• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮತ್ತೊಮ್ಮೆ ನೆನಪಾದರು ಪೂರ್ಣಚಂದ್ರ ತೇಜಸ್ವಿ...

By Super
|
ಒಂದಿಡೀ ತಲೆಮಾರಿಗೆ ಆದರ್ಶ'ದಂತೆ ಬದುಕಿದವರು ತೇಜಸ್ವಿ. ಅವರು ನಮ್ಮೊಂದಿಗಿಲ್ಲದೆ ಅನೇಕ ವರ್ಷ ಕಳದವು ನಿಜ. ಆದರೆ ತೇಜಸ್ವಿಯವರು ಇಲ್ಲ' ಎನ್ನಲು ಮನಸ್ಸು ಒಪ್ಪುವುದೇ ಇಲ್ಲ. ಅಪರಿಚಿತರಿಗೆ ಮಾತ್ರವಲ್ಲ, ತುಂಬ ಪರಿಚಿತರಿಗೂ ಕಡೆಯ ದಿನದ ತನಕವೂ ಒಂದು ಬೆರಗಿನಂತೆಯೇ ಕಾಣಿಸಿಕೊಂಡವರು ತೇಜಸ್ವಿ. ಅವರನ್ನು ತುಂಬ ಹತ್ತಿರದಿಂದ ಕಂಡ ವಿನಯ ಮಾಧವರ ಬರಹ ಇಲ್ಲಿದೆ... ಅಂದ ಹಾಗೆ, ಸೆ.8 ಪೂರ್ಣಚಂದ್ರ ತೇಜಸ್ವಿ ಅವರ ಹುಟ್ಟುಹಬ್ಬ.

ನನಗನ್ನಿಸುತ್ತೆ, ಎಲ್ಲಾ ಜೀವಂತ ವಸ್ತುಗಳಂತೆ, ಭಾಷೆಗೂ ಸಾವಿದೆ. ಇದಕ್ಕೆ ಕನ್ನಡ ಕೂಡ ಹೊರತಲ್ಲ. ಎಂದೋ ಒಂದು ದಿನ ಅದೂ ಕೂಡ ಸಂಸ್ಕೃತದಂತೆ ಸಾಯುತ್ತೆ. ಇದನ್ನೇನೂ ನಾನು ಉಳಿಸಿಕೊಳ್ಳುತ್ತೇನೆ ಅನ್ನೋ ಭ್ರಮೆಯಲ್ಲಿಲ್ಲ. ಆದರೆ ನಾನು ಸಾಯುವಾಗ ಕನ್ನಡವನ್ನು ಉಳಿಸಿಕೊಳ್ಳಬಹುದಿತ್ತೇನೋ ಎಂಬ ಪಾಪ ಪ್ರಜ್ಞೆ ಕಾಡುತ್ತದೆ. ಆ ಪಾಪ ಪ್ರಜ್ಞೆಗೆ ಉತ್ತರಿಸಲು ಈ ಕಸರತ್ತು...

