ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾವು, ಕರೆಯದೇ ಬರುವ ಅತಿಥಿ

By * ಎ.ಆರ್. ಮಣಿಕಾಂತ್
|
Google Oneindia Kannada News

Death, the only guest comes without notice!
ಅದೊಂದು ಶನಿ, ಅದಕ್ಕೊಂದು ಶಿಸ್ತಿಲ್ಲ. ನಿಯತ್ತಿಲ್ಲ. ಕರುಣೆಯಿಲ್ಲ. ದಯೆ-ದಾಕ್ಷಿಣ್ಯವಿಲ್ಲ. ಬಡವ-ಬಲ್ಲಿದರೆಂಬ ಬೇಧವಿಲ್ಲ. ಖದೀಮರನ್ನು ಕಂಡರೆ ಹೆದರಿಕೆಯಿಲ್ಲ. ಮಕ್ಕಳನ್ನು ಕಂಡರೆ ವಿಶೇಷ ಪ್ರೀತಿಯೂ ಇಲ್ಲ. ರೋಗಿಗಳ ಮೇಲೆ ಅದಕ್ಕೆ ಅನುಕಂಪವಿಲ್ಲ. ನಿರ್ಗತಿಕರ ಬಗ್ಗೆ ವಿಶೇಷ ಒಲವೂ ಇಲ್ಲ. ಶ್ರೀಮಂತರೊಂದಿಗೆ ಅದು ಚೌಕಾಸಿಗೆ ನಿಲ್ಲುವುದಿಲ್ಲ. ಪಾಪ, ಬಡವ ಎಂದು ಬಿಟ್ಟು ಹೋಗುವುದೂ ಇಲ್ಲ. ಮನುಷ್ಯರ ಕಥೆ ಹಾಗಿರಲಿ, ಮೂಕ ಪ್ರಾಣಿಗಳ ವಿಷಯದಲ್ಲಾದರೂ ಈ ಶನಿ ಮುಂಡೇದು ರಿಯಾಯಿತಿ ತೋರುವುದಿಲ್ಲ. ಬದಲಿಗೆ, ಯಾವುದೋ ಕಳ್ಳ ಹೊತ್ತಿನಲ್ಲಿ ಬಂದು ತನಗೆ ಬೇಕಾದವರನ್ನು ಕರೆದುಕೊಂಡು ಹೋಗಿಯೇಬಿಡುತ್ತದೆ. ಹೀಗೆ, ಹೇಳದೇ ಕೇಳದೆ ಬಂದು ಹೋಗುವ ಅನಿರೀಕ್ಷಿತ ಅತಿಥಿಯ ಹೆಸರೇ-ಸಾವು!

ಸ್ವಾರಸ್ಯವೆಂದರೆ, ಸಾವಿರ ಸಂಕಟಗಳ ನಡುವೆ ಉಳಿದವರು ಕೂಡ ಸಾಯಲು ಇಚ್ಛಿಸುವುದಿಲ್ಲ. ತುಂಬ ದುಃಖವಾದಾಗ, ಬೇಸರವಾದಾಗ, ಸಾಲ ಜತೆಯಾದಾಗ, ನೌಕರಿ ಹೋದಾಗ, ಮೇಲಿಂದ ಮೇಲೆ ಅವಮಾನಗಳಾದಾಗ, ಮೈ ಎಂಬುದು ರೋಗಗಳ ಗೂಡಾದಾಗ- ಹೀಗೆ ಒದ್ದಾಡುವ ಬದಲು ಛಕ್ಕಂತ ಸತ್ತು ಹೋದ್ರೆ ಸಾಕಪ್ಪಾ ಅನ್ನಿಸ್ತಿದೆ' ಎಂದಿರುತ್ತಾರೆ ನಿಜ. ಆದರೆ, ಅದು ಎದೆಯಾಳದ ಮಾತಾಗಿರುವುದಿಲ್ಲ. ಸಂಕಟದಿಂದ ಸಾವನ್ನು ಧ್ಯಾನಿಸುವ ಮಂದಿ ಕೂಡ, ಈಗಲೋ ಇನ್ನೊಂದು ಕ್ಷಣದಲ್ಲೋ ನನಗೆ ಒಳ್ಳೆಯದಾಗಿಬಿಡುತ್ತೆ ಎಂದು ಕೊಳ್ಳುತ್ತಾರೆ. ಇಲ್ಲಿಯವರೆಗೆ ನಾನು ಯಾರಿಗೂ ಕೆಟ್ಟದು ಮಾಡಿಲ್ಲವಲ್ಲ? ದೇವರಿಗೆ ಪೂಜೆ ಮಾಡುವುದನ್ನು ಮರೆತಿಲ್ಲವಲ್ಲ? ಐದಾರು ಜನಕ್ಕೆ ಸಹಾಯ ಮಾಡಿದ್ದೀನಲ್ಲ? ಈ ಒಳ್ಳೆಯತನವೇ (?!) ನನ್ನನ್ನು ಕಾಪಾಡುತ್ತದೆ ಎಂದು ಬಲವಾಗಿ ನಂಬಿರುತ್ತಾರೆ.

