ಅನಧಿಕೃತ ಜಾಹೀರಾತು ಹಾಕುವವರಿಗೆ ಮಾತ್ರವಲ್ಲ, ಮುದ್ರಿಸುವವರಿಗೂ ಜೈಲು: ಜಿಬಿಎ ಖಡಕ್ ವಾರ್ನಿಂಗ್
ಬೆಂಗಳೂರು: ಬೆಂಗಳೂರಿನಲ್ಲಿ ಅನಧೀಕೃತ ಜಾಹೀರಾತು ಹಾವಳಿ ತಡೆಯಲು ಸಾಕಷ್ಟು ಕ್ರಮ ಕೈಗೊಂಡರು ಸಂಪೂರ್ಣವಾಗಿ ಕಡಿವಾಣ ಬಿದ್ದಿಲ್ಲ. ಹೀಗಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಇಂತಹ ಜಾಹೀರಾತುಗಳ ವಿರುದ್ಧ ಸಮರ ಸಾರಲು ಮುಂದಾಗಿದೆ. ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಜಾಹೀರಾತುಗಳನ್ನು ಅಳವಡಿಸುವವರ ಮೇಲೆ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸುವಂತೆ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ನಿರ್ದೇಶಿಸಿದ್ದಾರೆ.
ಮಲ್ಲೇಶ್ವರಂ ಐಪಿಪಿ ಕೇಂದ್ರದಲ್ಲಿ ಇಂದು ನಡೆದ ಸಾರ್ವಜನಿಕ ಸಂಪರ್ಕ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಬೆಂಗಳೂರು ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯಲ್ಲಿ ನಾಗರಿಕರ ಅಹವಾಲುಗಳನ್ನು ಖುದ್ದಾಗಿ ಆಲಿಸಿ ಅವರ ಸಮಸ್ಯೆಗಳನ್ನು ಬಗೆಹರಿಸುವ ಭರವಸೆ ನೀಡಿದರು. ಈ ವೇಳೆ ಅವರು, ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಅನಧಿಕೃತ ಜಾಹೀರಾತುಗಳನ್ನು ತೆರವುಗೊಳಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು.

ನಗರದಲ್ಲಿ ಯಾರಾದರೂ ಅನಧಿಕೃತವಾಗಿ ಜಾಹೀರಾತುಗಳನ್ನು ಅಳವಡಿಸಿದರೆ ಅಂತಹವರ ವಿರುದ್ಧ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಬೇಕು. ಅದಲ್ಲದೆ, ಅಂತಹ ಜಾಹೀರಾತುಗಳನ್ನು ಮುದ್ರಿಸುವವರ ಮೇಲೆಯೂ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಕ್ರಿಮಿನಲ್ ಪ್ರಕರಣ ದಾಖಲಿಸಲೆಂದೇ ಅಧಿಕಾರಿಗಳ ನಿಯೋಜನೆ
ಅನಧಿಕೃತವಾಗಿ ಜಾಹೀರಾತುಗಳನ್ನು ಅಳವಡಿಸುವವರ ವಿರುದ್ಧ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸುವ ಸಲುವಾಗಿ ಕಾನೂನುಕೋಶ ವಿಭಾಗದಿಂದ ಪ್ರತ್ಯೇಕವಾಗಿ ಒಬ್ಬ ಅಧಿಕಾರಿಯನ್ನು ನಿಯೋಜಿಸಬೇಕು. ಇದೇ ಮಾದರಿಯಲ್ಲಿ ಇತರೆ ನಾಲ್ಕು ನಗರ ಪಾಲಿಕೆಗಳಲ್ಲಿಯೂ ಅಧಿಕಾರಿಗಳನ್ನು ನಿಯೋಜಿಸಿ, ಅನಧಿಕೃತ ಜಾಹೀರಾತುಗಳನ್ನು ಅಳವಡಿಸುವವರ ವಿರುದ್ಧ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಲು ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದರು.
ಡಾಂಬರೀಕರಣ ಕಾರ್ಯಕ್ಕೆ ಡೆಡ್‌ಲೈನ್
ಜಿಬಿಎ ವ್ಯಾಪ್ತಿಯಲ್ಲಿ ಪ್ರಮುಖ ರಸ್ತೆಗಳಾದ ಆರ್ಟಿರಿಯಲ್, ಸಬ್ ಆರ್ಟಿರಿಯಲ್ ರಸ್ತೆಗಳು ಹಾಗೂ ವಾರ್ಡ್ ರಸ್ತೆಗಳಲ್ಲಿ ಡಾಂಬರೀಕರಣ, ಪಾದಚಾರಿ ಮಾರ್ಗ ಅಭಿವೃದ್ಧಿ ಹಾಗೂ ರಸ್ತೆ ಬದಿಯ ಚರಂಡಿಗಳಲ್ಲಿ ಹೂಳೆತ್ತುವ ಕಾರ್ಯಕ್ಕೆ ವೇಗ ನೀಡಿ ಏಪ್ರಿಲ್ ಅಂತ್ಯದೊಳಗಾಗಿ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕೆಂದು ನಿರ್ದೇಶಿಸಿದರು. ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ಛಾಯಾಚಿತ್ರಗಳ ಸಮೇತ ಕಾಲ-ಕಾಲಕ್ಕೆ ಮಾಹಿತಿ ನೀಡಬೇಕು.
