ಸದ್ದಿಲ್ಲದೆ 'ಕನ್ನಡ ಗೊತ್ತಿಲ್ಲ' ಮಾಡುತಿದೆ ಕನ್ನಡ ಕ್ರಾಂತಿ!
ರಾಜ್ಯೋತ್ಸವಕ್ಕೆ ಕನ್ನಡ ಡಿಂಡಿಮ ಬಾರಿಸಿ, ಧ್ವಜ ಹಾರಿಸಿ, ಹಾಡು ಹೇಳಿ ಮುಗಿಸಿ ಮುಂದಿನ ವರ್ಷಕ್ಕೆ ಎತ್ತಿಡುವ ಜನರ ನಡುವೆ 365 ದಿವಸವೂ ಕನ್ನಡ ಪಾಠಗಳನ್ನ ಮಾಡುವ ಗುಂಪಿನ ಬಗ್ಗೆ ತಿಳಿಯುವ ಆಸಕ್ತಿ ನಿಮಗಿದೆಯೇ? ಇದ್ರೆ ಮುಂದೆ ಓದಿ.
'ಕನ್ನಡ ಗೊತ್ತಿಲ್ಲ' ಎನ್ನುವುದು ಬಹುತೇಕ ಕನ್ನಡೇತರರು ಮೊದಲು ಕಲಿಯುವ ವಾಕ್ಯ. ನಾನು ಬಾರ್ಸಿಲೋನಾದಲ್ಲಿದ್ದಾಗ 'ನನಗೆ ಸ್ಪ್ಯಾನಿಷ್ ಗೊತ್ತಿಲ್ಲ' ಎಂಬುದನ್ನು 'yo no hable español' ಎಂದು ಸ್ಪ್ಯಾನಿಷ್ ನಲ್ಲಿಯೇ ಹೇಳುವುದನ್ನು ಕಲಿತೆ. ನಂತರ ಅಲ್ಲಿನ ಭಾಷೆಯನ್ನ ಹಂತ ಹಂತವಾಗಿ ಕಲಿತೆ.

ಇದನ್ನೇ ಯೋಚನೆ ಮಾಡಿಕೊಂಡು ಕಟ್ಟಿದ ಗುಂಪೇ "ಕನ್ನಡ ಗೊತ್ತಿಲ್ಲ". 12 ಜನ ಸದಸ್ಯರು/ಶಿಕ್ಷಕ, ಶಿಕ್ಷಕಿಯರು, 8000 ಜನ ವಿದ್ಯಾರ್ಥಿಗಳಿಗೆ 35 ಲೈವ್ ತರಗತಿಗಳು, ವಾಟ್ಸ್ಯಾಪ್, ಸ್ಕೈಪ್ ನಲ್ಲಿ 3 ವರ್ಷದಿಂದ ತಪ್ಪಿಸದೇ ಕನ್ನಡ ತರಗತಿಗಳನ್ನು ನಡೆಸಿಕೊಂಡು ಬರುತ್ತಿದೆ.
ಈಗಿನ ಕಾಲದ ಹುಡುಗರು ಮೊಬೈಲಿನಲ್ಲಿ ಕಾಲಹರಣ ಮಾಡುತ್ತಾರೆ ಎಂಬ ಮಾತಿಗೆ ವಿರುದ್ಧವಾಗಿ ನಡೆದುಕೊಳ್ಳುವ ಗುಂಪಿದು. ನಾನೂ ಸಹ ಇಲ್ಲಿನ ಸದಸ್ಯೆ, ಕಳೆದೆರಡು ವರ್ಷದಿಂದ ದಿನನಿತ್ಯ ಕನ್ನಡ ಪಾಠ ಹೇಳಿಕೊಡುತ್ತೀನಿ. ಚಿಕ್ಕವಳಿದ್ದಾಗ ಯಾರೇ ಕೇಳಿದರೂ ಮುಂದೇನಾಗ್ತೀಯಾ ಅಂದಾಗ "ಕನ್ನಡ ಮಿಸ್" ಆಗ್ತೀನಿ ಅಂತ ಮುಗ್ಧವಾಗಿ ಹೇಳುತ್ತಿದ್ದೆ. ಇಂಜಿನಿಯರಿಂಗ್, ಸ್ನಾಕೋತ್ತರ ಪದವಿ, ಬಹುರಾಷ್ಟ್ರೀಯ ಕಂಪನಿಯ ಕೆಲಸದ ನಡುವೆಯೂ ಈ ತಂಡದಿಂದ ಕಡೆಗೂ ನಾನು 'ಕನ್ನಡ ಮಿಸ್' ಆದೆ.