ಹಾಗಾಗಿ, ಯಾರೆಂದರೆ ಯಾರೂ ಸಾವು ಬಯಸುವುದಿಲ್ಲ. ಅದನ್ನು ಆಹ್ವಾನಿಸುವುದಿಲ್ಲ. ಅಕಸ್ಮಾತ್ ಕನಸುಬಿದ್ದರೆ, ಸರಹೊತ್ತಿನಲ್ಲೇ ದಡಬಡಿಸಿ ಎದ್ದು ಡಗ್ಗಡಗ್ಗ ಹೊಡೆದುಕೊಳ್ಳುವ ಹೃದಯಬಡಿತ ಕೇಳಿಸಿಕೊಂಡು, ಕಣ್ಣುಜ್ಜಿಕೊಳ್ಳುತ್ತಾರೆ. ಅಂಥ ಯಾವ ಅನಾಹುತವೂ ನಡೆದಿಲ್ಲ ಎಂದು ಎರಡೆರಡು ಬಾರಿ ಖಚಿತಪಡಿಸಿಕೊಳ್ಳುತ್ತಾರೆ. ನಂತರ ಆ ಅಪರಾತ್ರಿಯಲ್ಲೇ ದೇವರ ಮುಂದೆ ನಿಂತು ಕೆನ್ನೆ ಕೆನ್ನೆ ಬಡಿದುಕೊಂಡು- ಏನೂ ತೊಂದರೆ ಯಾಗದಿರಲಿ ಭಗವಂತಾ' ಎಂದು ಪ್ರಾರ್ಥಿಸುತ್ತಾರೆ. ಅಕಸ್ಮಾತ್ ಬೆಳಗಿನ ಜಾವದಲ್ಲೇ ಯಾರೋ ಸತ್ತು ಹೋದಂತೆ ಕನಸು ಬಿದ್ದರಂತೂ ಮುಗಿದೇ ಹೋಯಿತು. ತಕ್ಷಣವೇ ಪುರೋಹಿತರ ಬಳಿ ಹೋಗಿ, ಮನೆಯ ಪುರಾಣವನ್ನೂ, ಕೆಟ್ಟ ಕನಸು ಬಿದ್ದ ಸಂಗತಿಯನ್ನೂ ಸಾದ್ಯಂತವಾಗಿ ವಿವರಿಸುತ್ತಾರೆ. ಕವಡೆ ಬಿಡುತ್ತಾರೆ. ಅಂಗೈ ತೋರಿಸಿ ಶಾಸ್ತ್ರ ಕೇಳುತ್ತಾರೆ. ಗಡಿಬಿಡಿಯಿಂದಲೇ ದೇವಸ್ಥಾನಕ್ಕೆ ನುಗ್ಗುತ್ತಾರೆ. ಅರ್ಚನೆ ಮಾಡಿಸುತ್ತಾರೆ. ಹರಕೆ ಕಟ್ಟಿಕೊಳ್ಳುತ್ತಾರೆ. ನಂತರ- ಆ ಶನಿ ಮುಂಡೇದು ಬರದೇ ಇದ್ದರೆ ಸಾಕಪ್ಪಾ' ಎಂದುಕೊಂಡೇ ಬಾಕಿ ಉಳಿದ ಕೆಲಸಗಳತ್ತ ತಿರುಗಿ ನೋಡುತ್ತಾರೆ.

ಸ್ವಾರಸ್ಯವೆಂದರೆ, ಯಾರೂ ಕರೆಯದಿದ್ದರೂ ಈ ಸಾವೆಂಬ ಅತಿಥಿ ಬಂದೇ ಬರುತ್ತದೆ. ಸಣ್ಣದೊಂದು ಮುನ್ಸೂಚನೆಯನ್ನೂ ಕೊಡದೆ ಬರುತ್ತದೆ. ಅದು ಕಾಲಾತೀತ, ಪಕ್ಷಾತೀತ ಮತ್ತು ಜಾತ್ಯಾತೀತ. ಸಾವಿನ, ಅರ್ಥಾತ್ ಕಾಲರಾಯನ ಕಾಕದೃಷ್ಟಿ ಬಿದ್ದವನನ್ನು ಭಗವಂತನೂ ಕಾಪಾಡಲಾರ!

