ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಗಮೇಶ್ ಉಪಾಸೆ : ಹಳ್ಳಿಗಾಡಿನ 'ಮುತ್ತಣ್ಣ'!

By Staff
|
Google Oneindia Kannada News

Sangamesh Upase of Silli Lalli fame
ಡಾ. ರಾಜ್‌ಕುಮಾರ್ ನಟಿಸಿದ ಮೇಯರ್ ಮುತ್ತಣ್ಣ' ಸಿನಿಮಾ ನೆನಪಿದೆ ತಾನೆ? ಹಳ್ಳಿಯಿಂದ ಬಂದ ಮುಗ್ಧನೊಬ್ಬ ಬೆಂಗಳೂರಿನ ಮೇಯರ್ ಆಗುವ ಕಥೆ ಅದು. ಇಲ್ಲಿಯೂ ಒಬ್ಬ ಸಾಧಕನಿದ್ದಾನೆ. ಅವನೂ ಹಳ್ಳಿಯಿಂದ ಬಂದವನು ಎಂಬುದು ವಿಶೇಷ. ಸಿಲ್ಲಿಲಲ್ಲಿ'ಯ ಕಾಂಪೌಂಡರ್ ಆಗಿದ್ದ ಈತ ನಡೆದು ಬಂದ ದಾರಿಯದ್ದೇ ಒಂದು ಸಾಹಸದ ಕಥೆ...

* ಎಆರ್ ಮಣಿಕಾಂತ್

ಇದು, ಹಳ್ಳಿಗಾಡಿನ ಮುತ್ತಣ್ಣ'ನೊಬ್ಬ ಬೆಂಗಳೂರಿನ ಮೇಯರ್' ಆದ ಕಥೆ! ಆಫ್‌ಕೋರ್ಸ್, ಈ ಮುತ್ತಣ್ಣ' ಮೇಯರ್ ಆಗಲಿಲ್ಲ ನಿಜ. ಆದರೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಅಸಿಸ್ಟೆಂಟ್ ಕಂಟ್ರೋಲರ್ ಆದ ರೋಮಾಂಚಕ ಅನುಭವದ ಕಥೆ.

ಇವರ ಹೆಸರು: ಸಂಗಮೇಶ ಉಪಾಸೆ. ಎಸ್ಸೆಸ್ಸೆಲ್ಸಿ ಸರ್ಟಿಫಿಕೇಟಿನಲ್ಲಿ ಅವರ ಹೆಸರು ಸಂಗಪ್ಪ ಉಪಾಸೆ ಎಂದೇ ದಾಖಲಾಗಿರುವುದರಿಂದ ಅವರನ್ನೀಗ ಸಂಗಪ್ಪ ಉಪಾಸೆ ಎಂದೇ ಕರೆಯಲಾಗುತ್ತದೆ. ಬಿಬಿಎಂಪಿಯಲ್ಲಿ ಅಧಿಕಾರಿಯಾಗಿರುವ ಸಂಗಪ್ಪ ಉಪಾಸೆ ಅವರಿಗೆ ಅಂಜುಟಗಿಲು ಸಂಮಾರು ಎಂಬ ಕಾವ್ಯನಾಮವೂ ಇದೆ! ಕೆಎಎಸ್ ಮಾಡಿಕೊಂಡಿರುವ ಇವರು, ಮೂರು ವರ್ಷಗಳ ಹಿಂದೆ ಸಿಲ್ಲಿ ಲಲ್ಲಿ' ಧಾರಾವಾಹಿಯಲ್ಲಿ ಕಾಂಪೌಂಡರ್‌ನ ಪಾತ್ರ ಮಾಡಿಕೊಂಡಿದ್ದವರು ಅಂದರೆ ನಂಬುವುದು ಕಷ್ಟ. ಆದರೆ ಇದು ನಿಜ. ಹೊಟ್ಟೆಪಾಡಿಗಾಗಿ ಬಣ್ಣ ಹಚ್ಚಿ, ಕೋಡಂಗಿಯಂತೆ ಕ್ಯಾಮರಾ ಮುಂದೆ ಕಾಣಿಸಿಕೊಳ್ಳುತ್ತಿದ್ದ ಸಂಗಮೇಶ, ಈಗ ಹೆಸರಘಟ್ಟ ರಸ್ತೆಯಲ್ಲಿರುವ ಬಿಬಿಎಂಪಿಯಲ್ಲಿ ಹಣಕಾಸು ವಿಭಾಗದ ಅಸಿಸ್ಟೆಂಟ್ ಕಂಟ್ರೋಲರ್! ಮೂರು ವರ್ಷಗಳ ಹಿಂದೆ ಮೂರು ಹೊತ್ತಿನ ಊಟಕ್ಕೆ ಪರದಾಡುತ್ತಿದ್ದ ಸಂಗಮೇಶ, ಈಗ ಸರಕಾರದ ಗೌರವಾನ್ವಿತ ಅಧಿಕಾರಿ. ಓಡಾಡಲು ಸರಕಾರಿ ಕಾರ್ ಇದೆ. ವಾಸಕ್ಕೆ ಸರಕಾರದ ಮನೆಯಿದೆ. ಕೆಲಸ ಮಾಡಲು ಸರಕಾರಿ ಕಚೇರಿಯಿದೆ. ಜತೆಗೆ ಏಳೆಂಟು ಮಂದಿ ಸಹಾಯಕರಿದ್ದಾರೆ. ಬಿಬಿಎಂಪಿಯ ರಸ್ತೆ ಕಾಮಗಾರಿ, ನೀರು ಪೂರೈಕೆ, ಪಾರ್ಕ್ ನಿರ್ಮಾಣ ಹಾಗೂ ಸ್ವಚ್ಛತಾ ಕಾರ್ಯಗಳಿಗೆ ಈ ಸಂಗಪ್ಪ ಉಪಾಸೆಯವರೇ ಬಜೆಟ್ ಪೂರೈಸಬೇಕು!

