ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಶ್ಮಿ ಔರಸಂಗ : ಕಾಲಿಲ್ಲ; ಆದರೂ ನೃತ್ಯ ಕಲಾವಿದೆ!

By Staff
|
Google Oneindia Kannada News

Rashmi Aurasangal, a miraculous dancer
ಕೃತಕ ಕಾಲುಗಳಿಂದ ನರ್ತಿಸಿ ನಾಟ್ಯ ರಾಣಿ ಅನ್ನಿಸಿಕೊಂಡ ಸುಧಾ ಚಂದ್ರನ್ ಬಗ್ಗೆ ಕೇಳಿದ್ದೀರಿ. ಅಂಥದೇ ಸಾಧನೆಯ ರಶ್ಮಿ ಔರಸಂಗಳ ಸಾಧನೆಯ ಚರಿತೆ ಇಲ್ಲಿದೆ. ಬದುಕಿನ ಅನೇಕ ವೈರುದ್ಧ್ಯಗಳನ್ನು ಮೀರಿ ಸ್ವತಂತ್ರ ಹಕ್ಕಿಯಾದಳಲ್ಲ? ಆ ಕಥೆ ದೇವರು ಕೂಡ ಆನಂದಭಾಷ್ಪ ಮಿಡಿದು ತಕತಕ ಕುಣಿಯುವಂತೆ ಮಾಡುತ್ತದೆ. ರಶ್ಮಿಯನ್ನು ಬೆಳೆಸಿ ಸ್ವಂತ ಕಾಲ ಮೇಲೆ ನಿಲ್ಲುವಂತೆ ಮಾಡಿದ ಪಾಲಕರಿಗೊಂದು ಸೆಲ್ಯೂಟ್.

* ಎಆರ್ ಮಣಿಕಾಂತ್

ನಮ್ಮ ಕಥಾನಾಯಕಿಯ ಹೆಸರು ರಶ್ಮಿ ಔರಸಂಗ. ಹತ್ತನೇ ತರಗತಿ ಓದುತ್ತಿರುವ ಈಕೆ ಗುಲ್ಬರ್ಗಾದಿಂದ ಐವತ್ತು ಕಿಲೋಮೀಟರ್ ದೂರವಿರುವ ಸೇಡಂನಲ್ಲಿದ್ದಾಳೆ. ವಿಶೇಷವೇನೆಂದರೆ, ಗುಲಬರ್ಗಾ ಸೀಮೆಯಲ್ಲಿ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮ ನಡೆದರೂ, ಅಲ್ಲಿ ಈ ಹುಡುಗಿಯ ನೃತ್ಯ ಕಾರ್ಯಕ್ರಮ ಇದ್ದೇ ಇರುತ್ತದೆ. ಈಕೆ ವೇದಿಕೆಗೆ ಬಂದರೆ ಸಾಕು, ಜನ ಮೈಮರೆಯುತ್ತಾರೆ. ಅಪರೂಪದಲ್ಲಿ ಅಪರೂಪದ್ದು ಎಂಬಂಥ ಈ ಬಾಲೆಯ ನೃತ್ಯ ಪ್ರದರ್ಶನ ಕಂಡು ಅಚ್ಚರಿಗೆ ಈಡಾಗುತ್ತಾರೆ. ಸಂಭ್ರಮದಿಂದ ಚಪ್ಪಾಳೆ ಹೊಡೆಯುತ್ತಾರೆ. ಖುಷಿಯಿಂದ ಒನ್ಸ್ ಮೋರ್' ಕೂಗುತ್ತಾರೆ. ಅದಕ್ಕೆ ಪ್ರತಿಯಾಗಿ ಈ ರಶ್ಮಿ ಮತ್ತೆ ನೃತ್ಯ ಮುಂದುವರಿಸುತ್ತಾಳಲ್ಲ? ಆಗ ಮಾತ್ರ ಒನ್ಸ್‌ಮೋರ್ ಕೂಗಿದವರೇ ಸಂತೋಷದಿಂದ ಬಿಕ್ಕಳಿಸಲು ಶುರು ಮಾಡಿಬಿಡುತ್ತಾರೆ. ಈ ಹುಡುಗಿಯ ನೃತ್ಯ ಕಂಡು ಹೀಗೆ ಜನ ಭಾವಪರವಶರಾಗಿ ಕಂಬನಿ ಮಿಡಿಯಲು ಕಾರಣವೂ ಇದೆ. ಏನೆಂದರೆ- ಈ ಹುಡುಗಿಗೆ ಸೊಂಟದಿಂದ ಕೆಳಗಿನ ಭಾಗ ಸ್ವಾಧೀನದಲ್ಲಿಲ್ಲ! ಇನ್ನೂ ಸ್ವಲ್ಪ ವಿವರವಾಗಿ ಹೇಳಬೇಕೆಂದರೆ- ಒಂದರ್ಥದಲ್ಲಿ ಈಕೆಗೆ ಕಾಲುಗಳಿಲ್ಲ!