ಸಾವಿರ ಮಂದಿಯ ಪ್ರಾರ್ಥನೆ, ನೂರು ದೇವರುಗಳ ಆಶೀರ್ವಾದ, ಕೋಟ್ಯಂತರ ಮಂದಿಯ ಪ್ರೀತಿ, ಒಳ್ಳೆಯದನ್ನು ಮಾತ್ರ ಬಯಸುವ ಮನಸ್ಸು, ಹೊಂದಿರುವ ಮನುಷ್ಯ ಸಾವನ್ನೂ ಜಯಿಸಬಲ್ಲ ಎಂದು ಅವರಿವರು ಹೇಳುವುದುಂಟು. ಅದೇ ನಿಜವಾಗಿದ್ದರೆ, ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್.ಆರ್. ರೆಡ್ಡಿ ಅಂಥ ದುರ್ಮಣರಣಕ್ಕೆ ಈಡಾಗುತ್ತಿರಲಿಲ್ಲ. ಕನ್ನಡಿಗರ ಕಣ್ಮಣಿ ಡಾ. ರಾಜ್‌ಕುಮಾರ್‌ಗೆ ದಿಢೀರ್ ಹೃದಯಾಘಾತವಾಗುತ್ತಿರಲಿಲ್ಲ. ಎಲ್‌ಟಿಟಿಇ ನಾಯಕ ಪ್ರಭಾಕರನ್, ಅಬ್ಬೇಪಾರಿಯಂತೆ ಸಾಯುತ್ತಿರಲಿಲ್ಲ. ಸದ್ದಾಂ ಹುಸೇನ್ ಎಂಬ ಸರ್ವಾಧಿಕಾರಿಯ ಕೊರಳಿಗೆ ಹಗ್ಗ ಬೀಳುತ್ತಿರಲಿಲ್ಲ. ಸ್ವಾಮಿ ವಿವೇಕಾನಂದರಂಥ ಮಹಾಪುರುಷರು ಚಿಕ್ಕ ವಯಸ್ಸಿಗೇ ಕಣ್ಮರೆಯಾಗುತ್ತಿರಲಿಲ್ಲ. ನೇತಾಜಿಯಂಥ ಅಪ್ರತಿಮ ನಾಯಕ ವಿಮಾನದೊಂದಿಗೆ ಮಾಯವಾಗುತ್ತಿರಲಿಲ್ಲ ಮತ್ತು ಶಂಕರ್‌ನಾಗ್ ಎಂಬ ಎಂದೂ ಮಾಸದ ನಗೆಗೆ' ಅಪಘಾತವಾಗುತ್ತಲೂ ಇರಲಿಲ್ಲ.

ಆದರೆ, ಸಾವೆಂಬುದು ನಿರ್ದಯಿ. ಒಳ್ಳೆಯವರು ಒಂದಷ್ಟು ಜಾಸ್ತಿ ದಿನ ಬದುಕಿರಲಿ. ಕೇಡಿಗರು ಮಾತ್ರ ಬೇಗನೇ ಬರಲಿ ಎಂದು ಅದು ಎಂದೂ ಯೋಚಿಸುವುದಿಲ್ಲ. ಒಂದು ಮಗುವಿನ ಜೀವ ಹೊತ್ತೊಯ್ದರೆ, ತಾಯಿ ಅನ್ನಿಸಿಕೊಂಡವಳಿಗೆ ಎಷ್ಟು ಸಂಕಟವಾಗಬಹುದು? ಮೂರು ತಿಂಗಳ ಹಿಂದಷ್ಟೇ ಮದುವೆಯಾದ ಹುಡುಗನ ಉಸಿರು ನಿಲ್ಲಿಸಿದರೆ ಅವನ ಹೆಂಡತಿಯ ಬದುಕು ಏನಾಗಬಹುದು? ಪ್ರಾಯಕ್ಕೆ ಬಂದ ಮಕ್ಕಳು ಕಣ್ಮುಂದೆಯೇ ಸತ್ತುಹೋದಾಗ ತಂದೆಯಾದವನ ಮನಸ್ಸಿಗೆ ಅದೆಷ್ಟು ಘಾಸಿಯಾಗಬಹುದು? ಬದುಕಿಡೀ ಒಂದು ಇರುವೆಯನ್ನೂ ಕೊಲ್ಲದಂಥ ಸಜ್ಜನನೊಬ್ಬ ಲಾರಿಯ ಚಕ್ರಕ್ಕೆ ಸಿಕ್ಕಿಕೊಂಡು ಅಪ್ಪಚ್ಚಿಯಾದಾಗ ಅವನ ಬಂಧುಗಳು ಹೇಗೆ ರೋಧಿಸಬಹುದು? ತನ್ನ ಯಶಸ್ಸು ಕಂಡು ಖುಷಿಯಾದ ತಂದೆಗೆ ಮರುಕ್ಷಣವೇ ಹೃದಯಾಘಾತವಾದ ಮಗನ ಗೋಳು, ನಂತರದ ಬಾಳು ಹೇಗಿರ ಬಹುದು? ಒಂದೇ ಕುಟುಂಬದ ಹತ್ತು ಮಂದಿ ದೇವಸ್ಥಾನದಿಂದ ಹಿಂದಿರುಗುವಾಗ ಅಪಘಾತದಲ್ಲಿ ಸತ್ತರೆ ಬದುಕಿಗೆ ಯಾವ ಅರ್ಥವಿದೆ? ಉಹುಂ, ಇಂಥ ಯಾವ ಪ್ರಶ್ನೆಗಳನ್ನೂ ಸಾವೆಂಬ ಸಾವು ಕೇಳಿಸಿಕೊಳ್ಳುವುದಿಲ್ಲ. ಜನರೋ, ಜನುವಾರುಗಳೋ ತಾವಾಗಿಯೇ ನನ್ನನ್ನು ಕರೆಯಲಿ ಎಂದು ಬಯಸುವುದಿಲ್ಲ. ಕರೆಯದೇ ಹೋದರೆ ಕೆರದಲ್ಲಿ ಹೊಡೆದಾರು ಎಂದು ಹೆದರುವುದೂ ಇಲ್ಲ! ಯಾರೋ ಒಂದಿಬ್ಬರು ಒಳ್ಳೆಯ ಕೆಲಸಕ್ಕೆ ನಿಂತಿದ್ದರೆ ಅದು ಮುಗಿಯಲಿ ಎಂದು ಕಾಯುವುದಿಲ್ಲ. ಇಂಥ ಒಳ್ಳೆಯ ಕೆಲಸಗಳಿಗೆಂದೇ ಇವರು ಬದುಕಲಿ ಎಂದು ಗ್ರೇಸ್ ಕೊಡುವುದೂ ಇಲ್ಲ. ಹೋಗಲಿ; ಕೆಲವೇ ಕೆಲವು ಮಂದಿಗೆ-ವಿಐಪಿಗಳು ಅನ್ನಿಸಿಕೊಂಡವರಿಗಾದರೂ ಇಂಥ ದಿನ, ಇಷ್ಟು ಗಂಟೆಗೆ ಸರಿಯಾಗಿ ಬರ್‍ತೇನೆ. ರೆಡಿಯಾಗಿರಿ' ಎಂದು ಮುನ್ಸೂಚನೆಯನ್ನೂ ಕೊಡುವುದಿಲ್ಲ. ಬದಲಿಗೆ, ತನಗೆ ಇಷ್ಟ ಬಂದ ಹೊತ್ತಿನಲ್ಲಿ ಬರುತ್ತದೆ. ತನಗೆ ಬೇಕೆನ್ನಿಸಿದ ರೂಪದಲ್ಲಿ ಬರುತ್ತದೆ!

ಹೌದಲ್ಲವಾ? ಸಾವೆಂಬುದು ಸೈಕಲ್, ಸ್ಕೂಟರ್, ಕಾರು, ಬಸ್, ರೈಲು, ವಿಮಾನ ಅಪಘಾತದ ರೂಪದಲ್ಲಿ ಬರಬಹುದು. ಜ್ವರದ ನೆಪದಲ್ಲಿ ಬರಬಹುದು. ಹೃದಯಾಘಾತದ ಕಾರಣ ಹೇಳಬಹುದು.ಅದು ಮನಸ್ಸು ಮಾಡಿದರೆ ಕಳ್ಳರ ವೇಷದಲ್ಲೇ ಬರಬಹುದು. ಕುದುರೆಯ ಕಾರಣದಿಂದಲೂ ಬರಬಹುದು. ಅಷ್ಟೇ ಅಲ್ಲ, ಸಾವೆಂಬುದು ವೈದ್ಯರ ರೂಪದಲ್ಲೇ ಬಂದು, ಹಲೋ ಹೇಳಿ ಉಸಿರು ನಿಲ್ಲಿಸಬಹುದು!

