• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಾದೋಪಾಸನ ಶಾಲೆಯಲ್ಲಿ ಸಂಗೀತ ಪರೀಕ್ಷೆ

By Super
|

‘ಎಷ್ಟೇ ಯತ್ನ ಪಟ್ಟರೂ, ಇಲ್ಲಿ ಬೆಳೆಯುವ ಮಕ್ಕಳ ಸಂಗೀತದ ಕಲಿಕೆಯಲ್ಲೇ ಏನೋ ಕೊರತೆ ಇದೆಯೇ’ ಎಂಬ ಪ್ರಶ್ನೆ ನನ್ನನ್ನು ಆಗಾಗ್ಗೆ ಸಾಕಷ್ಟು ಕಾಡಿದ್ದುಂಟು. ಕೃತಿಗಳನ್ನು ಕಂಠಪಾಠ ಮಾಡಿ ಒಪ್ಪಿಸುತ್ತಾರೆ, ಆದರೆ ಸ್ವರಜ್ಞಾನವಾಗುವುದಿಲ್ಲ, ರಾಗಜ್ಞಾನ ಕೊಂಚವೂ ಇಲ್ಲ, ಮನೋಧರ್ಮ ಸಂಗೀತ ಇವರಿಗೆ ಒಲಿಯುವುದಿಲ್ಲವೇಕೆ? ಇಲ್ಲಿಯ ಶಿಕ್ಷಣ ಪದ್ಧತಿಯಲ್ಲೇ ಅಥವಾ ಶಿಕ್ಷಕರಲ್ಲೇ ಏನೋ ಕೊರತೆ ಇರಬಹುದೇ? ಭಾರತದಲ್ಲಿ 12-14 ವಯಸ್ಸಿನ ಮಕ್ಕಳು ನಿರಾಯಾಸವಾಗಿ ಸ್ವರ ಕಲ್ಪನೆಯನ್ನು ಮಾಡುತ್ತಾರೆ, ರಾಗಾಲಾಪನೆ ಮಾಡುತ್ತಾರೆ, ಇವರಿಗೇಕೆ ಅದು ಸಾಧ್ಯವಾಗುತ್ತಿಲ್ಲ? ಹೀಗೆಲ್ಲ ಸಾಗಿತ್ತು ನನ್ನ ಯೋಚನೆಗಳ ಸರಮಾಲೆ.

ವಾರ ವಾರ ಮಕ್ಕಳೊಂದಿಗೆ ಕಾರಿನಲ್ಲಿ ಹೋಗುವಾಗ ಅವರ ಕೊನೇ ಘಳಿಗೆಯ ತಯಾರಿ (ಯುದ್ಧಕಾಲೇ ಶಸ್ತ್ರಾಭ್ಯಾಸಃ ಅಲ್ಲ, ಯುದ್ಧರಂಗೇ ಶಸ್ತ್ರಾಭ್ಯಾಸಃ!) ನಡೆಯುತ್ತಿತ್ತು, ಮೇಡಮ್‌ ಮುದ್ರಿಸಿಕೊಟ್ಟ ಧ್ವನಿ ಸುರಳಿಯನ್ನು ಕಾರಿನಲ್ಲಿರುವ ಟೇಪ್‌ ಪ್ಲೇಯರಿನಲ್ಲಿ ತುರುಕಿ ನಡೆಸುತ್ತಿದ್ದ ಅವರ ಗಿಳಿಪಾಠದ ಸಂಗೀತಾಭ್ಯಾಸ ಕ್ರಮವೆಲ್ಲಿ, ಬೆಳಗಿನ ಝಾವ ಎದ್ದು ಮಾಡುವ ಅಕಾರ ಸಾಧನೆ ಎಲ್ಲಿ? ಹೀಗೆಲ್ಲ ಯೋಚಿಸುತ್ತಿರುವಾಗ, ಶ್ರೀಮತಿ ಉಷಾ ಚಾರ್‌ ಅವರ ಮನೆ ತಲುಪಿ, ನೆನಪಿನ ಸರಪಳಿ ಕಡಿದು ಹೋಯಿತು. ಸೀದಾ ಒಳಗೆ ನಡೆದೆ. ಮಕ್ಕಳು ಸಂಪಾದಿಸುವ ಅಂಕಗಳನ್ನು ಲೆಕ್ಕ ಇಡುವ ಕೆಲಸ ನನ್ನ ಪಾಲಿಗೆ ಬಂತು, ಕಾರಣ ನನಗೆ ಕಾನ್ಫ್ಲಿಕ್ಟ್‌ ಆಫ್‌ ಇನ್ಟೆರೆಸ್ಟ್‌ ಇರಲಿಲ್ಲ!