ನಮ್ಮ ಕಲಿಕಾ ವಿಧಾನ ತುಂಬಾ ಸುಲಭ. ದಿನ ವಾಟ್ಸ್ಯಾಪ್ ನಲ್ಲಿ ಒಂದು ಪಾಠ, ಅದಕ್ಕೆ ಅನುಗುಣವಾಗಿ ಒಂದು ಆಡಿಯೋ ಸಂದೇಶ ಉಚ್ಚಾರಣೆಗಾಗಿ. ದಿನನಿತ್ಯ ಪಾಠ, ವಾರಕ್ಕೊಮ್ಮೆ ಒಂದು ನಿಯೋಜನೆ, ಭಾನುವಾರ ಅಭ್ಯಾಸ ಮಾಡಲು ಸಮಯ. ವಾರಕ್ಕೇಳು ದಿವಸವೂ ಒಂದು ವಾಟ್ಸ್ಯಾಪ್ ಗುಂಪಿನಲ್ಲಿ 20ರಿಂದ 30 ವಿದ್ಯಾರ್ಥಿಗಳು, 2 ಶಿಕ್ಷಕರು ಇರುತ್ತಾರೆ. ಬೆಳಗ್ಗೆ 7 ಘಂಟೆಯಿಂದ ರಾತ್ರಿ ಒಮ್ಮೊಮ್ಮೆ 1 ಘಂಟೆಯವರೆಗೆ ಮಾತುಕತೆ ಗುಂಪಿನಲ್ಲಿ ನಡೆದಿರುತ್ತದೆ. ತುಂಬಾ ಸ್ವಾರಸ್ಯಕರವಾದ ಸಂಭಾಷಣೆಗಳು ಅಲ್ಲಿ ನಡೆಯುತ್ತೆ.
ನನ್ನ ವಿದ್ಯಾರ್ಥಿನಿಯೊಬ್ಬಳು ಅಮೆರಿಕಾದಲ್ಲಿ ವೈದ್ಯಕೀಯ ಸ್ನಾತಕೋತ್ತರ ಪದವಿಯನ್ನ ಕಲೆಯುತ್ತಿದ್ದಳು. ಆಕೆ ಮಲೆಯಾಳಿ, ತಾನು ಮದುವೆ ಮಾಡಿಕೊಳ್ಳುವ ಗಂಡು ಮಂಡ್ಯದವನಾಗಿದ್ದರಿಂದ ಅವಳು ಸ್ಪಷ್ಟವಾಗಿ ಕನ್ನಡ ಕಲಿತಳು, ಹಾಗೆಯೇ ನಮ್ಮ ಅಡುಗೆಗಳ ಬಗ್ಗೆಯೂ ಕಲಿತು ಮದುವೆಯ ಆಮಂತ್ರಣ ಪತ್ರಿಕೆಯನ್ನ ಕೊಟ್ಟಳು. ಈಗ ಆಕೆ ಸುಖ ಸಂಸಾರ ನಡೆಸುತ್ತಿದ್ದಾಳೆ. ಖುಷಿಯಾಗೋದು ಕನ್ನಡ ಭಾಷೆ ಅವಳ ಜೀವನದಲ್ಲಿ ತಂದ ಮುದ್ದಾದ ಬದಲಾವಣೆ. ಹೀಗೆ ಅಜ್ಜ ಅಜ್ಜಿ, ಅಪ್ಪ ಅಮ್ಮ, ವೈದ್ಯರು, ಇಂಜಿನಿಯರುಗಳು, ಹುಡುಗ ಹುಡುಗರು, ಸೌಂದರ್ಯ ಸ್ಪರ್ಧೆಯ ಸ್ಪರ್ಧಿಗಳು ಹೀಗೆ ವಿವಿಧ ಸ್ಥರಗಳ ಜನರು ಬೇರೆ ಬೇರೆ ಕಾರಣಕ್ಕೆ ಕನ್ನಡ ಕಲಿತ್ತಿದ್ದಾರೆ.

