ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜಕಾರಣದಲ್ಲಿ ಹೆಗಡೆಯಂಥವರೂ ಇರುತ್ತಾರೆ

By Staff
|
Google Oneindia Kannada News

Former Chief Minister Ramakrishna Hegde
ರಾಮಕೃಷ್ಣ ಹೆಗಡೆ (ಕಲೆ : ಬಿ.ಜಿ. ಗುಜ್ಜಾರಪ್ಪ)
ಕರ್ನಾಟಕ ರಾಜಕಾರಣದಲ್ಲಿ ತಮ್ಮ ವ್ಯಕ್ತಿತ್ವದಿಂದಲೇ ಅಚ್ಚಳಿಯದ ಛಾಪು ಮೂಡಿಸಿದವರಲ್ಲಿ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರೂ ಒಬ್ಬರು. ಅವರ ವೈಯಕ್ತಿಕ ಬದುಕು ರಸಿಕತನದಿಂದ ಕೂಡಿದ್ದರೂ ಅದನ್ನು ರಾಜಕೀಯ ಬದುಕಿನೊಂದಿಗೆ ಬೆರೆಸಿಕೊಂಡಿರಲಿಲ್ಲ. ಚಿಂತನಶೀಲ ರಾಜಕಾರಣಿಯೆಂದೇ ಗುರುತಿಸಿಕೊಂಡಿದ್ದ ಹೆಗಡೆಯವರು ಜೀವನದ ಒಂದೆರಡು ಹಾಳೆಗಳು ಇಲ್ಲಿ ಅನಾವರಣಗೊಂಡಿದೆ.

ಅಂಕಣಕಾರ : ಜೆ.ಎಸ್. ನಾರಾಯಣ ರಾವ್ (ಜೆಸುನಾ)

1983. ರಾಜ್ಯ ರಾಜಕೀಯದಲ್ಲಿ ಅಪೂರ್ವ ಬದಲಾವಣೆಗೊಂಡ ಸಂಧಿಕಾಲವದು. ಇಡೀ ದೇಶ ತುರ್ತುಸ್ಥಿತಿಯಲ್ಲಿ ಸಂಕಟ ಅನುಭವಿಸುತ್ತಿದ್ದಾಗ ಜಯಪ್ರಕಾಶ್ ನಾರಾಯಣರ ನೇತೃತ್ವದಲ್ಲಿ ಜನತಾ ಪಾರ್ಟಿ ಹುಟ್ಟಿಕೊಂಡಿತ್ತು. ಅದು ಹುಟ್ಟಿಕೊಂಡ ಎಂಟು ವರ್ಷಗಳ ನಂತರ ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಅಧಿಕಾರದ ಗದ್ದುಗೆಗೆ ಬಂದು ಕುಳಿತಿತ್ತು. ಕಾಂಗ್ರೆಸ್ ಹೇಳಹೆಸರಿಲ್ಲದಂಥ ರೀತಿಯಲ್ಲಿ ನೆಲ ಕಚ್ಚಿತ್ತು. ಇಡೀ ರಾಜ್ಯದಲ್ಲಿ ಹಾಗೂ ಜನತಾ ಪಕ್ಷದಲ್ಲಿ ಹಬ್ಬದ ಸಂಭ್ರಮ. ಯಾರು ಮುಖ್ಯಮಂತ್ರಿ? ಇದೊಂದು ಚಿದಂಬರ ರಹಸ್ಯವಾಗಿತ್ತು. ಯಾಕೆಂದರೆ ಈಗಾಗಲೇ ಈ ಸ್ಪರ್ಧೆಯಲ್ಲಿ ಎಚ್.ಡಿ. ದೇವೇಗೌಡ ಹಾಗೂ ಕರ್ನಾಟಕ ಕ್ರಾಂತಿರಂಗದ ಎಸ್. ಬಂಗಾರಪ್ಪ ಕಾಣಿಸಿಕೊಂಡಿದ್ದರು. ಜನತಾ ಪಕ್ಷ ಮತ್ತು ಕ್ರಾಂತಿರಂಗ ಮೈತ್ರಿಯೊಂದಿಗೆ ಅಪೂರ್ವ ಗೆಲುವು ಸಾಧಿಸಿತ್ತು.