* * *
ಎಲ್ಲರನ್ನೂ ಹೆದರಿಸುವ, ದೇವರನ್ನೇ ಅಣಕಿಸುವ, ನಂಬಿಕೆಗಳನ್ನೇ ಬುಡಮೇಲು ಮಾಡುವ ಈ ಸಾವೆಂಬೋ ಸಾವು ಒಂದು ವೇಳೆ ಮೊದಲೇ ಮುನ್ಸೂಚನೆ ನೀಡಿ ಬಂದಿದ್ದರೆ ಬದುಕು ಹೇಗಿರುತ್ತಿತ್ತು? ನಾನು ಇಂಥ ದಿನವೇ ಇದೇ ರೀತಿಯಲ್ಲಿ ಸಾಯುತ್ತೇನೆ ಎಂದು ಗೊತ್ತಿದ್ದಿದ್ದರೆ ಜನ ಹೇಗೆ ರಿಯಾಕ್ಟ್ ಮಾಡುತ್ತಿದ್ದರು? ಈ ಕುತೂಹಲದ ಪ್ರಶ್ನೆಗಳಿಗೆ ಹೀಗೆ ಉತ್ತರಿಸಬಹುದೇನೋ: ಸಾವು ಹೀಗೇ ಬರುತ್ತೆ ಎಂದು ಗೊತ್ತಿದ್ದಿದ್ದರೆ- ವೈ.ಎಸ್. ರಾಜಶೇಖರ ರೆಡ್ಡಿ ಮೊನ್ನೆ ಹೆಲಿಕ್ಯಾಪ್ಟರ್ ಹತ್ತುತ್ತಿರಲಿಲ್ಲ. ಎಲ್‌ಟಿಟಿಇ ನಾಯಕ ಪ್ರಭಾಕರನ್, ಸೇನೆಯೊಂದಿಗೆ ಸೆಣಸುವ ರಿಸ್ಕು ತಗೊಳ್ತಿರಲಿಲ್ಲ. ಮೈಕಲ್ ಜಾಕ್ಸನ್- ಮಾದಕ ದ್ರವ್ಯದ ಹಿಂದೆ ಬೀಳುತ್ತಿರಲಿಲ್ಲ. ಸುಂದರಿ ಡಯಾನ ಕಾರು ಹತ್ತುತ್ತಿರಲಿಲ್ಲ. ವೀರಪ್ಪನ್, ಕಾಡು ಬಿಟ್ಟು ಹೊರಗೇ ಬರುತ್ತಿರಲಿಲ್ಲ. ಇಂದಿರಾಗಾಂಧಿಯ ಬೆನ್ನಿಗೆ ಅಂಗರಕ್ಷಕರಿರುತ್ತಿರಲಿಲ್ಲ. ಅಮಾಯಕಿಯೊಬ್ಬಳ ಹೂಮಾಲೆಗೆ ರಾಜೀವ್‌ಗಾಂಧಿ ಕೊರಳೊಡ್ಡುತ್ತಿರಲಿಲ್ಲ. ಸಂಜಯಗಾಂಧಿ ವಿಮಾನ ಹತ್ತುತ್ತಿರಲಿಲ್ಲ. ಅಷ್ಟೇ ಅಲ್ಲ, ಮಗಳು ಕಾಂಚನಾ ಕೊಳವೆ ಬಾವಿಗೆ ಬೀಳುತ್ತಾಳೆ ಎಂದು ಮೊದಲೇ ಗೊತ್ತಿದ್ದಿದ್ದರೆ ಬಿಜಾಪುರದ ಆ ತಂದೆ, ತಾಯಿ, ಅವಳನ್ನು ರಸ್ತೆಗೆ ಬಿಡುತ್ತಲೂ ಇರಲಿಲ್ಲ. ಸಾವೆಂಬುದು ಇಂಥ ದಿನವೇ ಬರಲಿದೆ ಎಂದು ಗೊತ್ತಿದ್ದರೆ ಬಹುಶಃ ನಮ್ಮ ಅಣ್ಣಾವ್ರು ಇದೇ ಕಡೆ' ಎಂದುಕೊಂಡು ಒಂದು ಅಪರೂಪದ ಸಿನಿಮಾ ಕೊಟ್ಟಿರ್‍ತಾ ಇರ್‍ತಿದ್ರು. ಹಾಗೆಯೇ, ನನ್ನ ನಂತರ ನೆನಪಿಗಿರಲಿ ಎಂಬ ಸದಾಶಯದಿಂದ ಹತ್ತಿಪ್ಪತ್ತು ಚಿತ್ರಕಥೆಗಳನ್ನು ಬರೆದಿಟ್ಟ ನಂತರವೇ ಶಂಕರ್‌ನಾಗ್ ಕಾರು ಹತ್ತಿರುತ್ತಿದ್ದರು. ಆದರೆ ಒಬ್ಬ ಗಾಂಧೀಜಿ ಮಾತ್ರ ಸಾವೆಂಬುದು ನಾಥೂರಾಂ ಗೋಡ್ಸೆಯ ರೂಪದಲ್ಲೇ ಬರುತ್ತದೆ ಎಂದು ತಿಳಿದ ನಂತರವೂ ಏನೆಂದರೆ ಏನೂ ಬದಲಾಗುತ್ತಿರಲಿಲ್ಲ! ಬದಲಿಗೆ ನಾಳೆ ಬರುವುದು ನನಗಿಂದೇ ಬರಲಿ ಎಂದುಕೊಂಡು ತಾವಾಗಿಯೇ ಗೋಡ್ಸೆಯ ಮನೆ ಹುಡುಕಿಕೊಂಡು ಹೋಗಿಬಿಡುತ್ತಿದ್ದರು!

