ಎದುರೆದುರು ಬಂದಾಗ, ಅಕ್ಕಪಕ್ಕದಲ್ಲಿ ಕುಳಿತಾಗ ಮಾತಿಲ್ಲ ಕಥೆಯಿಲ್ಲ!
ಇವರು ರಾಜ್ಯದಲ್ಲಿ ಆಡಳಿತ ಪಕ್ಷದ ಪ್ರಮುಖ ಟೀಕಾರಾರರು, ತೀವ್ರ ಗೊಂದಲದಲ್ಲಿರುವ ಮೈತ್ರಿ ಸರಕಾರವನ್ನು ಬೀಳಿಸಿ ತಾವೇ ಗದ್ದುಗೆಗೇರುವ ತಯಾರಿಯಲ್ಲಿದ್ದಾರೆ. ಅವರು ಕೇಂದ್ರದಲ್ಲಿ ಆಡಳಿತ ಪಕ್ಷವನ್ನು ತಮ್ಮ ವಾಗ್ದಾಳಿಯಿಂದ ಟೀಕಿಸುತ್ತಲೇ ಇರುತ್ತಾರೆ, ಜೊತೆಗೆ ಮುಂಬರುವ ಚುನಾವಣೆಯಲ್ಲಿ ತಾವೇ ಅಧಿಕಾರದ ಚುಕ್ಕಾಣಿ ಹಿಡಿಯಲು ಕಾತುರರಾಗಿದ್ದಾರೆ.
ಒಬ್ಬರು ಸದಾ ಹಣೆಯಲ್ಲಿ ಬೊಟ್ಟು ಇಟ್ಟುಕೊಂಡು, ಶುದ್ಧ ಬಿಳಿ ಬಣ್ಣದ ಸಫಾರಿ ಧರಿಸಿಕೊಂಡು, ಸಿಡಿಮಿಡಿ ಮುಖ ಮಾಡಿಕೊಂಡೇ ಇರುವ ಬಿಜೆಪಿ ನಾಯಕ ಎಪ್ಪತ್ತೈದು ವರ್ಷದ ಹಿರಿಯ ನಾಯಕ ಯಡಿಯೂರಪ್ಪನವರಾದರೆ, ಮತ್ತೊಬ್ಬರು ಯಡಿಯೂರಪ್ಪನವರಿಗಿಂತ ಕೇವಲ ಒಂದು ವರ್ಷ ದೊಡ್ಡವರಾದ, ಗರಿಗರಿ ಪಂಚೆ, ಖಾದಿ ಜುಬ್ಬಾ ಮತ್ತು ಕೋಟು ಧರಿಸಿಕೊಂಡಿರುವ ಕಲಬುರಗಿಯ ಧುರೀಣ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ.
ಅಧಿಕಾರಕ್ಕಾಗಿ ನಡೆಯುವ ಯುದ್ಧಗಳನ್ನು ಪರಿಗಣನೆಗೆ ತೆಗೆದುಕೊಂಡರೆ ಇಬ್ಬರೂ ಬದ್ಧ ವೈರಿಗಳು. ಪ್ರಸ್ತುತ ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ನಡೆದಿರುವ ರಾಜಕೀಯ ವಿದ್ಯಮಾನಗಳಿಗೆ ಸಂಬಂಧಿಸಿದಂತೆ ಕತ್ತಿ ಮಸೆಯುತ್ತಿದ್ದಾರೆ. ಹೀಗಿರುವ ಇಬ್ಬರೂ ಪತ್ರಿಕೆಯೊಂದರ ಷಷ್ಟ್ಯಬ್ಧಿ ಸಮಾರಂಭದಲ್ಲಿ ಪರಸ್ಪರ ಎದುರಾದರು. ಸುಮಾರು ಎರಡು ಗಂಟೆಗಳ ಕಾಲ ನಡೆದ ಸನ್ಮಾನ, ಭಾಷಣಗಳ ಸುರಿಮಳೆಯುದ್ದಕ್ಕೂ ಇಬ್ಬರೂ ಅಕ್ಕಪಕ್ಕವೇ ಕುಳಿತಿದ್ದರು. ಆದರೆ, ಮಾತಿಲ್ಲ ಕಥೆಯಿಲ್ಲ.

