• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬನ್ನಿ ಕೃತಜ್ಞತೆ ಅರ್ಪಿಸೋಣ

By Staff
|

ನಿಜವಾಗಿ ನಾನು ಬರವಣಿಗೆ ಮುಂದುವರಿಸಬೇಕೆ ಎಂಬ ಪ್ರಶ್ನೆ ನನ್ನನ್ನು ಎಂದೂ ಕಾಡಿಲ್ಲ. ಯಾರ ಬಲಾತ್ಕಾರಕ್ಕೂ ನಾನು ಬರೆಯುತ್ತಿಲ್ಲವಾಗಿ ನನಗೆ ಬರವಣಿಗೆ ಭಾರವೆನ್ನಿಸಿಲ್ಲ. ಹಾಗೆ ಅನ್ನಿಸಿದ ದಿನವೇ ನಾನು ನಿಲ್ಲಿಸುತ್ತೇನೆ ಎಂದು ಹೇಳಬಾರದಿತ್ತೇ ಎನ್ನಿಸಿತು. ಬರೆಯುವ ಆಸೆ ಮತ್ತು ಬರೆಯಲು ಶಕ್ತಿ ಎರಡೂ ಇರಲಪ್ಪ ಎಂದು ಕೈಮುಗಿದಾಗ ನೆನಪಾಯಿತು -ಇವತ್ತು ಹೇಗಿದ್ದರೂ ಥ್ಯಾಂಕ್ಸ್ ಗಿವಿಂಗ್ ಅಲ್ಲವೇ, ಕೃತಜ್ಞತೆ ಅರ್ಪಿಸೋಣ ಎಂದು ಬರೆಯಲು ಕೂತೆ.

  • ಡಾ. ಮೈ.ಶ್ರೀ. ನಟರಾಜ, ಪೊಟೋಮೆಕ್, ಮೇರೀಲ್ಯಾಂಡ್

ಬನ್ನಿ ಕೃತಜ್ಞತೆ ಅರ್ಪಿಸೋಣದೂರವಾಣಿ ಘಂಟೆ ಬಾರಿಸಿತು. ಒಬ್ಬ "ಆಪ್ತಮಿತ್ರ"ರು "ಹ್ಯಾಪ್ಪಿ ಥ್ಯಾಂಕ್ಸ್ ಗಿವಿಂಗ್" ಹೇಳುವ ನೆವದಲ್ಲಿ ಕರೆದಿದ್ದರು. ಸುತ್ತಿ ಬಳಸಿ ಕೊನೆಗೂ ನೇರವಾಗೇ ಕೇಳಿದರು. "ಇವತ್ತು ದಟ್ಸ್ ಕನ್ನಡ ಓದಿದ್ರಾ" ಅಂತ ಶುರುಮಾಡ್ಕೊಂಡ್ರು. "ಅಲ್ಲಾ ರೀ, ವಿಜಯದಶಮಿಯಂದು ಜೋಶಿ ಬೈ ಬೈ ಅಂದ್ರು, ಉತ್ಥಾನದ್ವಾದಶಿ ದಿನ ತ್ರಿವೇಣಿ ಟಾಟಾ ಅಂದ್ರು, ನೀವು ಯಾವ ಹಬ್ಬಕ್ಕಾಗಿ ಕಾಯುತ್ತಿದ್ದೀರಿ?" ಅನ್ನಬೇಕೆ, ಮಹಾಶಯರು!

ನನಗೆ ಸ್ವಲ್ಪ ಇರುಸುಮುರುಸು ಆದರೂ ಸಾವರಿಸಿಕೊಂಡೆ. ಅವರೇನಾದರೋ ತಮ್ಮ ಮನಸ್ಸಿನಾಳದ ಇಚ್ಛೆಯನ್ನು ಈ ರೀತಿ ವ್ಯಕ್ತಪಡಿಸಿರಬಹುದೇ ಎಂಬ ಅನುಮಾನ ಕಾಡದೇ ಇರಲಿಲ್ಲ. ನನ್ನ ಅಂಕಣವನ್ನು ಓದಿ "ಚೆನ್ನಾಗಿದೆ" ಎನ್ನುವವರ ಪೈಕಿಯವರು ಇವರಲ್ಲ. ಓದದೇ ತಾತ್ಸಾರಮಾಡುವವರೂ ಅಲ್ಲ. ಓದಿದರೂ ಓದಿರುವೆನೆಂದು ಒಪ್ಪಿಕೊಳ್ಳದ, ಅದರಬಗ್ಗೆ ಯಾವತ್ತೂ ಚಕಾರವೆತ್ತದ ದಿವ್ಯ ಓದುಗರಲ್ಲಿ ಅವರೂ ಒಬ್ಬರೆಂಬುದು ನನ್ನ ಗಮನಕ್ಕೆ ಬಂದಿದೆ. ಇರಲಿ, ಇದ್ದಕ್ಕಿದ್ದಂತೆ ಇಂದೇಕೆ ಇವರಿಗೆ ನನ್ನ ಅಂಕಣದ ಭವಿಷ್ಯದ ಚಿಂತೆ?

