ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭೂಸುಧಾರಣೆಯ ಹರಿಕಾರ ದೇವರಾಜ ಅರಸು

By Staff
|
Google Oneindia Kannada News

Former Chief Minister of Karnataka Devaraj Urs
ದೇವರಾಜ ಅರಸು (ಕಲೆ : ಬಿ.ಜಿ. ಗುಜ್ಜಾರಪ್ಪ)
ಪರಿಶಿಷ್ಟ ಜಾತಿ, ವರ್ಗ ಮತ್ತು ಹಿಂದುಳಿದ ಪಂಗಡಗಳ ಮೂಕ ಬಾಯಿಗೆ ರಾಜಕೀಯ ದನಿ ನೀಡಿದ್ದ ಮಾಜಿ ಮುಖ್ಯಮಂತ್ರಿ ದೇವರಾಜ ಅರಸರು ನಿಜವಾದ ಗ್ರಾಮೀಣಾಭಿವೃದ್ಧಿಯ ಹರಿಕಾರ. ಭೂಸುಧಾರಣಾ ಕಾಯ್ದೆಯನ್ನು ಜಾರಿಗೆ ತಂದರು. ಗ್ರಾಮೀಣ ಜನತೆಯಲ್ಲಿ ಜೀವನೋಲ್ಲಾಸ ಹೆಚ್ಚಿಸಲು ಶ್ರಮಿಸಿದರು. ಜೀವನದುದ್ದಕ್ಕೂ ಆನಂದವನ್ನು ಸೂರೆ ಮಾಡುತ್ತಲೇ ಅಂತಃಕರಣದ ಪ್ರತಿರೂಪವಾದ ಅತ್ಯಂತ ಅಪರೂಪದ ಮನುಷ್ಯ.

ಅಂಕಣಕಾರ : ಜೆ.ಎಸ್. ನಾರಾಯಣ ರಾವ್ (ಜೆಸುನಾ)

ರಣಗುಟ್ಟುವ ಬಿಸಿಲು. ಭೀಮಕಾಯದ ಯುವ ರೈತನೊಬ್ಬ ಹೊಲದ ಕೆಲಸ ಮುಗಿಸಿಕೊಂಡು ಗದ್ದೆಯ ಬದುಗಳ ಮೇಲೆ ದಾಪುಗಾಲು ಹಾಕುತ್ತಾ ಬರುತ್ತಿದ್ದಾನೆ. ಎದುರು ಭಾಗದಿಂದ ನಾಲ್ಕೈದು ವ್ಯಕ್ತಿಗಳ ಒಂದು ಗುಂಪು ತನ್ನತ್ತಲೇ ಬರುತ್ತಿರುವುದನ್ನು ಕಂಡು ಯುವಕನಲ್ಲಿ ಕುತೂಹಲ ಗರಿಗೆದರಿತು. ಬಿಸಿಲಿನ ಪ್ರಖರತೆಯಿಂದಾಗಿ ಕಣ್ಣನ್ನು ಕಿರಿದಾಗಿಸಿ ನಿರುಕಿಸಿ ನೋಡಿದ. ಬರುತ್ತಿರುವ ಜನ ಯಾರೂಂತ ಗೊತ್ತಾಗಿ ಬಿಟ್ಟಿತು.

ಎದುರು ಭಾಗದ ಗುಂಪಿನಿಂದ ಹಳೆ ಮೈಸೂರಿನ ರಾಜಕೀಯ ಹುಲಿಯೆಂದು ಚರಿತ್ರಾರ್ಹ ವ್ಯಕ್ತಿಯಾಗಿ ಸೇರಿಹೋಗಿರುವ ಸಾಹುಕಾರ್ ಚೆನ್ನಯ್ಯನವರು ತಮ್ಮ ಇತರೆ ರಾಜಕೀಯ ಗೆಳೆಯರೊಂದಿಗೆ ಬರುತ್ತಿದ್ದರು. ಹೊಲದಿಂದ ಬರುತ್ತಿದ್ದ ರೈತ ಯುವಕ ದೇವರಾಜ ಅರಸು ಆಗಿದ್ದರು. ಸಾಹುಕಾರ್ ಚೆನ್ನಯ್ಯ ಅರಸರ ರಾಜಕೀಯ ಗುರು.

"ಏನ್ ಸಾರ್! ಈ ಉರಿ ಬಿಸಿಲಿನಲ್ಲಿ ದಯಮಾಡಿಸಿಬಿಟ್ಟಿರಿ?'' ಎಂದು ದೇವರಾಜ ಅರಸು ಆಶ್ಚರ್ಯ ಪ್ರಕಟಿಸುತ್ತಲೇ ಗುರುವನ್ನು ಹಾರ್ದಿಕವಾಗಿ ಸ್ವಾಗತಿಸಿದರು.
"ಅರಸು, ನನ್ನ ಮಾತೊಂದನ್ನು ನೀನು ನಡೆಸಿಕೊಡಬೇಕಪ್ಪ" ಎಂದು ಸಾಹುಕಾರ್ ಚೆನ್ನಯ್ಯ ಮಾತಿಗೆ ಆರಂಭಿಸಿದರು.
"ಹೇಳಿ ಸಾರ್, ನೀವು ಕೇಳೋದು ಹೆಚ್ಚೊ, ನಾನು ಮಾಡೋದು ಹೆಚ್ಚೊ".
"ನೋಡಪ್ಪ ಅರಸು, ಮೈಸೂರು ಪ್ರಜಾಪ್ರತಿನಿಧಿ ಸಭೆ ಚುನಾವಣೆಯಲ್ಲಿ ನೀನು ನಮ್ಮ ಅಭ್ಯರ್ಥಿಯಾಗಿ ನಿಲ್ಲಬೇಕು. ಇದು ನಮ್ಮ ಪಕ್ಷದ ಗೌರವದ ಪ್ರಶ್ನೆ.''

