ಸಮೂಹ ಸನ್ನಿಗೆ ಸಿಲುಕುವುದು ಜನ ಸಾಮಾನ್ಯನ ಸಾಮಾನ್ಯ ಗುಣ!

ಕ್ರಿಕೆಟ್ ಎನ್ನುವುದು ಭಾರತದಲ್ಲಿ ಧರ್ಮ ಎನ್ನುವ ಮಟ್ಟಿಗೆ ಬೆಳೆದಿದೆ, ಅಥವಾ ಬೆಳೆಸಿದ್ದಾರೆ. ಇವತ್ತು ಅಂತಲ್ಲ ನನ್ನ ಏರು ಯೌವ್ವನದ ದಿನಗಳಲ್ಲಿ ಕೂಡ ನಾನು ಟಿವಿಯ ಮುಂದೆ ಕುಳಿತವನಲ್ಲ. ಆದರೆ ಅಣ್ಣ (ಅಪ್ಪ ) ನಿಗೆ ಕ್ರಿಕೆಟ್ ಎಂದರೆ ಪಂಚಪ್ರಾಣ. ಟಿವಿ ಇರದ ಸಮಯದಲ್ಲಿ ಅಪ್ಪ ರೇಡಿಯೋಗೆ ಅಂಟಿ ಕೊಂಡು ಕೂತಿರುತ್ತಿದ್ದರು. ಕಾಂಮೆಟರಿ ಕೇಳುವುದು ಅವರಿಗೆ ಅತೀವ ಇಷ್ಟವಾದ ಕೆಲಸವಾಗಿತ್ತು. ಮನೆಯಲ್ಲಿ ನಾವ್ಯಾರಾದರೂ ಮಾತನಾಡಿದರೆ ಅಥವಾ ಶಬ್ದ ಮಾಡಿದರೆ ಸಾಕು ಅಪ್ಪ ಸಿಡಿಮಿಡಿ ಗೊಳ್ಳುತ್ತಿದ್ದರು.

ಅವರು ಹೇಳುವ ಪ್ರತಿ ಪದವನ್ನೂ ಕೇಳಿಸಿಕೊಳ್ಳುತ್ತಿದ್ದರು. ಟಿವಿ ಬಂದ ಮೇಲೆ ಇದರ ಕಥೆ ಇನ್ನೂ ಬದಲಾಯ್ತು. ರಜಾ ದಿನಗಳಾದರೆ ಇಡೀ ದಿನ ಅಪ್ಪ ಟಿವಿಯ ಮುಂದೆ ಕುಳಿತು ಪ್ರತಿ ಬಾಲನ್ನು ಬಿಡದೆ ನೋಡುತ್ತಿದ್ದರು. ಜಾಹಿರಾತು ಬಂದಾಗ ಮಾತ್ರ ಟಾಯ್ಲೆಟ್ ಮತ್ತಿತರೆ ಜರೂರಿ ಕೆಲಸಗಳು ನೆನಪಾಗುತ್ತಿದ್ದವು. ಅದು ಹೇಗೆ ಪೂರ್ಣ ದಿನ ಆ ಆಟವನ್ನ ನೋಡುತ್ತಿದ್ದರು ಎನ್ನುವುದು ನನಗೆ ಇಂದಿಗೂ ಸೋಜಿಗ. ಇದು ನನ್ನಪ್ಪನ ಕಥೆಯಲ್ಲ , ಇದು 95 ಪ್ರತಿಶತ ಭಾರತೀಯರ ಕಥೆ.

ಇಷ್ಟೊಂದು ಜನ ಒಂದು ಕ್ರೀಡೆಯನ್ನ ಆರಾಧಿಸಲು ಶುರು ಮಾಡಿದರೆ ಏನಾಗಬಹುದು ? ಅದು ಭಾರತದಲ್ಲೂ ಆಗಿದೆ. ಈ ಕ್ರೀಡೆಯನ್ನ ಒಂದು ದೊಡ್ಡ ಉದ್ಯಮವನ್ನಾಗಿ ಮಾರ್ಪಡಿಸಲಾಗಿದೆ. ಸೋಲು -ಗೆಲುವುಗಳ ಮೀರಿ ಆಟಗಾರರು ಹಣವಂತರಾಗುತ್ತಾ ಹೋಗುತ್ತಲೇ ಇದ್ದಾರೆ. ಕ್ರಿಕೆಟ್ ಆಟವಾಗಿ ಉಳಿಯದೆ ಮನರಂಜನೆಯ ಇನ್ನೊಂದು ಸಾಧನವಾಗಿ ಬದಲಾಗಿ ಹೋಗಿದೆ. ಆದರೂ ಜನರಿಗೆ ಕ್ರಿಕೆಟ್ ಪ್ರೇಮ ಒಂದಿಂಚೂ ಕೂಡ ಕಡಿಮೆಯಾಗಿಲ್ಲ.