ಹೇಳಲೇಬೇಕಾದ ಮಾತೆಂದರೆ, ಈ ಒಂದು ಹಂತಕ್ಕೆ ಬಂದು ನಿಲ್ಲಬೇಕಾದೆ ಸಂಗಮೇಶ ವಿಪರೀತ ಸೈಕಲ್ ಹೊಡೆದಿದ್ದಾರೆ. ಹತ್ತು ಜನ್ಮಕ್ಕೆ ಆಗುವಷ್ಟು ಕಷ್ಟಪಟ್ಟಿದ್ದಾರೆ. ಒಂದು ದೊಡ್ಡ ಎತ್ತರಕ್ಕೆ ತಂದು ನಿಲ್ಲಿಸುವುದಕ್ಕೂ ಮೊದಲು ಬದುಕೆಂಬುದು ಅವರನ್ನು ಕ್ಷಣಕ್ಷಣವೂ ಹೆದರಿಸಿದೆ. ಆಟ ಆಡಿಸಿದೆ. ಕಷ್ಟ ಕೊಟ್ಟಿದೆ. ಪರೀಕ್ಷೆಗೆ ಒಡ್ಡಿದೆ. ಅಳಿಸಿದೆ. ಅವಮಾನಕ್ಕೆ ಈಡು ಮಾಡಿದೆ. ಹಂಗಿಸಿದೆ. ಅಪಹಾಸ್ಯ ಮಾಡಿದೆ. ಒಂದರ ಹಿಂದೊಂದು ಸಂಕಟಗಳನ್ನು ತಂದಿಟ್ಟು ಮಜಾ ತೆಗೆದುಕೊಂಡಿದೆ. ಒಂದು ಸಂತೋಷವೆಂದರೆ, ಸಂಗಪ್ಪ ಎಲ್ಲವನ್ನೂ cool ಆಗಿಯೇ ತೆಗೆದುಕೊಂಡಿದ್ದಾರೆ. ಒಂದೊಂದು ಅವಮಾನ ಕೈ ಹಿಡಿದಾಗಲೂ ನಾಳೆ ಗೆಲ್ತೀನಿ' ಎನ್ನುತ್ತಲೇ ನೋವು ಮರೆತಿದ್ದಾರೆ. ಮತ್ತು ಇದೀಗ ನೂರಲ್ಲ, ಸಾವಿರ ಮಂದಿಗೂ ಮಾದರಿಯಾಗಬಲ್ಲ ಸಾಹಸವನ್ನೂ ಮಾಡಿ ತೋರಿಸಿದ್ದಾರೆ. ಹೇಳಿದರೆ, ಅವರ ಹೋರಾಟದ ಬದುಕಿನದ್ದು ನಂಬಲು ಸಾಧ್ಯವೇ ಇಲ್ಲದಂಥ ಸಾಹಸದ ಕಥೆ.

