War 6 Day Update: ಅಣುಬಾಂಬ್ ದಾಳಿ ಎಚ್ಚರಿಕೆ ನೀಡಿದ ಟ್ರಂಪ್; ಶಾಂತಿ ಸಂಧಾನಕ್ಕೆ ಮುಂದಾದ ಇರಾನ್, 10 ಪ್ರಮುಖಾಂಶಗಳು
ಇರಾನ್ ಮೇಲೆ ದಾಳಿ ನಡೆಸಿದ ಇಸ್ರೇಲ್ ಮತ್ತು ಯುಎಸ್ ರಾಷ್ಟ್ರಗಳ ಪೈಕಿ ಅಮೆರಿಕಾಗೆ ಉಕ್ರೇನ್ ದೇಶ ತನ್ನ ಬೆಂಬಲ ನೀಡುವುದಾಗಿ ಘೋಷಿಸಿದೆ. ಎರಡು ದೇಶಗಳ ನಿರಂತರ ಕ್ಷಿಪಣಿ ದಾಳಿಗೆ ಇರಾನ್ ನೆಲ ಸ್ಮಶಾನವಾಗಿ ಮಾರ್ಪಟ್ಟಿದೆ. ಯುಎಸ್ ಜಲಾಂತರ್ಗಾಮಿ ನೌಕೆಯು ಇರಾನ್ ಯುದ್ಧನೌಕೆಯನ್ನು ಮುಳುಗಿಸಿತ್ತು. ಇದನ್ನು ಖಂಡಿಸಿದ ಇರಾನ್ ಪ್ರತೀಕಾರ ಎಂಬಂತೆ ಕೊಲ್ಲಿಯಲ್ಲಿ ಯುಎಸ್‌ನ ತೈಲ ಹಡಗುಗಳ ಮೇಲೆ ಕ್ಷಿಪಣಿ ದಾಳಿ ನಡೆಸಿತು. ಕೆರಳಿದ ಯುಎಸ್ ಇರಾನ್ ಮೇಲೆ ಪರಮಾಣು ಬಾಂಬ್ (ನ್ಯೂಕ್ಲಿಯರ್) ದಾಳಿ ನಡೆಸುವ ಎಚ್ಚರಿಕೆ ನೀಡಿದ್ದು, ಇರಾನ್‌ಗೆ ಇದೀಗ ಭೀತಿ ಶುರುವಾಗಿದೆ. ಮತ್ತೊಂದೆಡೆ ಭಾರತದ ಮಧ್ಯ ಪ್ರವೇಶಿಸಿ ಶಾಂತಿ ಕಾಪಾಡಬೇಕೆಂಬ ಆಗ್ರಹಗಳು ಜೋರಾಗಿವೆ. ರಷ್ಯಾ ಹಾಗೂ ಚೀನಾ ದೇಶಗಳು ಶಾಂತಿ ಒಪ್ಪಂದ ಬೆಂಬಲಿಸುವುದಾಗಿ ತಿಳಿಸಿವೆ. ಆರನೇ ದಿನವು ಇರಾನ್-ಇಸ್ರೇಲ್ ಮತ್ತು ಯುಎಸ್ ಯುದ್ಧ ತೀವ್ರಗೊಂಡಿದ್ದು, ಇಂದು ಏನೆಲ್ಲ ಆಯಿತು ಎಂಬ ವಿವರ, ಪ್ರಮುಖಾಂಶಗಳು ಇಲ್ಲಿವೆ.