Barcelona Memories Column By Rangaswamy Mookanahalli Part 54

ಸ್ಪೇನ್ ಗೆ ಬಂದ ಹೊಸತರಲ್ಲಿ ಇಲ್ಲಿನ ಜನ ಈ ವಿಷಯದಲ್ಲಿ ಸ್ವಲ್ಪವಾಸಿ ಎನ್ನುವ ನನ್ನ ನಂಬಿಕೆ ಬಹಳ ದಿನ ಉಳಿಯಲಿಲ್ಲ. ಇಲ್ಲಿ ಕ್ರಿಕೆಟ್ ಆಡುವುದಿಲ್ಲ , ಹೀಗಾಗಿ ಜನರು ಕ್ರಿಕೆಟ್ ಆಟವನ್ನ ಆರಾಧಿಸುವುದಿಲ್ಲ. ಇಲ್ಲಿ ಫುಟ್ಬಾಲ್ ಆಟದ ಹುಚ್ಚು ಬಹಳವಿದೆ. ಹೀಗಾಗಿ ಇಲ್ಲಿನ ಜನ ಫುಟ್ಬಾಲ್ ಆಟವನ್ನ ಇನ್ನಿಲ್ಲದಷ್ಟು ಇಷ್ಟ ಪಡುತ್ತಾರೆ. ಭಾರತದಲ್ಲಿ ಕ್ರಿಕೆಟಿಗೆ ಇರುವ ಸ್ಥಾನ ಯೂರೋಪಿನಲ್ಲಿ ಫುಟ್ಬಾಲ್ ಗಳಿಸಿಕೊಂಡಿದೆ ಎಂದು ಧಾರಾಳವಾಗಿ ಹೇಳಬಹುದು.

ಇಲ್ಲಿನ ಜನರ ಕೈಯಲ್ಲಿ ಹಣದ ಹರಿವು ಕೂಡ ಹೆಚ್ಚಾಗಿದ್ದ ದಿನಗಳವು ಹೀಗಾಗಿ ಯೂರೋಪಿನ ಯಾವುದೇ ದೇಶದಲ್ಲಿ ಫುಟ್ಬಾಲ್ ಪಂದ್ಯವಾದರೂ ಜನ ತನ್ನ ನೆಚ್ಚಿನ ತಂಡ ಆಡುವುದನ್ನ ನೋಡಲು ಪ್ರಯಾಣ ಮಾಡುತ್ತಿದ್ದರು . ಪ್ರಯಾಣದ ಖರ್ಚು , ಅಲ್ಲಿ ಉಳಿದುಕೊಳ್ಳುವ ಖರ್ಚು , ಊಟ ತಿಂಡಿಯ ಜೊತೆಗೆ ಪಂದ್ಯದ ಎಂಟ್ರನ್ಸ್ ಫೀಸು ! ಅದೆಷ್ಟು ಖರ್ಚು !! ಬಟ್ ಜನರಿಗೆ ಇದ್ಯಾವುದರ ಚಿಂತೆ ಇರಲಿಲ್ಲ. ಕೈಯಲ್ಲಿ ಹಣವಿದ್ದಾಗ ನಾಳಿನ ಬಗ್ಗೆ ಚಿಂತಿಸುವುದು ಯೂರೋಪಿಯನ್ನರ ಗುಣವಲ್ಲ.

