• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆಟೋಗಾಗಿ ಗಂಟೆಗಟ್ಟಲೆ ಕಾದುಕೂತ ನನ್ನ ಕಥೆ ವ್ಯಥೆ

By ಜಯನಗರದ ಹುಡುಗಿ
|

ಆಫೀಸಿನಲ್ಲಿ ಅವತ್ತು ಮುಖ್ಯವಾದ ಮೀಟಿಂಗ್. ಸಾಕೇತನಿಗೆ ಗಾಡಿ ಕೈ ಕೊಟ್ಟಿತ್ತು. ಅದೆಲ್ಲೋ ಬನಶಂಕರಿಯಿಂದ ಬೆಂಗಳೂರಿನ ಮಧ್ಯ ಭಾಗದಲ್ಲಿರುವ ಆಫೀಸಿಗೆ ಆಟೋ ಹಿಡಿದು ಬರೋ ಅಷ್ಟರಲ್ಲಿ ಅವನ ಹೆಣ ಬಿದ್ದಿತ್ತು. ಓಡಿ ಓಡಿ ಮೀಟಿಂಗಿನಲ್ಲಿ ಕೂತ. ಎರಡು ಘಂಟೆ ಅವನ ಏದಿಸಿರು ಮತ್ತು ಊಬರಿಗೆ ಕೊಟ್ಟ 400 ರುಪಾಯಿಯ ಬಿಲ್ ಮಾತ್ರ ಕಣ್ಣಿಗೆ ಕಾಣಿಸುತ್ತಿತ್ತು. ಪಕ್ಕದಲ್ಲಿ ನಗುತ್ತಾ ಕೂತಿದ ಸೃಜನಾಳನ್ನ ಒಮ್ಮೆ ನೋಡಿದ, ಅವಳು ಕನ್ನಡಕ ಸರಿ ಮಾಡಿಕೊಂಡು ನೋಟ್ಸ್ ಬರೆಯುತ್ತಿದ್ದಳು.

ಮೀಟಿಂಗ್ ಮುಗಿದ ನಂತರ "ರೀ ಅದ್ ಹೇಗ್ರಿ ದಿನಾ ಆಟೋ, ಕ್ಯಾಬಿನಲ್ಲಿ ಓಡಾಡ್ತೀರಾ? ಅಷ್ಟು ದುಡ್ಡು, ಸಮಯ ಎಲ್ಲಾ ವ್ಯರ್ಥ. ಅದ್ ಹಾಳಾಗೋಗ್ಲಿ ಕರೆದ್ ಕಡೆ ಬರೋದೋ ಇಲ್ಲ. ಯಾವ್ ಹುಡುಗಿ ನನ್ನ ರಿಜೆಕ್ಟ್ ಮಾಡಿದಾಗ್ಲೂ ಇಷ್ಟೆಲ್ಲಾ ಬೇಜಾರಾಗ್ಲಿಲ್ಲ, ಈ ಥರ 5 ಆಟೋ, 3 ಕ್ಯಾಬ್ ಕಾನ್ಸಲ್ ಮಾಡಿದ್ದ್ರು, ಥತ್ತೇರಿಕ್ಕೆ" ಎಂದು ಗಟಗಟನೆ ಕಾಫಿ ಹೀರಿಕೊಂಡು ಮಾತಾಡುತ್ತಿದ್ದ. ಸೃಜನಾ ಮಾತ್ರ ನಕ್ಕೊಂಡು ಅವಳ ಕಾಲೇಜಿನ ಗುಂಪಿನಲ್ಲಿ ನಡೆಯುವ ದಿನನಿತ್ಯದ ಸಂಭಾಷಣೆಯನ್ನ ಮೆಲುಕು ಹಾಕುತ್ತಿದ್ದಳು.

ನೃತ್ಯಗಾರ್ತಿಯರಿಗಿರುವ ರಂಗಪ್ರವೇಶ ಸಂಗೀತಗಾರರಿಗೇಕಿಲ್ಲ?