ನೀನು ಒಂದು ಕೆಲಸ ಮಾಡು. ಚಂದ್ರಶೇಖರ ಕಂಬಾರರ ನಂಬರ್ ಇದೆಯಲ್ಲ? ಬೆಂಗಳೂರಿಗೆ ಹೋದಾಗ ಅವರನ್ನು ಭೇಟಿ ಮಾಡು. ನೀವೆಲ್ಲಾ ಜರ್ನಲಿಸ್ಟ್‌ಗಳು ಸೇರಿ ಆ ರಾಜೀವ್‌ಚಾವ್ಲಾ ತಲೆಗೆ ಸ್ವಲ್ಪ ಬುದ್ದಿ ತುಂಬಿ. ಕನ್ನಡ ಸಾಫ್ಟ್‌ವೇರ್, ಮೈಕ್ರೋಸಾಫ್ಟ್ ಕೈಯಲ್ಲಿ ಕೊಟ್ಟು ಇನ್ನೊಂದು ಗುಲಾಮಗಿರಿಗೆ ಬೀಳೋದು ಬೇಡ...' ಹಾಗಂತ ಗಂಭೀರವಾಗಿ ಹೇಳಿದರು ತೇಜಸ್ವಿ. ಈ ಮಾತು ಕೇಳಿ ಅದುರಿಬಿದ್ದೆ! ನಂತರ, ಎಲ್ಲಕ್ಕೂ ಕೋಲೆ ಬಸವನಂತೆ ತಲೆ ಅಲ್ಲಾಡಿಸುತ್ತಾ ಕತ್ತಲಲ್ಲಿ, ತೇಜಸ್ವಿಯವರ ಗೇಟಿನ ಹೊರಗೆ ನಿಲ್ಲಿಸಿದ್ದ ಕಾರಿನತ್ತ ಕಾಲು ಹಾಕಿದೆ. ಈ ತೇಜಸ್ವಿಯೇ ಹಾಗೆ. ಅವರನ್ನು ಪ್ರತಿ ಬಾರಿ ಭೇಟಿಯಾದಾಗಲೂ ಒಂದು ಬಾಂಬ್ ಸಿಡಿಯುತ್ತಿತ್ತು. ಅವರನ್ನು ಮೊದಲ ಬಾರಿ ಭೇಟಿಯಾದಾಗಲೂ ಅಷ್ಟೇ, ಆಗ- ಕೆಂಜಿಗೆ ಪ್ರದೀಪ್ ಜೊತೆ, ಭದ್ರಾ ಅಭಯಾರಣ್ಯದಲ್ಲಿ ಬಿದ್ದ ಬೆಂಕಿಯ ವಿಷಯ ಚರ್ಚಿಸಲು ಹೋಗಿದ್ದೆ. ಪೂರ್ವಾಪರ ವಿಚಾರಿಸಿಯೇ ಮನೆಯೊಳಗೆ ಬಿಟ್ಟಿದ್ದರು ತೇಜಸ್ವಿ. ಅರಣ್ಯಾಧಿಕಾರಿಗಳು- ಬರೀ ನೂರಿನ್ನೂರು ಎಕರೆ ಸುಟ್ಟಿದೆ' ಎಂದು ಸುಳ್ಳು ಹೇಳಿದ್ದರು. ನಾನು ಹೋಗಿ ನೋಡಿದಾಗ ಅದರ ಹತ್ತು ಪಟ್ಟು ಹೆಚ್ಚು ಕಾಡು ನಾಶವಾಗಿತ್ತು.

ವಿಷಯ ತಿಳಿಯುತ್ತಲೇ ತೇಜಸ್ವಿ ಕೆರಳಿ ಹೀಗೆಂದರು: ರೀ ಪ್ರದೀಪ್, ನಾಳೆ ಬೆಳಿಗ್ಗೆ ನಾವು ಮೂರೂಜನ ಅಲ್ಲಿಗೆ ಹೋಗೋಣ, ಇವನು ಹೇಳಿದ್ದೇನಾದರೂ ಸತ್ಯವಾಗಿದ್ದರೆ, ಆ ಫಾರೆಸ್ಟ್ ಆಫೀಸರ್‌ಗಳಿಗೆ ಚಪ್ಪಲಿ ಬಿಚ್ಚಿ ಹೊಡಿಯೋಣ'. ತೇಜಸ್ವಿಯವರ ಈ ಮಾತು ಕೇಳಿ ಬೆರಗಾಗಿ, ಅವಾಕ್ಕಾಗಿ ಪ್ರದೀಪ್ ಮುಖ ನೋಡಿದೆ. ಅಲ್ಲಿ ಏನೂ ಬದಲಾವಣೆ ಇರಲಿಲ್ಲ. ಸದ್ಯ ಆ ನಾಳೆಯೂ ಬರಲಿಲ್ಲ. ಸಾಹಿತಿಗಳನ್ನೇ ಸೃಷ್ಟಿಸದ ಮೂಡಿಗೆರೆ ಎಂಬ ಮರುಭೂಮಿಗೆ ಶಿವಮೊಗ್ಗ ಜಿಲ್ಲೆಯ ಕಾಣಿಕೆಯಾಗಿ ಬಂದ ಓಯಸಿಸ್ ತೇಜಸ್ವಿ. ಅವರನ್ನು ಬೆರಗಾಗಿ ನೋಡಿದವರೇ ಹೆಚ್ಚು. ಅವರ ಒಡನಾಟಕ್ಕಾಗಿ ಜನ ಹಾತೊರೆದರು ನಿಜ. ಆದರೆ, ಬಾಪೂ ದಿನೇಶ್, ಕೆಂಜಿಗೆ ಪ್ರದೀಪ್, ನಂದೀಪುರ ಚರಣ್‌ರಂತಹ ಕೆಲವೇ ಜನರನ್ನು ಬಿಟ್ಟರೆ, ಅವರೊಂದಿಗಿನ ಒಡನಾಟ ಹೆಚ್ಚು ಜನಕ್ಕೆ ಸಿದ್ದಿಸಲಿಲ್ಲ. ಅವರ ಸ್ನೇಹ ಗಳಿಸುವ ರೀತಿ ಕಡೆಯವರೆಗೂ ಚಿದಂಬರ ರಹಸ್ಯವಾಗೇ' ಉಳಿದಿತ್ತು. ತೇಜಸ್ವಿಯ ಕಥೆಗಳಂತೆ ಮೂಡಿಗೆರೆಯಲ್ಲಿ ತೇಜಸ್ವಿಯ ಮೇಲೆ ದಂತ ಕಥೆಗಳೂ (ಈಗಲೂ) ಬಹಳಷ್ಟಿವೆ. ಅವರ ಒಡನಾಟ ಬಯಸಿದವರು ಪಟ್ಟ ಪಾಡು, ಅವರಿಗೆ ಸಲಹೆ ಕೊಟ್ಟವರ ಪಟ್ಟ ಪಾಡುಗಳಂತೂ, ಅವರ ಕತೆಗಳಷ್ಟೇ ರಂಜನೀಯ. ಅದರಲ್ಲಿ ನಿಜವೆಷ್ಟು, ಸುಳ್ಳೆಷ್ಟು ಬಲ್ಲವರಾರು?

ಒಮ್ಮೆ ಹೀಗಾಯಿತು: ತೇಜಸ್ವಿಯನ್ನು ಒಲಿಸಿಕೊಳ್ಳಲು ಬಂದ ಯುವಕನೊಬ್ಬ ಅವರಲ್ಲಿ ಫೋಟೋಗ್ರಫಿ ಕಲಿಯುವ ಅಭಿಲಾಷೆ ವ್ಯಕ್ತಪಡಿಸಿದ. ನಾಳೆ ಬೆಳಿಗ್ಗೆ ಮನೆ ಹತ್ತಿರ ಬಾ' ಎಂದ ತೇಜಸ್ವಿ, ಅವನ ಉತ್ತರಕ್ಕೂ ಕಾಯದೆ ಸ್ಕೂಟರನ್ನೇರಿ ಹೊರಟೇ ಬಿಟ್ಟರು. ಪಟ್ಟು ಬಿಡದ ಹುಡುಗ ತನ್ನ ಯಶಿಕಾ ಕ್ಯಾಮರಾದೊಂದಿಗೆ ಬೆಳಿಗ್ಗೆ 9.30ಕ್ಕೆ ತೇಜಸ್ವಿಯವರ ಮನೆಯ ಹತ್ತಿರ ಹಾಜರಾದ. ಅಷ್ಟರಲ್ಲೇ ತೇಜಸ್ವಿ ತೋಟದ ದಾರಿ ಹಿಡಿದಾಗಿತ್ತು. ಬೆಂಬಿಡದ ಹುಡುಗ ತೇಜಸ್ವಿಯವರನ್ನು ಕೆರೆಯ ಹತ್ತಿರ ಹಿಡಿದ. ಹುಡುಗನ ಮುಖವನ್ನೊಮ್ಮೆ ನೋಡಿದ ತೇಜಸ್ವಿ, ತಮ್ಮ ಪಾಡಿಗೆ ಗಾಳದಲ್ಲಿ ಮೀನು ಹಿಡಿಯುತ್ತಾ, ಯಾವುದೋ ಹಕ್ಕಿಗಳನ್ನು ಹುಡುಕುತ್ತಾ ಕುಳಿತರು. ಮಧ್ಯಾಹ್ನದ ಹೊತ್ತಿಗೆ ಕೆರೆ ಬಿಟ್ಟು ಪಕ್ಕದ ತೋಟದ ಕಡೆಯಿಂದ ಕಾಡಿಗೆ ಹೊರಟರು. ಸಾಯಂಕಾಲದವರೆಗೂ ಈ ಸುತ್ತಾಟ ಮುಂದುವರೆಯಿತು. ಮನೆಗೆ ವಾಪಾಸ್ ಬಂದ ನಂತರ ತೇಜಸ್ವಿ ನಾಳೆ ಸಿಗೋಣ' ಎಂದು ಮನೆಯೊಳಗೆ ಹೋದರು.

