ಯೂರೋಪಿಯನ್ನರು ಎಂದಾಕ್ಷಣ ಅವರೇನೂ ಅನ್ಯ ಗ್ರಹದವರಲ್ಲ!

ಅದು 2013ನೇ ಇಸವಿಯ ಒಂದು ತಿಂಗಳು , ಇಂಗ್ಲೆಂಡ್ ದೇಶದಲ್ಲಿ ತಿಂಗಳುಗಳ ಬೆಟ್ಟಿಂಗ್ ಆಗತಾನೆ ಕೊನೆಗೊಂಡಿತ್ತು , ಬ್ರಿಟಿಷ್ ರಾಜಮನೆತನಕ್ಕೆ ಗಂಡು ಮಗು ಹುಟ್ಟಿತ್ತು . ಹುಟ್ಟುವ ಮಗು ಗಂಡೋ ಹೆಣ್ಣೋ ಎನ್ನುವುದರ ಬಗ್ಗೆ ಬೆಟ್ಟಿಂಗ್ ನಡೆದಿತ್ತು. ಮತ್ತೆ ಬೆಟ್ಟಿಂಗ್ ಮಗುವಿನ ಹೆಸರು ಜಾರ್ಜ್ ಅಥವಾ ಜೇಮ್ಸ್ ಎನ್ನುವುದರ ಕುರಿತು ಶುರು ಕೂಡ ಆಗಿತ್ತು. ಲಂಡನ್ ನ ಬೀದಿಗಳಲ್ಲಿ ಹತ್ತು ಹೆಜ್ಜೆಗೆ ಒಂದು ಬೆಟ್ಟಿಂಗ್ ಶಾಪ್ ಇದೆ. ಜಗತ್ತಿನ ಶಾಂತಿ ಕದಡಿದ ಮಹಾನ್ ದೇಶ ಇವತ್ತಿಗೆ ಜರ್ಜರಿತವಾಗಿದೆ.

2013ರ ಆ ದಿನ ಲಂಡನ್‌ನಲ್ಲಿ ವಿಪರಿತ ಮಳೆ , ಗುಡುಗು-ಸಿಡಿಲು ಕೂಡ ಇತ್ತು. ಇಲ್ಲಿನ ನ್ಯೂಸ್ ಚಾನೆಲ್ ರಾಜಕುವರನ ಹುಟ್ಟು ಪ್ರಕೃತಿ ಆಚರಿಸುತ್ತಿದೆ ಎಂದು ಅರುಚಾಡಿದ್ದು ಕೇಳಿದಕ್ಕೆ ಸಾಕ್ಷಿಯಾದೆ. ಅದೇ ನಮ್ಮ ಪುರಾಣಗಳಲ್ಲಿ ಮಹಾನ್ ಪುರುಷರು ಹುಟ್ಟಿದಾಗ ಆಗಿತ್ತು ಎನ್ನಿ ಆಗ ನಾವು ಅಚಾನಕ್ಕಾಗಿ ವಿಜ್ಞಾನದ ಅರಿವಿಲ್ಲದ ಮೂಢನಂಬಿಕೆ ಉಳ್ಳವರಾಗಿ ಬದಲಾಗಿ ಬಿಡುತ್ತೇವೆ. ಈ ಮಾತುಗಳನ್ನ ಉಲ್ಲೇಖಿಸಲು ಕಾರಣ ಸ್ಪೇನ್ ದೇಶ ಕೂಡ ಇದಕ್ಕಿಂತ ಭಿನ್ನವಾಗಿಲ್ಲ.

