ಹೂವಿನ ತೋಟದಲ್ಲಿ ಕಳೆದುಹೋದ ಹೂವಿನಂಥ ಹುಡುಗಿ

Posted By: ಪ್ರಸಾದ ನಾಯಿಕ
Subscribe to Oneindia Kannada

ನಮ್ಮ ಮನೆಯಲ್ಲಿ, ಅಕ್ಕಪಕ್ಕದಲ್ಲಿ ಆಟವಾಡುವ ಇತರ ಮಕ್ಕಳಂತೆ ಇದ್ದರೂ ಏಳು ವರ್ಷದ ವೈಷ್ಣವಿಯಲ್ಲಿ ಅದೇನೋ ವಿಶೇಷತೆ ಇತ್ತು. ಮುದ್ದು ಮುಖದ ವೈಷ್ಣವಿ ನೋಟದಲ್ಲಿ ಮುಗ್ಧತೆ ಮನೆಮಾಡಿದ್ದರೂ, ನಡವಳಿಕೆಯಲ್ಲಿ ಅಗಾಧ ಪ್ರಬುದ್ಧತೆ ಇತ್ತು. ಇತರ ಮಕ್ಕಳಿಗಿರುವ ಹೂಗಳ ಬಗ್ಗೆ ಕುತೂಹಲವಿರುವಂತೆ, ತನಗೆ ಬೇಕಾದ ಶಾಲೆಯನ್ನು ತಾನೇ ಆಯ್ದುಕೊಳ್ಳುವ ಜಾಣ್ಮೆ, ಪ್ರಬುದ್ಧತೆ ಆಕೆಯಲ್ಲಿ ಮನೆಮಾಡಿತ್ತು. ಆದರೆ, ಹೂಗಳ ಬಗ್ಗೆ ವೈಷ್ಣವಿಗಿದ್ದ ಕುತೂಹಲ ಆಕೆಯ ಸಾವಿಗೆ ಕಾರಣವಾಗಿದ್ದು ಮಾತ್ರ ವಿಪರ್ಯಾಸ.

ಆಗಸ್ಟ್ 15ನೇ ತಾರೀಖಿನಂದು ಲಾಲ್ ಬಾಗಿನಲ್ಲಿ ಅರಳಿದ್ದ ಬಗೆಬಗೆಯ ಹೂಗಳನ್ನು ನೋಡಲು ತಂದೆ ತಾಯಿಯೊಡನೆ ಹೋಗಿದ್ದ ವೈಷ್ಣವಿ ಮನೆಗೆ ಮರಳಿದ್ದು ಶವವಾಗಿ. ಆಕೆಯ ಫೋಟೋ ಮೇಲೊಂದು ಲಾಲ್ ಬಾಗಿನ ಕೆಂಪು ಹೂವು! ಅದ್ಯಾವ ವಿಧಿ ಜೇನುಗೂಡಿಗೆ ಕಲ್ಲು ಹೊಡೆದಿತ್ತೋ... ಜೇನಿನ ದಾಳಿಗೆ ತುತ್ತಾಗಿ, ಚಿಕಿತ್ಸೆ ಫಲಕಾರಿಯಾಗದೆ ಅದೇ ದಿನ ದೇವರ ಪಾದ ಸೇರಿದ್ದು ವಿಧಿಯ ಕ್ರೂರ ಅಟ್ಟಹಾಸಕ್ಕೆ ಹಿಡಿದ ಕನ್ನಡಿ. ಜೇನಿನ ದಾಳಿಯಿಂದಾಗಿ ಹಾಲುಜೇನಿನಂತಿದ್ದ ಗುರುಪ್ರಸಾದ್ ಮತ್ತು ಸುಗುಣಾ ಅವರ ಬಾಳಿನಲ್ಲಿ ಈಗ ತುಂಬಿರುವುದು ಬರೀ ಕಹಿ.