ಕಾಲುಗಳೇ ಇಲ್ಲ' ಎಂಬಂಥ ಸಂಕಟದ ಮಧ್ಯೆಯೇ ಈ ಹುಡುಗಿ- ಗುರುಗಳ ನೆರವಿಲ್ಲದೆಯೇ ನೃತ್ಯ ಕಲಿತಿದ್ದಾಳೆ. ವ್ಹೀಲ್‌ಚೇರ್ ಮೇಲೆ ಕುಳಿತು ಒಬ್ಬಳೇ ಅಭ್ಯಾಸ ಮಾಡಿದ್ದಾಳೆ. ತನ್ನ ಹಾವ-ಭಾವವನ್ನು ಕನ್ನಡಿಯಲ್ಲಿ ನೋಡಿಕೊಂಡೇ ತಪ್ಪುಗಳನ್ನು ತಿದ್ದಿಕೊಂಡಿದ್ದಾಳೆ. ಇದೇ ಸಂದರ್ಭದಲ್ಲಿ ಓದುವುದರಲ್ಲೂ ವಿಶೇಷ ಮುತುವರ್ಜಿ ತೋರಿ ಅಧ್ಯಾಪಕರಿಂದ best student ಅನ್ನಿಸಿಕೊಂಡಿದ್ದಾಳೆ. ಆ ಮೂಲಕ ಛಲವೊಂದಿದ್ದರೆ, ಸಾಧಿಸಬೇಕು ಎಂಬ ಹುಮ್ಮಸ್ಸು ಜತೆಗಿದ್ದರೆ ಅಂಗವೈಕಲ್ಯವನ್ನು ಖಂಡಿತ ಮೆಟ್ಟಿ ನಿಲ್ಲಬಹುದು ಎಂದು ಸಕಲೆಂಟು ಮಂದಿಗೂ ತೋರಿಸಿಕೊಟ್ಟಿದ್ದಾಳೆ. ತನ್ನ ಸಾಧನೆಯಿಂದ ಸಾವಿರಾರು ಮಂದಿಗೆ ಮಾದರಿಯಾಗಿದ್ದಾಳೆ.

ಈ ವಿವರಣೆಯನ್ನೆಲ್ಲ ಕೇಳಿದವರಿಗೆ- ರಶ್ಮಿ ಯಾವಾಗಿನಿಂದ ಕಾಲುಗಳ ಸ್ವಾನ ಕಳೆದುಕೊಂಡಳು? ಅದಕ್ಕೆ ಚಿಕಿತ್ಸೆ ಕೊಡಿಸಲಿಲ್ಲವಾ? ಅಥವಾ ಚಿಕಿತ್ಸೆ ಫಲಕಾರಿಯಾಗಲಿಲ್ಲವಾ? ಕಾಲುಗಳೇ ಸ್ವಾನದಲ್ಲಿಲ್ಲದ ಸಂದರ್ಭದಲ್ಲಿ ಆಕೆ ಎದುರಿಸಿದ ಸವಾಲುಗಳಾದರೂ ಎಂಥವು? ಕಾಲುಗಳೇ ಇಲ್ಲ ಎಂಬಂಥ ಸಂದರ್ಭದಲ್ಲೂ ಆಕೆಗೆ ನೃತ್ಯ ಕಲಿಯಬೇಕೆಂಬ ಹಟ ಬಂದದ್ದಾದರೂ ಹೇಗೆ? ಅದಕ್ಕೆ ಕಾರಣವಾದ ಸಂದರ್ಭ ಯಾವುದು?' ಎಂಬಿತ್ಯಾದಿ ಪ್ರಶ್ನೆಗಳು ಕಾಡಬಹುದು. ಅಂಥ ಎಲ್ಲ ಪ್ರಶ್ನೆಗಳಿಗೂ ಇಲ್ಲಿ ಉತ್ತರವಿದೆ. ಹೇಳಿದರೆ, ರಶ್ಮಿಯ ಹೋರಾಟದ ಬದುಕಿನದ್ದೇ ಒಂದು ಚೆಂದದ ಕಥೆ.