ಇವರು ಭಾಷಣ ಮಾಡುವಾಗ, ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕರಾದ ಸನ್ಮಾನ್ಯ ಮಲ್ಲಿಕಾರ್ಜುನ ಖರ್ಗೆ ಅವರೆ... ಅವರು ಭಾಷಣ ಮಾಡುವಾಗ, ಕರ್ನಾಟಕ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾದ ಸನ್ಮಾನ್ಯ ಯಡಿಯೂರಪ್ಪನವರೆ... ಅಂತ ಪ್ರಸ್ತಾಪಿಸಿದ್ದು ಬಿಟ್ಟರೆ, ಇಬ್ಬರೂ ಒಬ್ಬರ ಮುಖವನ್ನು ಮತ್ತೊಬ್ಬರು ನೋಡಿದರೆ ಕೇಳಿ. ಒಬ್ಬರು ಉಸಿರು ಮತ್ತೊಬ್ಬರಿಗೆ ತಾಗುವಷ್ಟು ಹತ್ತಿರ ಕುಳಿತಿದ್ದರೂ ಉಭಯ ಕುಶಲೋಪರಿಯೂ ಇಲ್ಲ, ಕರ್ನಾಟಕದ, ದೇಶದ ಪ್ರಸ್ತುತ ರಾಜಕಾರಣದ ಬಗ್ಗೆ ಪಿಸುಗುಟ್ಟುವಿಕೆಯೂ ಇಲ್ಲ.
ಅದು ಪತ್ರಿಕೆಯೊಂದರ ಕೌಟುಂಬಿಕ ಕಾರ್ಯಕ್ರಮದಂತಿತ್ತು. ಹೀಗಾಗಿ ಪತ್ರಿಕಾ ಸಿಬ್ಬಂದಿ ಮತ್ತು ಸಿಬ್ಬಂದಿಗಳ ಹಿತೈಷಿಗಳು ಮತ್ತು ಸನ್ಮಾನಿತರ ಕುಟುಂಬದವರೇ ಹೆಚ್ಚಾಗಿ ನೆರೆದಿದ್ದರು. ಈ ಆತ್ಮೀಯ ಸಮಾರಂಭದಲ್ಲಿ ಪತ್ರಿಕೋದ್ಯಮ ಹೇಗಿರಬೇಕು, ಪತ್ರಕರ್ತರು ಹೀಗಿರಬೇಕು ಎಂಬ ಒಂದೆರಡು ಕಿವಿಮಾತುಗಳನ್ನು ಹೊರತುಪಡಿಸಿದರೆ, ಇಬ್ಬರೂ ನಾಯಕರು ತಮ್ಮ ಚುಟುಕಾದ ಭಾಷಣದಲ್ಲಿ ಹೆಚ್ಚಿನ ಮಾತುಗಳನ್ನೂ ಆಡಲಿಲ್ಲ. ಸದ್ಯದ ರಾಜಕೀಯ ಸನ್ನಿವೇಶ ಹೇಗಿದೆಯೆಂದರೆ, ಹೇಳುವುದಕ್ಕೂ ಕೇಳುವುದಕ್ಕೂ ಸಮಯವಲ್ಲ ಎಂಬಂತಿದೆ.

ಸದ್ದಿಲ್ಲದೆ ಯಡಿಯೂರಪ್ಪನವರು ಮತ್ತೊಂದು ಸುತ್ತಿನ ಆಪರೇಷನ್ ಕಮಲಕ್ಕೆ ನೊಗ ಕಟ್ಟುತ್ತಿದ್ದಾರೆ ಎಂಬ ಸುದ್ದಿ ಬಂದಿತ್ತೋ ಏನೋ ಖರ್ಗೆ ಸಾಹೇಬರು ಯಡಿಯೂರಪ್ಪನವರನ್ನು ಮಾತಾಡಿಸುವ ಗೋಜಿಗೂ ಹೋಗದೆ ಸುದ್ದಿ ಪತ್ರಿಕೆಯನ್ನೋದುತ್ತ ಅತ್ಯಂತ ಗಾಂಭೀರ್ಯದಿಂದಲೇ ಕುಳಿತಿದ್ದರು. ನನ್ನ ನಾಯಕತ್ವ ಬೇಡವೆನಿಸಿದ್ದರೆ ಹೇಳಿ ಈಗಲೇ ಕೆಳಗಿಳಿದುಬಿಡುತ್ತೇನೆ ಎಂದು ಎಚ್ಚರಿಕೆ ನೀಡಿದ್ದ ಕುಮಾರಸ್ವಾಮಿಯವರೂ ಬರಲಿಲ್ಲ, ಏ ಅಂಥಾದ್ದೇನೂ ಇಲ್ಲಾರೀ, ಇದೆಲ್ಲ ಮಾಧ್ಯಮಗಳ ಸೃಷ್ಟಿ ಎಂದು ಹೇಳಿದ್ದಲ್ಲದೆ ಮಹಿಳೆಯೊಬ್ಬರ ದುಪಟ್ಟಾ (ನಿರುದ್ದೇಶಪೂರ್ವಕವಾಗಿ) ಸೆಳೆದ ವಿವಾದದಲ್ಲಿ ಸಿಲುಕಿರುವ ಸಿದ್ದರಾಮಯ್ಯನವರೂ ಬರಲಿಲ್ಲ.
