ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂತರ್ಮುಖಿ ಜಾತಿ ರಾಜಕಾರಣಿ ವೀರೇಂದ್ರ ಪಾಟೀಲ್

By Staff
|
Google Oneindia Kannada News

Veerendra Patil (Caricature : B.G. Gujjarappa)
ವೀರೇಂದ್ರ ಪಾಟೀಲ್(ಕಲೆ : ಬಿ.ಜಿ. ಗುಜ್ಜಾರಪ್ಪ)
ಪಾಟೀಲರ ವಿರುದ್ಧ ಮೊದಲಿನಿಂದ ಕೊನೆಯವರೆಗೂ ಸತತವಾಗಿ ಕೇಳಿಬಂದ ಒಂದೇ ಒಂದು ದೂರು ಎಂದರೆ ತಮ್ಮ ಲಿಂಗಾಯತ ಜಾತಿಯ ಜನ ಹಾಗೂ ಅಧಿಕಾರಿಗಳಿಗೆ ಪ್ರಥಮ ಆದ್ಯತೆ ನೀಡುತ್ತಿದ್ದರು ಎನ್ನುವುದು. ಇದು ಸುಳ್ಳೇನಲ್ಲ. ಇದು ಅಂದೂ ಜಾರಿಯಲ್ಲಿತ್ತು, ಇಂದೂ ಜಾರಿಯಲ್ಲಿದೆ, ಇನ್ನೂ ದೊಡ್ಡ ಪ್ರಮಾಣದಲ್ಲಿ!

ಅಂಕಣಕಾರ : ಜೆ.ಎಸ್. ನಾರಾಯಣ ರಾವ್ (ಜೆಸುನಾ)

ಎರಡು ಬಾರಿ ಅನಿರೀಕ್ಷಿತವಾಗಿ ರಾಜ್ಯದ ಮುಖ್ಯಮಂತ್ರಿಯಾಗಿದ್ದ ವೀರೇಂದ್ರ ಪಾಟೀಲರದ್ದು ಅಂತರ್ಮುಖಿ ವ್ಯಕ್ತಿತ್ವ. ಯಾರೊಂದಿಗೂ ನಿಕಟವಾಗಿ ಬೆರೆಯದೆ ರಾಜಕಾರಣದಲ್ಲಿ ಸಂದು ಹೋದವರು. ಅವರು ಎರಡನೇ ಬಾರಿಗೆ 1989ರಲ್ಲಿ ಮುಖ್ಯಮಂತ್ರಿಯಾದಾಗ ಕೂಡಲೇ ಪತ್ರಿಕಾಗೋಷ್ಠಿ ಕರೆದು ಒಂದು ಮಾತನ್ನು ಹೇಳಿದ್ದರು.

"ಈಗ ನನಗೆ ಸಿಕ್ಕಿರುವ ಅಧಿಕಾರ ನನ್ನ ರಾಜಕೀಯ ಜೀವನದ ಕೊನೆಯ ಭಾಗ. ಹೀಗಾಗಿ ಈಗಿನ ನನ್ನ ಅಧಿಕಾರದ ಅವಧಿಯಲ್ಲಿ ರಾಜ್ಯಕ್ಕೆ ಒಳ್ಳೆಯದನ್ನು ಮಾಡುತ್ತೇನೆ. ಹೇಗೆಂದು ಪ್ರಶ್ನಿಸಬೇಡಿ. ಅದನ್ನು ನನ್ನ ಕೃತಿಯಲ್ಲಿ ತೋರಿಸುತ್ತೇನೆ."

