ಪಾಪ್ಕಾರ್ನಿಗೆ ಬದಲು ಹುತಾತ್ಮನ ಕುಟುಂಬಕ್ಕೆ ದಾನ ಮಾಡಿ

Posted By:
Subscribe to Oneindia Kannada

ಮೊನ್ನೆ ನನ್ನ ಹೆಂಡತಿ ಮಕ್ಕಳನ್ನು ಪೋಲಾರ್ ಬೇರ್ ಐಸ್ ಕ್ರೀಂ ಅಂಗಡಿಗೆ ಕರೆದುಕೊಂಡು ಹೋಗಿದ್ದೆ. ಎಷ್ಟು ಬಿಲ್ಲಾಯ್ತು ಗೊತ್ತಾ? ಸಾವಿರದಿನ್ನೂರೈವತ್ತು! ನನಗೇನೋ ಅಂಥಾ ಕಾಸ್ಲಿ ಅನಿಸ್ಲಿಲ್ಲ, ಮಕ್ಕಳೆಲ್ಲ ಸಖತ್ ಎಂಜಾಯ್ ಮಾಡಿದ್ರು, ಬೇಸಿಗೆ ಅಲ್ವಾ?

ಅಂತ ಸ್ನೇಹಿತ ತಾನು ಮಾಡಿದ ಘನಂದಾರಿ ಕೆಲಸದ ಬಗ್ಗೆ ಕೊಚ್ಚಿಕೊಳ್ಳುತ್ತಿದ್ದ. ವಾರಾಂತ್ಯದಲ್ಲಿ ಎಲ್ಲಾದರೂ ಹೊರಗೆ ತಿಂಡಿಗೋ, ಊಟಕ್ಕೋ, ಐಸ್ ಕ್ರೀಂ ಪಾರ್ಲರಿಗೋ ಹೋದರೆ ಇದು ದೊಡ್ಡ ಮೊತ್ತವೇನೂ ಅಲ್ಲ. ಅದರಲ್ಲೂ ಲಕ್ಷಗಟ್ಟಲೆ ದುಡಿಯುವ ಕೈಗಳಿಗೆ ಇದು ಎಂಟಾಣಿ ಕಡ್ಲೆಕಾಯ್ ತಿಂದಹಾಗೆ.

ಅದು ಅವನ ಕ್ರೆಡಿಟ್ ಕಾರ್ಡು, ಅವನ ಲೈಫ್ ಸ್ಟೈಲು! ಯಾರೂ ಚಕಾರ ಎತ್ತುವಹಾಗೇ ಇಲ್ಲ. ಆದರೆ, ಸುಮ್ಮನೆ ಕಣ್ಣುಹಾಯಿಸಿದರೆ, ಸುತ್ತಲೂ ನಡೆಯುತ್ತಿರುವುದನ್ನು ವಿವೇಕದಿಂದ ವಿಶ್ಲೇಷಿಸಿದರೆ ನಾವೆಷ್ಟು ದುಂದುವೆಚ್ಚ ಮಾಡುತ್ತಿದ್ದೇವೆ ಎಂಬ ಬಗ್ಗೆ ಅರಿವಾಗುತ್ತದೆ.

How to pay homage and Support India's bravehearts

ಇಂದು ಕೈಯಲ್ಲಿ ಸಾಕಷ್ಟು ದುಡ್ಡು ಇರುವವರು ಅಥವಾ ದುಡ್ಡು ಬೇಕಾಬಿಟ್ಟಿ ವೆಚ್ಚಮಾಡಲು ಹಿಂದೆ ಮುಂದೆ ನೋಡದೆ ಇರುವವರು ತುಂಬಿದ ಕುಟುಂಬ ಸಮೇತರಾಗಿ ಮಲ್ಟಿಪ್ಲೆಕ್ಸಿಗೆ ಸಿನೆಮಾ ನೋಡಲು ಹೋಗುತ್ತಾರೆ. ಅಲ್ಲಿ ಸಿಗುವ ಒಂದು ಬುಟ್ಟಿ ಪಾಪ್ ಕಾರ್ನ್ ಬೆಲೆ ಎಷ್ಟು ಅಂತ ಕೇಳಿದರೆ, ಖರ್ಚು ಮಾಡಲು ಹಿಂದೆಮುಂದೆ ನೋಡುವವರು ತಲೆತಿರುಗಿ ಬೀಳುತ್ತಾರೆ.

