ನಾನೂ ಸಚಿವ ಸ್ಥಾನದ ಆಕಾಂಕ್ಷಿ, ಹೈಕಮಾಂಡ್‌ ಕೂಡ ಮಂತ್ರಿ ಮಾಡುವ ಭರವಸೆ ಕೊಟ್ಟಿದೆ, ಡಿಸಿಎಂ ಪ್ರಸ್ತಾವನೆ ಇಟ್ಟಿಲ್ಲ: ಯತೀಂದ್ರ

ಬೆಂಗಳೂರು: ರಾಜ್ಯ ಕಾಂಗ್ರೆಸ್‌ ಸರ್ಕಾರದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್‌ ಪ್ರಮಾಣವಚನಕ್ಕೆ ಕ್ಷಣಗಣನೆ ಶುರುವಾಗಿದೆ. ಇತ್ತ ಸಚಿವ ಸಂಪುಟ ಪುನರ್‌ರಚನೆ ಚರ್ಚೆಗಳು ಜೋರಾಗಿರುವ ಬೆನ್ನಲ್ಲೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ, ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಅವರು ನೀಡಿರುವ ಹೇಳಿಕೆ ಈಗ ಹೊಸ ಸಂಚಲನ ಸೃಷ್ಟಿಸಿದೆ. "ನಾನು ಕೂಡ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದು, ಹೈಕಮಾಂಡ್ ಮಂತ್ರಿ ಮಾಡುವುದಾಗಿ ಭರವಸೆ ನೀಡಿದೆ" ಎಂದು ಯತೀಂದ್ರ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ.

ಹೈಕಮಾಂಡ್‌ನಿಂದ ಸಿಕ್ಕಿದೆ ಭರವಸೆ

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪುಟ ಸೇರ್ಪಡೆ ಹಾಗೂ ಉಪಮುಖ್ಯಮಂತ್ರಿ (DCM) ಹುದ್ದೆಯ ಪ್ರಸ್ತಾವನೆಗಳ ಕುರಿತು ಮುಕ್ತವಾಗಿ ಮಾತನಾಡಿದರು. ತಮ್ಮ ರಾಜಕೀಯ ಭವಿಷ್ಯ ಹಾಗೂ ಸಂಪುಟ ಸೇರ್ಪಡೆ ಕುರಿತು ಮಾತನಾಡಿದ ಡಾ. ಯತೀಂದ್ರ, "ನಾನು ಸಚಿವ ಸ್ಥಾನದ ಆಕಾಂಕ್ಷಿ ಎನ್ನುವುದರಲ್ಲಿ ಯಾವುದೇ ಮುಚ್ಚುಮರೆ ಇಲ್ಲ. ಈ ಹಿಂದೆಯೇ ಹೈಕಮಾಂಡ್ ನಾಯಕರು ನನಗೆ ಮಂತ್ರಿ ಸ್ಥಾನ ನೀಡುವುದಾಗಿ ಭರವಸೆ ಕೊಟ್ಟಿದ್ದಾರೆ. ಹೈಕಮಾಂಡ್ ಮತ್ತು ಪಕ್ಷದ ಹಿರಿಯ ನಾಯಕರು ಕೈಗೊಳ್ಳುವ ತೀರ್ಮಾನಕ್ಕೆ ನಾನು ಬದ್ಧನಾಗಿರುತ್ತೇನೆ" ಎಂದು ತಿಳಿಸಿದ್ದಾರೆ.

Yathindra Siddaramaiah

ಡಿಸಿಎಂ ಹುದ್ದೆ 'ಕೊಟ್ಟರೆ ನೋಡೋಣ'

ಇದೇ ವೇಳೆ ರಾಜ್ಯದಲ್ಲಿ ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆಗಳ ಸೃಷ್ಟಿ ಹಾಗೂ ತಮಗೆ ಡಿಸಿಎಂ ಪಟ್ಟ ಸಿಗಲಿದೆಯೇ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, "ನಾನು ಹೈಕಮಾಂಡ್ ಮುಂದೆ ಯಾವುದೇ ಡಿಸಿಎಂ ಹುದ್ದೆಯ ಪ್ರಸ್ತಾವನೆಯನ್ನು ಇಟ್ಟಿಲ್ಲ. ಸದ್ಯಕ್ಕೆ ಅಂತಹ ಆಲೋಚನೆಯೂ ನನಗಿಲ್ಲ. ಆದರೆ, ಒಂದು ವೇಳೆ ಪಕ್ಷವೇ ಮುಂದೆ ನಿಂತು ಆ ಹುದ್ದೆಯನ್ನು ಕೊಟ್ಟರೆ, ಆಗ ಆ ಬಗ್ಗೆ ಯೋಚನೆ ಮಾಡೋಣ" ಎನ್ನುವ ಮೂಲಕ ಕುತೂಹಲದ ನಡೆ ಪ್ರದರ್ಶಿಸಿದ್ದಾರೆ.

ಮುಖ್ಯಮಂತ್ರಿಗಳ ಪುತ್ರನೇ ನೇರವಾಗಿ ಸಚಿವ ಸ್ಥಾನದ ಆಕಾಂಕ್ಷಿ ಎಂದು ಹೇಳಿರುವುದು ಮತ್ತು ಹೈಕಮಾಂಡ್ ಭರವಸೆಯ ಬೆಂಬಲವಿದೆ ಎಂದಿರುವುದು ಕಾಂಗ್ರೆಸ್ ವಲಯದಲ್ಲಿ ಹೊಸ ಚರ್ಚೆಗಳಿಗೆ ದಾರಿ ಮಾಡಿಕೊಟ್ಟಿದೆ. ಮುಂದಿನ ದಿನಗಳಲ್ಲಿ ನಡೆಯಲಿರುವ ಸಂಪುಟ ಕಸರತ್ತಿನಲ್ಲಿ ಯತೀಂದ್ರ ಸಿದ್ದರಾಮಯ್ಯ ಅವರಿಗೆ ಯಾವ ಜವಾಬ್ದಾರಿ ಸಿಗಲಿದೆ ಎಂಬುದನ್ನು ಕಾದುನೋಡಬೇಕಿದೆ.

