Bengaluru Karaga: ಐತಿಹಾಸಿಕ ಕರಗಕ್ಕೆ ಸಜ್ಜಾಗುತ್ತಿದೆ ಉದ್ಯಾನನಗರಿ, 11 ದಿನಗಳ ಕಾಲ ಅದ್ಧೂರಿ ಉತ್ಸವ, ಹೇಗಿದೆ ತಯಾರಿ
ಬೆಂಗಳೂರು: ಬೆಂಗಳೂರಿನ ಶ್ರೀ ಧರ್ಮರಾಯಸ್ವಾಮಿ ದೇವಸ್ಥಾನದ ಐತಿಹಾಸಿಕ ಕರಗ ಶಕ್ತ್ಯೋತ್ಸವ (Bengaluru Karaga 2026) ಆಚರಣೆಗೆ ದಿನಗಣನೆ ಶುರುವಾಗಿದೆ. ಒಟ್ಟು 11 ದಿನಗಳು ಬಹುವಿಜೃಂಭಣೆಯಿಂದ ನಡೆಯಲಿರುವ ಈ ಕರಗ ಉತ್ಸವಕ್ಕೆ ಉದ್ಯಾನ ನಗರಿ ಜನ ಕಾತರರಾಗಿದ್ದಾರೆ. ಬೇರೆ ಬೇರೆ ರಾಜ್ಯಗಳಿಂದಲೂ ಕರಗ ಕಣ್ತುಂಬಿಕೊಳ್ಳಲು ಆಗಮಿಸುತ್ತಾರೆ. ಈ ಬಾರಿ ಅದ್ಧೂರಿ ಹಬ್ಬ ಹೇಗೆ ನಡೆಯಲಿದೆ, ಸಂಚಾರ ಮಾರ್ಗ, ಬ್ಲಾಕ್ ಸ್ಪಾಟ್ ಪತ್ತೆ, ಉತ್ಸವಕ್ಕೆ ಜಿಬಿಎ ಸಿದ್ಧತೆಯ ಸಂಪೂರ್ಣ ಮಾಹಿತಿ ಇಲ್ಲಿದೆ.
ಪ್ರಸಕ್ತ ಸಾಲಿನ (2026) ಬೆಂಗಳೂರು ಕರಗ ಮಹೋತ್ಸವವು ಇದೇ ಮಾರ್ಚ್ 24ರಿಂದ ಪ್ರಾರಂಭವಾಗಲಿದೆ. ಬೆಂಗಳೂರು ಕೇಂದ್ರ ನಗರ ಪಾಲಿಕೆ ಆಯುಕ್ತ ರಾಜೇಂದ್ರ ಚೋಳನ್ ಅವರು ಇಂದು ಗುರುವಾರ (ಮಾ.5) ಶ್ರೀ ಧರ್ಮರಾಯಸ್ವಾಮಿ ದೇವಸ್ಥಾನಕ್ಕೆ ಹಾಗೂ ಕರಗ ಸಾಗುವ ಮಾರ್ಗಗಳು ಹಾಗೂ ಸುತ್ತಲಿನ ಸ್ಥಳಗಳಿಗೆ ಭೇಟಿ ನೀಡಿ ಖುದ್ದು ಪರಿಶೀಲಿಸಿದರು.

ಬ್ಲ್ಯಾಕ್ ಸ್ಪಾಟ್ ಗುರುತಿಸಿ ತೆರವಿಗೆ ಸೂಚನೆ
ಕರಗ ಮೆರವಣಿಗೆ ಹಾದು ಹೋಗುವ ರಸ್ತೆ, ಒಳಚರಂಡಿಗಳ ಮ್ಯಾನ್ ಹೋಲ್‌ಗಳ ಶುಚಿತ್ವ ಕಾಪಾಡುವುದು, ಆಗಾಗ ತ್ಯಾಜ್ಯ ಸಾಗಾಟ, ಬ್ಲ್ಯಾಕ್ ಸ್ಪಾಟ್ ತೆರವುಗೊಳಿಸುವ ಬಗ್ಗೆ ಸೂಚನೆ ನೀಡಿದರು. ಈ ಭಾಗದಲ್ಲಿ ಹೆಚ್ಚಿನ ದಟ್ಟಣೆ ಕಂಡು ಬರುತ್ತದೆ. ಹೀಗಾಗಿ ರಸ್ತೆ ಅಕ್ಕ ಪಕ್ಕದಲ್ಲಿ ವಾರಸುದಾರರಿಲ್ಲದೆ ನಿಲ್ಲಿಸಲಾಗಿರುವ ವಾಹನಗಳ ತೆರವು, ಅಲ್ಲಲ್ಲಿ ರಸ್ತೆಯಲ್ಲಿ ಹಾಕಲಾಗಿರುವ ಕಟ್ಟಡ ತ್ಯಾಜ್ಯದ ಬ್ಲ್ಯಾಕ್ ಸ್ಪಾಟ್ ಗಳನ್ನು ಗುರುತಿಸಿ ವಿಲೇವಾರಿ ಮಾಡಬೇಕು. ಬೆಸ್ಕಾಂ ಅನುಪಯುಕ್ತ ಕಂಬಗಳ ತೆರವುಗೊಳಿಸುವುದು. ದೇವಸ್ಥಾನ ಹಾಗೂ ಕರಗ ಶಕ್ತ್ಯೋತ್ಸವ ಸ್ಥಳ ಹಾಗೂ ಸುತ್ತಮುತ್ತಲಿನ ಪ್ರದೇಶ ವಿದ್ಯುತ್ ದೀಪಲಂಕಾರಕ್ಕೆ ಅನುವು ಮಾಡಿಕೊಡುವಂತೆ ತಿಳಿಸಿದರು. ಈ ಬಗ್ಗೆ ಕಳೆದ ವಾರ ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಅವರು ತಿಳಿಸಿದ್ದರು.