ಮರುದಿನವೂ ಅದೇ ಕತೆ. ಸಾಯಂಕಾಲ ವಾಪಸ್ಸಾದ ನಂತರ ನೀನು ಎಷ್ಟು ಫೋಟೋ ತೆಗೆದೆ?' ಎಂದು ತೇಜಸ್ವಿ ಹುಡುಗನನ್ನು ಕೇಳಿದರು. ಈ ಪ್ರಶ್ನೆಯಿಂದ ಆತ ತಬ್ಬಿಬ್ಬಾಗಿ- ಸರ್, ಈ ಬಗ್ಗೆ ನೀವೇನೂ ಹೇಳಲಿಲ್ಲ' ಎಂದು ತಡವರಿಸಿದ. ತಕ್ಷಣವೇ ಸಿಟ್ಟಾದ ತೇಜಸ್ವಿ ಅಲ್ಲಾ ಕಣಯ್ಯ, ಇಷ್ಟೊಂದು ತಿರುಗಾಡಿದಾಗಲೂ ನಿನಗೆ ಯಾವುದೇ ಸನ್ನಿವೇಶವೂ ಫೋಟೋ ತೆಗೆಯಲು ಅರ್ಹ ಎಂದು ಅನಿಸದಿದ್ದರೆ ನೀನು ಹ್ಯಾಗೆ ಫೋಟೋಗ್ರಾಫರ್ ಆಗ್ತೀಯಾ? ಯಾವುದನ್ನು ಫೋಟೋ ತೆಗೀಬೇಕು ಅಂತ ಹೇಳ್ಕೊಡೋಕ್ಕೆ ಆಗಲ್ಲಪ್ಪ. ನೀನು ತೆಗೆದ ಪೋಟೋವನ್ನು ಹೇಗೆ ತೆಗೆಯಬಹುದಿತ್ತು ಅಂತ ಬೇಕಾದರೆ ಹೇಳ್ಕೊಡಬಹುದು. ಇದು ನಮ್ಮಿಬ್ಬರಿಗೂ ಟೈಂ ವೇಸ್ಟ್, ಸರಿ. ನೀ ಹೊರಡು' ಎಂದು ಎರಡನೇ ಮಾತಿಗೂ ಕಾಯದೆ, ತಿರುಗಿ ನಡೆದೇ ಬಿಟ್ಟರು.