ಪಶ್ಚಿಮ ನಗರ ಪಾಲಿಕೆ ಆಯುಕ್ತ ಡಾ. ರಾಜೇಂದ್ರ ಕೆ.ವಿ ಅವರು ಮಾತನಾಡಿ, ಪಶ್ಚಿಮ ನಗರ ಪಾಲಿಕೆಯಲ್ಲಿ ಅಪಾಯ ಸ್ಥಿತಿಯಲ್ಲಿರುವ ಮರಗಳು ಹಾಗೂ ಬೃಹತ್ ಮರಗಳಲ್ಲಿ ಒಣಗಿದ ಕೊಂಬೆಗಳನ್ನು ತೆರವುಗೊಳಿಸುವ ಸಲುವಾಗಿ ಪಾಲಿಕೆಯಿಂದಲೇ ಒಂದು ಕ್ರೇನ್ ಖರೀದಿಸುವಂತೆ ಅರಣ್ಯ ವಿಭಾಗದ ಅಧಿಕಾರಿಗಳಿಗೆ ತಿಳಿಸಿದರು.
ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯ ರಸ್ತೆ ಬದಿಗಳಲ್ಲಿರುವ ಅನಾಥ ವಾಹನಗಳನ್ನು ತೆರವುಗೊಳಿಸುವ ಸಲುವಾಗಿ ಈಗಾಗಲೇ ಟೋಯಿಂಗ್ ವಾಹನಗಳನ್ನು ಖರೀದಿಸಲಾಗಿದೆ. ತೆರವುಗೊಳಿಸಲಾದ ಅನಾಥ ವಾಹನಗಳನ್ನು ವಿಲೇವಾರಿ ಮಾಡಲು ಜಾಗ ಗುರುತಿಸುವ ಕಾರ್ಯ ನಡೆದಿದೆ. ಜಾಗ ಸಿಕ್ಕ ತಕ್ಷಣ ಟೋಯಿಂಗ್ ಕಾರ್ಯವನ್ನು ಆರಂಭಿಸಬೇಕೆಂದರು.
ವಾರ್ಡ್ ಸಮಿತಿ ಸಭೆ
ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಗೆ ಬರುವ ಎಲ್ಲಾ ವಾರ್ಡ್‌ಗಳಲ್ಲಿ ವಾರ್ಡ್ ಸಮಿತಿ ಸಭೆಗಳನ್ನು ನಡೆಸಿ, ನಾಗರಿಕರ ಸಮಸ್ಯೆಗಳನ್ನು ಆಯಾ ವಾರ್ಡ್‌ಗಳಲ್ಲಿಯೇ ಆಲಿಸಿ ತ್ವರಿತಗತಿಯಲ್ಲಿ ಬಗೆಹರಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ನಾಗರಿಕರಿಂದ 101 ದೂರುಗಳ ಸ್ವೀಕಾರ
ಸಾರ್ವಜನಿಕ ಸಂಪರ್ಕ ಸಭೆಯಲ್ಲಿ ಕಸದ ಸಮಸ್ಯೆ, ಅನಧಿಕೃತ ಕಟ್ಟಡಗಳ ನಿರ್ಮಾಣ, ಇ-ಖಾತಾ ಸಮಸ್ಯೆ, ಇ-ಸ್ವತ್ತು(ಇಪಿಐಡಿ), ಪಾದಚಾರಿ ಮಾರ್ಗಗಳಲ್ಲಿ ಪಾರ್ಕಿಂಗ್ ಮಾಡುವುದು ಸೇರಿದಂತೆ ವಿವಿಧ ಸಮಸ್ಯೆಗಳ ಕುರಿತು 101 ನಾಗರಿಕರಿಂದ ದೂರುಗಳನ್ನು ಸ್ವೀಕರಿಸಲಾಯಿತು. ನಾಗರಿಕರಿಂದ ಬಂದ ದೂರುಗಳನ್ನು ಪರಿಶೀಲಿಸಿ ಕೂಡಲೇ ಸಮಸ್ಯೆಗಳ ಪರಿಹಾರದ ಬಗ್ಗೆ ಆಯುಕ್ತರು ಭರವಸೆ ನೀಡಿದರು.












Click it and Unblock the Notifications