ಸಂಗಮೇಶ ಮೂಲತಃ ಬಿಜಾಪುರ ಜಿಲ್ಲೆ, ಇಂಡಿ ತಾಲೂಕಿನ ಅಂಜುಟಗಿ ಗ್ರಾಮದವರು. ಅವರ ತಂದೆ-ತಾಯಿ ಇಬ್ಬರೂ ಅನಕ್ಷರಸ್ಥರು. ಮಕ್ಕಳನ್ನು ಚೆನ್ನಾಗಿ ಓದಿಸಬೇಕು ಎಂಬ ಆಸೆ ಅವರಿಗಿತ್ತು ನಿಜ. ಆದರೆ ಓದಿಸುವಷ್ಟು ಆರ್ಥಿಕ ಚೈತನ್ಯ ಖಂಡಿತ ಇರಲಿಲ್ಲ. ನೇಯ್ಗೆ ಕೆಲಸ ಮಾಡುತ್ತಿದ್ದ ಅಪ್ಪನ ದುಡಿಮೆ ಕುಟುಂಬ ನಿರ್ವಹಣೆಗೆ ಸಾಲುತ್ತಿಲ್ಲ ಅನ್ನಿಸಿದಾಗ ತಾಯಿ, ತಂಗಿಯೊಂದಿಗೆ ಕೂಲಿ ಕೆಲಸಕ್ಕೆ ಹೆಗಲು ಕೊಟ್ಟರು ಸಂಗಮೇಶ. ಈ ಮಧ್ಯೆಯೇ ಅಂಜುಟಗಿಯ ಸರಕಾರಿ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ನಡೆಯುತ್ತಿತ್ತು. ಹೀಗಿರುವಾಗ ಭೀಕರ ಬರ ಬಂತೆಂದು ಅಂಜುಟಗಿಯಿಂದ ಗುಲಬರ್ಗಾ ಜಿಲ್ಲೆಯ ಭೀಮರಾಯನ ಗುಡಿಗೆ ಸಂಗಮೇಶರ ಕುಟುಂಬ ಗುಳೇ ಹೋಯಿತು. ಅಲ್ಲಿ ಹತ್ತಿರದ ಬಂಧುವೊಬ್ಬರು ಹೋಟೆಲ್ ಚಾಕರಿಯ ಕೆಲಸವನ್ನು ಕುಟುಂಬದ ಎಲ್ಲರಿಗೂ ಕೊಟ್ಟರು. ಸದ್ಯ, ಬದುಕಿಗೆ ಒಂದು ನೆಲೆ ಆಯ್ತು ಎಂದು ಸಂಗಮೇಶರ ತಂದೆ-ತಾಯಿ ನಿಟ್ಟುಸಿರು ಬಿಡುವ ಹೊತ್ತಿಗೇ, ಅದೇ ಬಂಧು ನಿಮ್ಮನ್ನು ಕೆಲಸದಿಂದ ತೆಗೆದಿದೀನಿ, ನಡೀರಿ ಇಲ್ಲಿಂದ!' ಅಂದರಂತೆ. ಪರಿಣಾಮ, ಅಪರಿಚಿತ ಊರಲ್ಲಿ ಮತ್ತೆ ಬೀದಿಪಾಲು!

ಹೀಗೇ ಒಂದೆರಡು ದಿನ ಫುಟ್‌ಪಾತ್ ವಾಸದಲ್ಲೇ ಕಳೆದು ಹೋದ ಮೇಲೆ ಆಕಸ್ಮಿಕವಾಗಿ ಸಿಕ್ಕ ಇನ್ನೊಬ್ಬರು ಪರಿಚಿತರು, ಈ ಕುಟುಂಬದ ಕಥೆ ಕೇಳಿ ಕರಗಿದರು. ಭೀಮರಾಯನ ಗುಡಿಯಿಂದ ಇಪ್ಪತ್ತು ಕಿ.ಮೀ. ದೂರದ ಗೂಗಿ ಎಂಬಲ್ಲಿ ಒಂದು ಪುಟ್ಟ ಮನೆ ಕೊಟ್ಟು ಇರುವಷ್ಟು ದಿನ ಇದ್ದು ಹೋಗಿ' ಅಂದರು. ಮತ್ತೆ ನೇಯ್ಗೆ ಕೆಲಸ ಆರಂಭಿಸಿದ ಸಂಗಮೇಶರ ತಂದೆ, ಮಗನನ್ನು ಶಾಲೆಗೆ ಸೇರಿಸಲೆಂದು ಹೋದರೆ ಅಧ್ಯಾಪಕರು ಹೇಳಿದರಂತೆ: ನಿನ್ನ ಮಗ ಹಿಂದೆ ಓದ್ತಾ ಇದ್ದನಲ್ಲ? ಅಲ್ಲಿಂದ ಟಿ.ಸಿ. ತಗೊಂಡು ಬಾ'.

ಅವತ್ತಿನ ಪರಿಸ್ಥಿತಿ ಎಷ್ಟು ದಾರುಣವಾಗಿತ್ತೆಂದರೆ, ತಮ್ಮ ಹುಟ್ಟೂರಿಗೆ ಹೋಗಿ ಮಗನ ಟಿ.ಸಿ. ತರುವ ತ್ರಾಣ ಕೂಡ ಸಂಗಮೇಶರ ತಂದೆಗಿರಲಿಲ್ಲ. ಪರಿಣಾಮ, ಶಾಲೆಗೆ ಒಂದಿಷ್ಟು ದಿನ ಗುಡ್‌ಬೈ ಹೇಳಿದ ಸಂಗಮೇಶ, ಕೂಲಿಗೆ ಹೋಗುವುದು, ಸ್ಮಶಾನದಿಂದ ಕಟ್ಟಿಗೆ ಕಡಿದು ತರುವುದು... ಇಂಥ ಕಾಯಕದಲ್ಲೇ ದಿನ ಕಳೆದರು. ಕಡೆಗೊಂದು ದಿನ ಚಿಕ್ಕಪ್ಪನ ನೆರವಿನಿಂದ ಸಂಗಮೇಶರ ಕುಟುಂಬ ಸ್ವಗ್ರಾಮಕ್ಕೆ ಮರಳಿತು. ತಕ್ಷಣದಿಂದಲೇ ಶಾಲೆಯ ಸಹವಾಸ ಆರಂಭಿಸಿದ ಸಂಗಮೇಶರನ್ನು ಅದೊಂದು ರಾತ್ರಿ ಪಕ್ಕ ಕೂರಿಸಿಕೊಂಡ ತಂದೆ-ತಾಯಿ ಇಬ್ಬರೂ ಏಕಕಾಲಕ್ಕೆ ಹೇಳಿದರಂತೆ: ಕಂದಾ, ನೀನು ದೊಡ್ಡ ಆಫೀಸರ್ ಆಗಬೇಕು. ನಮಗೆ ಬಂದ ಕಷ್ಟ ನಿನಗೆ ಬರಬಾರದು...'

