Get Updates
Get notified of breaking news, exclusive insights, and must-see stories!

Karnataka Weather: ಕರ್ನಾಟಕದ ಈ 9 ಜಿಲ್ಲೆಗಳಲ್ಲಿ ಮಾರ್ಚ್‌ 21ರವರೆಗೆ ಮಳೆ ಸಾಧ್ಯತೆ: ಹವಾಮಾನ ಇಲಾಖೆ

ಕರ್ನಾಟಕದ ಹವಾಮಾನದಲ್ಲಿ ಕಳೆದ 24 ಗಂಟೆಗಳಲ್ಲಿ ಬದಲಾವಣೆ ಕಂಡುಬಂದಿದ್ದು, ಕರಾವಳಿ ಮತ್ತು ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗಿದೆ. ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮಾತ್ರ ಒಣಹವೆ ಮುಂದುವರಿದಿದೆ. ಮಳೆಯ ಪ್ರಮಾಣವನ್ನು ಗಮನಿಸಿದರೆ, ಧಾರವಾಡ ಜಿಲ್ಲೆಯಲ್ಲಿ ಅತಿ ಹೆಚ್ಚು ಅಂದರೆ 3 ಸೆಂಟಿಮೀಟರ್ ಮಳೆಯಾಗಿದ್ದರೆ, ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದಲ್ಲಿ 1 ಸೆಂಟಿಮೀಟರ್ ಮಳೆ ವರದಿಯಾಗಿದೆ. ರಾಜ್ಯದ 9 ಜಿಲ್ಲೆಗಳಲ್ಲಿ ಇದೇ ಮಾರ್ಚ್‌ 21ರವರೆಗೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಹಲವೆಡೆ ಮಳೆಯ ಸಿಂಚನ: ಮರಗಳು ಧರೆಗೆ

ಕರ್ನಾಟಕದ ಮಲೆನಾಡು ಹಾಗೂ ಉತ್ತರ ಒಳನಾಡಿನ ವಿವಿಧ ಜಿಲ್ಲೆಗಳಲ್ಲಿ ಭಾನುವಾರ ಸಂಜೆ ಬಿರುಸಿನ ಮಳೆಯಾಗಿದ್ದು, ಸುಡುಬಿಸಿಲಿನಿಂದ ಕಂಗೆಟ್ಟಿದ್ದ ಜನರಿಗೆ ತಂಪೆರೆದಿದೆ. ಕೊಡಗು ಜಿಲ್ಲೆಯ ಮಡಿಕೇರಿ ನಗರ, ಕಕ್ಕಬ್ಬೆ, ನೆಲಜಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಮಳೆಯಾಗಿದೆ. ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ, ಕೊಪ್ಪ ಮತ್ತು ಕಳಸ ಭಾಗದಲ್ಲಿ ಭಾರಿ ಮಳೆಯಾಗಿದ್ದರೆ, ಶೃಂಗೇರಿ ಹಾಗೂ ಚಿಕ್ಕಮಗಳೂರು ನಗರದಲ್ಲಿ ಸಾಧಾರಣ ಮಳೆಯಾಗಿದೆ. ಉಡುಪಿ ಜಿಲ್ಲೆಯ ಹೆಬ್ರಿ, ಕಾರ್ಕಳ ಹಾಗೂ ಮಣಿಪಾಲ ಪರಿಸರದಲ್ಲಿ ಶನಿವಾರ ತಡರಾತ್ರಿ ಮತ್ತು ಭಾನುವಾರ ಮುಂಜಾನೆ ಸಾಧಾರಣ ಮಳೆಯಾಗಿದೆ.

Karnataka Rain Forecast

ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಬಡಸಂಗಾಪುರ, ನಾಗವಂದ, ಕುಡಪಲಿ ಭಾಗಗಳಲ್ಲಿ ಧಾರಾಕಾರ ಮಳೆಯಾಗಿದೆ. ರಟ್ಟಿಹಳ್ಳಿಯಲ್ಲಿ ವಿದ್ಯುತ್ ತಂತಿ ಮೇಲೆ ಮರ ಬಿದ್ದ ಪರಿಣಾಮ ಸುಮಾರು 3-4 ಗಂಟೆಗಳ ಕಾಲ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಬೆಳಗಾವಿ ನಗರ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಬಿರುಸಿನ ಮಳೆಯಾಗಿದ್ದು, ಗಾಳಿಯ ರಭಸಕ್ಕೆ ಅಲ್ಲಲ್ಲಿ ಮರಗಳು ಉರುಳಿ ಬಿದ್ದಿವೆ. ನ್ಯಾಮತಿ ಪಟ್ಟಣ ಸೇರಿದಂತೆ ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಭಾನುವಾರ ಮಧ್ಯಾಹ್ನ ಗುಡುಗು ಸಹಿತ ತುಂತುರು ಮಳೆಯಾದ ವರದಿಯಾಗಿದೆ.

