ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಡಿ ವಿ ಜಿ’ ಅವರ ‘ಅಂತಃಪುರ ಗೀತೆಗಳು’

By Super
|
Google Oneindia Kannada News
Dr.M.S.Nataraj ಡಾ. ಮೈ.ಶ್ರೀ. ನಟರಾಜ
ಪೊಟೊಮೆಕ್‌, ಮೇರೀಲ್ಯಾಂಡ್‌

[email protected]

ಹಿನ್ನೆಲೆ : ರಾಜಧಾನಿಯ ಕನ್ನಡ ಸಂಘವಾದ ಕಾವೇರಿಯ ಆಶ್ರಯದಲ್ಲಿ 2004ರ ದೀವಳಿಗೆ ಮತ್ತು ಕನ್ನಡ ರಾಜ್ಯೋತ್ಸವಗಳನ್ನು ಆಚರಿಸಿದಾಗ ಏರ್ಪಡಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಡಿವಿಜಿಯವರ ಅಂತಃಪುರ ಗೀತೆಗಳ ಬಹುಮಾಧ್ಯಮ ನಿರೂಪಣೆಯೂ ಒಂದು.

ಆ ಸಂದರ್ಭದಲ್ಲಿ ಸಂಗೀತ ವಿದುಷಿ ಉಷಾ ಚಾರ್‌ ಮತ್ತು ಎ.ಆರ್‌. ಚಾರ್‌ ದಂಪತಿಗಳು ಸೆರೆ ಹಿಡಿದ ಬೇಲೂರು ದೇವಾಲಯದ ಶಿಲಾಬಾಲಿಕೆಯರ ಸುಂದರ ಛಾಯಾಗ್ರಹಣಗಳ ಪ್ರದರ್ಶನದ ಜೊತೆ ಜೊತೆಗೇ ಉಷಾ ಅವರ ಸಂಗೀತ ನಿರ್ದೇಶನದಲ್ಲಿ ಅಂತಃಪುರ ಗೀತೆಗಳ ಗೋಷ್ಠಿಗಾನ ಸಹ ಏರ್ಪಾಡಾಗಿತ್ತು. ಆ ಕಾರ್ಯಕ್ರಮಕ್ಕೆ ಪೂರ್ವ ಪೀಠಿಕೆ, ಗೀತಗಳ ವ್ಯಾಖ್ಯಾನ ಮತ್ತು ಉಪಸಂಹಾರ ಮುಂತಾದ ಪ್ರಾತ್ಯಕ್ಷಿಕೆ ನಡೆಸಿಕೊಡುವ ಸದವಕಾಶ ನನ್ನದಾಗಿತ್ತು. ಅಂದು ಉಪಯೋಗಿಸಿದ ಪಠ್ಯಭಾಗವನ್ನು ಇಲ್ಲಿ ಯಥಾವತ್ತಾಗಿ ಕೊಟ್ಟಿದ್ದೇನೆ.

ಡಾ. ಡಿ. ವಿ. ಗುಂಡಪ್ಪನವರು

D.V. Gundappa'ಡಿ ವಿ ಜಿ,’ ಈ ಮೂರು ಅಕ್ಷರಗಳಿಂದ ಪ್ರಸಿದ್ಧರಾದ ಡಿ. ವಿ. ಗುಂಡಪ್ಪ ಅವರ ಹೆಸರನ್ನು ಕೇಳದ ಕನ್ನಡ ಸಾಹಿತ್ಯಪ್ರೇಮಿ ಬಹುಶಃ ಯಾರೂ ಇರಲಿಕ್ಕಿಲ್ಲ. ಪ್ರತಿಭೆ-ಪಾಂಡಿತ್ಯ, ಬದುಕು-ಬರಹ, ವೇದಾಂತ-ರಾಜಕಾರಣ, ಹೀಗೆ ಪರಸ್ಪರ ವಿರುದ್ಧವೆನಿಸುವ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಪ್ರತಿಕ್ಷೇತ್ರದಲ್ಲೂ ವಿಕ್ರಮವನ್ನು ಸಾಧಿಸಿದ ಡಿವಿಜಿ ಕನ್ನಡದಲ್ಲಿ, ಕರ್ನಾಟಕದಲ್ಲಿ ಏಕಮೇವಾದ್ವಿತೀಯ. ಈ ಮಾತುಗಳು 'ಎಚ್ಚೆಸ್ಕೆ’ ಅವರ ಒಂದು ಲೇಖನದಿಂದ ಉದ್ಧರಿಸಿದವು.