ಇಲ್ಲಿಯೂ ರಾಜಮೆತನವನ್ನ ಬಹಳವಾಗಿ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಾರೆ. ಅದರಲ್ಲೂ ಮೀಡಿಯಾಗಳು ಅವರು ಹಾಕುವ ಬಟ್ಟೆಯಿಂದ ಹಿಡಿದು ಎಲ್ಲವನ್ನೂ ಗಮನಿಸುತ್ತದೆ. ಪತ್ರಿಕೆಗಳು ಅವುಗಳ ಬಗ್ಗೆ ಉದ್ದುದ್ದ ಬರೆಯುತ್ತವೆ. ಹೀಗೆ ಗಾಸಿಪ್‌ಗಳನ್ನ ಪ್ರಕಟಿಸಲು ಪತ್ರಿಕೆಯಿದೆ, ಅದರ ತುಂಬಾ ರಾಜಮನೆತನ ಮತ್ತು ತೀರಾ ಪ್ರಸಿದ್ಧರ ಬಗ್ಗೆ ಸುದ್ದಿಗಳಿರುತ್ತವೆ. ಅದನ್ನ ಕೊಂಡು ಓದಲು ದೊಡ್ಡ ಸಂಖ್ಯೆಯಲ್ಲಿ ಜನರಿದ್ದಾರೆ ಎನ್ನುವುದನ್ನ ವಿಶೇಷವಾಗಿ ಹೇಳುವ ಅವಶ್ಯಕೆಯಿಲ್ಲ ಎಂದುಕೊಳ್ಳುವೆ.

Barcelona Memories Column By Rangaswamy Mookanahalli Part 59

ಯೂರೋಪಿಯನ್ನರು ಎಂದ ತಕ್ಷಣ ಅವರೇನೂ ಆಕಾಶದಿಂದ ಇಳಿದು ಬಂದವರಲ್ಲ ಎನ್ನುವುದನ್ನ ನಮ್ಮ ಜನತೆ ಅರಿತುಕೊಳ್ಳಲಿ ಎನ್ನುವ ಉದ್ದೇಶದಿಂದ ಮಾತ್ರ ಮೇಲಿನ ಸಾಲುಗಳನ್ನ ಬರೆದಿದ್ದೇನೆ. ಜನವರಿ ಏಳನೇ ತಾರೀಕು ಸ್ಪೇನ್‌ನಲ್ಲಿ ದಿಯಾ ದೆ ರೇಯೆಸ್ ಎಂದು ಆಚರಿಸುತ್ತಾರೆ. ದೇಶದ ಎಲ್ಲಾ ಹಳ್ಳಿ ಮತ್ತು ನಗರಗಳಲ್ಲಿ ರಾಜನ ಪ್ರತಿಮೆ ಅಥವಾ ಕೆಲವೊಮ್ಮೆ ಡಮ್ಮಿ ರಾಜ ಕುಳಿತು ಮೆರವಣಿಗೆಯನ್ನ ಮಾಡುತ್ತಾರೆ.

ನಾನು ಬಾರ್ಸಿಲೋನಾಗೆ ಬಂದ ಹೊಸತರಲ್ಲಿ ನಿಜವಾದ ರಾಜ ಬರುತ್ತಾನೆ ಎಂದು ರಸ್ತೆಯ ಮೆರವಣಿಗೆಯ ಸಾಲಿನಲ್ಲಿ ನಿಂತದ್ದು ಉಂಟು, ಆ ನಂತರ ಪ್ರತಿಮೆಯನ್ನ ಇಟ್ಟು ಬಂದ ಆ ಸವಾರಿಯನ್ನ ನೋಡಿ ದಂಗಾಗಿ ಹೋದೆ , ಮನಸ್ಸಿನಲ್ಲಿ ಅಯ್ಯಗಳಿರಾ ಕೇವಲ ರಾಜನ ಪ್ರತಿಮೆ ಹೊತ್ತು ಬರುವ ಸವಾರಿಯನ್ನ ನೋಡಲು ಈ ಮಟ್ಟದ ನೂಕುನುಗ್ಗಲು, ಇನ್ನು ನಿಜವಾದ ರಾಜ ಬಂದರೆ ? ಹೇಗೆ ಎಂದು ಕೊಂಡಿದ್ದೆ.