* * *

ಮೂಡಿಗೆರೆಯಲ್ಲಿ ಕಬ್ಬಿಣದ ಅಂಗಡಿ ಮಾಲೀಕನೊಬ್ಬನಿದ್ದ. ಆತ ತೇಜಸ್ವಿ ಅವರ ಪರಮಭಕ್ತ. ತೇಜಸ್ವಿ ಅವರ ಸ್ಕೂಟರ್ ಸದ್ದು ಕೇಳಿದ ತಕ್ಷಣ ಆತ ಅಂಗಡಿಯಿಂದ ಹೊರಗೆ ಬಂದು ಒಂದು ಪೊಲೀಸ್ ಸೆಲ್ಯೂಟ್ ಹಾಕುತ್ತಿದ್ದ. ಒಂದು ದಿನ ಆತ ಸೆಲ್ಯೂಟ್ ಹೊಡೆಯುತ್ತಿದ್ದಂತೆ ಗಲಿಬಿಲಿಗೊಂಡರು ತೇಜಸ್ವಿ. ಅವರ ಸ್ಕೂಟರ್ ಅವನ ಅಂಗಡಿಯತ್ತಲೇ ನುಗ್ಗಿತು. ಲಗುಬಗೆಯಿಂದ ಅಂಗಡಿ ಮಾಲೀಕ ಕುರ್ಚಿಯ ಧೂಳು ಹೊಡೆದು ತೇಜಸ್ವಿಯವರು ಬಂದು ತನ್ನ ಅಂಗಡಿಯಲ್ಲಿ ಕೂರುವುದನ್ನು ಕಾಯುತ್ತಾ ನಿಂತ. ಆದರೆ, ಸ್ಕೂಟರಿನಿಂದ ಇಳಿಯದ ತೇಜಸ್ವಿ ಅಲ್ಲಾ ಕಣಯ್ಯ, ದಿನಾ ನಾನು ಹೋಗಿ ಬರುವಾಗ ನನಗೆ ಸೆಲ್ಯೂಟ್ ಹೊಡೆಯುತ್ತೀಯಲ್ಲ, ದಿನಾ ಈ ಜಾಗಕ್ಕೆ ನಾನು ಬರುವಾಗ ನೀನು ಸೆಲ್ಯೂಟ್ ಹೊಡೀತಿದೀಯೋ ಇಲ್ಲವೋ ಅಂತಾ ನೋಡೋದೇ ಒಂದು ಕೆಲಸ ಆಗಿದೆ. ಅಲ್ಲಾ, ಅಕಸ್ಮಾತ್ ನಿನಗೆ ನಾನೂ ತಿರುಗಿ ಸೆಲ್ಯೂಟ್ ಹೊಡೀತಾ ಸ್ಕೂಟರ್ ಬ್ಯಾಲೆನ್ಸ್ ತಪ್ಪಿದ್ರೆ? ಅಥವಾ ಎದುರಿಂದ ಬಂದ ಜೀಪಿಗೋ, ಕಾರಿಗೋ ಡಿಕ್ಕಿ ಹೊಡಿದ್ರೆ? ಸೆಲ್ಯೂಟು ಕುಟ್ಟುವ ಮೊದಲು ಸ್ವಲ್ಪ ಯೋಚನೆ ಮಾಡಬೇಕಯ್ಯ' ಎಂದವರೇ ಸ್ಕೂಟರ್ ತಿರುಗಿಸಿ ಮೂಡಿಗೆರೆಯತ್ತ ಹೊರಟೇ ಬಿಟ್ಟರು. ಅಂದಿನಿಂದ ಅಂಗಡಿಯವನ ಸೆಲ್ಯೂಟ್ ಬಂದಾಯ್ತು.

* * *

ಬರವಣಿಗೆ ಅಷ್ಟೇ ಅಲ್ಲ. ಕಾಫಿ ಬೆಳೆಗಾರರ ಸಮಸ್ಯೆಗಳಿಗೂ ತೇಜಸ್ವಿ ಬಹಳವಾಗಿ ಸ್ಪಂದಿಸಿದರು. ಕಾಫಿ ಬೆಳೆಗೆ ಮುಕ್ತ ಮಾರುಕಟ್ಟೆ ಒದಗಿಸುವಲ್ಲಿ ತೇಜಸ್ವಿ ಅವರ ಪಾತ್ರ ಬಹಳ ದೊಡ್ಡದು. ಹಾಗೆಯೇ ಕಾಫಿ ಮಾರುಕಟ್ಟೆಗೆ ಸಹಕಾರ ಸಂಸ್ಥೆಯಾದ ಕೊಮಾರ್ಕ್ ಹುಟ್ಟಲು ತೇಜಸ್ವಿ ಅವರ ಕೊಡುಗೆ ಅಪಾರ. ಆದರೆ ಪುಡಿ ರಾಜಕಾರಣಿಗಳ ಕೈಗೆ ಸಿಕ್ಕಿದ ಕೊಮಾರ್ಕ್ ಪುಡಿಪುಡಿಯಾಯ್ತು. ತೇಜಸ್ವಿ, ಯಾವುದೇ ರಾಜಕಾರಣಕ್ಕಾಗಲಿ ಅಥವಾ ಆಂದೋಲನಕ್ಕಾಗಲಿ ಕೈಹಾಕಲಿಲ್ಲ. ಕುದುರೆಮುಖದ ವಿಷಯ ಬಂದಾಗಲೂ ಅಷ್ಟೇ, ಅವರ ನಿಲುವು ಸ್ಪಷ್ಟವಾಗಿತ್ತು. ಕಾಫಿ ಪ್ಲಾಂಟರ್‌ಗಳ ಒತ್ತುವರಿಯಿಂದ ನೂರು ವರ್ಷಗಳಲ್ಲಿ ಆಗುವ ಅನಾಹುತವನ್ನು ಒಂದೇ ದಿನದಲ್ಲಿ ಈ ಗಣಿಗಾರಿಕೆ ಮಾಡುತ್ತೆ. ಈ ಫಾರೆಸ್ಟ್ ಆಫೀಸರ್‌ಗಳಿಗೆ ಯಾವುದನ್ನು ಉಳಿಸಿಕೊಳ್ಳಬೇಕು, ಯಾವುದನ್ನು ಬಿಡಬೇಕು ಎಂಬ ಪ್ರಜ್ಞೆಯೇ ಇಲ್ಲ. ಗಣಿಗಾರಿಕೆ ಮುಂದುವರಿದರೆ ಸರ್ವನಾಶ ಖಂಡಿತ' ಎಂದು ಅವರು ಸ್ಪಷ್ಟವಾಗಿ ಹೇಳಿದ್ದರು.