ಹೀಗೆಂದು ತುಂಬಿದ ಪತ್ರಿಕಾಗೋಷ್ಠಿಯಲ್ಲಿ ಅವರು ಹೇಳಿದಾಗ ಆ ಮಾತಿನಲ್ಲಿ ಪ್ರಾಮಾಣಿಕತೆ ಮಡುಗಟ್ಟಿತ್ತು. ಪತ್ರಕರ್ತರಿಗೆ ಹೇಳಿದ ದಿನದಿಂದಲೇ ವೀರೇಂದ್ರ ಪಾಟೀಲ್ ಕ್ರಿಯಾಶೀಲರಾದರು. ತಮ್ಮ ನಂಬಿಕೆಯ ಗೆಳೆಯ ಎಂ. ರಾಜಶೇಖರಮೂರ್ತಿಯವರನ್ನು ಹಣಕಾಸು ಸಚಿವರನ್ನಾಗಿ ತೆಗೆದುಕೊಂಡರು. ಹಣಕಾಸು ಒಂದೇ ಅಲ್ಲ; ಎಲ್ಲ ವಿಷಯಗಳಲ್ಲಿ ಈ ಇಬ್ಬರು ಸ್ನೇಹಿತರೂ ಅಪಾರ ಜಿಗುಟು ಗುಣದವರಾಗಿದ್ದರು. ವೀರೇಂದ್ರ ಪಾಟೀಲ್ ಆಡಳಿತವನ್ನು ಬಿಗಿಗೊಳಿಸಿದರು. ಸಾರಾಯಿ ಗುತ್ತಿಗೆದಾರರಿಂದ ಹಲವಾರು ವರ್ಷಗಳಿಂದ ಬಾಕಿಯಿದ್ದ ನೂರಾರು ಕೋಟಿ ರೂಪಾಯಿಗಳನ್ನು ನಿರ್ದಾಕ್ಷಿಣ್ಯವಾಗಿ ವಸೂಲಿ ಮಾಡಿ ಬೊಕ್ಕಸ ತುಂಬಿದರು. ಇದೇ ರೀತಿ ಬೇರೆ ಬೇರೆ ಬಾಬ್ತುಗಳಲ್ಲಿ ತೆರಿಗೆ ವಂಚಿಸುತ್ತಿದ್ದವರಿಂದಲೂ ಹಣ ವಸೂಲಿ ಮಾಡಿದರು.

ಕೊನೆಗೊಂದು ದಿನ ನಮ್ಮ ಒಂದು ಗುಂಪಿನ ಸುದ್ದಿಗಾರರಿಗೆ ಹಣಕಾಸು ಸಚಿವ ರಾಜಶೇಖರ ಮೂರ್ತಿ ಹೇಳಿದರು. "ಆಫ್ ದಿ ರೆಕಾರ್ಡ್ ಹೇಳ್ತಿದ್ದೇನೆ. ಈಗ ನನ್ನ ಹತ್ತಿರ ಸಹಸ್ರಾರು ಕೋಟಿ ರೂಪಾಯಿ ಇದೆ. ಅರ್ಧ ಭಾಗದಷ್ಟು ಸರ್ಕಾರಿ ನೌಕರರು ಇವತ್ತೇ ಸ್ವಯಂ ನಿವೃತ್ತಿ ಪಡೆದರೆ ಅವರಿಗೆಲ್ಲಾ ಹಣಕೊಡಲು ನಾನೀಗ ಸಮರ್ಥ" ಎಂದಿದ್ದರು.

"ಯಾಕೆ ಈ ಸಂಗತಿಯನ್ನು ಆಫ್ ದಿ ರೆಕಾರ್ಡ್ ಅಡಿಯಲ್ಲಿ ಮುಚ್ಚಿಡುತ್ತೀರಿ? ಈ ವಿಷಯ ಜನಕ್ಕೆ ಗೊತ್ತಾಗುವುದು ಬೇಡವೇ?" ಎಂದು ಅವರನ್ನು ಪ್ರಶ್ನಿಸಿದ್ದೆ.

"ಅಯ್ಯೋ! ಹಾಗೆ ಮಾಡಿದರೆ ನಮ್ಮ ಸಂಸದರು, ಶಾಸಕರು ನನ್ನನ್ನು ಸುಮ್ನೆ ಬಿಡ್ತಾರಾ? ಕೂಡ್ಲೆ ಹಲವಾರು ಹೊಸ ಯೋಜನೆಗಳನ್ನು ಹಿಡಕೊಂಡು ಬರುತ್ತಾರೆ. ಹಳೆ ಯೋಜನೆಗಳೇ ಇನ್ನೂ ಮುಗಿದಿಲ್ಲ. ಹಾಗಿರೋವಾಗ ಹೊಸ ಯೋಜನೆಗಳನ್ನು ಹ್ಯಾಗೆ ಪ್ರಾರಂಭಿಸೋದು?" ಎಂದು ತಮ್ಮ ಸಮಸ್ಯೆಯನ್ನು ಮುಂದಿಟ್ಟರು.

ವೀರೇಂದ್ರ ಪಾಟೀಲರು ಹೀಗೆ ಅತಿ ಬಿಗಿಯಾಗಿ ಆಡಳಿತ ನಡೆಸಿದ್ದು ಕೇವಲ ಹನ್ನೊಂದು ತಿಂಗಳು ಮಾತ್ರ. ಅವರ ಅಧಿಕಾರಾವಧಿಯ ಕೊನೆಯ ಭಾಗ ಅತಿ ದಾರುಣವಾಗಿತ್ತು. ಅವರ ಆರೋಗ್ಯ ತೀವ್ರ ಹಾಳಾಗಿತ್ತು. ವಿಧಾನಸಭೆ ಅಧಿವೇಶನದಲ್ಲಿ ಬಂದು ಕೂರಲೂ ಸಾಧ್ಯವಾಗುತ್ತಿರಲಿಲ್ಲ. ಸಂಪೂರ್ಣವಾಗಿ ಹಾಸಿಗೆ ಹಿಡಿದಿದ್ದರು. ಆದರೂ ಒಂದು ದಿನ ಅನಿವಾರ್ಯವಾಗಿ ಸಭೆಗೆ ಬರಲೇಬೇಕಾಯಿತು. ಒಂದು ಕಾಲದಲ್ಲಿ ವೀರೇಂದ್ರ ಪಾಟೀಲ್ ಮತ್ತು ರಾಮಕೃಷ್ಣ ಹೆಗಡೆಯವರ ಸ್ನೇಹ ಅದೆಷ್ಟು ಗಾಢವಾಗಿತ್ತೆಂದರೆ ಅವರಿಬ್ಬರನ್ನು 'ಲವ ಕುಶ'ರೆಂದೇ ಕರೆಯಲಾಗುತ್ತಿತ್ತು. ನಿಜಲಿಂಗಪ್ಪನವರ ಸಂಪುಟದಲ್ಲಿ ಇಬ್ಬರೂ ಸಚಿವರಾಗಿದ್ದರು. ಇಂಥ ಗೆಳೆಯರು ರಾಜಕೀಯವಾಗಿ 1980ರಲ್ಲಿ ಬೇರೆಯಾದರು. ಹೆಗಡೆ ಜನತಾ ಪಾರ್ಟಿಗೆ ಹಾರಿಕೊಂಡರು.