ಮಿತ್ರರು ಮುಂದುವರೆಸಿದರು. "ಅದುವೆಕನ್ನಡದದ ಮುಖಪುಟ ವಿನ್ಯಾಸವೆಲ್ಲ ಬದಲಾಗುತ್ತಿದೆ, ನೋಟೀಸ್ ಮಾಡಿದ್ರಾ? ಹೊಸ ಹೊಸ ಬರಹಗಾರರು ಕಾಣಿಸಿಕೊಳ್ಳುತ್ತಿದ್ದಾರೆ, ಹೊಸ ನೀರು ಬಂದು ಹಳೆಯದು ಕೊಚ್ಚಿಹೋಗುವುದು ಸಹಜತಾನೆ?" ಅಂದ್ರು. ಯಾಕೋ ಇವರು ತಮ್ಮ ಮನಸ್ಸಿನ ಇಚ್ಛೆಯನ್ನು ನೇರವಾಗಿ ತಿಳಿಸುವ ಬದಲು ಹೀಗೆಲ್ಲ ಅನ್ನುತ್ತಿದ್ದಾರೋ ಎಂಬ ಅನುಮಾನ ಬಂದರೂ, ನಾನು ತೋರಿಸಿಕೊಳ್ಳಲಿಲ್ಲ.

"ನೋಡಿ ಸಾರ್, ನವರಾತ್ರಿ, ದೀಪಾವಳಿ ಮುಂತಾದ ಹಬ್ಬಗಳೆಲ್ಲ ಕಳೆದಿವೆ, ಇನ್ನು ಯುಗಾದಿ ವರೆಗೂ ಕಾಯುವಬದಲು ಕ್ರಿಸ್ಮಸ್ ದಿನ ಬೈ ಬೈ ಹೇಳಲೇ?" ಎಂದು ಕೇಳಿದ್ದಕ್ಕೆ ಅವರ ಮುಖದಲ್ಲಾಗಿರಬಹುದಾದ ಪ್ರಸನ್ನತೆಯನ್ನು ನೋಡುವ ಭಾಗ್ಯ ನನ್ನದಾಗಿರಲಿಲ್ಲ. ಆದರೆ ಅವರು ಸಭ್ಯರ ಪೈಕಿಯವರಾದ್ದರಿಂದ, "ಛೆ-ಛೆ, ನೀವು ಬರೆಯುವುದನ್ನು ನಿಲ್ಲಿಸಬೇಡಿ, ನಿಮ್ಮ ಅಂಕಣವನ್ನು ಓದುವವರಿಗೆ ನಿರಾಸೆ ಆದೀತು," ಎಂದು ನನ್ನ ಪ್ರತಿಕ್ರಿಯೆಗಾಗಿ ಕಾದರು. ಇವರು ಸುರಿಸಿದ್ದು ಮೊಸಳೆ ಕಣ್ಣೀರು ಎಂದು ಗೊತ್ತಿದ್ದರೂ ಹೇಗೆ ಸಮಾಧಾನಪಡಿಸಬೇಕೋ ತಿಳಿಯದೇ ತಬ್ಬಿಬ್ಬಾಗಿ ಮಾತು ಮುಗಿಸಿದೆ.

