ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅವರ ಧೈರ್ಯಕ್ಕೆ ಯಮನೂ ಹೆದರಿದ್ದಾನೆ!

By * ಎಆರ್ ಮಣಿಕಾಂತ್
|
Google Oneindia Kannada News

Ashok Kashyap, Rekharani
ಇದು ಸಿನಿಮಾದ ಕಥೆಯಲ್ಲ. ಸಿನಿಮಾದವರ ಕಥೆ. ಅಳುವವರ ಕಥೆಯಲ್ಲ. ಅಳಿಸುವವರ ಕಥೆಯೂ ಅಲ್ಲ. ಬದಲಿಗೆ, ನೋವು ನುಂಗಿ ನಗುತ್ತಿರುವವರ ಕಥೆ. ಸಾವೆಂಬೋ ಸಾವಿಗೆ, ಸವಾಲು ಹಾಕಿ ಬದುಕುತ್ತಿರುವ ಧೀರನೊಬ್ಬನ ಕಥೆ. ಆ ಧೀರನಿಗೆ ಎಲ್ಲವೂ' ಆಗಿ ರಕ್ಷಣೆಗೆ ನಿಂತಿರುವ ಛಲಗಾತಿಯೊಬ್ಬಳ ಹೋರಾಟದ ಕಥೆ.

ಅಂದಹಾಗೆ, ನಮ್ಮ ಕಥಾನಾಯಕನ ಹೆಸರು ಆಶೋಕ್ ಕಶ್ಯಪ್. ಈತ, ಕನ್ನಡ ಚಿತ್ರರಂಗ ಕಂಡ ಸೃಜನಶೀಲ ಕ್ಯಾಮೆರಾಮನ್ ಕಂ ನಿರ್ದೇಶಕ. ಅಪಾರ ಶಿಸ್ತು, ಪ್ರಾಮಾಣಿಕತೆ, ಅರೆಪಾವಿನಷ್ಟು ಅಹಂ, ರವಷ್ಟು ನಾಚಿಕೆ, ಅತೀ ಎಂಬಂಥ ಸ್ವಾಭಿಮಾನ, ದೂರ್ವಾಸ ಮುನಿಯ ಸಿಟ್ಟು, ರುಚಿಗೆ ತಕ್ಕಷ್ಟು ಸಂಯಮ ಹಾಗೂ ಹತ್ತು ಊರಿಗೆ ಹಂಚಬಹುದಾದಷ್ಟು ಅಮಾಯಕತೆ... ಇದಿಷ್ಟೂ ಗುಣಗಳನ್ನು ಹೊಂದಿರುವ ಆಸಾಮಿ ಈ ಕಶ್ಯಪ್. ಇದ್ದಷ್ಟು ದಿನವೂ ಬಿಂದಾಸ್ ಆಗಿರಬೇಕು. ಕರ್ಣನ ಥರಾನೇ ಬದುಕಬೇಕು ಎಂಬುದು ಈ ಸಾಹೇಬರ ಸಿದ್ಧಾಂತ.