ಅಂದು ಜನವರಿ 29, ಭಾನುವಾರ ಮಧಾಹ್ನ ‘ನಾದೋಪಾಸನ’ ಸಂಗೀತಶಾಲೆಯಲ್ಲಿ ಸಂಭ್ರಮ. ಶಾಲೆಯಲ್ಲಿ ಪಾಠ ಕಲಿಯುವ ನಾಲ್ಕೈದು ವರ್ಷಗಳ ಚಿಳ್ಳೆ-ಪಿಳ್ಳೆಗಳಿಂದ ಹಿಡಿದು ಹದಿಹರೆಯದ ಪ್ರೌಢ ಶಿಷ್ಯರೂ ಬಂದು ನೆರೆದಿದ್ದರು. ಮಕ್ಕಳನ್ನು ಕರೆತಂದ ತಂದೆತಾಯಿಯರೂ (ಅಜ್ಜಿಯರೂ)ಬಂದಿದ್ದರೆಂದು ಬೇರೆ ಹೇಳಬೇಕೆ? ಇಲ್ಲಿನ ಮಕ್ಕಳು ಜೂನಿಯರ್‌, ಸೀನಿಯರ್‌ ಮುಂತಾದ ಪರೀಕ್ಷೆಗಳಿಗೆ ಕೂರುವುದಿಲ್ಲ. ವರ್ಷಕ್ಕೊಮ್ಮೆ ಪರೀಕ್ಷೆ ಮಾಡುವ ಕ್ರಮವನ್ನು ಉಷಾಚಾರ್‌ ಇಟ್ಟುಕೊಂಡಿದ್ದಾರೆ. ಆದರೆ, ಈ ಬಾರಿ ಪರೀಕ್ಷೆ ಸ್ವಲ ವಿಶೇಷದ್ದು. ದೂರದರ್ಶನದ ಮೇಲೆ ಜೆಪರ್ಡಿ ಎಂಬ ಕಾರ್ಯಕ್ರಮದಲ್ಲಿ ಬರುವ ಪ್ರಶ್ನೋತ್ತರಗಳ ಮಾದರಿಯನ್ನನುಸರಿಸಿ ಪರೀಕ್ಷೆ ಎಂಬ ಆತಂಕವನ್ನು ನೀಗಿಸಿ, ಒಂದಷ್ಟು ಮನರಂಜನೆಯನ್ನೂ ಒದಗಿಸುವ ಉದ್ದೇಶದಿಂದ ಸಾಕಷ್ಟು ಪರಿಶ್ರಮ ವಹಿಸಿ ತಯಾರಿ ನಡೆಸಿದ್ದರು. ನಿರ್ವಹಣೆಯಲ್ಲಿ ಮಗಳೂ ಶಿಷ್ಯಳೂ ಆದ ರಾಧಿಕಾ ಸಮರ್ಥವಾಗಿ ಕೈಗೂಡಿಸಿದಳು. ಎಂದಿನಂತೆ ಚಾರ್‌ ಹಿಂಬದಿಯಲ್ಲಿದ್ದು ಎಲ್ಲ ವ್ಯವಸ್ಥೆಗಳನ್ನೂ ನೋಡಿಕೊಳ್ಳುತ್ತಿದ್ದರು. ಏನೂ ಹೆಚ್ಚುಕಮ್ಮಿಯಾಗುವುದು ಸಾಧ್ಯವೇ ಇರಲಿಲ್ಲ, ಏಕೆಂದರೆ, ರಾಮರಾವ್‌ ಮತ್ತು ಕೃಷ್ಣಮೂರ್ತಿ ಸರ್ವಾಂತರ್ಯಾಮಿಗಳಂತೆ ಅಲ್ಲೇ ಸುಳಿದಾಡುತ್ತಿದ್ದರು!