ಇವರನ್ನ ಹತ್ತಿರದಿಂದ ನೋಡುತ್ತಾ ಹೋದಂತೆ ಭಾರತೀಯರೇ ವಾಸಿ ಎನ್ನಿಸುವ ಮಟ್ಟಿಗೆ ಇವರ ಫುಟ್ಬಾಲ್ ಪ್ರೇಮ ನನ್ನ ಮಟ್ಟಿಗೆ ಹೇವರಿಕೆ ತರಿಸಿತು. ಭಾರತದಲ್ಲಿ ಐಪಿಎಲ್ ಶುರುವಾಗುವುದಕ್ಕೆ ಮುಂಚಿನಿಂದ ಫುಟ್ಬಾಲ್ ಆಟವನ್ನ ಐಪಿಎಲ್ ಮಾದರಿಯಲ್ಲಿ ಇಲ್ಲಿ ನೆಡೆಸಲಾಗುತ್ತಿತ್ತು. ಇಂದಿಗೂ ನಡೆಸುತ್ತಾರೆ. ಜನ ತಮ್ಮ ಇಷ್ಟದ ತಂಡದ ಬಗ್ಗೆ ಯಾವ ಮಟ್ಟದ ಫ್ಯಾನಟಿಸಂ ಹೊಂದಿದ್ದಾರೆ ಎಂದರೆ , ಆಕಸ್ಮಿಕವಾಗಿ ತಮ್ಮ ನೆಚ್ಚಿನ ತಂಡ ಸೋತರೆ ಇಡೀ ಕ್ರೀಡಾಂಗಣ ಯುದ್ಧರಂಗವಾಗಿ ಮಾರ್ಪಡಿಸಿ ಬಿಡುವಷ್ಟು !

ಹೌದು ಇತರೆ ತಂಡದ ಫ್ಯಾನ್ಸ್ ಗಳ ಮೇಲೆ ಹಲ್ಲೆ ಮಾಡುವುದು , ಪೇಪರ್ ನಿಂದ ಬೆಂಕಿ ಹಚ್ಚುವುದು , ಆಸನಗಳನ್ನ ಮುರಿಯುವುದು ಅತ್ಯಂತ ಸಾಮಾನ್ಯ ಎನ್ನುವಂತಾಗಿತ್ತು. ಇದರ ಜೊತೆಗೆ ಕೆಲವೊಮ್ಮೆ ಇಂಗ್ಲೆಂಡ್ ನಿಂದ ಬಾರ್ಸಿಲೋನಾ ಗೆ ಬಂದ ಫ್ಯಾನ್ ಗಳು ಕ್ರೀಡಾಂಗಣಕ್ಕೆ ಸೀಮಿತವಾಗದೆ ನಗರದ ಇತರ ಕಡೆಯಲ್ಲೂ ಧಾಂದಲೆ ನೆಡೆಸಿದ ಅನೇಕ ಘಟನೆಗಳನ್ನ ಕಣ್ಣಾರೆ ಕಂಡ ಅನುಭವ ನನ್ನದು.

ಎಟಿಎಂ ಮೆಷಿನ್ ಗಳನ್ನ ಹೊಡೆಯುವುದು , ಸಾರಿಗೆ ಬಸ್ಸಿಗೆ ಬೆಂಕಿ ಹಚ್ಚುವುದು , ಕಸದ ಕಂಟೈನರ್ ಗಳಿಗೆ ಬೆಂಕಿ ಹೆಚ್ಚುವುದು , ಹೀಗೆ ಒಂದಲ್ಲ ಅನೇಕ ಅಮಾನವೀಯ ಘಟನೆಗಳನ್ನ ಕಂಡಿದ್ದೇನೆ. ಇವರನ್ನ ನಿಯಂತ್ರಣಕ್ಕೆ ತರಲು ಪೊಲೀಸರು ನೀರನ್ನ ಎರಚುವುದು ಇತ್ಯಾದಿ ಮಾಡುವುದು ಮತ್ತು ಆ ಪ್ರಕ್ರಿಯೆಯಲ್ಲಿ ಕಣ್ಣು ಕಳೆದುಕೊಂಡ , ಕೈ ಮುರಿದುಕೊಂಡ ಫ್ಯಾನ್ ಗಳ ಕಥೆಗಳು ಹತ್ತಾರು.
ಭಾರತ , ಪಾಕಿಸ್ತಾನ , ಬಾಂಗ್ಲಾ , ಟರ್ಕಿ , ಸ್ಪೇನ್ , ಫ್ರಾನ್ಸ್ , ಜರ್ಮನಿ , ಇಂಗ್ಲೆಂಡ್ ಹೀಗೆ ದೇಶಗಳ ಹೆಸರು ಬದಲಾಗುತ್ತದೆ.