ಈ ಮಾತು ಕೇಳಿಸಿಕೊಂಡಾಗ ಸಂಗಮೇಶ ಇನ್ನು ಏಳನೇ ಕ್ಲಾಸು ದಾಟಿರಲಿಲ್ಲ. ಅವತ್ತಿನ ಸಂದರ್ಭದಲ್ಲಿ ಅವರಿಗೆ ಭವಿಷ್ಯದ ದಿನ' ಎಂಬ ಪದಕ್ಕೆ ಅರ್ಥವೇ ಗೊತ್ತಿರಲಿಲ್ಲ. ಆದರೂ ಭಂಡ ಧೈರ್ಯದಿಂದ ತಮಗೆ ತಾವೇ ಹೇಳಿಕೊಂಡಂತೆ: ಮುಂದೊಂದು ದಿನ ನಾನೂ ಒಬ್ಬ ಆಫೀಸರ್ ಆಗೇ ಆಗ್ತೀನಿ!' ಈ ಮಾತು ಮುಂದೊಂದು ದಿನ ನಿಜವಾಗಬಹುದೆಂಬುದಕ್ಕೆ ಹಿನ್ನೆಲೆಯಾಗಿ, ಅವತ್ತು ಗೋಡೆಯ ಮೇಲೆ ಹಲ್ಲಿ ಲೊಚಗುಡಲಿಲ್ಲ. ದೇವರ ಪಟದ ಮೇಲಿಂದ ಹೂವೂ ಬೀಳಲಿಲ್ಲ.

ಹೀಗಿದ್ದಾಗಲೇ ಅಂಜುಟಗಿಯಿಂದ ಭರ್ತಿ ಹನ್ನೆರಡು ಕಿ.ಮೀ. ದೂರವಿದ್ದ ಬಳ್ಳೊಳ್ಳಿಯಲ್ಲಿ ಪ್ರೌಢಶಾಲೆಗೆ ಸೇರಿದ ಸಂಗಮೇಶ ನಂತರದ ಎರಡು ವರ್ಷ ಕಾಲ ದಿನಕ್ಕೆ ಇಪ್ಪತ್ನಾಲ್ಕು ಕಿ.ಮೀ. ನಡೆದು ಒಂಭತ್ತನೇ ತರಗತಿ ಮುಗಿಸಿದರು. ಈ ಸಂದರ್ಭದಲ್ಲಿ ನೆರವಿಗೆ ಬಂದವರು ಸಂಗಮೇಶರರ ಚಿಕ್ಕಪ್ಪ ಡಾ. ಪ್ರಭು ಉಪಾಸೆ. ಅವರು ಸಂಗಮೇಶನನ್ನು ಧಾರವಾಡಕ್ಕೆ ಕರೆತಂದು ಅಲ್ಲಿನ ಕರ್ನಾಟಕ ಹೈಸ್ಕೂಲ್‌ನಲ್ಲಿ ಹತ್ತನೇ ತರಗತಿಗೆ ಸೇರಿಸಿದರು. ಉಳಿಯಲಿಕ್ಕೆ ಒಂದು ಹಾಸ್ಟೆಲ್ ತೋರಿಸಿಕೊಟ್ಟರು. ಹಾಸ್ಟೆಲ್‌ನಲ್ಲಿ ಬೆಳಗ್ಗೆ, ರಾತ್ರಿ ಊಟದ ವ್ಯವಸ್ಥೆಯಿತ್ತು. ಅದಕ್ಕೆ ಮಾಸಿಕ ನೂರೈವತ್ತು ರೂ. ಶುಲ್ಕ! ಈ ಹಣವನ್ನು ಅಪ್ಪ-ಅಮ್ಮ ಕೂಲಿ ಮಾಡಿ ಕಳಿಸಬೇಕಿತ್ತು. ಒಂದು ವೇಳೆ ಹೆಚ್ಚು ಕಮ್ಮಿಯಾದರೆ ಹಾಸ್ಟೆಲ್‌ನಿಂದಲೇ ಗೇಟ್‌ಪಾಸ್ ಸಿಗಬಹುದು ಅನ್ನಿಸಿದಾಗ ಬೆಳಗ್ಗೆ ಹಾಗೂ ಸಂಜೆಯ ವೇಳೆ ಲಾಟರಿ ಟಿಕೆಟ್ ಮಾರಲು ನಿಂತರು ಸಂಗಮೇಶ. ಹೀಗೆ ಲಾಟರಿ ಟಿಕೆಟ್ ಮಾರಿದ್ದಕ್ಕೆ ಕಮಿಷನ್ ಹಣ ಸಿಗುತ್ತಿತ್ತಲ್ಲ? ಅದು ಹಾಸ್ಟೆಲಿನ ಫೀ ಆಗುತ್ತಿತ್ತು. ಹೇಳಿ ಕೇಳಿ ಅದು ಹರೆಯದ ವಯಸ್ಸು. ಆಗ ಮಧ್ಯಾಹ್ನದ ವೇಳೆ ಹಸಿವಾಗ್ತಾ ಇರಲಿಲ್ವ ಎಂದರೆ ಸಂಗಮೇಶ ಹೇಳುತ್ತಾರೆ: ಹಸಿವಾಗ್ದೇ ಇರುತ್ತಾ ಸಾರ್? ಆಗ್ತಿತ್ತು. ಆಗೆಲ್ಲ ಚಿಲ್ಲರೆ ಕಾಸಿಗೆ ಕಡ್ಲೆಬೀಜ ಖರೀದಿಸಿ ತಿಂದು ಹೊಟ್ಟೆ ತುಂಬ ನೀರು ಕುಡೀತಿದ್ದೆ. ಹತ್ತನೇ ತರಗತಿಯಿಂದ ಬಿ.ಎ. ಕಡೆಯ ವರ್ಷದವರೆಗೂ ಎರಡು ಹೊತ್ತು ಊಟ ಹಾಗೂ ಕಡಲೇಬೀಜವೇ ನನ್ನ ಕಾಪಾಡಿತು...'