ಇದೆಲ್ಲ, ಈಗ ನಮ್ಮೊಂದಿಗೆ ಇಲ್ಲದವರನ್ನು, ಕಥೆಯಾಗಿ ಹೋದವರನ್ನು ಕುರಿತ ಮಾತಾಯಿತು. ಒಂದು ವೇಳೆ, ನಾವು ಇಂಥ ದಿನವೇ ಸಾಯುತ್ತೇವೆ ಎಂದು ನಮಗೆಲ್ಲ ಮೊದಲೇ ಗೊತ್ತಾಗಿ ಹೋಗಿದ್ದರೆ ಬದುಕು ಹೇಗಿರುತ್ತಿತ್ತು? ಈ ಪ್ರಶ್ನೆಗೆ ಒಂದು ಅಂದಾಜಿನ ಉತ್ತರಗಳನ್ನು ಪಟ್ಟಿ ಮಾಡಿದರೆ, ಮೊದಲಿಗೆ ಖುಷಿಯಾಗುತ್ತದೆ ನಿಜ. ಮರುಕ್ಷಣವೇ ಭಯವಾಗುತ್ತದೆ. ಏಕೆಂದರೆ, ತಾನು ಇಂಥ ದಿನವೇ, ಹೀಗೇ ಸಾಯುತ್ತೇನೆ ಎಂದು ಮನುಷ್ಯನಿಗೆ ಗೊತ್ತಾಗಿ ಹೋಗಿದ್ದರೆ- ಅವನಿಗೆ ಸಾವಿನ ಭಯವೇ ಇರುತ್ತಿರಲಿಲ್ಲ. ದೇವರಿಗಾಗಲಿ, ಜ್ಯೋತಿಷಿಗಳಿಗಾಗಲಿ, ವೈದ್ಯರಿಗಾಗಲಿ ಡಿಮ್ಯಾಂಡೇ ಇರುತ್ತಿರಲಿಲ್ಲ. ಬದುಕಿನಲ್ಲಿ ಥ್ರಿಲ್ ಇರುತ್ತಿರಲಿಲ್ಲ. ಕನಸುಗಳಿಗೆ ಅರ್ಥವಿರುತ್ತಿರಲಿಲ್ಲ. ಎಲ್ಲರೂ ಒಳ್ಳೆಯ ಸಾವನ್ನೇ ಬಯಸುತ್ತಿದ್ದರು. ಸಾವಿಗೆ ಬೇಕಾದ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಕೆಟ್ಟ ಬುದ್ಧಿಯ ಜನ, ಹೇಗಿದ್ರೂ ನಾಳೆ ಸಾಯೋದು ಗ್ಯಾರಂಟಿ, ಹಾಗಾಗಿ ಇನ್ನೊಂದಷ್ಟು ಕ್ರೈಮು ಮಾಡಿಯೇ ಸಾಯೋಣ ಎಂದು ನಿಂತುಬಿಡ್ತಿದ್ರು. ಕಾರ್ ಅಪಘಾತದಲ್ಲಿ ಸಾಯ್ತೀನಿ ಅಂತೇನಾದ್ರೂ ಗೊತ್ತಿದ್ದಿದ್ರೆ ಆತ ಬಸ್ಸಿನಲ್ಲೇ ಪ್ರಯಾಣಿಸುತ್ತಿದ್ದ. ನೀರಿಂದ ಸಾವು ಅನ್ನೋದು ಗೊತ್ತಿದ್ದವ ಮಳೆ ಹನಿಗೆ ಕೂಡ ಮುಖ ಒಡ್ಡುತ್ತಿರಲಿಲ್ಲ. ಎಲ್ಲರೂ ಕಡೆಯ ದಿನಗಳನ್ನು ತಮ್ಮ ಇಷ್ಟದಂತೆ ಬದುಕಲು ಪ್ಲಾನ್ ಮಾಡ್ತಾ ಇರ್‍ತಿದ್ರು. ಆಸೆಬುರುಕರು ಮಾತ್ರ ಬ್ಯಾಂಕುಗಳಿಗೆ, ಎಲ್ಲೈಸಿ ಕಂಪನಿಗಳಿಗೆ, ಗೆಳೆಯರಿಗೆ, ಬಂಧುಗಳಿಗೆ ಸುಳ್ಳು ಸುಳ್ಳೇ ನಂಬಿಸಿ ಅಪಾರ ಮೊತ್ತದ ಸಾಲ ಪಡೆದು, ಭಾರೀ ಮೊತ್ತಕ್ಕೆ ವಿಮೆ ಮಾಡಿಸಿ ಎಲ್ಲರಿಗೂ ತಿರುಪತಿ ನಾಮ ಹಾಕಿ ಹೋಗಿಬಿಡ್ತಿದ್ರು.