ಗುಂಡಪ್ಪನವರು ಜನಿಸಿದ್ದು 1,888ರಲ್ಲಿ, ಕೋಲಾರ ಜಿಲ್ಲೆಯ ಮುಳಬಾಗಿಲಿನಲ್ಲಿ. ಕೋಲಾರ ಜಿಲ್ಲೆಯ ಪ್ರಭಾವದಿಂದ ತೆಲುಗು, ಪೂರ್ವಜರ ನುಡಿಯಾದ್ದರಿಂದ ತಮಿಳು, ಕನ್ನಡನಾಡಿನಲ್ಲಿ ಹುಟ್ಟಿ ಬೆಳೆದದ್ದರಿಂದ ಕನ್ನಡ, ಸ್ವಪ್ರಯತ್ನದಿಂದ ಸಂಸ್ಕೃತ, ಹಾಗೂ ತಾವು ಆರಿಸಿಕೊಂಡ ವೃತ್ತಿ, ಪತ್ರಿಕೋದ್ಯಮದ ಸಲುವಾಗಿ ಇಂಗ್ಲೀಷು, ಇವಿಷ್ಟೂ ಭಾಷೆಗಳಲ್ಲಿ ಅಸಾಮಾನ್ಯ ಪಾಂಡಿತ್ಯ ಗಳಿಸಿದ ನಿಸ್ಸೀಮರಿವರು.

ಸಾಹಿತಿಯಾಗಿ ಕವನ, ವಿಮರ್ಶೆ, ಜೀವನಚರಿತ್ರೆ, ಮುಂತಾಗಿ ಅನೇಕ ಪ್ರಕಾರಗಳಲ್ಲಿ ಇವರು ಕೃಷಿ ಮಾಡಿದ್ದಾರೆ. ವಸಂತಕುಸುಮಾಂಜಲಿ, ನಿವೇದನ, ಅಂತಃಪುರಗೀತೆ ಮುಂತಾದವು ಇವರ ಕವಿತಾಶಾಕ್ತಿಗೆ ನಿದರ್ಶನಗಳಾಗಿವೆ. ವಿಶ್ವವಿಖ್ಯಾತ ಓಮರ್‌ ಖಯ್ಯಾಮನ 'ರುಬಾಯಿಯಾತ್‌’ನ ಕನ್ನಡ ಭಾಷಾಂತರ 'ಉಮರನ ಒಸಗೆ’ ಅದು ಭಾಷಾಂತರವೇ ಅಲ್ಲವೇನೋ ಅನ್ನುವಷ್ಟು ಉತ್ಕೃಷ್ಟವಾಗಿದೆ. ಮೂಲಕೃತಿಯ ಸೊಗಸನ್ನು ಕನ್ನಡದ ಸೊಗಡಿಗೆ ಇಳಿಸಿ ಉಮರನ ಕಾವ್ಯಕ್ಕೆ ಮರುಜನ್ಮ ಕೊಟ್ಟು, ಉಮರನನ್ನು ಅಮರನನ್ನಾಗಿಸಿದ್ದಾರೆ. 'ಮಂಕುತಿಮ್ಮನ ಕಗ್ಗ’ ಡಿವಿಜಿ ಯವರ ಮೇರುಕೃತಿ. ತಮ್ಮ ಜೀವನತತ್ತ್ವಗಳನ್ನು ಮಾರ್ಮಿಕವಾಗಿ ನಿರೂಪಿಸುವ ನಾಲ್ಕು ಸಾಲಿನ ಪದ್ಯಗಳ ಸಂಗ್ರಹ, ಇದು. ಇದರಲ್ಲಿನ ಪ್ರತಿಯಾಂದು ಪದ್ಯವೂ ಒಂದು ಆಣಿ ಮುತ್ತು.