ಈಗ, ಕಥಾನಾಯಕಿಯ ವಿಷಯಕ್ಕೆ ಬರೋಣ. ಇವರ ಹೆಸರು ರೇಖಾರಾಣಿ. ಒಂದು ಕಾಲದಲ್ಲಿ, ಅಪರೂಪದ ಕತೆಗಳ ಮೂಲಕ ಎಲ್ಲರನ್ನು ಕಾಡಿದವರು ರೇಖಾರಾಣಿ. ಪ್ರೀತಿಯಲ್ಲಿ ಕ್ಷಮೆಯಿರಲಿ' ಎಂಬ ಕಥೆಯೊಂದಿದೆ. ಅದನ್ನು ಓದುತ್ತಾ ಕೂತರೆ ಯಾಕೋ ಖುಷಿಯಾಗುತ್ತದೆ. ಯಾಕೋ ನಗು ಬರುತ್ತದೆ. ಮತ್ಯಾಕೋ ಇರಿಸು ಮುರಿಸಾಗುತ್ತದೆ. ಅರ್ಧ ಮುಗಿಸುವ ವೇಳೆಗೆ ಕುತೂಹಲ ಕೈ ಹಿಡಿದಿರುತ್ತದೆ. ಮುಕ್ತಾಯಕ್ಕೆ ಇನ್ನೂ ಮೂರು ಪ್ಯಾರಾ ಬಾಕಿಯಿದೆ ಅನ್ನುವಾಗಲೇ ಮನಸ್ಸು ಭಾರವಾಗುತ್ತದೆ. ಕಣ್ಣಂಚು ಒದ್ದೆಯಾಗಿರುತ್ತದೆ, ಮತ್ತು ಇಂಥ ಅಪರೂಪದ, ಆಪ್ತ ಕಥೆಗಳನ್ನು ರೇಖಾರಾಣಿ ಮಾತ್ರ ಬರೆಯಬಲ್ಲರು ಅನ್ನಿಸಿ ಬಿಡುತ್ತದೆ. ವಿಪರ್ಯಾಸವೇನು ಗೊತ್ತೆ? ಕನ್ನಡದ ಅತ್ಯುತ್ತಮ ಕಥೆಗಳಲ್ಲಿ ಒಂದು ಎಂದು ಧಾರಾಳವಾಗಿ ಹೇಳಬಹುದಾದ ಪ್ರೀತಿಯಲ್ಲಿ ಕ್ಷಮೆಯಿರಲಿ' ಕಥೆಗೆ, ಅದೇ ಹೆಸರಿನಲ್ಲಿ ಹೊರಬಂದ ಕಥಾ ಸಂಕಲನಕ್ಕೆ ಒಂದು ಅಕಾಡೆಮಿ ಪ್ರಶಸ್ತಿಯೂ ಬರಲಿಲ್ಲ. ಇದ್ಯಾಕೆ ಹೀಗೆ ಎಂದು ಕೇಳಿದ್ದಕ್ಕೆ ಗಲಗಲಗಲ ನಗುತ್ತಾ ರೇಖಾರಾಣಿ ಹೀಗೆಂದಿದ್ದರು: ಆ ಕಥೇನ ನನ್ನ ಖುಷಿಗೆ ಅಂತ ಬರೆದೆ. ಬರೆದ ನಂತರ ಖುಷಿ, ನೆಮ್ಮದಿ, ಜನಪ್ರಿಯತೆ, ಮೆಚ್ಚುಗೆ ಎಲ್ಲಾ ದಂಡಿಯಾಗಿ ಸಿಕ್ತು. ಹಾಗಾಗಿ ಅದನ್ನು ಯಾವುದೇ ಪ್ರಶಸ್ತಿಗೆ ಪರಿಗಣಿಸಿ ಅಂತ ಯಾರನ್ನೂ ಕೇಳಲಿಲ್ಲ. ಎಲ್ಲಿಗೂ ಕಳಿಸಲೂ ಇಲ್ಲ...'

ಈ ರೇಖಮ್ಮನ ಪುರಾಣ ಸ್ವಲ್ಪ ಉದ್ದವಾಯ್ತು, ಕ್ಷಮಿಸಿ. ನಮ್ಮ ಕಥಾನಾಯಕ ಅಶೋಕ್ ಕಶ್ಯಪ್‌ಗೆ ಗೆಳತಿ, ಹೆಂಡತಿ, ಸಖಿ, ಸಹೋದ್ಯೋಗಿ... ಹೀಗೆ, ಆಲ್ ಇನ್ ಆಲ್ ಆಗಿರುವಾಕೆ ಈ ರೇಖಾ. ಅವರನ್ನು ಇನ್ನು ಮುಂದೆ ಶಾರ್ಟ್ ಅಂಡ್ ಸ್ವೀಟ್ ಆಗಿ ರೇಖಮ್ಮ ಅಂತ ಕರೆಯೋಣ. ಒಂದು ವಿಷಯದಲ್ಲಂತೂ ಈ ರೇಖಮ್ಮ- ಅಶೋಕ್ ಕಶ್ಯಪ್ ದಂಪತಿಯದು ಮೇಡ್ ಫಾರ್ ಈಚ್ ಅದರ್ ಜೋಡಿ. ಏಕೆಂದರೆ ಭವಿಷ್ಯಕ್ಕೆಂದು ಹಣ ಮಾಡುವ, ಕೂಡಿ ಇಡುವ ಬುದ್ದಿ ಇಬ್ಬರಿಗೂ ಇರಲಿಲ್ಲ. ಆರು ತಿಂಗಳು ಕತ್ತೆ ಥರಾ ದುಡಿಯೋದು. ನಂತರ ಎರಡು ತಿಂಗಳು ಪಿಕ್‌ನಿಕ್, ಟೂರ್ ಅಂತ ಹೋಗಿ ಅದುವರೆಗೂ ಕೂಡಿಟ್ಟ ಹಣವನ್ನು ಖರ್ಚು ಮಾಡಿ ಬರೋದು, ಕಾಸು ಮುಗೀತಿದ್ದ ಹಾಗೇ ಮತ್ತೆ ಸಿನಿಮಾ, ಸೀರಿಯಲ್ಲು, ಅಂತ ಕೆಲ್ಸ ಶುರುಮಾಡೋದು. ಒಂದಿಷ್ಟು ದುಡ್ಡು ಜೊತೆಯಾಯ್ತು, ಅಂದಾಕ್ಷಣ ಹಕ್ಕಿಗಳ ಥರಾ, ಪ್ರಣಯದ ಪಕ್ಷಿಗಳ ಥರಾ ಪುರ್ರ್... ಅಂತ ಹಾರೋದು...ಹೀಗಿತ್ತು ನಮ್ಮ ಕಥಾನಾಯಕ-ನಾಯಕಿಯ ಬದುಕು.

