸಮಯಕ್ಕೆ ಬರದೇ ಇರುವುದು ಇಲ್ಲಿ ಕೂಡ ಕಾಮನ್ - ಹೌದು ಕಣ್ರೀ ಜಗತ್ತಿಗೆ ಅಂಟಿರುವ ಶಾಪ ಸ್ಪ್ಯಾನಿಷ್ ಜನತೆಯನ್ನ ಹೇಗೆ ಬಿಟ್ಟೀತು ? ಇಲ್ಲಿನ ಬಹುತೇಕ ಜನ ಹೇಳಿದ ಸಮಯಕ್ಕೆ
ನಾವು ಹೇಗೆ ಇಂಡಿಯನ್ ಸ್ಟ್ಯಾಂಡರ್ಡ್ ಟೈಮ್ ಎಂದು ನಮ್ಮನ್ನ ನಾವು ಗೇಲಿ ಮಾಡಿಕೊಳ್ಳುತ್ತೇವೆ ಥೇಟ್ ಹಾಗೆಯೇ ಇವರು ಕೂಡ ತಮ್ಮನ್ನ ತಾವೇ ಗೇಲಿ ಮಾಡಿಕೊಂಡು ನಗುತ್ತಾರೆ. ಇಲ್ಲಿ ಲೇಟ್ ಆಗಿ ಬರುವುದು ಎಷ್ಟು ಸಹಜ ಎನ್ನುವುದಕ್ಕೆ ಒಂದು ಉದಾಹರೆಣೆ ನೀಡುತ್ತೇನೆ . ನಿಗದಿತ ಸಮಯದ ನಂತರ ಹದಿನೈದು ನಿಮಿಷವಾದರೂ ಬರಲಿಲ್ಲ ಎಂದರೆ ಮೊದಲು ಬಂದ ವ್ಯಕ್ತಿ ಕರೆ ಮಾಡಿ ಎಲ್ಲಿದ್ದೀರಾ ಎಂದು ಕೇಳುತ್ತಾರೆ. ಅಂದರೆ ಹದಿನೈದು ನಿಮಿಷ ತಡವಾಗಿ ಬರುವುದನ್ನ ತಡ ಎಂದು ಪರಿಗಣಿಸುವುದೇ ಇಲ್ಲ !!
ಅದು 2006ನೇ ಇಸವಿಯ ಆಗಸ್ಟ್ ತಿಂಗಳು ನನ್ನ ಮದುವೆಗೆ ಸ್ಪೇನ್ ನಿಂದ ಐದಾರು ಸ್ಪ್ಯಾನಿಷ್ ಸ್ನೇಹಿತರು ಬಂದಿದ್ದರು. ಅವರು ನಮ್ಮ ದರ್ಶಿನಿಗಳನ್ನ ನೋಡಿ , ಅಲ್ಲಿ ನಿಂತು ಐದತ್ತು ನಿಮಿಷದಲ್ಲಿ ತಿಂಡಿ ಕಾಫಿ ಮುಗಿಸಿ ಬರ್ರೆಂದು ಹೋಗುವ ಜನರನ್ನ ನೋಡಿ ತೀವ್ರ ಒತ್ತಡಕ್ಕೆ ಒಳಗಾದರು . ಅವರು ಹೇಗೆ ಕೂರದೆ ನಿಂತು ತಿನ್ನುತ್ತಾರೆ ? ಎನ್ನುವುದು ಅವರ ಪ್ರಶ್ನೆ.
ಸ್ಯಾಂಡ್ವಿಚ್ ಬಿಟ್ಟು , ಊಟ , ತಿಂಡಿಯನ್ನ ಪಾಂಗಿತವಾಗಿ ಕುಳಿತು ತಿಂದು ಮಧ್ಯಾಹ್ನದ ನಿದ್ದೆ (ಸಿಯಾಸ್ತ ) ತೆಗೆಯುವ ಸ್ಪ್ಯಾನಿಶರಿಗೆ ನಾವು ನಿಂತು ತಿನ್ನುವುದು 'ಒತ್ತಡ ' . ಬದುಕಿನ ದೊಡ್ಡ ದೊಡ್ಡ ಒತ್ತಡಗಳನ್ನ ಕಂಡ ಭಾರತೀಯ ಬಡ ಮಧ್ಯಮ ವರ್ಗದಿಂದ ಬಂದ ನನ್ನಂತಹವರಿಗೆ ಇಂದಿಗೂ ಕೆಲವು ಸ್ಪ್ಯಾನಿಷ್ ಗುಣಗಳು ಅಚ್ಚರಿಗೊಳಿಸುತ್ತಲೇ ಇರುತ್ತದೆ.