ನಿಜವಾಗಿ ನಾನು ಬರವಣಿಗೆ ಮುಂದುವರಿಸಬೇಕೆ ಎಂಬ ಪ್ರಶ್ನೆ ನನ್ನನ್ನು ಎಂದೂ ಕಾಡಿಲ್ಲ. ಯಾರ ಬಲಾತ್ಕಾರಕ್ಕೂ ನಾನು ಬರೆಯುತ್ತಿಲ್ಲವಾಗಿ ನನಗೆ ಬರವಣಿಗೆ ಭಾರವೆನ್ನಿಸಿಲ್ಲ. ಹಾಗೆ ಅನ್ನಿಸಿದ ದಿನವೇ ನಾನು ನಿಲ್ಲಿಸುತ್ತೇನೆ ಎಂದು ಹೇಳಬಾರದಿತ್ತೇ ಎನ್ನಿಸಿತು. ಬರೆಯುವ ಆಸೆ ಮತ್ತು ಬರೆಯಲು ಶಕ್ತಿ ಎರಡೂ ಇರಲಪ್ಪ ಎಂದು ಕೈಮುಗಿದಾಗ ನೆನಪಾಯಿತು -ಇವತ್ತು ಹೇಗಿದ್ದರೂ ಥ್ಯಾಂಕ್ಸ್ ಗಿವಿಂಗ್ ಅಲ್ಲವೇ, ಕೃತಜ್ಞತೆ ಅರ್ಪಿಸೋಣ ಎಂದು ಬರೆಯಲು ಕೂತೆ.

ಯಾರು ಯಾರಿಗೆ ಏಕೆ ಕೃತಜ್ಞತೆ ಅರ್ಪಿಸಬೇಕು? ಅಮೇರಿಕದಲ್ಲಿ ಟರ್ಕಿ ತಿಂದು ತೇಗುವ ನೆಪದಲ್ಲಿ ಮಾಲುಗಳಲ್ಲಿ ಸೇಲುಗಳ ಭರಾಟೆ ಶುರುವಾಗುತ್ತದೆ. ಬೆಳಗಿನ ಝಾವ ನಾಲಕ್ಕು ಗಂಟೆಗೇ ಬಾಗಿಲು ತೆರೆದರೂ ನೂರಾರು ಮಂದಿ ಕ್ಯೂನಿಂತಿರುತ್ತಾರಂತೆ (ಇಷ್ಟು ವರ್ಷಗಳಲ್ಲಿ ನಾನೊಮ್ಮೆಯೂ ಅಂಥ ಸಾಹಸಕ್ಕೆ ಕೈಹಾಕಿಲ್ಲ!). ಇಲ್ಲಿನ ಆದಿವಾಸಿಗಳಾದ ನೇಟೀವ್ ಅಮೇರಿಕನ್ನರನ್ನು (ತಪ್ಪು ತಪ್ಪಾಗಿ ರೆಡ್ ಇಂಡಿಯನ್ಸ್ ಎಂದು ಕರೆಯಲ್ಪಡುವ ಜನ ಇವರು) ಊಟಕ್ಕೆ ಕರೆದು ಆತಿಥ್ಯಮಾಡುವ ನೆಪದಲ್ಲಿ ಜೀವಂತ ತಿಥಿ ಮಾಡಿದ ಒಂದು ಅವಮಾನಕಾರಕ ದಿನವನ್ನು ಸ್ವಲ್ಪ ವ್ಯತ್ಯಾಸಮಾಡಿಕೊಂಡು "ಕೃತಜ್ಞತಾದಿನ" ಎಂಬ ಹೆಸರಿನಲ್ಲಿ ಆಚರಣೆಗೆ ತಂದಿದ್ದಾರೆ. ಇಷ್ಟೊಂದು ಧಾರಾಳವಾಗಿ ಅನ್ನ ನೀರು ಪಶು ಪಕ್ಷಿ ಹಸು ಹಂದಿ ಮುಂತಾಗಿ ಎಲ್ಲವನ್ನೂ ನೀಡಿ ಖುಶಿಯಲ್ಲಿಟ್ಟಿರುವ ಆ ದಯಾಮಯನಾದ ಭಗವಂತನಿಗೆ ಕೃತಜ್ಞತೆ ಅರ್ಪಿಸುವ ದಿನ ವರ್ಷಕ್ಕೊಮ್ಮೆಯಾದರೂ ಬರದಿದ್ದರೆ ಹೇಗೆ?