ಈಗ ವೀರೇಂದ್ರ ಪಾಟೀಲರು ತಮ್ಮ ಅಧಿಕಾರದ ಕೊನೆಯ ಭಾಗದಲ್ಲಿ ಸಾವಿನತ್ತ ಮುಖಮಾಡಿ ದಿನಗಳನ್ನು ಎಣಿಸುತ್ತ ಮಲಗಿದ್ದಾರೆ. ಇಂಥ ಸಮಯದಲ್ಲಿ ರಾಮಕೃಷ್ಣ ಹೆಗಡೆ ಯಾವುದೋ ಒಂದು ವಿಷಯದಲ್ಲಿ ವೀರೇಂದ್ರ ಪಾಟೀಲರನ್ನು ಸದನದಲ್ಲಿ ಟೀಕಿಸಿದರು. ಅವರು ಈ ಸಂದರ್ಭದಲ್ಲಿ ಪ್ರತಿಪಕ್ಷದ ನಾಯಕರಾಗಿದ್ದರು. ತನ್ನ ಪರಮಾಪ್ತ ಗೆಳೆಯ ಸದನದಲ್ಲಿ ತನ್ನ ಬಗ್ಗೆ ಟೀಕಿಸಿದ್ದನ್ನು ಕೇಳಿ ವೀರೇಂದ್ರ ಪಾಟೀಲರು ಸದನಕ್ಕೇ ಬರಬೇಕಾದ ಅನಿವಾರ್ಯತೆ. ಯಾಕೆಂದರೆ ಹೆಗಡೆಯವರು ಆಡಿದ ಮಾತುಗಳು ಸದನದ ಅಧಿಕೃತ ದಾಖಲೆಯಲ್ಲಿ ಸೇರಿಹೋಗಿತ್ತು. ಹೀಗಾಗಿ ಅತಿ ಪ್ರಯಾಸದಿಂದಲೇ ಪಾಟೀಲರು ಸದನಕ್ಕೇ ಬಂದರು. ಆಗ ಅವರಿಗೆ ಕೂರಲೂ ಕಷ್ಟವಾಗುತ್ತಿತ್ತು. ಸದನದಲ್ಲಿ ಎದ್ದು ನಿಂತು ಉತ್ತರಿಸಲು ಪಾಟೀಲರು ಪ್ರಯತ್ನಿಸಿದರು. ಆಗಲಿಲ್ಲ. ಕೊನೆಗೆ ಕೂತೇ ಹೆಗಡೆಯವರ ಟೀಕೆಗೆ ಉತ್ತರಿಸಿದರು. ಅವರ ಆಗಿನ ಮಾತುಗಳು ಸ್ಪಷ್ಟವಾಗಿರಲಿಲ್ಲ. ಪ್ರತಿ ಪದವನ್ನು ಕಷ್ಟದಿಂದಲೇ ಉಚ್ಚರಿಸುತ್ತಿದ್ದರು.

ಪಾಟೀಲ್ ಹೇಳಿದ್ದು: "ಹೆಗಡೆಜೀ! ಈ ವ್ಯಾಳ್ಯಾಗ ನನ್ನ ಆರೋಗ್ಯ ಖರಾಬ್ ಆಗೈತಿ. ಈಗಾಗ್ಲೆ ನನ್ನ ಒಂದು ಕಾಲನ್ನು ಕುಣೀಲಿ ಇಟಗೊಂಡು ಕುಂತೇನಿ. ಇಂಥ ವ್ಯಾಳ್ಯಾಗ ನನ್ನ ಮ್ಯಾಲ ಆರೋಪ ಹೊರಿಸಿದೀರಿ. ನಾನು ಮಾಡದ ತಪ್ಪನ್ನು ಹೊತಗೊಂಡು ಹ್ಯಾಂಗ್ರ ಹೋಗ್ಲಿ ನೀಂವಾ ಹೇಳ್ರೀ ಹೆಗಡೆಜೀ" ಎಂದವರೇ ಕಣ್ಣೀರನ್ನು ಸುರಿಸತೊಡಗಿದರು. ವೀರೇಂದ್ರ ಪಾಟೀಲರ ಈ ಮಾತಿನಿಂದ ಇಡೀ ಸದನ ಕರಗಿಹೋಯಿತು. ಇದಕ್ಕೆ ರಾಮಕೃಷ್ಣ ಹೆಗಡೆಯವರೂ ಹೊರತಾಗಿರಲಿಲ್ಲ. ಇದಾದ ಒಂದು ವಾರದಲ್ಲೇ ಪ್ರಧಾನಿ ರಾಜೀವಗಾಂಧಿ ಬೆಂಗಳೂರಿಗೆ ಬಂದರು. ಅವರು ವಾಪಸ್ಸು ಹೋಗುವಾಗ ವಿಮಾನ ನಿಲ್ದಾಣದಲ್ಲೇ ಪಾಟೀಲರನ್ನು ಅಧಿಕಾರದಿಂದ ಕೆಳಗಿಳಿಸಿ ಬಂಗಾರಪ್ಪನವರನ್ನು ಮುಖ್ಯಮಂತ್ರಿಯಾಗಿ ನೇಮಿಸಿದ ಮಾತಿನ ಆದೇಶ ನೀಡಿದರು. ಅಧಿಕಾರದಿಂದ ಹೊರದೂಡಲ್ಪಟ್ಟ ಪಾಟೀಲರು ಒಂದು ತಿಂಗಳು ಕಾಲ ಬದುಕಿದ್ದರಷ್ಟೆ.

