• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಡುಗೆಯೆಂಬ ಕಲೆಯನ್ನು ಕಲಿಯುವ ಅವಶ್ಯಕತೆ ಇದೆಯಾ?

By ಜಯನಗರದ ಹುಡುಗಿ
|

ಚಿಕ್ಕವಳಿದ್ದಾಗ ಅಡಿಗೆಯ ಬಗ್ಗೆ ಅಷ್ಟು ಗಮನ ಹರಿಸುತ್ತಿರಲ್ಲಿಲ್ಲ. ಅದು ಅಮ್ಮ, ಅಜ್ಜಿಯ ಡಿಪಾರ್ಟ್ಮೆಂಟ್ ಆಗಿತ್ತು. ಕೂತು ಚೆನ್ನಾಗಿ ತಿನ್ನೋದು ಅಭ್ಯಾಸವಾಗಿತ್ತು. ಅಮ್ಮ ಅಥವಾ ಅಜ್ಜಿಯಾದಾಗಲೇ ಅಡಿಗೆಯ ಜವಾಬ್ದಾರಿ ಎಂದು ಮನದಟ್ಟಾಗಿತ್ತು.

ಹೀಗೆ ಸಾಗುತ್ತಿದ್ದ ಜೀವನದಲ್ಲಿ ಒಮ್ಮೆ ಮ್ಯಾಗಿಯ ಆಗಮನವಾಯಿತು. ಅಲ್ಲಿ 2 ನಿಮಿಷದಲ್ಲಿ ಮ್ಯಾಗಿ ಆಗುತ್ತದೆ ಮತ್ತು ಮಕ್ಕಳೂ ಸಹ ಮಾಡಬಹುದು ಎಂಬ ಆಸೆಯೊಂದಿಗೆ ನನಗೆ ಅಡಿಗೆ ಮಾಡುವುದಕ್ಕಿಂತ 2 ನಿಮಿಷದಲ್ಲಿ ಆಗುವ ವಿಷಯವನ್ನ ಪರೀಕ್ಷಿಸಬೇಕಿತ್ತು. ನಮ್ಮನೆ ಗ್ಯಾಸ್ ಒಲೆಯಲ್ಲಿ 2 ನಿಮಿಷಕ್ಕೆ ನೀರು ಬಿಸಿಯಾಗುತ್ತಿತ್ತೇ ಹೊರತು ಮ್ಯಾಗಿಯಲ್ಲ. ಅಲ್ಲಿಗೆ ಅಡಿಗೆಯ ಬಗ್ಗೆ ಅಷ್ಟು ಇಷ್ಟು ಮರ್ಯಾದೆಯೂ ಹೋಯ್ತು. ಇದು ಸುಮ್ಮನೆ ಸಮಯ ವ್ಯರ್ಥ ಮಾಡುವ ಕೆಲಸ ಎಂದೆನಿಸಿತು.

ಮಹಿಳಾ ದಿನಾಚರಣೆ ವಿಶೇಷ ಲೇಖನ: ವರ್ಷಕ್ಕೊಮ್ಮೆ ಅವಳ ದಿವಸ!

ಮುಂಚಿಂದಲೂ ಆ ಕೆಲಸ ನಮ್ಮನೆ ಹೆಣ್ಣುಮಕ್ಕಳನ್ನ ಮನೆಗೇ ಸೀಮಿತಗೊಳಿಸುತ್ತದೆ ಎಂದು ಆಗಾಗ ಅನ್ನಿಸುತ್ತಲೂ ಇತ್ತು. ಅದ್ಯಾಕೆ ಅಮ್ಮನೇ ಅಡಿಗೆ ಮಾಡಬೇಕು, ಅದ್ಯಾಕೆ ಪಕ್ಕದ ಮನೆ ಆಂಟಿ ಕೆಲಸಕ್ಕೆ ಹೋದರೂ ಅವರೇ ಅಡಿಗೆ ಮಾಡಬೇಕು, ಫಂಕ್ಷನಿಗೆ ಹೋದರೆ ಅಡಿಗೆಯವರೆಲ್ಲಾ ಗಂಡಸರೇ ಯಾಕೆ ಹೀಗೆ ಇದರ ಮೇಲೆ ಪ್ರಶ್ನೆಗಳ ಮೇಲೆ ಪ್ರಶ್ನೆ ಮೂಡುತ್ತಿರುತ್ತದೆ.