-2-

ಇದು 2004-05ರ ಮಾತು. ಆಗ ರೇಖಾ-ಕಶ್ಯಪ್ ಸಾರಥ್ಯದಲ್ಲಿ ನಂದಗೋಕುಲ' ಧಾರಾವಾಹಿಯ ಚಿತ್ರೀಕರಣ ನಡೆಯುತ್ತಿತ್ತು. ಸಮ್‌ಥಿಂಗ್ ಸ್ಪೆಷಲ್ ಎಂಬಂಥ ಧಾರಾವಾಹಿಯನ್ನೇ ಕೊಡಬೇಕು ಎಂಬ ಹಿರಿಯಾಸೆ ಈ ದಂಪತಿಗಳದು. ಹಾಗಾಗಿ ಹಗಲು-ರಾತ್ರಿ ಎನ್ನದೇ ಕೆಲಸದಲ್ಲಿ ತೊಡಗಿಕೊಂಡರು. ಈ ಮಧ್ಯೆ ಅಶೋಕ್ ಸ್ವಲ್ಪ ವೀಕ್ ಆಗಿದಾರೆ ಎಂಬ ಅನುಮಾನ ಹಲವರಿಗೆ ಬಂತು. ಆದರೆ, ಕೆಲಸದಲ್ಲಿ ಮೈಮರೆತಿರುವ ಅಶೋಕ್‌ಗೆ ಇದನ್ನೆಲ್ಲ ಹೇಳಿದರೆ- ಬೈಗುಳ ಗ್ಯಾರಂಟಿ ಎಂದು ಗೊತ್ತಿದ್ದರಿಂದ ಎಲ್ಲರೂ ಗಪ್‌ಚುಪ್' ಆಗಿಬಿಟ್ಟರು. ಪರಿಣಾಮ. ಸೀರಿಯಲ್ ಕೆಲಸ ಎಕ್ಸ್‌ಪ್ರೆಸ್' ವೇಗದಲ್ಲಿ ನಡೀತಾ ಹೋಯ್ತು.