Bengaluru Lalbagh bee attack : Vaishnavi Parents interview

ಹೈಪರ್ ಆಕ್ಟೀವ್ ಆಗಿದ್ದ ವೈಷ್ಣವಿಯ ಆಟಪಾಠ, ಹುಡುಗಾಟದಿಂದ ಕೂಡಿದ್ದ, ಬನಶಂಕರಿ ಎರಡನೇ ಹಂತದ ಕನಕ ಬಡಾವಣೆಯಲ್ಲಿರುವ ಗುರುಪ್ರಸಾದ್, ಸುಗುಣಾ ಅವರಿರುವ ಮನೆಯಲ್ಲಿ ಈಗ ಸ್ಮಶಾನ ಮೌನ. ಅಪ್ಪ-ಅಮ್ಮ, ಅಜ್ಜ-ಅಜ್ಜಿಯಿಂದ ಕೂಡಿದ್ದ ತುಂಬಿದ ಕುಟುಂಬದಲ್ಲಿ ಇಂದು ಅಸಹನೀಯವಾದ ನಿರ್ವಾತ. ವೈಷ್ಣವಿ ತನ್ನ ವಯಸ್ಸಿಗೆ ತಕ್ಕಂತೆ ಮುದ್ದುಮುದ್ದಾಗಿ ಬಣ್ಣ ತುಂಬಿದ ಚಿತ್ರಗಳು, ಪಡೆದಿರುವ ಸರ್ಟಿಫಿಕೇಟುಗಳು, ಆಕೆ ಪಡೆದಿರುವ ಮೆಡಲ್ಲುಗಳ ಜೊತೆ, ಶೋಕೇಸಿನಲ್ಲಿರುವ ಅಪ್ಪಅಮ್ಮಅಜ್ಜಅಜ್ಜಿಯ ಜೊತೆಗೆ ನಿಂತಿರುವ ಫೋಟೋದಲ್ಲಿ ಮಾತ್ರ ಇನ್ನು ಆಕೆ ಕಾಣಲು ಸಾಧ್ಯ!

ಇಂಥ ಮಗುವನ್ನು ಕಳೆದುಕೊಂಡಿರುವ ತಂದೆ ತಾಯಿ ಅಜ್ಜ ಅಜ್ಜಿಯ ಸ್ಥಿತಿ ಹೇಗಾಗಿರಬೇಡ? ಮುದ್ದಿನ ಮಗಳು ಶಾಶ್ವತವಾಗಿ ಕಣ್ಣಿಂದ ಮರೆಯಾಗಿದ್ದರೂ, ಉಕ್ಕಿ ಬರುತ್ತಿದ್ದ ಕಣ್ಣೀರನ್ನು ಮರೆಯಾಗಿಸಿಕೊಂಡು ದಿಟ್ಟವಾಗಿ ಪರಿಸ್ಥಿತಿಯನ್ನು ಎದುರಿಸಿದ್ದಾರೆ. ಗುರುಪ್ರಸಾದ್ ಮತ್ತು ಸುಗುಣಾ ಅವರ ಕಣ್ಣಲ್ಲಿ ಚಕ್ರತೀರ್ಥವಾಗಿದ್ದ ನೀರು ಇಂದು ಬತ್ತಿಹೋಗಿದೆ. ಇಂಥದೊಂದು ದುರ್ಘಟನೆ ನಡೆದಿದ್ದರೂ ಸಹಾಯಕ್ಕೆ ಬರದ ಕೆಟ್ಟ ವ್ಯವಸ್ಥೆಯ ಬಗ್ಗೆ ದಂಪತಿಗಳಲ್ಲಿ ತಣ್ಣನೆಯ ಸಿಟ್ಟಿದೆ. ಇಂಥ ಘಟನೆ ಮತ್ತೆಂದೂ ಮರುಕಳಿಸಬಾರದೆಂಬ ಕಳಕಳಿಯಿದೆ.

Bengaluru Lalbagh bee attack : Vaishnavi Parents interview

ಅಂದು ನಡೆದಿದ್ದಿಷ್ಟು : ಹುಲ್ಲಿನಂಕಣದ ಮೇಲೆ ಚಿಟ್ಟೆಯಂತೆ ನಲಿದಾಡುತ್ತಿದ್ದ ವೈಷ್ಣವಿಯ ಮೇಲೆ ಇನ್ನೂರು ಮುನ್ನೂರು ಜೇನುಗಳು ದಾಳಿ ಮಾಡಿದ್ದವು. ಮಗಳ ರಕ್ಷಣೆಗೆ ಧಾವಿಸಿದ ಗುರುಪ್ರಸಾದ್ ಮೇಲೂ ಆಕ್ರಮಣ ನಡೆಸಿದ್ದವು. ವೈಷ್ಣವಿಯನ್ನು ಹಿಡಿದುಕೊಂಡು ಸಹಾಯಕ್ಕಾಗಿ ಗುರುಪ್ರಸಾದ್ ಕೂಗಿದರಾದರೂ ಜೇನು ಕಡಿತದಿಂದಾಗಿ ಅವರು ಸ್ಥಳದಲ್ಲೇ ಜ್ಞಾನತಪ್ಪಿ ಬಿದ್ದರು. ಕೆಲ ಅಡಿಗಳಷ್ಟೇ ಹಿಂದಿದ್ದ ಸುಗುಣಾ ಅವರು ಸಹಾಯಕ್ಕಾಗಿ ಪೊಲೀಸರನ್ನು ಕೂಗಿಕೊಂಡರಾದರೂ ಯಾರೂ ಸಹಾಯಕ್ಕೆ ಧಾವಿಸಲಿಲ್ಲ. [ಬಾಲಕಿ ಪ್ರಾಣ ತೆಗೆದ ಲಾಲ್ ಬಾಗ್ ನ ಜೇನ್ನೊಣ]