ಮೊನ್ನೆ ಸ್ನೇಹಿತನ ತಂದೆಯವರಿಗೆ ಕಿವಿಯ ಶಸ್ತ್ರ ಚಿಕಿತ್ಸೆಯಾಗಬೇಕಾಗಿತ್ತು. ಅವನು ಸುಮಾರು ವೈದ್ಯರ ಹತ್ತಿರ ಮಾತಾಡಿ ನಂತರ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕಾಗಿ ಬಂದಾಗ, ಅವನು ಅಮ್ಮನ ಬಳಿ ಇರಬೇಕಾಗಿ ಬಂದಿತ್ತು. ನಾನು ವೈದ್ಯರ ಹತ್ತಿರ ಮಾತನಾಡಬೇಕೆಂದು ದೂರವಾಣಿ ಸಂಖ್ಯೆ ಕೊಟ್ಟಾಗ ನನ್ನ ವಿದ್ಯಾರ್ಥಿಯದ್ದೇ ಆಗಿತ್ತು ಎಂದು ತಿಳಿದು ದಂಗಾದೆ. ಅವರು ವಿಶ್ವವಿಖ್ಯಾತ ಇ ಎನ್ ಟಿ ತಜ್ಞರಾಗಿದ್ದರು. ದಿನಾ ಪಟ್ಟಾಗಿ 7ರಿಂದ 7.30 ಘಂಟೆವರೆಗೆ ಎಲ್ಲಾ ಪಾಠಗಳನ್ನ ವಿಶೇಷ ಆಸಕ್ತಿಯಿಂದ ಕಲಿಯುತ್ತಿದ್ದರು. ವಿಪರೀತ ಪ್ರಶ್ನೆಗಳನ್ನು ಸಹ ಕೇಳುತ್ತಿದ್ದರು.

ಅವರ ಪರಿಚಯದಲ್ಲಿ ಅವರು ಬೆಂಗಳೂರಿಗೆ 1 ವರ್ಷದ ಹಿಂದೆ ಕೆಲಸದ ಸಲುವಾಗಿ ಬಂದಿದ್ದರು ಎಂದು ತಿಳಿಸಿದ್ದರು. ತೀರ ಖಾಸಗಿ ವಿಷಯ ನಾವೂ ಕೇಳದ್ದಿದ್ದ ಕಾರಣ ಕನ್ನಡ ಹೇಳಿಕೊಡಲು ಶುರು ಮಾಡಿದ್ದೆ. ಅವರು ಸ್ಪಷ್ಟ ಕನ್ನಡದಲ್ಲಿಯೇ ಮಾತಾಡಿ, ನನ್ನ ಗೆಳೆಯನ ಅಪ್ಪನನ್ನ ಚೆನ್ನಾಗಿಯೇ ನೋಡಿಕೊಂಡು ಕಳುಹಿಸಿದ್ದರು. ನನಗಾವಾಗ ಅನ್ನಿಸಿದ್ದು ಅಷ್ಟು ದೊಡ್ಡ ಮನುಷ್ಯ, ಜನ ಸುಮಾರು ದೇವರ ಹಾಗೆ ನೋಡುವವರಿಗೆ ಜನರ ಜೊತೆ ಬೆರೆಯೋದಕ್ಕೆ ಭಾಷೆ ಕಲಿತು, ಆಸ್ಥೆಯಿಂದ ಎಲ್ಲಾ ನಿಯೋಜನೆಗಳನ್ನ ಮಾಡಿ, ಪ್ರಶ್ನೆಗಳನ್ನ ಕೇಳಿ, ಕಲಿತು ತಮ್ಮ ರೋಗಿಗಳು ಹಾಗೂ ಸಂಬಂಧಿಕರ ನಡುವೆ ಉತ್ತಮ ಒಡನಾಟ ಇಟ್ಟುಕೊಂಡಿದ್ದಾರೆ.

ಗುಂಪು ಅಂದಮೇಲೆ ಅದರಲ್ಲಿ ಮುಗ್ಧ ವಿದ್ಯಾರ್ಥಿಗಳು, ತಲೆಹರಟೆ ವಿದ್ಯಾರ್ಥಿಗಳು ಎಲ್ಲರೂ ಇರುವುದು ಸಹಜವೇ. ಅಲ್ಲಲ್ಲಿ ನಿಮ್ಮ ಭಾವಚಿತ್ರ, ನಿಮ್ಮ ಆಫೀಸಿನ ಹತ್ತಿರವೇ ಇರುವ ಆಫೀಸು ನಮ್ಮದು, ಚೆನ್ನಾಗಿದೆ, ಭೇಟಿ ಮಾಡೋಣವೇ, ಶುಭೋದಯ, ಶುಭರಾತ್ರಿ, ಈ ಭಾವಚಿತ್ರವನ್ನ 10 ಸೆಕೆಂಡಿನಲ್ಲಿ ಕಳುಹಿಸದ್ದಿದ್ದರೆ ಶನಿ ಹೆಗಲೇರುತ್ತದೆ ಎನ್ನುವ ದಂಡು ಒಮ್ಮೊಮ್ಮೆ ಜಾಸ್ತಿಯಾಗಿರುತ್ತದೆ. ಇದು ದೊಡ್ಡದು ಮಾಡದೇ ಒಮ್ಮೊಮ್ಮೆ ಕನ್ನಡ ಪಾಠಗಳಿಗೆ ಮಾತ್ರ ಗುಂಪು ಸೀಮಿತ ಮಾಡೋದು ಒಂದು ದೊಡ್ಡ ಸಾಹಸವೇ ಸರಿ.