ನಾಯಕನ ಆಯ್ಕೆಗೆ ಶಾಸಕಾಂಗ ಪಕ್ಷದ ಸಭೆ ಸೇರಿತ್ತು. ಈ ಸಭೆಯಲ್ಲಿ ಅಖಿಲ ಭಾರತ ಜನತಾ ಪಾರ್ಟಿಯ ಪ್ರಧಾನ ಕಾರ್ಯದರ್ಶಿಯಾಗಿದ್ದ ರಾಮಕೃಷ್ಣ ಹೆಗಡೆಯವರೂ ಭಾಗವಹಿಸಿದ್ದರು. ಇಡೀ ಚುನಾವಣೆ ಪ್ರಕ್ರಿಯೆಯಲ್ಲಿ ಹೆಗಡೆಯವರು ಪ್ರಮುಖವಾಗಿಯೇ ವಿಜೃಂಭಿಸಿದ್ದರು. ಪಕ್ಷದ ಗೆಲುವಿಗೆ ಅವರ ಕಾಣಿಕೆ ಅಪಾರವಾಗಿತ್ತು. ನಾಯಕನ ಆಯ್ಕೆ ವಿಷಯ ಪ್ರಸ್ತಾಪವಾಗುತ್ತಿದ್ದಂತೆಯೇ ಮುಕ್ಕಾಲು ಪಾಲು ಶಾಸಕರು ರಾಮಕೃಷ್ಣ ಹೆಗಡೆಯವರ ಹೆಸರನ್ನೇ ಹೇಳಿದರು. ದೇವೇಗೌಡ ಹಾಗೂ ಬಂಗಾರಪ್ಪನವರಿಗೆ ಇದೊಂದು ಅನಿರೀಕ್ಷಿತ ಆಘಾತ. ಹೀಗೆ ಅಪಾರ ಒತ್ತಡಗಳ ನಡುವೆ ಈ ರಾಜ್ಯದ ಮುಖ್ಯಮಂತ್ರಿಯಾಗಿ ಸರ್ವಾನುಮತದಿಂದ ಹೆಗಡೆ ಆಯ್ಕೆಯಾದರು.

ಇಲ್ಲಿಂದಾಚೆಗೆ ಹೆಗಡೆ ರಾಜ್ಯದ ಏಕಮೇವಾದ್ವಿತೀಯ ನಾಯಕರಾಗಿ ಸುಮಾರು ಇಪ್ಪತ್ತು ವರ್ಷ ಕಾಲ ಮಿಂಚಿದರು. ಕೇವಲ ರಾಮಕೃಷ್ಣ ಹೆಗಡೆ ಹೆಸರಿನಿಂದಲೇ ಬಹುತೇಕ ಶಾಸಕರು ಆರಿಸಿಬರುತ್ತಿದ್ದರೆಂದರೆ ಅವರ ಜನಪ್ರಿಯತೆಯ ಅರಿವಾದೀತು. ಉತ್ತರ ಕನ್ನಡ ಜಿಲ್ಲೆಯ ಹವ್ಯಕ ಬ್ರಾಹ್ಮಣರ ಕುಟುಂಬದಿಂದ ಬಂದ ರಾಮಕೃಷ್ಣ ಹೆಗಡೆ ಇಡೀ ದೇಶದಲ್ಲಿ ಚಿಂತನಶೀಲ ರಾಜಕಾರಣಿ ಎಂದೇ ಗುರುತಿಸಿಕೊಂಡವರು. ಜನರ ಈ ಭಾವನೆಗೆ ಅವರು ಬಿಟ್ಟಿದ್ದ ಗಡ್ಡ ಬಹಳ ಸಹಾಯಕವಾಯಿತೆನ್ನಬಹುದು.