ಸಂಗೀತದ ಜೆಪರ್ಡಿಯಲ್ಲಿ ಒಟ್ಟು ಆರು ವಿಷಯಗಳಿಗೆ ಸಂಬಂಧಪಟ್ಟಂತೆ ಪ್ರಶ್ನೆಗಳಿದ್ದವು: ರಾಗ, ತಾಳ, ಕೃತಿ, ವಾಗ್ಗೇಯಕಾರ, ವಾದ್ಯ ಮತ್ತು ಮಸಾಲೆ ಚೌ-ಚೌ. ಸುಮಾರು ಮುವ್ವತ್ತಕ್ಕೂ ಹೆಚ್ಚು ಮಕ್ಕಳನ್ನು ಮೂರು ಗುಂಪುಗಳಾಗಿ ವಿಂಗಡಿಸಿ, ಮೊದಲನೇ ಗುಂಪಿಗೆ ಜಯಶ್ರೀ, ಎರಡನೇ ಗುಂಪಿಗೆ ಸರ್ವೇಶ್‌ ಮತ್ತು ಮೂರನೇ ಗುಂಪಿಗೆ ರಂಜನಿ ಮುಂದಾಳುಗಳಾಗಿ ಆರಿಸಲ್ಪಟ್ಟರು. ಚೀಟಿ ಎತ್ತುವ ಮೂಲಕ ತಮಗೆ ಬೇಕಾದ ಪ್ರಶ್ನೆಯ ವಿಷಯವನ್ನು ಆಯ್ದುಕೊಳ್ಳುವ ಸೌಲಭ್ಯ ಮತ್ತು ಉತ್ತರ ಹೇಳುವ ಪಾಳಿಯೂ ನಿರ್ಧರಿಸಲ್ಪಟ್ಟಿತು.

ಮೊದಲನೇ ಪ್ರಶ್ನೆಗೆ 100 ಅಂಕಗಳು, ಹತ್ತನೇ ಪ್ರಶ್ನೆಗೆ 1,000 ಅಂಕಗಳು, ಪ್ರಶ್ನೆಯಿಂದ ಪ್ರಶ್ನೆಗೆ 100 ಅಂಕಗಳ ಮೆಟ್ಟಿಲುಗಳು. ಸರಳ ಪ್ರಶ್ನೆಯಿಂದ ಪ್ರಾರಂಭಿಸಿ ಪ್ರಶ್ನೆ ಕಠಿಣವಾಗುತ್ತಾ ಹೋಗುತ್ತದೆ. ಗುಂಪಿನ ಎಲ್ಲ ಮಕ್ಕಳಿಗೂ ಜವಾಬು ಕೊಡಲು ಅವಕಾಶ. ಪರಸ್ಪರ ಮಾತಾಡಿಕೊಂಡು ಖಚಿತವಾದಮೇಲೆ ಉತ್ತರ ಕೊಡಲು ಅವಕಾಶ. ಹಾಡಬೇಕಾಗಿ ಬಂದಾಗ ಗುಂಪಿನಲ್ಲಿ ಹಾಡಲು ಉತ್ತೇಜನ. ಒಟ್ಟಿನಲ್ಲಿ ಇದೊಂದು ಪರೀಕ್ಷೆ ಎಂಬ ಭಾವನೆಯೇ ಬಾರದಂತೆ ಸುಮಾರು ಮೂರು ಘಂಟೆಗಳಲ್ಲಿ ಅರುವತ್ತು ಸವಾಲುಗಳು ಛಟ ಛಟನೆ ಸಿಡಿದವು.