***
ರಶ್ಮಿಯ ತಂದೆಯ ಹೆಸರು ಸುಂದ್ರೇಶ್ ಔರಸಂಗ. ಅವರು, ಸೇಡಂನ ವಾಸವದತ್ತಾ ಸಿಮೆಂಟ್ ಕಾರ್ಖಾನೆಯಲ್ಲಿ ಎಂಜಿನಿಯರ್. ತಾಯಿಯ ಹೆಸರು ಅನಿತಾ. ಇವರು ಅದೇ ವಾಸವದತ್ತಾ ವಿದ್ಯಾ ವಿಹಾರ ಶಾಲೆಯಲ್ಲಿ ವಿಜ್ಞಾನ ಶಿಕ್ಷಕಿ. ಈ ದಂಪತಿಗೆ, 1994ರ ಮೇ 23ರಂದು ಹುಟ್ಟಿದ ಕಂದಮ್ಮನೇ ರಶ್ಮಿ. ಹಾಲುಗಲ್ಲದ ಕಂದಮ್ಮನನ್ನು ಕಂಡು ವೈದ್ಯರು ಖಿನ್ನರಾಗಿ ಹೇಳಿದರಂತೆ: ಮಗು ಮುದ್ದು ಮುದ್ದಾಗಿದೆ. ಆದರೆ ಏನೋ ಕೊರತೆ ಕಾಣಿಸ್ತಾ ಇದೆ. ಮುಖ್ಯವಾಗಿ ಸೊಂಟದಿಂದ ಕೆಳಗಿನ ಭಾಗದಲ್ಲಿ ಸ್ಪರ್ಶಜ್ಞಾನ ಇರುವಂತೆ ಕಾಣುತ್ತಿಲ್ಲ. ತಕ್ಷಣವೇ ಒಂದು ಆಪರೇಷನ್ ಮಾಡಬೇಕು...'

ಪರಿಣಾಮ ರಶ್ಮಿಗೆ, ಕೇವಲ ಒಂದೂವರೆ ತಿಂಗಳು ತುಂಬಿದ ಸಂದರ್ಭದಲ್ಲಿಯೇ ಪೂನಾದ ಆಸ್ಪತ್ರೆಯಲ್ಲಿ ಆಪರೇಷನ್ ನಡೆದೇ ಹೋಯಿತು. ಆದರೆ ಪ್ರಯೋಜನವೇನೂ ಆಗಲಿಲ್ಲ. ಮತ್ತೆ ಪರೀಕ್ಷಿಸಿದ ವೈದ್ಯರು- ಮಗುವಿನ ಬೆನ್ನಮೂಳೆಯಲ್ಲಿ ಏನೋ ತೊಂದರೆಯಿದೆ. ಮಗು ಬೆಳೆಯುತ್ತಾ ಹೋದಂತೆ ಈ ತೊಂದರೆ ತಂತಾನೇ ಸರಿಹೋಗಬಹುದು. ಸರಿಯಾಗದೆಯೂ ಇರಬಹುದು. ಒಂದು ವೇಳೆ, ಇದೇ ರೀತಿಯ ತೊಂದರೆ ಮುಂದುವರಿದರೆ- ಆಕೆ ಬದುಕಿಡೀ ವ್ಹೀಲ್‌ಚೇರ್‌ನೊಂದಿಗೇ ಇರಬೇಕಾಗುತ್ತದೆ. ಹಾಗಾಗದಿರಲಿ ಎಂದು ಪ್ರಾರ್ಥಿಸೋಣ' ಎಂದರಂತೆ.

ವೈದ್ಯರ ಮಾತು ಕೇಳಿದ ಸುಂದ್ರೇಶ್- ಅನಿತಾ ದಂಪತಿ ಆ ಕ್ಷಣದಿಂದಲೇ ಮಗುವಿನ ಬಗ್ಗೆ ವಿಶೇಷ ಕಾಳಜಿ ವಹಿಸಿದರು. ಮಗುವಿಗೆ ಒಳಿತಾಗಲಿ ಎಂಬ ಸದಾಶಯದಿಂದ ಪೂಜೆ ಮಾಡಿಸಿದರು. ಹರಕೆ ಕಟ್ಟಿಕೊಂಡರು. ಅದೇ ಸಂದರ್ಭದಲ್ಲಿ ಗುಲ್ಬರ್ಗಾ, ಬಾಂಬೆ, ಹೈದ್ರಾಬಾದ್, ಬೆಂಗಳೂರಿನಲ್ಲಿರುವ ಎಲ್ಲ ಅತ್ಯುತ್ತಮ ಆಸ್ಪತ್ರೆಗಳನ್ನೂ ಸುತ್ತಿ ಬಂದರು. ಈ ಓಡಾಟದಿಂದ, ಚಿಕಿತ್ಸೆಗಳಿಂದ ದುಡ್ಡು ಖರ್ಚಾಯಿತೇ ವಿನಃ ಮಗುವಿನ ಆರೋಗ್ಯ ಸುಧಾರಿಸಲಿಲ್ಲ. ಕಡೆಗೊಂದು ದಿನ ಈ ಮಗುವಿಗೆ- ವ್ಹೀಲ್‌ಚೇರ್ ಕೊಡಿಸುವುದೊಂದೇ ಮಾರ್ಗ ಎಂಬ ನಿಷ್ಠುರ ಸತ್ಯ ಗೊತ್ತಾದಾಗ ಅದೊಂದು ರಾತ್ರಿ ಸುಂದ್ರೇಶ್-ಅನಿತಾ ದಂಪತಿ ಹೀಗೆ ನಿರ್ಧರಿಸಿದರಂತೆ: ಮುಂದೆ ಇನ್ನೊಂದು ಮಗುವಾದರೆ, ಭವಿಷ್ಯದ ದಿನಗಳಲ್ಲಿ ಅವನ(ಳ)ನ್ನು ಕಂಡು ರಶ್ಮಿಗೆ- ಛೆ, ನಾನು ಹೀಗಿದ್ದೀನಲ್ಲ ಎಂಬ ಸಂಕಟ ಕಾಡಬಹುದು. ಅಥವಾ, ಮೊದಲಿನದು ಅಂಗವಿಕಲ ಮಗು ಎಂಬ ಕಾರಣಕ್ಕೆ ಇವಳ ಬಗ್ಗೆ ನಮಗೇ ಒಂದಿಷ್ಟು ಅನಾದರ ಬೆಳೆದು ಬಿಡಬಹುದು. ಹಾಗಾಗಿ, ರಶ್ಮಿಯನ್ನೇ ತುಂಬ ಮುದ್ದಾಗಿ ಬೆಳೆಸೋಣ. ಎಲ್ಲ ಸವಾಲುಗಳನ್ನೂ ಎದುರಿಸುವಂತೆ ಅವಳನ್ನು ಮಾನಸಿಕವಾಗಿ ಸಿದ್ಧ'ಗೊಳಿಸೋಣ. ನಮಗೆ ಎರಡನೇ ಮಗು ಬೇಡವೇ ಬೇಡ!