ಮಧ್ಯಪ್ರಾಚ್ಯ ಯುದ್ಧದ ಇಂದಿನ ಪ್ರಮುಖಾಂಶಗಳು ಹೀಗಿವೆ
1. ಇರಾನ್ ಮೇಲೆ ಇಸ್ರೇಲ್ ಹಾಗೂ ಯುಎಸ್ ಜಂಟಿ ವೈಮಾನಿಕ ದಾಳಿಗಳು ತೀವ್ರ ಸ್ವರೂಪ ಪಡೆದಿವೆ. ಟೆಹರಾನ್ ಸೇರಿ ವಿವಿಧ ಪ್ರದೇಶಗಳ ಮೇಲೆ ನಿರಂತರ ಕ್ಷಿಪಣಿ ದಾಳಿಗಳಾಗಿವೆ. ಇರಾನಿನ ಐಆರ್‌ಐಎಸ್ ದೇನಾ ಯುದ್ಧನೌಕೆಯನ್ನು ಮುಳುಗಿಸಿದ ಬಳಿಕ ಉಕ್ರೇನ್ ದೇಶ ತಾನು ಯುಎಸ್ ಬೆಂಬಲಿಸುವುದಾಗಿ ಘೋಷಿಸಿದೆ. ಇದರ ಹಿಂದೆ ರಾಜತಾಂತ್ರಿಕ ಕಾರಣಗಳು ಒಂದಷ್ಟಿವೆ.

2. ಪ್ರಮುಖ ಯುದ್ಧನೌಕೆ ಕಳೆದುಕೊಂಡ ಇರಾನ್ ಪ್ರತೀಕಾರವಾಗಿ ಕೊಲ್ಲಿಯಲ್ಲಿ ಯುಎಸ್‌ನ ತೈಲದ ಹಡಗುಗಳನ್ನು ಗುರಿಯಾಗಿಸಿಕೊಂಡು ದೊಡ್ಡ ದಾಳಿ ನಡೆಸಿದೆ. ಇದರಿಂದ ಅಮೆರಿಕ ಮತ್ತಷ್ಟು ಕೆರಳಿ ಕೆಂಡವಾಗಿದ್ದು, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಮೇಲೆ ನ್ಯೂಕ್ಲಿಯರ್ ದಾಳಿ ಮಾಡುವ ಬೆದರಿಕೆ ಒಡ್ಡಿದ್ದಾರೆ.
ಯುಎಸ್ ಜತೆ ಸಂಧಾನಕ್ಕೆ ಒಪ್ಪಿದ ಇರಾನ್
3. ಖಮೇನಿ ಹತ್ಯೆ ಹಾಗೂ ನಿರಂತರ ಕ್ಷಿಪಣಿ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲು ಇರಾನ್ ಮುಂದಾಗಿತ್ತು. ತೈಲ ಹಡಗುಗಳ ಮೇಲಿನ ಇರಾನ್ ದಾಳಿಗೆ ಪ್ರತಿಯಾಗಿ ಯುಎಸ್ ನ್ಯೂಕ್ಲಿಯರ್ ದಾಳಿ ಮಾಡುವ ಬಗ್ಗೆ ಮಾತನಾಡಿದೆ. ಇರಾನ್‌ಗೆ ಈಗ ಭೀತಿ ಶುರುವಾಗಿದ್ದು, ನ್ಯೂಕ್ಲಿಯರ್ ದಾಳಿ ಎಚ್ಚರಿಕೆಗೆ ಬೆಚ್ಚಿ ಬಿದ್ದಿದೆ. ಅಮೆರಿಕ ಒಪ್ಪಿದರೆ ಶಾಂತಿ ಸಂಧಾನಕ್ಕೆ ಸಿದ್ಧ ಎಂದು ಇರಾನ್ ಹೇಳಿದೆ.
4. ಇರಾನ್, ಇಸ್ರೇಲ್-ಯುಎಸ್ ಯುದ್ಧವು ಆರನೇ ದಿನಕ್ಕೆ (ಮಾರ್ಚ್ 5ರಂದು) ಕಾಲಿಟ್ಟಿದೆ. ಭೀಕರ ದಾಳಿಗೆ ಇರಾನ್‌ನ ಟೆಹರಾನ್, ಉರ್ಮಿಯಾ, ಬುಕಾನ್ ಸೇರಿದಂತೆ ಹಲವು ಪ್ರದೇಶಗಳು ಅಕ್ಷರಶಃ ನರಕಸದೃಶವಾಗಿದೆ. ಜನರು ಸಾವು ನೋವಿನಿಂದ ನರಳುವಂತಾಗಿದೆ. ಒಟ್ಟಾರೆ ಮಧ್ಯಪ್ರಾಚ್ಯದಲ್ಲಿ ರಕ್ತಪಾತ ಮುಂದುವರಿದಿದೆ.