ತಾತ ಒಮ್ಮೊಮ್ಮೆ ನಳ ಮಹರಾಜ ಒಳ್ಳೆಯ ಅಡಿಗೆಯವನಾಗಿದ್ದನು ಎಂದೆಲ್ಲಾ ಕಥೆ ಹೇಳಿದರೂ ನನಗೆ ಈ ಹೆಣ್ಣು ಮಕ್ಕಳು ಮನೆಯಲ್ಲಿ ಅಡಿಗೆ ಮಾಡಬೇಕು ಅಥವಾ ಮಾಡಲೇಬೇಕೆಂಬ ವಿಷಯ ಅರ್ಥವಾಗುತ್ತಲೇ ಇರುತ್ತಿರಲ್ಲಿಲ್ಲ. ಅಷ್ಟಾಗಿಯೂ ಅಮ್ಮ ಆಗಾಗ ಸಣ್ಣ ಪುಟ್ಟ ಅಡಿಗೆಗಳನ್ನ ಹೇಳೊಕೊಡೋಕೆ ಶುರು ಮಾಡಿದ್ದಳು.

ನಾನಾಗಿ ನಾನು ಮಾಡಿದ್ದು ಮೊದಲು ಚಪಾತಿ ಹಿಟ್ಟು ಲಟ್ಟಿಸಿ, ಕಾವಲಿ ಮೇಲೆ ಬೇಯಲು ಹಾಕೋದು, ತದನಂತರ ಅನ್ನ ಮಾಡಿಕೊಳ್ಳೋದು. ನನಗೆ ತಿನ್ನುವುದರಲ್ಲಿ ಅತೀವ ಆಸಕ್ತಿ ಇದ್ದರೂ ಮಾಡಿಕೊಳ್ಳಬೇಕು ಅಥವಾ ಮತ್ತ್ಯಾರೋ ಅವರ ಜೀವನದ ಸುಖಗಳನ್ನೆಲ್ಲಾ ತ್ಯಾಗ ಮಾಡಿ ನನಗೆ ಅಡಿಗೆ ಮಾಡಿಕೊಡಬೇಕಿತ್ತೆಂದು ನಾನು ಏನಿದ್ದರೂ ತಿನ್ನುವ ಕಲೆ ರೂಢಿಸಿಕೊಂಡಿದ್ದೆ.

ತಾತ ಹೇಳಿದ ಮೇಘು ಮತ್ತು ಅವರೆಕಾಳಿನ ಕಥೆ!

ತಾತ ಆಗಾಗ ಬೇರೆಯವರ ಅಡಿಗೆಯ ಬಗ್ಗೆ ಹೆಚ್ಚು ಮಾತಾಡಬಾರದೆಂದು ಹೇಳಿತ್ತಿದ್ದರು ಸಹ. ನಮಗೆ ಬರದಿರೋ ಯಾವ ಕೆಲಸದ ಬಗ್ಗೆ ನಾವು ಯಾವತ್ತೂ ಮಾತಾಡಬಾರದೆಂಬ ಕಡ್ಡಾಯ ನಿಯಮ ಮನೆಯಲ್ಲಿ ಜಾರಿಯಲ್ಲಿತ್ತು. ಹಾಗಾಗಿಯೂ ಸಹ ವಯೋಸಹಜ ಧಿಮಾಕುಗಳನ್ನೆಲ್ಲಾ ಮನೆಯಲ್ಲಿ ಮಾಡುತ್ತಲೇ ಇದ್ದೆ. ಅದು ಬೇಡ ಇದು ಬೇಡ ಆ ತರಕಾರಿ ಬೇಡ ಅಂತೆಲ್ಲಾ.