1932ರಲ್ಲಿ ಮಡಿಕೇರಿಯಲ್ಲಿ ನಡೆದ 18ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಡಿವಿಜಿ ಅಧ್ಯಕ್ಷರಾಗಿದ್ದರು. 1961ರಲ್ಲಿ, ಡಿವಿಜಿಯವರ ಬಹುಮುಖ ಸೇವೆಯನ್ನು ಗುರುತಿಸಿ ಮೈಸೂರು ವಿಶ್ವವಿದ್ಯಾನಿಲಯ ಅವರಿಗೆ ಗೌರವ ಡಾಕ್ಟರೇಟ್‌ ಪದವಿ ಕೊಟ್ಟು ಸತ್ಕರಿಸಿತು. 'ಶ್ರೀಮದ್‌ಭಗವದ್‌ಗೀತಾ ತಾತ್ಪರ್ಯ’ ಅಥವಾ 'ಜೀವನಧರ್ಮಯೋಗ’ ಎಂಬ ಇವರ ಮಹತ್ವಪೂರ್ಣ ಉಪನ್ಯಾಸಗ್ರಂಥಕ್ಕೆ 1967ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯಿಂದ ಪ್ರಶಸ್ತಿ ದೊರಕಿತು. 1975ರಲ್ಲಿ ಕಣ್ಮರೆಯಾದ ಡಿವಿಜಿ ಇಂದಿಗೂ ಕನ್ನಡನಾಡಿನ ಜೀವನಾಡಿಯಾಗಿದ್ದಾರೆ. ಅವರೇ ಸ್ಥಾಪಿಸಿದ ಗೋಖಲೆ ಸಾರ್ವಜನಿಕ ಸಂಸ್ಥೆಯ ಉಸಿರಾಗಿ ನಿರಂತರ ಸ್ಫೂರ್ತಿಯ ನೆಲೆಯಾಗಿದ್ದಾರೆ.

ಕನ್ನಡದಲ್ಲಿ ಅಮರವಾಗಿರುವ ಅಂತಃಪುರಗೀತೆಗಳು

ಡಿವಿಜಿಯವರ 59 ಗೀತೆಗಳ ಸಂಕಲನ, 'ಅಂತಃಪುರಗೀತೆ’ ಹೊಯ್ಸಳ ಶಿಲ್ಪದ ಶಿಲಾಬಾಲಿಕೆಯರನ್ನು ಕುರಿತು ಬರೆದ ಮೊಟ್ಟ ಮೊದಲ ಕನ್ನಡ ಕವನ ಸಂಗ್ರಹ. ಇಲ್ಲಿನ ವಸ್ತು ಅನೇಕಬಾರಿ ಅನೇಕ ಕಲಾವಿದರ ಸಂಗೀತ, ನೃತ್ಯ, ಚಿತ್ರ ಮತ್ತು ಚಲನಚಿತ್ರ ಮಾಧ್ಯಮಗಳಿಗೆ ವಸ್ತುವಾಗಿದೆ. ಗುಂಡಪ್ಪನವರು ಸಂಗೀತ ರಸಿಕರಷ್ಟೇ ಅಲ್ಲ, ಸಂಗೀತ ಶಾಸ್ತ್ರವನ್ನು ಚೆನ್ನಾಗಿ ಬಲ್ಲವರಾಗಿದ್ದರು. ತಮ್ಮ ಗೀತೆಗಳಿಗೆ ತಕ್ಕ ರಾಗ ಮತ್ತು ತಾಳಗಳನ್ನು ಸಹ ತಮ್ಮ ಪುಸ್ತಕದಲ್ಲಿ ಅವರೇ ಸಲಹೆ ಮಾಡಿದ್ದಾರೆ.