ದೇವರಾಜ ಅರಸು ಒಂದು ಕ್ಷಣ ಯೋಚಿಸಿದರು. ಚುನಾವಣೆಗೆ ನಿಲ್ಲುವುದೆಂದರೆ ಮೈಸೂರು ಅರಸರ ವಿರುದ್ಧ ನಿಂತಂತೆಯೆ. ರಾಜವಂಶದ ಆಳ್ವಿಕೆಯ ವಿರುದ್ಧ ಕಾಂಗ್ರೆಸ್ ಪಕ್ಷ ತಿರುಗಿಬಿದ್ದ ಪರ್ವ ಕಾಲವದು. ಇಸವಿ 1941. ದೇವರಾಜ ಅರಸು ಆಗಿನ್ನೂ ಇಪ್ಪತ್ತಾರು ವರ್ಷದ ಯುವಕ. ತನ್ನ ಜಾತಿಯ ಅರಸರ ವಿರುದ್ಧವೇ ನಿಲ್ಲುವುದೆಂದರೆ ಗಂಡೆದೆಯೇ ಬೇಕಾದಂಥ ಸನ್ನಿವೇಶ. ಅರಸು ತಡ ಮಾಡಲಿಲ್ಲ. ಆಯ್ತು ಸರ್! ನೀವು ಹೇಗೆ ಹೇಳಿದರೆ ಹಾಗೆ ಎಂದು ತಮ್ಮ ಒಪ್ಪಿಗೆ ಕೊಟ್ಟೇ ಬಿಟ್ಟರು. ಠೇವಣಿ ತುಂಬಲು ದೇವರಾಜ ಅರಸರ ಬಳಿ ಹಣ ಇರಲಿಲ್ಲ. ಠೇವಣಿ ಮೊತ್ತ ಐವತ್ತು ರೂಪಾಯಿಗಳನ್ನು ಸಾಹುಕಾರ ಚೆನ್ನಯ್ಯನವರೇ ತುಂಬಿದರು. ಇಪ್ಪತ್ತು ರೂಪಾಯಿ ಕಂದಾಯ ಕಟ್ಟುವ ಪ್ರಜೆಗಳೆಲ್ಲಾ ಮತದಾರರಾಗಿದ್ದರು. ಪ್ರಬಲ ಪೈಪೋಟಿಯಲ್ಲಿ ಅರಸು ಮತ್ತು ಎಚ್.ಎಂ. ಚನ್ನಬಸಪ್ಪ ಆಯ್ಕೆಯಾದರು.

ಮುಂದೆ ದೇವರಾಜ ಅರಸರ ರಾಜಕೀಯದ ಹೆಬ್ಬಾಗಿಲು ವಿಶಾಲವಾಗಿ ತೆರೆದುಕೊಂಡ ರೀತಿಯದು. ಎಲ್ಲರೂ ಹೌಹಾರುವ ರೀತಿಯಲ್ಲಿ ಅರಸು ಶಾಸಕರಾದರು. ಇದು ಅವರ ರಾಜಕೀಯ ಬದುಕಿನ ಆರಂಭದ ಮುಖ. ಇಲ್ಲಿಂದ ದೇವರಾಜ ಅರಸು ರಾಜಕೀಯದಲ್ಲಿ ಯಾರೂ ಏರದ ಎತ್ತರಕ್ಕೆ ಏರಿದರು. ರಾಜ್ಯದ ಎಲ್ಲ ವರ್ಗಗಳ ಜನರ ಹೃದಯದಲ್ಲಿ ಶಾಶ್ವತವಾಗಿ ನೆಲೆನಿಂತರು. ಜನಪರ ಕೆಲಸಗಳನ್ನು ಯಾರೂ ಊಹಿಸದ ರೀತಿಯಲ್ಲಿ ಮಾಡಿದರು. ಜನೋತ್ಕರ್ಷಕ್ಕಾಗಿ ಕಾನೂನು ಅಡ್ಡಿ ಬಂದಾಗ ಅದನ್ನು ಧಿಕ್ಕರಿಸಿದರು. ಗತಿ ಇಲ್ಲದವರಿಗೆ ಬೆಳಕಾದರು. ದೇವರಾಜ ಅರಸರ ಕೊನೆಗಾಲದ ರಾಜಕೀಯ ಬದುಕು ಬೇರೆಯದೇ ಆದ ರೀತಿಯಲ್ಲಿ ಬಿಚ್ಚಿಕೊಳ್ಳುತ್ತದೆ. ಇಲ್ಲಿ ವಿಷಾದ ಅನಾವರಣಗೊಳ್ಳುತ್ತಲೇ, ಅರಸರ ಸುತ್ತಲೂ ಸುತ್ತುವರೆದಿದ್ದ ಅವಕಾಶವಾದಿಗಳ ವಿಭಿನ್ನ ಮುಖವಾಡಗಳೂ ಕಳಚಿ ಬೀಳುತ್ತವೆ.

ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಕಲ್ಲಹಳ್ಳಿಯಲ್ಲಿ ಹುಟ್ಟಿದ (ಜನನ : 20-8-1915) ಅರಸರು ಪನಾಮಾ ಸಿಗರೇಟು ಸೇದುತ್ತಿದ್ದರು. ಅಧಿಕಾರದಲ್ಲಿದ್ದರೂ ಸ್ವತಃ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದರು. ಹೈನುಗಾರಿಕೆಯನ್ನು ಮಾಡುತ್ತಿದ್ದ ಅವರು ಹಾಲನ್ನು ಡಬ್ಬಗಳಲ್ಲಿ ತುಂಬಿಕೊಂಡು ಸೈಕಲ್ಲಿನ ಮೇಲೆ ಪಟ್ಟಣಕ್ಕೆ ತೆಗೆದುಕೊಂಡು ಹೋಗಿ ಮಾರುತ್ತಿದ್ದರು. ಕೈಲಿ ಕಾಸಿಲ್ಲದಿದ್ದಾಗ ಮೈಸೂರಿನಿಂದ ನಡೆದುಕೊಂಡೇ ಹಳ್ಳಿ ಸೇರುತ್ತಿದ್ದರು. ಇಂಥ ದೇವರಾಜ ಅರಸು ಬೆಂಗಳೂರಿನ ವಿಧಾನಸೌಧಕ್ಕೆ ಕಾಲಿಡುತ್ತಲೇ ಇಂಡಿಯಾ ಕಿಂಗ್ ಸಿಗರೇಟು ಶೈಲಿಗೆ ಬದಲಾದರು. ಕೊನೆಗದು ಪೈಪ್‌ನಲ್ಲಿ ಮುಕ್ತಾಯ ಕಂಡಿತು. ಹಾಗೆಯೇ ಮೂರನೆ ದರ್ಜೆ ಮಧುಪಾತ್ರೆಯನ್ನು ಹಿಡಿದಿದ್ದ ಕೈಗೆ ಅತಿ ದುಬಾರಿ ಬೆಲೆಯ ರಾಯಲ್ ಸಲ್ಯೂಟ್ ಬಂದು ಕೂತುಕೊಂಡಿತು.

1969ನೇ ವರ್ಷ. ಬೆಂಗಳೂರಿನ ಗಾಜಿನ ಮನೆಯಲ್ಲಿ ಕಾಂಗ್ರೆಸ್ ಇಬ್ಭಾಗಗೊಂಡಿತು. ಒಂದೆಡೆ ಇಂದಿರಾಗಾಂಧಿ. ಇನ್ನೊಂದೆಡೆ ಆಗಿನ ಕಾಂಗ್ರೆಸ್ ಅಧ್ಯಕ್ಷ ನಿಜಲಿಂಗಪ್ಪ. ದೇವರಾಜ ಅರಸರಿಗೆ ಸಂದಿಗ್ಧ. ಯಾರ ಗುಂಪಿಗೆ ಹೋಗಿ ಸೇರಿಕೊಳ್ಳುವುದು? ಅರಸು ತಡಮಾಡಲಿಲ್ಲ; ಇಂದಿರಾಗಾಂಧಿ ವಲಯಕ್ಕೆ ಸೇರ್ಪಡೆಯಾದರು. ಹಾಗೇ ಅವರಿಗೆ ತೀರಾ ಹತ್ತಿರವೂ ಆಗಿಬಿಟ್ಟರು. ಮುಂದೆ ಎಲ್ಲವೂ ಇತಿಹಾಸ. ಸುಮಾರು ಹತ್ತು ವರ್ಷಗಳಿಗೂ ಮೇಲ್ಪಟ್ಟು ದೇವರಾಜ ಅರಸು ರಾಜ್ಯದ ಏಕಮೇವಾದ್ವಿತೀಯ ನಾಯಕರಾಗಿ ವಿಜೃಂಭಿಸಿದರು. ಸಮಾಜವಾದವನ್ನು ನಿಜದ ಅರ್ಥದಲ್ಲಿ ಕೃತಿಯಲ್ಲಿ ಇಳಿಸಿದರು. ಅವರ ಆದೇಶಗಳನ್ನು ರಾಜಕಾರಣಿಗಳು, ಅಧಿಕಾರಿಗಳು ಮರುಮಾತಿಲ್ಲದೆ ಜಾರಿಗೆ ತಂದರು. ಎಲ್ಲ ವರ್ಗದ ಜನ ಅವರನ್ನು ಬುದ್ಧಿ, ಅಪ್ಪಾಜಿ ಎಂದೇ ಸಂಬೋಧಿಸತೊಡಗಿದರು.