ಆದರೆ, ಯು.ಆರ್. ಅನಂತಮೂರ್ತಿ ಅವರು ಕುದುರೆಮುಖದ ವಿರುದ್ದ ಆಂದೋಲನಕ್ಕೆ ಕರೆದಾಗ, ಸ್ಪಷ್ಟವಾಗಿ ನಿರಾಕರಿಸಿದರು. ಆ ಕೃಷ್ಣನಿಗೆ (ಎಸ್.ಎಂ.ಕೃಷ್ಣ) ಬುದ್ಧಿ ಇದ್ದರೆ ಗಣಿಗಾರಿಕೆಯನ್ನು ನಿಲ್ಲಿಸಲಿ. ಇಲ್ಲದಿದ್ದರೆ ದುರ್ಗದಹಳ್ಳಿಯವರೆಗೆ ಗಣಿಗಾರಿಕೆಗೆ ಅವಕಾಶ ಕೊಡಲಿ. ಎಷ್ಟು ಸಲ ಅವರಿಗೆ ಹೇಳುತ್ತಾ ಕೂರುವುದು. ನಮಗೇನು ಬೇರೆ ಕೆಲಸವೇ ಇಲ್ಲವಾ' ಎಂದಿದ್ದರು. ಈ ಸಂಬಂಧವಾಗಿ ಸರ್ಕಾರವೇನೋ ಸರಿಯಾದ ನಿರ್ಧಾರ ತೆಗೆದುಕೊಂಡಿತು. ಸರ್ವೋಚ್ಚನ್ಯಾಯಾಲಯ ಗಣಿಗಾರಿಕೆಯನ್ನು ನಿಲ್ಲಿಸಲು ಆದೇಶಿಸಿತು. ಆದರೆ ಗಣಿಗಾರಿಕೆ ಕಂಪನಿಯವರು ನ್ಯಾಯಾಲಯದಲ್ಲಿ ಮರು ಪರಿಶೀಲನಾ ಅರ್ಜಿ ಸಲ್ಲಿಸಿದರು. ಇಷ್ಟಾದ ನಂತರ, ಅಳುಕುತ್ತಲೇ ನಾನು ಹಾಗೂ ನನ್ನ ಪತ್ರಕರ್ತ ಗೆಳೆಯರಾದ ಪ್ರವೀಣ್ ಭಾರ್ಗವ ಮತ್ತು ಡಿ.ವಿ. ಗಿರೀಶ್ ಸೇರಿ ತೇಜಸ್ವಿ ಮತ್ತು ಆಗಿನ ಕಾನೂನು ಮಂತ್ರಿ ಎಚ್.ಕೆ.ಪಾಟೀಲರ ಭೇಟಿ ಏರ್ಪಡಿಸಿದೆವು. ನಾವು ಅಲ್ಲಿಗೆ ಹೋದ ಸಮಯದಲ್ಲಿ ರಾಮಕೃಷ್ಣಾಶ್ರಮದ ಕೆಲವು ಸ್ವಾಮೀಜಿಗಳು ಪಾಟೀಲರ ಮನೆಗೆ ಬಂದು ಹೋದರು.