ಮಗುವಿನ ಭವಿಷ್ಯದ ಬಗ್ಗೆ ಮಾತಾಡುತ್ತ ಸುಂದ್ರೇಶ್-ಅನಿತಾ ದಂಪತಿ, ಪರಸ್ಪರರಿಗೆ ಕಾಣದಂತೆ ಕಂಬನಿ ಒರೆಸಿಕೊಂಡೇ ಇಂಥದೊಂದು ನಿರ್ಧಾರಕ್ಕೆ ಬಂದರಲ್ಲ? ಅವತ್ತು ಮಾತ್ರ ದೇವತೆಗಳಂಥ ದೇವತೆಗಳೂ ಭಾವಪರವಶರಾಗಿ ಕಂಬನಿ ಮಿಡಿದರಂತೆ!

ಮರುದಿನದಿಂದಲೇ ವ್ಹೀಲ್ ಚೇರ್‌ನಲ್ಲಿ ಕೂರಿಸಿಯೇ ಮಗುವನ್ನು ಶಾಲೆಗೆ ಕಳಿಸುವ ಪರಿಪಾಠ ಆರಂಭವಾಯಿತು. ಹೇಳಿ ಕೇಳಿ ಹೆಣ್ಣುಮಗು. ಅದಕ್ಕೆ ಸೊಂಟದ ಕೆಳಗಿನ ಭಾಗವೇ ಸ್ವಾನದಲ್ಲಿಲ್ಲ. ಇಂಥ ಸಂದರ್ಭದಲ್ಲಿ ಬೇರೆ ಯಾವುದಾದರೂ ಶಾಲೆಗೆ ಸೇರಿಸಿದರೆ, ಮಗುವಿಗೆ ತಬ್ಬಲಿತನ ಕಾಡಬಹುದು. ಏಕಾಂಗಿ ಅನ್ನಿಸಬಹುದು. ಎಲ್ಲಕ್ಕಿಂತ ಮುಖ್ಯವಾಗಿ ಇನ್ನೊಬ್ಬರ ನೆರವಿನಿಂದಲೇ ಶೌಚಾಲಯಕ್ಕೆ ಹೋಗಬೇಕಾದಂಥ ಸಂದರ್ಭದಲ್ಲಿ ತುಂಬ ಸಂಕೋಚ ಮತ್ತು ಸಂಕಟವಾಗಬಹುದು ಅನಿಸಿದ್ದರಿಂದ, ತಾವು ನೌಕರಿಗಿದ್ದ ವಾಸವದತ್ತಾ ವಿದ್ಯಾವಿಹಾರ ಶಾಲೆಗೇ ಮಗಳನ್ನೂ ಸೇರಿಸಿಕೊಂಡರು ಅನಿತಾ.