ಕಡೆಗೆ, ಅಲ್ಲಿದ್ದ ವ್ಯಕ್ತಿಯೊಬ್ಬರು ವೈಷ್ಣವಿಯನ್ನು ಎತ್ತಿಕೊಂಡು ಲಾಲ್ ಬಾಗ್ ಗೇಟಿನತ್ತ ಧಾವಿಸಿದರು. ಸುಗುಣಾ ಅವರನ್ನು ಹಿಂಬಾಲಿಸಿದರು. ಅಂಥ ಸಮಯದಲ್ಲಿ ಸಹಾಯಕ್ಕೆ ಬಂದಿದ್ದು ಆಟೋ ಡ್ರೈವರುಗಳೇ. ಕೂಡಲೆ ವೈಷ್ಣವಿಯನ್ನು ಹತ್ತಿರದ ಅಗಡಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಹಿಂದೆಯೇ, ಮತ್ತೊಬ್ಬ ವ್ಯಕ್ತಿಯ ಸಹಾಯದಿಂದ ಗುರುಪ್ರಸಾದ್ ಅವರು ಅಗಡಿ ಆಸ್ಪತ್ರೆಗೆ ಧಾವಿಸಿದ್ದಾರೆ. ಐಸಿಯುನಲ್ಲಿದ್ದ ವೈಷ್ಣವಿ ಸುಮಾರು ನಾಲ್ಕು ತಾಸುಗಳ ಹೋರಾಟ ನಡೆಸಿ ಉಸಿರು ಬಿಟ್ಟಿದ್ದಾಳೆ.

ಸುಗುಣಾ ಅವರ ಸಾತ್ವಿಕ ಆಕ್ರೋಶ : ಮಗಳನ್ನು ಕಳೆದುಕೊಂಡು ಘಾಸಿಗೊಂಡಿದ್ದರೂ ಗುರುಪ್ರಸಾದ್ ದಂಪತಿಗಳು ಪ್ರಜ್ಞಾವಂತಿಕೆಯನ್ನು ಮರೆತಿಲ್ಲ. ಸಂದಿಗ್ಧ ಪರಿಸ್ಥಿತಿಯನ್ನು ಧೈರ್ಯವಾಗಿ ಎದುರಿಸಿರುವ ದಂಪತಿ, ತೋಟಗಾರಿಕೆ ಇಲಾಖೆ, ಪೊಲೀಸರು, ಜೇನು ತಜ್ಞರು, ವೈದ್ಯರು, ಪರಿಸರ ತಜ್ಞರನ್ನು ಭೇಟಿ ಮಾಡಿ, ಇಂಥ ಘಟನೆ ಮತ್ತೆ ಮರುಕಳಿಸದಂತೆ ಸಭೆಯನ್ನು ನಡೆಸಿದ್ದಾರೆ, ಹಲವಾರು ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಕಡೆಗೆ ಗಡ್ಡಕ್ಕೆ ಬೆಂಕಿ ಬಿದ್ದಾಗ ಸರಕಾರ ಬಾವಿ ತೋಡಿದೆ!