ಅಮೆರಿಕನ್ನರು ಈ ವರ್ಷ ಯಾವ ಕಾರಣಕ್ಕಾಗಿ ಥ್ಯಾಂಕ್ಸ್ ಹೇಳಬೇಕು? ಪೆಟ್ರೋಲ್ ಬೆಲೆ ಮೂರೂವರೆ ಡಾಲರ್ರಿಗೆ ಏರಿದ್ದಕ್ಕೆ? ಅಥವಾ ರಿಯಲ್ ಎಸ್ಟೇಟ್ ಮತ್ತು ಸ್ಟಾಕ್ ಮಾರುಕಟ್ಟೆ ಕುಸಿದಿದ್ದಕ್ಕೇ? ಇರಾಕಿನಲ್ಲಿ ನಿಷ್ಕಾರಣವಾಗಿ ಯುವಕರು ರಕ್ತ ಸುರಿಸಿದ್ದಕ್ಕೇ? ಅಥವಾ, ನಮ್ಮ ಧೀರ ಅಧ್ಯಕ್ಷ ಇನ್ನೂ ಇರಾನಿನ ಮೇಳೆ ಧಾಳಿಯಿಟ್ಟಿಲ್ಲವೆಂಬ ಸಂತೋಷಕ್ಕೇ? ಇನ್ನೂ ಕೆಲವು ಒಳ್ಳೆ ಕಾರಣಗಳೂ ಇವೆ. ಮೊಟ್ಟ ಮೊದಲ ಬಾರಿಗೆ ಒಬ್ಬ ಮಹಿಳೆ, ಒಬ್ಬ ಆಫ್ರಿಕನ್ ಅಮೆರಿಕನ್, ಒಬ್ಬ ಹಿಸ್ಪ್ಯಾನಿಕ್ ಅಮೆರಿಕನ್ ಒಬ್ಬ ಮೋರ್ಮನ್ ಪಂಗಡದವ ಹೀಗೆ ಯಾರನ್ನು ಅಲ್ಪಸಂಖ್ಯಾತರು ಅಥವಾ ಅಬಲರು (ಅಬಲೆಯರು) ಎನ್ನುತ್ತೀವೋ ಅಂಥವರೆಲ್ಲ ಅಮೆರಿಕದ ಅಧ್ಯಕ್ಷ ಪದವಿಯನ್ನು ತಲುಪಬಹುದಾದ ಸ್ಥಿತಿಯಲ್ಲಿದ್ದಾರೆ ಎಂಬ ಇದು ಇಲ್ಲಿನ ಚರಿತ್ರೆಯಲ್ಲಿ ಅಸಾಮಾನ್ಯ ಸಂಗತಿ. ಇಷ್ಟೇ ಅಲ್ಲ, ಭಾರತೀಯ ಮೂಲದ ಒಬ್ಬ ಯುವಕ ಅಮೇರಿಕದ ಒಂದು ಪ್ರಾಂತ್ಯವನ್ನಾಳುವ ರಾಜ್ಯಪಾಲರ ಹುದ್ದೆಗೆ ಆಯ್ಕೆ ಆಗಿದ್ದಾನೆ ಎಂಬ ಕಾರಣ ಕೂಡ ಅಸಾಧಾರಣವೆ ಸರಿ.

ಇನ್ನು ಭಾರತದ ಭಾಗ್ಯದ ವಿಷಯಗಳನ್ನು ನೆನೆದಾಗಲೂ ಒಂದಷ್ಟು ಕೃತಜ್ಞರಾಗಿರಲು ಕಾರಣಗಳಿವೆ. ಉದಾಹರಣೆಗೆ, ತನ್ನ ನೆರೆ ದೇಶವಾದ ಪಾಕಿಸ್ತಾನದಲ್ಲಿರುವಂಥ ಪರಿಸ್ಥಿತಿ ಭಾರತದಲ್ಲಿಲ್ಲವಲ್ಲ ಎಂಬುದೇನು ಸಾಧಾರಣ ಮಾತೇ? ಭಾರತೀಯ ಸೈನ್ಯಾಧಿಕಾರಿಗಳು ನಾಡ ಗಡಿಯನ್ನು ರಕ್ಷಿಸುವುದನ್ನು ಬಿಟ್ಟು ರಾಜಕೀಯಕ್ಕೆ ಮೂಗು ತೂರಿಸದೇ ಇರುವುದು ನಿಜಕ್ಕೂ ಹೆಮ್ಮೆಯ ವಿಷಯ. ಭಾರತದ ರಾಜಕೀಯದಲ್ಲಿ ಎಷ್ಟೇ ದೌರ್ಬಲ್ಯಗಳಿದ್ದರೂ ಪ್ರಜಾಪ್ರಭುತ್ವವನ್ನು ಪಾಲಿಸುತ್ತಲೇ ಇದ್ದಾರಲ್ಲ, ಅದು ಮೆಚ್ಚತಕ್ಕ ಮಾತು.