ಆಗ ಎದುರಾದ ಸಮಸ್ಯೆಗಳ ಬಗ್ಗೆ ಅನಿತಾ ಹೇಳುತ್ತಾರೆ: ದಿನ ಕಳೆದಂತೆಲ್ಲ ದೇಹ ಬೆಳೆಯಿತೇ ಹೊರತು ಕಾಲಿನ ಚಲನೆಯಾಗಲಿಲ್ಲ. ಪರಿಣಾಮ, ಆಕೆಯನ್ನು ಎಲ್ಲಿಗೇ ಕರೆದೊಯ್ಯಬೇಕೆಂದರೂ ವ್ಹೀಲ್‌ಚೇರ್‌ನಲ್ಲೇ ಕರೆದೊಯ್ಯಬೇಕಿತ್ತು. ಇಲ್ಲವಾದರೆ ಎತ್ತಿಕೊಂಡು ಹೋಗಬೇಕಿತ್ತು. ಇದೆಲ್ಲಕ್ಕಿಂತ ಹಿಂಸೆ ಅನಿಸುತ್ತಿದ್ದುದು ಶೌಚಾಲಯಕ್ಕೆ ಹೋಗಬೇಕಾಗಿ ಬಂದಾಗ. ಪ್ರತಿಯೊಬ್ಬರೂ ತುಂಬ ಏಕಾಂತ ಬಯಸುವ; ಏಕಾಂತದಲ್ಲಿ ಕೆಲ ನಿಮಿಷದ ಮಟ್ಟಿಗೆ ಇರಲೇಬೇಕಾದ ಜಾಗ ಅದು. ವಿಪರ್‍ಯಾಸವೆಂದರೆ, ಅಲ್ಲಿ ಕೂಡ ನಾನು ಮಗಳೊಂದಿಗೆ ನಿಲ್ಲಬೇಕಿತ್ತು. ಇಲ್ಲಿ ನಾಚಿಕೊಳ್ಳುವಂಥದ್ದು; ಸಂಕಟ ಪಡುವಂಥದ್ದು ಏನೇನೂ ಇಲ್ಲ ಮಗಳೇ. ಇದೆಲ್ಲಾ ಕಾಮನ್. ಪುಟ್ಟ ಮಕ್ಕಳು ಶೌಚಕ್ಕೆ ಹೋದಾಗ ಅಮ್ಮಂದಿರು ಕ್ಲೀನ್ ಮಾಡ್ತಾರೆ ಅಲ್ವ? ಇದೂ ಹಾಗೇನೇ ನೀನು ನನ್ನ ಪಾಲಿಗೆ ಎಂದೆಂದೂ ಪುಟ್ಟ ಮಗೂನೇ ಎಂದು ಧೈರ್ಯ ಹೇಳಬೇಕಿತ್ತು. ಈ ಕೆಲಸವನ್ನು ನಾನು ತುಂಬ ಸಂಭ್ರಮದಿಂದ ಮಾಡಿದೆ. ಈ ಸಂದರ್ಭದಲ್ಲಿಯೇ ರಶ್ಮಿಯಂಥ ಮಕ್ಕಳಿಗೆ ಭಾರತೀಯ ಶೈಲಿಯ ಶೌಚಾಲಯಕ್ಕಿಂತ ಪಾಶ್ಚಾತ್ಯ ಶೈಲಿಯ ಶೌಚಾಲಯವಿದ್ದರೆ ತುಂಬ ಅನುಕೂಲ ಎಂದು ಕೊಲ್ಲಾಪುರದಲ್ಲಿರುವ ಹೆಲ್ಪರ್‍ಸ್ ಆಫ್ ದ ಹ್ಯಾಂಡಿಕ್ಯಾಪ್ಡ್ ಸಂಸ್ಥೆಯ ಮುಖ್ಯಸ್ಥೆ ನಸೀಮಾ ಹುರಜುಕ್ ಸಲಹೆ ಮಾಡಿದರು. ತಕ್ಷಣವೇ ಅಂಥದೊಂದು ವ್ಯವಸ್ಥೆ ಮಾಡಿಕೊಟ್ಟೆ. ಒಂದು ಸಂತೋಷವೆಂದರೆ, ನಮ್ಮ ಎಲ್ಲ ಭಾವನೆಗಳನ್ನೂ ರಶ್ಮಿ ಅರ್ಥಮಾಡಿಕೊಂಡಳು. ಕೆಲವೇ ದಿನಗಳಲ್ಲಿ ಯಾರ ನೆರವೂ ಇಲ್ಲದೆ ಶೌಚಾಲಯಕ್ಕೆ ಹೋಗಿಬರುವುದನ್ನು ಅಭ್ಯಾಸ ಮಾಡಿಕೊಂಡಳು. ಅದನ್ನು ಕಂಡಾಗ ನನಗೆ, ನನ್ನ ಮಗಳು ಯುದ್ಧಕ್ಕೆ ಕಳಿಸಿದರೂ ಗೆದ್ದು ಬರ್‍ತಾಳೆ ಅನ್ನಿಸಿಬಿಡ್ತು...'