ವೀರೇಂದ್ರ ಪಾಟೀಲರ ರಾಜಕೀಯ ಎಂದೂ ವಿವಾದಗಳಿಂದ ಕೂಡಿರಲಿಲ್ಲ. ಅವರೊಬ್ಬ ಸಂಭಾವಿತ ರಾಜಕಾರಣಿಯಾಗಿದ್ದರು. ಅವರ ಮನಸ್ಸು ಮೃದು, ಕೆಲವೊಮ್ಮೆ ಅದು ಕಠಿಣವಾಗುತ್ತಿದ್ದ ಅಪರೂಪದ ಪ್ರಸಂಗಗಳೂ ಘಟಿಸುತ್ತಿದ್ದವು. ಕಾವೇರಿ ನದಿ ಯೋಜನೆಗಳಾದ ಹೇಮಾವತಿ ಮತ್ತು ಕಬಿನಿ ಯೋಜನೆಗಳನ್ನು ಕೈಗೆತ್ತಿಕೊಳ್ಳುವಲ್ಲಿ ತಮಿಳುನಾಡು ಸದಾ ತಗಾದೆ ತೆಗೆಯುತ್ತಲೇ ಇತ್ತು. ಈ ಯೋಜನೆಗಳನ್ನು ಆರಂಭಿಸಲು ಕೇಂದ್ರ ಜಲ ಮತ್ತು ವಿದ್ಯುತ್ ನಿಗಮ ನಿರಾಕರಿಸಿದಾಗ ವೀರೇಂದ್ರ ಪಾಟೀಲರು ಕೂಡಲೇ ಗುಡುಗಿದರು. ಕೇಂದ್ರ ಸರ್ಕಾರ ಈ ಯೋಜನೆಗಳಿಗೆ ಅನುಮತಿ ಕೊಡಲಿ ಇಲ್ಲವೆ ಕೊಡದಿರಲಿ. ನಮ್ಮದೇ ಹಣಕಾಸಿನ ಬಲದೊಂದಿಗೆ ಈ ಯೋಜನೆಗಳನ್ನು ಕಾರ್ಯಗತಗೊಳಿಸುತ್ತೇವೆ ಎಂದು ಹೇಳುವುದರ ಮೂಲಕ ಕೇಂದ್ರ ಮತ್ತು ತಮಿಳುನಾಡು ಸರ್ಕಾರಗಳೊಂದಿಗೆ ನೇರ ಸಂಘರ್ಷಕ್ಕೆ ಇಳಿದ ಅಪರೂಪದ ರಾಜಕಾರಣಿ ವೀರೇಂದ್ರ ಪಾಟೀಲರು.

ಅವರ ಬಗ್ಗೆ ಮೊದಲಿನಿಂದ ಕೊನೆಯವರೆಗೂ ಸತತವಾಗಿ ಕೇಳಿಬಂದ ಒಂದೇ ಒಂದು ದೂರು ಎಂದರೆ ತಮ್ಮ ಲಿಂಗಾಯತ ಜಾತಿಯ ಜನ ಹಾಗೂ ಅಧಿಕಾರಿಗಳಿಗೆ ಪ್ರಥಮ ಆದ್ಯತೆ ನೀಡುತ್ತಿದ್ದರು ಎನ್ನುವುದು. ಇದು ಸುಳ್ಳೇನಲ್ಲ. ಅಧಿಕಾರದಲ್ಲಿ ಕುಳಿತು ಜಾತಿಯನ್ನು ಮೋಹಿಸುವುದು ಅತ್ಯಂತ ಅಪಾಯಕಾರಿ ನಡೆಯಾಗುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X