Bengaluru Lalbagh bee attack : Vaishnavi Parents interview

"ಲಾಲ್ ಬಾಗ್ ಫಲಪುಷ್ಪ ಪ್ರದರ್ಶನದಂಥ ದೊಡ್ಡ ಕಾರ್ಯಕ್ರಮ ಆಯೋಜಿಸಿದಾಗ, ಲಕ್ಷಲಕ್ಷ ಜನರು ಮಕ್ಕಳ ಸಮೇತ ಆಗಮಿಸಿದಾಗ, ಇಂಥದೊಂದು ಅನಾಹುತ ಸಂಭವಿಸಿದರೆ ಎಂಥ ಸಿದ್ಧತೆ ಮಾಡಿಕೊಂಡಿರಬೇಕು ಎಂಬ ಬಗ್ಗೆ ನಮ್ಮ ಸರಕಾರಕ್ಕಾಗಲಿ, ಆಯೋಜಕರಿಗಾಗಲಿ ಎಳ್ಳಷ್ಟೂ ಕಲ್ಪನೆಯಿಲ್ಲ. ಸ್ಥಳದಲ್ಲಿ ಆಂಬ್ಯುಲೆನ್ಸ್ ಇರಲಿಲ್ಲ, ಪೊಲೀಸರಿಗೆ ಇದಾವುದರ ಬಗ್ಗೆ ಸೂಚನೆಯೂ ಇಲ್ಲ. ಇಷ್ಟೆಲ್ಲಾ ನಡೆದಿದ್ದರೂ ಸಹಾಯಕ್ಕೆ ಧಾವಿಸದ ಪೊಲೀಸರು ಇರುವುದಾದರೂ ಏತಕ್ಕೆ? ಇವರಿಗೆ ಎಳ್ಳಷ್ಟೂ ಮಾನವೀಯತೆ ಇಲ್ಲವೆ? ಇದಕ್ಕೆ ಕಾರಣ ಯಾರೇ ಆಗಲಿ ಅವರಿಗೆ ಶಿಕ್ಷೆಯಾಗಲೇಬೇಕು" ಎಂದು ಹೇಳುವಾಗ ಸುಗುಣಾ ಅವರಲ್ಲಿ ಕಣ್ಣೀರು ತುಳುಕುವುದಿಲ್ಲ, ಬದಲಿಗೆ ಆಕ್ರೋಶ ಉಕ್ಕಿಬರುತ್ತದೆ.

ಅಮೆರಿಕದಲ್ಲಿ ಮತ್ತು ಕೆಲಕಾಲ ಆಸ್ಟ್ರೇಲಿಯಾದಲ್ಲಿ ಕೆಲಸ ಮಾಡಿ ಭಾರತಕ್ಕೆ ಮೂರು ವರ್ಷಗಳ ಹಿಂದೆ ಮರಳಿರುವ, ಆರೇಕಲ್ ಸಂಸ್ಥೆಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ ಗುರುಪ್ರಸಾದ್ ಅವರು ಹೇಳುವುದೇನೆಂದರೆ, "ಇಂಥ ದುರ್ಘಟನೆ ಲಾಲ್ ಬಾಗಿನಲ್ಲಿ ಮಾತ್ರವಲ್ಲ ಎಲ್ಲಿ ಬೇಕಾದರೂ ಸಂಭವಿಸಬಹುದು. ದೊಡ್ಡ ಕಾರ್ಯಕ್ರಮಗಳನ್ನು ಆಯೋಜಿಸಿದಾಗ ಸ್ಥಳದಲ್ಲಿ ವೈದ್ಯರು, ನರ್ಸ್ ಗಳು, ಆಂಬ್ಯುಲೆನ್ಸ್, ಪ್ಯಾರಾಮೆಡಿಕಲ್ ಸಿಬ್ಬಂದಿಗಳು, ಪೊಲೀಸರು ಎಂಥದೇ ಪರಿಸ್ಥಿತಿ ಎದುರಿಸಲು ಸಿದ್ಧರಾಗಿರಬೇಕು. ಸುತ್ತಲಿನ ಆಸ್ಪತ್ರೆಗಳಿಗೆ ಮೊದಲೇ ಸೂಚನೆ ನೀಡಿರಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಅವರಿಗೆ ತರಬೇತಿ ನೀಡಿರಬೇಕು."

Bengaluru Lalbagh bee attack : Vaishnavi Parents interview

ಕೂಡಲೆ ಮಾತು ಸೇರಿಸುವ ಸುಗುಣಾ ಅವರು, "ಇಂಥದೊಂದು ಘಟನೆ ನಡೆದುಹೋಗಿದೆ. ನನ್ನ ಮಗಳು ವಾಪಸ್ ಬರುತ್ತಾಳಾ? ಬರುವುದಿಲ್ಲ. ಆದರೆ, ಮತ್ತೊಬ್ಬ ತಾಯಿ ಇಂಥ ಘಟನೆ ಎದುರಿಸುವಂತಾಗಬಾರದು. ಜನರು ಎಷ್ಟೆಲ್ಲ ದುಡ್ಡು ಮಾಡುತ್ತಿದ್ದಾರೆ. ಜೇನು, ಹಾವು ಕಡಿತವಾದಾಗ ಏನು ಮಾಡಬೇಕೆಂದು ಮಕ್ಕಳಿಗಾಗಲಿ, ಸಾರ್ವಜನಿಕರಿಗಾಗಲಿ ತರಬೇತಿ ನೀಡಲು ಸಾಧ್ಯವಿಲ್ಲವೆ? ಎಂದು ಪ್ರಶ್ನಿಸುತ್ತಾರೆ. ಇದಕ್ಕೆ ದನಿಗೂಡಿಸುವ ಗುರು ಅವರು, ಇದು ನಮ್ಮಿಂದ ಮಾತ್ರ ಸಾಧ್ಯವಿಲ್ಲ. ಸಿಇಓಗಳು, ವೈದ್ಯರು, ಪ್ರಿನ್ಸಿಪಾಲ್ ಗಳು ಕೂಡ ಇದಕ್ಕೆ ಕೈಜೋಡಿಸಬೇಕು" ಎಂದು ನಿಟ್ಟುಸಿರು ಬಿಡುತ್ತಾರೆ.