ಹೇಳಿ ಕೇಳಿ ಅದು ಧಾರವಾಡದ ಪರಿಸರ. ಅದೇ ಕಾರಣದಿಂದ ಪಿಯೂಸಿ ದಾಟುವುದರೊಳಗೆ ಸಂಗಮೇಶರಲ್ಲಿ ಒಬ್ಬ ಕವಿ ಹುಟ್ಟಿಕೊಂಡಿದ್ದ. ನಾಟಕಕಾರ ಜತೆಯಾಗಿದ್ದ. ಲೇಖಕ ಕೈ ಹಿಡಿದಿದ್ದ. ಪರಿಣಾಮ, ಒಂದೊಂದೇ ವೈಚಾರಿಕ ಬರಹಗಳು ಹೊರಬಂದವು. ಅದನ್ನು ಕಂಡದ್ದೇ, ಒಂದು ಸಮುದಾಯಕ್ಕೆ ಮೀಸಲಾಗಿದ್ದ ಹಾಸ್ಟೆಲಿನ ಆಡಳಿತ ಮಂಡಳಿ ಸಿಟ್ಟಾಯಿತು. ಜಾತಿಯೇ ಬೇಡ ಅಂತ ಬರೀತೀಯೇನೋ ಹುಡುಗಾ' ಎಂದು ಗದರಿಸಿ ಸಂಗಮೇಶನನ್ನು ಹಾಸ್ಟೆಲಿನಿಂದ ಹೊರಹಾಕಿತು! ಉಹುಂ, ಆಗಲೂ ಸಂಗಮೇಶ ಜಗ್ಗಲಿಲ್ಲ. ಬದಲಿಗೆ, ಪುಟ್ಟ ಲಗ್ಗೇಜಿನೊಂದಿಗೆ ಧಾರವಾಡದ ವಿದ್ಯಾವರ್ಧಕ ಸಂಘಕ್ಕೆ ಬಂದ. ಸಂಘದ ಅಧ್ಯಕ್ಷರ ಒಪ್ಪಿಗೆ ಪಡೆದು ಒಂದಿಷ್ಟು ದಿನ ಅಲ್ಲೇ ಕಳೆದ. ಹಾಸ್ಟೆಲಿನ ಆಶ್ರಯ ಕೈ ತಪ್ಪಿದ್ದರಿಂದ ಊಟಕ್ಕೂ ಸಂಚಕಾರ ಬಂದಿತ್ತು. ಆಗ ಮತ್ತೆ ನೀರು ಕುಡಿದೇ ಹೊಟ್ಟೆ ತುಂಬಿಸಿಕೊಳ್ಳುತ್ತಾ, ಸಂಕಟ ಅನ್ನಿಸಿದಾಗೆಲ್ಲ ತನಗೆ ತಾನೇ ಹೇಳಿಕೊಳ್ಳುತ್ತಿದ್ದ: ಮುಂದೊಂದು ದಿನ ನಾನು ಆಫೀಸರ್ ಆಗ್ತೀನಲ್ಲ, ಆಗ ಈ ಸಂಕಟಗಳ ಮೇಲೆ ಸೇಡು ತೀರಿಸಿಕೊಳ್ತೇನೆ!'