ನಮಗೋ ಕ್ರಿಕೆಟ್ ಹುಚ್ಚು. ಬೆಂಗಳೂರಿನಲ್ಲಿರುವ ಐಪಿಎಲ್ ಮ್ಯಾಚ್ ಲೈವ್ ನೋಡಬೇಕಂತೆ ಪ್ಲಾನ್ ಮಾಡ್ತಿದ್ವಿ. ಸಾವಿರಗಟ್ಟಲೆ ಟಿಕೆಟ್ಟಿಗೆ ನೀಡಿದರೂ ಪರವಾಗಿಲ್ಲ ಒಂದು ಮ್ಯಾಚನ್ನಾದರೂ ಲೈವ್ ನೋಡಬೇಕೆಂಬ ಹುಚ್ಚು ಆಸೆ. ವಿರಾಟ್, ಗೇಯ್ಲ್, ಎಬಿಡಿಯಂಥ ಆಟಗಾರರ ರೋಷಾವೇಷವನ್ನು ನೋಡಬೇಕೆಂಬ ಹಂಬಲ.

ಈ ಸಂಗತಿಯನ್ನು ನನ್ನ ಕಸಿನ್ ಮುಂದಿಟ್ಟಾಗ, ಐಪಿಲ್ ಪಂದ್ಯಕ್ಕೆ ಬರುವುದಿಲ್ಲ, ಅವರು ಆಡುವ ಬೇಕಾಬಿಟ್ಟಿ ಆಟಕ್ಕೆ ಸಾವಿರಾರುಗಟ್ಟಲೆ ಸುರಿಯಲೆ, ನಾನು ಇದೇ ದುಡ್ಡನ್ನು ಹುತಾತ್ಮ ಸೈನಿಕರ ಕುಟುಂಬಕ್ಕೆ ನೀಡುತ್ತೇನೆ, ಅಂತ ಮುಖಕ್ಕೆ ರಪ್ಪನೆ ಬಾರಿಸಿದ್ದ. ಜೊತೆಗೆ ತಾನು ಮಾಡಿದ ದಾನದ ಸರ್ಟಿಫಿಕೇಟ್ ಕೂಡ ತೋರಿಸಿದ್ದ.

How to pay homage and Support India's bravehearts

ಥತ್ತೇರೇಕಿ, ಇದೇ ದುಡ್ಡನ್ನು ಅಥವಾ ಇದರಲ್ಲಿನ ಒಂದು ಸಣ್ಣ ಭಾಗವನ್ನು ನಮ್ಮ ದೇಶವನ್ನು ಕಾಯುತ್ತಲೇ ಹುತಾತ್ಮರಾದ ಕುಟುಂಬ ಸದಸ್ಯರಿಗೆ ದಾನ ಮಾಡಿದರೆ ಒಂದು ಸಾರ್ಥಕ ಕೆಲಸ ಮಾಡಿದಂತೆ ಆಗುತ್ತದಲ್ಲವೆ? ಅಂತ ಮನದಲ್ಲಿ ಸುಳಿದಿದ್ದು ಸುಳ್ಳೇನಲ್ಲ.

ವರ್ಷಾನುಗಟ್ಟಲೆ ಮನೆಮಠ ಬಿಟ್ಟು, ಸ್ನೇಹಿತರು ಬಂಧುಗಳಿಂದ ದೂರವಿದ್ದು, ವಿಪರೀತ ಪರಿಸ್ಥಿತಿಗಳನ್ನು ಎದುರಿಸುತ್ತ, ದೇಶದ ರಕ್ಷಣೆಗಾಗಿ ಪ್ರಾಣ ತ್ಯಾಗ ಮಾಡಲು ಸದಾ ಸಿದ್ಧರಾಗಿರುವ ಭಾರತೀಯ ಯೋಧರಿಗಾಗಿ, ಸೈನಿಕರನ್ನು ಕಳೆದುಕೊಂಡು ಕುಟುಂಬಗಳಿಗಾಗಿ ನಾವು ಇಷ್ಟಾದರೂ ಮಾಡಬೇಕಲ್ಲವೆ?

ಕೇಂದ್ರ ಗೃಹ ಸಚಿವಾಲಯ ಆರಂಭಿಸಿರುವ ಈ ಅಭಿಯಾನಕ್ಕೆ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ಇತ್ತೀಚೆಗೆ ಚಾಲನೆ ನೀಡಿದರು. ಮೃತ ಯೋಧನ ಕುಟುಂಬಕ್ಕೆ ದಾನ ಮಾಡಲಿಚ್ಛಿಸುವವರು 10 ರುಪಾಯಿಯಿಂದ ಹಿಡಿದುಕೊಂಡು 15 ಲಕ್ಷ ರುಪಾಯಿಯವರೆಗೆ ದಾನ ನೀಡಬಹುದು.