ರಾಜಕೀಯದಲ್ಲಿ ಯಾರೂ ಮಿತ್ರರಲ್ಲ ಯಾರೂ ಶತ್ರುಗಳಲ್ಲ, ಹಲವಾರು ನಾಯಕರು ಹೀಗೆ ಸಿಕ್ಕಾಗ, ತಮ್ಮ ಹಿಂದಿನ ಬೈದಾಡುವಿಕೆ, ವೈಷಮ್ಯವನ್ನು ಕೂಡ ಮರೆತು ನಗಾಡುತ್ತ, ಉಭಯ ಕುಶಲೋಪರಿ ವಿಚಾರಿಸುತ್ತ ಕಾಲ ಕಳೆದುದ್ದನ್ನು ನೋಡಿದ್ದೇವೆ. ಹಿಂದೆ ಏನೂ ನಡೆದೇ ಇಲ್ಲವೇನೋ ಎಂಬಂತೆ, ನಗಾಡಿಕೊಂಡು ಒಬ್ಬರ ಹೆಗಲಮೇಲೆ ಮತ್ತೊಬ್ಬರು ಕೈಹಾಕಿಕೊಂಡು ವರ್ತಿಸಿದ್ದಕ್ಕೆ ಸಾಕ್ಷಿಯಾಗಿದ್ದೇವೆ. ಆದರೆ, ಇವರಿಬ್ಬರ ಮನದಲ್ಲಿ ಏನೇನು ಓಡಾಡುತ್ತಿತ್ತೋ? ಶಿವನೇ ಬಲ್ಲ!

ಭಾಷಣಕಾರರೆಲ್ಲ ಅವರಿಬ್ಬರನ್ನು ಸಿಕ್ಕಾಪಟ್ಟೆ ಹೊಗಳಿದಾಗ ಕನಿಷ್ಠ ನಗುಮೊಗವನ್ನು ಕೂಡ ತೋರದೆ, ಒಬ್ಬರನ್ನೊಬ್ಬರು ವಿಚಾರಿಸಿಕೊಳ್ಳದೆ, ಭಾಷಣದಲ್ಲಿಯೂ ಹೆಚ್ಚು ಪ್ರಸ್ತಾಪಿಸದೆ, ಕನಿಷ್ಠ ಟೀಕೆಯನ್ನು ಕೂಡ ಮಾಡದೆ, ಇನ್ನೇನು ವಂದನಾರ್ಪಣೆ ಶುರುವಾಗಬೇಕು ಅನ್ನುವಾಗಲೇ ಇಬ್ಬರೂ ಬಿರುಗಾಳಿಯಂತೆ ಸಭಾಂಗಣದಿಂದ ಒಟ್ಟಿಗೇ ನಿರ್ಗಮಿಸಿದರು. ಖಾಲಿ ಕುರ್ಚಿಗಳೆದಿರು ಸಂಪಾದಕರು ವಂದನಾರ್ಪಣೆಯ ಫಾರ್ಮ್ಯಾಲಿಟಿ ಮುಗಿಸಿದರು. ಕರ್ನಾಟಕದಲ್ಲಿಯೂ ಬಿರುಗಾಳಿಯಂತೆ ರಾಜಕೀಯ ಚಟುವಟಿಕೆಗಳು ನಡೆಯುತ್ತಿವೆ. ಲೋಕಸಭೆ ಚುನಾವಣೆಗೂ ಮುನ್ನ ರಾಜ್ಯ ರಾಜಕೀಯದಲ್ಲಿ ಏನೇನು ಘಟನಾವಳಿಗಳು ನಡೆಯಲಿವೆಯೋ ಎಂದು ಜನರು ಕೂಡ ಕುತೂಹಲದಿಂದ ಕಾಯುತ್ತಿದ್ದಾರೆ.