ಪ್ರಶ್ನೆಗಳ ಉದಾಹರಣೆಗಳನ್ನು ನೋಡಿ: ಸಪ್ತತಾಳಗಳ ಹೆಸರುಗಳನ್ನು ತಿಳಿಸಿ; ಅವುಗಳ ಎಣಿಕೆಯನ್ನು ಪ್ರಾತ್ಯಕ್ಷಿಕೆ ಮಾಡುತ್ತ ವಿವರಿಸಿ; ಮೇಳಕರ್ತರಾಗವೆಂದರೇನು; ಭಾಷಾಂಗರಾಗವೆಂದರೇನು; ಷಾಡವ ಮತ್ತು ಔಡವ ರಾಗಗಳಿಗೆ ಉದಾಹರಣೆ ಕೊಡಿ; ವಾಸುದೇವಾಚಾರ್ಯರ ಕೀರ್ತನೆಗಳಲ್ಲಿ ಬರುವ ಅಂಕಿತವೇನು; ಉತ್ಸವಸಂಪ್ರದಾಯ ಕೃತಿಗೂ ದಿವ್ಯನಾಮ ಸಂಕೀರ್ತನಕ್ಕೂ ವ್ಯತ್ಯಾಸವೇನು; ಸ್ವರಜತಿಗೂ ಜತಿಸ್ವರಕ್ಕೂ ವ್ಯತ್ಯಾಸವೇನು; ಅಟ್ಟತಾಳದ ವರ್ಣವನ್ನು ಹಾಡಿ ತೋರಿಸಿ; ಹಂಸಧ್ವನಿಯಲ್ಲಿ ಕೃತಿ ಹಾಡಿ ಕಲ್ಪನಾಸ್ವರಗಳ ಕೆಲವು ಆವರ್ತನಗಳನ್ನು ಪ್ರಸ್ತುತಿಮಾಡಿ ; ತಂತ್ರೀವಾದ್ಯಗಳಿಗೆ ಗಾಳೀವಾದ್ಯಗಳಿಗೆ ಉದಾಹರಣೆಗಳನ್ನು ಕೊಡಿ; ಈಗ ನೀವು ಕೇಳಿದ ವಾದ್ಯ ಯಾವುದು; ಹೀಗೆ ಸಾಗುತ್ತಿತ್ತು.

ನಾಮುಂದು ತಾಮುಂದು ಎಂದು ಮಕ್ಕಳೆಲ್ಲ ಮುಂದೆ ಬಂದು ಉತ್ತರ ಕೊಡುತ್ತಿದ್ದರು. ತ್ಯಾಗರಾಜರು ಎಲ್ಲಿ ಹುಟ್ಟಿದರು ಎಂಬ ಪ್ರಶ್ನೆಗೆ ಕಿಲಾಡಿ ಚಿಣ್ಣನೊಬ್ಬ ‘ಇಂಡಿಯಾದಲ್ಲಿ’ ಎಂದು ಉತ್ತರಿಸಿದ! ತ್ಯಾಗರಾಜರು ಅಮೇರಿಕದವರಲ್ಲ ಎಂಬ ಅವನ ಜ್ಞಾನ ಮೆಚ್ಚತಕ್ಕದ್ದೇ. ಮತ್ತೊಬ್ಬ ಚಿಣ್ಣೆ ತಂಬೂರಿಯನ್ನು ಸಿತಾರ್‌ ಎಂದು ಕರೆದು ಎಲ್ಲರಿಗೂ ಒಂದಿಷ್ಟು ಮನೋರಂಜನೆ ಕೊಟ್ಟಳು. ರಾಘವೇಂದ್ರ ಹಾಡಿ ತೋರಿಸಿದ ಸ್ವರಗಳಿಂದ ಹೈಮವತಿ ರಾಗವನ್ನು ಕಂಡುಹಿಡಿದವಳು ರಂಜನಿ. ಅದು ಎಷ್ಟನೇ ಮೇಳಕರ್ತ, ಅದರ ಮಧ್ಯಮವನ್ನು ಬದಲಿಸಿದರೆ ಯಾವ ರಾಗ ಬರುತ್ತದೆ ಎಂಬ ಫಾಲೋ-ಆನ್‌ ಪ್ರಶ್ನೆಗಳಿಗೂ ಸರಿಯುತ್ತರ ಹೇಳಿ 1,000 ಅಂಕ ಗಿಟ್ಟಿಸಿಕೊಂಡಿತು ಅವಳ ಗುಂಪು.