DK Shivakumar: ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವುದಕ್ಕೂ ಮುಂಚೆ ವಿಶೇಷ ವ್ಯಕ್ತಿಯನ್ನು ಭೇಟಿ ಮಾಡಿದ ಡಿಕೆಶಿ
DK Shivakumar: ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವುದಕ್ಕೂ ಮುಂಚೆ ವಿಶೇಷ ವ್ಯಕ್ತಿಯನ್ನು ಭೇಟಿ ಮಾಡಿದ ಡಿಕೆಶಿ

ಜೂನ್ 3ರಂದು (ನಾಳೆ) ಸಂಜೆ ಡಿ.ಕೆ.ಶಿವಕುಮಾರ್ ಅವರು ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎನ್ನಲಾಗಿದೆ. ಡಿ.ಕೆ.ಶಿವಕುಮಾರ್ ಅವರೊಂದಿಗೆ ಕೆಲವು ಪ್ರಮುಖ ಶಾಸಕರು ಕೂಡ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದ್ದು, ಸದ್ಯ ಯಾರೆಲ್ಲಾ ಹೊಸ ಸಂಪುಟ ಸೇರಲಿದ್ದಾರೆ ಎಂಬ ಕುತೂಹಲ ಇಡೀ ರಾಜ್ಯ ರಾಜಕಾರಣದಲ್ಲಿ ಮನೆಮಾಡಿದೆ.

ಸಚಿವ ಸ್ಥಾನಕ್ಕಾಗಿ ಶಾಸಕರ ಭರ್ಜರಿ ಲಾಬಿ

ಹೊಸ ಸರ್ಕಾರದಲ್ಲಿ ಸಚಿವ ಸ್ಥಾನ ಗಿಟ್ಟಿಸಿಕೊಳ್ಳಲು ಶಾಸಕರು ತೆರೆಮರೆಯಲ್ಲಿ ಭರ್ಜರಿ ಕಸರತ್ತು ನಡೆಸುತ್ತಿದ್ದಾರೆ. ಬೀದರ್‌ನಿಂದ ಹಿಡಿದು ಚಾಮರಾಜನಗರದವರೆಗಿನ ನಾಯಕರು ಮಂತ್ರಿಗಿರಿಗಾಗಿ ತೀವ್ರ ಪೈಪೋಟಿಗಿಳಿದಿದ್ದಾರೆ. ಹೈಕಮಾಂಡ್ ಮಟ್ಟದಲ್ಲಿ ಪ್ರಭಾವ ಬೀರಲು ಈಗಾಗಲೇ ಹಲವು ಶಾಸಕರು ದೆಹಲಿಯತ್ತ ಮುಖ ಮಾಡಿದ್ದು, ಹಿರಿಯ ನಾಯಕರನ್ನು ಭೇಟಿಯಾಗಿ ತಮಗೆ ಅವಕಾಶ ನೀಡುವಂತೆ ಒತ್ತಡ ಹೇರುತ್ತಿದ್ದಾರೆ.

ಹಳಬರಿಗೆ ಪಟ್ಟ ಕೈತಪ್ಪುವ ಭೀತಿ

ಇನ್ನೊಂದೆಡೆ, ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಸಚಿವರಾಗಿದ್ದ ಕೆಲವರಿಗೆ ಈ ಬಾರಿ ಸ್ಥಾನ ಕೈತಪ್ಪುವ ಆತಂಕ ಎದುರಾಗಿದೆ. ಹೊಸ ಮುಖಗಳಿಗೆ ಆದ್ಯತೆ ನೀಡಲು ಹೈಕಮಾಂಡ್ ಒಲವು ತೋರಿರುವುದರಿಂದ, ಹಾಲಿ ಸಚಿವರ ಪೈಕಿ ಯಾರೆಲ್ಲ ತಮ್ಮ ಸ್ಥಾನ ಉಳಿಸಿಕೊಳ್ಳಲಿದ್ದಾರೆ ಮತ್ತು ಯಾರಿಗೆ ಕೋಕ್ ಸಿಗಲಿದೆ ಎಂಬ ಭೀತಿ ಶುರುವಾಗಿದೆ. ಈ ಎಲ್ಲ ರಾಜಕೀಯ ಬೆಳವಣಿಗೆಗಳ ನಡುವೆ, ಮಾಜಿ ಸಿಎಂ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಅವರಿಗೆ ಹೊಸ ಸಂಪುಟದಲ್ಲಿ ಸಚಿವ ಸ್ಥಾನ ಸಿಗುವುದು ಬಹುತೇಕ ಖಚಿತವಾಗಿದೆ. ಜೂನ್ 3ರಂದು ನಡೆಯಲಿರುವ ರಾಜಕೀಯ ಬೆಳವಣಿಗೆಗಳು ರಾಜ್ಯ ರಾಜಕಾರಣಕ್ಕೆ ಹೊಸ ದಿಕ್ಸೂಚಿ ನೀಡಲಿದ್ದು, ಯಾರಿಗೆ ಅದೃಷ್ಟ ಒಲಿಯಲಿದೆ ಎಂಬುದನ್ನು ಕಾದುನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+