1972 ರಾಜ್ಯದ ಸ್ವರ್ಣ ಯುಗ. ಇಂದಿರಾ ಕೃಪೆಯಿಂದ ಅರಸು ರಾಜ್ಯದ ಮುಖ್ಯಮಂತ್ರಿಯಾದರು. ಬಡವರ ಪರವಾಗಿ ಕಂಡ ಕನಸುಗಳನ್ನು ಕಾರ್ಯರೂಪಕ್ಕೆ ತರತೊಡಗಿದರು. ಸಮಯಪ್ರಜ್ಞೆ ಅರಸರಲ್ಲಿದ್ದ ಧೀಮಂತಶಕ್ತಿ. ಸಮಾಜಕ್ಕೆ ಒಳಿತಾಗುವ ಕೆಲಸವನ್ನು ಎಷ್ಟೇ ಸಣ್ಣ ಅಧಿಕಾರಿ ಹೇಳಿದರೂ ಅವರು ಅದನ್ನು ಕೂಡಲೇ ಜಾರಿಗೆ ತಂದು ಬಿಡುತ್ತಿದ್ದರು. ಅರಣ್ಯ ರಕ್ಷಣೆಗೆ ಆಗ ಭಾರತದಲ್ಲಿ ಸೂಕ್ತ ಕಾನೂನುಗಳೇನೂ ಇರಲಿಲ್ಲ. ಇದ್ದದ್ದೆಲ್ಲಾ ಬ್ರಿಟಿಷರ ಕಾಲದ್ದು. ಹೀಗಾಗಿ ಕಾಡನ್ನು ಜನ ಲೂಟಿ ಮಾಡುತ್ತಿದ್ದರು. ಪಶ್ಚಿಮ ಘಟ್ಟಗಳ ದಟ್ಟಾರಣ್ಯದಲ್ಲಿ ಬಿಡು ಬೀಸಾಗಿ ನಿಂತಿದ್ದ ತೇಗ, ಬೀಟೆ, ಶ್ರೀಗಂಧ ಮುಂತಾದ ಸಂಪತ್ತು ಸಿಕ್ಕಿದವರ ಸೀರುಂಡೆಯಾಗಿತ್ತು. ಜೀವ ಸಂಕುಲಕ್ಕೆ ಚೈತನ್ಯವಾಗಿದ್ದ ಕಾಡು ಕಣ್ಮುಂದೆಯೇ ಕರಗಿ ಹೋಗುತ್ತಿರುವುದನ್ನು ಕಂಡು ಆಗ ಅರಣ್ಯ ಇಲಾಖೆಯಲ್ಲಿ ಸಣ್ಣ ಅಧಿಕಾರಿಯಾಗಿದ್ದ ಅ.ನ. ಯಲ್ಲಪ್ಪ ರೆಡ್ಡಿ ಈ ಅಂಶವನ್ನು ಅರಸರ ಗಮನಕ್ಕೆ ತಂದರು.

ಅರಸರು ಆಗ ಮುಖ್ಯಮಂತ್ರಿ, ಕೆ.ಎಚ್. ಪಾಟೀಲ್ ಅರಣ್ಯ ಸಚಿವ. ಕೂಡಲೇ ವೃಕ್ಷ ಸಂರಕ್ಷಣ ಕಾಯ್ದೆ ಜಾರಿಗೆ ಬಂದಿತು. ಇಂದು ಪಶ್ಚಿಮ ಘಟ್ಟಗಳ ಮಂಗಳೂರು, ಕುಂದಾಪುರ, ಶಿವಮೊಗ್ಗ ಪ್ರದೇಶಗಳಲ್ಲಿ ಕಾಡು ಉಳಿದಿದ್ದರೆ ಅದು ಅರಸು ಮತ್ತು ಪಾಟೀಲರಿಂದ ಅಂತ ಎಷ್ಟು ಜನಕ್ಕೆ ಗೊತ್ತು? ಈ ಭಾಗದ ಜನ ಹಾಗೂ ಅವರ ಪೀಳಿಗೆ ಈ ಇಬ್ಬರು ನಾಯಕರಿಗೆ ಚಿರಋಣಿಗಳಾಗಿರಬೇಕು. ಈ ಕಾಯ್ದೆಯನ್ನು ದೇಶದಲ್ಲೇ ಮೊದಲ ಬಾರಿಗೆ ಜಾರಿಗೆ ತಂದ ಕೀರ್ತಿ ಅವರದ್ದು. ಶೋಷಣೆರಹಿತ ಸಮಾಜ ನಿರ್ಮಿಸುವುದು ಅರಸರ ಮೂಲ ಸೂತ್ರವಾಗಿತ್ತು. ಕೃಷಿ ಭೂಮಿ ಕೆಲವೇ ಶ್ರೀಮಂತರ ಸ್ವತ್ತಾಗಿತ್ತು. ತಲತಲಾಂತರಗಳಿಂದ ಗೇಣಿದಾರರಾಗಿಯೇ ಸವೆದು ಹೋಗುತ್ತಿದ್ದ ರೈತರಿಗೆ ಜೀವನ ಭದ್ರತೆಯೇ ಇರಲಿಲ್ಲ.