ಕ್ರೀಡೆಯ ಹೆಸರು ಬದಲಾಗುತ್ತದೆ ಆದರೆ ಜನರ ಫ್ಯಾನಟಿಸಂ ಮಾತ್ರ ಸೇಮ್ ! ಜನ ಸಾಮಾನ್ಯನಿಗೆ ಹುಚ್ಚುಚ್ಚಾಗಿ ಕಿರುಚಾಡಲು ಒಂದು ಕಾರಣ ಬೇಕು. ದೇಶ ಭಾಷೆ , ವೇಷ ಬದಲಾದರೂ ಇವನ ಮೂಲ ಗುಣ ಮಾತ್ರ ಬದಲಾಗುವುದಿಲ್ಲ. ಒಂದೆರೆಡಲ್ಲ ಅರವತ್ತು ದೇಶಗಳ ಪರ್ಯಟನೆಯ ನಂತರ ಈ ನಿರ್ಧಾರಕ್ಕೆ ಬಂದಿದ್ದೇನೆ. ಕ್ರಿಕೆಟ್ ಅಂತಲ್ಲ , ಧರ್ಮ ಮತ್ತು ಭಾಷೆಯ ವಿಷಯದಲ್ಲೂ ಕೂಡ ಇವನನ್ನ ಬಹಳ ಬೇಗ ಪ್ರವೋಕ್ ಮಾಡಿಬಿಡಬಹುದು. ಹೀಗಾಗಿ ಧರ್ಮ ಮತ್ತು ಭಾಷೆಯ ಹೆಸರಿನಲ್ಲಿ ಕೂಡ ಎಲ್ಲೆಡೆ ಹೊಡೆದಾಟ ಕೂಡ ಸಾಮಾನ್ಯವಾಗಿದೆ.

ಈ ಸಾಮಾನ್ಯ ಜನ , ಅವನು ಯಾವ ದೇಶದ ಪ್ರಜೆಯೆ ಆಗಿರಲಿ , ವಿವೇಕ ಮತ್ತು ಸಾಮಾನ್ಯ ಜ್ಞಾನವನ್ನ ಮನೆಯಲ್ಲಿ ಇಟ್ಟು ಬಂದಿರುತ್ತಾನೆ. ಹೀಗೆ ಹೇಳಲು ಕಾರಣ ಬಹಳ ಸರಳ. ನೀವೇ ಗಮನಿಸಿ ನೋಡಿ , ಭಾನುವಾರದ ಪಂದ್ಯ ಪಾಕಿಸ್ತಾನ ಅಥವಾ ಭಾರತ ಯಾರೇ ಗೆಲ್ಲಲಿ ಜನ ಸಾಮಾನ್ಯನ ಬದುಕಿನಲ್ಲಿ ಏನಾದರೂ ಬದಲಾವಣೆ ಆಯ್ತಾ ? ಇಲ್ಲ , ಬದಲಿಗೆ ಸೋಲು ಅಥವಾ ಗೆಲುವು , ಆಟಗಾರರಿಗೆ ತಮ್ಮ ಹಣ ಸಿಗುತ್ತದೆ. ದಿನದಿಂದ ದಿನಕ್ಕೆ ಅವರು ಹೆಚ್ಚೆಚ್ಚು ಸಾಹುಕಾರರಾಗುತ್ತಾರೆ .