ಹೊಯ್ಸಳ ಸಾಮ್ರಾಜ್ಯ ಶಿಲ್ಪಿಗಳ ತವರು

Halebeedu Templeದೇವರೊಬ್ಬನೇ, ನಾಮ ಹಲವು ಎಂಬ ತತ್ವವನ್ನ ಹಾಗೂ ಎಲ್ಲ ಧರ್ಮಗಳ ಸಾರವೂ ಒಂದೇ ಎಂಬ ಸಮನ್ವಯ ಭಾವವನ್ನ ಪರಿಪಾಲಿಸಿದ ಉದಾಹರಣೆಗಳು ಭಾರತದ ಚರಿತ್ರೆಯಲ್ಲಿ ಹಲವಾರಿವೆ. ಕ್ರಿಸ್ತಶಕ ಹನ್ನೊಂದರಿಂದ ಹದಿನಾಲ್ಕನೇ ಶತಮಾನದವರೆಗೆ ಕರ್ನಾಟಕವನ್ನಾಳಿದ ಒಂದು ರಾಜವಂಶ ಸರ್ವಧರ್ಮಸಮನ್ವಯದ ಜೊತೆಗೆ ಅತ್ಯುತ್ತಮ ಮಟ್ಟದ ಕಲಾಪ್ರೇಮವನ್ನು ಪ್ರತಿಪಾದಿಸಿ ಜಗದ್ವಿಖ್ಯಾತವಾಯಿತು.

ದೋರಸಮುದ್ರ ಎಂಬ ನಗರದ ಬಳಿ ಗುರುವೊಬ್ಬ ಶಿಷ್ಯರಿಗೆ ಪಾಠ ಹೇಳುತ್ತಿದ್ದಾಗ ಭಯಂಕರ ಹುಲಿಯಾಂದು ಆರ್ಭಟಿಸುತ್ತ ಅವರ ಮೇಲೆರಗಲು ಬಂತಂತೆ. ಆಗ ಗುರುವು, ರಾಜವಂಶದ ಕ್ಷತ್ರಿಯ ಶಿಷ್ಯನಾದ ಸಳನನ್ನು ಕುರಿತು, 'ಹೊಯ್‌ ಸಳ’ ಸಳನೇ ಹೊಡೆ, ಎಂದು ಆಜ್ಞೆ ಇತ್ತಾಗ, ಒಂದು ಕ್ಷಣವೂ ಹಿಂದೆ-ಮುಂದೆ ನೋಡದೇ, ಕಠಾರಿಯಿಂದ ಹುಲಿಯನ್ನು ಹೊಯ್ದು ಎಲ್ಲರನ್ನೂ ರಕ್ಷಿಸಿದನಂತೆ. ಬಲ್ಲಾಳವಂಶದ ಆ ವೀರ ಕ್ಷತ್ರಿಯಕುಮಾರನೇ ಪ್ರಸಿದ್ಧ ಹೊಯ್ಸಳ ವಂಶದ ಮೂಲ ಪುರುಷನೆಂದು ಐತಿಹ್ಯವಿದೆ. ಅಂತೆಯೇ ಹುಲಿಯನ್ನು ಕಠಾರಿಯಿಂದ ಇರಿಯುತ್ತಿರುವ ಚಿತ್ರವೇ ಹೊಯ್ಸಳ ರಾಜವಂಶದ ಲಾಂಛನವಾಯಿತು. ಅಂದಿನ ಹೊಯ್ಸಳ ರಾಜಧಾನಿ, ದೋರಸಮುದ್ರ ಅಥವಾ ದ್ವಾರಸಮುದ್ರ, ಇಂದಿನ ಕರ್ನಾಟಕದ ಹಾಸನ ಜಿಲ್ಲೆಯ ಹಳೇಬೀಡು.