ಹಾಗೆ ನೋಡಿದರೆ ರಾಮಕೃಷ್ಣ ಹೆಗಡೆಯವರು ಮೊದಲಿನಿಂದಲೂ ಗಡ್ಡ ಬಿಟ್ಟವರೇನಲ್ಲ. ಅತ್ಯಂತ ರಸಿಕರಾಗಿದ್ದ ಅವರು ಪ್ರತಿದಿನ ಮುಖಕ್ಷೌರ ಮಾಡಿಕೊಳ್ಳುತ್ತಿದ್ದರು. ಒಳ್ಳೇ ಉಡುಪು ಧರಿಸುತ್ತಿದ್ದರು. ಒಂದು ಬಾರಿ ಅವರಿಗೆ ಕೆನ್ನೆಯ ಮೇಲೆ ಒಂದು ಸಣ್ಣ ಗುಳ್ಳೆ ಎದ್ದಿತ್ತು. ಮುಖಕ್ಷೌರ ಮಾಡಿಕೊಳ್ಳುವುದು ಕಷ್ಟವಾದ್ದರಿಂದ ಅದನ್ನು ಹಾಗೆ ಬಿಟ್ಟರು. ದಿನ ಕಳೆದಂತೆಲ್ಲಾ ಮುಖದ ತುಂಬ ಕೂದಲು ಪೊದೆಯಂತೆ ಬೆಳೆಯಿತು. ಈ ಸಂದರ್ಭದಲ್ಲಿ ಶಿರೀನ್ ಎಂಬ ಪಾರ್ಸಿ ಮಹಿಳೆ ಮೇಲ್ಮನೆ ಸದಸ್ಯರಾಗಿದ್ದರು. ಒಂದು ದಿನ ಆಕೆ ಹೆಗಡೆಯವರನ್ನು ಕುರಿತು ನಿಮಗೆ ಈ ಗಡ್ಡ ಚೆನ್ನಾಗಿ ಒಪ್ಪುತ್ತೆ. ನೀವೀಗ ಇಂಟಿಲೆಕ್ಷುಯಲ್ ಥರಾ ಕಾಣ್ತಿದ್ದೀರಿ' ಎಂಬ ಮೆಚ್ಚುಗೆಯ ಮಾತನ್ನಾಡಿದರು. ಹೆಗಡೆಯವರು ಆಕೆಯ ಮಾತನ್ನು ನಂಬಿದರು. ಗಡ್ಡವನ್ನು ತಮ್ಮ ಕೊನೆಯ ಉಸಿರು ಇರುವವರೆಗೂ ಉಳಿಸಿಕೊಂಡರು.

ಅವರು ಆಗಾಗ ತಮ್ಮ ಆಪ್ತರ ಮುಂದೆ ಈ ವಿಷಯ ಪ್ರಸ್ತಾಪಿಸಿ ನಾನು ಬುದ್ಧಿವಂತ ಅಂತ ಜನಾನು ನಂಬಿಬಿಟ್ಟರು. ಈ ಗಡ್ಡದಿಂದಾಗಿ ನಾನೂ ಪ್ರಬುದ್ಧನಾಗಿ ಬಿಟ್ಟೆ' ಎಂದು ನಗು ಉಕ್ಕಿಸುತ್ತಿದ್ದರು. ನನಗೆ ಸ್ಪಷ್ಟವಾಗಿ ಗೊತ್ತಿರುವಂತೆ ಅವರು ನಿಜಕ್ಕೂ ಬುದ್ಧಿಜೀವಿಯಾಗಿದ್ದರು. ದೇಶದ ಕೆಲವೇ ಜನ ಚಿಂತನಶೀಲ ರಾಜಕಾರಣಿಗಳಲ್ಲಿ ಅವರೂ ಒಬ್ಬರಾಗಿದ್ದರು. ಅವರು ಅಪಾರ ಪ್ರಮಾಣದಲ್ಲಿ ಓದುತ್ತಿದ್ದರು. ಅವರಂತೆಯೇ ಅಪಾರವಾಗಿ ಓದುತ್ತಿದ್ದವರೆಂದರೆ ದಿವಂಗತ ಮುಖ್ಯಮಂತ್ರಿಗಳಾದ ದೇವರಾಜ ಅರಸು ಹಾಗೂ ಜೆ.ಎಚ್. ಪಟೇಲ್.