ಹಳೆ ತಲೆಮಾರಿನ ಜನರಿಗೆ ಇಂದಿಗೂ ರಾಜ ಮನೆತನದಲ್ಲಿ ಆಗುವ ಸಣ್ಣ ಪುಟ್ಟ ಬದಲಾವಣೆಗಳು ಬೇಕು. ತಮ್ಮ ಮನೆಯಲ್ಲಿ ಆದ ರೀತಿಯಲ್ಲಿ ಕುಳಿತು ಅದರ ಬಗ್ಗೆ ಚರ್ಚೆ ಮಾಡುತ್ತಾರೆ. ಕೇವಲ ಅವರ ಮನೆಯ ಚಾವಡಿಗಳಲ್ಲಿ ಇಂತಹ ಮಾತುಕತೆಯಾಗುತ್ತವೆ ಎಂದುಕೊಂಡರೆ ಅದು ತಪ್ಪು , ಮುಖ್ಯ ಟೀವಿ ವಾಹಿನಿಯಲ್ಲಿ ಕುಳಿತು 'ರಾಣಿ ಹಾಕಿದ ಬಟ್ಟೆಯ ಬೆಲೆ ಎಷ್ಟು ? ಆಕೆಯೇಕೆ ಇಂದು ಇಷ್ಟು ಸಸ್ತಾ ಬಟ್ಟೆಯನ್ನ ಹಾಕಿದ್ದಳು ? ಎನ್ನುವ ಮಾತುಕತೆಯನ್ನ ಆಡುತ್ತಾರೆ. ಅದಕ್ಕೆ ಲಕ್ಷಾಂತರ ವೀಕ್ಷಕರ ದಂಡು ಬೇರೆ.

ತೀರಾ ಇತ್ತೀಚಿನ ತಲೆಮಾರಿನ ಹುಡುಗರು ಬದಲಾಗಿದ್ದಾರೆ. ಎಲ್ಲರೂ ಎಂದಲ್ಲ , ಆದರೆ ಒಂದು ದೊಡ್ಡ ವರ್ಗ ' ಮೊನಾರ್ಕಿಯ ಈಸ್ ಪೋರ್ಕರಿಯ ' ಎನ್ನುವ ಕೂಗನ್ನ ಹುಟ್ಟುಹಾಕಿದೆ. ರಾಜ ವಂಶಸ್ಥ ಆಡಳಿತ ಕಸ ಎನ್ನುವ ಅರ್ಥವನ್ನ ಇದು ನೀಡುತ್ತದೆ. ವ್ಯಕ್ತಿಯ ಗುಣಾವಗುಣಗಳ ಆಧಾರದ ಮೇಲೆ ಅವನಿಗೆ ಹುದ್ದೆ ಸಿಗಬೇಕು ಹೊರತು ಯಾವ ಮನೆಯಲ್ಲಿ ಹುಟ್ಟಿದ ಎನ್ನುವುದರ ಆಧಾರದ ಮೇಲಲ್ಲ.

ಆದರೇನು ಪ್ರಜಾಪ್ರಭುತ್ವ ಎಂದು ಹೇಳಿಕೊಳ್ಳುವ ಅತಿ ದೊಡ್ಡ ಭಾರತ ದೇಶದಲ್ಲೇ ವಂಶಗಳ ಅಧಿಕಾರ ಇಳಿಯುವ ಸೂಚನೆಗಳು ಇಲ್ಲವಾದಾಗ , ಪುಟಾಣಿ ಸ್ಪೇನ್ ನಲ್ಲಿ ರಾಜಮನೆತನದ ಶಕ್ತಿ ಇಂದು ನಾಳೆಗೆ ಕ್ಷೀಣಿಸುವ ಲಕ್ಷಣಗಳು ಕಾಣುತ್ತಿಲ್ಲ. ರಾಜ ಮನೆತನದವರಿಗೆ ಸರಕಾರಿ ಖಜಾನೆಯಿಂದ ನೀಡುವ ಹಣದ ಬಗ್ಗೆಯೂ ಆಗೀಗ ಜನರು ತಕರಾರು ಎತ್ತಲು ಶುರು ಮಾಡಿದ್ದಾರೆ. ಸ್ಪೇನ್ ಒಂದೇ ಅಲ್ಲ ಯೂರೋಪಿನ ಹಲವು ದೇಶಗಳಲ್ಲಿ ಇಂದಿಗೂ ಸದ್ದಿಲ್ಲದೇ ರಾಜ ಅಥವಾ ರಾಣಿಯರ ಆಡಳಿತ ಸಾಗುತ್ತಿದೆ.