ಅವತ್ತಿನ ಸಂಭಾಷಣೆಗಳಲ್ಲಿ ಎಲ್ಲರಿಗೂ ಒಂದೇ ಕಂಪ್ಲೇಂಟ್ "ಒಂದು ಆಟೋ ಕ್ಯಾಬ್ ಕೂಡ ಸಿಗ್ತಿಲ್ಲ, 35 ರುಪಾಯಿ ಆಟೋದು 120 ಅಂತಾರೆ. ಯಾವೋನ್ ಡಿಸೈನ್ ಮಾಡಿದ ಆಪ್ ಇದು" ಎಂದು ಬೈದುಕೊಳ್ಳುತ್ತಾ ಇದ್ದರು. ಇದೇನಿದು ಹೋಲ್ಸೇಲ್ ಉಗಿಯುವ ಕಾರ್ಯಕ್ರಮ ನಡೆಯುತ್ತಿದೆ ಎಂದು ನಾನು ನಗುತ್ತಾ ಇದ್ದೆ. ಇವರದ್ದೆಲ್ಲಾ ವ್ಯಥೆ ನನಗೆ ಸಂಜೆಯೇ ಅನುಭವ ಆಗುತ್ತದೆ ಎಂಬ ಯಾವ ಮುಂದಾಲೋಚನೆಯೂ ಇಲ್ಲದೆ ಕೆಲಸ ಜಾಸ್ತಿಯಿದ್ದ ಕಾರಣ ಬಹಳ ತಡವಾಗಿ ಹೊರಟೆ. ನಾನಿರುವುದು ಬೆಂಗಳೂರು ದಕ್ಷಿಣ. ಆದ್ದರಿಂದ ಯಾವ ಆಟೋ, ಕ್ಯಾಬಿನವರು ಸಾಮಾನ್ಯವಾಗಿ ಇಲ್ಲ ಎನ್ನುವುದಿಲ್ಲ ಒಂದು ಹತ್ತು ಇಪ್ಪತ್ತು ರೂಪಾಯಿಗಳು ಜಾಸ್ತಿಯಾಗಬಹುದು ಎಂಬ ನಂಬಿಕೆಯೊಂದಿಗೆ ಆಟೋ ಹಿಡಿಯಲು ಹೊರಟರೆ ಅವತ್ತು ಒಂದಾ ಎರಡಾ ಕಥೆ....

ಒಂದು ಆಟೋದವರು "ಓಹ್ ನಿಮ್ಮದು ಓಲಾ ಮನೀನಾ" ಎಂದು ಮುಂದೆಯೇ ಬಂದು ಕಾನ್ಸಲ್ ಮಾಡಿ ಹೋದರು. "ಅಲ್ಲ ಎಲ್ಲರೂ ಡಿಜಿಟಲ್ ಪೇಮೆಂಟ್ ಅಂತಾರೆ. ನಿಂದೊಳ್ಳೆ ಕಥೆ ಆಯ್ತಲ್ಲಾ" ಎಂದು ಅಂದರೆ, "ಇವತ್ತು ಹಸಿವಾದರೆ ನಾಳೆ ಊಟ ಕೊಟ್ರೆ ಆಗತ್ತಾ ಹೇಳಿ? ನಾವು ಆಟೋ ಬಾಡಿಗೆ, ಮನೆಯಲ್ಲಿನ ಖರ್ಚಿಗೆ ನಾಳೆ ಕೊಡ್ತೀವಿ ಅಂದ್ರೆ ಒದೀತಾರೆ, ನಮ್ ಕಷ್ಟ ನಂಗೆ ಹೋಗ್ರಿ" ಎಂದು ಬೈದು ಹೋದ.

ಜಯನಗರದ ಹುಡುಗಿಯ 100ನೇ ಲೇಖನ : ರಾಜಸ್ಥಾನದ ರಾಣಿ!

ಅದಾದ ನಂತರ ಒಂದು 5-6 ಆಟೋಗಳು ಹೀಗೆ ಒಬ್ಬಳೆ ನಿಂತಿದ್ದ ಹುಡುಗಿಯನ್ನ ರಿಜೆಕ್ಟ್ ಮಾಡಿ ಹೊರಟುಹೋದವು. "ಏನ್ ನಮ್ಮನೆ ಕಾಡಲ್ಲಿದ್ಯಾ" ಎಂದು ರೇಗಾಡಿದಾಗ "ನಮ್ಮನೆ ಕಾಡಲ್ಲಿದೆ ಬಿಡ್ರಿ" ಎಂದು ಹೋದರು. ಇನ್ನು ಹಾಗೆ ಒಂದು ನಾಲ್ಕೈದು ಆಟೋಗಳ ಹತ್ತಿರ ರಿಜೆಕ್ಟ್ ಮಾಡಿಸಿಕೊಂಡ ನಂತರ ಕ್ಯಾಬ್ಗಳ ಸರದಿ.

ಎಲ್ರೂ ಕಳ್ರೆ ಅಂತ ಕೂತರೆ ನಮಗಿಂತ ಮೈಗಳ್ಳರಿಲ್ಲ, ವೋಟ್ ಹಾಕಿ!