ಈ ಮಾತುಗಳನ್ನೆಲ್ಲ ತದೇಕಚಿತ್ತದಿಂದ ಕೇಳುತ್ತಿದ್ದ ಅಜ್ಜ ಕೆ.ವಿ. ರಾಮಮೂರ್ತಿ ಅವರು ಮೊಮ್ಮಗಳ ನೆನಪಿನಂಗಳಕ್ಕೆ ಜಾರುತ್ತಾರೆ. ಹಿಲ್ ವ್ಯೂ ಪಬ್ಲಿಕ್ ಶಾಲೆಯಲ್ಲಿ ಎರಡನೇ ತರಗತಿ ಓದುತ್ತಿದ್ದ ವೈಷ್ಣವಿ ತುಂಬಾ ಬ್ರೀಲಿಯೆಂಟ್. ಅಚ್ಚುಮೆಚ್ಚಿನ ಹುಲುಲೂಪ್ ಆಡುತ್ತಿದ್ದರೆ ಎಣಿಕೆ ಸಾವಿರ ದಾಟಿದರೂ ಆಕೆಗೆ ದಣಿವಾಗುತ್ತಿರಲಿಲ್ಲ. ಎರಡು ವರ್ಷಗಳ ಹಿಂದೆ ಕೂಡ ಲಾಲ್ ಬಾಗಿಗೆ ಹೋಗಿ ಮರ ಹತ್ತಿ ಆಟವಾಡಿದ್ದ ಪುಟ್ಟ ಮಗು, ಈ ರೀತಿ ಕಣ್ಮರೆಯಾಗುತ್ತದೆಂದು ಕನಸು ಮನಸಿನಲ್ಲಿಯೂ ಎಣಿಸಿರಲಿಲ್ಲ ಎಂದು ಗದ್ಗದಿತರಾಗುತ್ತಾರೆ.

ಮುದ್ದಿನ ಮಗಳ ಚಿರನೆನಪಿಗಾಗಿ ವೆಬ್ ಸೈಟೊಂದನ್ನು ರೂಪಿಸಬೇಕೆಂದಿದ್ದಾರೆ ಗುರುಪ್ರಸಾದ್. ಇದರಲ್ಲಿ ವೈಷ್ಣವಿಯ ಫೋಟೋ, ವಿಡಿಯೋಗಳು ಮಾತ್ರವಲ್ಲ, ಯಾವುದೇ ದುರ್ಘಟನೆಗಳು ಸಂಭವಿಸಿದಾಗ ಯಾವ ರೀತಿ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕೆಂದು ತಜ್ಞರಿಂದ, ವೈದ್ಯರಿಂದ ಲೇಖನಗಳನ್ನು ಬರೆಸಲಿದ್ದಾರೆ. ಜೊತೆಗೆ, ಶಾಲೆಗಳನ್ನು ಸಂಪರ್ಕಿಸಿ ಅವರಲ್ಲಿಯೂ ಜಾಗೃತಿ ಮೂಡಿಸಬೇಕೆಂಬ ಕನಸು ಕಟ್ಟಿಕೊಂಡಿದ್ದಾರೆ. ಒಂದು ಕನಸು ಮುರುಟಿಬಿದ್ದರೇನಾಯಿತು, ಬದುಕು ಜಟಕಾಬಂಡಿ, ವಿಧಿ ಅದರ ಸಾಹೇಬ ಎಂದಿರುವ ಗುರುಪ್ರಸಾದ್ ದಂಪತಿಗಳ ಜೀವನಪ್ರಿತಿಯನ್ನು ಮೆಚ್ಚಲೇಬೇಕು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Parents of 7-year-old girl Vaishnavi, who died of bee attack in Bengaluru Lalbagh on August 15, 2015, say such incident should never happen again. They have taken up an initiative to create awareness among people, when such tragic incident happens. They also ask, why there is no such system to tackle untoward incidents.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