ನನಗೆ ಪಿಯುಸಿಯ ನಂತರ ಬೇರೆ ಊರಿನ ಇಂಜಿನಿಯರಿಂಗ್ ಕಾಲೇಜು ಸೇರಿದರೆ ಊಟ ತಿಂಡಿಗೆ ಏನಪ್ಪಾ ಮಾಡೋದು ಎಂದೆಲ್ಲಾ ಯೋಚನೆ ಶುರುವಾಗಿತ್ತು. ನನ್ನ ಗೆಳತಿ "ಲೇ ಮೊದಲು ನೀ ಒಬ್ಳೇ ಅದ್ ಹೆಂಗೆ ನಿನ್ನನ್ನ ನೀನು ಸಂಭಾಳಿಸಿಕೊಳ್ತ್ಯಾ, ಓದ್ಕೋತ್ಯಾ ನೋಡ್ಕೋ, ಅಮೇಲೆ ಅಡಿಗೆ ಊಟ ಎಲ್ಲಾ' ಎಂದಾಗ ನನಗೆ ಒಂದು ನಿಮಿಷ ವಾಸ್ತವಕ್ಕೆ ಬಂದೆ. ಮನೆಯಲ್ಲಿ ಚೆನ್ನಾಗಿ ಅಡಿಗೆ ಊಟ ಮಾಡಿಕೊಂಡು ಬೆಳೆದ ನನಗೆ ಈ ಅಡಿಗೆ ಎಂಬ ವ್ಯವಸ್ಥೆ ತಗಲಾಕಿಕೊಂಡದ್ದು ಸ್ನಾತಕೋತ್ತರ ಪದವಿಗೆ ಬಾರ್ಸಿಲೋನಾಕ್ಕೆ ಹೋದಾಗಲೇ.

ಹೋಗೋ ಮುಂಚೆ ಅಮ್ಮ ಒಂದಷ್ಟು ದಿಢೀರ್ ಅಡಿಗೆ, ಮನೆಯಲ್ಲಿ ಅಡಿಗೆ ಮಾಡುಕೊಡುವುದನ್ನು ಹೇಳಿಕೊಟ್ಟಿದ್ದಳು. ಅರ್ಧಕರ್ಧ ಸಿಮ್ ನಲ್ಲಿ ಅಡಿಗೆ ಮಾಡುತ್ತಿದ್ದೆ. ಅಲ್ಲಿ ಹೋದೆ ನೋಡಿ ನನ್ನ ಫಜೀತಿ ಶುರುವಾಯ್ತು. ಅಲ್ಲಿದ್ದದ್ದು ಎಲೆಕ್ಟ್ರಿಕ್ ಸ್ಟೋವ್ ಗಳು. ಒಂದು 2 ನಿಮಿಷದಲ್ಲಿ ಒಗ್ಗರಣೆ ಸೀದು ಕರಕಲಾಗಿ ಹೊಗೆ ಬಂದು ಫೈರ್ ಅಲಾರ್ಮ್ ಬಡಿದುಕೊಳ್ಳೋಕೆ ಶುರು ಮಾಡಿತ್ತು. ಆ ಗ್ಯಾಸಿನ ಹಾಗೆ ಎಲ್ಲ ಆರಿಸಿ ಸುಮ್ಮನಿರೋಕೆ ಆಗೋದಲ್ಲ ನೋಡಿ. ಹೆಂಗಪ್ಪಾ ಒಂದು ವರ್ಷ ಸುಧಾರಿಸಿಕೊಳ್ಳೋದು ಎಂದು ಕೂತೆ.