ಉಷಾ ಅವರ ಶಿಷ್ಯರ ಸಂಖ್ಯೆ ದೊಡ್ಡದಾಗಿ ಬೆಳೆದಿದೆ. ಅವರ ಪ್ರಮುಖ ಶಿಷ್ಯರ ಪೈಕಿ ಶ್ರೀ ರಾಘವೇಂದ್ರ ಬಾಟ್ನಿ ಅಪರೂಪದ ವ್ಯಕ್ತಿ. ಇಲ್ಲೇ ಬೆಳೆದು ದೊಡ್ಡವನಾದವ ಈತ. ಸುಮಾರು ಐದು ವರ್ಷದ ಹುಡುಗನಾದಾಗಲಿಂದಲೂ ಸಂಗೀತಾಭ್ಯಾಸ ಮಾಡಿ ಕಚೇರಿ ಮಾಡುವ ಮಟ್ಟವನ್ನು ಗಳಿಸಿರುವ ಹಲವೇ ಯುವಕರ ಪೈಕಿ ಆತನೂ ಒಬ್ಬ. ಹಾಡುಗಾರಿಕೆಯ ಜೊತೆಗೆ ವೀಣಾವಾದವನ್ನೂ ಕಲಿತಿರುವುದಲ್ಲದೆ, ‘ನಾದಸುಧಾ’ ಎಂಬ ತಮ್ಮದೇ ಸಂಗೀತಶಾಲೆಯೊದನ್ನು ಪ್ರಾರಂಭಿಸಿ ಅನೇಕ ಮಕ್ಕಳಿಗೆ ಮತ್ತು ವಯಸ್ಕರಿಗೆ ಪಾಠ ಹೇಳಿಕೊಡುತ್ತಿದ್ದಾರೆ. (ಅಕೌಂಟಿಂಗ್‌ ವೃತ್ತಿ ಅವರ ಹವ್ಯಾಸ ಮಾತ್ರ ಎಂದು ಕೆಲವರ ಅಂಬೋಣ!) ಇವರ ಪ್ರತಿಭೆಯನ್ನು ಗುರುತಿಸಿ ರಾಜಧಾನಿಯ ಕನ್ನಡ ಸಂಸ್ಥೆಯಾದ ಕಾವೇರಿ 2005ರಲ್ಲಿ ಇವರಿಗೆ ಪ್ರಶಸ್ತಿಫಲಕವನ್ನು ಕೊಟ್ಟು ಗೌರವಿಸಿದ್ದು ಅತ್ಯಂತ ಸೂಕ್ತವಾಗಿತ್ತು.

