Video: ಆಟೋದಲ್ಲೇ ಜ್ಯುವೆಲ್ಲರಿ ಶಾಪ್! ಬೆಂಗಳೂರು ಚಾಲಕನ ಐಡಿಯಾಗೆ ನೆಟ್ಟಿಗರಿಂದ ಭಾರಿ ಮೆಚ್ಚುಗೆ
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಆಟೋ ಚಾಲಕರು ನಾಗರಿಕರಿಗೆ ಸಾರಿಗೆ ಸೇವೆ ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಚಾಲಕರು ವಿನೂತನ ಆಲೋಚನೆಗಳೊಂದಿಗೆ ಪ್ರಯಾಣಿಕರಿಗೆ ಹತ್ತಿರವಾಗಲು ಪ್ರಯತ್ನಿಸುತ್ತಲೇ ಇರುತ್ತಾರೆ. ಅದೇ ರೀತಿ ಇಲ್ಲೊಬ್ಬ ಆಟೋ ಚಾಲಕರು ಆಟೋ ರಿಕ್ಷಾ ಒಳಗೆ 'ಮಿನಿ ಜ್ಯುವೆಲ್ಲರಿ ಶಾಪ್' ತೆರೆದಿದ್ದಾರೆ. ಇದು ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಹೊಸ ಐಡಿಯಾವನ್ನು ಮೆಚ್ಚಿಕೊಂಡಿದ್ದಾರೆ.
ಬೇಸಿಗೆ ಬಂತೆಂದರೆ ಆಟೋ ಮೇಲೆ ಹಸಿರು ಹೊದಿಕೆ, ಹೂವು ಗಿಡ ಬೆಳೆಸಿ ನೀರು ಹಾಕಿ ಪ್ರಯಾಣಿಕರಿಗೆ ಮುದ ನೀಡಿರುವ ಘಟನೆಗಳನ್ನು ನೋಡಿದ್ದೇವೆ. ಆಟೋ ಒಳಗೆ ಕುಡಿಯಲು ನೀರು, ಪ್ರಯಾಣಿಕರಿಗೆ ಓದಲು ಹೊತ್ತಿಗೆಗಳನ್ನು ಇಡುವ ಮೂಲಕ ವಿಭಿನ್ನ ಮತ್ತು ಉಪಯುಕ್ತ ಪ್ರಯಾಣದ ಅನುಭವ ನೀಡಿದ್ದನ್ನು ನೀವೆಲ್ಲರು ಕೇಳಿರುತ್ತೀರಿ. ಆದರೆ ಇಲ್ಲೊಬ್ಬರು ಪ್ರಯಾಣ ಮಾಡುವಾಗಲೇ ಶಾಪಿಂಗ್ ಮಾಡಲು ಅನುವಾಗುವಂತೆ ವಾಹನದ ಒಳಗೆ ಸಣ್ಣ ಜ್ಯುವೆಲ್ಲರಿ ಶಾಪ್ ತೆರೆದಿದ್ದಾರೆ.

ಆಟೋ ಚಾಲಕ ಮತ್ತು ಪ್ರಯಾಣಿಕರ ಮಧ್ಯ ಇರುವ ಜಾಗದಲ್ಲಿ ದೊಡ್ಡ ಗಾಜಿನ ಬಾಕ್ಸ್ ರೀತಿಯಲ್ಲಿ ಅಳವಡಿಸಿದ್ದಾರೆ. ಅದರೊಳಗೆ ಕಿವಿಯೋಲೆ, ಮೂಗುತಿ, ಬಣ್ಣ ಬಣ್ಣದ ಬಳೆಗಳು, ಮಿಂಚುವ ಸರಗಳು ಇನ್ನಿತರ ಮಹಿಳೆಯರ ಅಲಂಕಾರಿಕ ಕೃತಕ ಆಭರಣಗಳನ್ನು ಮಾರಾಟಕ್ಕಿಟ್ಟಿದ್ದಾರೆ. ಆಟೋದೊಳಗೆ ಕೂತರೆ ಜ್ಯುವೆಲ್ಲರಿಗೆ ಶಾಪ್ ಮುಂದೆ ಆಭರಣಗಳ ಆಯ್ಕೆಗೋಸ್ಕರ ಕೂತಂತೆ ಭಾಸವಾಗುವಂತೆ ಚಾಲಕ ಮಾಡಿದ್ದಾರೆ.
ಯುವತಿಯರು, ಮಹಿಳೆಯರು ಸೇರಿದಂತೆ ಯಾರೇ ಆಟೋದೊಳಗೆ ಕೂತರು ಸಹಿತ ಥಟ್ಟನೆ ಕಣ್ಣು ಈ ಆಭರಣಗಳತ್ತ ಹೋಗುತ್ತದೆ. ಪ್ರಯಾಣದ ಸಂದರ್ಭದಲ್ಲೇ ಸಮಯದ ಗೊಡವೆ ಇಲ್ಲದೇ ಖರೀದಿಸಬಹುದು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಬೆಂಗಳೂರು ಬ್ರೋ ಎಂಬುವವರು ವಿಡಿಯೋ ಹಂಚಿಕೊಂಡಿದ್ದಾರೆ.