ಹೀಗಿದ್ದಾಗಲೇ ಪರಿಚಿತರೊಬ್ಬರು ಉಳಿಯಲಿಕ್ಕೆ ಒಂದು ರೂಂ ಕೊಡಿಸ್ತೀನಿ ಬನ್ನಿ ಎಂದು ಕರೆದೊಯ್ದು ಒಂದು ಗೌಡಾನ್‌ಗೆ ತಲುಪಿಸಿದರಂತೆ. ಅದನ್ನು ಈಗಲೂ ಭಯದಿಂದಲೇ ನೆನಪು ಮಾಡಿಕೊಳ್ಳುವ ಸಂಗಮೇಶ ಹೇಳುತ್ತಾರೆ: ಅವರೇನೋ ಸದಾಶಯದಿಂದಲೇ ನನಗೆ ಉಳಿಯಲೊಂದು ಜಾಗ ತೋರಿಸಿದರು ನಿಜ. ಆದರೆ ಅದು ಥೇಟ್ ತಿಪ್ಪೆಗುಂಡಿ ಇದ್ದಂತಿತ್ತು. ಆ ಕಸದ ರಾಶಿಯ ಮಧ್ಯೆಯೇ ಪುಸ್ತಕಗಳೊಂದಿಗೆ, ಕನಸುಗಳೊಂದಿಗೆ ನಾನೂ ಉಳಿದುಕೊಂಡೆ. ರಾತ್ರಿಯ ವೇಳೆ ಇದ್ದಕ್ಕಿದ್ದಂತೆ ಗೋಡೆಯ ಮೇಲೆ ನಾಗರಹಾವು ಪ್ರತ್ಯಕ್ಷವಾಗುತ್ತಿತ್ತು. ಆಗೊಮ್ಮೆ ಈಗೊಮ್ಮೆ ಬುಸ್‌ಬುಸ್ ಎಂದು ಪೂತ್ಕರಿಸಿ ಹೆದರಿಸುತ್ತಿತ್ತು. ಈ ಸಂಕಟದ ಮಧ್ಯೆಯೇ ಓದಿದೆ. ಧಾರವಾಡದಲ್ಲೇ ಇದ್ದರೆ ಬದುಕೋದು ಕಷ್ಟವಾಗುತ್ತದೆ. ಅದರ ಬದಲು ಬೆಂಗಳೂರಿಗೆ ಹೋದರೆ ಟಿವಿ ಸೀರಿಯಲ್‌ಗಳಲ್ಲಿ ನಟಿಸಿಕೊಂಡಾದರೂ ಬದುಕಬಹುದು ಅನ್ನಿಸಿದಾಗ, ಎರಡನೇ ಯೊಚನೆ ಮಾಡದೆ ಒಂದು ಟ್ರಂಕಿಗೆ ಲಗೇಜು ತುಂಬಿಕೊಂಡು ಬೆಂಗಳೂರಿಗೆ ಬಂದೇಬಿಟ್ಟೆ...'

ಒಂದು ಭಂಡ ಧೈರ್ಯದೊಂದಿಗೆ ಈ ಸಂಗಮೇಶ ಅಲಿಯಾಸ್ ಸಂಗಪ್ಪ ಬೆಂಗಳೂರಿಗೆ ಬಂದದ್ದು 1998ರಲ್ಲಿ. ಅವತ್ತಿಗೆ ಯಾರೆಂದರೆ ಯಾರೂ ಇಲ್ಲದ ಬೆಂಗಳೂರಿನಲ್ಲಿ ಅವರದು ಫುಟ್‌ಪಾತ್ ಬದುಕು. ನಿಲ್ಲಲು ನೆಲೆಯಿಲ್ಲ, ಮಲಗಲು ಮನೆಯಿಲ್ಲ, ಹಸಿವು ಹಿಂಗಿಸಲು ಆಹಾರವಿಲ್ಲದ ಸಂದರ್ಭದಲ್ಲಿ ಅವರಿಗೆ ಕಾಣಿಸಿದ್ದು ಸಾಗರ್ ಚಿತ್ರಮಂದಿರದ ಪಕ್ಕವಿರುವ ಬ್ರಹ್ಮವಿದ್ಯಾಶ್ರಮದ ಕಟ್ಟಡ. ಒಂದು ಬೆರಗಿನಿಂದಲೇ ಅಲ್ಲಿಗೆ ಹೋದ ಸಂಗಮೇಶ, ಅಲ್ಲಿನ ಸ್ವಾಮೀಜಿಯ ಬಳಿ ಆಶ್ರಯ ಕೇಳಿದರು. ಅವರು ವಿಸಿದ ಎಲ್ಲ ಕಂಡೀಷನ್‌ಗಳಿಗೂ ಒಪ್ಪಿಕೊಂಡರು. ಆಶ್ರಮದಲ್ಲಿ ಕಸ ಗುಡಿಸಿದರು. ಮುಸುರೆ ತಿಕ್ಕಿದರು. ಈ ಸಂದರ್ಭದಲ್ಲೇ ಸಿನಿಮಾ ಡೈರೆಕ್ಟರಿಯೊಂದು ಸಿಕ್ಕಾಗ ಅದರಲ್ಲಿದ್ದ ನಟರು, ನಿರ್ದೇಶಕರ ಮನೆಗೆ ಹೊರಗಿನಿಂದ ಫೋನ್ ಮಾಡಿ- ಸರ್, ನನಗೊಂದು ಪಾತ್ರ ಕೊಡ್ರಿ' ಎಂದು ಕೇಳಲು ಆರಂಭಿಸಿದರು. ಹೀಗಿದ್ದಾಗಲೇ ಇವರ ಫೋನ್ ಕರೆಗೆ ಉತ್ತರಿಸುತ್ತಾ ನಟ ಕಾಶೀನಾಥ್ ಹೇಳಿದರಂತೆ: ಮಾರಾಯ, ನನಗೇ ಕೆಲ್ಸ ಇಲ್ಲ. ನಿನಗೆ ಹೇಗಪ್ಪಾ ಪಾತ್ರ ಕೊಡಲಿ?'