ಮುಂದೆ ಚಾನೆಲ್ ಒಂದರಲ್ಲಿ ನಂದಗೋಕುಲ'ದ ಪ್ರಸಾರ ಶುರುವಾಯ್ತು. ಜನ ಸೂಪರ್ ಸಾರ್ ಸೂಪರ್ ಎಂದರು. ಹಾಂ ಹೂಂ ಅನ್ನೋದರೊಳಗೆ 200ನೇ ಕಂತು ಮುಗೀತು. ಆ ಖುಷಿಗೆ ರೇಖಾ-ಕಶ್ಯಪ್ ಅಂಡ್ ಟೀಂ ಒಂದು ಪುಟ್ಟ ಪಾರ್ಟಿ ಇಟ್ಟುಕೊಂಡಿತು. ಪಾರ್ಟಿಗೆ ಟಿ.ಎನ್.ಸೀತಾರಾಂ ಅವರನ್ನು ಕರೆತಂದಿತು. ಪಾರ್ಟಿಗೆಂದು ಬಂದ ಸೀತಾರಾಂ, ಒಮ್ಮೆ ಈ ಅಶೋಕ್‌ಕಶ್ಯಪ್ ಅವರನ್ನೇ ಅಪಾದಮಸ್ತಕ ದಿಟ್ಟಿಸಿದರು. ಅವರಿಗೆ ಯಾಕೋ ಅನುಮಾನ ಬಂತು. ನಂತರ ಮುಕ್ತ ಮುಕ್ತದ ಸಿಎಸ್‌ಪಿ ಗೆಟಪ್ಪಿನಲ್ಲಿ ನಿಂತು- ರೀ ಅಶೋಕ್, ಬನ್ರೀ ಇಲ್ಲಿ' ಎಂದು ಆರ್ಡರ್ ಮಾಡಿದರು. ಸೀತಾರಾಂ ಬಗ್ಗೆ ಭಯಮಿಶ್ರಿತ ಗೌರವ ಹೊಂದಿರುವ ಕಶ್ಯಪ್, ಸಂಕೋಚದಿಂದಲೇ ಹತ್ತಿರ ಹೋದಾಗ ಸೀತಾರಾಂ ಗುಡುಗಿದರು: ಅರಸನ ಅಂಕೆಯಿಲ್ಲ, ದೆವ್ವದ ಕಾಟ ಇಲ್ಲ' ಅನ್ನೋಥರಾ ಇಪ್ಪತ್ನಾಲ್ಕು ಗಂಟೇನೂ ಶೂಟಿಂಗ್ ಶೂಟಿಂಗ್ ಅಂತ ಓಡಾಡ್ತಾ ಇದೀರಲ್ರೀ. ಎಷ್ಟು ಇಳಿದು ಹೋಗಿದೀರ ಅಂತ ನಿಮ್ಗೆ ಗೊತ್ತಾ? ನಿಮ್ಗೆ ಡಯಾಬಿಟೀಸ್ ಇದೆ ಅನ್ಸುತ್ತೆ. ಮೊದ್ಲು ಆಸ್ಪತ್ರೆಗೆ ಹೋಗಿ, ಚೆಕ್ ಮಾಡಿಸಿ ಅಲ್ಲಿಂದ ಬಂದು ನನಗೆ ರಿಪೋರ್ಟ್ ತೋರಿಸಲೇಬೇಕು... ಗೊತ್ತಾಯ್ತಾ?' ಇದು ಆರ್ಡರ್ ಎಂಬರ್ಥದಲ್ಲಿ ಸೀತಾರಾಂ ಹೀಗೆ ಗುಡುಗಿದಾಗ ಸರಿ ಸಾರ್' ಓಕೆ ಸಾರ್' ಎನ್ನದೇ ಅಶೋಕ್‌ಗೆ ಬೇರೆ ದಾರಿಯೇ ಇರಲಿಲ್ಲ. ಐದಾರು ದಿನದ ನಂತರ ಧೈರ್ಯ ಮಾಡಿ ಆಸ್ಪತ್ರೆಗೆ ಅದೂ ಏಕಾಂಗಿಯಾಗಿ ಒಂದೇಬಿಟ್ಟರು ಅಶೋಕ್. ನಂತರ ರಕ್ತ ಪರೀಕ್ಷೆ ಮಾಡಿಸಿದ್ದಾಯ್ತು. ಬಿಪಿ ಚೆಕಪ್ ಕೂಡ ಆಯ್ತು. ಸಂಜೆಯ ವೇಳೆಗೆ ಒಂದಿಷ್ಟು ರಿಪೋರ್ಟ್ ಗಳೊಂದಿಗೆ ಕಾರ್ ಹತ್ತಿದ ಕಶ್ಯಪ್ ಬಾಳ ಗೆಳತಿ ರೇಖಾಗೆ ಫೋನ್ ಮಾಡಿ ಹೇಳಿದರು.