ಪ್ರಯಾಣಿಕರೇ ಪ್ಯಾಕ್ ಮಾಡಿಕೊಳ್ಳಬಹುದು..
ವಿಡಿಯೋ ಮೇಲೆ 'ಬೆಂಗಳೂರಿನ ಆಟೋ-ರಿಕ್ಷಾ ಚಾಲಕನೊಬ್ಬ ತನ್ನ ವಾಹನವನ್ನು ಮೊಬೈಲ್ ಮಿನಿ-ಆಭರಣ ಅಂಗಡಿಯನ್ನಾಗಿ ಪರಿವರ್ತಿಸಿದ್ದಾರೆ. ಈ ಮೂಲಕ ಗಮನ ಸೆಳೆದಿದ್ದಾರೆ. ಇನ್‌ಸ್ಟಾಗ್ರಾಮ್ ಮತ್ತು ಎಕ್ಸ್‌ನಂತಹ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ವಿಡಿಯೋ ಹರಿದಾಡುತ್ತಿದೆ. ವಿವಿಧ ಕೃತಕ ಆಭರಣಗಳನ್ನು ಪ್ರದರ್ಶಿಸುವ ದೊಡ್ಡ, ಅಚ್ಚುಕಟ್ಟಾಗಿ ಪ್ರದರ್ಶನ ಫಲಕ ಒಳಗಿದೆ. ಕುಖ್ಯಾತ ದಟ್ಟಣೆಯಲ್ಲಿ ಸಂಚರಿಸುವ ಪ್ರಯಾಣಿಕರು ಕಿವಿಯೋಲೆಗಳು, ಬಳೆಗಳು, ನೆಕ್ಲೇಸ್‌ಗಳು ಮತ್ತು ಸಾಂಪ್ರದಾಯಿಕ ಜುಮ್ಕಾಗಳಂತಹ ಕೂತಲ್ಲೇ ಖರೀದಿಸಬಹುದು. ತಡೆರಹಿತ ಚಿಲ್ಲರೆ ಅನುಭವ ಪಡೆಯಬಹುದು. ಅಲ್ಲಿಯೇ ಕಾಗದದ ಲಕೋಟೆಗಳನ್ನು ಇಟ್ಟಿದ್ದು, ಪ್ರಯಾಣಿಕರೇ ಪ್ಯಾಕ್ ಮಾಡಿಕೊಳ್ಳಬಹುದೆಂದು' ವಿಡಿಯೋ ಮೇಲೆ ಬರೆದುಲಾಗಿದೆ. ಆಟೋ ಇಳಿಯುವ ಪ್ರಯಾಣ ಮತ್ತು ಆಭರಣಗಳ ದುಡ್ಡು ಎರಡು ನೀಡಬಹುದು.
ಚಾಲಕನ ಐಡಿಯಾ ಮೆಚ್ಚಿದ ನೆಟ್ಟಿಗರು
ವಿಡಿಯೋ ನೆಟ್ಟಿಗರಲ್ಲಿ ಒಬ್ಬರು 'ಡ್ರೈವಿಂಗ್ ಜೊತೆಗೆ ಉತ್ತಮ ಪಾರ್ಟ್ ಟೈಮ್ ಜಾಬ್ ಕಂಡುಕೊಂಡಿದ್ದಾರೆ' ಎಂದರು. ಇನ್ನೊಬ್ಬರು 'ಇದೊಂದು ಒಳ್ಳಯ ಐಡಿಯಾ' ಎಂದರೆ ಮೂರನೇಯವರು 'ಯುವಕ-ಯುವತಿಯರ ಜೋಡಿಗೆ ಇದು ಹೆಚ್ಚು ಇಷ್ಟವಾಗುತ್ತದೆ' ಎಂದಿದ್ದಾರೆ. ಮತ್ತೊಬ್ಬರು 'ರಾತ್ರಿ ವೇಳೆ ಆಟೋ ರಿಕ್ಷಾ ಪ್ರಯಾಣಿಕರ ಸೀಟುಗಳು ಕೂಡ ಕಳುವಾಗುತ್ತವೆ. ಆಟೋ ಇಲ್ಲದಿದ್ದಾಗ ಚಾಲಕ ಇದೆಲ್ಲ ಹೇಗೆ ನಿಭಾಯಿಸುತ್ತಾರೆ ಎಂಬುದು ತಿಳಿದಿಲ್ಲ' ಕಳ್ಳತನ ಕುರಿತು ಕಳವಳವ್ಯಕ್ತಪಡಿಸಿದ್ದಾರೆ. ಬಹುತೇಕ ಮಂದಿ ಚಾಲಕನ ವಿನೂತನ ಐಡಿಯಾವನ್ನು ಮೆಚ್ಚಿದ್ದಾರೆ.














Click it and Unblock the Notifications