ಬಲ್ಲಾಳರಾಯ, ವೀರಬಲ್ಲಾಳ, ಬಿಟ್ಟಿದೇವ, ಬಿಟ್ಟಿಗ ಮುಂತಾದ ಹೆಸರುಗಳಿಂದ ಕರೆಯಲ್ಪಟ್ಟ ವಿಷ್ಣುವರ್ಧನ, ಹೊಯ್ಸಳವಂಶದ ಅತ್ಯಂತ ಬಲಶಾಲಿ, ಪರಾಕ್ರಮಿ ಮತ್ತು ಪ್ರಸಿದ್ಧನಾದ ಅರಸ. ಈತನಿಗೆ ಐದು ಅರಸಿಯರು, ಅವರಲ್ಲಿ, ಶಾಂತಲೆ ಮತ್ತು ಲಕ್ಷ್ಮಿ ಅವನ ಎರಡು ಕಣ್ಣುಗಳಂತೆ ಮೆರೆದು ಪಟ್ಟದರಸಿಯರಾದರು. ಶಾಂತಲೆ, ನೃತ್ಯವಿಶಾರದೆ. ಲಕ್ಷ್ಮಿ ವೀಣಾವಾದನಪಟು. ಜಿನಧರ್ಮ, ಶೈವಧರ್ಮ ಮತ್ತು ವೈಷ್ಣವಧರ್ಮಗಳನ್ನು ಸಮಾನವಾಗಿ ಕಂಡು ತನ್ನ ಜೀವನದಲ್ಲಿ ಮೂರೂ ಧರ್ಮಗಳನ್ನು ಕೆಲಕಾಲ ಅನುಸರಿಸಿ ಬಾಳಿದ ಸರ್ವಧರ್ಮಸಮನ್ವಯಕಾರಿ, ವಿಷ್ಣುವರ್ಧನ. ಕ್ಷಾತ್ರಧರ್ಮಕ್ಕನುಗುಣವಾಗಿ ಅನೇಕ ರಾಜ್ಯಗಳನ್ನು ಆಕ್ರಮಿಸಿ ಮಹಾಪರಾಕ್ರಮಿ ಎನಿಸಿಕೊಂಡರೂ, ಅವನು ಶಾಂತಿಪ್ರಿಯ., ಧರ್ಮಭೀರು, ಭಗವದ್ಭಕ್ತ ಮತ್ತು ಕಲೋಪಾಸಕ.

ಸಂಗೀತ-ನೃತ್ಯ ಮತ್ತು ವಿವಿಧ ಕಲೆಗಳಲ್ಲಿ ತೀವ್ರ ಆಸಕ್ತಿ ಉಳ್ಳ ರಾಣಿಯರ ಕನಸುಗಳನ್ನು ನನಸಾಗಿಸಲು, ದೇಶವಿದೇಶಗಳಿಂದ ಬಂದು ನೆಲೆಸಿದ ಅನೇಕ ನಿಪುಣ ಶಿಲ್ಪಿಗಳ ತವರು ಅಂದಿನ ಹೊಯ್ಸಳ ಸಾಮ್ರಾಜ್ಯ. ರಾಜಾಶ್ರಯ ಮತ್ತು ರಸಿಕ ಪ್ರಜೆಗಳ ಪ್ರೋತ್ಸಾಹದಿಂದ ಕರ್ನಾಟಕದ ಮೂಲೆ-ಮೂಲೆಗಳಲ್ಲಿ ಕಲ್ಲರಳಿ ಹೂವಾಯಿತು, ಕಲ್ಲು ಹಾಡಿ ನರ್ತಿಸಿತು, ಕಲ್ಲಿನಲ್ಲಿ ಕಾವ್ಯರಚನೆಯಾಯಿತು, ಭಾರತೀಯ ಶಿಲ್ಪಶಾಸ್ತ್ರದ ಸುವರ್ಣ ಅಧ್ಯಾಯವೊಂದು ಬರೆಯಲ್ಪಟ್ಟಿತು.

ಅಮರ ಶಿಲ್ಪಿ ಜಕ್ಕಣ, ಅವನ ಮಗ ಡಂಕಣ, ಹಾಗೂ ಇತರ ಶಿಲ್ಪಚತುರರ ನೈಪುಣ್ಯದಿಂದ, ಜಗದ್‌ಪ್ರಖ್ಯಾತವಾದ ಬೇಲೂರ ಚನ್ನಕೇಶವ ಅಥವಾ ಕಪ್ಪೆಚನ್ನಿಗರಾಯನ ದೇಗುಲ ಮತ್ತು ದೋರಸಮುದ್ರದ ಯುಗಳ ಶೈವಾಲಯ ಶಾಂತಲೇಶ್ವರ ಮತ್ತು ಹೊಯ್ಸಳೇಶ್ವರ ದೇವಾಲಯಗಳು ಮೇಲೆದ್ದವು. ಅದಾದಮೇಲೆ ಕಟ್ಟಿದ ಮತ್ತೊಂದು ಭವ್ಯ ಕಲಾಮಂದಿರ, ಸೋಮನಾಥಪುರದ ಕೇಶವ ದೇವಾಲಯ. ಈ ದೇವಾಲಯದ ಸೌಂದರ್ಯ ಎಷ್ಟಿತ್ತೆಂದರೆ, ದೇವತೆಗಳೂ ಅಸೂಯೆಪಟ್ಟು, ಅದನ್ನು ದೇವಲೋಕಕ್ಕೆ ಹಾರಿಸಿಕೊಂಡು ಹೋಗಬಯಸಿದರೆಂಬ ದಂತಕಥೆಯೂ ಹುಟ್ಟಿಕೊಂಡಿತು!