ಪೂರ್ಣ ದಿನ , ಹಣ ಮತ್ತು ಶಕ್ತಿಯನ್ನ ವ್ಯಯಿಸಿ ಪಂದ್ಯ ನೋಡಿದ ನೂರಾರು ಕೋಟಿ ಜನರ ಕಥೆಯೇನು ? 99 ಪ್ರತಿಶತ ಜನರು ಸೋಮವಾರ ತಮ್ಮ ಹಣೆಬರಹವನ್ನ ಹಳಿದುಕೊಂಡು ಕೆಲಸಕ್ಕೆ ಹೋಗುತ್ತಾರೆ. ಇದು ಅವರಿಗೂ ಗೊತ್ತಿದೆ. ಆದರೂ ಮರಳಿ ಮತ್ತೆ ಅದೇ ತಪ್ಪನ್ನ ಮಾಡುತ್ತಾರೆ. ಹೀಗೆ ತಪ್ಪು ಮಾಡುತ್ತಲೆ ಜೀವನ ಸವೆಸುವುದರಲ್ಲಿ ಅವರಿಗೇನೂ ಆನಂದ. ಭಾರತದಲ್ಲಿ ಹೇಗೆ ಇಂಡಿಯಾ ಮತ್ತು ಪಾಕಿಸ್ತಾನ ಪಂದ್ಯಕ್ಕೆ ಇನ್ನಿಲ್ಲದ ಪ್ರಚಾರ ನೀಡುತ್ತಾರೆ ಮತ್ತು ವೈರತ್ವವನ್ನ ವಿಜೃಂಬಿಸುತ್ತಾರೆ.

ಥೇಟ್ ಅದೇ ರೀತಿಯಲ್ಲಿ ಇಲ್ಲಿನ ರಿಯಲ್ ಮ್ಯಾಡ್ರಿಡ್ ಮತ್ತು ಬಾರ್ಸ ಅಂದರೆ ಫುಟ್ಬಾಲ್ ಕ್ಲಬ್ ಬಾರ್ಸಿಲೋನಾ ನಡುವಿನ ಪಂದ್ಯವನ್ನ ಬಿಂಬಿಸುತ್ತಾರೆ. ಈ ಪಂದ್ಯಗಳು ಹೈ ವೋಲ್ಟೇಜ್ ಪಂದ್ಯಗಳು . ಜನರು ಒಂದು ರೀತಿಯ ಸಮೂಹ ಸನ್ನಿಗೆ ಒಳಗಾದವರಂತೆ ಇದರ ಪ್ರಭಾವಲಯಕ್ಕೆ ಸಿಲುಕಿ ಭ್ರಮೆಯಲ್ಲಿ ಬದುಕುವುದನ್ನ ಕಂಡಿದ್ದೇನೆ. ಬಾರ್ಸಿಲೋನಾ ದಲ್ಲಿ ನನಗೆ ಬಹಳಷ್ಟು ಜನ ಉತ್ತಮ ಗೆಳೆಯರಾದರು. ಅವರಲ್ಲಿ ಕೆಲವರು ಸಮಾಜದಲ್ಲಿ ಉನ್ನತ ಸ್ಥಾನಮಾನ ಹೊಂದಿದವರು.

ಬಾರ್ಸ ದಲ್ಲಿ ಸದಸ್ಯತ್ವ ಹೊಂದಿದವರು. ಇಂತಹ ಪಂದ್ಯಗಳು ನಡೆಯುವಾಗ ಟಿಕೆಟ್ ಸಿಗುವುದು ಸುಲಭದ ಮಾತಲ್ಲ. ಆದರೆ ನನಗೆ ಪಾಸ್ ನೀಡುವ ಸ್ನೇಹಿತರಿದ್ದರು . ಒಂದು ಪಾಸಿನಲ್ಲಿ ಇಬ್ಬರು ಪ್ರವೇಶ ಪಡೆಯಬಹುದಿತ್ತು. ಆದರೆ ನಾನು ಅವರು ಕೊಡುವ ಪಾಸ್ ಬೇಡ ಎಂದಾಗ ಅವರಿಗೆ ನಾನು ಅನ್ಯಗ್ರಹ ಜೀವಿಯಂತೆ ಕಾಣುತ್ತಿದ್ದೆ. ಎರಡು ತಂಡಗಳು ಸೆಣೆಸುತ್ತವೆ , ಒಬ್ಬರು ಗೆಲ್ಲುತ್ತಾರೆ , ಒಬ್ಬರು ಸೋಲುತ್ತಾರೆ , ಬಟ್ ಹಣ ಮಾತ್ರ ಎಲ್ಲಾ ಆಟಗಾರರು ಮಾಡಿಕೊಳ್ಳುತ್ತಾರೆ.