ಬೆಳಗಾವಿ ನಗರ ಮತ್ತು ಕಿತ್ತೂರು ಕರ್ನಾಟಕದ ವಿವಿಧೆಡೆ ಮಳೆಯಾಗಿದೆ. ಬೆಳಗಾವಿಯ ಆಟೋ ನಗರದಲ್ಲಿ ಗಾಳಿ ಮಳೆಗೆ ಮರಗಳು ಉರುಳಿ ಬಿದ್ದಿವೆ. ಹಾವೇರಿ ಜಿಲ್ಲೆಯ ರಾಣೇಬೆನ್ನೂರು, ಹಿರೇಕೆರೂರು, ರಟ್ಟಿಹಳ್ಳಿ ಮತ್ತು ಬ್ಯಾಡಗಿ ತಾಲೂಕುಗಳಲ್ಲಿ ಉತ್ತಮ ಮಳೆಯಾಗಿದ್ದರೆ, ಹಾವೇರಿ, ಶಿಗ್ಗಾವಿ, ಸವಣೂರು ಭಾಗದಲ್ಲಿ ತುಂತುರು ಮಳೆಯಾಗಿದೆ. ಜಿಲ್ಲೆಯ ಹಲವೆಡೆ ಆಲಿಕಲ್ಲು ಮಳೆಯಾದ ವರದಿಯಾಗಿದೆ. ಗದಗ ಜಿಲ್ಲೆಯ ರೋಣ ಪಟ್ಟಣದಲ್ಲೂ ಮಳೆಯ ಸಿಂಚನವಾಗಿದೆ.

ವಾರವಿಡೀ ಈ ಜಿಲ್ಲೆಗಳಲ್ಲಿ ಮಳೆ

ಕರಾವಳಿ ಕರ್ನಾಟಕದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಸಾಧಾರಣ ಮಳೆ ಅಥವಾ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಆದರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾತ್ರ ಒಣಹವೆ ಮುಂದುವರಿಯಲಿದೆ ಎಂದು ಅಂದಾಜಿಸಲಾಗಿದೆ.ಉತ್ತರ ಒಳನಾಡಿನ ಹವಾಮಾನವನ್ನು ಗಮನಿಸಿದರೆ, ಬಾಗಲಕೋಟೆ, ಬೆಳಗಾವಿ, ಧಾರವಾಡ ಮತ್ತು ಗದಗ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಹಗುರ ಮಳೆ ಅಥವಾ ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಯಿದೆ. ಉಳಿದಂತೆ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ವಿಜಯಪುರ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಒಣ ಹವಾಮಾನ ಇರಲಿದೆ.

ಇನ್ನು ದಕ್ಷಿಣ ಒಳನಾಡಿನ ಕೊಡಗು, ಮೈಸೂರು ಮತ್ತು ಬಳ್ಳಾರಿ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಮಳೆಯ ಸಿಂಚನವಾಗುವ ಸಾಧ್ಯತೆಯಿದೆ. ಆದರೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು, ಹಾಸನ, ದಾವಣಗೆರೆ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಕೋಲಾರ, ಮಂಡ್ಯ, ಶಿವಮೊಗ್ಗ, ರಾಮನಗರ, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಯಾವುದೇ ಮಳೆಯ ಮುನ್ಸೂಚನೆ ಇಲ್ಲ.