ನೃತ್ಯಪಟು ಶಾಂತಲೆ, ಪಟ್ಟದರಸಿಯಾದರೂ ಇತರ ಆಸ್ಥಾನ ನರ್ತಕಿಯರೊಂದಿಗೆ ಶಿಲ್ಪಿಗಳಿಗೆ ರೂಪದರ್ಶಿಯಾಗಿ ನೃತ್ಯಭಂಗಿಗಳನ್ನು ಮಾಡಿ ತೋರಿಸುತ್ತಿದ್ದಳೆಂದರೆ, ಅಂದಿನ ಕಲಾಪ್ರೇಮ ಮತ್ತು ಕಲೋಪಾಸಕತೆಯಬಗ್ಗೆ ಹೆಚ್ಚು ಹೇಳುವ ಅಗತ್ಯವಿಲ್ಲ. ಇಂದು ನಾವು ಪ್ರಸ್ತುತ ಪಡಿಸುತ್ತಿರುವ ಸಂಗೀತರೂಪಕದ ವಸ್ತು ಹೊಯ್ಸಳ ಸಾಮ್ರಾಜ್ಯದ ಶಿಲ್ಪಗಳಿಂದ ಸ್ಫೂರ್ತಿಗೊಂಡು ಜನಿಸಿದ ಕಾವ್ಯವೊಂದರ ಗೇಯಸ್ವರೂಪ.

ಬೇಲೂರಿನ ಭವ್ಯ ದೇಗುಲ

Beluru Channakeshava Templeಬೇಲೂರು ಚನ್ನಕೇಶವ ದೇವಾಲಯ 32 ಭುಜಗಳುಳ್ಳ ನಕ್ಷತ್ರಾಕಾರದ ತಳಪಾಯದ ಮೇಲೆ ನಿಂತಿರುವ ಒಂದು ಭವ್ಯ ಕಟ್ಟಡ. ಗರ್ಭಗೃಹದಲ್ಲಿ ಚನ್ನಕೇಶವ, ಅವನ ಸುತ್ತ ಜಾಲಂಧ್ರಗಳು. ಒಳಗೆಲ್ಲ ಕಂಬಗಳು, ಕಂಬಗಳಮೇಲೆಲ್ಲ ಕುಸುರಿ ಕೆಲಸ. ಹೊರಗಿನ ಪ್ರಾಕಾರದ ಮೇಲೆ ಭಗವದ್‌ಸೃಷ್ಟಿಯಲ್ಲಿರುವ ಅನೇಕ ಸಸ್ಯವರ್ಗ, ಪಕ್ಷಿವರ್ಗ, ಪ್ರಾಣಿವರ್ಗ, ಮನುಷ್ಯವರ್ಗ. ಸಣ್ಣ ನೊಣದಿಂದ ಹಿಡಿದು, ಹಲ್ಲಿ, ಹಾವು, ಚೇಳು, ಆಡು, ಜಿಂಕೆ, ಸಿಂಹ, ಹುಲಿ, ಆನೆ, ಕುದುರೆ, ಕಪಿ, ಮಾನವ, ರಾಜ, ನೌಕರ, ಸೈನಿಕ, ಗಂಡು, ಹೆಣ್ಣು, ಏನಿಲ್ಲ, ಏನುಂಟು? ಎಲ್ಲವೂ ಭಗವಂತನ ಸುತ್ತ ಪ್ರದಕ್ಷಿಣೆ ಹಾಕುತ್ತಿರುವಂತೆ ಭಾಸವಾಗುವುದು. ಇವೆಲ್ಲ ಕಣ್ಣಿಗೆಟಕುವ ಎತ್ತರದಲ್ಲಿದ್ದರೆ, ಮೇಲೆ, ಮೂಲೆಮೂಲೆಗಳಲ್ಲಿ, ಶಿಲ್ಪಿಗಳ ಕೈಚಳಕದಿಂದ ಜೀವತಳೆದ ಸ್ತ್ರೀಸೌಂದರ್ಯದ ವೈವಿಧ್ಯ. ಪದ್ಮಿನಿ, ಕುಮುದಿನಿ, ಅಶ್ವಿನಿ, ಹಸ್ಥಿನಿಗಳ ಸೌಂದರ್ಯದ ಸೊಬಗು. ವಿವಿಧಭಂಗಿಗಳಲ್ಲಿ ನಿಂದಿರುವ ಈ ಶಿಲಾಬಾಲಿಕೆಯರೊಂದಿಗೆ ಕವಿ ನಡೆಸುವ ಏಕಮುಖಸಂವಾದ ಸಲ್ಲಾಪಗಳೇ ಅಂತಃಪುರಗೀತೆಗಳ ಸಾರ.