ಜನ ಸಾಮಾನ್ಯ ಮಾತ್ರ ಹಣ ಮತ್ತು ವೇಳೆ ಎರಡನ್ನೂ ಕಳೆದುಕೊಳ್ಳುತ್ತಾನೆ. ನನ್ನ ವೇಳೆ ಕಳೆದುಕೊಳ್ಳಲು ಇಷ್ಟವಿಲ್ಲ ಎನ್ನುವ ನನ್ನ ಮಾತುಗಳು ಬಹಳಷ್ಟು ಮಿತ್ರರಿಗೆ ಜೀರ್ಣವಾಗುತ್ತಿರಲಿಲ್ಲ.
ನಿಮಗೆಲ್ಲಾ ತಿಳಿದಿರಲಿ , ರೊನಾಲ್ಡೊ , ಮೆಸ್ಸಿ , ನೇಯ್ಮಾರ್ ನಂತಹ ಆಟಗಾರರು ಒಂದು ಸೀಸನ್ ನಲ್ಲಿ ಗಳಿಸುವ ಹಣವನ್ನ ಯೂರೋಪಿನ ಸಾಮಾನ್ಯ ಪ್ರಜೆ ಗಳಿಸಲು 500 ವರ್ಷ ಅಥವಾ ಅದಕ್ಕಿಂತ ಹೆಚ್ಚು ಸಮಯ ಬೇಕಾಗುತ್ತದೆ. ಇನ್ನು ಭಾರತೀಯ ಪ್ರಜೆಗೆ ಸಾವಿರ ವರ್ಷವಾದರೂ ಸಾಲದು.

ಇದೆ ಮಾತು ಕ್ರಿಕೆಟ್ ಆಟಗಾರರಿಗೂ ಅನ್ವಯಸುತ್ತದೆ. ಹೀಗೆ ಮನುಷ್ಯ ಮತ್ತು ಮನಷ್ಯನ ನಡುವಿನ ಅಂತರವನ್ನ ನಾವೇ ಖುಷಿಯಾಗಿ ಹೆಚ್ಚಿಸಲು ಸಹಾಯ ಮಾಡುತ್ತೇವೆ ಎನ್ನುವುದು ಹೇಯ ವಾಸ್ತವ. ಕನಿಷ್ಠ ನಾನು ಇಂತಹ ಒಂದು ಸಮೂಹ ಸನ್ನಿಗೆ ಒಳಗಾಗುವುದಿಲ್ಲ ಎನ್ನುವ ಶಪಥವನ್ನ ಬಹಳ ಹಿಂದೆಯೇ ಮಾಡಿದ್ದೆ. ಹೀಗಾಗಿ ಇಲ್ಲಿ ಪುಕ್ಕಟೆ ಪಾಸ್ ನೀಡುತ್ತೇನೆ ಎಂದರೂ ನಾನು ಪಂದ್ಯ ವೀಕ್ಷಿಸಲು ಹೋಗಲಿಲ್ಲ.

ಪಂದ್ಯದ ಮಾತು ಬಹಳ ದೂರ ಉಳಿಯಿತು , ನಾನು ಬಾರ್ಸಿಲೋನಾ ತಂಡದ ಸ್ಟೇಡಿಯಂ ಕೂಡ ನೋಡಲು ಹೋಗಲಿಲ್ಲ. ಇಲ್ಲಿಗೆ ಬರುವ ಕೋಟ್ಯಾಂತರ ಜನರು ಬಾರ್ಸ ಸ್ಟೇಡಿಯಂ ಟೂರ್ ಮಾಡುತ್ತಾರೆ, ಆಟಗಾರರ ಕೋಣೆಯನ್ನ ನೋಡಿಕೊಂಡು ಅಲ್ಲಿ ಫೋಟೋ ತೆಗೆದುಕೊಂಡು ಹೋಗುತ್ತಾರೆ. ನಮಗೆ ಎಲ್ಲವೂ ಸರದಿಯಲ್ಲಿ ಸಾಲುಗಟ್ಟಿ ನಿಲ್ಲದೆ , ಹಣ ಖರ್ಚು ಮಾಡದೆ ನೋಡುವ ಅವಕಾಶ ಸಿಕ್ಕಿತ್ತು. ಆದರೆ ನನಗೆ ಈ ರೀತಿಯ ಅತಿ ರಂಜಿತ ವ್ಯಕ್ತಿ ಪೂಜೆ ಇಷ್ಟವಾಗುವುದಿಲ್ಲ.