ರಾಜ್ಯದ ಲಕ್ಷಾಂತರ ಬಡ ಗೇಣಿದಾರರ ಭಾಗ್ಯದ ಬಾಗಿಲನ್ನು ವಿಶಾಲವಾಗಿ ತೆರೆದಿಟ್ಟರು ಅರಸರು. ಉಳುವವನೇ ಹೊಲದೊಡೆಯ ಕಾನೂನನ್ನು ನಿರ್ದಾಕ್ಷಿಣ್ಯವಾಗಿ ಜಾರಿಗೆ ತರುವ ಮೂಲಕ ದೇವರಾಜ ಅರಸರು ಶಾಶ್ವತವಾಗಿ ಇತಿಹಾಸದ ಸ್ವರ್ಣಪುಟಗಳಲ್ಲಿ ಸೇರಿಹೋದರು. ಹೊಲ ಉಳುತ್ತಿದ್ದ ರೈತನಿಗೆ, ಅದನ್ನು ಕೊಡುವ ಕಾಯ್ದೆ ಮಾಡಿ ಅರಸರು ಸುಮ್ಮನೆ ಕೂಡಲಿಲ್ಲ. ಅವರ ರಕ್ಷಣೆಗೆ ಮತ್ತೊಂದು ಮಗ್ಗುಲಲ್ಲಿ ನಿಂತರು. ಭೂಮಿ ಕಳೆದುಕೊಂಡ ಅದರ ಮಾಲೀಕ ನ್ಯಾಯಾಲಯಕ್ಕೆ ಹೋಗಿ ಪ್ರಶ್ನಿಸದೆ ಇರುತ್ತಾನೆಯೆ? ಹಾಗೆ ಅವರು ನ್ಯಾಯಾಲಯಕ್ಕೆ ಹೋದರೆ ಗೇಣಿದಾರ ಅದನ್ನು ಎದುರಿಸಲು ಆರ್ಥಿಕವಾಗಿ ಶಕ್ತನಿರಲಿಲ್ಲ. ಹೀಗಾಗಿ ಭೂ ಸುಧಾರಣಾ ಮಂಡಳಿಗಳನ್ನು ರಚಿಸಿದರು. ಇದರ ತೀರ್ಪನ್ನು ನ್ಯಾಯಾಲಯಗಳಲ್ಲಿ ಪ್ರಶ್ನಿಸದ ರೀತಿಯಲ್ಲಿ ಮಾಡಿದರು. ಈ ಭೂಸುಧಾರಣಾ ಮಂಡಳಿ ನಿಜ ಅರ್ಥದಲ್ಲಿ ಜನತಾ ನ್ಯಾಯಾಲಯವೇ ಆಗಿತ್ತು.

ಯಾವ ಮುಖ್ಯಮಂತ್ರಿಗೂ ಸಾಧ್ಯವಾಗದ ಧೀರೋದಾತ್ತ ನಡೆಯಿದು. ಇದರ ಬೆನ್ನಿಗೇ ಅವರು ಮಾಡಿದ ಇನ್ನೊಂದು ಮಾನವೀಯ ಕೆಲಸ ಜೀತದಾಳುಗಳಿಗೆ ಮುಕ್ತಿ ದೊರಕಿಸಿದ್ದು. ಧಣಿ ನೀಡುವ ಗಂಜಿಗೆ ನಾಯಿಯಂತೆ ಕಾದಿರಬೇಕಾದ ದಯನೀಯ ಸ್ಥಿತಿ. ರಾಜ್ಯದಲ್ಲಿ ಸುಮಾರು 65 ಸಾವಿರ ಜೀತದಾಳುಗಳು ಉಳ್ಳವರ ಮನೆಗಳಲ್ಲಿ ಗುಲಾಮರಿಗಿಂತ ಹೀನಸ್ಥಿತಿಯಲ್ಲಿ ಬದುಕುತ್ತಿದ್ದರು. ಇಂಥವರಿಗೆ ಅರಸು ಸಂಜೀವಿನಿಯಾದರು. ಅವರನ್ನು ಜೀತಮುಕ್ತಗೊಳಿಸಿದರು. ಅವರು ಸ್ವತಂತ್ರ ಸ್ವಾಭಿಮಾನದ ಬದುಕು ನಡೆಸಲು ಎಲ್ಲ ಸೌಲಭ್ಯಗಳನ್ನು ಒದಗಿಸುವ ಯೋಜನೆಯನ್ನು ಜಾರಿಗೆ ತಂದರು. ಇವರಿಗಿಂತ ಭಿನ್ನವಾಗಿಲ್ಲದ ಕೃಷಿ ಕಾರ್ಮಿಕರದು ಮತ್ತೊಂದು ಘನಘೋರ ಸ್ಥಿತಿ. ದಿನವಿಡೀ ಹೊಲ-ಗದ್ದೆಗಳಲ್ಲಿ ದುಡಿಯುತ್ತಿದ್ದರೂ ಅವರಿಗೆ ನಿಗದಿತ ಕೂಲಿಯೇನೂ ಇರಲಿಲ್ಲ. ಅದೆಲ್ಲಾ ಮಾಲೀಕನ ಲಹರಿಯ ಮೇಲೆಯೇ ನಿಂತಿತ್ತು. ಕೃಷಿ ಕಾರ್ಮಿಕರ ಕೂಲಿಗೆ ಇಂತಿಷ್ಟೆಂದು ಹಣ ನಿಗದಿ ಮಾಡಿದ್ದು ಸಣ್ಣ ಕೆಲಸವೇನೂ ಅಲ್ಲ. ದೇವರಾಜ ಅರಸರ ಈ ಎಲ್ಲ ಪುರೋಗಾಮಿ ಕೆಲಸಗಳಿಂದ ಸಹಜವಾಗಿಯೇ ಪಟ್ಟಭದ್ರ ಹಿತಾಸಕ್ತಿಗಳು ಕೆರಳಿ ಕನಲಿದರು. ಅರಸರು ಇದಕ್ಕೆ ಜಗ್ಗಲೇ ಇಲ್ಲ.