ನಿಜ, ಒಂದು ಸಣ್ಣ ಕತ್ತಲೆ ಇಂದಿರಾ ಗಾಂಧಿಯವರ ಕಾಲದಲ್ಲಿ ಕವಿದಿತ್ತು, ಆದರೆ ಆಕೆಯೂ ಕೂಡ ಮತದಾನವನ್ನು ನಡೆಸಲು ಅವಕಾಶಮಾಡಿಕೊಟ್ಟದ್ದು ಶ್ಲಾಘನೀಯ.ಅಷ್ಟೇ ಅಲ್ಲ, ಜನತೆ ತಮ್ಮ ಮತದಾನದ ಮೂಲಕ ಶಾಂತಿಯಿಂದ ಸರ್ವಾಧಿಕಾರೀ ಮನೋವೃತ್ತಿಯನ್ನು ನಿರಾಕರಿಸಿದ್ದೂ ಅತ್ಯಂತ ಹೆಮ್ಮೆ ಪಡಬಹುದಾದ ವಿಷಯ. ಚೈನಾ ಮತ್ತು ರಷ್ಯಾಗಳ ಕಮ್ಯೂನಿಸಮ್, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಬರ್ಮಾಗಳ ಸೈನ್ಯಾಧಿಕಾರದ ಮಾರ್ಗಗಳನ್ನು ಧಿಕ್ಕರಿಸಿ, ಜನತಾ ಪ್ರತಿನಿಧಿಗಳನ್ನು ಕಾಲಕಾಲಕ್ಕೆ ಆಯ್ಕೆ ಮಾಡುತ್ತಾ ಬಂದಿರುವುದನ್ನು ನೆನೆಸಿಕೊಂಡು ನಾವು ಕೃತಜ್ಞರಾಗಿರಬೇಕು. (ಈ ಸಂತೋಷದ ನಡುವೆ ಕರ್ನಾಟಕದಲ್ಲಿ ನಡೆಯುತ್ತಿರುವ ನಾಚಿಕೆಗೇಡಿನ ಸರ್ಕಸ್ ಬಗ್ಗೆ ಮಾತಾಡುವುದು ಬೇಡವೇಬೇಡ.)

"ಎಲ್ಲಿ ಮನವು ನಿರ್ಭಯದಿ ತಲೆಯನೆತ್ತಿ ನಿಲುವುದೋ,

ಎಲ್ಲಿ ಜ್ಞಾನ ಸುಧಾಪಾನ ಎಲ್ಲರಿಗೂ ಸಿಗುವುದೋ,

ಆ ಸ್ವತಂತ್ರ ನಾಡಿಗೆ ನಮ್ಮ ನಾಡು ಏಳಲೇಳಲೇಳಲಿ,

ಓ ಗುರುವೆ, ನಿರುತ ಸುಖದಿ ಬಾಳಲಿ"

ಎಂಬ ರವೀಂದ್ರನಾಥ ಠಾಕೂರರ ಅಮರ ಕವಿವಾಣಿಯನ್ನು ನೆನೆಸಿಕೊಂಡರೆ ಮನಸ್ಸು ಝುಂ ಎನ್ನುತ್ತದೆ. ನಮ್ಮ ಜನ್ಮಭೂಮಿ ಭಾರತ ಮತ್ತು ನಮ್ಮ ಕರ್ಮಭೂಮಿ ಅಮೇರಿಕಾ ಎರಡು ಅಂಥ ಆದರ್ಶದ ನಾಡುಗಳು. ಕೃತಜ್ಞರಾಗಿರುವುದಕ್ಕೆ ಇದಕ್ಕಿಂತ ಮತ್ಯಾವ ಕಾರಣಬೇಕು ಎನ್ನುವ ಪ್ರಶ್ನೆಯೊಂದಿಗೆ ವಿರಮಿಸುವೆ ಮುಂದಿನ ಕಂತಿನವರೆಗೆ.

[ವಿ.ಸೂ : ನನ್ನ ಆಪ್ತಮಿತ್ರರೂ ಈ ಲೇಖನವನ್ನೋದಿ ಖುಷಿ ಪಡುವರೆಂದು ನಂಬಿರುವೆ. ನಾನು ಅಂಕಣಕ್ಕೆ ಬೈ ಬೈ ಹೇಳುವ ಯೋಚನೆಯಲ್ಲಿ ಸದ್ಯಕ್ಕಂತೂ ಇಲ್ಲ ಎಂಬ ಸಮಾಧಾನವನ್ನೂ ಅವರಿಗೆ ಈ ಮೂಲಕ ತಿಳಿಯಪಡಿಸುತ್ತಿರುವೆ!]

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more