5. ಇಸ್ರೇಲ್ ಹಾಗೂ ಯುಎಸ್‌ನ ಭೂಗತ ಸೌಲಭ್ಯಗಳಾದ ಬ್ಯಾಲಿಸ್ಟಿಕ್ ಕ್ಷಿಪಣಿ ತಾಣಗಳು ಮತ್ತು ಬಂಕರ್‌ಗಳನ್ನು ನಾಶಮಾಡುವತ್ತ ಇರಾನ್ ಗಮನಹರಿಸಿದೆ. ಇತ್ತ ಯುಎಸ್-ಇಸ್ರೇಲ್ ಯುದ್ಧದಿಂದ ಹಿಂದೆ ಸರಿಯದೇ ಜಂಟಿಯಾಗಿ ಇರಾನ್‌ನ ಹೊಸ ಹೊಸ ಪ್ರದೇಶಗಳನ್ನು ದಾಳಿಗಾಗಿ ಟಾರ್ಗೆಟ್ ಮಾಡಿತು.
6. ಕಳೆದ 48 ಗಂಟೆಗಳಲ್ಲಿ ಇರಾನ್ ಮೇಲೆ ಇಸ್ರೇಲ್ ಮತ್ತು ಅಮೆರಿಕ ನಿರಂತರ ಕ್ಷಿಪಣಿಗಳ ಮಳೆ ಸುರಿಸಿವೆ. ಪರಿಣಾಮ ಇರಾನ್‌ನಲ್ಲಿನ 12000 ಆಸನ ಸಾಮರ್ಥ್ಯದ ಅಜಾದಿ ಕಟ್ಟಡ ನಿರ್ನಾಮವಾಗಿದೆ. ಅನೇಕ ಶಾಲೆಗಳ ಮೇಲೂ ದಾಳಿ ಆಗಿದ್ದು ಒಟ್ಟು 165 ಶಾಲಾ ಮಕ್ಕಳು ಅಸುನೀಗಿದ್ದಾರೆ. ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಮೃತ ಮಕ್ಕಳನ್ನು ಸಾಮೂಹಿಕ ಅಂತ್ಯಸಂಸ್ಕಾರ ಮಾಡಲಾಗಿದೆ. ಇರಾನ್‌ನಲ್ಲಿ ಊರಿಗೆ ಊರೇ ಸ್ಮಶಾನವಾಗಿದ್ದು, ಜನರ ಬದುಕು ದುಸ್ತರವಾಗಿದೆ.
200ಕ್ಕೂ ಅಧಿಕ ಕನ್ನಡಿಗರು ತಾತ್ನಾಡಿಗೆ ವಾಪಾಸ್
7. ಇರಾನ್ ದಾಳಿ ಹಿನ್ನೆಲೆಯಲ್ಲಿ ದುಬೈನಲ್ಲಿ ಸಿಲುಕಿದ್ದ ಕನ್ನಡಿಗರ ರಕ್ಷಣೆ ಮಾಡಲಾಗಿದೆ. ಗುರುವಾರ ಬೆಳಗ್ಗೆ 172 ಮಂದಿ ಹಾಗೂ ಸಂಜೆ 30 ಮಂದಿ ಹೊತ್ತ ವಿಮಾನಗಳು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದವು. ತಾಯ್ನಾಡಿಗೆ ಮರಳಿದ ಕನ್ನಡಿಗರು ನಿಟ್ಟುಸಿರು ಬಿಟ್ಟರು. ಅವರೆಲ್ಲರನ್ನು ನಾಳೆ ಬಸ್‌ಗಳ ಮೂಲಕ ತಮ್ಮ ಊರುಗಳಿಗೆ ಕಳುಹಿಸಲು ವ್ಯವಸ್ಥೆ ಮಾಡಲಾಗಿದೆ.