ಮತ್ತೊಂದೆಡೆ ರಾಜ್ಯದಾದ್ಯಂತ ಬಿಸಿಲಿನ ಬೇಗೆ ಹೆಚ್ಚಾಗುತ್ತಿದೆ. ಕಲಬುರಗಿ ಜಿಲ್ಲೆಯಲ್ಲಿ ರಾಜ್ಯದ ಅತಿ ಗರಿಷ್ಠ ತಾಪಮಾನ 38.7 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ಮೂಲಕ ಅತಿ ಹೆಚ್ಚು ಸೆಖೆ ಇರುವ ಪ್ರದೇಶವಾಗಿ ಹೊರಹೊಮ್ಮಿದೆ. ಇತ್ತ ಬಯಲು ಸೀಮೆಯ ಜಿಲ್ಲೆಗಳಲ್ಲಿ ಒಂದಾದ ಧಾರವಾಡದಲ್ಲಿ ರಾಜ್ಯದ ಅತಿ ಕಡಿಮೆ ಕನಿಷ್ಠ ತಾಪಮಾನ 18.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಒಟ್ಟಾರೆಯಾಗಿ ರಾಜ್ಯದ ಕೆಲವು ಭಾಗಗಳಲ್ಲಿ ಮಳೆಯ ಸಿಂಚನವಾಗಿದ್ದರೆ, ಉತ್ತರ ಕರ್ನಾಟಕದ ಭಾಗಗಳಲ್ಲಿ ತಾಪಮಾನದ ಏರಿಕೆ ಮುಂದುವರಿದಿದೆ.

Karnataka Rain Forecast

ಗರಿಷ್ಠ ಉಷ್ಣಾಂಶದಲ್ಲಿ ಏರಿಕೆ

ರಾಜ್ಯದ ಹವಾಮಾನದಲ್ಲಿ ತಾಪಮಾನದ ಏರುಪೇರು ಮುಂದುವರಿದಿದ್ದು, ಕರಾವಳಿ ಮತ್ತು ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ ಹೆಚ್ಚಳವಾಗಿದೆ. ಇದು ಈ ಭಾಗಗಳಲ್ಲಿ ವಾಡಿಕೆಗಿಂತ ಹೆಚ್ಚಿನ ಸೆಖೆಯನ್ನು ಉಂಟುಮಾಡಿದೆ. ಆದರೆ ರಾಜ್ಯದ ಉಳಿದ ಭಾಗಗಳಲ್ಲಿ ಗರಿಷ್ಠ ತಾಪಮಾನವು ಸಹಜ ಸ್ಥಿತಿಯಲ್ಲಿದ್ದು, ಹವಾಮಾನದಲ್ಲಿ ಹೆಚ್ಚಿನ ಬದಲಾವಣೆ ಕಂಡುಬಂದಿಲ್ಲ. ಇನ್ನು ಕನಿಷ್ಠ ತಾಪಮಾನದ ವಿಚಾರಕ್ಕೆ ಬಂದರೆ, ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ತಾಪಮಾನವು ಸಾಮಾನ್ಯಕ್ಕಿಂತ 5 ಡಿಗ್ರಿಯಷ್ಟು ಗಣನೀಯವಾಗಿ ಏರಿಕೆಯಾಗಿದೆ. ಕರಾವಳಿ ಕರ್ನಾಟಕ ಮತ್ತು ಉತ್ತರ ಒಳನಾಡಿನ ಹಲವೆಡೆ ಕನಿಷ್ಠ ಉಷ್ಣಾಂಶವು ಸಾಮಾನ್ಯಕ್ಕಿಂತ ಅಧಿಕವಾಗಿದೆ. ದಕ್ಷಿಣ ಒಳನಾಡಿನ ಒಂದೆರಡು ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ ಇಳಿಕೆಯಾಗಿದ್ದು, ಈ ಭಾಗಗಳಲ್ಲಿ ವಾಡಿಕೆಗಿಂತ ಹೆಚ್ಚಿನ ಚಳಿ ಕಂಡುಬಂದಿದೆ. ಉಳಿದ ಪ್ರದೇಶಗಳಲ್ಲಿ ಕನಿಷ್ಠ ತಾಪಮಾನವು ಸಾಮಾನ್ಯ ಸ್ಥಿತಿಯಲ್ಲಿದೆ.