ಅದನ್ನು ತೇಜಸ್ವಿ ಕಂಡರು ನೋಡಿ, ಅಷ್ಟಕ್ಕೇ ವಿಷಯಾಂತರವಾಗಿ ಹೋಯಿತು. ನೋಡ್ರಿ, ಬರ್‍ತಾ ಬರ್‍ತಾ ಈ ರಾಮಕೃಷ್ಣಾಶ್ರಮ, ವೈದಿಕ ಧರ್ಮಕ್ಕೆ ತಿರುಗುತ್ತಿದೆ. ಪರಮಹಂಸ ಮತ್ತು ವಿವೇಕಾನಂದರು ಹೇಳಿದ್ದೊಂದು, ಈಗ ಈ ಸ್ವಾಮಿಗಳು ಆಚರಿಸುತ್ತಿರುವುದು ಇನ್ನೊಂದು' ಎಂದು ತೇಜಸ್ವಿ ಬೇಸರಿಸಿಕೊಂಡರು. ನಂತರ, ಊಟವಾಗಿ ಕುದುರೆಮುಖದ ವಿಷಯ ಬರುವ ಹೊತ್ತಿಗೆ ನಡುರಾತ್ರಿಯಾಗಿತ್ತು. ಎರಡೇ ವಾಕ್ಯದಲ್ಲಿ ತಮ್ಮ ಅಭಿಪ್ರಾಯ ಹೇಳಿ ಮಾತು ಮುಗಿಸಿದರು ತೇಜಸ್ವಿ: ನೋಡಿ, ಈಗ ನಿಮ್ಮ ಸರ್ಕಾರ ಸರಿಯಾದ ನಿರ್ಧಾರ ತೆಗೆದುಕೊಳ್ಳದಿದ್ದರೆ, ಮುಂದಿನ ಪೀಳಿಗೆಗೆ ಅಪಚಾರವೆಸಗಿದಂತಾಗುತ್ತದೆ. ನಿಮ್ಮ ನಿರ್ಧಾರದ ಮೇಲೆ ಮುಂದಿನ ಪೀಳಿಗೆಯ ಭವಿಷ್ಯ ನಿಂತಿದೆ'. ತೇಜಸ್ವಿಯವರ ಈ ಖಡಾಖಡಿ ಮಾತುಗಳನ್ನು ತುಂಬ ಇಷ್ಟಪಟ್ಟ ಎಚ್.ಕೆ. ಪಾಟೀಲರು, ಕೆಲವು ಸಲಹೆಗಳನ್ನಿತ್ತು ತಾವು ಸಹಕಾರ ನೀಡುವುದಾಗಿ ಆಶ್ವಾಸನೆಯನ್ನಿತ್ತರು. ಆ ಆಶ್ವಾಸನೆ ಹುಸಿಯಾಗಲಿಲ್ಲ.