ಅವರ ಸಾಧನೆ ಇದಿಷ್ಟೇ ಅಲ್ಲ, ಸಮೃದ್ಧ ನಾಡನ್ನು ಕಟ್ಟಲು, ಗ್ರಾಮೀಣ ಬದುಕಿನಲ್ಲಿ ಜೀವನೋಲ್ಲಾಸ ತರಲು ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತಂದರು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಇವು ಯಾವುದೂ ರಾಜಕೀಯ ಅರ್ಥದಲ್ಲಿ ಜನಪ್ರಿಯ ಕಾರ್ಯಕ್ರಮಗಳಾಗಿರಲಿಲ್ಲ. ಅವರಲ್ಲಿ ಅಂತರ್ಗತವಾಗಿದ್ದ ಜೀವತಂತುವಿಗೆ ಸಂವಾದಿಯಾಗಿದ್ದಂಥವು. ಅರಸರ ಪ್ರಗತಿಪರ ಕೆಲಸಗಳನ್ನು ಪ್ರಶ್ನಿಸುವ ಜನವೇ ಇಲ್ಲವಾದರು. ಅವರದ್ದು ಆನೆ ನಡಿಗೆಯ ವೇಗೋತ್ಕರ್ಷ ಸಂಚಲನ. ಇಂಥ ಮಹಾನ್ ವ್ಯಕ್ತಿಗೆ ಕೊನೆಯ ದಿನಗಳಲ್ಲಿ ಏನಾಗಿಬಿಟ್ಟಿತು?

ಇದೀಗ ದೇವರಾಜ ಅರಸರ 40 ವರ್ಷಗಳ ರಾಜಕೀಯದ ಕೊನೆಯ ಕಾಲಘಟ್ಟಕ್ಕೆ ಬರೋಣ. ಪ್ರಧಾನಿಯಾಗಿದ್ದ ಇಂದಿರಾಗಾಂಧಿಯವರೇ ಅರಸರನ್ನು ಎತ್ತರಕ್ಕೆ ಏರಿಸಿದವರು. ಒಂದು ವಿಷ ಗಳಿಗೆ. ಇಬ್ಬರಿಗೂ ಮನಸ್ತಾಪ ಹುಟ್ಟಿಕೊಂಡಿತು. ಅದನ್ನು ಸರಿಪಡಿಸಲು ಯಾರಿಂದಲೂ ಸಾಧ್ಯವಾಗಲಿಲ್ಲ. ಬದುಕಿನ ಸಂಜೆಯಲ್ಲಿ ಅರಸರನ್ನು ಇಂದಿರಾಗಾಂಧಿ ಆಕಾಶದೆತ್ತರದಿಂದ ಕೆಳಗೆ ಎಸೆದರು. ಇದರಿಂದ ಅರಸರು ಧೃತಿಗೆಡಲಿಲ್ಲ. ಪರಿಶಿಷ್ಟ ಜಾತಿ, ವರ್ಗ ಮತ್ತು ಹಿಂದುಳಿದ ಪಂಗಡಗಳ ಮೂಕ ಬಾಯಿಗೆ ರಾಜಕೀಯ ದನಿ ನೀಡಿದ್ದ ಅರಸರು ಬಂಡೆಯಂತೆ ನಿಶ್ಚಲರಾಗಿದ್ದರು. ದೇವರಾಜ ಅರಸು ಮುಖ್ಯಮಂತ್ರಿ ಆಗುವವರೆಗೂ ಇಲ್ಲಿ ಲಿಂಗಾಯತ- ಒಕ್ಕಲಿಗರೇ ರಾಜ್ಯ ಸೂತ್ರದ ವಾರಸುದಾರರಾಗಿದ್ದರು. ಮಿಕ್ಕುಳಿದ ಜನರನ್ನು ರಾಜಕೀಯವಾಗಿ ಕೇಳುವವರು ದಿಕ್ಕಿರಲಿಲ್ಲ. ಈ ಬಗ್ಗೆ ಯಾರಿಗೂ ಆಸಕ್ತಿಯೇ ಇರಲಿಲ್ಲವೆನ್ನುವುದೇ ಸೂಕ್ತ. ಎಲ್ಲ ಹಿಂದುಳಿದ ಜನವರ್ಗಕ್ಕೆ ಜೀವವಾಹಿನಿಯಾದರು ಅರಸು. ಎಲ್ಲರನ್ನೂ ತಮ್ಮ ತೆಕ್ಕೆಗೆ ತೆಗೆದುಕೊಂಡು ಸ್ಥಾಪಿತ ನಂಬಿಕೆಯನ್ನು ಛಿದ್ರಗೊಳಿಸಿದರು. ಎಲ್ಲ ಹಿಂದುಳಿದ ವರ್ಗಗಳು ವಿಧಾನಸಭೆಗೆ ಪ್ರವೇಶಿಸಲು ಮುಕ್ತ ಅವಕಾಶ ನೀಡಿದರು.