ಆಸ್ಪತ್ರೆಗೆ ಹೋಗಿದ್ದೆ ರೇಖಾ, ಎಲ್ಲಾ ಚೆಕಪ್ ಆಯ್ತು. ಗುಡ್ ನ್ಯೂಸ್ ಏನು ಗೊತ್ತಾ? ನಂಗೆ ಬಿಪಿನೂ ಇಲ್ಲ, ಶುಗರ್ರೂ ಇಲ್ಲ. ಹಾಗಂತ ಡಾಕ್ಟ್ರೆ ಹೇಳಿದ್ರು. ನೀವೆಲ್ಲಾ ಸುಮ್ನೆ ಏನೇನೋ ಕಲ್ಪಿಸಿಕೊಳ್ತೀರ. ನಾನು ಹಗಲೂ ರಾತ್ರಿ ಕೆಲಸ ಮಾಡ್ತಿದ್ದೆ ನೋಡು, ಅದಕ್ಕೇ ಸ್ವಲ್ಪ ವೀಕ್ ಆಗಿದ್ದೆ ಅನ್ಸುತ್ತೆ, ಅಷ್ಟೆ. ಮೊನ್ನೆ ಆ ಸೀತಾರಾಂ ಸಾಹೇಬ್ರು- ತಾವು ಸೀನಿಯರ್ ಅಂದ್ಕೊಂಡು ಹೇಗೆಲ್ಲಾ ಅವಾಜ್ ಹಾಕಿದ್ರು ನೋಡು; ಈಗ ನೋಡಿದ್ರೆ ಯಾವ ಬೀಪಿ, ಶುಗರ್ರೂ ಇಲ್ಲ ಅಂತ ಡಾಕ್ಟ್ರೇ ಹೇಳಿದಾರೆ...'

ಅಶೋಕ್ ಮಾತು ಮುಂದುವರಿಸುವ ಮೊದಲೇ ರೇಖಮ್ಮ ಹೇಳಿದರಂತೆ: ನೋಡಿ ಅಶೋಕ್, ನಿಮ್ಮ ಮೇಲಿನ ಪ್ರೀತಿಯಿಂದಷ್ಟೇ ಸೀತಾರಾಂ ಅವರು ಅವಾಜ್‌ಹಾಕಿದ್ದು. ಈಗ ಅವರಿಗೂ ಫೋನ್ ಮಾಡಿ ವಿಷಯ ಹೇಳಿಬಿಡಿ. ಏನೂ ತೊಂದ್ರೆ ಇಲ್ಲ ಅಂದ್ರೆ ಅವರೂ ಖುಷಿಯಾಗ್ತಾರೆ. ಆಮೇಲೆ, ಡಾಕ್ಟರ್ ಬೇರೇನೂ ಹೇಳಲಿಲ್ವ? ಮಾತ್ರೆ, ಟಾನಿಕ್ ಅಂತ ಏನಾದ್ರೂ ಬರೆದು ಕೊಟ್ಟಿದಾರಾ?

ಉಹುಂ, ಅಂಥದೇನೂ ಇಲ್ಲ, ರೇಖಾ, ಮಾತ್ರೆ ಬರೆದುಕೊಡಲಿಲ್ಲ. ಬದಲಿಗೆ, ಸಣ್ಣಗಿನ ದನಿಯಲ್ಲಿ ನಿಮ್ಗೆ ಲ್ಯುಕೇಮಿಯಾ ಇದೆ ಕಣ್ರೀ. ಯಾವುದಕ್ಕೂ ಒಮ್ಮೆ ಇನ್ನೊಬ್ಬ ಡಾಕ್ಟರ್ ಹತ್ರ ಟೆಸ್ಟ್ ಮಾಡಿಸಿ ಅಂದ್ರು. ಅದೇನೋ ಲ್ಯುಕೋಮಿಯಾ ಇದೆಯಂತೆ ಅಷ್ಟೆ. ಅಂದ್ಹಾಗೆ ರೇಖಾ, ಲ್ಯುಕೇಮಿಯಾ ಅಂದ್ರೆ ಏನು?' ಪುಟ್ಟ ಮಗುವಿನಂತೆ ಅಮಾಯಕವಾಗಿ ಕೇಳಿದ್ದರು ಅಶೋಕ್.

ಈ ಮಾತು ಕೇಳುತ್ತಿದ್ದಂತೆಯೇ ಎದೆಯೊಡೆದಂತಾಗಿ ಹಾಂ' ಎಂದು ಚೀರುತ್ತಾ ಪ್ರಜ್ಞೆ ತಪ್ಪಿ ಬಿದ್ದು ಬಿಟ್ಟರು ರೇಖಾ. ಒಂದಷ್ಟು ಹೊತ್ತಿನ ನಂತರ ಅಲ್ಲಿಗೆ ಬಂದ ಕಶ್ಯಪ್ ಮತ್ತೆ ಅದೇ ಪ್ರಶ್ನೆಯನ್ನೇ ಕೇಳಿದರು. ಏ ರೇಖಮ್ಮ, ಅದೇನದು ಲ್ಯುಕೇಮಿಯಾ ಅಂದ್ರೆ?'