ಅಂದಹಾಗೆ, ಕಾಲುಗಳು ಸ್ವಾನದಲ್ಲೇ ಇಲ್ಲದಿದ್ದರೂ, ನೃತ್ಯ ಮಾಡಲು ರಶ್ಮಿ ಆರಂಭಿಸಿದಳಲ್ಲ; ಅದೂ ಕೂಡ ಆಕಸ್ಮಿಕವಾಗಿ ನಡೆದು ಹೋದ ಪವಾಡವೇ. ರಶ್ಮಿಯ ತಾಯಿ ಅನಿತಾ ಅವರಿಗೆ ಪ್ರತಿವರ್ಷವೂ ಸ್ಕೂಲ್‌ಡೇ ಸಂದರ್ಭದಲ್ಲಿ. ಮಕ್ಕಳಿಗೆ ಡ್ಯಾನ್ಸ್ ಕಲಿಸುವ ಜವಾಬ್ದಾರಿ ವಹಿಸಲಾಗುತ್ತಿತ್ತು. ಈಗ ಅದನ್ನೇ ನೆನಪು ಮಾಡಿಕೊಂಡು ಅನಿತಾ ಹೇಳುತ್ತಾರೆ: ವಾರ್ಷಿಕೋತ್ಸವದ ಸಂದರ್ಭದಲ್ಲಿ ಡ್ಯಾನ್ಸ್ ಕಾರ್ಯಕ್ರಮ ನೋಡಿ ರಶ್ಮಿ ಖುಷಿಯಿಂದ ಚಪ್ಪಾಳೆ ಹೊಡೆಯುತ್ತಿದ್ದಳು. ಆಗೆಲ್ಲ ನನಗೆ ವಿಪರೀತ ಸಂಕಟವಾಗುತ್ತಿತ್ತು. ನನ್ನ ಮಗುವಿಗೇ ಕಲಿಸಲಾಗದ ನಾನು ಬೇರೆಯವರಿಗೆ ಹೇಳಿಕೊಡೋದ್ರಿಂದ ಬಂದ ಭಾಗ್ಯವೇನು ಅನ್ನಿಸುತ್ತಿತ್ತು. ಆಗೆಲ್ಲ ಒಬ್ಬಳೇ ಮೌನವಾಗಿ ಕಂಬನಿ ಸುರಿಸುತ್ತಿದ್ದೆ. ಅಂಥ ಸಂದರ್ಭದಲ್ಲಿ ಸದ್ದಿಲ್ಲದೇ ಬಂದು ಹೆಗಲು ತಟ್ಟುತ್ತಿದ್ದ ನನ್ನ ಪತಿ ಸುಂದ್ರೇಶ್- ಅಳಬೇಡ. ಸಂತೋಷದ ದಿನಗಳು ಹತ್ತಿರದಲ್ಲೇ ಇವೆ' ಅಂತಿದ್ರು...'

ಈ ಸಂದರ್ಭದಲ್ಲಿಯೇ ರಶ್ಮಿ ಬದುಕಿಗೆ ಟರ್ನಿಂಗ್ ಪಾಯಿಂಟ್ ಅನ್ನಿಸುವಂಥ ಸಂದರ್ಭ ಬಂದೇ ಬಂತು. ಟಿವಿಯಲ್ಲಿ ಅವತ್ತು ಫನ್ಹಾ' ಎಂಬ ಹಿಂದಿ ಚಿತ್ರವೊಂದು ಪ್ರಸಾರವಾಯಿತು. ಆ ಚಿತ್ರದಲ್ಲಿ ಕುರುಡಿಯೊಬ್ಬಳು ಡ್ಯಾನ್ಸ್ ಮಾಡಿ ಎಲ್ಲರಿಂದ ಬೇಷ್ ಅನ್ನಿಸಿಕೊಳ್ಳುವ ದೃಶ್ಯವಿದೆ. ಸಿನಿಮಾ ಮುಗಿದ ಕ್ಷಣದಲ್ಲೇ- ಕುರುಡಿಯೇ ಡ್ಯಾನ್ಸ್ ಮಾಡಿದಳು ಅಂದ ಮೇಲೆ ಕಣ್ಣಿರುವ ನಾನೂ ಒಂದು ಕೈ ನೋಡಬಾರದೇಕೆ?' ಎಂದುಕೊಂಡಳು ರಶ್ಮಿ. ಈ ಸಂದರ್ಭದಲ್ಲೇ ಎನ್‌ಡಿಟಿವಿಯಲ್ಲಿ ನೃತ್ಯ ನಿರ್ದೇಶಕಿ ಸರೋಜ್‌ಖಾನ್ ನಡೆಸಿಕೊಡುವ ನಚಲೇ' ಎಂಬ ಕಾರ್ಯಕ್ರಮವೂ ಪ್ರಸಾರವಾಯಿತು. ಅದನ್ನು ನೋಡಿದ ನಂತರ ಅದೇ ಫನ್ಹಾ ಚಿತ್ರದ ಯಹಾಂ ಹರ್ ಕದಂ/ಕದಂ ಪೇ ಧರತಿ ಬದಲೇ ರಂಗ್/ ಮೇರಾ ದೇಶ್ ರಂಗೀಲಾ' ಹಾಡನ್ನು ರೆಕಾರ್ಡ್ ಮಾಡಿಕೊಂಡು, ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ವ್ಹೀಲ್ ಚೇರ್ ಮೇಲೆ ಕುಳಿತೇ ಡ್ಯಾನ್ಸ್ ಪ್ರಾಕ್ಟೀಸ್‌ಗೆ ಶುರು ಮಾಡಿದಳು. ಒಂದು ಕೈಯಲ್ಲಿ ವ್ಹೀಲ್‌ಚೇರ್ ತಿರುಗಿಸುತ್ತಲೇ ಇನ್ನೊಂದು ಕೈಯಿಂದ ಅಭಿನಯ ಮಾಡಲು ಕಲಿತೂಬಿಟ್ಟಳು.