ರಾಜ್ಯದಲ್ಲಿ ರಾಮಕೃಷ್ಣ ಹೆಗಡೆಯವರು ಪರಿಣಾಮಕಾರಿಯಾಗಿ ಜಾರಿಗೆ ತಂದ ಪಂಚಾಯತ್‌ರಾಜ್ ವ್ಯವಸ್ಥೆ ಹಾಗೂ ಕುಡಿಯುವ ನೀರಿನ ಯೋಜನೆಗಳೇ ಅವರ ಸಾಧನೆಯನ್ನು ಅಳೆಯಲು ಎರಡು ಅರ್ಹ ಮಾನದಂಡಗಳು. ದಿ. ನಜೀರ್‌ಸಾಬ್ ಕುಡಿಯುವ ನೀರಿನ ಯೋಜನೆಯನ್ನು ಸಮರ್ಥವಾಗಿ ನಿಭಾಯಿಸಿದ ಸಚಿವರಾಗಿದ್ದರು. ನಿಜಲಿಂಗಪ್ಪನವರು ಮುಖ್ಯಮಂತ್ರಿಗಳಾಗಿದ್ದಾಗಲೇ ಅವರ ಸಂಪುಟದಲ್ಲಿ ಸಚಿವರಾಗಿ ಕೆಲಸ ಮಾಡಿದ್ದ ಹೆಗಡೆ ಒಂದು ರೀತಿಯಲ್ಲಿ ಸರಳ ರಾಜಕೀಯ ಜೀವನ ನಡೆಸಿದವರು. ಅವರ ವೈಯಕ್ತಿಕ ಬದುಕು ರಸಿಕತನದಿಂದ ಕೂಡಿದ್ದರೂ ಅದನ್ನು ರಾಜಕೀಯ ಬದುಕಿನೊಂದಿಗೆ ಬೆರೆಸಿಕೊಂಡಿರಲಿಲ್ಲ. ಅವರ ಮಾತೂ ನಿಧಾನ. ಪ್ರತಿ ಪದವನ್ನು ತೂಕಕ್ಕೆ ಹಾಕಿಯೇ ಮಾತನಾಡುತ್ತಿದ್ದರು. ಅವರ ಆಲೋಚನೆಗಳು ನಿಖರವಾಗಿ ಸ್ಫುಟವಾಗಿರುತ್ತಿದ್ದವು. ಅಲ್ಲಿ ಗೊಂದಲಕ್ಕೆ ಅವಕಾಶವೇ ಇರುತ್ತಿರಲಿಲ್ಲ. ಇಲ್ಲಿ ಇನ್ನೊಂದು ಸಂಗತಿಯನ್ನು ಪ್ರಸ್ತಾಪಿಸಬಹುದೆನ್ನಿಸುತ್ತದೆ.

ಅದು 1972ನೇ ಇಸವಿ. ಅದೇ ತಾನೇ ನಾನು ಪತ್ರಿಕಾ ಕ್ಷೇತ್ರಕ್ಕೆ ಕಾಲಿರಿಸಿದ್ದೆ. ಇಂದಿರಾ ಕಾಂಗ್ರೆಸ್ ಮತ್ತು ಸಂಸ್ಥಾ ಕಾಂಗ್ರೆಸ್ ನಡುವಿನ ಚುನಾವಣಾ ಸಮರದಲ್ಲಿ ಸಂಸ್ಥಾ ಕಾಂಗ್ರೆಸ್ ನೆಲಕಚ್ಚಿತ್ತು. ವಿಧಾನಸಭೆಯಲ್ಲಿ ಇಪ್ಪತ್ತೆರಡು ಶಾಸಕರಿದ್ದರಷ್ಟೆ. ಈ ಗುಂಪಿನ ಪ್ರತಿಪಕ್ಷದ ನಾಯಕರಾಗಿ ಈಗಿನ ಮಾಜಿ ಪ್ರಧಾನಿ ದೇವೇಗೌಡರಿದ್ದರು. ರಾಮಕೃಷ್ಣ ಹೆಗಡೆಯವರು ಆಗಿನ್ನೂ ಮೇಲ್ಮನೆ ಸದಸ್ಯರಾಗಿರಲಿಲ್ಲ. ಅಂಥ ಒಂದು ದಿನ ಹೆಗಡೆಯವರ ಮನೆಗೆ ಹೋದೆ. ಹೆಗಡೆಯವರೆಂದರೆ ಅಚ್ಚುಕಟ್ಟಿಗೆ ಹೆಸರುವಾಸಿ. ಆದರೆ ಆ ದಿನ ಅವರ ಮನೆ ಮುಂದಿನ ಹುಲ್ಲು ಹಾಸು ಮನಸೋ ಇಚ್ಛೆ ಬೆಳೆದು ನಿಂತಿತ್ತು. ಈ ಹಿಂದೆ ಎರಡು ಮೂರು ಬಾರಿ ಮಾತ್ರ ನಾನವರನ್ನು ಕಂಡಿದ್ದೆ. ಆಗ ಪತ್ರಕರ್ತರ ಸಂಖ್ಯೆಯೂ ಕಡಿಮೆಯೆ. ನಾನಾಗ ಒಂದು ವಾರ ಪತ್ರಿಕೆಗೆ ಕೆಲಸ ಮಾಡುತ್ತಿದ್ದೆ. ಹೀಗಾಗಿ ಯಾವುದೇ ರಾಜಕಾರಣಿಗೆ ಪತ್ರಕರ್ತರ ನೆನಪು ನಿಖರವಾಗಿ ಇರುತ್ತಿತ್ತು.