ಈ ಜನರ ಬರಗಾಲದ ಬದುಕಿನಲ್ಲಿ ಅರಸು ಕೋಗಿಲೆಯಾಗಿ ಪ್ರವೇಶಿಸಿದರು. ಅಧಿಕಾರವನ್ನೇ ಕಾಣದ ಜನ ಅದರ ರುಚಿ ಕಾಣತೊಡಗಿದರು. ಈ ಜನರ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿ ಆರೋಹಣ ಸ್ಥಿತಿಗೇರಿತು. ಹೀಗಾಗಿ ಹಿಂದುಳಿದ ಎಲ್ಲ ಜನವರ್ಗ ತನ್ನ ಬೆನ್ನ ಹಿಂದಿದ್ದಾರೆಂಬ ಭ್ರಮೆಯಲ್ಲಿ ಅವರು ಹೂತುಹೋದರು. ಈ ಶಾಸಕರು ತನಗೆ ದ್ರೋಹ ಬಗೆಯಲಾರರೆಂಬ ಅಚಲ ನಂಬಿಕೆ. ಪ್ರತಿ ತಿಂಗಳ ಸಂಬಳ ಕೊಟ್ಟು ಶಾಸಕರನ್ನು ಸಾಕಿಕೊಂಡಿದ್ದ ಧಣಿಗೆ ಕೈಕೊಡುವ ಸಂಭವವನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲದಂಥ ಸಮಯವದು.

ದೇವರಾಜ ಅರಸರ ಕೊನೆಯ ವರ್ಷಗಳಲ್ಲಿ ಆಕರ್ಷಕ ವ್ಯಕ್ತಿತ್ವದ ಗುಂಡೂರಾವ್ ಬಲಗೈ ಬಂಟ. ಇಬ್ಬರೂ ರುಸ್ತುಂ ಜೀವನ ಶೈಲಿಯನ್ನು ಕಾಯಾ ವಾಚಾ ಮನಸಾ ಹಂಚಿಕೊಂಡವರು. ಇಂದಿರಾ- ಅರಸು ರಾಜಕೀಯ ನೆಲೆಗಳು ಬೇರೆಯಾಗುತ್ತಿದ್ದಂತೆಯೇ ಗುಂಡೂರಾವ್ ಅರಸರ ವಿರುದ್ಧ ರಾಜಕೀಯ ದಂಗೆ ಎದ್ದರು. ಇಂದಿರಾ ಪಾಳೆಯದಲ್ಲಿ ಅಧಿಕಾರ ಹುಡುಕತೊಡಗಿದರು. ಇದರಿಂದ ಅರಸು ವಿಚಲಿತರಾಗಲಿಲ್ಲ. ಹಿಂದುಳಿದ ವರ್ಗದ ಶಾಸಕರ ಬೆಂಬಲವಿಲ್ಲವೆ ಎಂಬ ಉದಾಸಭಾವ. ದೇವರಾಜ ಅರಸು ಹೃದಯಾಘಾತಕ್ಕೆ ಒಳಗಾಗಬೇಕಾದ ರೀತಿಯಲ್ಲಿ ಘಟನೆಗಳು ಸಂಭವಗೊಂಡವು. ನಂಬಿದ್ದ ಶಾಸಕರೆಲ್ಲಾ ಗುಂಡೂರಾವ್ ಹಿಂದೆ ದೌಡಾಯಿಸಿದರು. ಅಲ್ಲಿ ಅಧಿಕಾರ ಸಿಗುತ್ತದೆಂಬ ವಾಸನೆ ಈಗಾಗಲೇ ಈ ಶಾಸಕರಿಗೆ ಸಿಕ್ಕಿಬಿಟ್ಟಿತ್ತು. ಅರಸು ತಲ್ಲಣಿಸಿದರು. ಈ ವಿಷಮ ಸ್ಥಿತಿಯಲ್ಲಿ ಅರಸರಿಗೆ ಹೆಗಲೆಣೆಯಾಗಿ ನಿಂತವರು ದಿವಂಗತ ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಒಬ್ಬರೇ. ಇಂಥ ದೇವರಾಜ ಅರಸು ಖಾಸಗಿ ಬದುಕಿನಲ್ಲಿ ಅಪಾರ ದುಃಖ ಅನುಭವಿಸಿದ್ದನ್ನು ವಿಧಿಲಿಖಿತ ಎಂದು ಕರೆಯಬಹುದೇ?