* * *

ತೇಜಸ್ವಿ ನನ್ನ ಗುರುವೂ ಅಲ್ಲ, ನಾನು ಅವರಿಗೆ ಶಿಷ್ಯನೂ ಅಲ್ಲ, ಅವರ ಒಡನಾಡಿ ಅಂತೂ ಅಲ್ಲವೇ ಅಲ್ಲ. ಅಭಿಮಾನಿ ಅಷ್ಟೇ. ತೇಜಸ್ವಿ ಅವರನ್ನು ಎಲ್ಲರೂ ವರ್ಣಿಸುವುದು ಕುರುಡರು ಆನೆಯನ್ನು ಮುಟ್ಟಿ ವರ್ಣಿಸಿದಂತೆ ಅನ್ನಿಸುತ್ತದೆ. ನಾನೂ ಅಷ್ಟೇ. ನಾಲ್ಕಾರು ಭೇಟಿ, ಆರೆಂಟು ಪುಸ್ತಕ, ನೂರಾರು ದಂತಕಥೆಗಳು ಇಷ್ಟು ಸೇರಿದರೆ ತೇಜಸ್ವಿಯವರ ಸ್ಪಷ್ಟ ಚಿತ್ರ ಜತೆಯಾಗುತ್ತದೆ. ತೇಜಸ್ವಿ ಕುರಿತು ಕತೆ ಕೇಳುತ್ತ ಹೋದರೆ, ಮೂಡಿಗೆರೆಯ ಬಾಸೇಗೌಡರ ಗಂಡಾನೆ ಗೋಪಾಲ, ಕೃಷ್ಣೇಗೌಡರ ಹೆಣ್ಣಾನೆಯಾಗುತ್ತದೆ. ನನಗೆ ಅತೀ ರೇಜಿಗೆ ಎನಿಸುವ ಮೂಡಿಗೆರೆಯ ಬೇಸಿಗೆಯಲ್ಲಿ ತೇಜಸ್ವಿ ಅವರ ನವಿರಾದ ಹಾಸ್ಯಪ್ರಜ್ಞೆ ಅರಳಿ, ಅದ್ಭುತವಾದ ಕಥೆಗಳಿಗೆ ದಾರಿ ಮಾಡಿಕೊಡುತ್ತದೆ. ಆಗತಾನೇ ಪ್ರೌಢಾವಸ್ಥೆಗೆ ಕಾಲಿಡುತ್ತಿರುವ ಯುವಕನಂತೆ ಜೀವನದ ಪ್ರತಿಕ್ಷಣವನ್ನೂ ಪ್ರಯೋಗಕ್ಕೆ ಅಳವಡಿಸಿ ಪಜೀತಿಗೆ ಸಿಕ್ಕಿಕೊಳ್ಳುತ್ತಿದ್ದರು ತೇಜಸ್ವಿ, ತಮ್ಮ ಪ್ರಯೋಗದಿಂದ ಆಗುವ ಅಡ್ಡ ಪರಿಣಾಮಗಳ ಬಗ್ಗೆ ಅವರು ಜಾಸ್ತಿ ತಲೆಕೆಡಿಸಿಕೊಳ್ಳುತ್ತಿರಲಿಲ್ಲ.

ತಮ್ಮ ಕಥೆಗಳ ಮೂಲಕ ನನಗೆ, ನನ್ನಂಥವರಿಗೆ ಒಂದು ಹೊಸ ಬೆರಗನ್ನು ಮೊಗೆದುಕೊಟ್ಟ ಮಾಯಾವಿ ತೇಜಸ್ವಿ. ಯುವ ಪೀಳಿಗೆಯ ಪಾಲಿಗೆ ಮನೆಯ ಹಿರಿಯಣ್ಣನಂತಿದ್ದ ಅವರು, ಎರಡು ವರ್ಷಗಳ ಹಿಂದೆ, ಅದೊಂದು ಮಧ್ಯಾಹ್ನ ತೀರಿಕೊಂಡ ಸುದ್ದಿ ಕೇಳಿದಾಗ, ಮೂಡಿಗೆರೆಗೆ ಹೋಗುವ ಮನಸ್ಸಾಯಿತು. ಆದರೆ, ಹೋಗಿ ಮಾಡುವುದೇನಿತ್ತು? ನೂರು ಕುರುಡರ ಮಧ್ಯ ನನ್ನದೊಂದು ಒಗ್ಗರಣೆ ಅಷ್ಟೇ. ಹೌದು, ನಾನಿನ್ನು ತಿರುಗಿ ನೋಡುವುದಿಲ್ಲ.

ಮಾಕೋನಹಳ್ಳಿ ವಿನಯ ಮಾಧವ

(ಸ್ನೇಹಸೇತು : ವಿಜಯ ಕರ್ನಾಟಕ)

ಇದನ್ನೂ ಓದಿರಿ

ಪೂರ್ಣಚಂದ್ರ ತೇಜಸ್ವಿ ಇಲ್ಲದ ಎರಡು ವರ್ಷ!

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
It was very difficult to be close with Poornachandra Tejaswi. But few had chance to be in his close circle. Vinay Madhava recalls his association with Tejaswi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more