ಉಷಾ ಅವರ ಶಿಷ್ಯೆಯರಪೈಕಿ ಹದಿಹರೆಯದ ಹೆಣ್ಣು ಮಕ್ಕಳು ಹಲವರು ಸೇರಿಕೊಂಡು ‘ನಾದಸುರಭಿ’ ಎಂಬ ದೊಡ್ಡಗುಂಪಿನೊಳಗಿನ ಮರಿಗುಂಪೊಂದನ್ನು ಕಟ್ಟಿಕೊಂಡಿದ್ದಾರೆ. ಈ 8-10 ವಿದ್ಯಾರ್ಥಿನಿಯರು ಯಾವ ಮನೆಯಲ್ಲಿ ಸೇರಿದರೂ ಯಾವಾಗ ಕೇಳಿದರೂ ಆವಾಗ ಯಾವ ಬಿಗುಮಾನವೂ ಇಲ್ಲದೇ ಸಾಲಾಗಿ ಕುಳಿತು ತಾಳ ಹಾಕಿಕೊಂಡು ಶ್ರುತಿಬದ್ಧವಾಗಿ ಕೀರ್ತನೆಗಳನ್ನು, ದೇವರನಾಮಗಳನ್ನು ಹಾಡುತ್ತಾರೆ. ಹಬ್ಬಹರಿದಿನಗಳಲ್ಲಿ ಲಂಗ ಧಾವಣಿ ತೊಟ್ಟು, ಜಡೆಯನ್ನು ನೀಟಾಗಿ ಬಾಚಿಕೊಂಡು, ಹಣೆಗೆ ಕುಂಕುಮವಿಟ್ಟುಕೊಂಡು ಒಳ್ಳೆ ಲಕ್ಷ್ಮಿಯರಂತೆ, ಗೌರಿಯರಂತೆ ಹಸನ್ಮುಖಿಗಳಾಗಿ ನಲಿದಾಡುತ್ತ ದೊಡ್ಡವರಿಗೆ ಸಂತೋಷವನ್ನುಂಟುಮಾಡುತ್ತಾರೆ. ಇವರುಗಳ ಪೈಕಿ ಒಬ್ಬಳು, ರಂಜನಿ, ಈಗಾಗಲೇ ಪಿಟೀಲು ನುಡಿಸುವುದರಲ್ಲಿ ಸಾಕಷ್ಟು ಮುಂದೆಸಾಗಿದ್ದಾಳೆ, ಸ್ವಂತ ಕಚೇರಿ ಕೊಡುವಷ್ಟರ ಮಟ್ಟಿಗೆ. ಅಂದಮೇಲೆ, ಇಲ್ಲಿಯ ಮಕ್ಕಳೂ ಭಾರತದ ಮಕ್ಕಳಂತೆ, ಏಕೆ ಅವರಿಗಿಂತಲೂ ಒಂದು ಕೈ ಹೆಚ್ಚಾಗೆ ಎನ್ನುವಂತೆ, ಹಾಡುವುದನ್ನು ಕಲಿಬಹುದು ಎಂಬುದು ಸಿದ್ಧವಾದಂತಾಯಿತು.

ಕೆಲ ವರ್ಷಗಳ ಕೆಳಗೆ ಮಕ್ಕಳು ಹಾಡುಗಳನ್ನು ಕಲಿತು ಒಪ್ಪಿಸುತ್ತಿದ್ದರು, ಈಗ ಹಾಡುವುದನ್ನು ಕಲಿಯುತ್ತಿದ್ದಾರೆ ಎಂದು ಖಚಿತವಾಯಿತು. ಸಂಗೀತದ ಜೊತೆ ಜೊತೆಗೇ ಭಾರತೀಯ ಸಂಸ್ಕೃತಿಯನ್ನೂ ಕಲಿಯುತ್ತಿದ್ದಾರೆ. ಈ ಅನುಭವ ಮುಂದೆ ಅವರ ಜೀವನದ ದಾರಿದೀಪವಾಗುವುದರಲ್ಲಿ ಸಂದೇಹವಿಲ್ಲ.