ಒಳ್ಳೆ ವಿಡಿಯೋ ಗೇಮ್ ಥರಹ 5 ನಿಮಿಷದ ದಾರಿಯನ್ನ 25 ನಿಮಿಷವಾದರೂ ಮುಗಿಸುತ್ತಿರಲ್ಲಿಲ್ಲ. ಫೋನ್ ಮಾಡಿ ಮಾಡಿ ಕೇಳುತ್ತಿದ್ದರು. "ಓಹ್ ಆ ಜಾಗಕ್ಕಾ, ನಾವ್ ಬರೀ ಎಲೆಕ್ಟ್ರಾನಿಕ್ ಸಿಟಿ ಅಥವಾ ವೈಟ್ಫೀಲ್ಡ್ ಆದ್ರೆ ಬರ್ತೀವಿ" ಅನ್ನೋ ಮಾತುಗಳು ಬೇರೆ. ಅಲ್ಲ ನಾವು ಬೆಂಗಳೂರು ದಕ್ಷಿಣದವರು ಮೂಲನಿವಾಸಿಗಳು, ನಮಗೆ ಹೀಗಂದ್ರೆ ಏನ್ ಕಥೆ ಎಂದು ಬೈಯುತ್ತಾ ರಸ್ತೆಯಲ್ಲಿ ಓಡಾಡುವ ಆಟೋಗಳಿಗೆ ಕೈ ಹಾಕಿ ನಿಲ್ಲಿಸುತ್ತಿದ್ದೆ. ಅವರಂತೂ 300 ರುಪಾಯಿ, 700 ರುಪಾಯಿ ಅನ್ನೋವರೆಗೂ ಮಾತಾಡುತ್ತಿದ್ದರು.

10 ಕಿ.ಮೀ.ಗೆ 500 ಕೊಟ್ಟರೆ ನನ್ನ ಗತಿಯೇನು ಎಂದು ಕೂತಿದ್ದೆ. ಒಂದು ಹತ್ತು ಜನ ಯುಬಿ ಸಿಟಿಯ ಹತ್ತಿರ ನಿಂತು ಹೀಗೆ ಗೋಗರೆಯುತ್ತಿರುವ ಪರಿಸ್ಥಿತಿ ಕಂಡುಬರುತ್ತದೆ ಸಂಜೆ ಏಳು ಘಂಟೆಯಾದಮೇಲೆ. ಸುಮಾರು ಹೆಣ್ಣುಮಕ್ಕಳೆ ಅಲ್ಲಿ ಜಾಸ್ತಿ, ಮನೆಯಲ್ಲಿ ಮಗುವನ್ನ ಬಿಟ್ಟು ಬಂದಿರುತ್ತಾರೆ, ಆ ಕೆಲಸದವಳು ತಾನೂ ಮನೆಗೆ ಹೋಗಬೇಕು ಎಂದು ಕರೆ ಮೇಲೆ ಕರೆ ಮಾಡುತ್ತಾ ಇರುತ್ತಾರೆ, ಮಕ್ಕಳ ಹೋಂ ವರ್ಕೋ, ಇಲ್ಲ ಮನೆಯಲ್ಲಿ ಅಡುಗೆ ಆಗಿಲ್ಲವೋ ಇವೆಲ್ಲವನ್ನ ಯೋಚನೆ ಮಾಡುತ್ತಾ ಸಾರ್ 50 ರುಪಾಯಿ ಎಕ್ಸ್ಟ್ರಾ ಕೋಡ್ತೀವಿ ಬನ್ನಿ ಎಂದು ಗೋಗರೆಯುವುದನ್ನು ನಾನು ನೋಡುತ್ತಲೇ ಇರುತ್ತೇನೆ. ಕತ್ತಲಾಗುತ್ತಿದ್ದಂತೆ ಹೆಣ್ಣುಮಕ್ಕಳ ಸಮಸ್ಯೆಗಳು ಇನ್ನೂ ಬೇರೆಯದ್ದೇ ಥರದ್ದು, ಅವರ ಮೈಮೇಲಿನ ಚಿನ್ನವೋ, ಇಲ್ಲ ಅವರ ದುಬಾರಿ ಲ್ಯಾಪ್ ಟಾಪೋ, ಇಲ್ಲ ಅವರ ಪರ್ಸೋ ಎಲ್ಲವೂ ಕೆಲವರಿಗೆ ಆಕರ್ಷಣೀಯವಾದ್ದದ್ದೇ. ಇವೆಲ್ಲಾ ಒಂದು ಸಂಜೆಯಲ್ಲೇ ನಡೆದುಹೋಗುತ್ತದಲ್ಲಾ ಎಂಬುದೇ ವಿಚಿತ್ರ.