ಈ ವೇಳೆಗೆ ತಮ್ಮನ್ನು ತಾವೇ ಕಂಟ್ರೋಲ್ ಮಾಡಿಕೊಂಡಿದ್ದ ರೇಖಾ ರಾಣಿ, ಬೇರೊಂದು ಕಡೆಗೆ ನೋಡುತ್ತಾ ಹೇಳಿದರಂತೆ: ಲ್ಯುಕೇಮಿಯಾ ಅಂದ್ರೆ... ಬ್ಲಡ್ ಕ್ಯಾನ್ಸರ್! ಆದ್ರೆ ಅಶೋಕ್, ಒಂದು ಮಾತು: ನಾನು ನಿಮ್ಮನ್ನು ಉಳಿಸ್ಕೋತೀನಿ... ಪ್ರಾಮಿಸ್...

-3-

ಸಾವೆಂಬುದು ಕಣ್ಮುಂದೆಯೇ ಇದೆ. ಯಮರಾಯ ಇಲ್ಲೆಲ್ಲೋ ಸುಳಿದಾಡುತ್ತಿದ್ದಾನೆ ಎಂಬುದು ಅಶೋಕ್-ರೇಖಾ ಇಬ್ಬರಿಗೂ ಅವತ್ತೇ ಅರ್ಥವಾಗಿ ಹೋಯಿತು. ಬದುಕಿದಷ್ಟೂ ದಿನ ಖುಷಿಯಾಗೇ ಇರೋಣ ಅಂದುಕೊಂಡು ಚಿಕಿತ್ಸೆಗೆಂದು ಒಂದೊಂದೇ ಆಸ್ಪತ್ರೆ ಸುತ್ತಿದರು. ಕೆಲವು ವೈದ್ಯರಂತೂ ಬ್ಲಡ್ ಕ್ಯಾನ್ಸರ್ ಅಂದ್ರೆ ಸುಮ್ನೆ ಅಲ್ಲ ಕಣ್ರೀ. ಈ ಕಾಯಿಲೆಗೆ ಟ್ರೀಟ್ ಮೆಂಟ್‌ಗೆ ಕಡಿಮೆ ಅಂದ್ರೂ 50 ಲಕ್ಷ ಬೇಕಾಗುತ್ತೆ. ಬೇಗ ಬೇಗ ದುಡ್ಡು ಜೋಡಿಸಿಕೊಳ್ಳಿ ಅಂದರಂತೆ. ಇನ್ನೊಂದು ಆಸ್ಪತ್ರೆಗೆ ಹೋದರೆ- ಒಂದೇ ಕಂತಿಗೆ 35 ಲಕ್ಷ ಕಟ್ಟಿ ಬಿಡಿ. ಆಗ ಟ್ರೀಟ್‌ಮೆಂಟ್ ಕೊಡ್ತೇವೆ ಅಂದರಂತೆ. ಈ ಮಾತು ಕೇಳಿದ ಅಶೋಕ್ ಡೆಡ್ ಬಾಡೀನ ಮನೆಗೆ ತಗೊಂಡು ಹೋಗೋಕೆ ಅದ್ಯಾಕೆ 35 ಲಕ್ಷ ಕೊಡ್ತೀಯ ರೇಖಾ? ಈ ಆಸ್ಪತ್ರೆಗಳ ಸಹವಾಸವೇ ಬೇಡ. ನನ್ನನ್ನು ತೀರ್ಥಹಳ್ಳಿಗೆ ಕಳಿಸಿಬಿಡು. ಅಲ್ಲಿ ಹಸಿರು ಪ್ರಕೃತಿಯ ಮಧ್ಯೆ ಹಾಯಾಗಿದ್ದು ಅದೊಂದು ದಿನ ನೆಮ್ಮದಿಯಿಂದ ಸಾಯ್ತೀನಿ...' ಅಂದರಂತೆ.

ಸರಿ. ನೀವು ಹೇಳಿದಂತೆಯೇ ಆಗಲಿ' ಎಂದ ರೇಖಾ ರಾಣಿ, ಅಶೋಕ್‌ರನ್ನು ತೀರ್ಥಹಳ್ಳಿಗೆ ಕಳಿಸಲೆಂದು ಸಿದ್ಧರಾಗಿದ್ದಾಗಲೇ ಒಂದು ಕೆಟ್ಟ ಸುದ್ದಿ ಬಂತು. ನಂದಗೋಕುಲ' ಸೀರಿಯಲ್‌ಗೆ ಚಾನೆಲ್‌ನಿಂದ ಗೇಟ್‌ಪಾಸ್ ನೀಡಲಾಗಿತ್ತು!