ಅರಸು ಗೂಂಡಾಗಿರಿಯನ್ನು ಅಪಾರ ಪ್ರಮಾಣದಲ್ಲಿ ಪೋಷಿಸಿದರು. ಆದರೆ ಅದನ್ನು ಅವರು ಎಂದಿಗೂ ಒಪ್ಪಿಕೊಳ್ಳಲೇ ಇಲ್ಲ. ಎಂ.ಪಿ. ಜಯರಾಜ್, ಕೊತ್ವಾಲ್ ರಾಮಚಂದ್ರ ಅರಸರ ನೆರಳಲ್ಲೇ ಓಡಾಡಿಕೊಂಡಿದ್ದರು. ಈ ಸಮಯದಲ್ಲಿ ಡಾ. ಎಂ.ಡಿ. ನಟರಾಜ ಎಂಬ ಯುವಕ ಅರಸು ಸಮೀಪ ಸುಳಿದಾಡತೊಡಗಿದ. ಇಂದಿರಾ ಬ್ರಿಗೇಡ್ ಎಂಬ ಯುವಕರ ತಂಡ ಕಟ್ಟಿದ್ದ. ಹಾಗೇ ಅರಸು ಮನೆಗೆ ಹೋಗುತ್ತಿದ್ದವರು ಅವರ ಮಗಳು ನಾಗರತ್ನ ಅವರ ಮನಸ್ಸನ್ನು ಅಪಹರಿಸಿದ. ಈ ಮದುವೆ ಅರಸರಿಗೆ ಇಷ್ಟವಿರಲಿಲ್ಲ. ಆದರೂ ಆಯಿತು. ನಟರಾಜ್ ನಾಗರತ್ನ ಅವರ ವೈವಾಹಿಕ ಜೀವನ ಬಹಳ ಕಾಲ ನಡೆಯಲಿಲ್ಲ. ಒಂದು ದಿನ ತಮ್ಮ ನೆಲಮಂಗಲದ ತೋಟದ ಬಾವಿಯಲ್ಲಿ ನಾಗರತ್ನ ಹೆಣವಾಗಿ ತೇಲುತ್ತಿದ್ದರು. ಅಪಾರವಾಗಿ ಪ್ರೀತಿಸುತ್ತಿದ್ದ ಮಗಳ ಸಾವು ಅರಸರನ್ನು ಹಣ್ಣುಗಾಯಿ ಮಾಡಿತು.

1977ರಲ್ಲಿ ಕೇಂದ್ರದಲ್ಲಿ ಜನತಾ ಸರ್ಕಾರವಿತ್ತು. ತುರ್ತು ಪರಿಸ್ಥಿತಿಯ ಕಾರಣಗಳನ್ನೊಡ್ಡಿ ದೇವರಾಜ ಅರಸು ಸರ್ಕಾರವನ್ನು ವಜಾಗೊಳಿಸಿತು. ಇಲ್ಲಿಂದ ದೇವರಾಜ ಅರಸು ರಾಜಕೀಯವಾಗಿ ದಿನದಿಂದ ದಿನಕ್ಕೆ ಕುಸಿಯತೊಡಗಿದರು. ದೇವರಾಜ ಅರಸರದ್ದು ವರ್ಣಮಯ ಬದುಕು. ಜೀವನದುದ್ದಕ್ಕೂ ಆನಂದವನ್ನು ಸೂರೆ ಮಾಡುತ್ತಲೇ ಅಂತಃಕರಣದ ಪ್ರತಿರೂಪವಾದ ಅತ್ಯಂತ ಅಪರೂಪದ ಮನುಷ್ಯ. ಇಲ್ಲಿ ಮನುಷ್ಯ ಎಂದು ಹೇಳಿದ್ದು ಅವರು ನಿಜವಾದ ಅರ್ಥದಲ್ಲಿ ಮನುಷ್ಯರಾಗಿಯೇ ಬಾಳಿದರು ಎಂಬ ಕಾರಣಕ್ಕೆ. ಅರಸು ಈಗಿಲ್ಲ, ಆದರೆ ಅವರ ತೇಜೋವಲಯ ನಮ್ಮ ಸುತ್ತಲೂ ಹರಡಿಕೊಂಡಿದೆ. ನಿಜಕ್ಕೂ ಇವರದು ಸಾರ್ಥಕ ಬದುಕು.

ಇದನ್ನೂ ಓದಿ : ರಾಜಕಾರಣಿಗಳ ವ್ಯಕ್ತಿಚಿತ್ರ ಮಾಲಿಕೆ ಆರಂಭ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X