ದೇವಸ್ಥಾನ ವ್ಯವಸ್ಥಾಪನ ಸಮಿತಿ ಸಹಕಾರ
ದೇವಸ್ಥಾನ ವ್ಯವಸ್ಥಾಪನೆ ಸಮಿತಿಯವರು ಕೇಂದ್ರ ನಗರ ಪಾಲಿಕೆ ಅಧಿಕಾರಿಗಳೊಂದಿಗೆ ಸಹಕರಿಸಬೇಕು. ಕರಗ ಶಕ್ತ್ಯೋತ್ಸವ ಕಾರ್ಯಕ್ರಮಕ್ಕೆ ಯಾವ ಯಾವ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು. ಅಧಿಕಾರಿಗಳ ಜೊತೆಗೆ ಚರ್ಚಿಸಿ ಕ್ರಮ ವಹಿಸುವಂತೆ ವ್ಯವಸ್ಥಾಪನಾ ಸಮಿತಿಯವರಿಗೆ ಆಯುಕ್ತರು ತಿಳಿಸಿದರು.
ತುರ್ತು ರಸ್ತೆ ದುರಸ್ತಿ, ದೀಪಾಲಂಕಾರಕ್ಕೆ ಸೂಚನೆ
ಕರಗ ಸಾಗುವ ಮಾರ್ಗಗಳಲ್ಲಿ ಉಂಟಾಗಿರುವ ಎಲ್ಲಾ ರಸ್ತೆ ಗುಂಡಿಗಳನ್ನು ತುರ್ತಾಗಿ ಗಾಂಧಿನಗರ ಮತ್ತು ಚಿಕ್ಕಪೇಟೆ ವಿಭಾಗದ ಇಂಜಿನೀಯರ್‌ಗಳು ಪರಿಶೀಲನೆ ನಡೆಸಿ, ಕೂಡಲೇ ರಸ್ತೆ ಗುಂಡಿಗಳನ್ನು ಮುಚ್ಚಲು ಕ್ರಮವಹಿಸಬೇಕು. ಕರಗ ಶಕ್ತ್ಯೋತ್ಸವ ಹಿನ್ನೆಲೆಯಲ್ಲಿ ಅಗತ್ಯ ಇರುವ ಪ್ರಮುಖ ಸ್ಥಳಗಳಲ್ಲಿ ವಿದ್ಯುತ್ ದೀಪಾಲಂಕಾರ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು. ಮ್ಯಾನ್ ಹೋಲ್ ಗಳ ದುರಸ್ತಿಗೆ ಜಲಮಂಡಳಿಯ ಅಧಿಕಾರಿಗಳು ಸಮನ್ವಯ ಸಾಧಿಸಬೇಕೆಂದರು.
ರಸ್ತೆಯಲ್ಲಿನ ಗ್ರೇಟಿಂಗ್ ಗಳು ಬಾಟಲ್ ಗಳು ಇತರೆ ಪ್ಲಾಸ್ಟಿಕ್ ತ್ಯಾಜ್ಯದಿಂದ ಮುಚ್ಚಿ ಹೋಗಿವೆ. ಇದರಿಂದ ನೀರು ಹರಿದು ಹೋಗಲು ಸಮಸ್ಯೆಯಾಗುವ ಹಿನ್ನೆಲೆಯಲ್ಲಿ ಅವುಗಳಲ್ಲಿನ ತ್ಯಾಜ್ಯವನ್ನು ತೆರವುಗೊಳಿಸಬೇಕು. ಇನ್ನೂ ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿ ಅವರು ಕಳೆದ ವಾರ ನಡೆಸಿದ ಸಭೆಯಲ್ಲಿ ನೀಡಿದ ಸೂಚನೆ ಅನುಸಾರ ಪಾಲಿಕೆ, ಜಿಲ್ಲಾಡಳಿತ, ಬೆಸ್ಕಾಂ, ಜಲಮಂಡಳಿ, ಮುಜರಾಯಿ ಇಲಾಖೆಗಳು ಸಮನ್ವಯದಲ್ಲಿ ಕಾರ್ಯ ನಿರ್ವಹಿಸುವಂತೆ ಅಧಿಕಾರಿಗಳು ಹಾಗೂ ಶ್ರೀ ಧರ್ಮರಾಯಸ್ವಾಮಿ ದೇವಸ್ಥಾನದ ಸಮಿತಿಗೂ ತಿಳಿಸಿದರು.












Click it and Unblock the Notifications