ಭಾರತದಲ್ಲಿ ಇದ್ದ ರಾಜಮನೆತನದ ವ್ಯವಸ್ಥೆಯನ್ನ ಬದಲಿಸಿದ ಬ್ರಿಟಿಷರು ಮಾತ್ರ ಅದೇ ವ್ಯವಸ್ಥೆಗೆ ಜೋತು ಬಿದ್ದಿರುವುದು ಅವರ ದ್ವಂದ್ವ ನೀತಿಗೆ ದೊಡ್ಡ ಉದಾಹರಣೆ. ಬಾರ್ಸಿಲೋನಾ ದಲ್ಲಿ ಇದ್ದಷ್ಟು ವರ್ಷವೂ ಪ್ರತಿ ನಿತ್ಯ ಬೆಳಿಗ್ಗೆ 5.30ಕ್ಕೆ ಎದ್ದು 6ಘಂಟೆಗೆ ಜಾಗಿಂಗ್ ಹೊರಟರೆ 7ಕ್ಕೆ ವಾಪಸ್ಸು ಬರುತ್ತಿದ್ದೆ, ಬೇಸಿಗೆಯಲ್ಲಿ ಸರಿ ,ಚಳಿಗಾಲದಲ್ಲಿ ಎನ್ನುವ ಪ್ರಶ್ನೆ ನಿಮ್ಮಲ್ಲಿ ಹಲವರಿಗೆ ಉದ್ಭವಾಗಿರಬಹುದು ? 2015ರ ಒಂದು ದಿನ -1 ತಾಪಮಾನವಿತ್ತು.

ನಿತ್ಯದಂತೆ ಎದ್ದು, ಓಡಿ, ನಂತರ ಇಲ್ಲಿನ ಸರಕಾರಿ ಕಛೇರಿಗೆ ಭೇಟಿ ಕೊಟ್ಟು ,ಕೆಲಸ ಮುಗಿದ ನಂತರ ಕಾಫಿ ಬಾರ್ ಹೊಕ್ಕೆ, ಹೋಸೆ ಅಲ್ಲಿ ಕೆಲಸ ಮಾಡುವನ ಹೆಸರು. ಅವನೊಂದಿಗೆ ಮಾತಿಗಿಳಿದೆ ,ಬೇಸಿಗೆಯಿರಲಿ ,ಚಳಿಗಾಲ ವಾಗಲಿ ಆತ ನಿತ್ಯ ಬೆಳಗ್ಗೆ 4 ಘಂಟೆಗೆ ಕೆಲಸಕ್ಕೆ ಹಾಜರ್ ,ಕಳೆದ 25ವರ್ಷದಿಂದ ಇದೆ ಅವನ ದಿನಚರಿಯಂತೆ !!., ನನ್ನ ಖುಷಿಗೆ ನಾನು ಎದ್ದು ಓಡುವುದಕ್ಕೂ ,ಕೆಲಸ ಮಾಡಲೇಬೇಕೆಂಬ ಕಟ್ಟುಪಾಡಿಗಾಗಿ ಏಳುವುದಕ್ಕೂ ತುಂಬಾನೇ ವ್ಯತ್ಯಾಸವಿದೆ .