ಈ ಸಂದರ್ಭದಲ್ಲಿಯೇ ಸಂಗಮೇಶನ ಬದುಕು ಬ್ರಹ್ಮ ವಿದ್ಯಾಶ್ರಮದಿಂದ ಗುಬ್ಬಿ ತೋಟದಪ್ಪ ಹಾಸ್ಟೆಲ್‌ಗೆ ಶಿಫ್ಟಾಯಿತು. ಅಲ್ಲಿದ್ದುಕೊಂಡೇ ಎಂ.ಎ. ಮುಗಿಸಿದರು. ಹಿಂದೆಯೇ ಯುಜಿಸಿ ಪರೀಕ್ಷೆ ಬರೆದ ಸಂಗಮೇಶ, ಅದೇ ವೇಳೆಗೆ ಕೆಎಎಸ್ ಪರೀಕ್ಷೆಯನ್ನೂ ಬರೆದರು. ಈ ಮಧ್ಯೆ ಧಾರವಾಡದ ಆನಂದ ಪಾಟೀಲ ಎಂಬುವರ ಕಡೆಯಿಂದ ಪರಿಚಯವಾದ ಮೈಸೂರ್ ಬ್ಯಾಂಕ್ ಉದ್ಯೋಗಿ ಅಶ್ವತ್ಥ ಕುಲಕರ್ಣಿ, ತಕ್ಷಣವೇ ಈ ಹುಡುಗನನ್ನು ಕಿರುತೆರೆ ನಿರ್ದೇಶಕ ಬ.ಲ. ಸುರೇಶ್‌ಗೆ ಪರಿಚಯಿಸಿದರು. ಅವತ್ತು ಸುರೇಶ್ ಅವರು ಮನೆತನ' ಎಂಬ ಧಾರಾವಾಹಿಯ ಕಥೆ-ಚಿತ್ರಕಥೆ-ಸಂಭಾಷಣೆಯ ಜವಾಬ್ದಾರಿ ಹೊತ್ತಿದ್ದರು. ಆ ಕಾಲದಲ್ಲಿ ಅತ್ಯಂತ ಜನಪ್ರಿಯವಾಗಿದ್ದ ಮನೆತನ' ಧಾರಾವಾಹಿಗೆ ಸಂಭಾಷಣೆ ಬರೆಯಲು ನಿಂತ ಸಂಗಮೇಶ ನಂತರ ತಿರುಗಿ ನೋಡಲಿಲ್ಲ.

ಇಂಥದೊಂದು ಭರವಸೆಯ ಪ್ರಯಾಣದಲ್ಲಿ ಸಿಕ್ಕ ಸ್ಟೇಷನ್ನೇ- ಸಿಲ್ಲಿಲಲ್ಲಿ! ಸಿಹಿಕಹಿ ಚಂದ್ರು ನಿರ್ದೇಶನದ ಈ ಧಾರಾವಾಹಿಯಲ್ಲಿ ಸಂಗಮೇಶ್‌ಗೆ ದಕ್ಕಿದ್ದು ಕಾಂಪೌಂಡರ್ ಪಾತ್ರ. ಆರಂಭದಲ್ಲಿ ತಿಂಗಳಿಗೆ ಒಂದು ದಿನ ಮಾತ್ರ ನಿಂಗೆ ಕೆಲಸ ಅಂದಿದ್ದರಂತೆ ಚಂದ್ರು. ಆದರೆ ಮುಂದೆ ಈ ಸಂಗಮೇಶ ಅದೆಷ್ಟು ಖ್ಯಾತಿ ಪಡೆದರೆಂದರೆ, ತಿಂಗಳಿಡೀ ಅವರ ಪಾತ್ರ ಬೆಳೆಸಲೇಬೇಕಾದ ಅನಿವಾರ್‍ಯತೆ ಸಿಲ್ಲಿ ಲಲ್ಲಿ' ತಂಡಕ್ಕೆ ಬಂತು! ಈ ಮಧ್ಯೆ ಸಂಗಮೇಶರ ಕೆಎಎಸ್ ಪರೀಕ್ಷೆಯ ಫಲಿತಾಂಶ ಬಂದಿತ್ತು. ಇಂಗ್ಲಿಷಿನಲ್ಲಿ ಫೇಲ್ ಎಂದಿದ್ದ ಫಲಿತಾಂಶ ಕಂಡು ಸಂಗಮೇಶ್‌ಗೆ ಆಶ್ಚರ್ಯ. ಎಂ.ಎ. ಪಾಸಾಗಿರುವ ತಾನು ಕೆಎಎಸ್‌ನ ಇಂಗ್ಲಿಷ್‌ನಲ್ಲಿ ಫೇಲಾಗಲು ಸಾಧ್ಯವೇ ಇಲ್ಲ ಎಂಬುದು ಅಚ್ಚರಿಗೆ ಕಾರಣ. ತಕ್ಷಣವೇ ಅವರು ಕೋರ್ಟಿನ ಮೊರೆ ಹೋದರು. ಸ್ವಾರಸ್ಯವೆಂದರೆ, ಅವರಲ್ಲಿ ಲಾಯರ್‌ಗೆ ಕೊಡುವುದಕ್ಕೂ ಕಾಸಿರಲಿಲ್ಲವಂತೆ. ಅದನ್ನೂ ಗೆಳೆಯರಿಂದ ಸಾಲ ಮಾಡಿ ಪೂರೈಸಿದರಂತೆ. (ಅಷ್ಟೇ ಅಲ್ಲ, 5000 ರೂ. ಕೇಳಿದ ಲಾಯರ್‌ಗೆ 1500 ರೂ. ನೀಡಿ ನನ್ನಲ್ಲಿ ಇರೋದೇ ಇಷ್ಟು. ತಪ್ಪು ತಿಳೀಬೇಡಿ ಪ್ಲೀಸ್ ಅಂದರಂತೆ!) ಮುಂದೆ, ಸಂಗಪ್ಪನ ಉತ್ತರ ಪತ್ರಿಕೆ ನ್ಯಾಯಾಲಯದ ಮುಂದೆ ಬಂತು. ಪತ್ರಿಕೆಯ ಮರು ಪರಿಶೀಲನೆ ನಡೆದಾಗ, ಫೇಲಾಗಿದ್ದ ಸಂಗಪ್ಪ, ಫಸ್ಟ್‌ಕ್ಲಾಸ್‌ನಲ್ಲಿ ಪಾಸಾಗಿದ್ದರು! ನಂತರದ ಕೆಲವೇ ದಿನಗಳಲ್ಲಿ ಬಿಬಿಎಂಪಿಯ ಅಸಿಸ್ಟೆಂಟ್ ಕಂಟ್ರೋಲರ್ ಹುದ್ದೆಗೆ ಪೋಸ್ಟಿಂಗೂ ಆಯಿತು. ಈಗ ಹೇಗಿದ್ದಾರೆ ಈ ಸರಕಾರಿ ಅಧಿಕಾರಿ?