8. ಇರಾನಿನ ಯುದ್ಧ ಹಡಗನ್ನು (ದೇನಾ ಯುದ್ಧನೌಕೆ) ಮುಳುಗಿಸಲು ಅಮೆರಿಕ ಭಾರತೀಯ ನೌಕಾನೆಲೆಯನ್ನು ಬಳಸಿಕೊಂಡಿದ್ದರ ಬಗ್ಗೆ ಹಾಗೂ ಭಾರತದ ಸಮೀಪವೇ ದಾಳಿ ನಡೆದಿದ್ದರ ಬಗ್ಗೆ ಭಾರತ ಒಂದಷ್ಟು ಟೀಕೆ ಎದುರಿಸಿತ್ತು. ಈ ಬಗ್ಗೆ ಭಾರತೀಯ ವಿದೇಶಾಂಗ ಸಚಿವಾಲಯ ಸ್ಪಷ್ಟನೆ ನೀಡಿದ್ದು, ಭಾರತೀಯ ನೌಕಾನೆಲೆ ಬಳಕೆ ಆಗಿರುವುದನ್ನು ನಿರಾಕರಿಸಿದೆ.
9. ಮಧ್ಯಪ್ರಾಚ್ಯದ ಯುದ್ಧದ ಬಿಸಿ ಭಾರತಕ್ಕೂ ತಟ್ಟಿದೆ. ವಿಶ್ವದಲ್ಲಿ ಶೇ.20ರಷ್ಟು ತೈಲ ಸಾಗಣೆಗೆ ಇದ್ದ ಪ್ರಮುಖ ಹಾರ್ಮುಜ್ ಜಲಸಂಧಿಯನ್ನು ಇರಾನ್ ಬಂದ್ ಮಾಡಿದ್ದು, ಜಾಗತಿಕವಾಗಿ ತೈಲ ಪೂರೈಕೆಯಲ್ಲಿ ಅಭಾವ ಉಂಟಾಗಿದೆ. ಕರ್ನಾಟಕದ ಭಟ್ಕಳ್, ಹೊನ್ನಾವರ ಸೇರಿ ಭಾರತದ ಹಲವೆಡೆ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖಾಲಿ ಆಗಿದೆ. ವಾಹನ ಸವಾರರು ತೊಂದರೆಗೀಡಾಗಿದ್ದು, ಇಂಧನ ದರ ಏರಿಕೆಯ ಆತಂಕದಲ್ಲಿದ್ದಾರೆ.
10. ಇರಾನ್‌ನಲ್ಲಿ ಅಪಾರ ಸಾವು ನೋವು ವರದಿ ಆಗಿದೆ. 1,045 ಅಧಿಕ ಮಂದಿ ಮೃಪಟ್ಟಿದ್ದಾರೆ. 6,000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಇಸ್ರೇಲ್‌ನಲ್ಲಿ ಸುಮಾರು 11 ಅಧಿಕಾರಿಗಳು ಮೃತಪಟ್ಟಿದ್ದಾರೆಂದು ವರದಿ ಆಗಿದೆ. ಇನ್ನೂ ಯುಎಸ್ ಕನಿಷ್ಠ 6 ಸೈನಿಕರನ್ನು ಕಳೆದುಕೊಂಡಿರುವುದು ದೃಢವಾಗಿದೆ. ಯುಎಇ ರಕ್ಷಣಾ ಸಚಿವಾಲಯ ಮಾರ್ಚ್ 5 ರಂದು 6 ಬ್ಯಾಲಿಸ್ಟಿಕ್ ಕ್ಷಿಪಣಿಗಳು ಮತ್ತು 125 ಡ್ರೋನ್‌ಗಳನ್ನು ತಡೆಹಿಡಿದಿದೆ.












Click it and Unblock the Notifications