ಚಳಿಯಿರಲಿ ಬಿಸಿಲಿರಲಿ ನಾನು ಓಡುವುದು ತಪ್ಪಿಸಿಲ್ಲ ಅ ಬಗ್ಗೆ ನನಗಿದ್ದ ಹೆಮ್ಮೆ (ಅಹಂಕಾರ )ಗೆ ತನ್ನ ನಗು ಮಾತಿನಿಂದ ಪೆಟ್ಟು ನೀಡಿದ್ದ ಹೋಸೆ. ಆತನಿಗೆ ಅದರ ಅರಿವು ಕೂಡ ಇರಲಿಲ್ಲ. ಈ ವಿಷಯವನ್ನ ಉಲ್ಲೇಖ ಮಾಡಲು ಕೂಡ ಕಾರಣವಿದೆ , ಸಾಮಾನ್ಯವಾಗಿ ಸ್ಪ್ಯಾನಿಶರು ಎಂದರೆ 'ಸೇರ್ವೆಸ ' (ಬಿಯರ್ ) ಹಿಡಿದು ಕುಳಿತು ಬಿಡುತ್ತಾರೆ , ಇತರ ಯೂರೋಪಿಯನ್ನರಿಗಿಂತ ಸ್ವಲ್ಪ ಮೈಗಳ್ಳರು ಎನ್ನುವ ಮಾತು ಪ್ರಸಿದ್ಧವಾಗಿದೆ.

ನಾವೆಲ್ಲರೂ ಒಂದು ಪಾಪ್ಯುಲರ್ ವ್ಯೂ ಸೃಷ್ಟಿಯಾದರೆ ಸಾಕು ಅದಕ್ಕೆ ಜೋತು ಬೀಳುತ್ತೇವೆ , ಆದರೆ ಬದುಕು ಎಂದಿಗೂ ಆ ಚೌಕಟ್ಟಿನಲ್ಲಿ ಸಾಗುವುದಿಲ್ಲ. ಸಮಾಜವೆಂದ ಮೇಲೆ ಎಲ್ಲಾ ರೀತಿಯ ಜನರೂ ಇರುತ್ತಾರೆ. ಸಾಮಾನ್ಯವಾಗಿ ಸ್ಪ್ಯಾನಿಶರು ಎಂದಷ್ಟೇ ಹೊರ ಜಗತ್ತನ್ನ ಸುತ್ತಲು , ನೋಡಲು ಇಷ್ಟ ಪಡುವವರು , ಆದರೆ ಸ್ಪೇನ್ ಬಿಟ್ಟು ಪಕ್ಕದ ಫ್ರಾನ್ಸ್ ಅಥವಾ ಜರ್ಮನಿಗೆ ಕೂಡ ಪ್ರಯಾಣ ಮಾಡದ ಜನರೂ ಇದ್ದಾರೆ. ನಾವು ಯಾವುದನ್ನೇ ಆಗಲಿ ಇಷ್ಟೇ ಎಂದು ಗೆರೆ ಎಳೆಯುವಂತಿಲ್ಲ , ಏಕೆಂದರೆ ಗೆರೆಯ ಹಿಂದೆ ಮುಂದೆ ಗೆರೆಗಿಂತ ವಿಶಾಲವಾದ ಬದುಕಿರುತ್ತದೆ.

ನಾವು ಒಂದು ದೇಶವನ್ನ ಕೇವಲ ಒಂದೆರೆಡು ವಾರ ನೋಡಿ ಬಂದು ನಮ್ಮ ಅನಿಸಿಕೆಯನ್ನ ಎಲ್ಲರದು ಎನ್ನುವಂತೆ ಬಿಂಬಿಸಿ ಬರೆದು ಬಿಡುತ್ತೇವೆ. ಅದು ತಪ್ಪು ಎನ್ನುವುದನ್ನ ಕೂಡ ಹೇಳುವುದು ಇನ್ನೊಂದು ಕಾರಣ. ಇವತ್ತು ಜಗತ್ತು ಓಡುತ್ತಿರುವ ವೇಗದ ಲೆಕ್ಕಾಚಾರದಲ್ಲಿ ಈ ಮಾತು ನೂರಕ್ಕೆ ನೂರು ನಿಜ . ಬಂಧು -ಬಳಗ ದೂರದ ಮಾತಾಯಿತು . ಒಡಹುಟ್ಟಿದವರು ಕೂಡ ಒಬ್ಬರ ಮುಖ ಒಬ್ಬರು ನೋಡಿ ವರ್ಷಗಳು ಕಳೆದಿರುತ್ತವೆ .