ಮಧ್ಯ ವಯಸ್ಕ ಮಹಿಳೆಯರಲ್ಲಿ ಮತ್ತೆ ಚೈತ್ರದ ಚಿಗುರು

ಇನ್ನು ನನ್ನ ಆಟೋ ವಿಷಯಕ್ಕೆ ಬರೋಣ, ಮುಕ್ಕಾಲು ಘಂಟೆಯಾದರೂ ಏನೂ ಸಿಗದ್ದಿದ್ದ ಕಾರಣ ಇನ್ನು ಬಸ್ಸಿನಲ್ಲಿ ಹೋಗೋದು ಎಂಬ ತೀರ್ಮಾನಕ್ಕೆ ಬಂದೆ. 10 ನಿಮಿಷ ಬಸ್ ಸ್ಟ್ಯಾಂಡ್ ಎಲ್ಲಿದೆ ಎಂಬ ಹುಡುಕಾಟ, ಅಲ್ಲಿಗೆ ಬಂದರೆ ಅಷ್ಟು ಬಸ್ಸು ಬರೋದಿಲ್ಲ ಕಣ್ರಿ ಎಂಬ ಉದ್ಗಾರ ಬೇರೆ. ಅಲ್ಲಿ ಆಟೋದವರು 10 ರುಪಾಯಿ ಎಕ್ಸ್ಟ್ರಾ, 50 ರುಪಾಯಿ ಎಂದು ಕೂಗಿ ಕೂಗಿ ಹೇಳುತ್ತಿದ್ದರೆ, ಅಲ್ಲೇ ನಿಂತಿದ್ದ ಟ್ರಾಫಿಕ್ಕಿನವರು ಅವರ ಪಾಡಿಗೆ ಅವರಿದ್ದರು. ಇನ್ನು ನಾನು ಮನೆಗೆ ಹೋಗೋದು ಕಷ್ಟ ಎಂದು ನಡೆದುಕೊಂಡು ಹೋಗೋಣ ಎಂದು ತೀರ್ಮಾನಿಸಿದೆ.

ಏನು 10 ಕಿಮೀ ಮ್ಯಾರಥಾನೇ ಓಡಿದ್ದೀನಂತೆ ಇದೆಲ್ಲ ಏನು ಎಂದು ನಡೆಯಲು ಶುರುಮಾಡಿದೆ. ಬೆಂಗಳೂರಿನಲ್ಲಿ ಹಾಗೆಲ್ಲ ಮಳೆ, ಗಾಳಿ ಬರುವ ಮುನ್ಸೂಚನೆ ಇರುವುದಿಲ್ಲವಲ್ಲ, ಹಾಗೆ ಪಟ ಪಟನೆ ಹನಿ ಬೀಳಲು ಶುರು ಮಾಡಿತ್ತು. ನಡೆಯುದು ಕಷ್ಟ ಎಂದು ಒಂದು ಹತ್ತು ನಿಮಿಷ ಕೂತೆ. ಡಬ್ಬಲ್ ರೇಟ್ ಕೇಳಿದ ಆಟೋ ಚಾಲಕ ಮತ್ತೆ ತಿರುಗಿಸಿ ವಾಪಸ್ಸು ಬಂದು ಇಷ್ಟಾದ್ರೆ ಬರ್ತೀನಿ ನೋಡಿ ಅಂದ್ರು. ಮೀಟರ್ ಹಾಕಿ ಅಂದೆ, ಮತ್ತೆ 15 ನಿಮಿಷಕ್ಕೆ ವಾಪಸ್ಸು ಬಂದು ಮೀಟರ್ ಹಾಕಿಯೇ ಕರೆದುಕೊಂಡು ಹೋದರು. ನೋಡಿ ನೀವು ನನ್ನ ಆಟೋದಲ್ಲೇ ಕೂರಬೇಕು ಅನ್ನೋದು ಹಣೇಲಿ ಬರ್ದಿತ್ತು ಅಂತ ನಗುತ್ತಾ ಹೇಳಿದರು. ಈ ಲೇಖನ ಬರೆಯುವಾಗಲೂ ಮರುದಿವಸದ ಆಟೋಗಾಗಿ ಕಾಯುತ್ತಾ ಕೂತಿದ್ದೇನೆ...

English summary
Do you commute regulary in auto in Bengaluru? What is your experience? Are the auto drivers rude or polite? Jayanagarada Hudugi Meghana Sudhindra shares her own experience.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more