-
KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಸಚಿವರಾಗಿ ಕೆಎಎಸ್ ಅಧಿಕಾರಿ ಎಸ್.ಕುಸುಮಾ ಕುಮಾರಿ ನೇಮಕ -
April 5 Horoscope: ನಿಮ್ಮ ಅದೃಷ್ಟ ಹೇಗಿದೆ? ಸಂಪೂರ್ಣ ಮಾಹಿತಿ ಇಲ್ಲಿ -
ಬೆಂಗಳೂರಿನ ಹೊಸೂರು ರಸ್ತೆಯ ದುಸ್ಥಿತಿ: ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಟ್ಯಾಗ್ ಮಾಡಿ ಕಿರಣ್ ಮಜುಂದಾರ್ ಶಾ ಆಕ್ರೋಶ -
Bengaluru Viral: ಬೆಂಗಳೂರಿನ ಲಾಲ್ಬಾಗ್ ನೋಡಿ ತಪ್ಪೊಪ್ಪಿಗೆ ಕೊಡಬೇಕು ಎಂದ ವಿದೇಶಿಗ, ವಿಡಿಯೋ ವೈರಲ್ -
RCB vs CSK: ಆರ್ಸಿಬಿ ಕಡೆಯಿಂದ ಅಭಿಮಾನಿಗಳಿಗೆ ವಿಶೇಷ ಸಂದೇಶ: ಇಂದಿನ ಪಂದ್ಯಕ್ಕೂ ಮುನ್ನ ಇದು ಗಮನದಲ್ಲಿರಲಿ -
Gold and Silver Rate Today April 5: ಚಿನ್ನ - ಬೆಳ್ಳಿ ಪ್ರಿಯರಿಗೆ ಗುಡ್ನ್ಯೂಸ್, ಮುಂದಿನ ವಾರ ಹೇಗಿರಲಿದೆ ಬಂಗಾರದ ಬೆಲೆ -
Bengaluru Migration: ಅಸ್ಸಾಂನಿಂದ ಬೆಂಗಳೂರಿಗೆ ಬರುವವರ ಸಂಖ್ಯೆ ಕಡಿಮೆಯಾಗಿದೆ ಎಂದ ಸಂಸದ ತೇಜಸ್ವಿ ಸೂರ್ಯ -
ಸಿಎಸ್ಕೆ ವಿರುದ್ಧದ ಹೈವೋಲ್ಟೇಜ್ ಪಂದ್ಯಕ್ಕೂ ಮುನ್ನ ಸ್ಫೋಟಕ ಸತ್ಯ ಬಿಚ್ಚಿಟ್ಟ ಆರ್ಸಿಬಿ ಸ್ಟಾರ್, ಕನ್ನಡಿಗ ಪಡಿಕ್ಕಲ್ -
ಉತ್ತರ ಕರ್ನಾಟಕದ ರೈಲು ಪ್ರಯಾಣಿಕರಿಗೆ ಬಂಪರ್ ಕೊಡುಗೆ: 3 ರೈಲುಗಳು ಇನ್ಮುಂದೆ ಪರ್ಮನೆಂಟ್, ಟಿಕೆಟ್ ದರದಲ್ಲಿ ಭಾರಿ ಇಳಿಕೆ! -
Match Weather Report: ಚಿನ್ನಸ್ವಾಮಿಯಲ್ಲಿ ಆರ್ಸಿಬಿ-ಸಿಎಸ್ಕೆ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದ್ಯಾ? ಹವಾಮಾನ ಇಲಾಖೆ ಹೇಳೋದೇನು? -
ಉಪೇಂದ್ರ ಅಣ್ಣನ ಮಗನ ಜೊತೆ ಶ್ರೇಯಾಂಕ ಪಾಟೀಲ್ ಮದುವೆ ಸುದ್ದಿ: ಖಡಕ್ ಪ್ರತಿಕ್ರಿಯೆ ಕೊಟ್ಟ ನಟ ನಿರಂಜನ್ ಸುಧೀಂದ್ರ -
Prakash Raj: ಚಹಾ ಮಾರುವುದರಿಂದ ಸಿನಿಮಾ ಮಾರುವವರೆಗೆ ಮೋದಿ ಬಗ್ಗೆ ನಟ ಪ್ರಕಾಶ್ ರಾಜ್ ವ್ಯಂಗ್ಯ












Click it and Unblock the Notifications