ಹೀಗಾಗಿ ನಾನು ಇಲ್ಲಿಯವರೆಗೆ ಬಾರ್ಸ ಪ್ರವೇಶಿಸಿಲ್ಲ, ಚಿನ್ನಸ್ವಾಮಿ ಕ್ರೀಡಾಂಗಣಕ್ಕೂ ಕಾಲಿಟ್ಟಿಲ್ಲ. ರಮ್ಯ , ಕ್ರಿಕೆಟ್ ಕಾಶಿ ಎಂದು ಪ್ರಖ್ಯಾತವಾಗಿರುವ ಇಂಗ್ಲೆಂಡ್ ನ ಲಾರ್ಡ್ ಸ್ಟೇಡಿಯಂ ಸುತ್ತು ಹೊಡೆದು ಬರುವವರೆಗೆ ಹೊರಗೆ ನಿಂತು ಕಾಯುತ್ತಿದ್ದೆ. ಕ್ರಿಕೆಟ್ ಅಥವಾ ಫುಟ್ಬಾಲ್ ಅಥವಾ ಇನ್ನ್ಯಾವುದೇ ಆಟದ ಆಟಗಾರರಿಗೆ ಸಿಕ್ಕಿರುವ ದೈವ ಪಟ್ಟ ನನಗೆ ಇನ್ನಿಲ್ಲದ ಕಿರಿಕಿರಿ ಉಂಟು ಮಾಡುತ್ತದೆ. ಹೀಗಾಗಿ ನಾನು ಇವುಗಳಿಂದ ಗಾವುದ ದೂರ.

ಒಂದಲ್ಲ , ಹಲವು ಬಾರಿ ನನ್ನ ಸ್ಪ್ಯಾನಿಷ್ ಸ್ನೇಹಿತರು ಕೊನೆ ಪಕ್ಷ ಒಂದು ಮ್ಯಾಚ್ ಆದರೂ ಬಂದು ನೋಡು , ನಿನಗೆ ಖಂಡಿತ ಇಷ್ಟವಾಗುತ್ತದೆ ಎನ್ನುವ ಮಾತುಗಳನ್ನ ಆಡಿದರು. ಅಲ್ಲಿನ ಎಲೆಕ್ಟ್ರಿಫೈಯಿಂಗ್ ವಾತಾವರಣಕ್ಕೆ ನಾವು ದುಡ್ಡು ಕೊಟ್ಟು ಹೋಗುವುದು , ನೀನು ಹೇಳುವುದು ಸರಿ ಎಲ್ಲರೂ ದುಡ್ಡು ಮಾಡಿಕೊಳ್ಳುತ್ತಾರೆ . ಆದರೆ ನಾವೇನೂ ಕೆಳೆದು ಕೊಂಡು ಬರುವುದಿಲ್ಲ , ಕೊಟ್ಟ ಹಣಕ್ಕೆ ಪೂರಾ ಪೈಸಾ ವಸೂಲಿಯಾಗುವಷ್ಟು ಖುಷಿಯನ್ನ ಅನುಭವಿಸಿ ಬರುತ್ತೇವೆ , ಎನ್ನುವ ಅವರ ಮಾತು ನನಗಿಲ್ಲಿಯವರೆಗೆ ರುಚಿಸಿಲ್ಲ.

ಎಲ್ಲವೂ ಗೊತ್ತಿದ್ದೂ ಸಮಯ ಮತ್ತು ಹಣವನ್ನ ವ್ಯಯಿಸಿ ಖುಷಿಯನ್ನ ಪಡೆಯುತ್ತೇವೆ ಎನ್ನುವರಿಗೆ ಬೇಡವೆನ್ನಲು ನಾನ್ಯಾರು ? ಜಗತ್ತಿನ ಉದ್ದಗಲದ ತುಂಬೆಲ್ಲಾ ಮೆಜಾರಿಟಿ ಸಿಕ್ಕುವುದು ಇಂತಹ ಜನ. ತನ್ನ ಸೀಮಿತ ಜೀವಿತಾವಧಿಯಲ್ಲಿ ಮನುಷ್ಯ ಇದನ್ನ ಮೀರಿ ಯೋಚಿಸದೆ ಹೋಗುವುದು ಮಾತ್ರ ನನ್ನ ಪಾಲಿಗೆ ಸದಾ ಅಚ್ಚರಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+