ಅಮ್ಮ ಕೊಟ್ಟ ಮಯ್ಯಾಸ್ ಪೋಹಾವನ್ನ ಮೆತ್ತಗೆ ಓವನ್ ನಲ್ಲಿ ಬಿಸಿನೀರು ಕುದಿಸಿ ಅದನ್ನ ಹಾಕಿ 5 ನಿಮಿಷ ಬಿಟ್ಟು ತಿಂದೆ. ಅಲ್ಲಿದ್ದ ಪ್ಯಾಕೆಟ್ ಗಳನ್ನ ಎಣಿಸಿದೆ. ಒಂದು 50 ಇತ್ತು. ದಿನಕ್ಕೊಂದರಂತೆ ತಿಂದರೂ 50 ದಿವಸಕ್ಕೆ ಆಗೋಯ್ತು. ನಾ 365 ದಿವಸ ಇರಬೇಕಾಗಿತ್ತು. ಭಾರಿ ಡೇಂಜರ್ ಎಂದು ಪಕ್ಕಕ್ಕಿಟ್ಟೆ. ಮಧ್ಯಾನ್ಹ ಮೊಸರನ್ನ ಚಟ್ನಿಪುಡಿ ತಿನ್ನೋಣವೆಂದು ಕುಕ್ಕರ್ ಇಟ್ಟೆ ನೋಡಿ, 5 ನಿಮಿಷಕ್ಕೆ ಒಂದು ಸೀಟಿ, 10 ನಿಮಿಷಕ್ಕೆ ಮತ್ತೊಂದು ಇನ್ನೊಂದು ನಿಮಿಷದಲ್ಲಿ ಮೂರು ಆಗಿ ಅನ್ನ ಆಯಿತೆಂದೆ ತೋರಿತು. ಆ ಸೀಟಿಗಳಿಗೆ ನಮ್ಮ ಮನೆ ಒಡತಿ ಓಡಿ ಬಂದು "ಡೇಂಜರ್, ಡೇಂಜರ್" ಎಂದು ಕೂಗುತ್ತಿದ್ದಳು. ಅವಳ ಮನೆಯ ತಾರಸಿ ಕಿತ್ತುಹೋಗುತ್ತದೆಂಬ ಭಯದಿಂದ. ಚಪಾತಿ ಅಲ್ಲಿ ಲಟ್ಟಿಸಬೇಡ, ತರಕಾರಿ ಇಲ್ಲಿ ಹೆಚ್ಚಬೇಡ ಎಂಬುವುದರೊಳಗೆ ನನ್ನ ಅಡಿಗೆಯ ಮೇಲಿನ ಪ್ರೀತಿ ಪಾತಾಳಕ್ಕಿಳಿಯಿತು.

ಇಲ್ಲಿದ್ದಾಗ ಬಿಸಿಬೇಳೆಭಾತ್ ನ ಮೂಸಿಯೂ ನೋಡದ ನಾನು ಅಲ್ಲಿ ಬೇಗ ಆಗತ್ತೆ, ಪಾತ್ರೆ ಕಡಿಮೆ ಬೀಳತ್ತೆ ತೊಳೆಯೋಕೆ ಅಂತ ಪದೇ ಪದೇ ಮಾಡುತ್ತಿದ್ದೆ. ಹಾಗೆ ಒಂದೊಂದೆ ಅಡಿಗೆ ಕಲಿತೆ. ಎಕ್ಸ್ಪರ್ಟ್ ಆಗ್ಲಿಲ್ಲ ಹೊರತೂ ನಾನು ಒಂದು ವರ್ಷಕ್ಕೆ ಉಳಿಯುವಷ್ಟು ಅಡಿಗೆ ಮಾಡಿಕೊಂಡೆ. ನನ್ನಣ್ಣ ದೋಸೆ ಹಿಟ್ಟಿಗೆ ನೆನೆ ಹಾಕಿ ರುಬ್ಬಿ ದೋಸೆ ಮಾಡುವಷ್ಟು ಅಡಿಗೆ ಕಲಿತಿದ್ದಾನೆ, ಅದು ನೆದರ್ಲ್ಯಾಂಡ್ ನ ಛಳಿಯಲ್ಲಿ. ಅಮೆರಿಕಾದಲ್ಲಿರುವ ಸ್ನೇಹಿತೆಗೆ ಎಷ್ಟು ಊಟ ಮಾಡಬೇಕೆಂಬುದೇ ಗೊತ್ತಿರುತ್ತಿರಲ್ಲಿಲ್ಲ. ಈಗ ಅಲ್ಲಿ ಹಬ್ಬದೂಟ ಮಾಡಿ ಬಡಿಸುತ್ತಾಳಂತೆ. ನನ್ನ ಸ್ನೇಹಿತರು ಕೆಲವರು ಚೆಂದ ಅಡಿಗೆ ಮಾಡುವವರೇ.

ನನಗೆ ಅಡಿಗೆ ಅವಶ್ಯಕತೆ, ತಿನ್ನೋದಕ್ಕೆ ಬೇಕು. ಓದು, ಪುಸ್ತಕ ನನಗೆ ನಿಜಕ್ಕೂ ಸಂತಸ ಕೊಡುವ ಆಹಾರ. ನಿಮಗೆ? ಅಡುಗೆ ಮಾಡೋಕೆ ಬರತ್ತಾ?

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Why should only women cook at home and why should men cook in the functions like marriage? Is there a need to learn the art of cooking? Moreover, do you know cooking? Interesting write up by Meghana Sudhindra on the art of cooking and eating.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more