ಅದೊಂದು ದಿನ ಹೀಗೇ ಅಭ್ಯಾಸ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಮನೆಗೆ ಬಂದ ತಂದೆ ಸುಂದ್ರೇಶ್ ಔರಸಂಗ, ಮಗಳ ನೃತ್ಯಾಭ್ಯಾಸ ಹಾಗೂ ಅವಳ ಮುಖದ ಭಾವಾಭಿನಯ ಕಂಡು ಬೆರಗಾದರಂತೆ. ಮರುಕ್ಷಣವೇ ಮಗಳನ್ನು ಬಾಚಿ ತಬ್ಬಿಕೊಂಡು ಮುದ್ದಾಡಿ - ಮುಂದುವರಿಸು ಮಗಳೇ. ನಿನ್ನ ಜತೆಗೆ ನಾವಿರ್‍ತೇವೆ' ಎನ್ನುತ್ತಾ ಭಾವುಕರಾದಂತೆ. ಅಂದಿನಿಂದ ಮನೆಯಲ್ಲೇ ಶುರುವಾಯಿತು- ಈ ಕಾಲಿಲ್ಲದ ಹುಡುಗಿಯ ನೃತ್ಯಾಭ್ಯಾಸ. ತನಗಿದ್ದ ಅಂಗವೈಕಲ್ಯದ ಮೇಲೆ ಸೇಡು ತೀರಿಸಿಕೊಳ್ಳಲು ನಿರ್ಧರಿಸಿದವಳಂತೆ ತುಂಬ ಕಡಿಮೆ ಅವಯಲ್ಲೇ ಡ್ಯಾನ್ಸ್ ಕಲಿತೇಬಿಟ್ಟಳು. ನೃತ್ಯ ಕಲಾವಿದರ ಪರಿಣಿತಿಗೆ ಕನ್ನಡಿ ಹಿಡಿಯುವ ಕಣ್ಣು ಮುಖದ ಕದಲಿಕೆಯ ವಿಷಯದಲ್ಲಂತೂ, ಫನ್ಹಾ ಚಿತ್ರದ ನೃತ್ಯಗಾರ್ತಿಯೇ ಬೆರಗಾಗುವಷ್ಟರ ಮಟ್ಟಿಗೆ ಪಳಗಿ ಹೋಗಿದದಳು.

ಕಡೆಗೊಂದು ದಿನ ರಶ್ಮಿಯ ನೃತ್ಯ ಪ್ರದರ್ಶನಕ್ಕೆ ವೇದಿಕೆ ಸಿಕ್ಕಿಯೇಬಿಟ್ಟಿತು. ಅದು 2008, ಅಕ್ಟೋಬರ್ 17. ಅವತ್ತು ಹೈದ್ರಾಬಾದ್‌ನಲ್ಲಿ ಹೆಲ್ಪರ್‍ಸ್ ಆಫ್ ದಿ ಹ್ಯಾಂಡಿಕ್ಯಾಪ್ಡ್ ಸಂಸ್ಥೆಯ ಕಾರ್ಯಕ್ರಮವಿತ್ತು. ಶೌಚಾಲಯ ಬಳಕೆಯ ವಿಷಯದಲ್ಲಿ ಸಲಹೆ ನೀಡಿದ್ದ ನಸೀಮಾ ಅವರೇ ರಶ್ಮಿಯ ನೃತ್ಯ ಪ್ರದರ್ಶನಕ್ಕೆ ಅವಕಾಶ ನೀಡಿದ್ದರು. ಅವತ್ತು ರಶ್ಮಿಯ ವ್ಹೀಲ್ ಚೇರ್ ನೃತ್ಯ ನೋಡಿದವರೆಲ್ಲ ಒಂದೇ ಸಮನೆ ಒನ್ಸ್ ಮೋರ್ ಕೂಗಿದರು. ಖುಷಿಯಿಂದ ಚಪ್ಪಾಳೆ ಹೊಡೆದರು. ಈ ಹುಡುಗಿಯ ಸಾಧನೆಗೆ, ಛಲಕ್ಕೆ ಕೈಮುಗಿದರು. ನೃತ್ಯ ಮುಗಿಯುತ್ತಿದ್ದಂತೆಯೇ ವೇದಿಕೆಗೆ ಬಂದು ರಶ್ಮಿಯ ಆಟೊಗ್ರಾಫ್ ಪಡೆದರು. ಜತೆಯಲ್ಲಿ ಫೋಟೊ ತೆಗೆಸಿಕೊಂಡು ಖುಷಿಪಟ್ಟರು.