ಕೆಲಸ ಬದುಕು ಅರಸಿ ಭೂಪಟದ ಒಂದೊಂದು ಮೂಲೆಯಲ್ಲಿ ಬದುಕುವ ಜನರದ್ದು ಒಂದು ಮಾತಾದರೆ , ಪಕ್ಕದ ರಸ್ತೆಯಲ್ಲಿದ್ದೂ ಮುಖ ನೋಡದ ಸಂಬಂಧ ಇನ್ನಷ್ಟು ಜನರದ್ದು . ಭೂಮಿಯ ಬೆಲೆ ಬೆಂಗಳೂರಿನಲ್ಲಿ ಗಗನ ಮುಟ್ಟಿದ್ದೆ ತಡ ಸಂಬಂಧಗಳು ಪಾತಾಳಕ್ಕಿಳಿದಿವೆ . ಹೀಗಾಗಿ ಇಂದು ಸಮಾನಮನಸ್ಕರ ಜೊತೆ ಮಾತನಾಡಿದಷ್ಟು ವೇಳೆ ಒಡಹುಟ್ಟಿದವರ ಜೊತೆ ಅಥವಾ ಬಂಧುಗಳ ಜೊತೆ ಮಾತಾಡುವುದಿಲ್ಲ. ಇದು ಇವತ್ತಿನ ಮಾತಾಯಿತು . ಹಾಗಾದರೆ ಆಪತ್ತಿಗಾದವೇನೇ ನೆಂಟ ಅಂತಲೋ ಅಥವಾ ಸ್ನೇಹಿತ ಅಂತಲೋ ಗಾದೆ ಮಾತು ಏಕೆ ಹುಟ್ಟಿತು ?

ಅವತ್ತು ಕೂಡ ಸಂಬಂಧಗಳಲ್ಲಿ ಇಂದಿನಂತೆ ಬಿರುಕಿತ್ತೇ ? ಎನ್ನುವ ಪ್ರಶ್ನೆ ಸಹಜವಾಗೇ ಉಧ್ಭವಾಗುತ್ತದೆ. ಗಮನಿಸಿ ಹಿಂದಿನ ದಿನಗಳಲ್ಲಿ ಇಂದಿನಂತೆ ವೇಗವಾಗಿ ಒಂದೂರಿನಿಂದ ಇನ್ನೊಂದೂರಿಗೆ ತಲುಪಲು ಸಾಧ್ಯವಿರಲಿಲ್ಲ . ಅಲ್ಲದೆ ನಮಗೆ ಹೀಗಾಗಿದೆ ಬಂದು ಸಹಾಯ ಮಾಡಿ ಎಂದು ಹೇಳಲು ಸಂವಹನ ಮಾಧ್ಯಮಗಳು ಕೂಡ ಈ ಮಟ್ಟದಲ್ಲಿ ಬೆಳದಿರಲಿಲ್ಲ . ಹೀಗಾಗಿ ಅಂದಿನ ಕಷ್ಟಕ್ಕೆ ಯಾರು ಸ್ಪಂದಿಸುತ್ತಿದ್ದರು ಅಂದರೆ ಹತ್ತಿರ ಇದ್ದ ಯಾರಾದರೂ ಸರಿಯೇ ಅವರೇ ನೆಂಟರು ಅಥವಾ ಸ್ನೇಹಿತರು ಎನ್ನುವ ಅರ್ಥದಲ್ಲಿ ಈ ಮಾತು ಹುಟ್ಟಿರಹುದು.