ಈ ಪ್ರಶ್ನೆಗೆ ಅವರಿಂದಲೇ ಉತ್ತರ ಕೇಳೋಣ. ಓವರ್ ಟು ಸಂಗಪ್ಪ ಉಪಾಸೆ: ಬದುಕು ಇಷ್ಟೊಂದು ಸುಂದರ ಅಂದ್ಕೊಂಡಿರಲಿಲ್ಲ. ಧಾರವಾಡದಿಂದ ಬೆಂಗಳೂರಿಗೆ ಬಂದಾಗ ಕಣ್ಣಿಗೆ ಬಟ್ಟೆ ಕತ್ತಲಲ್ಲಿ ಬಿಟ್ಟಂತಾಗಿತ್ತು. ಆ ದಿನಗಳಲ್ಲಿ ಫುಟ್‌ಪಾತ್‌ನಲ್ಲಿ ಮಲಗಿದೆ, ಕಸ, ಕುಸುರೆ ತಿಕ್ಕಿದೆ. ಒಂದೇ ಹೊತ್ತು ಊಟ ಮಾಡಿದೆ. ನೀರು ಕುಡಿದೇ ಹೊಟ್ಟೆ ತುಂಬಿಸಿಕೊಂಡೆ. ಇದೆಲ್ಲವೂ ನಡೆದದ್ದು ಇದೇ ಬೃಹತ್ ಬೆಂಗಳೂರಿನ ಮಡಿಲಲ್ಲಿ. ಈಗ, ಅದೇ ಬೆಂಗಳೂರು ಮಹಾನಗರ ಪಾಲಿಕೆಯ ಅಸಿಸ್ಟೆಂಟ್ ಕಂಟ್ರೋಲರ್ ನಾನು. ನನ್ನದು ಅಹಂಕಾರದ ಮಾತಲ್ಲ, ಹೆಮ್ಮೆಯ ಮಾತು. ನಾನೀಗ ಏನಾಗಿದ್ದೀನೋ ಅದಕ್ಕೆ ಈ ಬೃಹತ್ ಬೆಂಗಳೂರೇ ಕಾರಣ. ಆಫೀಸರ್ ಆಗಬೇಕು ಎಂಬ ಕನಸಿತ್ತು. ಅದು ನನಸಾಗಿದೆ. ನಾನು ಅನುಭವಿಸಿದ ಕಷ್ಟ ನನ್ನ ಕಿರಿಯರಿಗೆ ಬರಬಾರದು ಅನ್ನೋದು ನನ್ನಾಸೆ. ಅದಕ್ಕಾಗಿ ನನ್ನಿಂದ ಸಾಧ್ಯವಾದ ಎಲ್ಲ ಸಹಾಯ ಮಾಡಲು ನಾನು ಯಾವತ್ತೂ ಸಿದ್ಧ. ನನ್ನ ಯಶಸ್ಸಿನ ಹಾದಿಯಲ್ಲಿ ನನಗೆ ಮೆಟ್ಟಿಲಾದ ಎಲ್ಲರಿಗೂ ನಾನು ಬದುಕಿಡೀ ಋಣಿ....'

ಅಂದಹಾಗೆ, ಸಂಗಮೇಶ ಉಪಾಸೆಯವರನ್ನು ಮಾತಾಡಿಸಬೇಕೆ? 98454 71514 ನಂಬರಿಗೆ ಕರೆ ಮಾಡಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X