'ಬೆಳೆದು ನಿಂತ ಹುಲ್ಲಿನ ಬಗ್ಗೆ ಯಾಕೆ ಸರ್! ಹೀಗೆ? ಎಂದು ಕೇಳಿದೆ.
'ಈಗ ನನ್ನ ಕೈಲಿ ಯಾವ ಅಧಿಕಾರವೂ ಇಲ್ಲವಲ್ಲ' ಎಂದು ಅರ್ಥಗರ್ಭಿತವಾಗಿ ನಕ್ಕರು.

1983. ದಿನಗಳು ಬದಲಾಗಿದ್ದವು. ಹೆಗಡೆ ಮುಖ್ಯಮಂತ್ರಿಯಾಗಿದ್ದರು. ನಾನು ನಗರದ ಸಂಜೆಪತ್ರಿಕೆಯೊಂದರಲ್ಲಿ ಪ್ರಧಾನ ವರದಿಗಾರನಾಗಿದ್ದೆ. ಒಂದು ದಿನ ಕಾರ್ಯನಿಮಿತ್ತ ಅವರ ಮನೆ ಕೃತ್ತಿಕಾ'ಗೆ ಹೋಗಿದ್ದೆ. ಮನೆ ಮುಂದೆ ಅಪಾರ ಹುಲ್ಲು ಬೆಳೆದಿತ್ತು. ಮುಖ್ಯಮಂತ್ರಿಯಾದ ಮೇಲೂ ಅವರು ಸರ್ಕಾರಿ ಬಂಗಲೆಗೆ ಹೋಗದೆ ತಮ್ಮ ಸ್ವಂತ ಮನೆಯಲ್ಲೇ ಇದ್ದರು.

ಸಹಜವಾಗಿಯೇ ಕೇಳಿದೆ. 'ಸರ್! ಇದೇನು ಹುಲ್ಲು ಹೇಗೆಂದರೆ ಹಾಗೆ ಬೆಳೆದು ಬಿಟ್ಟಿದೆಯಲ್ಲ, ಅದನ್ನು ಅಂದವಾಗಿ ಕತ್ತರಿಸಲು ಕೆಲಸದವರಿಗೆ ಹೇಳಬಾರದೆ?'
ಹೆಗಡೆಯವರದ್ದು ಅದೇ ಸ್ನಿಗ್ಧ ಮುಗುಳ್ನಗೆ. ಅವರ ಆ ನಗೆಯಲ್ಲಿ ಹಲವು ಅರ್ಥಗಳು ಹರಳುಗಟ್ಟುವುದನ್ನು ಬಹುತೇಕರು ಕಂಡಿರುವಂಥದ್ದೆ. ಒಂದು ಸುದೀರ್ಘ ನಿಟ್ಟುಸಿರು ಬಿಟ್ಟು ಹೇಳಿದರು. 'ಹೂಂ ಅಧಿಕಾರ ಸಿಕ್ಕಿದೆ. ಆದರೆ ಈ ಹುಲ್ಲಿನ ಕೆಲಸಕ್ಕೆ ಈಗ ಬಿಡುವೇ ಇಲ್ಲ'.