-
Karnataka Weather: ರಾಜ್ಯವನ್ನು ಸುಡುತ್ತಿದೆ ರಣಬಿಸಿಲು; ಕರಾವಳಿ, ಮಲೆನಾಡಿಗೆ ಇಂದು ಮಳೆ ಮುನ್ಸೂಚನೆ -
Karnataka Weather: ಸಿಲಿಕಾನ್ ಸಿಟಿಯಲ್ಲಿ ಹೆಚ್ಚಿದ ತಾಪಮಾನ; ಕರಾವಳಿ, ಮಲೆನಾಡಿನಲ್ಲಿ ಇಂದು ಮಳೆಯಾಗುವ ಸಾಧ್ಯತೆ -
Gold: ದುಬೈಯಿಂದ ಭಾರತಕ್ಕೆ ಚಿನ್ನದ ಪೂರೈಕೆ ಪುನರಾರಂಭ; ಗ್ರಾಹಕರ ನಿರ್ಧಾರದಿಂದ ಬೆದರಿದ ವ್ಯಾಪಾರಿಗಳು -
BCCI: ಕರ್ನಾಟಕದ ಕ್ರಿಕೆಟ್ ದಿಗ್ಗಜರಾದ ರಾಹುಲ್ ದ್ರಾವಿಡ್, ರೋಜರ್ ಬಿನ್ನಿಗೆ ಬಿಸಿಸಿಐ ಅತ್ಯುನ್ನತ ಪ್ರಶಸ್ತಿ -
PUC ವಿದ್ಯಾರ್ಥಿಗಳ ಗಮನಕ್ಕೆ: ದ್ವಿತೀಯ ಪಿಯುಸಿ ಫಲಿತಾಂಶ ಸುಧಾರಣೆಗೆ ಇನ್ಮುಂದೆ 2 ವರ್ಷ ಮಾತ್ರ ಅವಕಾಶ -
Weekly Horoscope March 16-22: ಈ ಯುಗಾದಿಗೆ ಯಾವ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ? ಇಲ್ಲಿದೆ ಈ ವಾರದ ನಿಮ್ಮ ರಾಶಿ ಫಲ -
Ragi Mudde: ಕರ್ನಾಟಕದ ರಾಗಿ ಮುದ್ದೆ ಸವಿಯಬೇಕು: ಮಂಡ್ಯದಲ್ಲಿ ಬಯಕೆ ಬಿಚ್ಚಿಟ್ಟ ಕೇಂದ್ರ ಸಚಿವ ಮನ್ಸುಖ್ ಮಾಂಡವೀಯ -
ರೈತರ ಹಿತಾಸಕ್ತಿಗೆ ಧಕ್ಕೆಯಿಲ್ಲ: 1 ರೂಪಾಯಿಗೆ ಲೀಟರ್ ಹಾಲು ವಿವಾದಕ್ಕೆ ಸ್ಪಷ್ಟನೆ ಕೊಟ್ಟ FlipKart -
Yash: ಯಶ್ ಡಿಪ್ರೆಶನ್ನಲ್ಲಿದ್ದಾರೆ, ಕೆಜಿಎಫ್ ರೀತಿಯ ಸಿನಿಮಾ ನೀಡಲು ಆಗ್ತಿಲ್ಲ: ಜ್ಯೋತಿಷಿ ವೇಣುಸ್ವಾಮಿ -
Gold Rate: ಬೆಂಗಳೂರಿನಲ್ಲಿ ಇಳಿಕೆಯಾಯ್ತು ಚಿನ್ನ-ಬೆಳ್ಳಿ ಬೆಲೆ; ಇಲ್ಲಿದೆ ದರ ಪಟ್ಟಿ -
ವೈಭವ್ ಸೂರ್ಯವಂಶಿ ಅದೃಷ್ಟದ ಮೇಲೆ ಸವಾರಿ ಮಾಡುತ್ತಿದ್ದಾರೆ: ಕೊಡಗಿನ ರಾಬಿನ್ ಉತ್ತಪ್ಪ ಎಚ್ಚರಿಕೆಯ ಸಲಹೆ -
Double-Decker Flyover: ಸಿಲ್ಕ್ ಬೋರ್ಡ್ ಟ್ರಾಫಿಕ್ಗೆ ಮುಕ್ತಿ: ಇದೇ ತಿಂಗಳಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್ ಸಂಚಾರಕ್ಕೆ ಮುಕ್ತ












Click it and Unblock the Notifications