***
ಈಗ ಏನೇನಾಗಿದೆ ಅಂದರೆ, ವ್ಹೀಲ್ ಚೇರ್ ನೃತ್ಯದ ಮೂಲಕ ರಶ್ಮಿ ಗುಲ್ಬರ್ಗಾ ಸೀಮೆಯಲ್ಲಿ ದೊಡ್ಡ ಹೆಸರಾಗಿದ್ದಾಳೆ. ಅಲ್ಲಿನ ಪೀಠಾಧಿಪತಿ ಶರಣಬಸಪ್ಪ ಅಪ್ಪ ಅವರು ರಶ್ಮಿಯ ನೃತ್ಯ ಪ್ರತಿಭೆಯನ್ನು ಕಂಡು ಬೆರಗಾಗಿದ್ದಾರೆ. ಈಕೆಯ ಕಾರ್ಯಕ್ರಮಕ್ಕೆ ವೇದಿಕೆ ಒದಗಿಸಿ ಬೆನ್ನು ತಟ್ಟಿದ್ದಾರೆ. ಅಂಥದೇ ಪ್ರೋತ್ಸಾಹ ವಾಸವದತ್ತಾ ವಿದ್ಯಾ ವಿಹಾರ ಶಾಲೆಯ ಪ್ರಾಚಾರ್ಯರಾದ ನೀತಾ ಪುರೋಹಿತ್ ಅವರಿಂದಲೂ ದೊರಕಿದೆ. ಶಾಲೆಯ 25ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ರಶ್ಮಿಯ ನೃತ್ಯ ಏರ್ಪಡಿಸಿದ್ದ ಅಲ್ಲಿನ ಆಡಳಿತ ಮಂಡಳಿ- ಈ ವಿದ್ಯಾರ್ಥಿನಿ ನಮ್ಮೆಲ್ಲರ ಹೆಮ್ಮೆ' ಎಂದು ಖುಷಿಯಿಂದ ಹೇಳಿಕೊಂಡಿದೆ.

ಇದನ್ನೆಲ್ಲ ಕಂಡು ಸಹಜವಾಗಿಯೇ ಖುಷಿಯಾಗಿರುವ ಸುಂದ್ರೇಶ್-ಅನಿತಾ ದಂಪತಿ ಹೇಳುತ್ತಾರೆ: ಈ ಹಿಂದೆಲ್ಲಾ ಮಗಳಿಗೆ ಕಾಲು ಸ್ವಾಧೀನದಲ್ಲಿ ಇಲ್ಲವಲ್ಲ ಎಂದು ನೆನೆದು ಅಳ್ತಾ ಇದ್ವಿ. ಈಗ ಕಾಲಿಲ್ಲದಿದ್ರೂ ಮಗಳು ಎಂಥ ದೊಡ್ಡ ಸಾಧನೆ ಮಾಡಿದಳಲ್ಲ ಎಂದು ನೆನಪಾಗಿ ಆನಂದಬಾಷ್ಪ ಸುರಿಸ್ತಾ ಇದೀವಿ. ಇಂಥ ಕಂದಮ್ಮನ ಅಪ್ಪ-ಅಮ್ಮ ಅಂತ ಹೇಳಿಕೊಳ್ಳೋಕೆ ನಮಗೆ ಹೆಮ್ಮೆ ಆಗ್ತಾ ಇದೆ...'

ಈಗ ಹೇಳಿ: ರಶ್ಮಿಯ ಸಾಧನೆಯ ಕಥೆ ಓದಿದ ಮೇಲೆ ಈ ಹುಡುಗಿ ನಮ್ಮ ಅಕ್ಕನೋ ತಂಗಿಯೋ ಆಗಿರಬೇಕಿತ್ತು ಅನಿಸೋದಿಲ್ವ? ಅಂದ ಹಾಗೆ ರಶ್ಮಿ ಮನೆಯ ಮೊಬೈಲ್ ನಂಬರ್: 94498 76658.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X