ಅಷ್ಟೇ ಅಲ್ಲ, ನಾನು ಇಂಥ ದಿನವೇ ಸಾಯ್ತೀನಿ ಎಂದು ಮೊದಲೇ ಗೊತ್ತಿದ್ದಿದ್ದರೆ- ನಾಳೆ ಬಾ' ಎಂಬ ಬರಹ ಎಲ್ಲ ಮನೆಯ ಬಾಗಿಲ ಮೇಲೂ ಕಡ್ಡಾಯವಾಗಿರುತ್ತಿತ್ತು. ಸಾಯುವ ದಿನ ಇನ್ನೂ ಎರಡು ವರ್ಷ ಬಾಕಿಯಿರುವಾಗಲೇ ಎಂಥವರಿಗೂ ಚಿಂತೆ ಶುರುವಾಗಿಬಿಡ್ತಿತ್ತು. ಸಾಹಿತಿ-ಕಲಾವಿದರುಗಳಂತೂ ತಮಗೆ ಸೂಕ್ತ ಸ್ಥಾನಮಾನ, ಪ್ರಶಸ್ತಿ ಬರಲಿಲ್ಲ ಎಂಬುದನ್ನೇ ಮುಂದಿಟ್ಟುಕೊಂಡು ಲಾಬಿಗೆ ಮುಂದಾಗುತ್ತಿದ್ದರು. ಪರಮಾಪ್ತರ ಮುಂದೆ ನಿಂತು- ನಿಮ್ಮಲ್ಲಿ ಸುದ್ದಿ ಮುಚ್ಚಿಟ್ಟು ಲಾಭವೇನಿದೆ? ನಾನು ಇಂಥ ದಿನವೇ ಸಾಯ್ತೀನಿ. ಅಷ್ಟರೊಳಗೆ ಒಂದು ಪ್ರಶಸ್ತಿ ಕೊಡಿಸ್ರೀ. ನೆಮ್ಮದಿ ಯಾಗಿ ಸಾಯೋಕೆ ಅವಕಾಶ ಮಾಡಿಕೊಡ್ರೀ' ಎಂದು ಅಂಗಲಾಚುತ್ತಿದ್ದರು. ರಾಜಕಾರಣಿಗಳಂತೂ ಸಾಯೋದ್ರೊಳಗೆ ನಾನು ಮಂತ್ರಿಯಾಗಬೇಕೂ... ಎಂದು ರಚ್ಚೆ ಹಿಡಿದು ಕೂತುಬಿಡುತ್ತಿದ್ದರು. ತಮಾಷೆ ಕೇಳಿ: ಆ ಸಂದರ್ಭದಲ್ಲಿ ಕೂಡ ಪರ-ವಿರೋಧವಾಗಿ ಗಲಾಟೆಗಳು, ಚರ್ಚೆಗಳು ನಡೆಯುತ್ತಿದ್ದವು. ಕೆಲವರು, ಸಾಯೋಕಿಂತ ಮೊದಲೇ ಅವರ' ಆಸೆಗಳನ್ನು ಈಡೇರಿಸಿ ಎಂದು ಪಟ್ಟು ಹಿಡಿದಿರ್‍ತಿದ್ರು. ಮತ್ತೆ ಕೆಲವರು- ಪ್ರಶಸ್ತಿಯನ್ನೋ, ಮಂತ್ರಿ ಪದವಿಯನ್ನೋ ಪಡೆದು ಹೆಸರು ಕೆಡಿಸಿಕೊಳ್ಳುವ ಬದಲು, ನೆಮ್ಮದಿಯಾಗಿ ಸಾಯೋಕಾಗಲ್ವ ನಿಮ್ಗೆ ಎಂದು ಸ್ವಾಟಿ ತಿವಿಯುತ್ತಿದ್ದರು. ಈ ಮಧ್ಯೆಯೇ ಕೆಲವರು, ಸಾವನ್ನು ತಡೆಯುವಂಥ ಸಂಶೋಧನೆ ಮಾಡ್ರೀ ಎಂದು ವಿಜ್ಞಾನಿಗಳನ್ನು ಒತ್ತಾಯಿಸುತ್ತಿದ್ದರು. ಮಾಟ-ಮಂತ್ರ ನಂಬುವ ಜನರಂತೂ ಸಾವೆಂಬುದು ತಮ್ಮನ್ನು ಮುಟ್ಟದಂತೆ ತಮ್ಮ ಸುತ್ತಲೂ ಅಷ್ಟದಿಗ್ಬಂಧನ ಮಾಡಿಸಿಕೊಳ್ಳಲು ಮುಂದಾಗುತ್ತಿದ್ದರು. ಮುಖ್ಯವಾಗಿ, ಸಾವಿನ ಬಗ್ಗೆ ಮೊದಲೇ ತಿಳಿದಿದ್ದರೆ ಮನೆಮನೆಯೂ ಹುಚ್ಚಾಸ್ಪತ್ರೆಯಂತಾಗುತ್ತಿತ್ತು. ಪ್ರೀತಿಯೆಂಬುದು ತೋರಿಕೆಯಾಗುತ್ತಿತ್ತು. ನಂಬಿಕೆಯ ಹೆಸರಲ್ಲೇ ವಂಚನೆ ನಡೆಯುತ್ತಿತ್ತು. ಗಂಡನಾದವನು ತೀರಾ ಗುಟ್ಟು ಎಂಬಂತೆ ತನ್ನ ಸಂಕಟ ಹೇಳಿಕೊಂಡಿರುತ್ತಿದ್ದ. ಆದರೆ ಹೆಂಡತಿಯಾದವಳು ಅದನ್ನು ಹತ್ತು ಮಂದಿಗೆ ಹೇಳಿಬಿಟ್ಟಿರುತ್ತಿದ್ದಳು. ಪರಿಣಾಮ, ಯಾರೋ ಒಬ್ಬ ಇಂಥ ದಿನವೇ ಸಾಯ್ತಾನಂತೆ ಎಂಬ ಸುದ್ದಿ ಕೇಳಿ- ಸಾವಿಗೂ ಮೊದಲೇ ಸಂತಾಪ ಕೋರಲು ನೂರಾರು ಜನ ಬಂದಿರುತ್ತಿದ್ದರು. ಅವರನ್ನು ನೋಡಿದಾಕ್ಷಣವೇ- ಮನುಷ್ಯನಿಗೆ ಹುಚ್ಚು ಹಿಡಿದಿರುತ್ತಿತ್ತು!

* * *
ಇದನ್ನೆಲ್ಲ ಅಂದಾಜು ಮಾಡಿಕೊಂಡು ಯೋಚಿಸಿದರೆ- ಸಾವೆಂಬುದು ನಿರ್ದಯಿಯಾಗಿರುವುದೇ ಸರಿ ಅನಿಸುತ್ತದೆ. ಅದರ ಹೆದರಿಕೆಯಲ್ಲೇ ನಾವು ಚನ್ನಾಗಿದೀವಿ ಅನಿಸುತ್ತದೆ. ಸಾವೆಂಬ ಸರ್ವಾಧಿಕಾರಿಗೆ ಸಲಾಮು ಹೊಡೆಯುವ ಮನಸಾಗುತ್ತದೆ. ಈ ಜಗತ್ತಿನ ಅಷ್ಟೂ ಜೀವಿಗಳ ಬೆನ್ನ ಹಿಂದೆಯೇ ಇದೀಯಲ್ಲ- ಎಂಥ ಕಿಲಾಡಿ ಅಲ್ವಾ ನೀನು ಎಂದು ಛೇಡಿಸುವ ಆಸೆಯಾಗುತ್ತದೆ. ಒಂದು ವೇಳೆ ಸಾವು' ಇಂಥ ದಿನವೇ ಬರುತ್ತೆ ಎಂದು ಮೊದಲೇ ಗೊತ್ತಿದ್ದಿದ್ದರೆ ಸೂತಕ' ಎಂಬ ಪದಕ್ಕೆ ಅರ್ಥವೂ ಇರುತ್ತಿರಲಿಲ್ಲ. ಹೇಗೆ ಬದುಕಬೇಕು ಮತ್ತು ಹೇಗೆಲ್ಲ ಬದುಕಬಾರದು ಎಂಬ ಎಚ್ಚರಿಕೆಯ ಪಾಠ ಕೂಡ ಆಗುತ್ತಿರಲಿಲ್ಲ ಎನ್ನಿಸಿದಾಗ ವಿಸ್ಮಯವಾಗುತ್ತದೆ. ಮತ್ತು ಹೀಗೆಲ್ಲ ಯೋಚಿಸಿದ ನಂತರವೂ- ನಮಗೆ ಒಂದಷ್ಟು ಜಾಸ್ತಿ ಬದುಕುವ ಅವಕಾಶ ಕೊಡು ಎಂದು ಸಾವೆಂಬ ಸಾವನ್ನೇ ಬೊಗಸೆಯೊಡ್ಡಿ ಬೇಡುವ ದುರಾಸೆಯೂ ಜತೆಯಾಗುತ್ತದೆ, ಅಲ್ಲವೇ?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X