ಇದೇ ಕಳೆದ 2005ರ ನವೆಂಬರ್ನಲ್ಲಿ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ, ಹೊರದೇಶದಲ್ಲಿದ್ದು ಕರ್ನಾಟಕ ಸಂಗೀತಕ್ಕೆ ಮಾಡುತ್ತಿರುವ ಅಮೋಘ ಸೇವೆಯನ್ನು ಗುರುತಿಸಿ ಶ್ರೀಮತಿ ಉಷಾ ಚಾರ್‌ ಅವರಿಗೆ ಪ್ರಶಸ್ತಿಫಲಕವನ್ನು ಕೊಟ್ಟು ಗೌರವಿಸಿದ್ದು ಅತ್ಯಂತ ಸಾಧುವಾದ ನಿರ್ಣಯ.

ಉಷಾ ಅವರು ಆ ಸಂದರ್ಭದಲ್ಲಿ ಬೆಂಗಳೂರಿಗೆ ಹೋಗಿ ತಾವೇ ಖುದ್ದಾಗಿ ಆ ಪ್ರಶಸ್ತಿಯನ್ನು ಪಡೆಯುವುದು ಸಾಧ್ಯವಾಗದಿದ್ದರೂ, ಅವರ ಪರವಾಗಿ ಅವರ ಗೆಳತಿಯೂ ಅವರ ಬಗ್ಗೆ ಅತ್ಯಂತ ಆದರ ಉಳ್ಳವರೂ ಆದ ಶ್ರೀಮತಿ ಗಂಗಾ ಸುಧಾಕರ್‌ ಅವರು ಉಷಾ ಪರವಾಗಿ ಆ ಪ್ರಶಸ್ತಿಯನ್ನು ಸ್ವೀಕರಿಸಿದರು. ಅದರೊಂದಿಗೆ ಸಂದಾಯವಾಗುವ ಶಾಲಿನ ಸಮೇತ ಗಂಗಾ ಸಕಾಲಕ್ಕೆ ಹಾಜರಾದದ್ದು ಸಭೆಗೆ ಒಳ್ಳೆ ರಂಗೇರಿಸಿತು. ಎಲ್ಲ ಶಿಷ್ಯರ ಮತ್ತು ಅನೇಕ ಹಿತೈಷಿಗಳ ಉಪಸ್ಥಿತಿಯಲ್ಲಿ ತಮ್ಮ ಮಾತೃಶ್ರೀ ಅವರ ಅಮೃತಹಸ್ತದಿಂದ ಪ್ರಶಸ್ತಿಪತ್ರವನ್ನು ಉಷಾ ಅವರಿಗೆ ಕೊಡಿಸಿ, ಅವರಿಗೆ ಶಾಲು ಹೊದ್ದಿಸಿ ಗೌರವಿಸುವ ಕಾರ್ಯಕ್ರಮ ಪೂರ್ವಭಾವಿಯಾಗಿ ಯೋಜಿಸಿದ್ದಲ್ಲವಾದರೂ ಸಮಯಸ್ಫೂರ್ತಿಯಿಂದ ಕೂಡಿಬಂದದ್ದು ಅತ್ಯಂತ ಸಮರ್ಪಕವಾಗಿತ್ತು.

ಹೀಗೇ ನಾದೋಪಾಸನ, ನಾದಸುಧಾ, ನಾದಸುರಭಿ, ನಾದತರಂಗಿಣಿ ಮತ್ತು ಮುಂದೆ ಜನಿಸಬಹುದಾದ ಎಲ್ಲ ಸಂಗೀತ ಸಂಸ್ಥೆಗಳೂ ನಾದಬ್ರಹ್ಮನ ಸೇವೆಯನ್ನು ಮುಂದುವರೆಸಲಿ ಎಂದು ಹಾರೈಸುತ್ತಾ ವಿರಮಿಸುವೆ ಮುಂದಿನ ಕಂತಿನ ವರೆಗೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Usha Char is a professional musician who is currently a resident of Maryland. Jaala Taranga Columnist M.S.Nataraj introduces Usha Char and Nadopaasana Music School.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more