How to pay homage and Support India's bravehearts

ಮಾಡಬೇಕಿರುವುದು ಇಷ್ಟು

* 'ಭಾರತ್ ಕಾ ವೀರ್' ವೆಬ್ ಸೈಟಿಗೆ ಭೇಟಿ ನೀಡಿ https://bharatkeveer.gov.in
* Proceed ಎನ್ನುವ ಬಟನ್ ಕ್ಲಿಕ್ ಮಾಡಿ.
* ಹುತಾತ್ಮರೆಲ್ಲರೂ ನಮ್ಮವರೇ ಆದರೂ ನಿಮಗಿಷ್ಟವಿರುವ ಹುತಾತ್ಮ ಯೋಧನನ್ನು ಆಯ್ದುಕೊಳ್ಳಿ.
* ದಾನ ಮಾಡಲು ಇಚ್ಛಿಸುತ್ತೇನೆ (ಮೇಲೆ ಬಲಬದಿ) ಲಿಂಕ್ ಅನ್ನು ಕ್ಲಿಕ್ಕಿಸಿ.
* ನಿಮ್ಮ ಹೆಸರು, ಈಮೇಲೆ ಐಡಿ, ಮೊಬೈಲ್ ನಂಬರ್ ಮತ್ತು ದಾನ ಮಾಡಲಿಚ್ಛಿಸುವ ಮೊತ್ತವನ್ನು ನಮೂದಿಸಿ.
* ನಿಮ್ಮ ಮೊಬೈಲ್ ಗೆ ಬಂದ OTP (One Time Password) ನಮೂದಿಸಿ ಸಬ್ಮಿಟ್ ಬಟನ್ ಒತ್ತಿರಿ.
* OTPಯನ್ನು ನಮೂದಿಸಿ, ನೀಡಬೇಕಾದ ಮೊತ್ತ ದೃಢಪಡಿಸಿಕೊಂಡು ಮುಂದುವರಿಯಿರಿ.
* ನಿಮ್ಮ ಬ್ಯಾಂಕನ್ನು ಆಯ್ದುಕೊಂಡು ಇಂಟರ್ನೆಟ್ ಬ್ಯಾಂಕಿಂಗ್ ಮುಖಾಂತರ ಹಣವನ್ನು ಪಾವತಿ ಮಾಡಿರಿ.

How to pay homage and Support India's bravehearts

ಅಪ್ಪನನ್ನು ಕಳೆದುಕೊಂಡಿರುವ, ಅಜ್ಜನ ಮಡಲಲ್ಲಿರುವ ಪುಟ್ಟ ಕಂದಮ್ಮ, ವೀರಯೋಧನನ್ನು ಕಳೆದುಕೊಂಡು ಅನಾಥೆಯಂತಾದ ಆತನ ಪತ್ನಿ, ಮುಂದಿನ ರಜಾದಲ್ಲಿ ಆತನ ಬರುವಿಕೆ ಕಾದಿರುವ ವೃದ್ಧ ತಂದೆತಾಯಿಯರನ್ನು ಮಾನವೀಯತೆಯ ದೃಷ್ಟಿಯಿಂದ ಒಮ್ಮೆ ನೆನಪಿಸಿಕೊಳ್ಳಿ.

ನೀವು ಸೇದುವ ಸಿಗರೇಟಿಗೆ ಪ್ರತಿನಿತ್ಯ ಎಷ್ಟು ಬಡಿಯುತ್ತೀರಿ, ಆಟೋಕ್ಕೆ ಎಷ್ಟು ಖರ್ಚು ಮಾಡುತ್ತೀರಿ, ಸಿನೆಮಾ ಹೋದರೆ ಎಷ್ಟು ವೆಚ್ಚವಾಗುತ್ತದೆ, ಬಟ್ಟೆಬರೆಗಳಿಗೆ ಮೋಜು ಮಸ್ತಿಗೆ ಎಷ್ಟು ದುಂದು ಮಾಡುತ್ತೀರಿ, ಐಪಿಎಲ್ ಟಿಕೆಟ್ ಗೆ ಎಷ್ಟು ವ್ಯಯಿಸುತ್ತೀರಿ, ವಾರಾಂತ್ಯದ ಹೋಟೆಲೂಟಕ್ಕೆ ಜೇಬಿನಿಂದ ಎಷ್ಟು ಜಾರಿಹೋಗಿರುತ್ತದೆ?

ಈ ಖಾತೆಯಲ್ಲಿ ಸೇರಲಾಗುವ ಹಣವನ್ನು ನಿಭಾಯಿಸಲು, ಸರಿಯಾದ ವ್ಯಕ್ತಿಯ ಕುಟುಂಬಕ್ಕೆ ತಲುಪಿಸಲು ಸಮರ್ಥ ವ್ಯಕ್ತಿಗಳಿರುವ ಒಂದು ಸಮಿತಿಯನ್ನು ರಚಿಸಲಾಗಿದೆ. ಸಣ್ಣ ಮೊತ್ತವೇ ಆಗಲಿ ದೊಡ್ಡ ಮೊತ್ತವೇ ಆಗಲಿ ಮುಖ್ಯವಲ್ಲ, ನಮ್ಮ ಹೃದಯ ದೊಡ್ಡದಿರಬೇಕು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
If you want to connect to people in uniform in their pain and pay homage to their sacrifice to the country contribute to the families of India's bravehearts through Bharat Ke Veer website.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