ಅದುವರೆಗೂ ರೇಖಾ-ಅಶೋಕ್ ದಂಪತಿಗೆ ಆದಾಯದ ಮೂಲವಾಗಿದ್ದುದೇ ಆ ಸೀರಿಯಲ್. ಅದೇ ನಿಂತು ಹೋದಾಗ ಮುಂದೇನು ಎಂಬ ಪ್ರಶ್ನೆ ಇಬ್ಬರ ಮುಂದೆಯೂ ನಿಂತಿತ್ತು. ಆಗಲೇ ಈ ರೇಖಮ್ಮನ ಬಲಗೈಯನ್ನು ಎರಡೂ ಕೈಗಳಲ್ಲಿ ಹಿಡಿದು ಅಶೋಕ್ ತುಂಬ ಸಂಕೋಚದ ದನಿಯಲ್ಲಿ ಹೇಳಿದರಂತೆ: ನೋಡು ರೇಖಾ, ಇಲ್ಲಿಯವರೆಗೂ ಈ ಅಶೋಕ್ ಕಶ್ಯಪ್ ಯಾರ ಮುಂದೆಯೂ ಕೈ ಚಾಚಿದವನಲ್ಲ. ತಲೆತಗ್ಗಿಸಿದವನಲ್ಲ. ಮುಂದೆ ನನ್ನನ್ನು ಉಳಿಸಿಕೊಳ್ಳಲು ನೀನು ಯಾರಲ್ಲೂ ಸಾಲ, ಸಹಾಯ ಕೇಳಬಾರದು. ಇದೊಂದು ಮಾತು ನಡೆಸಿಕೊಡ್ತೀಯಾ ?'

ಅದ್ಯಾವ ಭಂಡ ಧೈರ್ಯವೋ ಏನೋ, ಈ ರೇಖಮ್ಮ ಅದೇ ತುಂಟದನಿಯಲ್ಲಿ ಎಸ್ ಮೈ ಲಾರ್ಡ್. ನನ್ನ ಯುದ್ಧವನ್ನು ನಾನೇ ಮಾಡ್ತೇನೆ. ನೀವು ಅರಾಮಾಗಿರಿ' ಎಂದರಂತೆ. ಆದರೆ, ಒಂದೆರಡು ದಿನದಲ್ಲೇ ವಾಸ್ತವದ ಅರಿವಾಯಿತು. ಮುಂದೆ ಹೋರಾಡುವುದು ಹೇಗೆ? ಸೀರಿಯಲ್ ನಿಂತು ಹೋಗಿರುವಾಗ ಲಕ್ಷಾಂತರ ರೂಪಾಯಿ ಜೋಡಿಸುವುದಾದರೂ ಹೇಗೆ? ಯಮರಾಯನನ್ನು ಎದುರಿಸುವುದು ಹೇಗೆ ಅಂದುಕೊಂಡಿದ್ದಾಗಲೇ ಅದೊಂದು ದಿನ ಪ್ರತಿಭಾ ನಂದಕುಮಾರ್ ಕಳಿಸಿದ ಎಸ್‌ಎಂಎಸ್ ಬಂತು. ಅದು ಹೀಗಿತ್ತು. You either win or lose. A game is challenging when tough problems are part of the game. Good luck. ಈ ಮೆಸೇಜ್ ನೊಡುತ್ತಲೇ ಅಂಥ ಸಂಕಟದಲ್ಲೂ ರೇಖಾರಾಣಿಯ ತುಟಿಯಂಚಿನಲ್ಲಿ ನಗೆಯರಳಿತು. ಆಕೆ ತನ್ನದೇ ಭಾಷೆಯಲ್ಲಿ ಹೇಳಿಕೊಂಡರು: ಇವನಜ್ಜಿ, ಈ ಕ್ಯಾನ್ಸರ್‌ಗೆ ಗೋಲಿ ಹೊಡಿ... ರೇಖಮ್ಮ-ಅಶೋಕ್ ದಂಪತಿ ಕ್ಯಾನ್ಸರ್ ಗೆದ್ದದ್ದು ಹೇಗೆ ಅಂದಿರಾ? ಆ ವಿವರ - ಮುಂದಿನ ವಾರ!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X