ಮುಂದಿನ ಐದು ದಿನಗಳ ಕಾಲ ಕರ್ನಾಟಕದಾದ್ಯಂತ ಗರಿಷ್ಠ ಮತ್ತು ಕನಿಷ್ಠ ತಾಪಮಾನದಲ್ಲಿ ಯಾವುದೇ ದೊಡ್ಡ ಮಟ್ಟದ ಬದಲಾವಣೆ ಕಂಡುಬರುವುದಿಲ್ಲ. ರಾಜ್ಯ ರಾಜಧಾನಿ ಬೆಂಗಳೂರು ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಾರ್ಚ್ 17ರ ಬೆಳಗಿನವರೆಗೂ ಆಕಾಶ ಶುಭ್ರವಾಗಿ ಇರಲಿದೆ. ಮುಂದಿನ 24 ಹಾಗೂ 48 ಗಂಟೆಗಳ ಅವಧಿಯಲ್ಲಿ ನಗರದ ಗರಿಷ್ಠ ತಾಪಮಾನವು 33 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನವು 20 ಡಿಗ್ರಿ ಆಸುಪಾಸಿನಲ್ಲಿ ಇರುವ ಸಾಧ್ಯತೆಯಿದೆ.

ಮೇಲ್ಮೈ ಸುಳಿಗಾಳಿ

ಮಹಾರಾಷ್ಟ್ರದ ಮರಾಠವಾಡದಿಂದ ಒಳ ಕರ್ನಾಟಕದ ಮೂಲಕ ಹಾದು ಉತ್ತರ ತಮಿಳುನಾಡಿನವರೆಗೆ ವಿಸ್ತರಿಸಿರುವ ಒಂದು ಟ್ರಫ್‌ ಸಕ್ರಿಯವಾಗಿದೆ. ಇದು ಸಮುದ್ರ ಮಟ್ಟದಿಂದ ಸುಮಾರು 0.9 ಕಿಲೋಮೀಟರ್ ಎತ್ತರದಲ್ಲಿ ನೆಲೆಗೊಂಡಿದ್ದು, ರಾಜ್ಯದ ಒಳನಾಡಿನ ಹವಾಮಾನದ ಮೇಲೆ ಪ್ರಭಾವ ಬೀರುತ್ತಿದೆ. ಈ ಮಾರುತಗಳ ದಿಕ್ಕಿನ ಬದಲಾವಣೆಯು ರಾಜ್ಯದ ವಿವಿಧೆಡೆ ಮೋಡ ಕವಿದ ವಾತಾವರಣ ಅಥವಾ ಸಾಧಾರಣ ಬದಲಾವಣೆಗೆ ಕಾರಣವಾಗುವ ಸಾಧ್ಯತೆಯಿದೆ.

ಆಗ್ನೇಯ ಅರಬ್ಬಿ ಸಮುದ್ರದ ಲಕ್ಷದ್ವೀಪದ ಕರಾವಳಿ ಭಾಗದಲ್ಲಿ ಸಮುದ್ರ ಮಟ್ಟದಿಂದ 3.1 ರಿಂದ 5.8 ಕಿಲೋಮೀಟರ್ ಎತ್ತರದಲ್ಲಿ ಮೇಲ್ಮೈ ಸುಳಿಗಾಳಿ ಸ್ಥಿರವಾಗಿ ಮುಂದುವರಿದಿದೆ. ಇದರೊಂದಿಗೆ ನೈಋತ್ಯ ಬಂಗಾಳ ಕೊಲ್ಲಿಯ ಶ್ರೀಲಂಕಾ ಕರಾವಳಿಯಿಂದ ಮನ್ನಾರ್ ಕೊಲ್ಲಿಯ ಮೂಲಕ ಕೊಮೊರಿನ್ ಪ್ರದೇಶದವರೆಗೆ ಮತ್ತೊಂದು ಟ್ರಫ್‌ 1.5 ರಿಂದ 3.1 ಕಿಲೋಮೀಟರ್ ಎತ್ತರದಲ್ಲಿ ಚಲಿಸುತ್ತಿದೆ. ಈ ವಾಯುಮಂಡಲದ ಬದಲಾವಣೆಗಳು ದಕ್ಷಿಣ ಭಾರತದಾದ್ಯಂತ ತೇವಾಂಶ ಭರಿತ ಗಾಳಿಯ ಸಂಚಾರಕ್ಕೆ ಪೂರಕವಾಗಿದ್ದು, ಹವಾಮಾನದಲ್ಲಿನ ಏರುಪೇರಿಗೆ ಮುಖ್ಯ ಕಾರಣ ಎಂದು ಹವಾಮಾನ ಇಲಾಖೆ ವಿವರಿಸಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+