ಸ್ಪೇನ್ ದೇಶ ಅಂತಲ್ಲ ಇತ್ತೀಚಿನ ದಿನದಲ್ಲಿ ಇದನ್ನ ನಾನು ಭಾರತದಲ್ಲೂ ಕಾಣುತ್ತಿದ್ದೇನೆ. ಹಿಂದೆಲ್ಲ ಕಷ್ಟ ಎಂದರೆ ಬರುತ್ತಿದ್ದ ಬಂಧುಗಳು ಈಗ ಕಷ್ಟಕ್ಕೂ ಇಲ್ಲ ಸುಖಕ್ಕೂ ಇಲ್ಲ ಎನ್ನುವಂತಾಗಿದೆ. ಭೌಗೋಳಿಕ ದೂರ ಒಂದು ಕಾರಣವಾದರೆ ,ಬದಲಾದ ಬೇಕು ಬೇಡಗಳು ಇನ್ನೊಂದು ಪ್ರಬಲ ಕಾರಣವಾಗಿದೆ. ಇಪ್ಪತ್ತು ವರ್ಷದ ಹಿಂದೆ ಬೆರಗುಗಣ್ಣಿನಿಂದ ಇದೇನು ಈ ಸಮಾಜ ಹೀಗಿದೆ ? ಎಂದು ನಾನು ಯಾವ ಸಮಾಜವನ್ನೇ ನೋಡಿದ್ದೇ , ಹೆಚ್ಚು ಕಡಿಮೆ ಅದೇ ಸಮಾಜವನ್ನ ನಾನು ಈಗ ಬೆಂಗಳೂರಿನಲ್ಲಿ , ಮೈಸೂರಿನಲ್ಲಿ ಒಟ್ಟಾರೆ ಭಾರತದಲ್ಲಿ ಕಾಣುತ್ತಿದ್ದೇನೆ.

ಯಾವುದನ್ನ ನಾವು ಸಾಮಾಜಿಕವಾಗಿ ಮಾಡುವಾಗ ಗುರು ಹಿರಿಯರು , ಸಮಾಜ , ಸರೀಕರು ಎಂದೆಲ್ಲಾ ಹೆದರಿ ಮಾಡುವ ಮುನ್ನ ಚಿಂತಿಸುತ್ತಿದ್ದೆವು ಅದು ಇದೀಗ ಇಲ್ಲವಾಗಿದೆ. ಯಾರೂ ಯಾರಿಗೂ ಕೇರ್ ಮಾಡದ , ಅನ್ನಿಸಿದ್ದ ಮಾಡುವ ಸಮಾಜ ಜಗತ್ತಿನಾದ್ಯಂತ ಶುರುವಾಗಿದೆ. ಬೇಡವಾದದ್ದು ಹಬ್ಬುವಷ್ಟು ವೇಗವಾಗಿ ಒಳಿತು ಪಸರಿಸದೆ ಇರುವುದು ಕೂಡ ಜಾಗತಿಕ.

ಹಿಂದೆ ಅಂದರೆ ನೂರಿನ್ನೂರು ವರ್ಷದ ಹಿಂದಿನ ನಮ್ಮ ಪೂರ್ವಜರ ಬದುಕು ಕೂಡ ಹೆಚ್ಚು ಕಡಿಮೆ ಮೌಲ್ಯಗಳ ಹಿಂದೆ ಮುಂದೆ ಸಾಗುತ್ತಿತ್ತು . ಬದಲಾದ ಸನ್ನಿವೇಶದಲ್ಲಿ ಯಾವುದು ವೇಗ ಪಡೆದುಕೊಳ್ಳುತ್ತದೆ ಆದರೆ ಸುತ್ತಮುತ್ತ ಜನರ ಬದುಕು ಸಾಗುತ್ತಿದೆ. ಸರಿ ತಪ್ಪುಗಳ ಲೆಕ್ಕಾಚಾರ ಹಾಕಲು ಕೂಡ ವೇಳೆಯಿಲ್ಲ ಎನ್ನುವುದು ಈ ವೇಗದ ಬದುಕಿನ ಮಹಾನ್ ವಿಪರ್ಯಾಸ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+