ಚೆನ್ನಕೇಶವನೆನ್ನಿ, ಚೆಲುವನಾರಾಯಣನೆನ್ನಿ, ಅವನು ಸೃಷ್ಟಿಕರ್ತ, ವಿಶ್ವರೂಪೀ ಭಗವಂತ. ಅವನ ಸುತ್ತಲೂ ಅವನೇ ಸೃಷ್ಟಿಸಿದ ಮಾಯಾಜಾಲ. ಸೌಂದರ್ಯವೂ ಅವನ ಸೃಷ್ಟಿಯ ಒಂದು ರಹಸ್ಯವೇ ಎಂಬುದನ್ನು ನಾವು ಮರೆಯುವ ಹಾಗಿಲ್ಲ. ಭಗವಂತ ಶಿವಸ್ವರೂಪ, ಆ ಶಿವಸ್ವರೂಪದ ದರ್ಶನವೇ ಸತ್ಯದ ದರ್ಶನ. ಆ ಸತ್ಯದರ್ಶನದ ಅನುಭವವೇ ಸೌಂದರ್ಯದ ಅನುಭವ ಮತ್ತು ಅನುಭಾವ. ಇವೆಲ್ಲದರ ಸಮಗ್ರಭಾವವೇ 'ಸತ್ಯಮ್‌-ಶಿವಮ್‌-ಸುಂದರಮ್‌’ ಎಂಬ ಮಹಾವಿಷ್ಣುಸ್ವರೂಪ.

ಈ ಮಹಾವಾನುಭವದ ತಾತ್ಪರ್ಯವನ್ನು ಅರಿತೇ ಒಬ್ಬ ಉತ್ತಮ ಕಲಾಕಾರ ಕಲಾಸೃಷ್ಟಿ ಮಾಡುತ್ತಾನೆ. ಸೌಂದರ್ಯವೇ ಅವನ ಸಂದೇಶವಾಗುತ್ತದೆ. ಹೀಗಾಗಿ, ಭೌತಿಕ ಸೌಂದರ್ಯ ಒಂದು ಸ್ತರದಲ್ಲಿ ಕಂಡುಬಂದರೆ, ಮತ್ತೊಂದು ಸ್ತರದಲ್ಲಿ ಆಧ್ಯಾತ್ಮಿಕ ಸೌಂದರ್ಯ ದರ್ಶನವಾಗುತ್ತದೆ. ಹೊರಗಣ್ಣಿನ ದೃಷ್ಟಿಗೆ ಗೋಚರವಾಗುವುದು ಒಂದಾದರೆ, ಮತ್ತೊಂದು ಒಳಗಣ್ಣಿನ ಊಹೆಗೆ ಮಾತ್ರ ನಿಲುಕುವಂಥದ್ದು. ಡಿವಿಜಿ ಯವರು ಈ ತತ್ತ್ವವನ್ನು ವ್ಯಾಖ್ಯಾನಿಸುವಾಗ ಬೇಲೂರು ಮದನಿಕೆಯರ ಪ್ರತಿಯಾಂದು ಹಾವ-ಭಾವ-ಭಂಗಿಗಳನ್ನೂ ಆ ಕೇಶವೇಶನಿಗೇ ಅರ್ಪಿಸಿ ಧನ್ಯರಾಗುತ್ತಾರೆ. ಈ ಮದನಿಕೆಯರಾದರೋ, ಒಮ್ಮೆ ನಗು, ಒಮ್ಮೆ ಅಳು, ಒಮ್ಮೆ ಭಯ, ಒಮ್ಮೆ ಭ್ರಾಂತಿ, ಒಮ್ಮೆ ಕೋಪ, ಒಮ್ಮೆ ಶಾಂತಿ ಯನ್ನು ಪ್ರದರ್ಶಿಸುತ್ತಾರೆ. ಒಮ್ಮೊಮ್ಮೆ ಆತ್ಮರತಿಯಲ್ಲಿ ತೊಡಗಿ ತಮ್ಮ ಲಾವಣ್ಯಕ್ಕೆ ತಾವೇ ಮಾರುವೋಗುತ್ತಾರೆ, ತಮ್ಮ ಬೆಡಗಿನಿಂದ ತಾವೇ ಬೆರಗಾಗುತ್ತಾರೆ.