ನಿಮಗೆ ಆಶ್ಚರ್ಯ ಅನ್ನಿಸಬಹುದು. ಅವರು ಮುಖ್ಯಮಂತ್ರಿಯಾದರೂ ತಮ್ಮ ಮನೆಗೆ ಸರ್ಕಾರಿ ಆಳುಗಳನ್ನು ನೇಮಿಸಿಕೊಂಡಿರಲಿಲ್ಲ. ಅವರದ್ದು ಆದರ್ಶದ ಬದುಕು ಎಂದು ಹೇಳುವುದಕ್ಕೆ ಈ ಪ್ರಸಂಗವನ್ನು ಇಲ್ಲಿ ಹೇಳಬೇಕಾಯಿತು.

ನಿಸ್ಸಂದೇಹವಾಗಿ ರಾಮಕೃಷ್ಣ ಹೆಗಡೆ ದೇಶದ ರಾಜಕಾರಣದಲ್ಲಿ ಮುಂಚೂಣಿಯಲ್ಲಿದ್ದವರು. ದೇಶದ ಉದ್ದಗಲಕ್ಕೂ ಅವರ ಹೆಸರು ಪರಿಚಿತವಾಗಿತ್ತು. ಒಂದು ಬಾರಿಯಂತೂ ದೇಶದ ಮಾಧ್ಯಮಗಳು ಅವರನ್ನು ಮುಂದಿನ ಪ್ರಧಾನಿಯೆಂದೇ ಬಿಂಬಿಸಿದ್ದವು. ಪ್ರಧಾನಿಯಾಗುವ ಅವಕಾಶ ಅವರ ತೊಡೆಯ ಮೇಲೆ ಬಂದು ಕುಳಿತಾಗ, ಅದರ ಅರಿವು ಹೆಗಡೆಯವರಿಗೆ ಆಗುವುದಕ್ಕೂ ಮೊದಲೇ ಅದು ದೇವೇಗೌಡರನ್ನು ತಬ್ಬಿ ಹಿಡಿದಿತ್ತು. ಹೆಗಡೆ ಅಸಮಾಧಾನಕ್ಕೆ ಇದೂ ಒಂದು ಕಾರಣವಾಯಿತೆನ್ನಬೇಕು. ಹೆಗಡೆ ತಮಗೆ ಕಾಲ್ತೊಡಕಾಗಬಹುದು ಎಂದು ದೇವೇಗೌಡರು ಭಾವಿಸಿದರು. ಹಾಗೆ ಭಾವಿಸಿದ್ದೇ ತಡ ಹೆಗಡೆಯವರನ್ನು ಪಕ್ಷದಿಂದಲೇ ಉಚ್ಚಾಟಿಸಿದರು. ಇಲ್ಲಿಂದಾಚೆಗೆ ಅವರ ರಾಜಕೀಯ ಬದುಕು ಕುಸಿಯತೊಡಗಿತು.

ಅವರು 1983ರಲ್ಲಿ ಮುಖ್ಯಮಂತ್ರಿಯಾದಾಗ ಇಡೀ ಶಾಸಕರಷ್ಟೇ ಅಲ್ಲ; ರಾಜ್ಯದ ಜನರೂ ಅವರ ಹಿಂದಿದ್ದರು. ಅವರು ನಿಧನರಾದಾಗ ಅವರಿಂದ ಉಪಕಾರ ಹೊಂದಿದ್ದ ಬಹುತೇಕ ಮಂದಿ ಅವರ ಬಳಿ ಸುಳಿಯಲೂ ಇಲ್ಲ. ಬದುಕು ಯಾವ ಕಾಲಕ್ಕೂ ನಿಗೂಢವೆ. ಅದನ್ನು ಅರಿಯಲು ಯಾರಿಂದಲೂ ಸಾಧ್ಯವಿಲ್ಲ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X