ಕನ್ನಡ ಕಲಿಸುವಾಗ ನಾ ಕಂಡುಕೊಂಡಿದ್ದು ಭಾರತೀಯ ಭಾಷೆಗಳಿಗೆ ಅದರದ್ದೇ ಆದ ಲಯವಿದೆ, ನಡೆ ಇದೆ. ಇದು ಎಲ್ಲಾ ಕಡೆ ಹಾಗೆ ಇದೆ. ಆಂಗ್ಲ ಭಾಷೆಯಲ್ಲಿ ಹೇಳಿಕೊಡಬೇಕಾದಾಗ ಆಗುವ ಪೇಚು ಪ್ರಸಂಗಗಳು ತುಂಬಾ ಇವೆ. 'ಲ' ಮತ್ತು 'ಳ'ಗೆ ಇರುವ ಸೂಕ್ಷ್ಮ ವ್ಯತ್ಯಾಸಗಳು, 'ದ' ಹಾಗೂ 'ಡ', ಸಾರಾಸಗಟಾಗಿ ಆಂಟಿ - ಅಂಕಲ್ ಎನ್ನುವ ಪದಕ್ಕೆ ನಮ್ಮಲ್ಲಿರುವ ಬೇರೆ ಬೇರೆ ಪದಗಳು ಹೀಗೆಲ್ಲಾ ಹೇಳಿಕೊಡುವಾಗ ಆಗುವ ಎಡವಟ್ಟುಗಳು, ಮಿಸ್ ಯೂಗೆ ಕನ್ನಡ ಪದ ಎಂದೆಲ್ಲಾ ಕೇಳುವಾಗ ನಡೆಯುವ ಕಸರತ್ತುಗಳಿಗೆ ಲೆಕ್ಕವೇ ಇಲ್ಲ. ಬೆಂಗಳೂರಿನಲ್ಲಿದ್ದು ಬಹಳಷ್ಟು ಭಾಷೆಗಳು ಕೇಳಿದ್ದ ಪರಿಣಾಮವೇನೋ ಅರ್ಥ ಮಾಡಿಸುವುದು ಸುಲಭ. ಅಂತೂ 'ಕನ್ನಡ ಮಿಸ್' ಆಗಿ ದಿನವೂ ನನ್ನ ಜೀವನದಲ್ಲಿ ಕನ್ನಡ ಮಿಸ್ ಆಗದೆ ಹಾಗೆಯೇ ಉಳಿದಿದೆ. ಇನ್ನೂ 'ಕನ್ನಡ ಗೊತ್ತಿಲ್ಲ' ಎನ್ನುವ ನಿಮ್ಮ ಸ್ನೇಹಿತರನ್ನು ಎಲ್ಲಿ ಕರೆತರಬೇಕು ಗೊತಲ್ವಾ?
-
Kannada Books: ಓದುಗರಷ್ಟು ಪ್ರಾಮಾಣಿಕತೆ ಪುಸ್ತಕ ಮಳಿಗೆ ಮಾಡಿರುವವರಿಗಿಲ್ಲ: ರಾಜೇಂದ್ರ ಪ್ರಸಾದ್ ಬರಹ -
Amulya: ಕಿರುತೆರೆಗೆ ಮರಳಿದ 'ಕಮಲಿ' ಖ್ಯಾತಿಯ ಅಮೂಲ್ಯ: 'ಮಹಾಲಕ್ಷ್ಮಿ ಮದುವೆ' ಮೂಲಕ ಹೊಸ ಪಯಣ -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
ವೈಭವ್ ಸೂರ್ಯವಂಶಿ ಆಕ್ರಮಣಕಾರಿ ಆಟಕ್ಕೆ ಇಂಗ್ಲೆಂಡ್ ಮೈಕೆಲ್ ವಾಘನ್ ಫಿದಾ; ಬಿಸಿಸಿಐಗೆ ವಿಶೇಷ ಮನವಿ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ












Click it and Unblock the Notifications