ಇಂದಿನ ಶ್ರೇಷ್ಠ ನರ್ತಕ/ನರ್ತಕಿಯರೂ ನೋಡಿ ಕಲಿಯಬಹುದಾದಂಥ ನೃತ್ಯ ಭಂಗಿಗಳು ಬೇಲೂರು ಹಳೇಬೀಡುಗಳ ಭಿತ್ತಿಗಳ ಮೇಲೆ ಕೆತ್ತಲ್ಪಟ್ಟಿವೆ ಎಂದರೆ ಕನ್ನಡನಾಡಿನಲ್ಲಿ ಭರತನಾಟ್ಯ ಸುಮಾರು ಸಾವಿರವರ್ಷಗಳ ಮುಂಚೆಯೇ ಯಾವ ಮಟ್ಟವನ್ನು ಮುಟ್ಟಿತ್ತು ಎಂಬುದನ್ನು ನೀವೇ ಊಹಿಸಿಕೊಳ್ಳಿ. ವೀಣಾ-ವೇಣು-ಢಕ್ಕೆ-ಢಮರು ಮುಂತಾದ ವಾದ್ಯತರಂಗಗಳ ತಾಳವಿಲಾಸವನ್ನು ಪ್ರದರ್ಶಿಸುತ್ತ, ಹೊರನೋಟಕ್ಕೆ ರಸಿಕರ ಕಣ್ಣಿಗೆ ಹಬ್ಬವನ್ನುಂಟುಮಾಡುತ್ತಿದ್ದರೂ, ಈ ಶಿಲಾಬಾಲಿಕೆಯರ ಅಂತಿಮ ಗುರಿ ಕೇಶವೇಶನ ಹೃದಯಾಂತರಂಗವೇ ಆಗಿರಲಿ ಎಂಬ ಆಶಯವನ್ನು ಕವಿ ಮತ್ತೆ ಮತ್ತೆ ವ್ಯಕ್ತಪಡಿಸುತ್ತಾರೆ, ಈ ಗೀತೆಗಳಲ್ಲಿ. ಇಡೀ ವಿಶ್ವವೇ ಒಂದು ಅಂತಃಪುರ, ಅಲ್ಲಿ ಭಕ್ತರೆಲ್ಲ ಪ್ರೇಮಿಗಳು, ಅವರ ಪ್ರೇಮಕ್ಕೆ ಒಬ್ಬನೇ ಪಾತ್ರ, ಅವನೇ ಚೆನ್ನಕೇಶವ. ಇದು ಡಿವಿಜಿ ಯವರು ಕಂಡ ಹೊಯ್ಸಳ ಶಿಲ್ಪದ ಸೂಚ್ಯವೇದಾಂತ.

English summary
D.V.G. was one of the most prominent Kannada writers and philosophers of the twentieth century. D.V. Gundappas Anthapura geetegalu, book analysis by Dr. M.S. Nataraj in Jaala Taranga.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X